ಶಾರುಕ್‌ರನ್ನು ಮತ್ತೆ ತಡೆದ ಅಮೆರಿಕದ ಇಮಿಗ್ರೇಶನ್ ಅಧಿಕಾರಿಗಳು

Update: 2016-08-12 05:46 GMT

ಹೊಸದಿಲ್ಲಿ, ಆ.12: ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್ ಅವರನ್ನು ಅಮೆರಿಕಾದ ಇಮಿಗ್ರೇಶನ್ ವಿಭಾಗದ ಅಧಿಕಾರಿಗಳು ಲಾಸ್ ಏಂಜಲಿಸ್ ವಿಮಾನ ನಿಲ್ದಾಣದಲ್ಲಿ ತಡೆದ ಘಟನೆ ಗುರುವಾರ ನಡೆದು ಭಾರೀ ಸುದ್ದಿ ಮಾಡಿದೆ. ಇದು ಶಾರುಖ್ ಅವರನ್ನು ಅಮೆರಿಕದ ವಿಮಾನ ನಿಲ್ದಾಣಗಳಲ್ಲಿ ತಡೆದ ಮೂರನೆ ಘಟನೆಯಾಗಿದೆ. ಸಹಜವಾಗಿ ಶಾರುಕ್ ಹಾಗೂ ಅವರ ಅಭಿಮಾನಿಗಳು ಇದರಿಂದ ಅಸಮಾಧಾನಗೊಂಡಿದ್ದರೂ ಇಂತಹ ಒಂದು ಸನ್ನಿವೇಶದಲ್ಲೂ ಈ ಸೂಪರ್‌ಸ್ಟಾರ್ ಸ್ವಲ್ಪತಮಾಷೆಯಾಗಿ ಕಾಲ ಕಳೆದಿದ್ದಾರೆ. ಈ ಅವಧಿಯಲ್ಲಿ ಅವರೇನು ಮಾಡಿದರು ಗೊತ್ತೇ? ಈ ಬಗ್ಗೆ ಟ್ವೀಟ್ ಮಾಡಿರುವ ಶಾರುಕ್, ತನ್ನನ್ನು ವಿಮಾನ ನಿಲ್ದಾಣದಲ್ಲಿ ತಡೆ ಹಿಡಿದಿರುವುದು ಸಂತಸದಾಯಕ ವಿಚಾರವಲ್ಲದಿದ್ದರೂ ತಾನು ಜನಪ್ರಿಯ ‘ಪೋಕ್‌ಮಾನ್ ಗೇಮ್ಸ್’ ಆಡಿದೆ. ಈ ವೇಳೆ ಕೆಲವು ಒಳ್ಳೆಯ ಪೋಕ್‌ಮಾನ್‌ಗಳನ್ನು ಹಿಡಿದಿದ್ದೇನೆ ಎಂದು ಹೇಳಿದ್ದಾರೆ.

‘‘ಸುರಕ್ಷಾ ವಿಚಾರಗಳ ಬಗ್ಗೆ ನನಗೆ ಅರಿವಿದೆ ಹಾಗೂ ಅದನ್ನು ಗೌರವಿಸುತ್ತೇನೆ. ಆದರೆ ಪ್ರತಿ ಬಾರಿ ಅಮೆರಿಕ ಇಮ್ಮಿಗ್ರೇಶನ್ ಅಧಿಕಾರಿಗಳಿಂದ ತಡೆ ಹಿಡಿಯಲ್ಪಡುವುದು ನಿಜವಾಗಿಂುೂ ಅಸಮಾಧಾನ ಮೂಡಿಸುತ್ತದೆ’’ ಎಂದೂ ಶಾರುಕ್ ಟ್ವೀಟ್ ಮಾಡಿದ್ದಾರೆ.
ಈ ಹಿಂದೆ 2012ರಲ್ಲಿ ಯೇಲ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡುವ ಸಲುವಾಗಿ ಶಾರುಕ್ ಅವರು ರಿಲಯನ್ಸ್ ಸಮೂಹದ ಅಧ್ಯಕ್ಷ ಮುಖೇಶ್ ಅಂಬಾನಿಯವರ ಪತ್ನಿ ನೀತಾ ಅಂಬಾನಿಯವರೊಂದಿಗೆ ಖಾಸಗಿ ವಿಮಾನವೊಂದರಲ್ಲಿ ನ್ಯೂಯಾರ್ಕ್ ವಿಮಾನ ನಿಲ್ದಾಣಕ್ಕೆ ಆಗಮಿಸಿದಾಗ ಅಲ್ಲಿನ ಇಮಿಗ್ರೇಶನ್ ಅಧಿಕಾರಿಗಳು ಅವರನ್ನು ಸುಮಾರು ಎರಡು ಗಂಟೆಗಳಿಗೂ ಹೆಚ್ಚು ಕಾಲ ತಡೆ ಹಿಡಿದಿದ್ದರು. 2009ರಲ್ಲಿ ನ್ಯೂ ಜೆರ್ಸಿಯ ನೇವಾರ್ಕ್ ವಿಮಾನ ನಿಲ್ದಾಣದಲ್ಲಿಯೂ ಅವರನ್ನು ತಡೆಹಿಡಿಯಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News