ನ್ಯಾ. ಕಾಟ್ಜು ಪ್ರಕಾರ ಈ ನಿರ್ದಿಷ್ಟ ರಾಜ್ಯದವರೇ ನಿಜವಾದ ಭಾರತೀಯರು !

Update: 2016-08-12 09:21 GMT

ನವದೆಹಲಿ,ಆ.12 : ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾದ ಮಾಜಿ ಅಧ್ಯಕ್ಷ ಹಾಗೂ ಮಾಜಿ ಸುಪ್ರೀಂ ಕೋರ್ಟ್ ನ್ಯಾಯಾಧೀಶ ಜಸ್ಟಿಸ್ ಮಾರ್ಕಾಂಡೇಯ ಕಾಟ್ಜು ಪ್ರಕಾರ ಕೇರಳಿಗರೇ ‘ನಿಜವಾದ ಭಾರತೀಯರು.’ ಫೇಸ್ ಬುಕ್ ನಲ್ಲಿ ತಮ್ಮ ಅನಿಸಿಕೆಗಳನ್ನು ಪೋಸ್ಟ್ ಮಾಡಿರುವ ಕಾಟ್ಜು ತಮ್ಮ ಹೇಳಿಕೆಯನ್ನು ಸಮರ್ಥಿಸುತ್ತಾ,ಮಲಯಾಳಿಗಳಲ್ಲಿ ಭಾರತೀಯರಿಗೆ ಇರಬೇಕಾದಂತಹ ಎಲ್ಲಾ ಗುಣಲಕ್ಷಣಗಳಿವೆ.ಈ ಗುಣವೇನೆಂದರೆ ‘ಏಕತೆ ಮತ್ತು ಸಾಮರಸ್ಯದಿಂದ’ ಜೀವನ ನಡೆಸುವುದಾಗಿದೆ, ಎಂದು ಬರೆದಿದ್ದಾರೆ.

ವಿಭಿನ್ನ ಜಾತಿ, ಧರ್ಮಗಳ ಜನರು ವಾಸಿಸುವ ಕೇರಳ ರಾಜ್ಯದಲ್ಲಿ ಜನರು ‘‘ಬಾಹ್ಯ ಪ್ರಭಾವಕ್ಕೆ ತೆರದ ಮನಸ್ಸಿನವರಾಗಿದ್ದಾರೆ’’ ಹಾಗೂ ಈ ಗುಣವನ್ನು ಅಳವಡಿಸಲು ಇತರ ಕಡೆಗಳ ಜನರೂಪ್ರಯತ್ನಿಸಬೇಕು ಎಂದಿದ್ದಾರೆ. ‘‘ವಿಶ್ವದೆಲ್ಲೆಡೆ ಕೇರಳಿಗರನ್ನು ಕಾಣಬಹುದು. ಕೇರಳಿಗರು ಶ್ರಮ ಜೀವಿಗಳು, ಸರಳ ಜೀವನ ನಡೆಸುತ್ತಾರೆ ಹಾಗೂ ಬುದ್ಧಿವಂತರು. ಅವರು ವಿಶಾಲ ಹೃದಯಿಗಳು, ಉದಾರಿಗಳು ಹಾಗೂ ಜಾತ್ಯತೀತ ಮನೋಭಾವ ಹೊಂದಿದ್ದಾರೆ,’’ಎಂದೂ ಕಾಟ್ಜು ಕೇರಳಿಗರನ್ನು ಹೊಗಳಿ ಅಟ್ಟಕ್ಕೇರಿಸಿದ್ದಾರೆ.

ಕಾಟ್ಜು ಅವರ ಸುದೀರ್ಘ ಪೋಸ್ಟ್ ಕೇರಳವನ್ನು ಅದೆಷ್ಟು ಹೊಗಳುತ್ತಾ ಸಾಗಿದೆಯೆಂದರೆ ಸಾವಿರಾರು ಜನರು ಅವರ ಪೋಸ್ಟ್ ಅನ್ನು ಲೈಕ್ ಹಾಗೂ ಶೇರ್ ಕೂಡ ಮಾಡಿದ್ದಾರೆ. ಅಂದ ಹಾಗೆ ಕಾಟ್ಜು ಅವರ ಈ ಪೋಸ್ಟ್ ಗೆ 21,000 ಲೈಕುಗಳು ಸಿಕ್ಕಿವೆ ಹಾಗೂ 14,400 + ಬಾರಿ ಶೇರ್ ಆಗಿದೆ. ಆದರೆ ಗಮನಿಸತಕ್ಕ ಅಂಶವೆಂದರೆ ಅವರಲ್ಲಿ ಹೆಚ್ಚಿನವರು ಕಾಟ್ಜು ಅವರ ಮಲಯಾಳಿ ದೋಸ್ತಿಗಳೇ ಆಗಿದ್ದಾರೆ.

ಆದರೆ ಅವರ ಈ ಪೋಸ್ಟ್ ನ ಕಮೆಂಟ್ ವಿಭಾಗದಲ್ಲಿ ಹಲವರು ಕಾಟ್ಜು ಅವರೇಕೆ ಉತ್ತರ ಹಾಗೂ ಈಶಾನ್ಯ ರಾಜ್ಯದ ಜನರ ಬಗ್ಗೆ ಉಲ್ಲೇಖಿಸಿಲ್ಲ ಎಂಬ ಬಗ್ಗೆ ಚರ್ಚೆ ನಡೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News