ಅಂಬೇಡ್ಕರ್ ರೂಪಿಸಿದ ‘ಏಕರೂಪ ಹಿಂದೂ ಸಂಹಿತೆ’

Update: 2016-08-17 17:26 GMT

ಇನ್ನು ಮದುವೆ ಮತ್ತು ವಿಚ್ಛೇದನಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ, ಅದುವರೆಗೂ ಹಿಂದೂ ಕಾನೂನಿನಲ್ಲಿ ಸಾಕ್ರಮೆಂಟ್ ಅಥವಾ ಧಾರ್ಮಿಕ ಮದುವೆಗಷ್ಟೆ ಮಾನ್ಯತೆ ಇತ್ತು. ಸಿವಿಲ್ ಮ್ಯಾರೇಜ್ ಅಥವಾ ನಾಗರಿಕ ಮದುವೆಗೆ ಯಾವುದೇ ಮಾನ್ಯತೆ ಇರಲಿಲ್ಲ. ಹಾಗೆಯೇ ಧಾರ್ಮಿಕ ಮದುವೆಯಲ್ಲಿ ಜಾತಿ, ಉಪಜಾತಿ ನಮೂದಿಸುವುದು ಕಡ್ಡಾಯವಾಗಿತ್ತು. ಆದರೆ ಅಂಬೇಡ್ಕರರು ರೂಪಿಸಿದ ಮದುವೆಯ ಆ ನಿಯಮದಲ್ಲಿ ಜಾತಿ ಮತ್ತು ಉಪಜಾತಿ ಕಡ್ಡಾಯ ನಮೂದಿಸುವುದನ್ನು ಕೈಬಿಟ್ಟರು. ಪ್ರಾಪ್ತ ವಯಸ್ಕರಿದ್ದರೆ ಸಾಕು ಅವರು ಯಾವುದೇ ಜಾತಿ ಉಪಜಾತಿ ಇರಲಿ ಮದುವೆ ಸಿಂಧು ಎಂಬ ನಿಯಮ ರೂಪಿಸಿದರು. ಅದುವರೆಗೂ ಇದ್ದ ಧಾರ್ಮಿಕ ಮದುವೆ ಪದ್ಧತಿಯಲ್ಲಿ ವಿಚ್ಛೇದನಕ್ಕೆ ಅವಕಾಶ ಇರಲಿಲ್ಲ. ಆದರೆ ಅಂಬೇಡ್ಕರರು ವಿಚ್ಛೇದನಕ್ಕೆ ಅವಕಾಶ ನೀಡಿದರು. ಅದಕ್ಕೆ ಅವರು ಏಳು ಕಾರಣಗಳನ್ನು ನೀಡಿದರು.

ಅವುಗಳೆಂದರೆ 1.ಪತ್ನಿಯನ್ನು ಪರಿತ್ಯಜಿಸಿ ದೂರ ಇರುವುದು.  2.ಬೇರೆ ಧರ್ಮಕ್ಕೆ ಮತಾಂತರ ಹೊಂದಿರುವುದು. 3.ಬೇರೊಬ್ಬರನ್ನು ಇಟ್ಟುಕೊಂಡಿರುವುದು. 

4.ಗುಣಪಡಿಸಲಾಗದ ರೋಗದಿಂದ ನರಳುತ್ತಿರುವುದು.  5.ಕುಷ್ಟರೋಗದಿಂದ ನರಳುತ್ತಿರುವುದು.  6.ಅಂಟುರೋಗದಿಂದ ನರಳುತ್ತಿರುವುದು. 7.ಕ್ರೂರತೆ.ಈ ಸಂದರ್ಭದಲ್ಲಿ ಮಹಿಳೆಯರಿಗೆ ಮದುವೆಯನ್ನೇ ರದ್ದುಗೊಳಿಸಿಕೊಳ್ಳುವ ನಿಯಮವನ್ನು ಕೂಡ ಅಂಬೇಡ್ಕರರು ಸೇರಿಸಿದರು. ಆ ಸಂದರ್ಭಗಳೆಂದರೆ, 1.ನಪುಂಸಕತ್ವ 2.ಸಪಿಂಡ 3.ಮಾನಸಿಕ ಅಸ್ವಸ್ಥತೆ 4.ಪೋಷಕರ ಬಲವಂತ. ಅಂದಹಾಗೆ ಅದುವರೆಗೆ ಬಹುಪತ್ನಿತ್ವ ಜಾರಿಯಲ್ಲಿತ್ತು. ಆದರೆ ಅಂಬೇಡ್ಕರರು ಏಕಪತ್ನಿತ್ವ ನಿಯಮವನ್ನು ವಿವಾಹ ಕಾನೂನಿಗೆ ಸೇರಿಸಿದರು. ಒಟ್ಟಾರೆ ಹೀಗೆ ಆಮೂಲಾಗ್ರ ಬದಲಾವಣೆಗಳನ್ನೊಳಗೊಂಡ ಹಿಂದೂ ಸಂಹಿತೆ ಮಸೂದೆಯನ್ನು ಅಂಬೇಡ್ಕರರು ರೂಪಿಸಿ ಸಂಸತ್ತಿನಲ್ಲಿ ಮಂಡಿಸಿದರು. ಅದು ಅಂಗೀಕಾರಗೊಂಡಿತೇ? ಖಂಡಿತ, ಆ ಕಥೆ ಹೇಳಿದರೆ ಅದೇ ಒಂದು ಮಹಾಕಾವ್ಯವಾಗುತ್ತದೆ.

ಯಾಕೆಂದರೆ ಕರ್ಮಠ ಹಿಂದೂಗಳು ತಮ್ಮ ಧರ್ಮಕ್ಕೆ ಈ ಪರಿಯ ತಿದ್ದುಪಡಿಯನ್ನು ತರುವುದನ್ನು ಅದರಲ್ಲೂ ಅಸ್ಪಶ್ಯನೊಬ್ಬ ತರುವುದನ್ನು ಸಹಿಸಿಕೊಳ್ಳುತ್ತಾರೆಯೇ? ಖಂಡಿತ ಇಲ್ಲ. ಅಂಬೇಡ್ಕರರ ಈ ಹಿಂದೂ ಸಂಹಿತೆ ಮಸೂದೆಗೆ ಎದುರಾಗಿ ಅವರು ಸ್ಮತಿ, ಶೃತಿ ಧರ್ಮಗಳ ಉಲ್ಲೇಖ ಮುಂದಿಡುತ್ತಾರೆ. ಉದಾಹರಣೆಗೆ ಸರ್ವತೆ ಎಂಬುವವರೊಬ್ಬರು ಹೇಳುತ್ತಾರೆ ‘‘ಹಿಂದೂ ಧರ್ಮ ಜಾತಿ ಆಧಾರದ ಮೇಲೆ ನಿಂತಿದೆ. ಒಂದು ವೇಳೆ ಮದುವೆಯೊಂದು ನಡೆಯಿತೆಂದರೆ ಅದು ಪವಿತ್ರ ಎಂದರ್ಥ. ಅದನ್ನು ರದ್ದುಗೊಳಿಸಲು ಸಾಧ್ಯವೇ ಇಲ್ಲ. ಇನ್ನು ಸನಾತನ ವೈದಿಕ ಧರ್ಮದ ಪ್ರಕಾರ ವಿಚ್ಛೇದನವಂತೂ ಸಾಧ್ಯವೇ ಇಲ್ಲ!’’. (ಅಂಬೇಡ್ಕರ್ ಬರಹಗಳು, ಇಂಗ್ಲಿಷ್ ಸಂ.14, ಭಾಗ.2, ಪು.807). ಇನ್ನು ಶ್ಯಾಮನಂದನ್ ಸಹಾಯ್ ಎನ್ನುವವರು ‘‘ಬರೀ ಒಂದು ಸಮುದಾಯಕ್ಕೆ (ಹಿಂದೂ ಧರ್ಮ) ಏಕೆ ನೀವು ಅಂಟಿಕೊಂಡಿರುವಿರಿ? ಇಡೀ ದೇಶಕ್ಕೆ, ಎಲ್ಲ ಧರ್ಮಕ್ಕೆ ಇದನ್ನು ಅನ್ವಯಿಸಿ’’ (ಅದೇ ಕೃತಿ. ಪು.908) ಎನ್ನುತ್ತಾ ಈಗಿನ ಹಿಂದುತ್ವವಾದಿಗಳ ಪ್ರಶ್ನೆಯನ್ನು ಆಗಲೇ ಅಂಬೇಡ್ಕರರ ಮುಂದಿಡುತ್ತಾರೆ! ಅಂದಹಾಗೆ ಹೆಣ್ಣು ಮಕ್ಕಳಿಗೆ ಆಸ್ತಿಯಲ್ಲಿ ಹಕ್ಕು ನೀಡಿರುವುದರ ಬಗ್ಗೆ ಎಂ.ಎ..ಅಯ್ಯಂಗಾರ್‌ರವರು ಹೇಳುವುದು ‘‘ಹಿಂದೂ ವಿವಾಹ ಪದ್ಧತಿ, ವಿಚ್ಛೇದನ ನೀಡದಿರುವುದು, ಹಾಗೆಯೇ ಕುಟುಂಬಕ್ಕೆ ಬಾಧ್ಯಸ್ಥರಲ್ಲದ ಹೆಣ್ಣು ಮಕ್ಕಳಿಗೆ ಆಸ್ತಿಯಲ್ಲಿ ಪಾಲು ನೀಡದಿರುವುದು, ಇತ್ಯಾದಿ... ಇವೆಲ್ಲ ಈ ದೇಶದ ಜನತೆಯ ನೈತಿಕ ಶಕ್ತಿಯ ಮೂಲಗಳಾಗಿವೆ! ನಾನೊಂದು ಸರಳ ಪ್ರಶ್ನೆ ಕೇಳುತ್ತೇನೆ. ನನ್ನ ಮಗಳು ಮದುವೆಯಾಗುತ್ತಾಳೆ ಎಂದಿಟ್ಟುಕೊಳ್ಳಿ. ಆಗ ನಾನು ನನ್ನ ಅಳಿಯನ ಮನೆಯಲ್ಲಿ ಉಳಿದುಕೊಳ್ಳಬೇಕೋ ಅಥವಾ ನನ್ನ ಮಗನ ಮನೆಯಲ್ಲಿ ಉಳಿದುಕೊಳ್ಳಬೇಕೋ? ಹೇಳಿ, ನೀವೇ ಹೇಳಿ’’. (ಅದೇ ಕೃತಿ. ಪು.939).

ಹೀಗೆ ಸಾಗುವ ಆ ಚರ್ಚೆ ಅಂಬೇಡ್ಕರರ ಆ ಮಸೂದೆಗೆ ನ್ಯಾಯ ದೊರಕಿಸಿಕೊಟ್ಟಿತೇ? ಇಲ್ಲ. ಬದಲಿಗೆ ಅಂಬೇಡ್ಕರರು ತಮ್ಮ ಆ ಕಾನೂನು ಮಂತ್ರಿ ಪದವಿಗೆ ರಾಜೀನಾಮೆ ನೀಡುವಂತಹ ಪರಿಸ್ಥಿತಿ ತಂದೊಡ್ಡಿತು ಮತ್ತು ಅಂಬೇಡ್ಕರರು ರಾಜೀನಾಮೆ ನೀಡಿದರು ಕೂಡ. ಈ ಬಗ್ಗೆ 1951 ಅಕ್ಟೋಬರ್ 10ರಂದು ತಮ್ಮ ರಾಜೀನಾಮೆ ಭಾಷಣದಲ್ಲಿ ಅಂಬೇಡ್ಕರರು ಹೇಳುವುದು ‘‘ಈ ಮಸೂದೆಯನ್ನು 1947 ಆಗಸ್ಟ್ 11ರಂದು ಸದನದಲ್ಲಿ ಮಂಡಿಸಲಾಯಿತು. ನಾಲ್ಕು ವರ್ಷಗಳ ನಂತರ ಇದರ ಕೇವಲ 4 ಕಲಂಗಳನ್ನಷ್ಟೆ ಅಂಗೀಕರಿಸಿ ಅದನ್ನು ಕೊಲ್ಲಲಾಯಿತು. ಯಾರೂ ಅಳದೆ, ಯಾರೂ ಶೋಕರಾಗವನ್ನು ಹಾಡದೆ ಅದು (ಹಿಂದೂ ಸಂಹಿತೆ ಮಸೂದೆ) ಸತ್ತುಹೋಯಿತು!’’. ಈ ಸಂದರ್ಭದಲ್ಲಿ ಅಂಬೇಡ್ಕರರು ಈ ಬಗ್ಗೆ ಅಂದಿನ ಪ್ರಧಾನಿ ಜವಾಹರಲಾಲ್ ನೆಹರೂರವರ ಅಸಹಕಾರವನ್ನು ಸಹ ತಮ್ಮ ಆ ರಾಜೀನಾಮೆ ಪತ್ರದಲ್ಲಿ ಉಲ್ಲೇಖಿಸಿದರು. ಯಾಕೆಂದರೆ ಪ್ರಾರಂಭದಲ್ಲಿ ನೆಹರೂರವರು ಮಸೂದೆಯಲ್ಲಿ ಕೇವಲ ಮದುವೆ ಮತ್ತು ವಿಚ್ಛೇದನದ ಭಾಗವನ್ನಷ್ಟೆ ಕೈಗೆತ್ತಿಕೊಳ್ಳುವಂತೆ ಅಂಬೇಡ್ಕರರಿಗೆ ಸೂಚಿಸಿದ್ದರು. ಆದರೆ ತದನಂತರದ ಬೆಳವಣಿಗೆಯಲ್ಲಿ ಇಡೀ ಮಸೂದೆಯನ್ನೇ ಕೈಬಿಡುವಂತೆ ಸೂಚಿಸಿದರು! ಪರಿಣಾಮ ಅಂಬೇಡ್ಕರರಿಗೆ ಮಂತ್ರಿ ಪದವಿಗೆ ರಾಜೀನಾಮೆ ನೀಡದೆ ಬೇರೆ ದಾರಿಯೇ ಇರಲಿಲ್ಲ.
  

ಒಟ್ಟಾರೆ ತಮ್ಮ ಕೈಕೊಡುತ್ತಿದ್ದ ಅನಾರೋಗ್ಯದ ನಡುವೆಯೂ ಅಂಬೇಡ್ಕರರು ಹಿಂದೂ ಸಂಹಿತೆ ಮಸೂದೆ ಅಂಗೀಕಾರಕ್ಕೆ ಅವಿರತ ಹೋರಾಡಿದರು. ಅವರೇ ಹೇಳಿಕೊಂಡಿರುವಂತೆ ಅದಕ್ಕಾಗಿ ಅವರು ಮಾನಸಿಕ ಕಿರುಕುಳ ಕೂಡ ಅನುಭವಿಸಬೇಕಾಯಿತು. ಅಂತಿಮವಾಗಿ 1955-56 ಸಮಯದಲ್ಲಿ ಅಂಬೇಡ್ಕರರು ರಾಜೀನಾಮೆ ಕೊಟ್ಟ 4 ವರ್ಷಗಳ ನಂತರ ಮಸೂದೆ ಅಂಗೀಕಾರವಾಯಿತು. ಈ ಸಂದರ್ಭದಲ್ಲಿ ಈ ವರ್ಷ ಇಡೀ ದೇಶಕ್ಕೆ ನಂ.1 ಎಂಬ ಖ್ಯಾತಿಯೊಡನೆ ಐಎಎಸ್ ಪರೀಕ್ಷೆ ಪಾಸು ಮಾಡಿದ ಟೀನಾ ಡಾಬಿ ಎಂಬ ಶೋಷಿತ ಸಮುದಾಯದ ಹೆಣ್ಣುಮಗಳ ಹೇಳಿಕೆ ಇಲ್ಲಿ ಉಲ್ಲೇಖಾರ್ಹ. ಟೀನಾ ಡಾಬಿ ಹೇಳುತ್ತಾರೆ ‘‘ಬಾಬಾಸಾಹೇಬ್ ಅಂಬೇಡ್ಕರರೇ ನನ್ನ ತಾತ ಮತ್ತು ಅವರೇ ನನಗೆ ಸ್ಫೂರ್ತಿ. ಅವರ ಮೀಸಲಾತಿ ನೀತಿ ಮತ್ತು ಮಹಿಳೆಯರಿಗೆ ಪ್ರಾತಿನಿಧ್ಯ ನೀಡುವ ’ಹಿಂದೂ ಸಂಹಿತೆ ಮಸೂದೆ’ಯಿಂದಷ್ಟೆ ನಾನು ಐಎಎಸ್ ಪಾಸು ಮಾಡಲು ಸಾಧ್ಯವಾಯಿತು’’. ಖಂಡಿತ, ಟೀನಾ ಡಾಬಿಯವರ ಈ ಹೇಳಿಕೆ ಈ ದೇಶದ ಎಲ್ಲ ಮಹಿಳೆಯರ ಹೇಳಿಕೆಯಾಗಬೇಕು. ದುರಂತವೆಂದರೆ ಈ ದೇಶದ ಮೇಲ್ವರ್ಗದ ಹೆಣ್ಣುಮಕ್ಕಳಿಗೆ ಅಂಬೇಡ್ಕರ್ ತಮಗೋಸ್ಕರ ಈ ಪರಿ ಹೋರಾಡಿರುವ ಸತ್ಯ ಅರಿವಿಗೆ ಬರುವುದಿಲ್ಲ.

ಬದಲಿಗೆ ಯಥಾಪ್ರಕಾರ ಜಾತೀಯತೆಯ ಮನಸ್ಥಿತಿಯಲ್ಲಿ ಅಂಬೇಡ್ಕರರನ್ನು ವಿರೋಧಿಸ ನೋಡುತ್ತಾರೆ. ಈ ನಿಟ್ಟಿನಲ್ಲಿ ಈಗ ಏಕರೂಪ ನಾಗರಿಕ ಸಂಹಿತೆ ಜಾರಿಮಾಡಲು ಉತ್ಸುಕವಾಗಿರುವ ಮನಸ್ಸುಗಳು ಆಗ ನಮ್ಮ ಪೂರ್ವಿಕರು ಅಂಬೇಡ್ಕರರ ಹಿಂದೂ ಸಂಹಿತೆ ಮಸೂದೆ ಜಾರಿಗೊಳ್ಳಲೇಕೆ ಅಡ್ಡಗಾಲಾಗಿದ್ದರು ಎಂಬುದನ್ನು ಯೋಚಿಸಿ ಸಿಂಹಾವಲೋಕನ ಮಾಡಿಕೊಳ್ಳಬೇಕಿದೆ ಮತ್ತು ಆ ನಂತರವಷ್ಟೆ ಅವರು ಏಕರೂಪ ನಾಗರಿಕ ಸಂಹಿತೆ ಬಗ್ಗೆ ಚರ್ಚೆ ನಡೆಸಲು ಅರ್ಹರಾಗುತ್ತಾರೆ. ಇಲ್ಲದಿದ್ದರೆ ಏಕರೂಪ ನಾಗರಿಕ ಸಂಹಿತೆಯ ಈ ಚರ್ಚೆ ಹಿಂದೂ ಕಾನೂನನ್ನು ಅಲ್ಪಸಂಖ್ಯಾತರ ಮೇಲೆ ಹೇರುವ ವ್ಯವಸ್ಥಿತ ಹುನ್ನಾರದ ಭಾಗವೆನ್ನದೆ ವಿಧಿಯಿಲ್ಲ.

Writer - ರಘೋತ್ತಮ ಹೊ.ಬ.

contributor

Editor - ರಘೋತ್ತಮ ಹೊ.ಬ.

contributor

Similar News