ದೀನ ದುರ್ಬಲರ ಸಾಕ್ಷಿ ಪ್ರಜ್ಞೆ- ಮಹಾಶ್ವೇತಾ ದೇವಿ

Update: 2016-08-31 17:30 GMT

ದೀನ ದುರ್ಬಲರ ಏಳಿಗೆಯ ಹಂಬಲದಲ್ಲಿಯೇ ತನ್ನ ಬದುಕಿನ ಅರ್ಥಗಳನ್ನು ಹುಡುಕಿದ ೀಮಂತ ಚಿಂತಕಿ, ಲೇಖಕಿ ಬಂಗಾಳದ ಮಹಾಶ್ವೇತಾ ದೇವಿ ಇತ್ತೀಚೆಗೆ ನಿಧನ (ಜುಲೈ 28, 2016)ರಾದಾಗ ಉಡುಪಿಯ ಚಿತ್ರ ಸಮಾಜ ಅವರ ಬಗ್ಗೆ ಶ್ರದ್ಧಾಂಜಲಿ ಏರ್ಪಡಿಸಲು ಅವರ ಖ್ಯಾತ ಕಾದಂಬರಿ ‘ಹಜಾರ್ ಚೌರಾಸಿ ಕಿ ಮಾ’ (1084ರ ತಾಯಿ) ಆಧಾರದ ಚಿತ್ರ ಪ್ರದರ್ಶನ ಮಾಡಿ ತಮ್ಮ ಗೌರವಾರ್ಪಣೆ ಸಲ್ಲಿಸಿತು.

ಸಾಹಿತ್ಯ ಮುಖ್ಯವಾಗಿ ಹೊರ ಜಗತ್ತನ್ನು ತನ್ನದೇ ದೃಷ್ಟಿಯಿಂದ ಕಂಡು ಅನುಭವಕ್ಕೆ ದಕ್ಕಿದ ಸಂವೇದನೆಯನ್ನು ತನ್ನದೇ ಆದ ನಿರೂಪಣೆಯ ಮಾಧ್ಯಮದ ಮೂಲಕ ನಿರ್ಮಿಸುವ ಒಂದು ಸೃಷ್ಟಿಕ್ರಿಯೆ. ಅದನ್ನೇ ದೃಶ್ಯ ಮಾಧ್ಯಮದ ಮೂಲಕ ತೆರೆಯಲ್ಲಿ ಕಾಣುವಾಗ ದಕ್ಕುವ ಅನುಭವವೇ ಬೇರೆಯದು.
ತನಗೆ ಇನ್ನು ಮಕ್ಕಳು ಬೇಡ ಎಂದು ಗರ್ಭ ತೆಗೆಸಿಕೊಳ್ಳಬೇಕೆಂದರೂ ಸಾಧ್ಯವಾಗದೇ ಹುಟ್ಟಿಕೊಂಡ ಕೊನೆಯ ಮಗನೇ ಬೃತಿ. ಅವನೇ ತಾಯಿಯ ಅಚ್ಛೆಯ ಮಗನಾಗುತ್ತಾನೆ. ಆದರೆ ಮನೆಯಲ್ಲಿ ಅವನು ಯಾರಿಗೂ ಬೇಡದವನು. ಯಾಕೆಂದರೆ ಅವನು ನಕ್ಸಲಬಾರಿ ರೈತಾಪಿ ಚಳವಳಿಯಲ್ಲಿ ಸಕ್ರಿಯನಾಗಿ ತನ್ನದೇ ವಿದ್ಯಾರ್ಥಿಗಳ ಗುಂಪನ್ನು ಕಟ್ಟಿಕೊಂಡವನು. ವ್ಯವಸ್ಥೆಯ ಕ್ರೌರ್ಯದ ವಿರುದ್ಧ ಹೋರಾಡುವವನಾಗುತ್ತಾನೆ. ಮಹಾಶ್ವೇತಾ ದೇವಿಯಂತಹ ಲೇಖಕಿಯ ಪ್ರತಿಭೆ ದೇಶ-ಕಾಲಾತೀತವೆಂಬುದನ್ನು ನೆನಪಿಸಿಕೊಳ್ಳುವ ಸಲುವಾಗಿಯೇ ಘಾಸಿಗೊಂಡ ಮಾತೃ ಹೃದಯದ ಪರಿಚಯವನ್ನು ಮಾಡಿಕೊಡಬಲ್ಲ ಕಾದಂಬರಿ ಇದು.

ಅದೇ ಕಾದಂಬರಿ ಗೋವಿಂದ ನಿಹಲಾನಿ ದಕ್ಷ ನಿರ್ದೇಶನದಲ್ಲಿ ನಮ್ಮ ಹೃದಯವನ್ನು ಇನ್ನಷ್ಟು ಆರ್ದೃ ನೆಲೆಗೆ ಮುಟ್ಟಿಸುತ್ತದೆ. ಆ ಸಿನೆಮಾದಲ್ಲಿ ಬೃತಿಯ ತಾಯಿಯಾಗಿ ಜಯ ಬಾಧುರಿ ಬಚ್ಚನ್ ಅವರ ನಟನೆ ಅದಕ್ಕೊಂದು ಸಜೀವತೆ ತಂದು ಕೊಟ್ಟಿದೆ. ಒಂದು ಸಿದ್ಧಾಂತಕ್ಕಾಗಿ ಹೋರಾಡಿದ ಯುವ ಪೀಳಿಗೆಯನ್ನೇ ವ್ಯವಸ್ಥೆಯ ಕ್ರೌರ್ಯ ಸದೆ ಬಡಿದು ಸಾಯಿಸಿದಾಗ ‘1084’ ಎಂದು ಹೆಸರಿಟ್ಟ ತನ್ನ ಮಗನ ಶವವನ್ನು ಗುರುತಿಸಲು ಹೋದ ತಾಯಿಯ ಘಾಸಿಗೊಂಡ ಆ ನೋಟದಲ್ಲಿ ಇರುವುದೇನು? ನಿರ್ಲಿಪ್ತ ಶಾಂತತೆಯೇ? ತನ್ನ ಹೃದಯವನ್ನೇ ಇರಿಯುವಂತಹದ್ದೇ? ಒಳಗೇ ಕಂಗೆಟ್ಟು ಉರಿಯುವ ಜ್ವಾಲೆಯೇ ಅಥವಾ ಶೂನ್ಯ ಭಾವವೇ? ಒಟ್ಟಿನಲ್ಲಿ ಏನೊಂದೂ ಹೇಳಿಕೊಳ್ಳಲಾಗದಂತಹದ್ದು. ಒಟ್ಟಿನಲ್ಲಿ ಆ ದೃಶ್ಯ ನಮ್ಮ ನರನಾಡಿಗಳನ್ನು ಮೀಟಿ ಗುಂಗಾಡುವಂತೆ ಹಿಂಬಾಲಿಸಿ ಬೆನ್ನಟ್ಟಿ ಕಾಡುವ ಅದ್ಭುತ ಕತಾನಕ.

ದೀನ ದಲಿತರ ಏಳಿಗೆಯ ಹಂಬಲದಲ್ಲಿಯೇ ಸಾಹಿತ್ಯವನ್ನು ಮೀಸಲಿಟ್ಟ ಒಬ್ಬ ೀಮಂತ ಚಿಂತಕಿ ಹಾಗೂ ಲೇಖಕಿ ಮಹಾಶ್ವೇತಾ ದೇವಿ. ರಾಷ್ಟ್ರದ ಅತ್ಯುನ್ನತ ಜ್ಞಾನಪೀಠ ಪ್ರಶಸ್ತಿ ಸ್ವೀಕರಿಸುವ ಸಂದರ್ಭದಲ್ಲಿ ಹೇಳಿದ ಮಾತುಗಳು- ‘‘ಚರಿತ್ರೆ ನಿರ್ಮಿಸುವವರು ಸಾಮಾನ್ಯ ಜನರು. ತಮ್ಮ ಜಾನಪದ, ಲಾವಣಿ, ದಂತಕತೆಗಳ ಮೂಲಕ ಚರಿತ್ರೆಯನ್ನು ಒಂದು ಪೀಳಿಗೆಯಿಂದ ಇನ್ನೊಂದು ಪೀಳಿಗೆಗೆ ದಾಟಿಸುವವರು ಅವರೇ. ಶೋಷಿಸಲ್ಪಟ್ಟರೂ ಸೋಲನ್ನೊಪ್ಪಿಕೊಳ್ಳದ ಸಾಮರ್ಥ್ಯವಿರುವ ಅಂತಹ ಜನರೇ ನನ್ನ ಬರವಣಿಗೆಯ ಸೂರ್ತಿ’’ ಎಂದು ಹೇಳಿದ ಆ ಮಾತುಗಳು ಬರೇ ತೋರಿಕೆಯದಾಗಿರಲಿಲ್ಲ. ಇದರಿಂದಲೇ 1977ರಲ್ಲಿ ಪ್ರಕಟವಾದ ಅವರ ‘‘ಅರಣ್ಯೇರ ಅಕಾರ್’’ (ಕಾಡಿನ ಹಕ್ಕು) ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ಸಿಕ್ಕ ಕಾದಂಬರಿ ಮೂಲಕ ಭಾರತದ ಅತೀ ಮುಖ್ಯ ಲೇಖಕಿ ಎನಿಸಿಕೊಂಡು ಜನಮಾನಸದಲ್ಲಿ ಉಳಿದಿದ್ದಾರೆ. ಅವರ ಕತೆ, ಕಾದಂಬರಿಗಳಲ್ಲಿ ಸಮಾಜ ಶಾಸದ ದೃಷ್ಟಿಯಿಂದ ಅದರಲ್ಲಿ ಅನೇಕ ಇಣುಕು ನೋಟಗಳಿವೆ. ಆದಿವಾಸಿ, ಬುಡಕಟ್ಟುಗಳೊಡನೆ ಇರುವ ಅವರ ಸಂಪರ್ಕ ವಿಸ್ತೃತ ಶೋಧನೆ ಆಧರಿಸಿಯೇ ಅವರ ಎಲ್ಲಾ ಬರಹಗಳು ರೂಪುಗೊಂಡದ್ದು. ‘‘ಅರಣ್ಯೇರ್ ಅಕಾರ್’’ ರಾಂಚಿಯ ದಕ್ಷಿಣ ಭಾಗದಲ್ಲಿದ್ದ ಕಾಡಿನ ಪ್ರಾಂತಗಳಲ್ಲಿ 1895ರಿಂದ 1900 ವರೆಗೆ ನಡೆದ ಬುಡಕಟ್ಟು ಜನಾಂಗದ ಮಹಾದಂಗೆಯ ಸತ್ಯದರ್ಶನ ಮಾಡಿಸುತ್ತದೆ. ಅವರ ‘ಮಾಟಗಾತಿ’ ಸಣ್ಣ ಕತೆ ವರ್ಣಿಸುವ ರೀತಿ ಮಾರ್ಮಿಕವಾಗಿದೆ. ‘ಬಾಯೆ ಆದವಳು’ (ಮಾಟಗಾತಿ) ಹೋದ ಕಡೆ ಎಲ್ಲಾ ತಾನು ಬರುತ್ತಿ ದ್ದೇನೆಂದು ಸಾರುತ್ತಾ ಹೋಗಬೇಕು. ಅವಳ ಕಣ್ಣು ಯಾರ ಮೇಲಾದರೂ ಬಿದ್ದರೆ ಸಾಕು, ಅವರು ರಕ್ತ ಕಾರಿ ಸಾಯುವುದು ಖಚಿತ. ಆದ್ದರಿಂದ ಅವಳ ಕಣ್ಣಿಗೆ ಯಾರು ಬೀಳದಂತೆ ಅವಳನ್ನು ಸ್ಮಶಾನದಲ್ಲಿ ದಬ್ಬಿದ್ದರು.

ಈ ಕತೆ ಅವಳದೇ ಮಗ, ಮುಗ್ಧ ಹುಡುಗ ಭಗೀರಥನ ಪ್ರಜ್ಞೆಯನ್ನು ಕಂದೀಲನ್ನಾಗಿ ಮಾಡಿ, ಸತ್ತ ಮಕ್ಕಳನ್ನು ಹೂಳುವ ಜಾತಿಯ ಜೀವನದ ಪದರುಗಳನ್ನು ಶೋಸುವ ಕತೆ. ಮಾತೃತ್ವದ ನೆಲೆಗಳು ಹೇಗಿರುತ್ತದೆ ಎಂಬ ಮಾರ್ಮಿಕ ಸತ್ಯವನ್ನು ಬೆತ್ತಲಾಗಿಸುವ ಯಶಸ್ವಿ ಯತ್ನ ಅದು. ಈ ಸ್ಥಿತಿಯ ಪರಿಣಾಮ ನಮ್ಮ ಮುಖ್ಯವಾಹಿನಿಯ ಸಾಹಿತ್ಯದಲ್ಲಿ ಕಂಡು ಬರದ ಧ್ವನಿಗಳು, ಸತ್ವ, ಅವರ ಕತೆ ಕಾದಂಬರಿಗಳಲ್ಲಿ ಕಾಣುತ್ತವೆ. ನಿಜವಾಗಿ ಹೇಳಬೇಕೆಂದರೆ ನಮ್ಮ ಸಮಕಾಲೀನ ಸಾಹಿತ್ಯದಲ್ಲಿ ಇಂತಹ ದೀನ, ದಲಿತರ ನಿರಂತರ ಹೋರಾಟದ ಸಜೀವ ಚಿತ್ರಣಗಳು, ಅವರ ಕನಸು, ಕಾರ್ಪಣ್ಯಗಳು ಅವರ ಜಗತ್ತಿನ ಅಥೆಂಟಿಕ್ ನೋಟ ಇಲ್ಲವೇ ಇಲ್ಲ. ಏನಿದ್ದರೂ ಒಂದಿಷ್ಟು ಹೊರಗಡೆಯಿಂದಲೇ ಗ್ರಹಿಸಿದ ಇಣುಕು ನೋಟಗಳಷ್ಟೇ. ಆದರೆ ಮಹಾಶ್ವೇತಾ ಕತೆ ಹೇಳುವ ಬಗೆ ಅರ್ಥವನ್ನು ಮೀರಿ ಅಂತರಂಗವನ್ನು ತಟ್ಟುವ ಬಗೆಯೇ ಒಂದು ರೀತಿಯ ಬೆರಗು ಮೂಡಿಸುತ್ತದೆ. ಗೌರವ ತರುತ್ತದೆ. ಇದು ಮನುಷ್ಯರನ್ನು ಅಲ್ಲಾಡಿಸಿ ನಮ್ಮನ್ನು ಅಸ್ತಿತ್ವದ ಚಿಂತನೆಗೆ ಹಚ್ಚುವ ರೀತಿ. ಕಾದಂಬರಿಗಳು, ಕತಾ ಸಂಕಲನ, ಮಕ್ಕಳ ಸಾಹಿತ್ಯ ಸೇರಿದಂತೆ ಅವರು ಬರೆದಿರುವ ಪುಸ್ತಕಗಳು ನೂರಕ್ಕೂ ಹೆಚ್ಚು. ವಸ್ತುವಿನ ಆಯ್ಕೆ, ನಿರೂಪಣಾ ವಿಧಾನ ತನ್ನದೇ ಆದ ಕಥನ ಕ್ರಮದಲ್ಲಿ, ಕಟ್ಟುವ ರೀತಿ ವಿಭಿನ್ನವಾಗಿ ಸಾಗುತ್ತದೆ. ಇವರ ಹಿನ್ನೆಲೆಯೂ ಇದಕ್ಕೆ ಕಾರಣವಿರಬಹುದು.

ಹೆಸರಾಂತ ಬೌದ್ಧಿಕ ಶ್ರೀಮಂತ ಕುಟುಂಬದಲ್ಲಿ ಢಾಕಾದಲ್ಲಿ 1926 ಜನವರಿ 14ರಂದು ಇವರು ಹುಟ್ಟಿದ್ದರು. ತಂದೆ ಮನೀಷ್ ಘಾಟಕ್ ಬಂಗಾಲಿಯಲ್ಲೇ ಖ್ಯಾತ ಸಾಹಿತಿ ಹಾಗೂ ಕವಿ, ತಾಯಿ ಲೇಖಕಿ ಹಾಗೂ ತಂದೆಯ ತಮ್ಮ ರಿತ್ವಿಕ್ ಘಾಟಕ್ ಪ್ರತಿಭಾನ್ವಿತ ಚಿತ್ರ ನಿರ್ದೇಶಕ ಮತ್ತು ತಾಯಿಯ ಅಣ್ಣ ಸಚಿನ್ ಚೌಧರಿ ‘‘ಇಕಾನಾಮಿಕ್ಸ್ ಆ್ಯಂಡ್ ಪೊಲಿಟಿಕಲ್ ವೀಕ್ಲಿ’’ ಪತ್ರಿಕೆಯ ಸಂಪಾದಕ ಹಾಗೂ ಸಂಸ್ಥಾಪಕ. 1946ರಲ್ಲಿ ಶಾಂತಿನಿಕೇತನದಿಂದ ಪದವಿ ಪಡೆದು 1947ರಲ್ಲಿ ನಾಟಕಕಾರ ಬಿಜನ್ ಭಟ್ಟಾಚಾರ್ಯ ಅವರನ್ನು ಮದುವೆಯಾದರು. ವರ್ಷದ ನಂತರ ಮಗ ನಬರುಣ ಹುಟ್ಟಿದ. ಸಾಕಷ್ಟು ಏಳು ಬೀಳು ಪಡೆದ ಅವರ ಬದುಕು ನಂತರ 1962ರಲ್ಲಿ ಬಿಜನ್ ಭಟ್ಟಾಚಾರ್ಯರಿಂದ ವಿಚ್ಛೇದನ ಪಡೆದು ಲೇಖಕ ಅಸಿತ್ ಗುಪ್ತಾ ಅವರನ್ನು ಮದುವೆಯಾದರು. ಹದಿನೇಳು ವರ್ಷದ ನಂತರ ಕಲ್ಕತ್ತಾ ವಿಶ್ವವಿದ್ಯಾನಿಲಯದಿಂದ ಇಂಗ್ಲಿಷ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದು ಕಾಲೇಜಿನಲ್ಲಿ ಕೆಲಸ ಮಾಡಿದರು.
ಆ ಕಾಲದಲ್ಲಿನ ಎಡ ಪಂಥದ ಚಳವಳಿಯ ಪ್ರಭಾವ, ಕೋಮುಗಲಭೆಯ ಉದ್ವ್ವಿಗ್ನ ಸ್ಥಿತಿ ಹಾಗೂ 1943ರ ಬಂಗಾಳದ ಭೀಕರ ಕ್ಷಾಮ ಇವೆಲ್ಲವೂ ಮಹಾಶ್ವೇತಾದೇವಿಯ ಮೇಲೆ ಪ್ರಭಾವ ಬೀರಿದ ಕಾರಣದಿಂದಲೇ ಅವರ ಬರಹಗಳಲ್ಲೂ ಶೋಷಣೆ, ಅಸಮಾನತೆ ಹೇಗಿದೆ ಎನ್ನುವುದನ್ನು ಅವರು ಜಾತಿ, ವರ್ಗ ಹಾಗೂ ಲಿಂಗ ಆಧಾರಿತ ಪ್ರಕ್ರಿಯೆಗಳಲ್ಲಿ ಶೋಸಿದ್ದು ಕಂಡು ಬರುತ್ತದೆ.

ಅವರ ವ್ಯಕ್ತಿತ್ವವನ್ನು ಹೀಗೇ ಎಂದು ವಿವರಿಸಲು ಸಾಧ್ಯವಿಲ್ಲ. ಕಾದಂಬರಿಗಳು, ಕತಾ ಸಂಕಲನಗಳು, ಮಕ್ಕಳ ಸಾಹಿತ್ಯ, ನಾಟಕಗಳು, ಅಂಕಣ ಬರಹಗಳು ಹಾಗೇಯೇ ಅನೇಕ ಪತ್ರಿಕೆಗಳ ಸಂಪಾದಕಿ ಆಗಿಯೂ ಕೆಲಸ ಮಾಡಿದ್ದಾರೆ. ಮುಖ್ಯವಾಗಿ ಎಕರೆಗಟ್ಟಲೆ ಲವತ್ತಾದ ಕೃಷಿ ಭೂಮಿಯನ್ನು ಬಂಗಾಲ ಸರಕಾರವು ಕೈಗಾರಿಕಾ ನಿರ್ಮಾಣಕ್ಕೆ ಕಡಿಮೆ ಬೆಲೆಯಲ್ಲಿ ನೀಡಿದಾಗ ಸರಕಾರದ ವಿರುದ್ಧದ ಚಳವಳಿಯಲ್ಲಿ ಮುಂದಾಳುತನ ವಹಿಸಿ ಹೆಚ್ಚಿನ ಕಲಾವಿದರು, ಬರಹಗಾರರು, ರಂಗಕರ್ಮಿಗಳು ಪಾಲ್ಗೊಳ್ಳುವಂತೆ ಮಾಡುವುದರಲ್ಲಿ, ಜನರನ್ನು ಜಾಗೃತಗೊಳಿಸುವಲ್ಲಿ ಅವರೇ ಮುಖ್ಯಪಾತ್ರವಹಿಸುತ್ತಾರೆ. ಈ ಕಾರಣದಿಂದ ಅವರು ಕೇವಲ ಬಂಗಾಳದ ಲೇಖಕಿ ಮಾತ್ರವಲ್ಲ, ಜಾಗತಿಕ ಮಟ್ಟದಲ್ಲಿ ಗುರುತಿಸುವ ಮಹಿಳೆಯೂ ಹೌದು. ಅದಕ್ಕೆ ತಕ್ಕಂತೆ ಅವರಿಗೆ ಸಿಕ್ಕಿದ ಪ್ರಶಸ್ತಿಗಳೂ ಬೇಕಾದಷ್ಟು. ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಮ್ಯಾಗ್ಸೆಸೆ, ಪದ್ಮವಿಭೂಷಣ, ಜ್ಞಾನಪೀಠ ಪ್ರಶಸ್ತಿ, ರಂಗಭೂಷಣ ಪ್ರಶಸ್ತಿ, ಸಾಹಿತ್ಯ ಬ್ರಹ್ಮ ಪ್ರಶಸ್ತಿ ಕೆಲವು.

ಅವರನ್ನು ಭೇಟಿ ಮಾಡುವ ಒಂದು ಅವಕಾಶ ನನಗೂ ಸಿಕ್ಕಿತು. ಇದು ಸುಮಾರು ಇಪ್ಪತ್ತು ವರ್ಷಗಳ ಹಿಂದೆ. ಆಗ ಬೆಂಗಳೂರಿನ ‘ಪೈಪಲ್ ಟ್ರಿ’ (ಜಿಚ್ಝ ಠ್ಟಿಛಿಛಿ) ಅನ್ನುವ ಸಿದ್ಧಾರ್ಥ ಅನ್ನುವವರು ಸ್ಥಾಪಿಸಿದ ಸಂಘಟನೆಯಲ್ಲಿ ಕೋಮು ಸೌಹಾರ್ದ ಕುರಿತು ಒಂದು ವೈಚಾರಿಕ ಸಂಕಿರಣದಲ್ಲಿ ವಿವಿಧ ರಾಜ್ಯಗಳ ಸಾಹಿತಿಗಳು, ಪತ್ರಕರ್ತರು, ವಿಚಾರವಾದಿಗಳು, ಧಾರ್ಮಿಕ ಮುಖಂಡರು ಭಾಗವಹಿಸಿದ್ದರು. ಅಂತಹ ಗೋಷ್ಠಿಯಲ್ಲಿ ನಾನೂ ಭಾಗವಹಿಸಿದ್ದೆ. ಆಗ ಬಂಗಾಳದ ಜರ್ನಲಿಸ್ಟ್ ಗೀತೇಶ್ ಶರ್ಮ ಅವರು ಮಹಾಶ್ವೇತಾ ದೇವಿ ಬಗ್ಗೆ ನನ್ನೊಡನೆ ಚರ್ಚಿಸಿದ್ದರು. ಆಗ ನಾನು ಅವರನ್ನು ಭೇಟಿ ಮಾಡಬೇಕೆಂಬ ಅಭಿಲಾಷೆ ವ್ಯಕ್ತಪಡಿಸಿದಾಗ ಕಲ್ಕತ್ತಾಗೆ ಬರಲು ಆಮಂತ್ರಣವಿತ್ತಿದ್ದರು. ಆಗ ನಾನು ಮತ್ತು ನನ್ನ ಸೋದರಿ ಶಾರದಾ ಕಲ್ಕತ್ತಾಗೆ ಪ್ರಯಾಣ ಬೆಳೆಸಿದಾಗ ಅಲ್ಲಿ ನಮಗೆ ಯಾವ ತೊಂದರೆಯೂ ಆಗದಂತೆ ಎಲ್ಲಾ ರೀತಿಯ ಅನುಕೂಲತೆಗಳನ್ನು ತಮ್ಮ ಮನೆಯಲ್ಲೇ ಕಲ್ಪಿಸಿಕೊಟ್ಟಿದ್ದರಲ್ಲದೆ ಮಹಾಶ್ವೇತಾ ದೇವಿಯರನ್ನು ಭೇಟಿ ಮಾಡುವ ಅವಕಾಶವನ್ನು ವ್ಯವಸ್ಥೆ ಮಾಡಿದ್ದರು. ಕರ್ನಾಟಕದ ಮಹಿಳೆ ಒಬ್ಬಳು ಅವರನ್ನು ಭೇಟಿ ಮಾಡಲೆಂದೇ ಕಲ್ಕತ್ತಾಗೆ ಬಂದಿದ್ದಾರೆಂದು ಅವರಿಗೆ ತುಂಬಾ ಸಂತೋಷ ಕೊಟ್ಟಿತ್ತು. ಅವರು ನನ್ನ ಬೆನ್ನು ಸವರಿ ಏನೇನು ಮಾತನಾಡಿದರು ಅನ್ನುವುದೂ ಈಗ ನೆನಪಿನಲ್ಲಿ ಉಳಿದಿಲ್ಲ. ಹಿಂದಿಯಲ್ಲಿ ಮಾತುಕತೆ ಆದರೂ ಅವರ ನಡೆ ನುಡಿ ಸರಳ. ಹೆಚ್ಚಾಗಿ ಬರಹಗಾರರ ಬದ್ಧತೆ ಬಗ್ಗೆಯೇ ಇತ್ತು.

ನಾನು ಬಹಳ ಸಂಕೋಚದಿಂದಲೇ ನಿಮಗೆ ದೇವರಲ್ಲಿ ನಂಬಿಕೆ ಇದೆಯೇ ಎಂದು ಕೇಳಿದ್ದೆ. ಅವಕಾಶ ಹೀನರೇ ನನಗೆ ದೇವರು ಎಂದಿದ್ದರು. ‘‘ಮಾನವರು ಕಲ್ಲಾಗಬಾರದು. ಮಾನವರು ಕಲ್ಲಾದರೆ ಪಶು ಪಕ್ಷಿಗಳು ಕಲ್ಲಾಗಿ ಬಿಡುತ್ತವೆ. ಗಿಡಮರಗಳೂ ಕಲ್ಲಾಗಿ ಬಿಡುತ್ತವೆ’’ ಎಂದು ಹೇಳಿದ್ದರು. ಆಗ ಅವರ ಆ ಮಾತುಗಳ ಪರಿಕಲ್ಪನೆ ಅರ್ಥವಾಗಿರಲಿಲ್ಲ. ನಾವು ಮಾತನಾಡುತ್ತಿರುವಾಗಲೇ ಅವರಿಗಾಗಿ ಹೊರಗೆ ಹಳ್ಳಿಗಳಿಂದ ಬಂದ ಜನರು ಕಾಯುತ್ತಿದ್ದರು. ಬುಡಕಟ್ಟಿನವರ ಪಾಲಿಗೆ, ಸಹಾಯದ ಅಗತ್ಯವಿರುವವರಿಗೆ ಅವರ ಮನೆ ಸದಾ ತೆರೆದ ಬಾಗಿಲು. ಈ ಅಸ್ಮಿತೆ ಅವರ ಬದುಕು ಮತ್ತು ಕೃತಿಯಲ್ಲಿ ಕಾಣಿಸುತ್ತದೆ. ಅವರ ಬದುಕೇ ನಮಗೆ ಮಾರ್ಗದರ್ಶನದಂತೆ. ಅವರ ಮಾತಿನಲ್ಲಿ ಪ್ರೀತಿ, ವಿಶ್ವಾಸ, ಭರವಸೆ ತುಂಬಿ ತುಳುಕುತ್ತಿದ್ದವು. ಈ ಭೇಟಿ ಕೇವಲ ಅವರ ಬಗ್ಗೆ ಮಾತ್ರವಲ್ಲ ಬಂಗಾಲಿ ಜನರನ್ನೆಲ್ಲಾ ಗೌರವಿಸುವಂತೆ ಮಾಡಿತ್ತು.

Writer - ಕೆ. ತಾರಾ ಭಟ್

contributor

Editor - ಕೆ. ತಾರಾ ಭಟ್

contributor

Similar News