ಬೆಟಗೇರಿ ‘ಆನಂದ ಕಂದ’ ಸ್ಮಾರಕ ಭವನ ನನೆಗುದಿಗೆ...

Update: 2016-08-25 19:08 GMT

‘ಆನಂದ ಕಂದ’ ಎಂದೇ ಖ್ಯಾತರಾಗಿದ್ದ ಕನ್ನಡ ಸಾರಸ್ವತ ಲೋಕದ ದಿಗ್ಗಜ ಬೆಟಗೇರಿ ಕೃಷ್ಣ ಶರ್ಮ ಅವರ ಸ್ಮಾರಕ ಭವನ ನಿರ್ಮಾಣ ಕಾರ್ಯ ಸುಮಾರು 16 ವರ್ಷಗಳಿಂದ ನನೆಗುದಿಗೆ ಬಿದ್ದಿದೆ.

ಗೋಕಾಕದ ಪೂರ್ವ ಭಾಗಕ್ಕಿರುವ ಬೆಟಗೇರಿ ಗ್ರಾಮ ಅವರ ಜನ್ಮಸ್ಥಳ. 2000 ನವೆಂಬರ್ 27ರಂದು ಅವರ ಜನ್ಮಶತಮಾನೋತ್ಸವ ಆಚರಣೆ ಇಲ್ಲಿ ವಿಜೃಂಭಣೆಯಿಂದ ನಡೆಯಿತು. ಅಂದು ಗ್ರಾಮದ ಪ್ರಮುಖ ಸ್ಥಳದಲ್ಲಿ ಅವರ ಪುತ್ಥಳಿ ಸ್ಥಾಪಿಸಿ, ಹಿರಿಯ ಚೇತನಕ್ಕೆ ಗೌರವ ಸಲ್ಲಿಸಲಾಯಿತು.

ಸಮಾರಂಭದಲ್ಲಿ ಪಾಲ್ಗೊಂಡಿದ್ದ ಗಣ್ಯರು, ಅಲ್ಲಿ ಸ್ಮಾರಕ ಭವನ ನಿರ್ಮಿಸುವ ಕುರಿತು ಪ್ರಸ್ತಾಪಿಸಿದರು. ಅವರು ಜನಿಸಿದ ಮನೆಯನ್ನು ಸ್ಮಾರಕ ಭವನವನ್ನಾಗಿ ಪರಿವರ್ತಿಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯವರು ಮುಂದಾದರು. ಸ್ಮಾರಕ ಭವನ ನಿರ್ಮಾಣ ಕುರಿತು ಬೆಳಗಾವಿಯ ಅಂದಿನ ಜಿಲ್ಲಾಧಿಕಾರಿ ಅತುಲ್ ಕುಮಾರ ತಿವಾರಿ ಅವರು ಕೃಷ್ಣ ಶರ್ಮರ ವಂಶಸ್ಥರ ಜೊತೆ ಚರ್ಚೆ ನಡೆಸಿದರು. ಆದರೆ ಇಲ್ಲಿಯವರೆಗೂ ಭವನ ನಿರ್ಮಾಣ ಕುರಿತು ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಇದಕ್ಕೆಲ್ಲ ಸರಕಾರದ ನಿರ್ಲಕ್ಷ್ಯವೇ ಕಾರಣ ಎಂಬುದು ಗ್ರಾಮಸ್ಥರ ಆಕ್ರೋಶ.

ವಂಶಸ್ಥರ ಒಪ್ಪಿಗೆ:  ಭವನ ನಿರ್ಮಾಣಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಿ, ವಂಶಸ್ಥರ ಒಪ್ಪಿಗೆ ಪತ್ರ ನೀಡಿ ಈಗ ಸುಮಾರು ವರ್ಷಗಳೇ ಗತಿಸಿದರೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಈ ಸ್ಮಾರಕ ಭವನದ ಕಟ್ಟಡ ನಿರ್ಮಾಣದ ಕುರಿತು ತಲೆಕೆಡಿಸಿಕೊಳ್ಳುತ್ತಿಲ್ಲ. ಕೃಷ್ಣ ಶರ್ಮರ ಮನೆ ಇರುವ ಸುಮಾರು 20 ಗುಂಟೆ ಜಾಗದಲ್ಲಿ ಗಿಡ-ಗಂಟಿಗಳು ಬೆಳೆದಿದ್ದು, ಪಾಳುಬಿದ್ದಿದೆ.

ಇನ್ನಾದರೂ ಸರಕಾರ ಸ್ಮಾರಕ ಭವನ ನಿರ್ಮಿಸಲು ಮುಂದಾಗಬೇಕು. ಇಲ್ಲದಿದ್ದರೆ ಹೋರಾಟಕ್ಕೆ ಇಳಿಯ ಬೇಕಾದೀತು ಎಂದು ಸ್ಥಳೀಯ ಹಾಗೂ ಜಿಲ್ಲೆಯ ಕನ್ನಡ ಪರ ಸಂಘಟನೆಗಳು ಎಚ್ಚರಿಸಿವೆ.

‘ಬೇಂದ್ರೆ ಭವನ’ ಮಾದರಿಯಲ್ಲಿ...

ಧಾರವಾಡದಲ್ಲಿರುವ ‘ಬೇಂದ್ರೆ ಭವನ’ ಮಾದರಿಯಲ್ಲಿ ಸರಕಾರ ಬೆಟಗೇರಿಯಲ್ಲಿ ಸ್ಮಾರಕ ನಿರ್ಮಿಸಲು ಆದಷ್ಟು ಬೇಗ ಕ್ರಮ ತೆಗೆದುಕೊಳ್ಳಬೇಕು.

-ರಾಘವೇಂದ್ರ ಪಾಟೀಲ, ಅಧ್ಯಕ್ಷರು,

ಡಾ. ಬೆಟಗೇರಿ ಕೃಷ್ಣಶರ್ಮ ಸ್ಮಾರಕ ಪ್ರತಿಷ್ಠಾನ,

ಬೆಳಗಾವಿ

ಶೀಘ್ರದಲ್ಲಿಯೇ ನಿರ್ಮಾಣ

ಸುಸಜ್ಜಿತ ಸ್ಮಾರಕ ಭವನ ನಿರ್ಮಾಣ ಕುರಿತು ಸಂಬಂಧಪಟ್ಟ ಸಚಿವರೊಂದಿಗೆ ಮಾತನಾಡಿ, ಶೀಘ್ರದಲ್ಲಿಯೇ ಭವನ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುತ್ತೇನೆ.

-ಬಾಲಚಂದ್ರ ಜಾರಕಿಹೊಳಿ,

ಶಾಸಕರು, ಅರಭಾವಿ

Writer - ಕೆ.ಶಿವು ಲಕ್ಕಣ್ಣವರ

contributor

Editor - ಕೆ.ಶಿವು ಲಕ್ಕಣ್ಣವರ

contributor

Similar News