ಬಾಬಾಸಾಹೇಬರನ್ನು ತಮ್ಮ ಅನುಕೂಲಕ್ಕೆ ಬಳಸಿಕೊಳ್ಳಲು ಹೊರಟಿರುವ ಸಂಘಪರಿವಾರ
ದಿನಾಂಕ:27/10/2024ರಂದು ಮೈಸೂರಿನ ಗಾನಭಾರತಿ ಸಭಾಂಗಣದಲ್ಲಿ ಸಂಘಪರಿವಾರದ ಯುವ ಬ್ರಿಗೇಡ್ ವತಿಯಿಂದ ಚಕ್ರವರ್ತಿ ಸೂಲಿಬೆಲೆ ನೇತೃತ್ವದಲ್ಲಿ ಬೆಳಕು ಹೊಳಪು ಬಾಬಾಸಾಹೇಬರ ಕ್ರಾಂತಿಕಾರಕ ವಿಚಾರ ಚಿಂತನ ಮಂಥನ ಎಂಬ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಈತನಕ ಯಾರೂ ಕಂಡುಕೇಳರಿಯದ ಬಾಬಾಸಾಹೇಬರ ಕ್ರಾಂತಿಕಾರಕ ವಿಚಾರಗಳನ್ನು ತಿಳಿಸಲಾಗುವುದು ಎಂದು ಸೂಲಿಬೆಲೆ ಜಾಲತಾಣದಲ್ಲಿ ಹರಿಯಬಿಟ್ಟಿದ್ದರು.
ಸುಳ್ಳಿನ ಖ್ಯಾತಿಯ ಸೂಲಿಬೆಲೆ ಬಾಬಾಸಾಹೇಬರ ವಿಚಾರಗಳನ್ನು ಹೇಗೆ ತಿರುಚಬಲ್ಲರು ಎಂಬುದರ ಸೂಕ್ಷ್ಮ ಗ್ರಹಿಕೆಯಿತ್ತಾದರೂ ಪೂರ್ವಗ್ರಹದ ಮನಸ್ಥಿತಿ ಎಂದುಕೊಳ್ಳಬಾರದು ಎಂದು ನಾವು ಮೈಸೂರಿನ ಗೆಳೆಯರು ಮತ್ತು ಮಾಜಿ ಮೇಯರ್ ಪುರುಷೋತ್ತಮ್ ಅವರು ಆ ಕಾರ್ಯಕ್ರಮಕ್ಕೆ ಹೋಗಿದ್ದೆವು.
ಇಡೀ ದಿನ ಕಾರ್ಯಕ್ರಮದಲ್ಲಿ ಹಾಜರಿದ್ದು ಅಪ್ಪಟ ಸಂಘಪರಿವಾರದ ಪ್ರವರ್ತಕರಾದ ಪ್ರಕಾಶ ಬೆಳವಾಡಿ, ಸೂಲಿಬೆಲೆ, ಡಾ. ಜಿ.ಬಿ. ಹರೀಶ್, ಸುಧಾಕರ್ ಹೊಸಳ್ಳಿ, ಡಾ. ಎಸ್.ಆರ್. ಲೀಲಾ, ಕಟ್ಟಿಮನಿ, ಮಾವಿನಕಾಡು, ಫಟಾಪಟ್ ಶ್ರೀನಿವಾಸ್ ಮುಂತಾದವರ ಮಾತುಗಳನ್ನು ಕೇಳಿಸಿಕೊಂಡೆವು.
ಜನ ಕಿಕ್ಕಿರಿದು ತುಂಬಿದ್ದರು.
ಫಟಾಪಟ್ ಶ್ರೀನಿವಾಸ್ ಅವರಿಗೆ ಬಾಬಾಸಾಹೇಬರ ಕುರಿತ ವಿವಿಧ ರೀತಿಯ ಮಾಹಿತಿಗಳನ್ನು ನೀಡಲು ಹೇಳಲಾಗಿತ್ತಂತೆ. ಹಾಗಾಗಿ ಅವರು ಬಾಬಾಸಾಹೇಬರು ಬ್ರಿಟಿಷ್ ಸರಕಾರದಲ್ಲಿ ಕಾರ್ಮಿಕ ಮತ್ತು ನೀರಾವರಿ ಖಾತೆಗಳ ಮಂತ್ರಿಯಾಗಿದ್ದೂ ಸೇರಿದಂತೆ ದೇಶದ ಪ್ರಥಮ ಕಾನೂನು ಸಚಿವರಾಗಿದ್ದ ಕಾಲದಲ್ಲಿ ಅವರು ಸರ್ವರಿಗೂ ಸಲ್ಲುವ ಕಾರ್ಮಿಕ ನೀತಿ ನಿಯಮಗಳು, ಜಲನೀತಿಗಳು, ಅಣೆಕಟ್ಟು ನಿರ್ಮಾಣ, ಆರ್ಥಿಕ ನೀತಿಗಳು, ಆರ್ಬಿಐ ಸ್ಥಾಪನೆಗೆ ಕಾರಣವಾದುದು, ಮಹಿಳೆಯರ ಹಕ್ಕು ರಕ್ಷಣೆ ಮಾಡಿದ್ದು, ಹಿಂದೂ ಕೋಡ್ ಬಿಲ್ಗಾಗಿ ರಾಜೀನಾಮೆ ಎಸೆದು ಬಂದಿದ್ದು ಎಲ್ಲವನ್ನೂ ಮಾಹಿತಿಯಂತೆ ಹೇಳಿದರು.
ಬಹುಶಃ ಅಲ್ಲಿ ನೆರೆದಿದ್ದ ಜನಸ್ತೋಮಕ್ಕೆ ಅದು ಹೊಸದಾದ ಮಾಹಿತಿಯಾಗಿತ್ತು. ಆದರೆ, ಈ ವಿಷಯಗಳು ಯಾರಿಗೂ ಗೊತ್ತೇ ಇರಲಿಲ್ಲ ಎಂಬಂತೆ ಅವರು ಮಂಡಿಸಿದರು.
ನಮಗಿದೆಲ್ಲಾ ಹೊಸದಾದ ವಿಷಯಗಳಲ್ಲ. ನಾವು ಇದನ್ನು ಇಪ್ಪತ್ತು ವರ್ಷಗಳಿಂದಲೂ ಮಂಡಿಸುತ್ತಿರುವುದು ಇವರ ಗಮನಕ್ಕೂ ಬಂದಿಲ್ಲ.
ಇರಲಿ, ಸಭಿಕರೊಬ್ಬರು ಕೇಳಿದ ಪ್ರಶ್ನೆ ’ಅಂಬೇಡ್ಕರ್ ಅವರ ಇಷ್ಟು ವಿಷಯಗಳು ಈತನಕ ಯಾಕೆ ಯಾರಿಗೂ ತಿಳಿಯಲಿಲ್ಲ?’ ಎಂಬುದಕ್ಕೆ ಉತ್ತರಿಸಿದ ಶ್ರೀನಿವಾಸ್, ‘ಅಂಬೇಡ್ಕರ್ ಅವರನ್ನು ಒಂದು ವರ್ಗ ತಮ್ಮಲ್ಲೇ ಕಟ್ಟಿಹಾಕಿತ್ತು’! ಎಂದರು!!
ಎಂಥಾ ಕೀಳರಿಮೆ! ಯಾವ ವರ್ಗವೂ ಕಟ್ಟಿಹಾಕಿಕೊಂಡಿರಲಿಲ್ಲ. ಓದುವ ವ್ಯವದಾನ, ಒಳಗೊಳ್ಳುವ ಭಾವ ಇತರರಿಗ್ಯಾರಿಗೂ ಇರಲಿಲ್ಲ ಅಷ್ಟೆ. ಅದೇ ಸತ್ಯ. ಒಂದೊಮ್ಮೆ ದಲಿತರು ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ಈತನಕ ತಂದಿಲ್ಲದೆ ಹೋಗಿದ್ದರೆ ಇಷ್ಟೊತ್ತಿಗೆ ಚರಿತ್ರೆಯ ಪುಟದಲ್ಲೂ ಅಂಬೇಡ್ಕರ್ ಎಂಬ ಹೆಸರು ಉಳಿಯಲೂ ಮನುವಾದಿಗಳು ಬಿಡುತ್ತಿರಲಿಲ್ಲ!
ಅಕ್ಷರಸ್ಥರಾಗಿದ್ದ ಮನುವಾದಿಗಳನ್ನು ನಾವು ಕೇಳಬೇಕು ಈ ತನಕ ನೀವು ಯಾಕೆ ಅಂಬೇಡ್ಕರ್ ಅವರನ್ನು ಓದಲಿಲ್ಲ? ಎಂದು. ಅವರ ಪುಸ್ತಕಗಳು ಎಲ್ಲರಿಗೂ ಮುಕ್ತವಾಗಿದ್ದವು ತಾನೆ?
ಈಗ ಇವರೆಲ್ಲರಿಗೂ ಅಂಬೇಡ್ಕರ್ ಪ್ರಿಯವಾಗುತ್ತಿದ್ದಾರೆ.
ಕಾರಣ ಸುಸ್ಪಷ್ಟ; ಶ್ರೀನಿವಾಸ್ ಹೊರತು ಪಡಿಸಿ ಇತರೆಲ್ಲರ ಮಾತುಗಳಲ್ಲಿ ತುಂಬಿ ತುಳುಕಿದ ಮರ್ಮವೇನು ಗೊತ್ತೇ?
1.ದಲಿತರ ಇಡುಗಂಟಿನ ಮತಬ್ಯಾಂಕನ್ನು ಇಷ್ಟು ವರ್ಷ ಕಾಂಗ್ರೆಸ್ ಹಿಡಿದುಕೊಂಡಂತೆ ಈಗ ಬಿಜೆಪಿ ಕೊಳ್ಳೆಹೊಡೆಯಬೇಕು.
2.ಅಂಬೇಡ್ಕರ್ ಅವರು ಅಪ್ಪಟ ಹಿಂದೂ ಧರ್ಮೀಯರೇ ಆಗಿದ್ದರು. ಹಿಂದುತ್ವದ ಉಳಿವಿಗಾಗಿಯೇ ಹೋರಾಡಿದರು ಎಂಬುದನ್ನು ಈಗ ತುರ್ತಾಗಿ ದಲಿತರ ತಲೆಗಳಿಗೆ ತುಂಬಿ ಅವರುಗಳನ್ನು ತಮ್ಮ ಕಾಲಾಳುಗಳನ್ನಾಗಿ ಮಾಡಿಕೊಳ್ಳಬೇಕು.
3 ಬಹುಮುಖ್ಯವಾಗಿ ಈಗವರು ಅಂಬೇಡ್ಕರ್ ಅವರ ‘ಥಾಟ್ಸ್ ಆನ್ ಪಾಕಿಸ್ತಾನ್’ ಕೃತಿಯಲ್ಲಿ ಅವರು ವಿಷದವಾಗಿ ಕಟ್ಟರ್ ಹಿಂದುತ್ವವಾದಿಗಳು ಮತ್ತು ಕಟ್ಟರ್ ಇಸ್ಲಾಮ್ವಾದಿಗಳನ್ನು ಕುರಿತು ದೇಶವಿಭಜನೆಯ ಸಂದರ್ಭಕ್ಕೆ ಅನುಗುಣವಾಗಿ ಮಂಡಿಸಿರುವ ಅಭಿಪ್ರಾಯಗಳಲ್ಲಿ ಆಯ್ದ ಕೆಲವು ಮಾತುಗಳನ್ನು ಹೆಕ್ಕಿ ಅಂಬೇಡ್ಕರ್ ಅವರನ್ನು ಮುಸ್ಲಿಮ್ ವಿರೋಧಿಯಾಗಿಸಬೇಕು. ಆ ಮೂಲಕ ದಲಿತ ಮತ್ತು ಮುಸ್ಲಿಮರ ನಡುವೆ ಸಂಘರ್ಷ ತಂದಿಡಬೇಕು. ಒಂದು ಕಲ್ಲಲ್ಲಿ ಎರಡು ಹಕ್ಕಿಗಳ ಪ್ರಾಣ ತೆಗೆದು ಬಿಜೆಪಿ ಅಧಿಕಾರ ಹಿಡಿದುಕೊಳ್ಳಬೇಕು.
4. ಬಾಬಾಸಾಹೇಬರು ಅಂದು ಹೇಳಿರುವ ಆರ್ಯರು ಹೊರಗಿನಿಂದ ಬಂದವರು ಎಂಬುದಕ್ಕೆ ವೇದಗಳಲ್ಲಿ ಆಧಾರವಿಲ್ಲ ಎಂಬ ಮಾತುಗಳನ್ನು ಹಿಡಿದುಕೊಂಡು ಈಗ ವಿಕಸಿತ ವಿಜ್ಞಾನಯುಗದಲ್ಲಿ ಡಿಎನ್ಎ ಹೇಳುವ ಕರಾರುವಾಕ್ಕು ಆರ್ಯರು ವಲಸಿಗರೆಂಬ ಸತ್ಯಗಳನ್ನು ನಿರಾಕರಿಸಬೇಕು.
5. ಬಾಬಾಸಾಹೇಬರನ್ನು ಅಂದಿನ ಕಾಂಗ್ರೆಸ್, ಕಮ್ಯುನಿಸ್ಟ್ ಮತ್ತು ಗಾಂಧಿ ಮಾತ್ರ ಹಿಂಸಿಸಿದರು. ಸಂಘಪರಿವಾರವು ಅವರ ಪರವಾಗಿತ್ತು. ಬಾಬಾಸಾಹೇಬರೂ ಸಂಘವನ್ನು ಬಹಳ ಮೆಚ್ಚುತ್ತಿದ್ದರು.
ಭಗವಾಧ್ವಜವೇ ರಾಷ್ಟ್ರದ ಬಾವುಟವಾಗಬೇಕು ಮತ್ತು ಸಂಸ್ಕೃತವೇ ರಾಷ್ಟ್ರಭಾಷೆಯಾಗಬೇಕೆಂದು ಪ್ರತಿಪಾದಿಸಿದ್ದರು ಎಂಬ ಹಸಿಸುಳ್ಳುಗಳನ್ನು ಇವರದೇ ಕೆಲವು ಕೃತಿಗಳ ಆಧಾರದಲ್ಲಿ ಮಂಡಿಸಿ ಬಾಬಾಸಾಹೇಬರನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಒಗ್ಗಿಸಿಕೊಂಡು ಈ ದಲಿತ ಸಮುದಾಯವನ್ನು ಅದರೊಡನೆ ಮುಸ್ಲಿಮರನ್ನೂ ಬಗ್ಗುಬಡಿಯಬೇಕು.
ಇವಿಷ್ಟೇ ಇವರ ಹಿಡನ್ ಅಜೆಂಡಾ. ಇವಿಷ್ಟೂ ಅಲ್ಲಿ ಎಲ್ಲರ ಮಾತಲ್ಲೂ ಢಾಳವಾಗಿ ವ್ಯಕ್ತವಾಯಿತು. ಇದನ್ನು ಹೊರತುಪಡಿಸಿ ಅವರಿಗೆ ಬಾಬಾಸಾಹೇಬರ ಇನ್ಯಾವ ವಿಚಾರಗಳೂ ಬೇಕಿಲ್ಲ.
ಇವರು ತಾವು ಮಂಡಿಸುವ ವಿಚಾರಗಳಲ್ಲಿ ಅನೇಕ ಸತ್ಯಗಳ ಒಳಗೆ ತಮಗೆ ಬೇಕಾದ ಕಡೆ, ಬೇಕಾದಂತೆ ನಯವಾಗಿ ಸುಳ್ಳುಗಳನ್ನು ಪೋಣಿಸಿ ನಮ್ಮ ಯುವಜನತೆಯನ್ನು ಖಂಡಿತಾ ಆಪೋಷಣ ತೆಗೆದುಕೊಳ್ಳಬಲ್ಲ ಚಾಣಾಕ್ಷರೇ ಆಗಿದ್ದಾರೆ. ಅದಕ್ಕಾಗಿ ಅವರಲ್ಲಿ ಹಣವಿದೆ, ಅಧಿಕಾರವಿದೆ, ಸಂಘವಿದೆ, ಸಮಯವಿದೆ ಅದಕ್ಕೂ ಮಿಗಿಲಾಗಿ ಶೋಷಿತ ಸಮುದಾಯದ ಕೆಲವು ಅಧಿಕಾರದಾಹಿ ಗುಲಾಮರೇ ಅವರ ಜೊತೆಗಿದ್ದಾರೆ! ದಲಿತರನ್ನು ಹೇಗೆ ಮರುಳು ಮಾಡಬೇಕು ಎಂದು ಇವರೇ ಹೇಳಿಕೊಡುತ್ತಾರೆ!
ನಾವು ಪ್ರಶ್ನೆಗಳನ್ನು ಕೇಳಿದ್ದರೂ ಅವರು ಅವುಗಳನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಸಮರ್ಥಿಸಲೂ ಸಿದ್ಧವಾಗಿದ್ದರು. ಅವರಿಗೆ ಹೇಗೆ ಅಂಬೇಡ್ಕರ್ ಅವರನ್ನು ತಿರುಚಿ ಹೇಳಬೇಕು? ಏಕೆ ತಿರುಚಿ ಹೇಳಬೇಕು ಎಂಬುದರ ಸ್ಪಷ್ಟತೆ ಇದೆ. ಹಾಗಾಗಿ ನಾವಲ್ಲಿ ಏನೇ ಹೇಳಿದರೂ, ಏನೇ ಕೇಳಿದರೂ ಬದಲಾವಣೆಗೆ ಅವರು ಸಿದ್ಧರಿಲ್ಲ.
ಹಾಗೊಂದು ವೇಳೆ ಅವರಿಗೆ ಬಾಬಾಸಾಹೇಬರ ವಿಚಾರಗಳನ್ನು ತಮ್ಮ ಜನಸಮುದಾಯಕ್ಕೆ ತಲುಪಿಸುವುದೇ ನಿಜವಾದ ಗುರಿಯಾಗಿದ್ದರೆ: ಅವರು ಬಾಬಾಸಾಹೇಬರ ‘ಜಾತಿವಿನಾಶ’ ಕೃತಿ ಕುರಿತು ಮಾತಾಡಬೇಕು. ಇವರು ದೇಶದ ಸೌಹಾರ್ದ ಬಯಸುವುದೇ ಆದರೆ ಬಾಬಾಸಾಹೇಬರ ಜಾತಿವಿನಾಶದ ಆಶಯಗಳನ್ನು ಜಾರಿಗೆ ತರಲು ಶ್ರಮಿಸಬೇಕು ಮತ್ತು ಅಂಬೇಡ್ಕರ್ ಅವರನ್ನು ತಳಸ್ಪರ್ಶಿಯಾಗಿ ಅಧ್ಯಯನ ಮಾಡಿರುವ ನಮ್ಮ ಸಮುದಾಯದ ವಿದ್ವಾಂಸರನ್ನು ಕರೆಸಿ ಮಾತಾಡಿಸಬೇಕು ಅಲ್ಲವೇ?
ಅದು ಅವರಿಗೆ ಬೇಕಿಲ್ಲ. ಅವರು ಹೆಣೆಯುವ ಕತೆಯಲ್ಲಿ ಶೋಷಿತ ಸಮುದಾಯವನ್ನು ಸಿಲುಕಿಸಬೇಕೆಂಬುದಷ್ಟೇ ಅವರ ಉದ್ದೇಶವಾಗಿದೆ. ಶೋಷಿತ ಸಮುದಾಯ ಬಾಬಾಸಾಹೇಬರನ್ನು ಗ್ರಹಿಸುವಲ್ಲಿ ವಿಫಲವಾದಾಗ ಮಾತ್ರ ಇಂತಹವರು ತಿರುಚಿದ ವಿಚಾರಗಳನ್ನು ಹೇಳಲು ಸಾಧ್ಯವಾಗುವುದು.
ಇತರರು ನಮ್ಮ ಮೆದುಳುಗಳಿಗೆ ತಮ್ಮ ಕಸ ಸುರಿಯದಂತೆ ತಡೆಯುವ ಏಕೈಕ ಮಾರ್ಗವೇ ಜ್ಞಾನ.
ಬಾಬಾಸಾಹೇಬರ ಕೃತಿಗಳನ್ನು ತಪ್ಪದೇ ಓದಿದರೆ ಇತರರು ಶೋಷಿತ ಸಮುದಾಯವನ್ನು ಮೂರ್ಖರಾಗಿಸಲು ಸಾಧ್ಯವಿಲ್ಲ. ಹಣಬಲ, ಜನಬಲ, ಅಧಿಕಾರ ಬಲ ಎಲ್ಲವೂ ಇದ್ದ ಕಾಲದಲ್ಲೇ ಅಲ್ಲವೇ ಅಂಬೇಡ್ಕರ್ ಅವರು ತಮ್ಮಲ್ಲಿದ್ದ ಜ್ಞಾನಬಲದಿಂದ ಎಲ್ಲರ ನಡುವೆ ಎಲ್ಲಾ ಅನ್ಯಾಯ ಅಕ್ರಮಗಳನ್ನು ಮೆಟ್ಟಿ ನಿಲ್ಲಲು ಸಾಧ್ಯವಾದುದು? ಅವರ ಅಪರೂಪದ ಅಪಾರವಾದ ಜ್ಞಾನದ ಶಕ್ತಿಯಿಂದಲ್ಲವೇ ಶೋಷಣೆಯಲ್ಲಿ ನರಳಿ ಸಾಯುತ್ತಲಿದ್ದ ಶೋಷಿತರಿಗೆ ಮಾನವ ಹಕ್ಕುಗಳನ್ನು ತಂದುಕೊಟ್ಟಿದ್ದು? ಎಲ್ಲರನ್ನೂ ಜ್ಞಾನದ ಬಲದಿಂದ ಗೆದ್ದಲ್ಲವೇ ಅವರು ವಿಶ್ವಮಾನ್ಯರಾದುದು?
ಜ್ಞಾನದ ಬಲದಿಂದ ಮಾತ್ರವೇ ನಾವು ಗಟ್ಟಿಯಾಗಿ ನಿಲ್ಲಬಹುದು. ಇತರರು ನಮ್ಮನ್ನು ಮೂರ್ಖರಾಗಿಸದಂತೆ ತಡೆಯಬಹುದು.