ಭಾರತದಲ್ಲಿ ಮೌನ ತುರ್ತುಪರಿಸ್ಥಿತಿಯಿದೆ: ಪತ್ರಕರ್ತೆ ರಾಣಾ ಅಯ್ಯೂಬ್

Update: 2016-08-13 06:13 GMT

ಕೋಝಿಕ್ಕೋಡ್, ಆ.13: ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದಲ್ಲಿ ಈಗ ಮೌನ ತುರ್ತುಪರಿಸ್ಥಿತಿ ಇದೆ ಎಂದು ಪ್ರಮುಖ ಪತ್ರಕರ್ತೆ ರಾಣಾ ಅಯ್ಯೂಬ್ ಹೇಳಿದ್ದಾರೆಂದು ವರದಿಯಾಗಿದೆ. ಕೋಝಿಕ್ಕೋಡ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತಾಡುತ್ತಿದ್ದ ಅವರು, ಗುಜರಾತ್ ಸಾಮೂಹಿಕ ಕಗ್ಗೊಲೆಯ ಕುರಿತು ರಾಷ್ಟ್ರೀಯಮಾಧ್ಯಮಗಳು ವಹಿಸಿರುವ ಮೌನ ಆತಂಕಕಾರಿಯಾಗಿದ್ದು, ಸರಕಾರ ಮತ್ತು ಅಧಿಕೃತ ಭಾಷೆಗಳ ವಿರುದ್ಧ ಅಸಹಮತ ತೋರುವ ನೈತಿಕ ಜವಾಬ್ದಾರಿಯನ್ನು ಮಾಧ್ಯಮಗಳು ಮರೆತಿವೆ ಎಂದು ಅವರು ಹೇಳಿದ್ದಾರೆ. ಸಂವಿಧಾನದ ಮೌಲ್ಯಗಳನ್ನು ಒಂದೊಂದಾಗಿ ಧ್ವಂಸಗೊಳಿಸಲು ಮೋದಿ ಸರಕಾರ ಯತ್ನಿಸುತ್ತಿದೆ. ದೇಶದ ಮೇಲೆ ಸರಕಾರದ ಮಿತಿಮೀರಿದ ಅಧಿಕಾರವನ್ನು ನಿಯಂತ್ರಿಸುವ ಸಾಮರ್ಥ್ಯ ಮಾಧ್ಯಮಗಳಿದ್ದರೂ ಪ್ರಜ್ಞಾಪೂರ್ವಕ ಮೌನವನ್ನು ವಹಿಸಿವೆ ಎಂದು ರಾಣಾ ಅಯ್ಯೂಬ್ ಆರೋಪಿಸಿದ್ದಾರೆ ಎಂದು ತಿಳಿದು ಬಂದಿದೆ.

       "ಮಾಧ್ಯಮಗಳ ಮೌನವೇ ಗುಜರಾತ್ ಸಾಮೂಹಿಕ ನರಹತ್ಯೆಗೆ ಸಂಬಂಧಿಸಿ ಗುಪ್ತಕ್ಯಾಮರಾವನ್ನು ಉಪಯೋಗಿಸಲು ತನ್ನನ್ನು ನಿರ್ಬಂಧಿಸಿತು" ಎಂದು ಅವರು ಹೇಳಿದ್ದಾರೆ. "ಗುಜರಾತ್ ಸಾಮೂಹಿಕ ಹತ್ಯೆ ಮತ್ತು ನಕಲಿ ಎನ್‌ಕೌಂಟರ್‌ಗಳ ಬಗ್ಗೆ ನೇರವಾಗಿ ಸಿಕ್ಕಿರುವ ಮಾಹಿತಿಗಳು ಎಷ್ಟೋ ಭಯಾನಕವಾದುದು" ಎಂದು ರಾಣಾ ಅಯ್ಯೂಬ್ ತಿಳಿಸಿದ್ದಾರೆ. "2001ರಿಂದ 2010ರವರೆಗೆ ಗುಜರಾತ್‌ನ ಹಿರಿಯ ಪೊಲೀಸಧಿಕಾರಿಗಳೊಂದಿಗೆ ಮಾತಾಡಿದಾಗ ಅವರು ಹೇಳಿದ ಮಾಹಿತಿಗಳಂತೂ ಅಂದಿನ ಮುಖ್ಯಮಂತ್ರಿ ನರೇಂದ್ರಮೋದಿ ಮತ್ತು ಅಮಿತ್ ಶಾರನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸುವಂತಹದ್ದಾಗಿವೆ. ಆದರೆ, ಈ ತನಿಖಾ ವರದಿಯನ್ನು ಸ್ವೀಕರಿಸಲು ಭಾರತದ ಯಾವುದೇ ಮಾಧ್ಯಮ ಸಂಸ್ಥೆಗಳಿಗೆ ಸಾಧ್ಯವಾಗಲಿಲ್ಲ. ತನ್ನ ಈ ವರದಿಗೆ ಗುಣಮಟ್ಟವಿಲ್ಲ ಎಂದು ಕೆಲವರು ಟೀಕಿಸಿದ್ದಾರೆ. ಆದರೆ, ಗುಜರಾತ್ ದಂಗೆಯ ಬಲಿಪಶುಗಳಿಗೆ ನ್ಯಾಯ ಸಿಗಬೇಕು. ಅದಕ್ಕಾಗಿ ಯಾವುದೇ ತನಿಖಾ ಸಂಸ್ಥೆಯ ಮುಂದೆ ಪುರಾವೆಗಳನ್ನು ಸಲ್ಲಿಸಲು ತಾನು ಸಿದ್ಧಳಿದ್ದೇನೆ" ಎಂದು ಅವರು ಹೇಳಿದ್ದಾರೆಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News