ಉಸ್ತಾದ್ ಅಮ್ಜದ್ ಅಲಿ ಖಾನ್ ಅವರ ಬ್ರಿಟನ್ ವೀಸಾ ಅರ್ಜಿ ತಿರಸ್ಕೃತ

Update: 2016-08-12 15:35 GMT

ಹೊಸದಿಲ್ಲಿ,ಆ.12: ಶುಕ್ರವಾರ ಅಮೆರಿಕದ ಲಾಸ್ ಏಂಜಲೀಸ್‌ನಲ್ಲಿ ವಲಸೆ ಅಧಿಕಾರಿಗಳಿಂದ ಬಾಲಿವುಡ್ ನಟ ಶಾರುಕ್ ಖಾನ್ ಬಂಧನದ ಬೆನ್ನಲ್ಲೇ ಇತ್ತ ದಿಲ್ಲಿಯಲ್ಲಿನ ಬ್ರಿಟಿಷ್ ರಾಯಭಾರಿ ಕಚೇರಿಯು ಬ್ರಿಟನ್ನಿಗೆ ವೀಸಾ ಕೋರಿ ಖ್ಯಾತ ಸರೋದ್ ವಾದಕ ಉಸ್ತಾದ್ ಅಮ್ಜದ್ ಅಲಿ ಖಾನ್ ಅವರು ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದೆ.
  ಈ ಹಿಂದೆ ಪ್ರಿನ್ಸ್ ಆಫ್ ವೇಲ್ಸ್‌ಗಾಗಿ ವಿಶೇಷ ಪ್ರದರ್ಶನಗಳು ಸೇರಿದಂತೆ ಬ್ರಿಟನ್ನಿನಲ್ಲಿ ವ್ಯಾಪಕ ಪ್ರದರ್ಶನಗಳನ್ನು ನೀಡಿರುವ ಖಾನ್(70) ಅವರ ಕಾರ್ಯಕ್ರಮ ಲಂಡನ್ನಿನ ಪ್ರತಿಷ್ಠಿತ ರಾಯಲ್ ಫೆಸ್ಟಿವಲ್ ಹಾಲ್‌ನಲ್ಲಿ ನಡೆಯಲಿದೆ. ಇದಕ್ಕಾಗಿ ಬ್ರಿಟನ್ನಿಗೆ ವೀಸಾ ಕೋರಿ ಅವರು ಅರ್ಜಿಯನ್ನು ಸಲ್ಲಿಸಿದ್ದರು.
ಅರ್ಜಿ ತಿರಸ್ಕೃತಗೊಂಡಿರುವ ಬಗ್ಗೆ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಖಾನ್, ಹಿಂದಿನ ದಿನಗಳಿಗೆ ಹೋಲಿಸಿದರೆ ಈಗ ಇಂತಹ ಘಟನೆಗಳು ಹೆಚ್ಚುತ್ತಿವೆ. ವ್ಯಕ್ತಿ ಖಾನ್ ಅಥವಾ ಅಲಿ ಆಗಿದ್ದಾನೆಂದರೆ ಈ ಸಮಸ್ಯೆಗಳು ಧುತ್ತನೆ ಎದ್ದು ನಿಲ್ಲುತ್ತವೆ. ಅರ್ಜಿ ತಿರಸ್ಕಾರಕ್ಕೆ ಯಾವುದೇ ಕಾರಣವನ್ನು ತನಗೆ ತಿಳಿಸಲಾಗಿಲ್ಲ. ಅಂತಹ ಕಾರಣಗಳೂ ಇಲ್ಲ. ಆದರೆ ವಿಶ್ವದಲ್ಲಿಯ ಪ್ರಸಕ್ತ ಸ್ಥಿತಿ ಇದರೊಂದಿಗೆ ತಳುಕು ಹಾಕಿಕೊಂಡಿದೆ ಎಂದು ತಾನು ಭಾವಿಸಿದ್ದೇನೆ.ಅವರು ವಿಶ್ವಶಾಂತಿ,ಸೌಹಾರ್ದತೆ ಇತ್ಯಾದಿಗಳ ಬಗ್ಗೆ ಯೋಚಿಸುತ್ತಿರಬಹುದು. ಈ ಗೊಂದಲದಲ್ಲಿ ತಾನು ಕಲಾವಿದನಾಗಿದ್ದೇನೆ ಮತ್ತು ಅಲ್ಲಿ ಶಾಂತಿವಾಹಕನಾಗಿರುತ್ತೇನೆ ಎನ್ನುವುದನ್ನು ಅವರು ಮರೆತುಬಿಟ್ಟಿದ್ದಾರೆ ಎಂದು ಹೇಳಿದರು.
ವೀಸಾ ಪಡೆಯಲು ತನಗೆ ನೆರವಾಗುವಂತೆ ಫೇಸಬುಕ್ ಮೂಲಕ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರನ್ನು ಕೋರಿರುವ ಖಾನ್, ಈ ಸಮಸ್ಯೆ ಶೀಘ್ರ ಬಗೆಹರಿಯುವ ಆಶಯವನ್ನು ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News