ಗುಜರಾತ್‌ನ ಈ ಹಳ್ಳಿಯ ಸಾಕ್ಷರತೆ ಪ್ರಮಾಣ ಶೇ.99 ಆದರೆ, ಶಿಕ್ಷಿತ ದಲಿತರಿಗೆ ಸೂಕ್ತ ಉದ್ಯೋಗವಿಲ್ಲ

Update: 2016-08-13 18:31 GMT

ಮೆಹಸಾನಾ, ಆ.13: ಗುಜರಾತ್ ರಾಜ್ಯದ ವಿಜಯಪುರ ತಾಲೂಕಿನ ದಗವಡಿಯ ಗ್ರಾಮದಲ್ಲಿ ಸಾಕ್ಷರತೆ ಪ್ರಮಾಣ ಶೇ.99ದಷ್ಟಿದೆ. ಇದು ಇಡೀ ರಾಜ್ಯದ ಸಾಕ್ಷರತೆ ಪ್ರಮಾಣ ಶೇ.79.31ಗಿಂತ ಬಹಳಷ್ಟು ಹೆಚ್ಚು. ಆದರೆ ವಿಪರ್ಯಾಸವೆಂದರೆ ಈ ಗ್ರಾಮದ ಹೆಚ್ಚಿನವರಿಗೆ ತಾವು ಪಡೆದ ಶಿಕ್ಷಣಕ್ಕೆ ತಕ್ಕಂತೆ ಉದ್ಯೋಗ ದೊರೆತಿಲ್ಲ. ಅಶ್ವಿನ್ ಚಾಮರ್ ಎಂಬ ಯುವಕ ಹಿಂದಿಯಲ್ಲಿ ಬಿಎ ಪದವಿ ಪಡೆದು ಸಂಸ್ಕೃತದಲ್ಲಿ ಸ್ನಾತ್ತಕೋತ್ತರ ಪದವಿ ಪಡೆದಿದ್ದರೂ ಉದ್ಯೋಗ ದೊರೆಯದೆ ಗಾರೆ ಕೆಲಸವನ್ನು ಮಾಡುತ್ತಿದ್ದಾರೆ.

ಮೂರು ವರ್ಷಗಳ ಹಿಂದೆ ಯುವಕರ ಗುಂಪೊಂದರ ನಡುವೆ ನಡೆದ ಜಗಳದ ಪರಿಣಾಮ ಇಲ್ಲಿನ ಚಾಮರ ದಲಿತ ಸಮುದಾಯ ಹಾಗೂ ಇತರ ಹಿಂದುಳಿದ ವರ್ಗಕ್ಕೆ ಸೇರಿದ ಚೌಧರಿ ಸಮುದಾಯದ ನಡುವಿನ ಸಂಬಂಧಗಳು ಕೆಟ್ಟು ಹೋಗಿದ್ದವು. ಸತ್ತ ದನಗಳ ಚರ್ಮ ಸುಲಿಯುವ ವೃತ್ತಿ ಮಾಡುವ ಚಾಮರ ಸಮುದಾಯ ಹಳ್ಳಿಯನ್ನು ತೊರೆಯುವ ನಿರ್ಧಾರ ಕೈಗೊಂಡಿತ್ತಾದರೂ ಚೌಧರಿಗಳೊಂದಿಗೆ ಹೊಂದಾಣಿಕೆಗೆ ಬಂದಿತ್ತು. ಕಾರಣ ಮೆಹಸಾನದಲ್ಲಿರುವ ನ್ಯಾಯಾಲಯದಲ್ಲಿ ವಿಚಾರಣೆಗೆ ಹಾಜರಾಗಲು ಪ್ರತಿ ಬಾರಿ ವಾಹನ ಏರ್ಪಾಟು ಮಾಡಿ ಹೋಗುವಷ್ಟು ಅವರು ಸ್ಥಿತಿವಂತರಾಗಿರಲಿಲ್ಲ. ಇತ್ತೀಚಿಗಿನ ಉನಾ ಘಟನೆಯ ನಂತರ ಈ ಗ್ರಾಮಮದ ದಲಿತರು ಮತ್ತೆ ಕಳವಳಗೊಂಡಿದ್ದಾರೆ. ಶೇ.99 ಸಾಕ್ಷರತೆ ಹೊಂದಿದ ಹೊರತಾಗಿಯೂ ಈ ಗ್ರಾಮದಲ್ಲಿ ನವರಾತ್ರಿ ಹಬ್ಬದ ಸಂದರ್ಭ ಮೂರು ಗರ್ಭಾಗಳನ್ನು ಆಯೋಜಿಸಲಾಗುತ್ತದೆ. ಒಂದು ಗರ್ಭಾದಲ್ಲಿ ಮೇಲ್ಜಾತಿಯವರು ಹಾಗೂ ಇತರ ಹಿಂದುಳಿದ ಜಾತಿಗಳವರು ಭಾಗವಹಿಸಿದರೆ, ಮತ್ತೆರಡರಲ್ಲಿ ದಲಿತರು ಮಾತ್ರ ಭಾಗವಹಿಸುತ್ತಾರೆ. ಈ ಪ್ರದೇಶದ ದಲಿತರಲ್ಲಿ ಪುರುಷರು ಶೇ.99.7 ಪುರುಷರು ಸಾಕ್ಷರರಾಗಿದ್ದರೆ, ಮಹಿಳೆಯರಲ್ಲಿ ಸಾಕ್ಷರತೆಯ ಪ್ರಮಾಣ ಶೇ.99.53 ಆಗಿದೆ. ಶಿಕ್ಷಣ ಪಡೆದ ದಲಿತರೂ ಉದ್ಯೋಗ ಪಡೆಯದಿದ್ದರೂ ಶಿಕ್ಷಣ ಈ ಭಾಗದ ದಲಿತರ ಸಬಲೀಕರಣದತ್ತ ಸಹಾಯ ಮಾಡುತ್ತಿದೆ. ಹುಡುಗಿಯರು ಹೆಚ್ಚಿನ ವಿದ್ಯಾಭ್ಯಾಸ ಪಡೆಯಲು ಮನಸ್ಸು ಮಾಡಿದರೆ ಅವರನ್ನು ತಡೆಯಲಾಗುವುದಿಲ್ಲ. ದಲಿತರಲ್ಲಿ ಬುಟ್ಟಿ ಹೆಣೆಯುವ ವೃತ್ತಿ ಮಾಡುವ ಸೆನ್ಮಾ ಸಮುದಾಯ ಈ ಗ್ರಾಮದ ಇನ್ನೊಂದು ಪಕ್ಕದಲ್ಲಿ ವಾಸಿಸುತ್ತಿದೆ.

ಗ್ರಾಮದಲ್ಲಿ ಸುಮಾರು 300 ಚೌಧರಿ ಕುಟುಂಬಗಳಿದ್ದರೆ, 25 ಸೆನ್ಮಾ ಸಮುದಾಯದ ಕುಟುಂಬಗಳಿದ್ದು ಅವರಲ್ಲಿ ಹೆಚ್ಚಿನವರು ಕೃಷಿ ಕಾರ್ಮಿಕರಾಗಿದ್ದಾರೆ. ಇಲ್ಲಿ ಸ್ವಚ್ಛ ಭಾರತ ಯೋಜನೆಯಂಗವಾಗಿ ಶೌಚಾಲಯಗಳು ನಿರ್ಮಾಣಗೊಂಡಿದ್ದರೂ ಅಲ್ಲಿ ನೀರಿನ ಸಂಪರ್ಕ ಒದಗಿಸಲಾಗಿಲ್ಲ. ಶಾಲೆಗಳಲ್ಲಿ ಅಸ್ಪಶ್ಯತೆಯ ಸಮಸ್ಯೆಯಿಲ್ಲ ಹಾಗೂ ಎಲ್ಲಾ ಮಕ್ಕಳು ಜೊತೆಯಾಗಿ ಓದುತ್ತಾರೆ ಎನ್ನುತ್ತಾರೆ ಇಲ್ಲಿನ ದಲಿತ ಸಮುದಾಯದ ಮಂದಿ. ಚಾಮರ ಸಮುದಾಯದ ಎಲ್ಲರ ಹೆಸರುಗಳೂ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ನೋಂದಣಿಗೊಂಡಿದ್ದರೂ ಅವರಿಗೆ ಈ ವರ್ಷ ನೌಕರಿ ದೊರೆತಿಲ್ಲ. ಕೆಲಸ ದೊರೆತರೂ ವೇತನ ಸಿಗಲು ಆರು ತಿಂಗಳು ಕಾಯಬೇಕು ಎನ್ನುತ್ತಾರೆ ಹಲವರು. ಚಾಮರ ಸಮುದಾಯದ ಮಂದಿ ಈಗಲೂ ಸತ್ತ ದನಗಳ ಚರ್ಮಗಳು ಸುಲಿಯುತ್ತಾರಾದರೂ ಸರಕಾರ ಚರ್ಮ ಸಂಸ್ಕರಣ ಘಟಕಗಳನ್ನು ಮುಚ್ಚಿದೆ ಎಂದು ಅವರು ದೂರಿದ್ದಾರೆ. ಹಿಂದೆ ಪ್ರತಿಯೊಂದು ದನದ ಚರ್ಮಕ್ಕೆ ನಮಗೆ 200 ರೂ. ಸಿಗುತ್ತಿತ್ತು. ಆದರೆ ಈಗ ಈ ಕೆಲಸ ಫ್ಯಾಕ್ಟರಿಗಳಿಗೆ ಹೋಗುತ್ತದೆ. ಸುಲಿದ ಚರ್ಮವನ್ನು ಇನ್ನೊಂದು ಗ್ರಾಮದ ಅವರದೇ ಸಮುದಾಯದ ವ್ಯಾಪಾರಿಗೆ ಮಾರಲಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News