ಕಾಶ್ಮೀರ: ಮಾತುಕತೆಗೆ ಭಾರತವನ್ನು ಆಹ್ವಾನಿಸಿದ ಪಾಕ್

Update: 2016-08-15 17:11 GMT

   ಇಸ್ಲಾಮಾಬಾದ್,ಆ.15: ಕಾಶ್ಮೀರ ಬಿಕ್ಕಟ್ಟಿಗೆ ಪರಿಹಾರವನ್ನು ಕಂಡುಕೊಳ್ಳಲು ಮಾತುಕತೆಯನ್ನು ಆರಂಭಿಸುವಂತೆ ಪಾಕಿಸ್ತಾನವು ಸೋಮವಾರ ಭಾರತವನ್ನು ಆಹ್ವಾನಿಸಿದ್ದು, ಈ ಅಂತಾರಾಷ್ಟ್ರೀಯ ವಿವಾದವನ್ನು ಇತ್ಯರ್ಥಗೊಳಿಸುವುದು ಉಭಯ ರಾಷ್ಟ್ರಗಳಿಗೂ ಒಂದು ಅಂತಾರಾಷ್ಟ್ರೀಯ ಬಾಧ್ಯತೆಯಾಗಿದೆಯೆಂದರು.

  ಕಾಶ್ಮೀರ ಕುರಿತ ಮಾತುಕತೆಗೆ ಭಾರತವನ್ನು ಆಹ್ವಾನಿಸುವ ಪತ್ರವನ್ನು ಪಾಕಿಸ್ತಾನದಲ್ಲಿನ ಭಾರತೀಯ ಹೈಕಮೀಶನರ್ ಗೌತಮ್ ಬಿಂಬವಾಲೆ ಅವರಿಗೆ ಹಸ್ತಾಂತರಿಸಿರುವುದಾಗಿ ಪಾಕ್ ವಿದೇಶಾಂಗ ಕಚೇರಿಯ ವಕ್ತಾರ ನಫೀಸ್ ಝಕಾರಿಯಾ ತಿಳಿಸಿದ್ದಾರೆ.

 ‘‘ ಪಾಕ್ ವಿದೇಶಾಂಗ ಕಾರ್ಯದರ್ಶಿಯವರು ಇಂದು ಮಧ್ಯಾಹ್ನ ಭಾರತೀಯ ಹೈಕಮೀಶನರ್ ಅವರನ್ನು ಕರೆಯಿಸಿಕೊಂಡು, ಭಾರತ ಹಾಗೂ ಪಾಕಿಸ್ತಾನದ ನಡುವೆ ಅಸಮಾಧಾನಕ್ಕೆ ಮುಖ್ಯ ಕಾರಣವಾಗಿರುವ ಜಮ್ಮುಕಾಶ್ಮೀರ ವಿವಾದದ ಬಗ್ಗೆ ಮಾತುಕತೆ ನಡೆಸಲು ಪಾಕ್‌ಗೆ ಭೇಟಿ ನೀಡುವಂತೆ ಭಾರತದ ವಿದೇಶಾಂಗ ಸಚಿವರನ್ನು ಆಹ್ವಾನಿಸುವ ಪತ್ರವನ್ನು ಹಸ್ತಾಂತರಿಸಿದೆ’’ ಎಂದು ಝಕಾರಿಯಾ ತಿಳಿಸಿದ್ದಾರೆ.

  ಜಮ್ಮುಕಾಶ್ಮೀರ ವಿವಾದಕ್ಕೆ ಸಂಬಂಧಿಸಿ ಕಳೆದ ಕೆಲವು ವಾರಗಳಿಂದ ಉಭಯದೇಶಗಳ ನಡುವೆ ತೀವ್ರ ವಾಗ್ದಾಳಿ ನಡೆಯುತ್ತಿರುವ ಮಧ್ಯೆಯೇ ಈ ಪಾಕ್ ಈ ಆಹ್ವಾನವನ್ನು ನೀಡಿದೆ.

 ಭದ್ರತಾ ಮಂಡಳಿಯ ನಿರ್ಣಯಗಳಿಗೆ ಅನುಗುಣವಾಗಿ ಜಮ್ಮುಕಾಶ್ಮೀರ ವಿವಾದವನ್ನು ಬಗೆಹರಿಸಲು ಎರಡೂ ದೇಶಗಳಿರುವ ಅಂತಾರಾಷ್ಟ್ರೀಯ ಬಾಧ್ಯತೆಗಳ ಬಗ್ಗೆ ಈ ಪತ್ರವು ಬೆಳಕು ಚೆಲ್ಲಿದೆ’’ ಎಂದು ಹೇಳಿಕೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News