ಅಡಿಕೆ ಖರೀದಿಗೆ ಕರ್ನಾಟಕದ ಪ್ರಸ್ತಾವಿತ ಬೆಲೆ ತುಂಬ ಅಧಿಕ: ಕೇಂದ್ರ

Update: 2016-08-16 13:25 GMT

ಹೊಸದಿಲ್ಲಿ,ಆ.16: ದೇಶಿಯ ಮಾರುಕಟ್ಟೆಯಲ್ಲಿ ಅಡಿಕೆ ಬೆಲೆಗಳ ಕುಸಿತದ ನಡುವೆಯೇ ಕೇಂದ್ರವು ತಾನು ಕರ್ನಾಟಕದಿಂದ ಅಡಿಕೆಯನ್ನು ಖರೀದಿಸಲು ಸಿದ್ಧ, ಆದರೆ ರಾಜ್ಯ ಸರಕಾರವು ಪ್ರಸ್ತಾಪಿಸಿರುವ ಪ್ರತಿ ಕೆಜಿಗೆ 300-400 ರೂ.ದರ ತುಂಬ ಹೆಚ್ಚಾಗಿದೆ ಎಂದು ಹೇಳಿದೆ.

ಮಾರುಕಟ್ಟೆ ಮಧ್ಯಪ್ರವೇಶ ಯೋಜನೆಯಡಿ 40,000 ಟನ್ ಅಡಿಕೆ ಖರೀದಿಗಾಗಿ ಕರ್ನಾಟಕ ಸರಕಾರದ ಪ್ರಸ್ತಾವನೆಯ ಕುರಿತು ಚರ್ಚಿಸಲು ಕೇಂದ್ರ ಕೃಷಿ ಸಚಿವಾಲಯವು ತನ್ನ ಹಿರಿಯ ಅಧಿಕಾರಿಯೋರ್ವರನ್ನು ಬೆಂಗಳೂರಿಗೆ ಕಳುಹಿಸಿತ್ತು.

ಬೆಲೆ ಕುಸಿತವನ್ನು ತಡೆಯಲು ಕೇಂದ್ರವು ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಕೇಂದ್ರ ಸಚಿವ ಅನಂತಕುಮಾರ್ ಸೇರಿದಂತೆ ಕರ್ನಾಟಕದ ಹಿರಿಯ ಬಿಜೆಪಿ ನಾಯಕರು ಕಳೆದ ಜೂನ್ ತಿಂಗಳಲ್ಲಿ ಆಗ್ರಹಿಸಿದ್ದರು. ಇತರ ಕ್ರಮಗಳ ಜೊತೆಗೆ ಅಡಿಕೆಯ ಆಮದನ್ನು ನಿಷೇಧಿಸುವಂತೆಯೂ ಅವರು ಕೋರಿದ್ದರು.

ಕರ್ನಾಟಕ ಸರಕಾರದ ಪ್ರಸ್ತಾವನೆಯನ್ನು ನಾವು ಪರಿಶೀಲಿಸುತ್ತಿದ್ದೇವೆ. ರಾಜ್ಯವು ಸಲ್ಲಿಸಿರುವ ಖರೀದಿ ಮತ್ತು ಮಾರುಕಟ್ಟೆ ಬೆಲೆಗಳು ಹಾಗೂ ಉತ್ಪಾದನಾ ವೆಚ್ಚಗಳು ತುಂಬ ಹೆಚ್ಚಾಗಿವೆ ಎಂದು ಕೃಷಿ ಸಚಿವಾಲಯದ ಹಿರಿಯ ಅಧಿಕಾರಿಯೋರ್ವರು ಸುದ್ದಿಸಂಸ್ಥೆಗೆ ತಿಳಿಸಿದರು.

 ರಾಜ್ಯ ಸರಕಾರವು ಪ್ರಸ್ತಾಪಿಸಿರುವ ಚಾಲಿ ಅಡಿಕೆಗೆ ಪ್ರತಿ ಕೆಜಿಗೆ 300 ರೂ.ಮತ್ತು ಕೆಂಪಡಿಕೆಗೆ ಪ್ರತಿ ಕೆಜಿಗೆ 400 ರೂ.ಖರೀದಿ ಬೆಲೆಗಳು ಕೇರಳದ ಅಡಿಕೆ ಮತ್ತು ಸಂಬಾರ ಬೆಳೆಗಳ ಅಭಿವೃದ್ಧಿ ನಿರ್ದೇಶನಾಲಯವು ಶಿಫಾರಸು ಮಾಡಿರುವ ಪ್ರತಿ ಕೆಜಿಗೆ 172 ರೂ.ಬೆಲೆಗೆ ಹೋಲಿಸಿದರೆ ತುಂಬ ಹೆಚ್ಚಾಗಿವೆ. ಅಲ್ಲದೆ ಕರ್ನಾಟಕದಲ್ಲಿ ಅಡಿಕೆಯ ಪ್ರಚಲಿತ ಮಾರುಕಟ್ಟೆ ಬೆಲೆಗಳು ಉತ್ಪಾದನಾ ವೆಚ್ಚಕ್ಕಿಂತ ಮೇಲೆಯೇ ಇವೆ ಎಂದೂ ನಿರ್ದೇಶನಾಲಯವು ಮಾಹಿತಿ ನೀಡಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಚಾಲಿ ಅಡಿಕೆಯ ಬೆಲೆ ಶೇ.18ರಷ್ಟು ಮತ್ತು ಕೆಂಪಡಿಕೆಯ ಬೆಲೆ ಶೇ.16ರಷ್ಟು ಕುಸಿದಿವೆ.

ನಿರ್ದೇಶನಾಲಯವು ಬಿಂಬಿಸಿರುವ 4.5 ಲ.ಟನ್‌ಗೆ ಹೋಲಿಸಿದರೆ 2015-16ನೇ ಬೆಳೆಸಾಲಿನಲ್ಲಿ ಅಡಿಕೆ ಉತ್ಪಾದನೆಯ ಕರ್ನಾಟಕ ಸರಕಾರದ 4.07 ಲ.ಟ.ಅಂದಾಜು ಕಡಿಮೆಯಿದೆ ಎಂದು ಹೇಳಿರುವ ಸಚಿವಾಲಯವು, ಖರೀದಿಯ ಪ್ರಮಾಣವು ಎಲ್ಲ ಮಾದರಿಗಳ ಒಟ್ಟು ಉತ್ಪಾದನೆಯ ಶೇ.10ರವರೆಗೆೆ ಸೀಮಿತವಾಗಿರಬೇಕು. ಹೀಗಾಗಿ ಖರೀದಿಯ ಪ್ರಮಾಣ ಚಾಲಿ ಅಡಿಕೆಗೆ 24,471 ಟ. ಮತ್ತು ಕೆಂಪಡಿಕೆಗೆ 16,314 ಟ.ಆಗಬೇಕು ಎಂದು ಅಭಿಪ್ರಾಯಿಸಿದೆ.

ಆದರೆ ಕರ್ನಾಟಕ ಸರಕಾರವು ತನ್ನ ಪ್ರಸ್ತಾವನೆಯಲ್ಲಿ 28,000 ಟ.ಚಾಲಿ ಮತ್ತು 12,000 ಟ.ಕೆಂಪಡಿಕೆಯನ್ನು ಖರೀದಿಸುವಂತೆ ಕೋರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News