ದಲಿತರ ದುಸ್ಥಿತಿಯೂ ಮೋದಿಯವರ ಮೊಸಳೆ ಕಣ್ಣೀರೂ

Update: 2016-08-19 17:26 GMT

ಗುಜರಾತ್ ರಾಜ್ಯದ ಉನಾ ತಾಲೂಕಿನ ಮೋಟಾ ಸಮಧಿಯಾಲಾ ಗ್ರಾಮದಲ್ಲಿ ಗೋರಕ್ಷಕ ದಳದ ಕಾರ್ಯಕರ್ತರು ಸತ್ತ ದನದ ಚರ್ಮ ಸುಲಿಯುತ್ತಿದ್ದ ಬಡಪಾಯಿ ದಲಿತ ಕುಟುಂಬವೊಂದರ ಸದಸ್ಯರ ಮೇಲೆ ಬರ್ಬರ ಹಲ್ಲೆ ನಡೆಸಿದ ಬೆನ್ನಲ್ಲೆ ಉತ್ತರ ಪ್ರದೇಶದ ಬಿಜೆಪಿ ಉಪಾಧ್ಯಕ್ಷನೊಬ್ಬ ದಲಿತ ನಾಯಕಿ ಮಾಯಾವತಿಯವರನ್ನು ನಿಂದಿಸಿದ ವಿದ್ಯಮಾನ ಸಂಭವಿಸಿದಾಗ ದಲಿತರು ಅದುಮಿಟ್ಟ ಆಕ್ರೋಶದ ಬಾಂಬ್ ಸ್ಫೋಟಗೊಂಡಿದೆ. ರೊಚ್ಚಿಗೆದ್ದ ಗುಜರಾತಿ ದಲಿತರು ನಿಮ್ಮ ಪವಿತ್ರ ಗೋವುಗಳ ಶವಗಳನ್ನು ನೀವೇ ಎತ್ತಿ ಎಂದು ತಿರುಗಿಬಿದ್ದುದರ ಫಲವಾಗಿ ಇಡೀ ರಾಜ್ಯ ದುರ್ವಾಸನೆ ಬೀರತೊಡಗಿದೆ. ರಾಜ್ಯದಾದ್ಯಂತ ನಡೆಯುತ್ತಿರುವ ಭಾರೀ ಪ್ರತಿಭಟನೆಗಳ ಸದ್ದು ಮುಗಿಲುಮುಟ್ಟಿದೆ. ದಲಿತರ ಈ ಚಾರಿತ್ರಿಕ ಹೋರಾಟದಲ್ಲಿ ನಿವೃತ್ತ ಐಪಿಎಸ್ ಅಧಿಕಾರಿ ರಾಹುಲ್ ಶರ್ಮ ಕೂಡಾ ಒಂದು ಪ್ರಮುಖ ಪಾತ್ರ ವಹಿಸಿದ್ದಾರೆ. ನಿಮಗೆ ನೆನಪಿರಬಹುದು, 2002ರ ಗುಜರಾತ್ ಹತ್ಯಾ ಕಾಂಡದಲ್ಲಿ ಅನೇಕ ರಾಜಕಾರಣಿಗಳು ಹಾಗೂ ಪೊಲೀಸ್ ಅಧಿಕಾರಿಗಳ ಪಾತ್ರವನ್ನು ಬಯಲಿಗೆಳೆದಾತ ಇದೇ ರಾಹುಲ್ ಶರ್ಮ. ಗುಜರಾತಿ ದಲಿತರ ಹೋರಾಟಕ್ಕೆ ದೇಶದ ವಿವಿಧೆಡೆಗಳಿಂದ, ವಿವಿಧ ಸ್ತರಗಳಿಂದ ದೊಡ್ಡ ಮಟ್ಟದಲ್ಲಿ ಬೆಂಬಲ ವ್ಯಕ್ತವಾಗುತ್ತಿವೆ. ಇತರ ರಾಜ್ಯಗಳಲ್ಲಿನ ದಲಿತರು ಧರಣಿ, ಪ್ರತಿಭಟನೆಗಳ ಮೂಲಕ ತಮ್ಮ ಗುಜರಾತಿ ಸೋದರ ಸೋದರಿಯರಿಗೆ ಸಾಥ್ ನೀಡುತ್ತಿದ್ದಾರೆ. ಇದರಿಂದಾಗಿ ಮುಂಬರುವ ಚುನಾವಣೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಉತ್ತರ ಪ್ರದೇಶ ಮತ್ತಿತರ ರಾಜ್ಯಗಳಲ್ಲಿ ದಲಿತರ ಓಟು ಗಳಿಗಾಗಿ ನಾನಾ ತಂತ್ರಗಳನ್ನು ಹೆಣೆಯುತ್ತಿರುವ ಬಿಜೆಪಿಗೆ ಭಾರೀ ಹಿನ್ನಡೆ ಉಂಟಾಗಿದೆ. ದಲಿತರ ಮತಬ್ಯಾಂಕ್ ಕಳೆದು ಕೊಂಡರೆ ತಮ್ಮ ಕನಸಿನ ಹಿಂದೂ ರಾಷ್ಟ್ರ ಗಗನಕುಸುಮ ವಾಗಲಿದೆ ಎಂಬ ಸತ್ಯದರ್ಶನ ಆಗುತ್ತಿದ್ದಂತೆ ಸಂಘ ಪರಿವಾರಕ್ಕೆ ಎಲ್ಲಿಲ್ಲದ ಭಯವಾಗತೊಡಗಿದೆ. ಆ ಭೀತಿ ಇಂದು ಸಂಘ ಪರಿವಾರದ ಬುನಾದಿಯನ್ನೇ ಗಡಗಡ ಅಲುಗಾಡಿಸಲಾರಂಭಿಸಿದೆ.

ಇಂತಹ ಸಂದರ್ಭದಲ್ಲಿ ಇಷ್ಟು ವರ್ಷಗಳ ಕಾಲ ದಲಿತರನ್ನು ಅಲ್ಪಸಂಖ್ಯಾತರ ವಿರುದ್ಧ ಎತ್ತಿಕಟ್ಟಿ ಸಮಾಜದ ಧ್ರುವೀಕರಣಕ್ಕಾಗಿ ದುರುಪಯೋಗಪಡಿಸಿಕೊಂಡು ಬಂದಿರುವ ನರೇಂದ್ರ ಮೋದಿಗೆ ಇನ್ನು ತುಟಿ ಬಿಚ್ಚದೆ ಇದ್ದರೆ ಉಳಿಗಾಲವಿಲ್ಲ ಎಂದು ಅನಿಸಿದೆ. ಹೀಗಾಗಿ ವಿಧಿಯಿಲ್ಲದೆ ಕೆಲವು ಬೂಟಾಟಿಕೆಯ ಮಾತುಗಳನ್ನಾಡಿದ್ದಾರೆ. ಆದರೆ ಅಂದು ಅವರ ಆಡಳಿತದಡಿಯಲ್ಲಿ (ಮತ್ತು ಇಂದೂ ಕೂಡಾ) ದಲಿತರ ದೈನೇಸಿ ಸ್ಥಿತಿ ಮತ್ತು ಅವರ ಹಲವಾರು ‘ನುಡಿಮುತ್ತು’ಗಳನ್ನು ಜ್ಞಾಪಿಸಿಕೊಂಡರೆ ಸಾಕು, ಈ ತಥಾಕಥಿತ ದಲಿತ ಪರ ಹೇಳಿಕೆಗಳೆಲ್ಲ ಬರೀ ಕಪಟನಾಟಕ ಎಂದು ತಿಳಿಯುತ್ತದೆ. ಇಂದು ಉನಾ ಚಳವಳಿಯ ನೇತೃತ್ವ ವಹಿಸಿರುವ ಜಿಗ್ನೇಶ್ ಮೇವಾನಿ ಖಚಿತಪಡಿಸಿರುವಂತೆ ‘‘2009ರಲ್ಲಿ ಇದೇ ಮೋದಿ ದನದ ಚರ್ಮ ಸುಲಿಯುವಾಗ ದಲಿತರಿಗೆ ಆಧ್ಯಾತ್ಮಿಕ ಶಾಂತಿ ಸಿಗುತ್ತದೆ’’ ಎಂದಿದ್ದರು. ಒಮ್ಮೆ ಸಫಾಯಿ ಕರ್ಮಚಾರಿಗಳನ್ನು ಉದ್ದೇಶಿಸಿ ಮಾಡಿದ ಭಾಷಣವೊಂದರಲ್ಲಿ, ವಾಲ್ಮೀಕಿ ಜಾತಿಗೆ ಸೇರಿದ ಮಲ ಹೊರುವವರ ಕೆಲಸವನ್ನು ಪೂಜಾರಿ ದೇವಸ್ಥಾನವನ್ನು ಶುಚಿಮಾಡುವುದಕ್ಕೆ ಹೋಲಿಸಿದ್ದರು. ರಾಜ್ಯದ ಐಎಎಸ್ ಅಧಿಕಾರಿಗಳಿಗೆ ಕೊಟ್ಟ ಹಲವಾರು ಲೆಕ್ಚರ್‌ಗಳಲ್ಲಿಯೂ ಮನುಷ್ಯರ ಹೇಲನ್ನು ಮನುಷ್ಯರೇ ಎತ್ತುವಂತಹ ಈ ಘೋರ ದೌರ್ಜನ್ಯವನ್ನು ‘ಆಧ್ಯಾತ್ಮಿಕ ಅನುಭವ’ ಎಂದು ಕರೆದಿದ್ದರು. ಅದು ಸಮಾಜ ಸೇವೆಗಾಗಿ ಸಾಕ್ಷಾತ್ ಭಗವಂತನೆ ಅವರಿಗೆ ವಹಿಸಿದ ಕರ್ತವ್ಯ; ಹಾಗಾಗಿ ಶತಮಾನಗಳಿಂದಲೂ ಅದನ್ನು ಮುಂದುವರಿಸಿದ್ದಾರೆ ಎಂಬ ಸಮರ್ಥನೆಯನ್ನೂ ನೀಡಿದ್ದರು.

ತನ್ನ ಉಪನ್ಯಾಸಗಳನ್ನೆಲ್ಲ ಒಟ್ಟು ಸೇರಿಸಿ ‘ಕರ್ಮಯೋಗ’ ಹೆಸರಿನ ಪುಸ್ತಕವನ್ನೂ ಹೊರತಂದಿದ್ದಾರೆ. ಅದೂ ಸರಕಾರಿ ವೆಚ್ಚದಲ್ಲಿ. ಮೋದಿಯವರ ಮಾತುಗಳ ಇಂಗಿತಾರ್ಥ ಏನೆಂದರೆ ವಾಲ್ಮೀಕಿಗಳು ಮಲಹೊರುತ್ತಲೇ ಇರಬೇಕು, ಮೋದಿಯಂಥವರು ಅಂಬೇಡ್ಕರ್ ವಿರೋಧಿಸುತ್ತಿದ್ದ ಬ್ರಾಹ್ಮಣಶಾಹಿ ಮತ್ತು ಕಾರ್ಪೊರೇಟುಗಳನ್ನು ಓಲೈಸುತ್ತ ರಾಜ್ಯಭಾರ ಮಾಡುತ್ತಲೇ ಇರಬೇಕು! ಹೀಗೆ ನಿಧಾನವಾಗಿ ಹೆಚ್ಚುವ ಖಾಸಗೀಕರಣವು ಬ್ರಾಹ್ಮಣಶಾಹಿ ಬಂಡವಾಳಶಾಹಿ ಜೋಡಿಯನ್ನು ಇನ್ನಷ್ಟು ಬಲಪಡಿಸಿ ಮೀಸಲಾತಿ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತ ಹೋಗುತ್ತದೆ. ಪರಿಣಾಮವಾಗಿ ದಲಿತರು ಎರಡನೆ ದರ್ಜೆಯ ಪ್ರಜೆಗಳಾಗಿ, ಬ್ರಾಹ್ಮಣಶಾಹಿಯ ಸೇವೆ ಮಾಡುತ್ತಾ ಅದರ ಪದಾತಿದಳಗಳಾಗಿ ಉಳಿಯುತ್ತಾರೆ. ಅಭಿವೃದ್ಧಿಯ ಮಾದರಿ ಎಂದು ಟಾಂಟಾಂ ಮಾಡ ಲಾಗಿರುವ ಗುಜರಾತ್‌ನಲ್ಲಿ ವಾಸ್ತವವಾಗಿ ದಲಿತರ ಪರಿಸ್ಥಿತಿ ಮಿಕ್ಕ ರಾಜ್ಯಗಳಿಗಿಂತ ಭಿನ್ನವಾಗಿಲ್ಲ. ಅವರ ಸ್ಥಾನ ಮಾನದಲ್ಲಿ ಕೂಡ ಯಾವ ಬದಲಾವಣೆಯೂ ಆಗಿಲ್ಲ. ದೇಶದ ಎಲ್ಲಾ ರಾಜ್ಯಗಳಲ್ಲಿ ಇರುವಂತೆ ಬಹಿಷ್ಕಾರ, ಅಸ್ಪಶ್ಯತೆ, ಜೀತ, ಅತ್ಯಾಚಾರ, ಜಾತಿಕ್ರೌರ್ಯ, ಮಲ ಹೊರುವ ಪದ್ಧತಿ ಗುಜರಾತ್‌ನಲ್ಲೂ ಇದೆ.

ಆದರೆ ಇಂದು ಉನಾ ಘಟನೆಯಿಂದ ತೀರ ವಿಚಲಿತಗೊಂಡು ಕೈಕೈ ಹೊಸಕುತ್ತಿರುವ ಬಿಜೆಪಿ, ವಿಷಯದ ಗಂಭೀರತೆಯನ್ನು ಮರೆಮಾಚಲೋಸುಗ ಇದೊಂದು ದುರದೃಷ್ಟಕರ ಘಟನೆ; ಗುಜರಾತಿನಲ್ಲಿ ದಲಿತ ದೌರ್ಜನ್ಯಗಳ ಸಂಖ್ಯೆ ಕಡಿಮೆ ಇದೆ; ಬಿಜೆಪಿಯೇತರ ಸರಕಾರಗಳಿರುವ ಉತ್ತರ ಪ್ರದೇಶ, ಬಿಹಾರಗಳಲ್ಲಿ ಅತ್ಯಧಿಕ ದೌರ್ಜನ್ಯ ಪ್ರಕರಣಗಳು ವರದಿಯಾಗಿವೆ ಎಂದು ವಾದಿಸಲೆತ್ನಿಸುತ್ತಿದೆ. ಇತ್ತೀಚೆಗಷ್ಟೆ ರಾಜ್ಯಸಭೆಯ ಸದಸ್ಯರಾಗಿರುವ ನರೇಂದ್ರ ಜಾಧವ್ ಎಂಬವರು, ‘‘2014ರಲ್ಲಿ ಉತ್ತರ ಪ್ರದೇಶ, ರಾಜಸ್ಥಾನ, ಬಿಹಾರಗಳಲ್ಲಿ ಅತಿ ಹೆಚ್ಚು ದಲಿತ ದೌರ್ಜನ್ಯ ಪ್ರಕರಣಗಳು ನಡೆದಿವೆ. ಅಲ್ಲಿ 17ರಿಂದ 18 ಪ್ರತಿಶತ ಪ್ರಕರಣಗಳಾಗಿದ್ದರೆ ಗುಜರಾತ್‌ನಲ್ಲಿ ಅದು ಕೇವಲ 2.4 ಪ್ರತಿಶತದಷ್ಟಿದೆ’’ ಎಂದು ಕೆಲವು ಅಂಕಿಅಂಶಗಳನ್ನು ಉರುಳಿಸಿದ್ದಾರೆ. ಬಿಜೆಪಿ ಮತ್ತದರ ವಕ್ತಾರರೆಲ್ಲ ಬರೀ ಬುರುಡೆ ಬಿಡುತ್ತಿದ್ದಾರೆ. ನೈಜ ಅಂಕಿಅಂಶಗಳು ಬೇರೆಯೆ ಇವೆ:

ರಾಷ್ಟ್ರೀಯ ಅಪರಾಧ ದಾಖಲೆಗಳ ಸಂಸ್ಥೆ (National Crime Records Bureau) ಹಿಂದೆಲ್ಲಾ ತನ್ನ ಲೆಕ್ಕಾಚಾರಗಳಿಗೆ ರಾಜ್ಯದ ಒಟ್ಟು ಜನಸಂಖ್ಯೆಯನ್ನು ಬಳಸುತ್ತಿತ್ತು. ಈ ತಪ್ಪನ್ನು ಸರಿಪಡಿಸಿ ಪ್ರತಿ 1 ಲಕ್ಷ ದಲಿತ ಜನಸಂಖ್ಯೆಗೆ ಎಷ್ಟು ದೌರ್ಜನ್ಯ ಪ್ರಕರಣಗಳು ದಾಖಲಾಗುತ್ತವೋ ಅದನ್ನೆ ನಿಜವಾದ ಸೂಚ್ಯಂಕವಾಗಿ ಮಾಡಿರುವುದು 2012ರ ನಂತರವೇ. ಇದರ ಪ್ರಕಾರ 2014ರಲ್ಲಿ ಅತ್ಯಧಿಕ ಪ್ರಕರಣಗಳು ದಾಖಲಾಗಿರುವುದು ಬಿಜೆಪಿ/ಬಿಜೆಪಿ ಮಿತ್ರಪಕ್ಷದ ಆಡಳಿತವಿರುವ ಗೋವಾ, ರಾಜಸ್ಥಾನ ಮತ್ತು ಆಂಧ್ರ ಪ್ರದೇಶಗಳಲ್ಲಿ. ಗುಜರಾತ್ ದಲಿತಪೀಡಕರ ಪಟ್ಟಿಯಲ್ಲಿ ಅತ್ಯುನ್ನತ ಸ್ಥಾನ ಪಡೆದಿರುವ ರಾಜ್ಯಗಳಲ್ಲೊಂದು ಎನ್ನುವುದನ್ನು ಇಲ್ಲಿ ಕೊಟ್ಟಿರುವ ಅಂಕಿಅಂಶಗಳು ಸಾಬೀತುಪಡಿಸುತ್ತವೆ. ಇಷ್ಟೆ ಅಲ್ಲ, ಕೊಲೆ, ಅತ್ಯಾಚಾರ ಪ್ರಕರಣಗಳಲ್ಲೂ ಗುಜರಾತ್ ಹೆಚ್ಚಿನ ರಾಜ್ಯಗಳಿಗಿಂತ ಮುಂದಿದೆ. 2012ನ್ನು ಹೊರತುಪಡಿಸಿ ಮಿಕ್ಕ ವರ್ಷಗಳಲ್ಲಿ ಕೊಲೆ ಪ್ರಕರಣಗಳ ಶೇಕಡಾವಾರು ಸಂಖ್ಯೆ ಇತರ ರಾಜ್ಯಗಳಿಗಿಂತ ಹೆಚ್ಚು ಇದೆ. ಅತ್ಯಾಚಾರ ಪ್ರಕರಣಗಳಲ್ಲಿ ಮಧ್ಯ ಪ್ರದೇಶ (ಶೇ. 4.2), ಕೇರಳ (ಶೇ. 4), ರಾಜಸ್ಥಾನಗಳ (ಶೇ.2.8) ನಂತರ ನಾಲ್ಕನೆ ಸ್ಥಾನ ಗುಜರಾತಿನದ್ದೇ ಆಗಿದೆ.

ವಾಸ್ತವದಲ್ಲಿ ಗುಜರಾತ್‌ನಲ್ಲಿ ದಲಿತ ದೌರ್ಜನ್ಯ ತಡೆ ಕಾಯ್ದೆಯನ್ನು ಉದ್ದೇಶಪೂರ್ವಕವಾಗಿ ಅಲಕ್ಷಿಸಲಾಗಿದ್ದು ಸದರಿ ಕಾಯ್ದೆಯಡಿ ದಾಖಲಿಸಲಾಗುವ ಪ್ರಕರಣಗಳಲ್ಲಿ ಶೇ.90ಕ್ಕೂ ಅಧಿಕ ಪ್ರಕರಣಗಳು ಖುಲಾಸೆಗೊಳ್ಳುತ್ತಿವೆ. ಇದಕ್ಕೆ ರಾಜ್ಯ ಸರಕಾರದ ಉದ್ದೇಶಪೂರ್ವಕ ನೀತಿಗಳೆ ಕಾರಣ ಎನ್ನುವುದಕ್ಕೆ ಈ ಕೆಳಗಿನ ಕೆಲವು ಸಂಗತಿಗಳೆ ಸಾಕ್ಷಿ:
*ಇಂತಹ ಪ್ರಕರಣಗಳ ತನಿಖೆಯನ್ನು ಡಿವೈಎಸ್‌ಪಿಗಿಂತ ಕೆಳಮಟ್ಟದ ಅಧಿಕಾರಿಗಳು ಮಾಡಬಾರ ದೆಂದಿದ್ದರೂ ಅತ್ಯಧಿಕ ಪ್ರಕರಣಗಳಲ್ಲಿ ಇನ್‌ಸ್ಪೆಕ್ಟರ್, ಸಬ್ ಇನ್‌ಸ್ಪೆಕ್ಟರ್‌ಗಳೇ ತನಿಖೆ ನಡೆಸುತ್ತಾರೆೆ.
*ನ್ಯಾಯಾಲಯಗಳಿಗೆ ಬಲಿಪಶುಗಳ ಜಾತಿ ಪ್ರಮಾಣ ಪತ್ರಗಳನ್ನು ಒದಗಿಸಲಾಗುತ್ತಿಲ್ಲ.
*ರಾಜ್ಯ ಸರಕಾರ ಕಾಯ್ದೆಗೆ ತಿದ್ದುಪಡಿ ಮಾಡಿದೆ ಎಂದು ನ್ಯಾಯಾಲಯಕ್ಕೆ ಸುಳ್ಳು ಹೇಳಲಾಗುತ್ತದೆ.
*ಕಾಯ್ದೆಯಲ್ಲಿ ಅವಕಾಶ ಇಲ್ಲದ ಹೊರತಾಗಿ ಯೂ ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ನೀಡಲಾಗುತ್ತದೆ.

ದಲಿತ ದೌರ್ಜನ್ಯ ಕೇಸುಗಳಲ್ಲಿ ಶಿಕ್ಷೆಯಾಗುವ ಪ್ರಕರಣಗಳ ಸಂಖ್ಯೆಯಲ್ಲಿಯೂ ಗುಜರಾತ್‌ನ ದಾಖಲೆ ತೀರ ಕಳಪೆಯಾಗಿದೆ. ಶಿಕ್ಷೆ ವಿಧಿಸಲಾಗಿರುವ ಪ್ರಕರಣಗಳ ಪ್ರಮಾಣ ದೇಶಾದ್ಯಂತ 22 ಪ್ರತಿಶತದಷ್ಟಿದ್ದರೆ ಗುಜರಾತ್‌ನಲ್ಲಿ ಅದು ಬರೀ 2.9 ಪ್ರತಿಶತ ಇದೆ. ಇದಕ್ಕೆ ಜವಾಬ್ದಾರಿಯುತ ಸ್ಥಾನಗಳಲ್ಲಿರುವವರ ಪೂರ್ವಾಗ್ರಹಪೀಡಿತ ಧೋರಣೆಗಳೇ ಕಾರಣವೆಂದು ತಿಳಿದುಬಂದಿದೆ. ಗುಜರಾತ್‌ನ 16 ಜಿಲ್ಲೆಗಳಲ್ಲಿ ಸ್ಥಾಪಿಸಲಾದ ವಿಶೇಷ ದೌರ್ಜನ್ಯ ನ್ಯಾಯಾಲಯಗಳು ಎಪ್ರಿಲ್ 1, 1995ರ ನಂತರದ ಹತ್ತು ವರ್ಷಗಳಲ್ಲಿ ನೀಡಿರುವ 400 ತೀರ್ಪುಗಳ ಅಧ್ಯಯನ ನಡೆಸಿದ ಅಹ್ಮದಾಬಾದಿನ ಸಾಮಾಜಿಕ ನ್ಯಾಯ ಮಂಡಳಿ ಕಂಡುಕೊಂಡಿರುವಂತೆ ಪೊಲೀಸರು ತಮ್ಮ ತನಿಖೆಯ ವೇಳೆ ಕೇಸುಗಳನ್ನು ಉದ್ದೇಶಪೂರ್ವಕವಾಗಿ ದುರ್ಬಲಗೊಳಿಸುವ ಮೂಲಕ ಅಪರಾಧಿಗಳಿಗೆ ಶಿಕ್ಷೆಯಾಗದಂತೆ ನೋಡಿಕೊಳ್ಳುತ್ತಾರೆ. ನ್ಯಾಯಾಂಗದ ಮೇಲೂ ದೋಷಾರೋಪ ಹೊರಿಸಿರುವ ಮಂಡಳಿ, ‘‘ತನಿಖೆೆಯಲ್ಲಿ ಆದ ತಾಂತ್ರಿಕ ಲೋಪದೋಷಗಳ ಕುಂಟುನೆಪ ಹೇಳಿ ಅಪರಾಧಿಗಳನ್ನು ದೋಷಮುಕ್ತಗೊಳಿಸಲಾಗಿದೆ; ಆ ಲೋಪದೋಷಗಳಿಗೆ ಕಾರಣೀಭೂತರಾದವರನ್ನು ಶಿಕ್ಷಿಸಲು ಅದೇ ಕಾಯ್ದೆಯಲ್ಲಿ ಅವಕಾಶಗಳಿದ್ದರೂ ಅವನ್ನು ಬಳಸಿಕೊಳ್ಳಲಾಗಿಲ್ಲ’’ ಎಂದು ಹೇಳಿದೆ.
‘ಅಭಿವೃದ್ಧಿಯ’ ಮಾದರಿ ಎಂದೇ ದೇಶಾದ್ಯಂತ ಪ್ರಚಾರ ಮಾಡಲಾಗಿರುವ ಮೋದಿಯ ಗುಜರಾತ್‌ನಲ್ಲಿ ದಲಿತರ ದುಸ್ಥಿತಿಯ ಬಗ್ಗೆ ಇನ್ನಷ್ಟು ಸ್ಪಷ್ಟ ಚಿತ್ರಣವನ್ನು ಒದಗಿಸುವ ಕೆಲವು ಉದಾಹರಣೆಗಳು ಇಲ್ಲಿವೆ:

ಗುಜರಾತ್‌ನಲ್ಲಿ ದಲಿತರ ಸುಮಾರು 64 ಲಕ್ಷ ಮನೆಗಳಿಗೆ ಒಳಚರಂಡಿ ವ್ಯವಸ್ಥೆ ಇಲ್ಲ. ಸುಮಾರು 52 ಲಕ್ಷ ಮನೆಗಳಿಗೆ ಶೌಚಾಲಯದ ವ್ಯವಸ್ಥೆ ಇಲ್ಲ. ರಾಜ್ಯಾದ್ಯಂತ ಪೇಟೆ ಪಟ್ಟಣಗಳಲ್ಲಿ ಇಂದಿಗೂ ಮಲ ಹೊರುವ ಪದ್ಧತಿ ಜಾರಿಯಲ್ಲಿದೆ. ಹೆಚ್ಚುಕಮ್ಮಿ ‘ಸ್ಮಾರ್ಟ್ ಸಿಟಿ’ ಎಂದೇ ಪರಿಗಣಿಸಲ್ಪಟ್ಟಿರುವ ಅಹಮದಾಬಾದ್ ನಗರವೊಂದರಲ್ಲೆ ಇಂತಹ 188 ಪಾಯಿಖಾನೆಗಳಿರುವ ವಿಷಯ ಗುಟ್ಟಾಗಿ ಉಳಿದಿಲ್ಲ. ಭೂಸುಧಾರಣೆ ಕಾಯ್ದೆಯನ್ವಯ ದಲಿತರಿಗೆ ಭೂಮಿ ದೊರಕಿದೆ ಎನ್ನಲಾದರೂ ಅದು ಬರೀ ಹೆಸರಿಗೆ ಮಾತ್ರ. ವಾಸ್ತವವಾಗಿ ಆ ಜಮೀನುಗಳೆಲ್ಲವೂ ಜಮೀನ್ದಾರರ ಕಪಿಮುಷ್ಟಿಯಲ್ಲಿವೆ. ದಲಿತರು ಕಾನೂನಾತ್ಮಕವಾಗಿ ತಮ್ಮದಾಗಿದ್ದ ಭೂಮಿಯಲ್ಲಿ ಜೀತದಾಳುಗಳಾಗಿ ದುಡಿಯಬೇಕಾದ ಪರಿಸ್ಥಿತಿ ಬಂದಿದೆ. ಇದನ್ನು ವಿರೋಧಿಸುವವರನ್ನು ಊರಿನಿಂದ ಬಹಿಷ್ಕರಿಸಲಾಗುತ್ತದೆ. ಒಂದು ಸಂದರ್ಭದಲ್ಲಿ ರಾಷ್ಟ್ರೀಯ ಮಾನವ ಹಕ್ಕು ಆಯೋಗ ಕೇವಲ ಎರಡು ದಿನಗಳ ಅವಧಿಯಲ್ಲಿ ಇಂತಹ 77 ಪ್ರಕರಣಗಳನ್ನು ದಾಖಲಿಸಿದೆ.

ಕೆೆಲವು ವರ್ಷಗಳ ಹಿಂದೆ ‘ನವಸರ್ಜನ್’ ಸಂಸ್ಥೆ ನಡೆಸಿದ ಸಮೀಕ್ಷೆಯೊಂದು ಗುಜರಾತ್‌ನ ಶೇಕಡಾ 98ಕ್ಕೂ ಅಧಿಕ ಹಳ್ಳಿಗಳಲ್ಲಿ ಅಸ್ಪಶ್ಯತೆ ಇನ್ನೂ ಜಾರಿಯಲ್ಲಿರುವುದನ್ನು ಬಯಲಿಗೆಳೆದಿದೆ. ರಾಜ್ಯದಲ್ಲಿ ದಲಿತರನ್ನು ಪೂಜಾರಿಗಳಾಗಿ ನೇಮಿಸಲಾಗುತ್ತಿದೆ ಎಂದು ದೊಡ್ಡದಾಗಿ ಪ್ರಚಾರ ಮಾಡಲಾಗುತ್ತ್ತದೆ. ಆದರೆ ಅದೆಲ್ಲ ಸೋಮನಾಥ, ಅಕ್ಷರಧಾಮಗಳಂಥಲ್ಲಿ ಅಲ್ಲ, ಬರೀ ಊರ ಹೊರಗಿನ ಕಾಡೊಳಗಿರುವ ಪಾಳುಬಿದ್ದ ಮಂದಿರಗಳಿಗಷ್ಟೆ ಸೀಮಿತವಾಗಿದೆ! ನಿಜ ಹೇಳಬೇಕೆಂದರೆ ರಾಜ್ಯದ ಹೆಚ್ಚಿನ ಕಡೆಗಳಲ್ಲಿ ಈಗಲೂ ದಲಿತರಿಗೆ ಮಂದಿರ ಪ್ರವೇಶ ನಿಷಿದ್ಧ. 2009ರ ಒಂದು ಸಮೀಕ್ಷೆಯಂತೆ 1,655 ಹಳ್ಳಿಗಳಲ್ಲಿ 98,000 ದಲಿತರಿಗೆ ದೇವಸ್ಥಾನ ಪ್ರವೇಶವನ್ನು ನಿಷೇಧಿಸಲಾಗಿದೆ.
ಪ್ರತಿಶತಕ್ಕೂ ಅಧಿಕ ದಲಿತರಿಗೆ ಪ್ರತ್ಯೇಕ ಲೋಟ, ತಟ್ಟೆಗಳಲ್ಲಿ ಆಹಾರ ನೀಡಲಾಗುತ್ತದೆ. ಶಾಲೆಗಳಲ್ಲಿ ದಲಿತ ಮಕ್ಕಳಿಂದ ಬಲವಂತವಾಗಿ ಶೌಚಾಲಯ ತೊಳೆಸುತ್ತಿದ್ದ ಪ್ರಕರಣಗಳು ಪತ್ತೆಯಾಗಿವೆ. ಅಂತರ್ಜಾತಿ ಮದುವೆಯಾಗುವವರನ್ನು ಸವರ್ಣೀಯರು ಜೀವಂತ ದಹಿಸಿದ ಉದಾಹರಣೆಗಳೂ ಇವೆ. ಕಛ್ ಭೂಕಂಪ ಪೀಡಿತರಿಗೆ ಮರುವಸತಿ ಕಲ್ಪಿಸುವಲ್ಲಿಯೂ ಜಾತಿ ಆಧಾರದಲ್ಲಿ ಭಾರೀ ತಾರತಮ್ಯ ತೋರಲಾಗಿದೆ.

ಗುಜರಾತ್‌ನಲ್ಲಿ ದಲಿತ ಮಹಿಳೆ ಸಂತೆಯಲ್ಲಿ ಖರೀದಿಸುವ ತರಕಾರಿಯನ್ನು ಆಕೆಯ ಮಡಿಲಿಗೆ ಎಸೆಯಲಾಗುತ್ತದೆ. ಅಲ್ಲಿ ದಲಿತ ಮಹಿಳೆಯರು ಸಾಕಿದ ಹಸುಗಳ ಹಾಲನ್ನು ಖರೀದಿಸಲು ನಿರಾಕರಿಸುವ ಸಹಕಾರಿ ಸಂಘಗಳೂ ಇವೆ. ನಂಬಲಸಾಧ್ಯವೆನಿಸಿದರೂ ಇದು ನಿಜ. ಇದಕ್ಕೆ ಜೀವಂತ ಉದಾಹರಣೆ ಮೆಹಸಾನ ಜಿಲ್ಲೆ. 2008ರಿಂದ ಜಾರಿಗೆ ಬಂದಿರುವ ‘ಗುಜರಾತ್ ಧಾರ್ಮಿಕ ಸ್ವಾತಂತ್ರ್ಯ ಕಾಯ್ದೆ’ಯ ಪ್ರಧಾನ ಉದ್ದೇಶವೇ ದಲಿತರು ಮತ್ತು ಸ್ತ್ರೀಯರ ಧಾರ್ಮಿಕ ಸ್ವಾತಂತ್ರ್ಯವನ್ನು ಹತ್ತಿಕ್ಕುವುದಾಗಿದೆ. ಈ ಕಾಯ್ದೆಯ ಪ್ರಕಾರ ಮತಾಂತರ ಆಗಲು ಇಷ್ಟಪಡುವ ಯಾವನೇ ವ್ಯಕ್ತಿ ಸ್ಥಳೀಯ ಜಿಲ್ಲಾ ಮ್ಯಾಜಿಸ್ಟ್ರೇಟರಿಂದ ಪೂರ್ವಾನುಮತಿ ಪಡೆದುಕೊಳ್ಳುವುದು ಕಡ್ಡಾಯವಾಗಿದೆ. ಕಾಯ್ದೆಯನ್ನು ಉಲ್ಲಂಘಿಸುವವರಿಗೆ ಗರಿಷ್ಠ 3 ವರ್ಷಗಳ ಸಜೆ ಹಾಗೂ 50,000 ರೂಪಾಯಿ ದಂಡ ವಿಧಿಸಲಾಗುತ್ತದೆ. ಒಂದು ವೇಳೆ ಅಂತಹ ವ್ಯಕ್ತಿ ಅಪ್ರಾಪ್ತ ವಯಸ್ಕ ಅಥವಾ ಮಹಿಳೆ ಅಥವಾ ದಲಿತ ಆಗಿದ್ದರೆ ಶಿಕ್ಷೆಯ ಅವಧಿಯನ್ನು 4 ವರ್ಷಕ್ಕೆ ಮತ್ತು ದಂಡದ ಮೊತ್ತವನ್ನು 1 ಲಕ್ಷಕ್ಕೆ ಏರಿಸಲಾಗುತ್ತದೆ! ಇದರರ್ಥ ಏನೆಂದರೆ ದಲಿತರು ದಲಿತರಾಗಿಯೆ ಉಳಿದು ಮೇಲ್ಜಾತಿಗಳ ಸೇವೆ ಮಾಡುತ್ತಿರಬೇಕು; ಹಿಂದೂ ಮಹಿಳೆಯರು ಹಿಂದೂ ಧರ್ಮದಲ್ಲೇ ಉಳಿಯಬೇಕು, ಅನ್ಯಧರ್ಮೀಯರನ್ನು ವಿವಾಹವಾಗಬಾರದು! ದುರದೃಷ್ಟವಶಾತ್ ಕ್ಯಾನ್ಸರ್ ವ್ಯಾಧಿಗೆ ಸಮಾನವಾಗಿರುವ ದಲಿತ ಸಮುದಾಯಗಳ ಈ ದುಸ್ಥಿತಿಯನ್ನು ಗಾಂಧಿಯ ತವರೂರು ಮತ್ತು ‘ಅಭಿವೃದ್ಧಿ’ ಎಂಬ ಮುಖವಾಡದ ಅಡಿಯಲ್ಲಿ ಮರೆಮಾಚಲಾಗಿದೆ.

ರಾಷ್ಟ್ರೀಯ ಸರಾಸರಿಯ ಅರ್ಧಕ್ಕಿಂತಲೂ ಕಡಿಮೆ ಸಂಖ್ಯೆಯಲ್ಲಿರುವ (ಸುಮಾರು ಶೇ. 8) ಗುಜರಾತಿನ ದಲಿತರು ಆಗೊಮ್ಮೆ ಈಗೊಮ್ಮೆ ಬಂಡಾಯ ಎದ್ದಿದ್ದಾರಾದರೂ ನಿರಂತರವಾದ ಪ್ರತಿರೋಧ ಚಳವಳಿಯೊಂದನ್ನು ಕಟ್ಟಲು ಇದುವರೆಗೆ ಸಾಧ್ಯವಾಗಿರಲಿಲ್ಲ. ಆದರೆ ಇದೀಗ ರಾಷ್ಟ್ರೀಯ ಮಟ್ಟದಲ್ಲಿ ಅಭೂತಪೂರ್ವ ಬೆಂಬಲ ಪಡೆದುಕೊಂಡಿರುವ ಉನಾ ಚಳವಳಿ ಆ ಕೊರತೆಯನ್ನು ತುಂಬುವಂತೆ ತೋರುತ್ತಿದೆ. ಕೇಸರಿಪಡೆಗಳ ಕಲ್ಲು ತೂರಾಟ ಮತ್ತಿತರ ರೀತಿಯ ಕಿರುಕುಳ, ಪ್ರತಿರೋಧಗಳನ್ನು ದಿಟ್ಟವಾಗಿ ಎದುರಿಸಿ ಮುಂದುವರಿದ ‘ಚಲೋ ಉನಾ’ ಮೆರವಣಿಗೆ ಯಶಸ್ವಿಯಾಗಿ 81 ಕಿ.ಮೀ. ಕ್ರಮಿಸಿ ಆಗಸ್ಟ್ 15ರಂದು ಉನಾದಲ್ಲಿ ಬೃಹತ್ ಮಹಾಸಭೆಯೊಂದಿಗೆ ಮುಕ್ತಾಯಗೊಂಡಿದೆ. ದಲಿತರ ಈ ಐತಿಹಾಸಿಕ ಹೋರಾಟ ಕಸುವು ಕಳೆದುಕೊಳ್ಳದೆ ಮುಂದುವರಿಯಲಿ, ಇನ್ನಷ್ಟು ಶಕ್ತಿಯುತವಾಗಿ ದೇಶದುದ್ದಗಲಕ್ಕೂ ವ್ಯಾಪಿಸಲಿ ಎಂದು ಆಶಿಸೋಣ.
(ಆಧಾರ: 12.8.2016ರ ಡೆಕ್ಕನ್ ಹೆರಾಲ್ಡ್ ನಲ್ಲಿ ಆನಂದ ತೇಲ್ತುಂಬ್ಡೆ ಲೇಖನ; ಮಂಕು ಬೂ(ಮೋ)ದಿ)

     ದಲಿತ ದೌರ್ಜನ್ಯ
2014ರ ಅಂಕಿಅಂಶಗಳು:
ಗೋವಾ (ಬಿಜೆಪಿ) ಶೇ. 66.8
ರಾಜಸ್ಥಾನ (ಬಿಜೆಪಿ) ಶೇ. 65.7
ಆಂಧ್ರ (ಬಿಜೆಪಿ ಮಿತ್ರಪಕ್ಷ ಟಿಡಿಪಿ) ಶೇ. 47.6
ಗುಜರಾತ್ (ಬಿಜೆಪಿ) ಶೇ. 27.7

ಉತ್ತರ ಪ್ರದೇಶ ಶೇ. 19.5 2013ರ ಅಂಕಿಅಂಶಗಳು:
ಗುಜರಾತ್ ಶೇ. 29.21 (ರಾಷ್ಟ್ರೀಯ ಸರಾಸರಿಗಿಂತ ಶೇ. 16.95 ಹೆಚ್ಚು)
ಉತ್ತರ ಪ್ರದೇಶ ಶೇ. 15 (ರಾಷ್ಟ್ರೀಯ ಸರಾಸರಿಗಿಂತ ಕಡಿಮೆ)

2012ರ ಅಂಕಿಅಂಶಗಳು:

ಗುಜರಾತ್ ಶೇ. 25.23 (ರಾಷ್ಟ್ರೀಯ ಸರಾಸರಿಗಿಂತ ಶೇ. 19.85 ಹೆಚ್ಚು) ಉತ್ತರ ಪ್ರದೇಶ ಶೇ. 17.16 (ರಾಷ್ಟ್ರೀಯ ಸರಾಸರಿಗಿಂತ ಕಡಿಮೆ)

Writer - ಸುರೇಶ್ ಭಟ್, ಬಾಕ್ರಬೈಲ್

contributor

Editor - ಸುರೇಶ್ ಭಟ್, ಬಾಕ್ರಬೈಲ್

contributor

Similar News