ರಾಹುಲ್ ಗಾಂಧಿಯವರನ್ನು ಕೆಡವಲು ಆರೆಸ್ಸೆಸ್ ಬಲೆ ಹೆಣೆದಿದೆಯೇ?

Update: 2024-10-31 04:19 GMT

ಪ್ರಶ್ನಿಸುವ ರಾಹುಲ್ ಗಾಂಧಿಯನ್ನು ಕಟ್ಟಿಹಾಕಲು ಬಿಜೆಪಿ ಮತ್ತು ಮೋದಿ ಸರಕಾರ ಬಹಳ ಯತ್ನಿಸಿದರೂ ಆಗಿಲ್ಲ. ಹೀಗಿರುವಾಗ, ರಾಹುಲ್ ಅವರನ್ನು ಕೆಡವಲು ಆರೆಸ್ಸೆಸ್ ಬಲೆ ಹೆಣೆದಿದೆಯೆ?

ಇಂಥ ಅನುಮಾನ ಬರುತ್ತಿರುವುದು ಆರೆಸ್ಸೆಸ್ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ನೀಡಿರುವ ಒಂದು ಹೇಳಿಕೆಯ ಕಾರಣದಿಂದಾಗಿ.

‘‘ರಾಹುಲ್ ಗಾಂಧಿಯವರು ದ್ವೇಷದ ಬಜಾರಿನಲ್ಲಿ ಮೊಹಬ್ಬತ್ತಿನ ಅಂಗಡಿ ತೆರೆಯಲು ಬಯಸುತ್ತಾರೆ. ಆದರೆ ಅವರು ಆರೆಸ್ಸೆಸ್ ಜೊತೆ ಮಾತಾಡಲು ತಯಾರಿಲ್ಲ. ಆದರೆ ನಾವು ಯಾರ ಮೇಲೂ ದ್ವೇಷ ಬೆಳೆಸುವುದಿಲ್ಲ. ನಾವು ಎಲ್ಲರನ್ನೂ ಭೇಟಿಯಾಗಲು ಬಯಸುತ್ತೇವೆ. ರಾಹುಲ್ ಗಾಂಧಿಯವರನ್ನೂ ನಮ್ಮೊಂದಿಗೆ ಬಂದು ಮಾತನಾಡಲು ಆಹ್ವಾನಿಸುತ್ತೇವೆ.’’

ಇದು ದತ್ತಾತ್ರೇಯ ಹೊಸಬಾಳೆ ಈಚೆಗೆ ಕೊಟ್ಟಿರುವ ಹೇಳಿಕೆ.

ಆದರೆ ಯಾಕೆ ಈಗ ಆರೆಸ್ಸೆಸ್ ಮಂದಿ ರಾಹುಲ್ ಅವರ ಭೇಟಿಗಾಗಿ ಕಾತುರರಾಗಿದ್ದಾರೆ? ಇದು ಬಹಳ ಮುಖ್ಯ ಪ್ರಶ್ನೆಯಾಗಿದೆ.

ಯಾಕೆಂದರೆ ಎರಡು ವರ್ಷಗಳ ಹಿಂದೆ ರಾಹುಲ್ ಗಾಂಧಿ ‘ಭಾರತ ಜೋಡೊ ಯಾತ್ರೆ’ ಕೈಗೊಂಡಿದ್ದಾಗ, ಇವರಾರೂ ರಾಹುಲ್ ಭೇಟಿಯನ್ನು ಬಯಸಿರಲೇ ಇಲ್ಲ.

ಆ ಯಾತ್ರೆಯ ಸಂದರ್ಭದಲ್ಲಿಯೇ, ‘ನಫ್ರತ್ ಕೆ ಬಝಾರ್ ಮೇ ಮೊಹಬ್ಬತ್ ಕಿ ದುಕಾನ್’ ಎಂಬ ರಾಹುಲ್ ಅವರ ಪ್ರತಿಪಾದನೆ ಹೆಚ್ಚು ಜನಪ್ರಿಯವಾಯಿತು.

ರಾಹುಲ್ ಯಾತ್ರೆ ವಿದರ್ಭದಲ್ಲಿದ್ದಾಗ ಆರೆಸ್ಸೆಸ್ ನಾಯಕರು ಆಗ ಯಾತ್ರೆಯಲ್ಲಿ ಪಾಲ್ಗೊಳ್ಳಬಹುದಿತ್ತಲ್ಲವೆ?

ಆಗ ರಾಹುಲ್ ಅವರನ್ನು ಭೇಟಿ ಮಾಡದೆ ಇದ್ದವರು, ಆಗ ಇಂಥದೊಂದು ಆಹ್ವಾನ ನೀಡದೇ ಇದ್ದವರು ಈಗೇಕೆ ಆಹ್ವಾನಿಸುತ್ತಿದ್ದಾರೆ? ಈಗ ದಿಢೀರನೇ ರಾಹುಲ್ ಗಾಂಧಿಯನ್ನು ಭೇಟಿಯಾಗಬೇಕು ಎಂದು ಆರೆಸ್ಸೆಸ್‌ಗೆ ಅನ್ನಿಸಲು ಕಾರಣವೇನು?

ಹಾಗಾದರೆ, ರಾಹುಲ್ ಆರೆಸ್ಸೆಸ್ ನಾಯಕರನ್ನು ಭೇಟಿಯಾಗುವರೆ?

ಒಂದು ವೇಳೆ ದತ್ತಾತ್ರೇಯ ಹೊಸಬಾಳೆ ಅಥವಾ ಮೋಹನ್ ಭಾಗವತ್ ಅಥವಾ ಯಾವುದೇ ಆರೆಸ್ಸೆಸ್ ನಾಯಕರನ್ನು ರಾಹುಲ್ ಗಾಂಧಿ ಭೇಟಿಯಾದರೆ ಅವರು ಆರೆಸ್ಸೆಸ್ ಹೆಣೆದ ಬಲೆಗೆ ಬಿದ್ದಂತಾಗಲಿದೆ ಎಂದೇ ಹೇಳುತ್ತಿದ್ದಾರೆ ಬಹಳಷ್ಟು ವಿಶ್ಲೇಷಕರು.

ರಾಹುಲ್ ಗಾಂಧಿ ತಮ್ಮ ರಾಜಕೀಯ ಭಾಷಣಗಳಲ್ಲಿ ಆರೆಸ್ಸೆಸನ್ನು ಯಾವಾಗಲೂ ಉಲ್ಲೇಖಿಸುತ್ತಾರೆ ಮತ್ತು ದೇಶದಲ್ಲಿನ ಕೋಮು ಸಂಘರ್ಷಕ್ಕೆ ಹೊಣೆಯಾಗಿಸಿ ಅದನ್ನು ಟೀಕಿಸುತ್ತಲೇ ಬಂದಿದ್ದಾರೆ. ಅಂತಹವರು ಆರೆಸ್ಸೆಸ್‌ನ ಈ ಪ್ರಸ್ತಾವವನ್ನು ಖಂಡಿತ ಒಪ್ಪಲಾರರು. ಯಾಕೆಂದರೆ ಇದು ಖಂಡಿತವಾಗಿಯೂ ಅವರನ್ನು ಸಿಕ್ಕಿಸಿಹಾಕುವ ತಂತ್ರವಲ್ಲದೆ ಮತ್ತೇನೂ ಅಲ್ಲ.

ಪ್ರಣಬ್ ಮುಖರ್ಜಿಯಂಥ ನಾಯಕರನ್ನೂ ಆರೆಸ್ಸೆಸ್ ಹೀಗೆಯೆ ತನ್ನ ವೇದಿಕೆಗೆ ಕರೆದಿತ್ತು. ಅವರು ಅಲ್ಲಿ ಹೋಗಿ ಭಾಷಣ ಮಾಡಿದ್ದಕ್ಕೆ ಸ್ವತಃ ಅವರ ಪುತ್ರಿ ಶರ್ಮಿಷ್ಠಾ ಮುಖರ್ಜಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು.

ಪ್ರಣಬ್ ಮುಖರ್ಜಿ ತನ್ನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಆ ಸಂಗತಿಯನ್ನೇ ಆರೆಸ್ಸೆಸ್ ಕಡೆಗೆ ಪೂರ್ತಿಯಾಗಿ ಬಳಸಿಕೊಂಡಿತ್ತು. ಸೋಷಿಯಲ್ ಮೀಡಿಯಾದಲ್ಲಿಯೂ ಅವರ ಬಗ್ಗೆ ವ್ಯಾಪಕ ಪ್ರಚಾರ ಸಿಗುವ ಹಾಗೆ ನೋಡಿಕೊಂಡಿತ್ತು.

ಆರೆಸ್ಸೆಸ್ ದೇಶಭಕ್ತ ಸಂಘಟನೆಯಾಗಿದೆ ಎಂಬುದನ್ನು ಕಡೆಗೂ ಪ್ರಣಬ್ ಒಪ್ಪಿದ್ದಾರೆ ಎಂದು ಪ್ರತಿಪಾದಿಸುವುದಕ್ಕೆ ಶುರು ಮಾಡಿತ್ತು.

ಹೀಗೆ ತನಗೆ ಬೇಕಾದಂತೆ ಎಲ್ಲವನ್ನೂ ಬಳಸಿಕೊಳ್ಳುವುದು ಆರೆಸ್ಸೆಸ್‌ಗೆ ಗೊತ್ತಿದೆ. ತಾನು ಯಾರನ್ನು ಆಮಂತ್ರಿಸಬೇಕು, ಅವರ ಭೇಟಿಯನ್ನು ಹೇಗೆ ತನ್ನ ಲಾಭಕ್ಕೆ ಬಳಸಿಕೊಳ್ಳಬೇಕು ಎಂಬುದನ್ನು ಆರೆಸ್ಸೆಸ್ ಬಹಳಷ್ಟು ಯೋಚಿಸಿ, ಯೋಜಿಸಿಯೇ ಅವರನ್ನು ಆಮಂತ್ರಿಸುತ್ತದೆ.

ತಾನು ಆಹ್ವಾನಿಸುತ್ತಿರುವ ವ್ಯಕ್ತಿಯ ವಿಶ್ವಾಸಾರ್ಹತೆಯನ್ನೇ ಇಲ್ಲವಾಗಿಸುವ ತಂತ್ರ ಹೆಣೆಯದೆ ಅದು ಸುಮ್ಮನೆ ತನ್ನ ರಾಜಕೀಯ ವಿರೋಧಿ ಪಾಳಯದಲ್ಲಿರುವವರನ್ನು ಭೇಟಿ ಆಗುವುದಿಲ್ಲ.

ಆರೆಸ್ಸೆಸ್ ಯಾರನ್ನೂ ಕ್ಷೇಮ ಸಮಾಚಾರ ಕೇಳಲು, ಶುಭ ಹಾರೈಸಲು ಭೇಟಿಯಾಗುವುದಿಲ್ಲ. ಅದರ ಪ್ರತೀ ಮಾತಿನಲ್ಲೂ, ಪ್ರತೀ ಭೇಟಿಯಲ್ಲೂ ಒಂದು ಅಜೆಂಡಾ ಇರುತ್ತದೆ ಮತ್ತು ಅದು ಪಕ್ಕಾ ಆರೆಸ್ಸೆಸ್ ಹಾಗೂ ಹಿಂದುತ್ವ ಅಜೆಂಡಾವೇ ಆಗಿರುತ್ತದೆ.

ದೇಶ, ದೇಶದ ಜನ, ಅವರ ಕಷ್ಟ ಸುಖಗಳು ಇವೆಲ್ಲ ಆರೆಸ್ಸೆಸ್‌ಗೆ ಬರೀ ಬಾಯಿ ಮಾತಿಗೆ ಬೇಕಾದ ಸರಕುಗಳು. ಅದರ ಅಸಲಿ ಅಜೆಂಡಾ ಹಿಂದುತ್ವದ ಅಜೆಂಡಾ.

ಒಂದು ವೇಳೆ ರಾಹುಲ್ ಆರೆಸ್ಸೆಸ್‌ನ ಯಾವುದೇ ನಾಯಕರನ್ನು ಭೇಟಿ ಮಾಡಿದರೆ, ಕಡೆಗೂ ರಾಹುಲ್ ಗಾಂಧಿ ಶರಣಾಗಿದ್ದಾರೆ ಎಂದು ತಕ್ಷಣವೇ ಸೋಷಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸಿಬಿಡಬಲ್ಲ ಮತ್ತು ಆ ಮೂಲಕ ರಾಹುಲ್ ಅವರ ಘನತೆಗೇ ಕಳಂಕ ಹಚ್ಚಬಲ್ಲ ಕುತಂತ್ರ ಅದು.

ರಾಹುಲ್ ಗಾಂಧಿ ವಿರುದ್ಧ ಹಲವು ಕೇಸ್‌ಗಳನ್ನು ಹಾಕಿ ಅವರು ದೇಶಾದ್ಯಂತ ಕೋರ್ಟ್‌ಗಳಿಗೆ ಅಲೆಯುವಂತೆ ಮಾಡಿಟ್ಟಿರುವುದು ಇದೇ ಆರೆಸ್ಸೆಸ್. ಈಗ ರಾಹುಲ್ ಆರೆಸ್ಸೆಸ್ ನಾಯಕರನ್ನು ಭೇಟಿಯಾದರೆ, ಕೇಸ್‌ಗಳಿಗೆ ಹೆದರಿ ಕಡೆಗೂ ಮಣಿದು ಬಂದಿದ್ದಾರೆ ಎಂದು ಬಿಂಬಿಸಿ ತನ್ನ ಪ್ರತಾಪವನ್ನು ಮೆರೆಯದೇ ಇರಲಾರದು.

ಹಾಗಾಗಿ ಅದು ಈಗ ಮಾತಾಡುತ್ತಿರುವ ಧಾಟಿಯೇ ಬೇರೆ. ಒಂದು ವೇಳೆ ರಾಹುಲ್ ಅದರ ನಾಯಕರನ್ನು ಕಂಡದ್ದೇ ಆದರೆ ಅನಂತರ ಅದು ಮಾತಾಡುವ ರೀತಿಯೇ ಬೇರೆಯಾಗಿರುತ್ತದೆ.

ಅದರ ಆಲೋಚನೆಯೊಳಗಿನ ಹುನ್ನಾರದ ಬಗ್ಗೆ, ಕುತಂತ್ರದ ಬಗ್ಗೆ ರಾಹುಲ್ ಎಚ್ಚರವಾಗಿರುವುದು ಬಹಳ ಅಗತ್ಯ. ಆರೆಸ್ಸೆಸ್ ಹಿಂದೆಯೂ ಘಟಾನುಘಟಿಗಳಿಗೇ ಬಲೆಯಿಡಲು ನೋಡಿದ್ದ ಸಂಘಟನೆ. ಇಂದಿರಾ ಗಾಂಧಿಯವರನ್ನು ಕೂಡ ತನ್ನ ರಾಜಕೀಯ ವ್ಯೆಹದಲ್ಲಿ ಸಿಕ್ಕಿಸಲು ಅದು ನೋಡಿತ್ತು. ನೀವು ಒಪ್ಪಿದರೆ ನಾವು ನಿಮ್ಮನ್ನು ಭೇಟಿಯಾಗಲು ಸಿದ್ಧ ಎಂಬ ಪ್ರಸ್ತಾವವನ್ನು ಇಂದಿರಾ ಅವರೆದುರು ಸಂಘದ ನಾಯಕರು ಇಟ್ಟಿದ್ದರು. ಆದರೆ ರಾಜಕೀಯದಲ್ಲಿ ಪಳಗಿದ್ದ ಇಂದಿರಾ ಗಾಂಧಿ ಆರೆಸ್ಸೆಸ್ ಪಟ್ಟಿಗೆ ಮಣಿದಿರಲಿಲ್ಲ. ಆರೆಸ್ಸೆಸ್‌ನ ಯಾವ ಆಟವನ್ನೂ ಆಡುವುದಕ್ಕೆ ಅವರು ಬಿಟ್ಟಿರಲಿಲ್ಲ ಮತ್ತು ಹತ್ತಿರಕ್ಕೂ ಬಿಟ್ಟುಕೊಂಡಿರಲಿಲ್ಲ.

ಇಂದಿರಾ ಅವರ ರಾಜಕೀಯ ಬದುಕಿನ ಪುಸ್ತಕದ ಆಧ್ಯಾಯದಿಂದಲೇ ಈಗ ರಾಹುಲ್ ತಮಗೆ ಬೇಕಿರುವ ಪಾಠವನ್ನು ಎತ್ತಿಕೊಳ್ಳುವ ಅಗತ್ಯವಿದೆ ಮತ್ತು ಆರೆಸ್ಸೆಸ್ ಬಲೆಗೆ ಬೀಳದಂತೆ ತಮ್ಮನ್ನು ರಕ್ಷಿಸಿಕೊಳ್ಳಬೇಕಿದೆ.

ತನ್ನ ವೇದಿಕೆಯಲ್ಲಿ ರಾಹುಲ್ ಕಾಣಿಸಿಕೊಂಡದ್ದೇ ಹೌದಾದರೆ, ರಾಹುಲ್ ಅವರನ್ನು ಎಲ್ಲಿಯೂ ಟೀಕಿಸದೆಯೂ, ಅವಹೇಳನ ಮಾಡದೆಯೂ ರಾಹುಲ್ ಭೇಟಿಯ ಎಲ್ಲ ಲಾಭವನ್ನು ತನ್ನ ಕಡೆಗೆ ತಿರುಗಿಸಿಕೊಳ್ಳಬಲ್ಲ ಚಾಣಾಕ್ಷತನ ಅದಕ್ಕಿದೆ.ರಾಹುಲ್ ಭೇಟಿಯಾಗಲಿ ಎಂದು ಆರೆಸ್ಸೆಸ್ ನಾಯಕರು ಬಯಸಿರುವುದರಿಂದ, ರಾಹುಲ್ ಭೇಟಿಯಾದರೆ ಅದೇ ತನ್ನ ವಿಜಯ ಎಂದು ಬಿಂಬಿಸಲು ಅದಕ್ಕೆ ಹೆಚ್ಚು ಹೊತ್ತು ಹಿಡಿಯುವುದಿಲ್ಲ.

ಹಾಗಾಗಿ ಇದು ಖಂಡಿತವಾಗಿಯೂ ತಮ್ಮ ರಾಜಕೀಯ ವ್ಯೆಹದಲ್ಲಿ ಬೀಳಿಸಿ, ಆರೆಸ್ಸೆಸ್ ವಿರುದ್ಧ ಮಾತಾಡಲು ರಾಹುಲ್ ಅವರಿಗೆ ಅವಕಾಶವೇ ಆಗದಂತೆ ಮಾಡುವ ತಂತ್ರ ರೂಪಿಸಲಾಗಿದೆಯೇ ಎಂಬ ಅನುಮಾನ ಮೂಡುತ್ತದೆ.

ರಾಹುಲ್ ಅವರನ್ನು ಆಹ್ವಾನಿಸಿರುವ ಆರೆಸ್ಸೆಸ್ ನಿಲುವಿನಲ್ಲಿ ಅವರ ವಿಶಾಲ ಮನೋಭಾವವೇನೂ ಇಲ್ಲ. ಹಾಗಿದ್ದರೆ ಎರಡು ವರ್ಷಗಳ ಹಿಂದೆಯೇ ಅವರನ್ನು ಆಹ್ವಾನಿಸಿರುತ್ತಿದ್ದರು.ಆದರೆ ಈಗ, ಲೋಕಸಭೆ ಚುನಾವಣೆಯಲ್ಲಿ ಮೋದಿ ದುರ್ಬಲ ಪ್ರದರ್ಶನ ತೋರಿಸಿದ ಬಳಿಕ ಇಂತಹ ಆಹ್ವಾನ ನೀಡಲಾಗಿದೆ. ಒಂದು ವೇಳೆ ಮೋದಿ ತಾವು ನಿರೀಕ್ಷಿಸಿದ್ದಂತೆ 400ರ ಗಡಿ ದಾಟಿದ್ದಿದ್ದರೆ ಆಗಲೂ ರಾಹುಲ್ ಅವರನ್ನು ಆರೆಸ್ಸೆಸ್ ಇದೇ ರೀತಿಯಲ್ಲಿ ಆಹ್ವಾನಿಸುತ್ತಿತ್ತೆ?

ಈ ತಿಂಗಳು ಮತ್ತೆ ರಾಹುಲ್ ಅವರು ತಮ್ಮ ವಿರುದ್ಧದ ಆರೆಸ್ಸೆಸ್‌ನ ಕೇಸ್‌ಗೆ ಸಂಬಂಧಿಸಿ ವಿಚಾರಣೆಗೆ ಹಾಜರಾಗುವುದಿದೆ. ಈ ಹೊತ್ತಲ್ಲಿ ಅವರು ಸೋತಂತೆ ಬಿಂಬಿಸುವುದು ಇಲ್ಲಿನ ತಂತ್ರವಾಗಿರಬಹುದು. ಆದರೆ ಅವರ ವಿರುದ್ಧದ ದೊಡ್ಡ ಪಿತೂರಿಯೇನೂ ಇದಾಗಿರಲಿಕ್ಕಿಲ್ಲ.

ಬಹಳ ಸಂಕುಚಿತ ಮನೋಭಾವದವರೇ ಆರೆಸ್ಸೆಸ್‌ನಲ್ಲಿ ತುಂಬಿದ್ದಾರೆ ಎಂಬ ಆರೋಪವೇ ಇದೆ. ಅಂತಹವರ ಮಧ್ಯೆ ಕಾಣಿಸಿಕೊಳ್ಳುವುದು ಎಲ್ಲರ ಜೊತೆಯೂ ಸರಳ ಮನೋಭಾವದಿಂದ ಮುಕ್ತವಾಗಿ ಬೆರೆಯುವ ರಾಹುಲ್ ಅವರ ಪಾಲಿಗೆ ತುಸು ಅಪಾಯಕಾರಿಯೇ ಆಗಬಹುದು.

ಯಾಕೆಂದರೆ ಏನೋ ಉದ್ದೇಶ ಅಡಗಿಸಿಟ್ಟು ಆಹ್ವಾನಿಸುವವರ ವಿಚಾರದಲ್ಲಿ ಎಚ್ಚರವಾಗಿದ್ದಷ್ಟೂ ಕಡಿಮೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ಪ್ರವೀಣ್ ಎನ್.

contributor

Similar News