ನನ್ನನ್ನು ಶಾಸಕನನ್ನಾಗಿಸಿ ತಂದೆಯ ಋಣ ತೀರಿಸಿದ ಅರಸು -ರಹಮತುಲ್ಲಾ ಖಾನ್

Update: 2016-08-16 17:28 GMT

1962ರಲ್ಲಿ, ಮುಖ್ಯಮಂತ್ರಿ ನಿಜಲಿಂಗಪ್ಪನವರು, ದೇವರಾಜ ಅರಸು ಅವರಿಗೆ ಹುಣಸೂರಿನಿಂದ ಸ್ಪರ್ಧಿಸಲು ಟಿಕೆಟ್ ನಿರಾಕರಿಸಿದ್ದರು. ಆಗ ಅರಸರು, ‘‘ಟಿಕೆಟ್ ಕೊಟ್ಟರೆ ಕೊಡಲಿ, ನಾನಂತೂ ಹೋಗಿ ಕೇಳುವುದಿಲ್ಲ’’ ಎಂದು ಸುಮ್ಮನಿದ್ದರು. ಆದರೆ ಹುಣಸೂರಿನ ಜನ, ‘‘ನೀವು ದಿಲ್ಲಿಗೆ ಹೋಗಿ, ನಾಯಕರನ್ನು ಕಂಡು ಟಿಕೆಟ್ ಕೇಳಬೇಕು’’ ಎಂದು ಅರಸರ ಮೇಲೆ ಒತ್ತಡ ಹಾಕಿದರು. ಅರಸು, ‘‘ನನ್ನ ಬಳಿ ಹಣವಿಲ್ಲ, ನಾನು ಹೋಗುವುದಿಲ್ಲ’’ ಎಂದುಬಿಟ್ಟರು. ಆಗ ಹುಣಸೂರಿನ ಗಣ್ಯ ವ್ಯಕ್ತಿಗಳು, ಪ್ರಭಾವಿ ನಾಯಕರು, ಸಾ ಮಿಲ್ ಒಡೆಯರು ಆದ ಇಬ್ರಾಹೀಂ ಖಾನ್, ‘‘ದಿಲ್ಲಿಗೆ ಹೋಗಿಬರುವ ಖರ್ಚು ನನ್ನದು, ನಿನ್ನ ಜೊತೆ ನಾನೂ ಬರುತ್ತೇನೆ, ನಡೆ’’ ಎಂದರು. ದಿಲ್ಲಿಗೆ ಹೋದರು, ಟಿಕೆಟ್ ತಂದರು, ಶಾಸಕರಾದರು. ಗೆದ್ದ ಅರಸರನ್ನು ನಿಜಲಿಂಗಪ್ಪನವರು ಮಂತ್ರಿ ಮಾಡಿದರು. ಆದರೆ ಆ ಅವಧಿ ಮುಗಿಯುವುದರೊಳಗೆ, 1967ರಲ್ಲಿ ಇಬ್ರಾಹೀಂ ಖಾನ್ ನಿಧನರಾದರು.

1969ರಲ್ಲಿ ಕಾಂಗ್ರೆಸ್ ಇಬ್ಭಾಗವಾಗಿ, ಇಂದಿರಾ ಕಾಂಗ್ರೆಸ್‌ನ ನಾಯಕತ್ವವನ್ನು ದೇವರಾಜ ಅರಸು ವಹಿಸಿಕೊಂಡಾಗ, ಇಬ್ರಾಹೀಂ ಸಾಹೇಬರ ಮಗ ರಹಮತುಲ್ಲಾ ಖಾನ್‌ರನ್ನು ಕರೆದು ಕಾಂಗ್ರೆಸ್ ಪಕ್ಷದ ಸದಸ್ಯರನ್ನಾಗಿಸಿದರು. ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಬಿಎಸ್ಸಿ ಓದಿ, ಜಕ್ಕೂರು ಏರ್‌ಬೇಸ್‌ನಲ್ಲಿ ಪೈಲೆಟ್ ತರಬೇತಿ ಪಡೆದು, ಮದುವೆಯಾಗಿ, ಎಚ್‌ಎಎಲ್‌ನಲ್ಲೊಂದು ಇಂಡಸ್ಟ್ರಿಯಲ್ ಯೂನಿಟ್ ಸ್ಥಾಪಿಸಿದ್ದ ರಹಮತುಲ್ಲಾ, ಆಗಲೇ ತಮ್ಮ ಬದುಕಿನ ಮಾರ್ಗವನ್ನು ಕಂಡುಕೊಂಡಿದ್ದರು. ಅಂತಹವರನ್ನು ದೇವರಾಜ ಅರಸು ಕರೆದು ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿದ್ದೂ ಅಲ್ಲದೆ, 1972ರ ವೇಳೆಗೆ, ‘‘ಯಾವುದಾದರೂ ಕ್ಷೇತ್ರ ನೋಡಿಕೋ, ಚುನಾವಣೆಗೆ ಸ್ಪರ್ಧಿಸುವಂತೆ’’ ಎಂದು ಸೂಚಿಸಿದ್ದರು. ರಹಮತುಲ್ಲಾರಿಗೆ ತಮ್ಮ ತಂದೆ ಇಬ್ರಾಹೀಂ ಖಾನ್‌ರ ರಾಜಕಾರಣ ಮತ್ತು ಸಮಾಜಸೇವೆಯ ಅರಿವಿತ್ತು. ದೇವರಾಜ ಅರಸರಿಗೆ ಟಿಕೆಟ್ ಕೊಡಿಸುವಲ್ಲಿ, ಇತರ ಬಹುಸಂಖ್ಯಾತ ಜಾತಿಯ ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಲ್ಲಿ, ವಿರೋಧಿಗಳನ್ನು ಸುಮ್ಮನಿರಿಸುವಲ್ಲಿ, ಚುನಾವಣೆಯಲ್ಲಿ ಓಡಾಡಿ ಗೆಲ್ಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದೆಲ್ಲ ನೆನಪಿತ್ತು. ಇಷ್ಟೆಲ್ಲ ಗೊತ್ತಿದ್ದ ರಹಮತುಲ್ಲಾ ಖಾನ್, ಅಪ್ಪನ ಹಾದಿ ಬಿಟ್ಟು ಬೆಂಗಳೂರಿಗೆ ಬಂದು ಬದುಕು ಕಟ್ಟಿಕೊಂಡಿದ್ದರು.
ಆದರೆ ದೇವರಾಜ ಅರಸು ಕರೆದು, ಕ್ಷೇತ್ರ ಹುಡುಕಿಕೋ ಎಂದಾಗ, ಭವಿಷ್ಯವೇ ಬದಲಾಗಿಹೋಯಿತು. ಹುಣಸೂರಿನಲ್ಲಿ ತಂದೆಯೊಂದಿಗಿನ ಅರಸರ ಸ್ನೇಹ, ಸಾ ಮಿಲ್‌ನಲ್ಲಿ ದಿನವಿಡಿ ಕೂತು ಚರ್ಚಿಸುತ್ತಿದ್ದುದು, ಮನೆಗೆ ಬಂದು ಹೆಢಗುತ್ತಿದ್ದುದು, ಶಾಸಕರ ನ್ನಾಗಿ ಮಾಡಿದ್ದು, ಮಗನಂತೆ ಮಮತೆಯಿಂದ ನೋಡಿಕೊಂಡಿದ್ದು... ಎಲ್ಲವನ್ನು ಇಲ್ಲಿ ನೆನಪಿಸಿಕೊಂಡಿದ್ದಾರೆ, 77ರ ಹರೆಯದ ಮಾಜಿ ಶಾಸಕ ರಹಮತುಲ್ಲಾ ಖಾನ್.

ನನಗೆ ನೆನಪಿರುವ ಹಾಗೆ, ನನ್ನ ಹದಿನೇಳನೇ ವಯಸ್ಸಿನಿಂದ ದೇವರಾಜ ಅರಸರನ್ನು ಬಹಳ ಹತ್ತಿರದಿಂದ ಬಲ್ಲೆ. ನಮ್ಮ ತಂದೆಯವರು ಹುಣಸೂರು ಕಾಂಗ್ರೆಸ್ ಪಾರ್ಟಿ ಪ್ರೆಸಿಡೆಂಟ್ ಆಗಿದ್ದರು. ತಾಲೂಕು ಬೋರ್ಡ್, ಪುರಸಭೆ ಅಧ್ಯಕ್ಷರಾಗಿದ್ದರು. ಸಮಾಜ ಸೇವಕರಾಗಿ ಹೆಸರು ಗಳಿಸಿದ್ದರು. ಅರಸರದು ಇಡೀ ತಾಲೂಕಿಗೆ ಒಂದೇ ಒಂದು ಮನೆ. ನಮ್ಮ ತಂದೆಗೆ ಅವರನ್ನು ಕಂಡರೆ ಬಹಳ ಪ್ರೀತಿ. ಆ ಕಾಲಕ್ಕೇ ಪದವಿ ಪಡೆದ ವಿದ್ಯಾವಂತ, ನಾಲ್ಕು ಜನಕ್ಕೆ ಬುದ್ಧಿ ಹೇಳುವ ಗುಣವಂತ ಎಂದು ಅವರನ್ನು ಇಷ್ಟಪಡುತ್ತಿದ್ದರು. ಅರಸರೂ ಅಷ್ಟೇ, ಏನೇ ಇದ್ದರೂ ನಮ್ಮ ತಂದೆಯವರನ್ನು ಕಂಡು ಸಲಹೆ ಸೂಚನೆ ಪಡೆಯುತ್ತಿದ್ದರು. ಶಾಸಕರಾಗಿ ಆಯ್ಕೆಯಾದ ಮೇಲೆ, ಹುಣಸೂರಿಗೆ ಬಂದರೆ ನಮ್ಮ ಸಾ ಮಿಲ್ಲಿಗೆ ಬರದೆ ಹೋಗುತ್ತಿರಲಿಲ್ಲ. ಮಧ್ಯಾಹ್ನದ ಹೊತ್ತಾದರೆ, ನಮ್ಮನೆಯ ಬಿರಿಯಾನಿ ತಿನ್ನದೆ ಹೋಗಿದ್ದಿಲ್ಲ. ನಿಜಲಿಂಗಪ್ಪನವರ ಕ್ಯಾಬಿನೆಟ್‌ನಲ್ಲಿ ಅರಸರು ಸಾರಿಗೆ ಮಂತ್ರಿಯಾದರು. ಆಗಂತೂ ನಮ್ಮ ತಂದೆ ತಾವೇ ಮಂತ್ರಿಯಾದಷ್ಟು ಖುಷಿಪಟ್ಟಿದ್ದರು. ದುರದೃಷ್ಟ, ಆ ಟರ್ಮ್ ಮುಗಿಯುವ ಸಮಯಕ್ಕೆ ಸರಿಯಾಗಿ ನಮ್ಮ ತಂದೆ ಹೋಗಿಬಿಟ್ಟರು.

ಭಿಕ್ಷುಕನ ಹೆಗಲ ಮೇಲೆ ಅರಸು ಕೈ

1967ರಲ್ಲಿ ಗೆದ್ದಾಗ ಅವರು ಬರೀ ಶಾಸಕರು. ಆಗ ಊರಿಗೆ ಬಂದರೆ, ನಾನು ಅವರ ಹಿಂದೆ ಓಡಾಡುತ್ತಿದ್ದೆ. ಆ ಸಮಯದಲ್ಲೊಂದು ಘಟನೆ ನಡೆಯಿತು... ಬೆಂಗಳೂರಿಗೆ ಹೊರಡಲು ಬಸ್‌ಸ್ಟಾಂಡ್ ಬಳಿ ಬಂದಾಗ, ಅಲ್ಲಿ ಯಾವಾಗಲೂ ಇರುವ, ಬಟ್ಟೆ ಕೊಳಕಾಗಿದ್ದ ಭಿಕ್ಷುಕನೊಬ್ಬ, ಎಲ್ಲರಿಗೂ ಕೇಳುವಂತೆ ಅರಸರಿಗೂ ಭಿಕ್ಷೆ ಕೇಳಿದ. ಅರಸು ಅವನಿದ್ದಲ್ಲಿಗೇ ಹೋಗಿ ‘‘ಏನಪ್ಪಾ, ಚೆನ್ನಾಗಿದ್ದೀಯ?’’ ಎಂದು ಆತನ ಹೆಗಲ ಮೇಲೆ ಕೈಹಾಕಿಕೊಂಡರು. ಸುತ್ತಲಿದ್ದ ಜನ ಅವಾಕ್ಕಾದರು. ನನ್ನ ಕಣ್ಣಲ್ಲಿ ನೀರು ಬಂದುಬಿಡ್ತು, ತಡೆದುಕೊಳ್ಳಲಿಕ್ಕಾಗಲಿಲ್ಲ. ಅವರ ಮಾನವೀಯತೆಗೆ ಮರುಳಾಗಿ ಅಂದಿನಿಂದಲೇ ಅಪ್ಪಾಜಿ ಎಂದು ಕರೆಯಲು ಶುರು ಮಾಡಿದೆ. 1969 ರಲ್ಲಿ, ಕಾಂಗ್ರೆಸ್ ಇಬ್ಭಾಗವಾದಾಗ, ಅರಸರು ಕನ್ವೀನರ್ ಆಗಿ ನೇಮಕಗೊಂಡಾಗ, ನನ್ನನ್ನು ಕರೆದು, ‘‘ಏನ್ಮಾಡ್ತಿದೀಯ, ಪಾರ್ಟಿಗೆ ಜಾಯಿನ್ ಆಗು’’ ಎಂದರು. ನಾನು ಮರು ಮಾತನಾಡದೆ, ‘‘ಆಗಲಿ ಅಪ್ಪಾಜಿ’’ ಎಂದು ಕಾಂಗ್ರೆಸ್ ಪಾರ್ಟಿ ಮೆಂಬರ್ ಆದೆ.

ಕ್ಷೇತ್ರ ಹುಡುಕಿಕೋ ಎಂದರು

ಅದಾಗಿ ಎರಡು ವರ್ಷ ಕಳೆಯಿತು. ನಾನು ಡಿಗ್ರಿ ಮುಗಿಸಿ, ಪೈಲಟ್ ತರಬೇತಿ ಪಡೆದು, ಕೈಗಾರಿಕಾ ಯೂನಿಟ್‌ವೊಂದರ ಮಾಲಕನಾಗಿ ಸ್ವಂತ ಶಕ್ತಿಯ ಮೇಲೆ ಬದುಕು ಕಟ್ಟಿಕೊಳ್ಳುತ್ತಿದ್ದಾಗಲೇ ಅರಸರು ಕರೆದರು. ಹೋದರೆ, ‘‘ಯಾವುದಾದರೂ ಕ್ಷೇತ್ರ ಹುಡುಕಿಕೋ’’ ಎಂದರು. ನನಗೆ ರಾಜಕೀಯದ ಗಂಧ ಗಾಳಿ ಗೊತ್ತಿಲ್ಲ. ಊರಿನ ರಾಜಕೀಯಕ್ಕೂ ಬೆಂಗಳೂರಿನ ರಾಜಕೀಯಕ್ಕೂ ಅಜಗಜಾಂತರ. ಜನರ ಮನಸ್ಥಿತಿಯೂ ಬೇರೆ. ನಾನು ರಾಜಕೀಯಕ್ಕಿಳಿದು, ರಾಜಕಾರಣಿಯಾಗುತ್ತೇನೆಂದು ಕನಸಿನಲ್ಲಿಯೂ ಯೋಚಿಸಿರಲಿಲ್ಲ. ಅಪ್ಪಾಜಿ ಹೇಳಿದ ಮೇಲೆ ತಲೆಯಲ್ಲಿ ರಾಜಕಾರಣ ಕುಣಿಯತೊಡಗಿತು. ಮೊದಲಿಗೆ ನಮ್ಮ ಮಾವನನ್ನು ಕೇಳಿದೆ, ಅವರು ‘‘ಆಗಲಿ, ಒಳ್ಳೆಯದು, ಶಿವಾಜಿನಗರ ಆಗಬಹುದು’’ ಎಂದರು. ನನಗೂ ಅದು ಮುಸ್ಲಿಮರು ಹೆಚ್ಚಾಗಿರುವ ಕ್ಷೇತ್ರವೆಂದು ಸರಿ ಎನಿಸಿತು. ನನ್ನ ಇಂಡಸ್ಟ್ರಿಯಲ್ ಯೂನಿಟ್ ಪಕ್ಕದಲ್ಲಿ ಮಾಜಿ ಮುಖ್ಯಮಂತ್ರಿ ಕೆ.ಸಿ.ರೆಡ್ಡಿಯವರ ಮಗ ಕೆ.ಸಿ.ವೆಂಕಟೇಶ್ ಯೂನಿಟ್ ಇದ್ದು, ಅವರು ನನ್ನ ಒಳ್ಳೆಯ ಸ್ನೇಹಿತರಾಗಿದ್ದರು. ಅವರಿಗೆ ವಿಷಯ ತಿಳಿಸಿದೆ. ಅವರು, ‘‘ಒಳ್ಳೆಯ ಅವಕಾಶ, ಬಿಡಬೇಡ, ಬಸವನಗುಡಿಯಿಂದ ಸ್ಪರ್ಧಿಸು, ನಾನು ನಿನಗೆ ಹೆಲ್ಪ್ ಮಾಡುತ್ತೇನೆ’’ ಎಂದರು. ಅಷ್ಟೇ ಅಲ್ಲ, ಕರೆದುಕೊಂಡು ಹೋಗಿ ಕೆ.ಸಿ.ರೆಡ್ಡಿಯವರ ಮುಂದೆ ನಿಲ್ಲಿಸಿದ. ಅವರು ‘‘ನಿಂತ್ಕೊಳಪ್ಪ, ನಾನು ನಿನ್ನ ಪರವಿರುತ್ತೇನೆ’’ ಎಂದವರು ನೇರವಾಗಿ ದೇವರಾಜ ಅರಸರಿಗೆ ಫೋನ್ ಮಾಡಿ, ‘‘ಜಯನಗರ ಮತ್ತು ಬಸವನಗುಡಿ ಏರಿಯಾ ನನ್ನದು, ಗೆಲ್ಲಿಸುವ ಜವಾಬ್ದಾರಿಯನ್ನು ನಮಗೆ ಬಿಡಿ’’ ಎಂದು ಭರವಸೆಯ ಮಾತುಗಳನ್ನು ಆಡಿದರು. ಅರಸರು, ‘‘ಹಾಗಾದರೆ ಜಯನಗರ ಕ್ಷೇತ್ರದಿಂದಲೇ ಸ್ಪರ್ಧಿಸು’’ ಎಂದು ಟಿಕೆಟ್ ಕೊಟ್ಟರು.

ಈ ಕ್ಷೇತ್ರ ನನ್ನದಲ್ಲ, ಚುನಾವಣೆಗೆ ನಿಂತು ಶಾಸಕನಾಗಬೇಕೆಂದು ಆಸೆಪಟ್ಟವನೂ ಅಲ್ಲ. ಆದರೆ ಅರಸರ ಆಸೆಯಂತೆ ಅಭ್ಯರ್ಥಿಯಾದೆ. ಆದರೆ ಈಗಾಗಲೇ ಅಲ್ಲಿಂದ ಸ್ಪರ್ಧಿಸುತ್ತಿದ್ದ ದಯಾನಂದ್ ಸಾಗರ್ ವಿರೋಧಿಸಿದರು. ಕ್ಷೇತ್ರದಲ್ಲಿ ಒಕ್ಕಲಿಗರ ಸಂಖ್ಯೆ ಹೆಚ್ಚಾಗಿದೆ, ಅದು ನನ್ನ ಕ್ಷೇತ್ರವೆಂದು ಗಲಾಟೆ ಮಾಡಿದರು. ಜನತಾ ಪಾರ್ಟಿಯಿಂದ ಸ್ಪರ್ಧಿಸಿದ್ದ ರಾಜಣ್ಣ ಕೂಡ ಮತ್ತೊಂದು ಕಡೆಯಿಂದ ಕದನಕ್ಕೆ ನಿಂತರು.

ದಿಲ್ಲಿಗೆ ಕರೆದುಕೊಂಡು ಹೋದ ಅರಸು

ದೇವರಾಜ ಅರಸರಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಅಧಿಕಾರವಿದ್ದರೂ, ಪಕ್ಷದ ಹಿರಿಯರು, ಬಲಾಢ್ಯ ಜಾತಿಯ ನಾಯಕರು ದಯಾನಂದ್ ಸಾಗರ್‌ರನ್ನು ಬೆಂಬಲಿಸಿದರು. ಆಗ ಅರಸರು ನನ್ನನ್ನು ದಿಲ್ಲಿಗೆ ಕರೆದುಕೊಂಡು ಹೋಗಿ ಇಂದಿರಾ ಗಾಂಧಿಯವರ ಮುಂದೆ ನಿಲ್ಲಿಸಿದರು. ಇಂದಿರಾಗಾಂಧಿಯವರು ಅರಸ್ ಎನ್ನುವ ಬದಲು ಉರುಸ್ ಎನ್ನುತ್ತಿದ್ದರು. ‘‘ವಾಟ್ ಮಿ. ಉರುಸ್’’ ಎಂದರು. ಅರಸರು, ‘‘ಈತ ರಹಮತುಲ್ಲಾ ಖಾನ್, ಈತನಿಗೆ ಟಿಕೆಟ್ ಕೊಡಬೇಕು, ಇವರ ತಂದೆ ಇಬ್ರಾಹೀಂ ಖಾನ್, ನನಗೆ ತುಂಬಾ ಹೆಲ್ಪ್ ಮಾಡಿದ್ದಾರೆ, ನಾನು ಅವರ ಋಣ ತೀರಿಸಬೇಕು’’ ಎಂದರು. ಇಂದಿರಾ ಗಾಂಧಿಯವರು, ‘‘ವಾಟ್ ಆರ್ ದ ಚಾನ್ಸಸ್’’ ಎಂದು ಕೇಳಿದರು. ಅರಸರು ಎಲ್ಲವನ್ನು ವಿವರಿಸಿದ ಮೇಲೆ ಟಿಕೆಟ್ ಕೊಡಲು ಹೇಳಿದರು. ಆಶ್ಚರ್ಯವೆಂದರೆ, ದೇವರಾಜ ಅರಸರಿಗೆ 1962ರಲ್ಲಿ ಟಿಕೆಟ್ ನಿರಾಕರಿಸಿದಾಗ ನಮ್ಮ ತಂದೆ ಅವರನ್ನು ದಿಲ್ಲಿಗೆ ಕರೆದುಕೊಂಡುಹೋಗಿದ್ದರು. 1972ರಲ್ಲಿ ನನಗೆ ಟಿಕೆಟ್ ಕೊಡಬಾರದೆಂದು ಕೆಲವರು ವಿರೋಧಿಸಿದಾಗ ಅರಸು ನನ್ನನ್ನು ದಿಲ್ಲಿಗೆ ಕರೆದುಕೊಂಡುಹೋಗಿದ್ದರು. ಅಂದು ನಮ್ಮ ತಂದೆ ಅರಸರನ್ನು ಮಗನಂತೆ ಕಂಡಿದ್ದರು; ಇಂದು ಅರಸರು ನನ್ನನ್ನು ಮಗನಂತೆ ಕಂಡು ಕರೆದುಕೊಂಡು ಹೋಗಿದ್ದರು. ನಮ್ತಂದೆ ಮಾಡಿದ ಸಹಾಯವನ್ನು ಅರಸರು ಮರೆತಿರಲಿಲ್ಲ. ನನ್ನ ಕಂಡಾಕ್ಷಣ, ‘‘ನಿಮ್ಮ ತಂದೆಯವರ ಋಣ ನನ್ನ ಮೇಲಿದೆಯಪ್ಪ, ನೀನು ಗೆಲ್ಲಬೇಕು, ನಾನು ಋಣಮುಕ್ತನಾಗಬೇಕು’’ ಎನ್ನುತ್ತಿದ್ದರು. ಅದೇನು ನಿಷ್ಠೆ, ನಿಯತ್ತು... ಅವರನ್ನು ನೆನದರೆ, ಕಣ್ಣಲ್ಲಿ ನೀರು ಬರುತ್ತದೆ.

ವಿಜಯಾ ಕಾಲೇಜ್ ಮೈದಾನದಲ್ಲಿ ಇಂದಿರಾ ಭಾಷಣ

ನನಗೆ ಟಿಕೆಟ್ ಗ್ಯಾರಂಟಿಯಾದ ನಂತರ, ದೇವರಾಜ ಅರಸರು, ‘‘ಇಂದಿರಾ ಗಾಂಧಿಯವರಿಗೊಂದು ಥ್ಯಾಂಕ್ಸ್ ಹೇಳಿ ಬಾ’’ ಎಂದು ಕಳುಹಿಸಿದರು. ದಿಲ್ಲಿ ರಾಜಕಾರಣ, ಹೈಕಮಾಂಡ್ ಆದೇಶ, ಆಶೀರ್ವಾದ ನನಗೆ ಹೊಸದು. ಎಲ್ಲವನ್ನು ಮಗುವಿಗೆ ಹೇಳಿಕೊ ಡುವಂತೆ ಅಪ್ಪಾಜಿ ನನಗೆ ಹೇಳಿಕೊಟ್ಟರು. ನಾನು ಇಂದಿರಾ ಮೇಡಂ ಕಂಡು, ಮೊದಲಿಗೆ ಥ್ಯಾಂಕ್ಸ್ ಹೇಳಿ, ‘‘ದಯವಿಟ್ಟು ನೀವು ಒಂದು ಸಲ ನನ್ನ ಕ್ಷೇತ್ರಕ್ಕೆ ಬಂದು ಚುನಾವಣಾ ಪ್ರಚಾರ ಭಾಷಣ ಮಾಡಬೇಕು, ತುಂಬಾನೆ ಹೆಲ್ಪ್ ಆಗುತ್ತೆ’’ ಎಂದು ವಿನಂತಿಸಿಕೊಂಡೆ. ‘‘ಯಸ್, ಯಸ್ ಐ ವಿಲ್ ಕಮ್’’ ಎಂದರು. ಕರ್ನಾಟಕದ ಚುನಾವಣಾ ಪ್ರಚಾರ ಭಾಷಣಕ್ಕೆ ಇಂದಿರಾ ಗಾಂಧಿಯವರು ಬರುವ ಡೇಟ್ ಫಿಕ್ಸ್ ಆಯಿತು. ನೋಡಿದರೆ, ಮೊದಲ ಬಹಿರಂಗ ಸಭೆಗೆ ನನ್ನ ಕ್ಷೇತ್ರವನ್ನೇ ಆಯ್ಕೆ ಮಾಡಿಕೊಂಡಿದ್ದರು. ಜಯನಗರದ ವಿಜಯಾ ಕಾಲೇಜಿನ ಮೈದಾನದಲ್ಲಿ ಬಹಳ ದೊಡ್ಡ ವೇದಿಕೆ ನಿರ್ಮಿಸಿ, ಸಿಕ್ಕಾಪಟ್ಟೆ ಜನ ಸೇರಿಸಿದ್ದೆವು. ಇಂದಿರಾಗಾಂಧಿಯವರು ವೇದಿಕೆಯ ಮೇಲೆ ನನ್ನ ಕರೆದು ಪಕ್ಕಕ್ಕೆ ನಿಲ್ಲಿಸಿಕೊಂಡು, ‘‘ಕಾಂಗ್ರೆಸ್ ಅಲ್ಪಸಂಖ್ಯಾತರ ಪರ, ನಾನು ಯುವಕನಿಗೆ ಟಿಕೆಟ್ ಕೊಟ್ಟಿದ್ದೇನೆ. ದೇಶ ಕಟ್ಟಲು ಯುವಕರ ಅಗತ್ಯವಿದೆ. ರಹಮತುಲ್ಲಾ ಖಾನ್‌ರನ್ನು ಗೆಲ್ಲಿಸುವ ಮೂಲಕ ನನ್ನ ಕೈ ಬಲಪಡಿಸಿ, ದೇಶದ ಅಭಿವೃದ್ಧಿಗೆ ಸಹಕರಿಸಿ’’ ಎಂದು ಹಿಂದಿಯಲ್ಲಿ 20 ನಿಮಿಷ ಭಾಷಣ ಮಾಡಿದರು. ನಂತರ ದೇವರಾಜ ಅರಸರು ‘‘ಯುವಕರೇ ದೇಶದ ಭವಿಷ್ಯ, ರಹಮತುಲ್ಲಾರನ್ನು ಗೆಲ್ಲಿಸುವ ಮೂಲಕ ಕರ್ನಾಟಕದಲ್ಲಿ ಹೊಸ ರಾಜಕೀಯ ಶಕೆ ಆರಂಭಿಸೋಣ, ದಯವಿಟ್ಟು ಮತ ನೀಡಿ’’ ಎಂದು ವಿನಂತಿಸಿಕೊಂಡರು. ಅಷ್ಟೇ ಅಲ್ಲ ನನ್ನ ಕ್ಷೇತ್ರದ ಸ್ಥಳೀಯ ನಾಯಕರನ್ನು ಪರ್ಸನಲ್ಲಾಗಿ ಕರೆದು, ‘‘ಇದು ನನ್ನ ಪ್ರತಿಷ್ಠೆಯ ಕಣ, ನೀವೆಲ್ಲ ಶ್ರಮವಹಿಸಿ ಗೆಲ್ಲಿಸಬೇಕು’’ ಎಂದು ತಾಕೀತು ಮಾಡಿದ್ದರು. ಬೇರೆ ಕ್ಷೇತ್ರಗಳ ಬಿಡುವಿಲ್ಲದ ಪ್ರಚಾರದ ನಡುವೆಯೂ ಅಪ್ಪಾಜಿ ನನ್ನ ಕ್ಷೇತ್ರಕ್ಕೆ ಎರಡು ಸಲ ಬಂದು ಕ್ಯಾನ್ವಾಸ್ ಮಾಡಿದ್ದರು. ಜೊತೆಗೆ ಕೆ.ಸಿ.ರೆಡ್ಡಿ, ಮೊಹಿಸಿನ್, ಕೆಂಗಲ್ ಹನುಮಂತಯ್ಯರು ಬಂದು ನನ್ನ ಪರ ಮತಯಾಚಿಸಿದ್ದರು. ಇವರೆಲ್ಲರ ಬೆಂಬಲ, ಸಹಕಾರದಿಂದ 14 ಸಾವಿರ ಮತಗಳ ಅಂತರದಿಂದ ಗೆದ್ದು ಶಾಸಕನಾಗಿದ್ದೆ. ಗೆದ್ದಿದ್ದು ನಾನಾದರೂ ಗೆಲ್ಲಿಸಿದ್ದು, ಶಾಸಕನನ್ನಾಗಿಸಿದ್ದು ಅರಸು.

ತಬ್ಬಿಕೊಂಡು ಅತ್ತ ಅರಸು

ಫಲಿತಾಂಶ ಪ್ರಕಟವಾದ ದಿನ ದೇವರಾಜ ಅರಸರನ್ನು ಕಂಡು ಅಭಿನಂದನೆ ಸಲ್ಲಿಸಲು ಮನೆಗೆ ಹೋದೆ. ಹೋಗಿ ಕಾಲು ಮುಟ್ಟಿ ನಮಸ್ಕರಿಸಿದೆ. ತೋಳು ಹಿಡಿದು ಎತ್ತಿ ನಿಲ್ಲಿಸಿ ತಬ್ಬಿಕೊಂಡರು. ತಂದೆಯನ್ನು ನೆನೆದು ‘‘ಇದು ನಿಮ್ಮ ತಂದೆಗಾಗಿಯಪ್ಪ.. ಅವರು ಇದ್ದಿದ್ರೆ ಖುಷಿಪಡೋರು...’’ ಎಂದು ಕಣ್ಣೀರು ಹಾಕಿದರು. ನನಗಿಂತ ಹೆಚ್ಚು ಖುಷಿಯಾಗಿದ್ದು ಅರಸರಿಗೆ. ಆ ಸಂದರ್ಭವನ್ನು ನಾನು ಎಂದಿಗೂ ಮರೆಯುವುದಿಲ್ಲ. ಅದು ನನ್ನ ವೆರಿ ರೇರ್ ಆ್ಯಂಡ್ ಪ್ರೀಷಿಯಸ್ ಮೂವ್‌ಮೆಂಟ್ ಎಂದು ರಹಮತುಲ್ಲಾ ಖಾನ್ ಗದ್ಗದಿತರಾದರು. ಸ್ವಲ್ಪ ಸಮಯ ಬಿಟ್ಟು, ‘‘ಅದೇನು ಪ್ರೀತಿ, ಅದೇನು ಅಕ್ಕರೆ, ನಮ್ಮ ಒಡಹುಟ್ಟಿದವರು ಕೂಡ ನನ್ನನ್ನು ಆ ಮಟ್ಟಿಗೆ ಪ್ರೀತಿಸಲಿಲ್ಲ. ಆ ಕಾರಣಕ್ಕಾಗಿಯೇ ಅವರನ್ನು ನಾನು ‘ಅಪ್ಪಾಜಿ’ ಎಂದು ಕರೆಯುತ್ತಿದ್ದುದು’’ ಎಂದರು. ಅವರೂ ಅಷ್ಟೇ, ನನ್ನನ್ನು ತಮ್ಮ ಮಗನಂತೆಯೇ ಪ್ರತಿಯೊಂದನ್ನು ಹೇಳಿಕೊಟ್ಟರು. ‘‘ಶಾಸಕನಾಗಿದ್ದೀಯ ಎಲ್ಲರನ್ನು ಸಮಾನವಾಗಿ ಕಾಣು, ಅಧಿಕಾರವನ್ನು ಬಡವರಿಗಾಗಿ, ಸಮಾಜದ ಒಳಿತಿಗಾಗಿ ಬಳಸು’’ ಎಂದು ಗೈಡ್ ಮಾಡುತ್ತಿದ್ದರು. ‘‘ಸದನದ ಡಿಬೇಟ್‌ಗಳಲ್ಲಿ ಭಾಗವಹಿಸಬೇಕು, ಈ ಥರ ಪ್ರಶ್ನೆ ಕೇಳಬೇಕು, ಹೀಗೆ ವರ್ತಿಸಬೇಕು, ಮಾತು ವಿಚಾರಪೂರ್ಣವಾಗಿರಬೇಕು’’ ಎಂದು ಸದನದ ರೀತಿರಿವಾಜುಗಳನ್ನು ಹೇಳುತ್ತಲೇ ಧೈರ್ಯ ತುಂಬುತ್ತಿದ್ದರು. ನಾನು ಇಂಡಸ್ಟ್ರಿ ಬಗ್ಗೆ ಮಾತನಾಡುತ್ತೇನೆ ಎಂದಾಗ, ‘ಸ್ಟಡಿ ಮಾಡಿಕೊಂಡು ಬರಬೇಕು’ ಎಂದಿದ್ದರು. ನಿಮಗಿನ್ನೊಂದು ಹೇಳಲೇಬೇಕು... ಅವರ ಸೆಕ್ರೆಟರಿ ಜೆ.ಸಿ.ಲಿನ್‌ರನ್ನು ಕರೆದು, ‘‘ಈತನ ಕ್ಷೇತ್ರಕ್ಕೆ ಯಾವುದೇ ಅಭಿವೃದ್ಧಿ ಕೆಲಸಕ್ಕಾದರೂ ಸರಿ, ಎಷ್ಟು ಹಣವಾದರೂ ಸರಿ, ನನ್ನನ್ನು ಕಾಯದೆ ಕೇಳದೆ ಸ್ಯಾಂಕ್ಷನ್ ಮಾಡಿ’’ ಎಂದು ಸ್ಟಾಂಡಿಂಗ್ ಇನ್ಸ್‌ಸ್ಟ್ರಕ್ಷನ್ ಕೊಟ್ಟಿದ್ದರು. ದೇವರಾಜ ಅರಸರು 1972ರಲ್ಲಿ ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಾಗ, ಕರ್ನಾಟಕದಲ್ಲಿ ಮುಸ್ಲಿಮರ ಜನಸಂಖ್ಯೆ ಶೇ. 11ರಷ್ಟಿದೆ, ಅದಕ್ಕನುಗುಣವಾಗಿ 30 ಜನ ಶಾಸಕರಿರಬೇಕು ಎಂದು ಸಾಮಾಜಿಕ ನ್ಯಾಯದ ಮಾನ ದಂಡವನ್ನಿಟ್ಟು, ಅತೀ ಹೆಚ್ಚು ಮುಸ್ಲಿಮರಿಗೆ ಟಿಕೆಟ್ ಕೊಟ್ಟಿದ್ದರು. ಆ ಅವಧಿಯಲ್ಲಿ 12 ಜನ ಮುಸ್ಲಿಂ ಶಾಸಕರು ಗೆದ್ದಿದ್ದರು. ಆ ದಾಖಲೆಯನ್ನು ಇಲ್ಲಿಯವರೆಗೆ ಯಾವ ಪಕ್ಷವೂ ಮುರಿದಿಲ್ಲ. ಅದರಲ್ಲೂ ಅಝೀಝ್ ಸೇಠ್ ಮತ್ತು ನದಾಫ್‌ರನ್ನು ಮಂತ್ರಿ ಮಾಡಿದ್ದರು. ಇನ್ನೂ ಒಂದು ಬಹಳ ಮುಖ್ಯವಾದ ಸಂಗತಿ, ದೇವರಾಜ ಅರಸರ ಕಾಲದಲ್ಲಿ ಯಾವುದೇ ಸಮಿತಿ ರಚನೆಯಾದರೂ, ಅದರಲ್ಲಿ ಕಂಪಲ್ಸರಿ ಒಬ್ಬ ಅಲ್ಪಸಂಖ್ಯಾತ, ಒಬ್ಬ ಹಿಂದುಳಿದ ವರ್ಗಕ್ಕೆ ಸೇರಿದ ಶಾಸಕರನ್ನು ಸದಸ್ಯರನ್ನಾಗಿಸುತ್ತಿದ್ದುದು. ನನ್ನನ್ನು ಬಿಡಿಎ ಮೆಂಬರ್ ಮಾಡಿದ್ದರು. ಇದು ನಮ್ಮಂತಹ ಹೊಸಬರಿಗೆ ಆಡಳಿತದ ರೀತಿನೀತಿಗಳನ್ನು, ಸರಕಾರದ ಕಾರ್ಯಕ್ರಮಗಳನ್ನು ಅರಿಯಲು ಸಹಕಾರಿ ಯಾಗುತ್ತಿತ್ತು. ಆ ಮೂಲಕ ಆ ಸಮುದಾಯಗಳಿಗೆ ಸಲ್ಲಬೇಕಾದ ನ್ಯಾಯ ಸಲ್ಲಿಕೆಯಾಗುತ್ತಿತ್ತು. ಒಂದು ಕಡೆಯಿಂದ ಶಾಸಕರನ್ನು ಬೆಳೆಸುತ್ತಿದ್ದುದು, ಮತ್ತೊಂದು ಕಡೆಯಿಂದ ಸಮುದಾಯವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುವುದು... ಅರಸರ ಕಾರ್ಯವೈಖರಿ.

ನಾನವರಿಗೆ ತೀರಾ ಆಪ್ತ. ಅವರ ಮನೆಯಲ್ಲಿ ಮಗನಂತೆ ಓಡಾಡಿಕೊಂಡಿದ್ದವ. ಶಾಸಕನಾಗಿದ್ದ ನನಗೆ ಫ್ರೀ ಹ್ಯಾಂಡ್ ನೀಡಿದ್ದರು. ಆದರೆ ಹಣಕಾಸು, ಆಡಳಿತ ಮತ್ತು ಕಾಯ್ದೆ ಕಾನೂನುಗಳಿಗೆ ಬಂದರೆ ಅರಸು ತುಂಬಾನೆ ಸ್ಟ್ರಿಕ್ಟ್. ಅಪ್ಪಿತಪ್ಪಿಯೂ ಭ್ರಷ್ಟಾಚಾರಕ್ಕೆ, ಕೆಟ್ಟ ಕೆಲಸಗಳಿಗೆ ಬೆಂಬಲಿಸಿದವರಲ್ಲ. ನಾನೂ ಆ ಲಕ್ಷ್ಮಣರೇಖೆಯನ್ನು ದಾಟಿದವನಲ್ಲ. ಇವತ್ತಿಗೂ ಕಾಂಗ್ರೆಸ್‌ನಲ್ಲಿಯೇ ಇದ್ದೇನೆ, ಹಾಗೆಯೇ ಇದ್ದೇನೆ.

ಕುಗ್ಗಿಹೋಗಿದ್ದ ಕ್ವೀನ್

 1977ರ ಲೋಕಸಭಾ ಚುನಾವಣೆಯಲ್ಲಿ ದೇಶದಾದ್ಯಂತ ಕಾಂಗ್ರೆಸ್ ಸೋತು, ಜನತಾಪಕ್ಷ ಗೆದ್ದು ದೇಶದ ರಾಜಕೀಯ ಚಿತ್ರಣವೇ ಬದಲಾಗಿಹೋಗಿತ್ತು. ಸಿಂಹದಂತಿದ್ದ ಇಂದಿರಾ ಗಾಂಧಿಯವರು ಸೋತು ಸೈಲೆಂಟಾಗಿದ್ದರು. ಆ ಸಂದರ್ಭದಲ್ಲಿ ಅರಸರು ದಿಲ್ಲಿಗೆ ಹೋಗಿ ಮೇಡಂ ಮಾತನಾಡಿಸಿಕೊಂಡು ಬರೋಣ, ಬಾ ಎಂದು ನನ್ನನ್ನು ಜೊತೆಯಲ್ಲಿ ಕರೆದುಕೊಂಡು ಹೋಗಿದ್ದರು. 1972ರಲ್ಲಿ, ದಿಲ್ಲಿಯಲ್ಲಿ ಇಂದಿರಾಗಾಂಧಿಯವರ ಮನೆಗೆ ಹೋದಾಗ ಪೊಲೀಸರ ಬಿಗಿಭದ್ರತೆ, ನಾಯಕರ ಬಿರುಸಿನ ಓಡಾಟ, ಅಪಾರ ಜನಸ್ತೋಮದ ನಡುವೆ ನೋಡಿದಾಗ- ಥೇಟ್ ಎಲಿಜಬೆತ್ ಕ್ವೀನ್ ಥರ ಕಂಡಿದ್ದರು. ಅಂತಹ ವೈಭವದ ಮನೆ ಇಂದು ಬಿಕೋ ಎನ್ನುತ್ತಿತ್ತು. ಅರಸರು ನೋಡಲು ಬಂದಿದ್ದಾರೆ ಎಂದು ಹೇಳಲು ಕೂಡ ಜನರಿಲ್ಲ. ಇವರೇ ಮನೆಯೊಳಕ್ಕೆ ಹೋಗಿ ಮೇಡಂ ಎಂದು ಕೂಗಿದರು. ಒಂದು ದೊಡ್ಡ ಕುರ್ಚಿಯಲ್ಲಿ ಒಂದು ಮೂಲೆಗೆ ಇಡೀ ದೇಹವೇ ಹಿಡಿಯಷ್ಟಾಗಿ ಕುಗ್ಗಿ ಕೂತಿದ್ದರು. ಬಿದ್ದುಹೋಗಿದ್ದ ದನಿಯಲ್ಲಿ, ‘‘ಯಸ್ ಮಿ. ಉರುಸ್.. ಕಮ್’’ ಎಂದಷ್ಟೇ ಹೇಳಿದರು. ಅರಸರಿಗೆ ಸಹಿಸಿಕೊಳ್ಳಲಾಗದಷ್ಟು ವ್ಯಥೆಯಾಯಿತು. ಮೊದಲಿಗೆ, ‘‘ಮೇಡಂ, ಸಾರಿ’’ ಎಂದು ಸೋತಿದ್ದಕ್ಕೆ ಸಾಂತ್ವನ ಹೇಳಿದರು. ನಂತರ, ‘‘ಐಯಾಮ್ ಹಿಯರ್, ಯೂ ಡಿಡ್‌ನಾಟ್ ವರಿ, ಐ ವಿಲ್ ಟೇಕ್ ಯೂ ಟು ಕರ್ನಾಟಕ್ ಆ್ಯಂಡ್ ಬ್ರಿಂಗ್ ಬ್ಯಾಕ್ ಟು ಪವರ್’’ ಎಂದರು. ‘‘ಹೌದಾ’’ ಎಂದ ಇಂದಿರಾ ಮೇಡಂ ಮುಖದಲ್ಲಿ ಮಂದಹಾಸ ಮೂಡಿತು. ಅರಸರ ಮಾತಿನಿಂದ ಧೈರ್ಯ, ಹುಮ್ಮಸ್ಸು ಬಂತು. ಗೆಲುವಾದರು. ಕುರ್ಚಿಯಿಂದ ಎದ್ದುಬಂದು, ಹೋಗುವಾಗ ಶೇಕ್ ಹ್ಯಾಂಡ್ ಮಾಡಿ ಕಳುಹಿಸಿಕೊಟ್ಟರು. ಅರಸರ ಒಂದು ಮಾತು, ಅವರಲ್ಲಿ ಚೈತನ್ಯ ತುಂಬಿತ್ತು. ಹೊಸ ಆಸೆ ಚಿಗುರಿಸಿತ್ತು. ಅವರ ಆ ಆತ್ಮವಿಶ್ವಾಸದ ಮಾತು- ನನ್ನ ಬದುಕನ್ನೂ ಬದಲಿಸಿತ್ತು, ಇಂದಿರಾಗಾಂಧಿಯವರಿಗೆ ರಾಜಕೀಯವಾಗಿ ಪುನರ್ಜನ್ಮವನ್ನೂ ನೀಡಿತ್ತು. ನುಡಿದಂತೆಯೇ ನಡೆದವರು ಅರಸು.


 

Writer - ನಿರೂಪಣೆ: ಬಸು ಮೇಗಲ್ಕೇರಿ

contributor

Editor - ನಿರೂಪಣೆ: ಬಸು ಮೇಗಲ್ಕೇರಿ

contributor

Similar News