ಉಗ್ರ ರಾಷ್ಟ್ರೀಯತೆಯ ಪ್ರದರ್ಶನ ಫ್ಯಾಶಿಸಂನ ಲಕ್ಷಣ
ದಿನಗಳೆದಂತೆ ಮೋದಿ ಸರಕಾರದ ‘ಅಭಿವೃದ್ಧಿ’ಯ ಮುಖವಾಡ ಕಳಚುತ್ತ ಬರುತ್ತಿದೆ. ಪ್ಯಾಶಿಸಂನ ಕರಾಳ ಮುಖ ಗೋಚರವಾಗತೊಡಗಿದೆ. ಭಾರತದ ಪ್ರಜಾತಾಂತ್ರಿಕ ಸಂಸ್ಥೆಗಳು ಒಂದೊಂದಾಗಿ ಹಿಂದೂ ರಾಷ್ಟ್ರವಾದಿಗಳ ಕಪಿಮುಷ್ಟಿಯೊಳಗೆ ಸೇರುತ್ತಿವೆ. ಹೆಚ್ಚಿನ ಮಾಧ್ಯಮಗಳು ಕಾರ್ಪೊರೇಟುಗಳ ನಿಯಂತ್ರಣ ಅಥವಾ/ಮತ್ತು ಕೇಸರೀಕರಣಕ್ಕೆ ತುತ್ತಾಗಿ ಮೋದಿ ಸರಕಾರದ ವಕ್ತಾರರಂತಾಗಿವೆ. ಮುಸೊಲಿನಿ, ಹಿಟ್ಲರ್‌ಗಳ ಕರಿಷರಟು, ಒವಿಆರ್‌ವಿ, ಕಂದುಷರಟು ಮಾದರಿಯ ಖಾಸಗಿ ಕಾವಲು ಪಡೆಗಳು ದೇಶಾದ್ಯಂತ ದೊಂಬಿ ಕಾರ್ಯಾಚರಣೆಗಳನ್ನು ನಡೆಸತೊಡಗಿವೆ. ಎಲ್ಲೆಡೆಗಳಲ್ಲಿ ಗೋಪ್ರೇಮ, ದೇಶಪ್ರೇಮಗಳ ಅಟ್ಟಹಾಸ ಮುಗಿಲುಮುಟ್ಟಿದೆ. ಭಿನ್ನಮತದ ಹತ್ತಿಕ್ಕುವಿಕೆ, ರಾಷ್ಟ್ರಗೀತೆಗೆ ಕಡ್ಡಾಯವಾಗಿ ಎದ್ದುನಿಲ್ಲಬೇಕೆಂಬ ಹುಕುಂ, ಭಗವದ್ಗೀತೆ, ಸಂಸ್ಕೃತಗಳ ಕಲಿಕೆ ಇತ್ಯಾದಿಗಳನ್ನು ಒತ್ತಾಯಪೂರ್ವಕವಾಗಿ ಹೇರಲಾಗುತ್ತಿದೆ. ‘‘ಭಾರತ್ ಮಾತಾ ಕಿ ಜೈ’’ ಎನ್ನದವರು, ಸೇನಾಪಡೆಗಳಿಂದ ಮಾನವಹಕ್ಕು ಉಲ್ಲಂಘನೆಗಳ ವಿಷಯ ಎತ್ತುವವರು, ಪಾಕಿಸ್ತಾನಿ ಜನರೊಂದಿಗೆ ಉತ್ತಮ ಬಾಂಧವ್ಯ ಬಯಸುವ ರಮ್ಯಾ ಮೊದಲಾದವರಿಗೆಲ್ಲಾ ದೇಶದ್ರೋಹದ ಹಣೆಪಟ್ಟಿ ಹಚ್ಚಲಾಗುತ್ತಿದೆ. ಪಾಕಿಸ್ತಾನಿ ಜನರ ವಿಷಯದಲ್ಲಿ ನನ್ನ ವೈಯಕ್ತಿಕ ಅನುಭವವೂ ತುಂಬಾ ಒಳ್ಳೆಯದಾಗಿತ್ತು. 1989ರಲ್ಲಿ ನಾನು ನೌಕರಿ ಮಾಡುತ್ತಿದ್ದ ಸಂಸ್ಥೆಯ ವತಿಯಿಂದ ಒಂದು ಡೀಸೆಲ್ ಚಾಲಿತ ವಿದ್ಯುತ್ ಘಟಕದ ನಿರ್ಮಾಣ ಕಾರ್ಯ ನಿಮಿತ್ತ ಕರಾಚಿಗೆ ಹೋಗುವ ಸಂದರ್ಭ ಸಿಕ್ಕಿತ್ತು. ಅಂದು ಒಂದು ತಿಂಗಳ ಕಾಲ ಅಲ್ಲಿನ ಜನರೊಂದಿಗೆ ಕಳೆದ ದಿನಗಳು ನಿಜಕ್ಕೂ ಅವಿಸ್ಮರಣೀಯವಾಗಿವೆ. ಆ ಸ್ನೇಹಮಯ ಗಳಿಗೆಗಳನ್ನು ನಾನು ಇಂದಿಗೂ ಸ್ಮರಿಸಿಕೊಳ್ಳುತ್ತೇನೆ. ಇರಲಿ. ಇಂದು ‘‘ಸ್ವರ್ಗ, ನರಕ’’ ‘‘ದೇಶಪ್ರೇಮ, ದೇಶದ್ರೋಹ’’ ಇತ್ಯಾದಿ, ಇತ್ಯಾದಿ ಚರ್ಚೆಗಳು ಪೊಲೀಸ್ ಠಾಣೆ, ಕೋರ್ಟು ಕಚೇರಿಗಳಲ್ಲಿ ಪರ್ಯಾವಸಾನ ಆಗುತ್ತಿರುವುದನ್ನು ಒಳಗೊಂಡಂತೆ ದೇಶದಲ್ಲಿ ನಡೆಯುತ್ತಿರುವ ಆತಂಕಕಾರಿ ಬೆಳವಣಿಗೆಗಳ ಬಗ್ಗೆ ಖ್ಯಾತ ಸಮಾಜ ವಿಜ್ಞಾನಿ ಶಿವ್ ವಿಶ್ವನಾಥನ್ ಏನು ಹೇಳುತ್ತಿದ್ದಾರೆಂದು ನೋಡೋಣ. 26.8.2016ರ ದ ಹಿಂದು ಪತ್ರಿಕೆಯಲ್ಲಿ ಪ್ರಕಟವಾಗಿರುವ ಆ ಲೇಖನದ ಯಥಾವತ್ ಅನುವಾದ ಇಲ್ಲಿದೆ: ಒಬ್ಬ ಶ್ರೇಷ್ಠ ವಿದ್ವಾಂಸರೊಮ್ಮೆ ‘ದೇಶಭಕ್ತ್ತಿ ಎಂಬುದು ಪುಂಡರ ಕೊನೆಯ ಆಸರೆಯಾಗಿದೆ’ ಎಂದು ಹೇಳಿದ್ದರು. ಆತ ಇನ್ನೂ ನೂರು ವರ್ಷ ಬದುಕಿದ್ದಿದ್ದರೆ ‘‘ರಾಷ್ಟ್ರ ಪ್ರಭುತ್ವ ಎನ್ನುವುದು ಆತ್ಮವಿಶ್ವಾಸವಿರದ ಸರ್ವಾಕಾರಿ ಪ್ರವೃತ್ತಿಯವರ ಮೊದಲನೆ ಬಿಡಾರ’’ ಎಂಬ ಇನ್ನೊಂದು ವಾಕ್ಯವನ್ನು ಸೇರಿಸಬಹುದಿತ್ತು. ಇಂದು ರಾಷ್ಟ್ರ ಪ್ರಭುತ್ವ ಒಂದು ಪೊಲೀಸ್ ಕಾರ್ಯಾಚರಣೆಯಾಗಿ ಪರಿಣಮಿಸಿದೆ. ಅದು ಪೌರತ್ವ ಕುರಿತ ಅಕೃತ ಅರ್ಥ ನಿರೂಪಣೆಯ ತಾಳಕ್ಕೆ ತಕ್ಕಂತೆ ಹೆಜ್ಜೆಹಾಕದ ವಿಚಾರಧಾರೆಗಳಿಗೆ, ವರ್ಗಗಳಿಗೆ ಕತ್ತರಿ ಪ್ರಯೋಗ ಮಾಡುತ್ತ್ತಿದೆ.
ರಾಷ್ಟ್ರ ಪ್ರಭುತ್ವ ಒಂದು ವರ್ತುಲಾಕಾರದ ಸೆರೆಮನೆಯಾಗಿ, ವಿಚಾರಗಳನ್ನು ನಿಯಂತ್ರಿಸುವ ಸಂಸ್ಥೆಯಾಗಿ ಪರಿಣಮಿಸಿದೆ. ವಿಚಿತ್ರವೆಂದರೆ ಈ ಹಂತವನ್ನು ಇಂದು ಚುನಾವಣೆಯ ಹಕ್ಕುಗಳಿರುವ ಪ್ರಜಾಸತ್ತೆಯೊಳಗಿನ ವಿದ್ಯಮಾನದ ಒಂದು ಭಾಗವಾಗಿ ನೋಡಬೇಕಾಗುತ್ತದೆ. ಭಾರತದಲ್ಲಿ ಸಂಖ್ಯಾಬಲವಾದ ಮತ್ತು ಅಬ್ಬರದ ದೇಶಭಕ್ತ್ತಿಯ ಉಗ್ರ ರಾಷ್ಟ್ರೀಯತೆಗಳು ಒಟ್ಟು ಸೇರಿಕೊಂಡು ಎರಡು ಪ್ರತ್ಯೇಕವಾದ ನಿಯಂತ್ರಣ ಕಾರ್ಯಾಚರಣೆಗಳನ್ನು ನಡೆಸುತ್ತಿವೆ. ಸ್ಥಳೀಯ ಮಟ್ಟದಲ್ಲಿ ಬಜರಂಗ ದಳದಂತಹ ಕಾವಲು ಪಡೆಗಳು ಸಮಾಜವನ್ನು ನಿಯಂತ್ರಿಸುತ್ತ ಉಡುಗೆತೊಡುಗೆಯ ಪರಿಭಾಷೆಯಲ್ಲಾಗಲಿ ಅಥವಾ ಕಲೆ, ಸಿನೆಮಾ ರಂಗಗಳ ಸೃಜನಶೀಲತೆಯ ಪರಿಭಾಷೆಯಲ್ಲಾಗಲಿ ಲೈಂಗಿಕತೆಗೆ ಯಾವುದೇ ಅಪಾಯ ತಟ್ಟದಂತೆ ಕಾವಲು ಕಾಯುತ್ತವೆ. ಹೀಗೆ ಸ್ಥಳೀಯ ಮಟ್ಟದಲ್ಲಿ ಲೈಂಗಿಕತೆಯ ನಿಯಂತ್ರಣ ನಡೆದರೆ ರಾಷ್ಟ್ರ ಮಟ್ಟದಲ್ಲಿ ವಿಚಾರ ನಿಯಂತ್ರಣ ನಡೆಯುತ್ತದೆ. ಅಮೆರಿಕದಲ್ಲಿ ಕು ಕ್ಲಕ್ಸ್ ಕ್ಲಾನ್ ಎಂಬ ಸಂಘಟನೆ ಜನಾಂಗದ ಸಲುವಾಗಿ ಹುಟ್ಟಿದ್ದರೆ ಭಾರತದಲ್ಲಿ ಸೃಷ್ಟಿಸಲಾಗುತ್ತಿರುವ ಕಾವಲು ಪಡೆಗಳ ಜಾಲ ರಾಷ್ಟ್ರದ ಸಲುವಾಗಿದೆ.
ಪೌರತ್ವ ಮತ್ತು ವಿಚಾರ ನಿಯಂತ್ರಣ
ದೇಶಪ್ರೇಮಿ ಮತ್ತು ಕದನಶೀಲ ದೇಶಾಭಿಮಾನಿ ಗುಂಪುಗಳು ನಡೆಸುವ ಕಾವಲು ಕಾಯುವಿಕೆಗೆ ಅಕೃತ ಅನುಮತಿ ದೊರೆತಿದೆ. ಇವರ ಪ್ರಕಾರ ಉಡಿಗೆತೊಡಿಗೆ ಮೇಲೆ ಮಾತ್ರವಲ್ಲ ಮನಸ್ಸಿನ ಮೇಲೂ ನಿರ್ಬಂಧ ಹೊಂದಿರುವವನೆ ಉತ್ತಮ ಪ್ರಜೆ. ಸಂಖ್ಯಾಬಲದ ಉಗ್ರ ರಾಷ್ಟ್ರೀಯತೆ ಸೃಷ್ಟಿಸುವ ಹೊಸ ಬಗೆಯ ವಿಚಾರ ನಿಯಂತ್ರಣದಡಿ ಅನ್ಯ ಮಾರ್ಗೀಯರಿಗೆ, ಭಿನ್ನಾಭಿಪ್ರಾಯ ಉಳ್ಳವರಿಗೆ, ಅಂಚಿನಲ್ಲಿರುವವರಿಗೆ ಮತ್ತು ಅಲ್ಪಸಂಖ್ಯಾತಪರರಿಗೆ ರಾಷ್ಟ್ರ ಪ್ರಭುತ್ವದ ಕೂಟಗಾಯನಕ್ಕೆ ಸೇರಿಕೊಳ್ಳುವುದು ಬೇರೆ ಥರವೆಂದು ಅನಿಸುತ್ತದೆ. ನೌಕರಿ, ಭದ್ರತೆ, ಸಮುದಾಯ ಕುರಿತ ಆತಂಕಗಳು ಸೃಷ್ಟಿಸುವ ಭೇದ್ಯತೆಯನ್ನು, ಆ ದೌರ್ಬಲ್ಯವನ್ನು ರಾಷ್ಟ್ರ ಪ್ರಭುತ್ವ ತನ್ನ ಸ್ವಪ್ರಯೋಜನಕ್ಕೆ ಬಳಸಿಕೊಳ್ಳಲು ಸಾಧ್ಯ ಎಂಬುದನ್ನು ಬಿಜೆಪಿಯಂತಹ ಪಕ್ಷಗಳು ಅರಿತಿವೆ. ಹೀಗೆ ತನಗಿಂತ ಭಿನ್ನವಾದ ಅಭಿಪ್ರಾಯ ಇರುವವರೆಲ್ಲ ದೇಶದ್ರೋಹಿಗಳಾಗುತ್ತಾರೆ. ಸ್ವಾತಂತ್ರ್ಯ ಚಳವಳಿಯ ಕಾಲದಲ್ಲಿ ನಾನಾ ವಿಚಾರಧಾರೆಗಳ ಒಗ್ಗೂಡುವಿಕೆ ಆಗಿದ್ದ ರಾಷ್ಟ್ರೀಯತೆ ಇಂದು ಸಂಪೂರ್ಣವಾಗಿ ಬದಲಾಗಿ ಏಕರೂಪದ ರಾಷ್ಟ್ರಪ್ರಭುತ್ವ ಆಗಿದೆ. ಪೌರತ್ವ ಎನ್ನುವುದು ವಿಚಾರ ನಿಯಂತ್ರಣದ ಪೂರ್ವಭಾವಿ ಕಲ್ಪನೆಯಾಗುತ್ತ್ತಿದೆ. ಅದರಲ್ಲಿ ಸ್ವಲ್ಪವ್ಯತ್ಯಾಸವಾದರೂ ಜನ ಗುಂಪುಗೂಡುತ್ತಾರೆ, ಗಲ್ಲಿಗೇರಿಸುವ ಪಡೆಗಳು ಹಾಜರಾಗುತ್ತವೆ. ಈ ಬರಡು ಮನೋಭಾವದ ರಾಷ್ಟ್ರೀಯತೆಯಿಂದಾಗಿ ಪ್ರಜಾಸತ್ತೆಯು ಪ್ರಜಾಸತ್ತಾತ್ಮಕ ಜೀವನಕ್ರಮಕ್ಕೆ ಅಪಾಯಕಾರಿಯಾಗಿ ಪರಿಣಮಿಸುತ್ತ್ತಿದೆ. ಇಲ್ಲಿಗೆ ವ್ಯಂಗ್ಯ ವಸ್ತುತಃ ಪೂರ್ತಿಗೊಂಡಂತೆ.
ಅತ್ತ ನರೇಂದ್ರ ಮೋದಿ ಆಡಳಿತದ ಸಮಸ್ಯೆಗಳಲ್ಲಿ ಮುಳುಗಿರುವ ಮುತ್ಸದ್ದಿಯಂತೆ ನಟಿಸುತ್ತಾ ಇರುವಾಗ ಇತ್ತ ಮತದಾರರೆದುರಿನ ಮೋದಿಯ ಪ್ರತಿರೂಪ ಅಮಿತ್ ಶಾ ಈ ಥಟ್ಟನೆ ಉಕ್ಕೇರುವ ಉಗ್ರ ರಾಷ್ಟ್ರೀಯತೆಯ ಸಂಚಾಲಕನಾಗಿದ್ದಾರೆೆ. ಇದು ಹಾಸ್ಯಾಸ್ಪದವೂ ಮಾರಕವೂ ಆಗಿರುವ ಸನ್ನಿವೇಶಕ್ಕೆ ಒಂದು ಅತಿ ವಾಸ್ತವಿಕತೆಯ ಗಾಂಭೀರ್ಯವನ್ನು ತಂದುಕೊಡುತ್ತ್ತಿದೆ. ಭಯಭೀತಿ ಮೂಡಿಸುವಂಥಾ ಅಮಿತ್ ಶಾ ಅಕಾರಯುಕ್ತ ಹೇಳಿಕೆಗಳು ಪಕ್ಷದ ಕಾರ್ಯಕರ್ತರ ಪಾಲಿಗೆ ವಸ್ತುತಃ ಹುಕುಂಗಳೇ ಆಗಿರುತ್ತವೆ. ಆತ ರಾಷ್ಟ್ರೀಯತೆಯ ಸುತ್ತ ಒಂದು ವಿವೇಚನಾಶೂನ್ಯ ಅಂಧಶ್ರದ್ಧೆಯನ್ನು ಹುಟ್ಟುಹಾಕುತ್ತಾರೆ. ಅದು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೂ ಪ್ರತ್ಯಕ್ಷ ಬೆದರಿಕೆ ಒಡ್ಡುತ್ತದೆ. ರಾಷ್ಟ್ರೀಯತೆಯು ಮುಕ್ತವಾಗಿ ಅಭಿಪ್ರಾಯಗಳನ್ನು ಮಂಡಿಸುವ ಮೂಲಕ ಪ್ರಶ್ನಿಸಲಾರದಷ್ಟು ಪವಿತ್ರವಾದುದು ಎಂದಾತ ಸ್ಪಷ್ಟಪಡಿಸುತ್ತಾರೆೆ. ಅದನ್ನಾತ ಒಂದು ಮತೀಯ ಸಿದ್ಧಾಂತವಾಗಿಯೂ ಪ್ರಭುತ್ವದ ಅಕೃತ ಸಿದ್ಧಾಂತವಾಗಿಯೂ ಪರಿವರ್ತಿಸುವ ರೀತಿ ಹೇಗಿದೆಯೆಂದರೆ ರಾಷ್ಟ್ರ ಪ್ರಭುತ್ವದ ಧ್ಯೇಯಗಳು ಪ್ರಜಾತಂತ್ರಕ್ಕಿಂತಲೂ ಹೆಚ್ಚು ಪರಮಪೂಜ್ಯ ಆಗಿಬಿಡುತ್ತವೆೆ. ಯಾವುದನ್ನು ತಾನು ರಾಷ್ಟ್ರದ ವಿರುದ್ಧ ಅಪಪ್ರಚಾರ ಎನ್ನುತ್ತೇನೊ ಅದನ್ನು ಅಭಿವ್ಯಕ್ತಿ ಸ್ವಾತಂತ್ರ್ಯದ ಭಾಗವಾಗಿ ಪರಿಗಣಿಸಕೂಡದು ಎಂದಾತ ಸ್ಪಷ್ಟವಾಗಿ ಹೇಳುತ್ತಾರೆೆ. ಅವರ ಪ್ರಕಾರ ಅಂತಹ ‘ಅಭಿವ್ಯಕ್ತಿ ಸ್ವಾತಂತ್ರ್ಯ’ದಿಂದ ಸ್ವಾತಂತ್ರ್ಯ ಚಳವಳಿಯ ಹುತಾತ್ಮರಿಗೆ ಅವಮಾನವಾಗುತ್ತದೆ. ಇಲ್ಲಿ ಒಂದೇ ಏಟಿಗೆ ಇತಿಹಾಸ ಮತ್ತು ವರ್ತಮಾನಗಳೆರಡೂ ಸಂಖ್ಯಾಬಲ ಉಳ್ಳವರ ನಿಯಂತ್ರಣಕ್ಕೆ ಒಳಪಡುತ್ತವೆ. ಭಗತ್ ಸಿಂಗ್‌ನನ್ನು ಉಲ್ಲೇಖಿಸುವ ಅವರಿಗೆ ಭಗತ್ ಸಿಂಗ್ ತನಗಿಂತ ಹೆಚ್ಚು ಮುಕ್ತ ಮನಸ್ಸು ಹೊಂದಿದ್ದ ಬಗ್ಗೆ ಅರಿವಿಲ್ಲ. 2002ರ ಗುಜರಾತ್ ದಂಗೆಯನ್ನು ಭಗತ್ ಸಿಂಗ್ ಎಂದಿಗೂ ಒಪ್ಪುತ್ತಿರಲಿಲ್ಲ. ಇಸ್ಪೀಟಾಟದಲ್ಲಿ ಮಾಡುವ ಮೋಸದಂತೆ ಸ್ವಾತಂತ್ರ್ಯ ಚಳವಳಿಯನ್ನು ಆರೆಸ್ಸೆಸ್ ತನ್ನದಾಗಿಸಿಕೊಂಡುದನ್ನು ವಿಚಾರಣೆಗೊಳಪಡಿಸಬೇಕಾಗಿದೆ. ಉತ್ತಮ ಗುಣನಡತೆಯನ್ನು ಬೆಳೆಸುವುದು ಬಿಜೆಪಿಯ ಸಾಮರ್ಥ್ಯಕ್ಕೆ ಮೀರಿದ ವಿಷಯವೆಂದು ತೋರುತ್ತದೆ. ಆದುದರಿಂದಲೆ ಅದು ‘ರಾಷ್ಟ್ರೀಯತಾವಾದಿ ಗುಣನಡತೆ’ಯ ರಕ್ಷಕ ತಾನೆಂಬ ಕಟ್ಟುಕತೆಯನ್ನು ಹುಟ್ಟುಹಾಕಿ ಆ ಮೂಲಕ ಭಿನ್ನಮತ ಅಥವಾ ಯಾವುದೆ ರೀತಿಯ ಭಿನ್ನತೆಯನ್ನು ಹಿಮ್ಮೆಟ್ಟಿಸುತ್ತ್ತಿದೆ.
ಅಮಿತ್ ಶಾ ಹೇಳಿಕೆಗಳಿಗೆ ಹಿಮ್ಮೇಳ ಒದಗಿಸುತ್ತಿರುವ ಗೃಹಸಚಿವ ರಾಜನಾಥ ಸಿಂಗ್, ಪಾಕಿಸ್ತಾನ ಭಾರತದ ಯುವಕರನ್ನು ತಪ್ಪುದಾರಿಗೆಳೆಯಲು ಯೋಚಿಸುತ್ತಿದೆ ಎಂದು ವಾದಿಸುತ್ತಾರೆ. ಕೇಂದ್ರ ಸರಕಾರ, ಪೊಲೀಸರು, ಸ್ಥಳೀಯ ಸರಕಾರಗಳು ಯಾವ ತಪ್ಪನ್ನೂ ಮಾಡಿಲ್ಲ ಎಂದು ಒಂದೇ ಏಟಿಗೆ ಅವರೆಲ್ಲರಿಗೂ ಸರ್ಟಿಫಿಕೆಟು ನೀಡುತ್ತಾ ಕಿಡಿಗೇಡಿ ಕೃತ್ಯಗಳ ಮೂಲ ಹೊರಗಿನ ಶತ್ರು ಎನ್ನುತ್ತಾರೆ. ಪಾಕಿಸ್ತಾನದ ಮೇಲೆ ದೂರು ಹೊರಿಸುವುದು ಸುಲಭ. ಆದರೆ ನಮ್ಮದೇ ತಪ್ಪುಗಳನ್ನು ಒಪ್ಪಿಕೊಳ್ಳಲು ಧೈರ್ಯಬೇಕು. ಇನ್ನು ತಾನೇಕೆ ಹಿಂದುಳಿಯಬೇಕೆಂದು ಯೋಚಿಸಿದ ರಕ್ಷಣಾ ಮಂತ್ರಿ ಪಾರಿಕ್ಕರ್ ಕೂಡಾ ಇತ್ತೀಚೆಗೆ, ಪಾಕಿಸ್ತಾನಕ್ಕೆ ಹೋಗುವುದೆಂದರೆ ‘ನರಕ’ಕ್ಕೆ ಹೋದಂತೆ ಎಂದು ವಾದಿಸಿದರು.
ಆಗ ನಿಯೋಗವೊಂದರ ಭಾಗವಾಗಿ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದ ಮಾಜಿ ನಟಿ, ಕಾಂಗ್ರೆಸ್ ಸದಸ್ಯೆ ರಮ್ಯಾ ತಕ್ಷಣ ‘‘ಪಾಕಿಸ್ತಾನ ನರಕ ಅಲ್ಲ’’ ಎಂದು ಪ್ರತಿಕ್ರಿಯಿಸಿದರು. ವಿನಯದಿಂದ ‘‘ಅಲ್ಲಿನ ಜನ ಥೇಟ್ ನಮ್ಮವರ ಹಾಗೆ. ಅವರು ನಮ್ಮನ್ನೆಲ್ಲ ಚೆನ್ನಾಗಿ ನೋಡಿಕೊಂಡರು’’ ಎಂದು ವಿವೇಕದ ಮಾತುಗಳನ್ನಾಡಿದರು. ಇಷ್ಟು ಹೇಳಿದ ಕೂಡಲೇ ದೇಶದ್ರೋಹದ ಆರೋಪಗಳ ಜಡಿಮಳೆಯೆ ಸುರಿಯಲಾರಂಭಿಸಿತು. ಕರ್ನಾಟಕದ ವಕೀಲ ವಿಟ್ಟಲ್ ಗೌಡ ಎಂಬಾತ ರಮ್ಯಾ ವಿರುದ್ಧ ದೇಶದ್ರೋಹದ ದೂರು ದಾಖಲಿಸಿ ಆಕೆ ಪಾಕಿಸ್ತಾನವನ್ನು ಹೊಗಳುವ ಮೂಲಕ ಭಾರತದ ದೇಶಪ್ರೇಮಿಗಳ ಮಾನ ಕಳೆದಿದ್ದಾರೆಂದು ಆರೋಪಿಸಿದರು. ಹಿಂದೆ ಭಿನ್ನಮತೀಯರೆಲ್ಲ ರೈಲಿನಲ್ಲಿ ಪಾಕಿಸ್ತಾನಕ್ಕೆ ಹೋಗಿ ಎನ್ನುತ್ತಿದ್ದ ಬಿಜೆಪಿ ಹೋರಾಟಗಾರರು ಈಗ ಆಧುನಿಕತೆಯನ್ನು ಮೈಗೂಡಿಸಿಕೊಂಡು ಪಾಕಿಸ್ತಾನ ಸ್ವರ್ಗವೆಂದು ಭಾವಿಸುವವರೆಲ್ಲ ತಕ್ಷಣ ವಿಮಾನದಲ್ಲಿ ಹೋಗಿ ಎಂದು ಆಗ್ರಹಿಸತೊಡಗಿದರು. ದೇಶದ್ರೋಹ ಎಂಬುದು ವಿರೋಗಳ ಹೆಸರಿಗೆ ಮಸಿ ಬಳಿಯಲು ಅತ್ಯಂತ ಸುಲಭವಾದ ಹಣೆಪಟ್ಟಿ ಆಗಿಬಿಟ್ಟಿದೆ. ಒಂದು ಸರಳ ಭಿನ್ನಾಭಿಪ್ರಾಯ ಇದ್ದರೆ ಸಾಕು, ಬೇರೇನೂ ಬೇಕಾಗಿಲ್ಲ.
ಥಟ್ಟನೆ ಕೆರಳುವ ರಾಷ್ಟ್ರೀಯತೆಯ ಉಪಯೋಗಗಳು
ಅದೃಷ್ಟಕ್ಕೆ ರಮ್ಯಾ ವಿವೇಚನೆಯುಳ್ಳ ವ್ಯಕ್ತಿ. ಆಕೆ ಲೇಖನವೊಂದನ್ನು ಬರೆದು ‘‘ನಾವು ನಮ್ಮ ನೆರೆಕರೆಯವರ ಜೊತೆ ದೃಢ ಸಂಬಂಧಗಳನ್ನು ಕಟ್ಟಬೇಕಾಗಿದೆ’’ ಎಂದು ಸತ್ಯ ಸಂಗತಿಯನ್ನೇ ಹೇಳಿದರು. ಚಹಾದ ಬಟ್ಟಲಲ್ಲಿ ಬಿರುಗಾಳಿ ಎಬ್ಬಿಸಲು ಯತ್ನಿಸಿದ ಬಿಜೆಪಿಯನ್ನು ತಣ್ಣಗೆ ಸೋಲಿ ಸಿದರು. ವಾಸ್ತವದಲ್ಲಿ ಮೆಲೊಡ್ರಾಮಾಕ್ಕೆ ಹೆಸರುವಾಸಿಯಾದ ಬಾಲಿವುಡ್ ಎಲ್ಲಾ ಭಾವೋ ದ್ರೇಕದ ಪಾತ್ರಗಳ ಏಕಸ್ವಾಮ್ಯವನ್ನು ಬಿಜೆಪಿಗೆ ನೀಡುವ ಮೂಲಕ ವಿವೇಕ ಪ್ರದರ್ಶಿಸಿ ದಂತಿದೆ. ರಮ್ಯಾಳ ವಿವೇಕ ಆಳುವ ಸರಕಾರದ ಭಾವೋದ್ರೇಕಕ್ಕೆ ತಕ್ಕುದಾದ ಮದ್ದು.
ಈಗ ಕೇಳಬೇಕಿರುವ ಪ್ರಶ್ನೆ ಏನೆಂದರೆ ಬಿಜೆಪಿ ಮತ್ತದರ ‘ಯೋಧ’ರ ಪಡೆಗಳು ಈ ತೆರನಾದ ಥಟ್ಟನೆ ಉಕ್ಕೇರುವ ಅಬ್ಬರದ ದೇಶಭಕ್ತ್ತಿಯ ಮೊರೆಹೋಗಲು ಕಾರಣವೇನು? ಒಳಗೊಳ್ಳುವಿಕೆಯಲ್ಲಿ ನಿಜವಾದ ನಂಬಿಕೆಯೇನೂ ಇಲ್ಲದ ಪಕ್ಷವಾಗಿರುವ ಬಿಜೆಪಿ ಒಂದು ಏಕರೂಪತೆಯ ಪ್ರಮೇಯದೊಂದಿಗೆ ಐಕ್ಯತೆ ಸಾಸಲು ಯತ್ನಿಸಿರುವುದೆ ಇದಕ್ಕೆ ಭಾಗಶಃ ಕಾರಣವಾಗಿದೆ. ಅದರ ರಾಜಕೀಯ ರಂಗಸ್ಥಳದ ಮುನ್ನೆಲೆ, ಹಿನ್ನೆಲೆಗಳ ಮಧ್ಯೆ ಒಗ್ಗಟ್ಟೆಂಬುದೆ ಇಲ್ಲ. ಒಗ್ಗಟ್ಟಿನ ವಿಷಯದಲ್ಲಿ ನಿಜವಾಗಿ ಅದರ ಸಾಧನೆ ಎಂದರೆ ಬರೀ ಥಟ್ಟನೆ ಕೆರಳುವ ಉಗ್ರ ರಾಷ್ಟ್ರೀಯತೆ ಮಾತ್ರ. ದಲಿತರ ವಿಷಯದಲ್ಲಿ ಅದು ತಳೆದಿರುವ ಧೋರಣೆಯಿಂದಾಗಿ ಅವರನ್ನು ಒಳಗೊಳ್ಳುವ ಕಿಂಚಿತ್ ನಿರೀಕ್ಷೆೆಯೂ ಶಿಥಿಲವಾಗಿದೆ. ಚುನಾವಣೆಗಳು ಸಮೀಪಿಸುತ್ತಿದ್ದಂತೆ ಈ ಥಟ್ಟನೆ ಕೆರಳುವ ಉಗ್ರ ರಾಷ್ಟ್ರೀಯತೆಯ ಮೂಲಕ ಭಿನ್ನಮತದ ಪ್ರತಿಯೊಂದು ಮೂಲದಲ್ಲೂ ಹೇನು ಹೆಕ್ಕುವುದೇ ಅದರ ಏಕೈಕ ಚುನಾವಣಾ ವೇದಿಕೆ ಆಗುತ್ತಿದೆ. ಅದಕ್ಕೆ ತನ್ನ ರೂಢಿಗತ ಸಂಖ್ಯಾಬಲವಾದದ ಜೊತೆ ಅನುರಣಿಸಲು ಬೇರೆ ಯಾವ ವಿಷಯವೂ ಸಿಗುತ್ತಿಲ್ಲ ಎಂಬಂತಿದೆ. ಅದಕ್ಕೆ ಕಾಶ್ಮೀರ ಸಮಸ್ಯೆಯನ್ನು ಬಗೆಹರಿಸಲು ಸಾಧ್ಯವಾಗಿಲ್ಲ; ಕಾಶ್ಮೀರದ ದಾರುಣ ವೇದನೆಯ ಅರಿವಿಲ್ಲ. ಇದರಿಂದಾಗಿ ಸಮಸ್ಯೆಗಳನ್ನು ಬಗೆಹರಿಸುವ ಅದರ ವ್ಯವಹಾರಜ್ಞಾನ ದುರ್ಬಲಗೊಳ್ಳುತ್ತಿದೆ. ಸಾಲದ್ದಕ್ಕೆ ಜೆಎನ್‌ಯು, ಹೈದರಾಬಾದ್ ವಿದ್ಯಾರ್ಥಿಗಳ ಬಂಡಾಯದ ಪರಿಣಾಮವಾಗಿ ಯುವಜನರ ಪಕ್ಷ ಎಂಬ ಅದರ ಹೇಳಿಕೆಗೆ ಬಲವಾದ ಏಟು ಬಿದ್ದಿದೆ. ನ್ಯಾಯ ಮತ್ತು ದಕ್ಷ ಆಡಳಿತ ಒದಗಿಸುವ ಪಕ್ಷ ತಾನೆಂಬ ವಾದಗಳು ಪೊಳ್ಳು ಎಂದಾಗಿರುವ ಸಂದರ್ಭದಲ್ಲಿ ಉಗ್ರ ರಾಷ್ಟ್ರೀಯತೆಯ ಡೋಲಿನ ಸದ್ದೊಂದೇ ಅದರ ಪರಿಚಯ ಪತ್ರವೆಂದು ತೋರುತ್ತದೆ. ಅದು ಸಂಖ್ಯಾಬಲವಾದವನ್ನೂ ಉಗ್ರ ರಾಷ್ಟ್ರೀಯತೆಯ ಸಾರ್ವಜನಿಕ ಪ್ರದರ್ಶನವನ್ನೂ ಒಟ್ಟು ಬೆಸೆದು ಆ ಮೂಲಕ ಭಿನ್ನಮತವನ್ನು ರಾಷ್ಟ್ರದ ವಿರುದ್ಧ ಒಂದಾಗಿಸುತ್ತದೆ. ಕೇವಲ ಈ ಹುಸಿ ಬೆಸುಗೆಯೊಂದೇ ಅದಕ್ಕೆ ಒಗ್ಗಟ್ಟಿನ ಭಾವನೆಯನ್ನು ನೀಡುತ್ತಿದೆ. ಸಮೀಪ ದೃಷ್ಟಿಯಿಂದ ಬಳಲುವ ಈ ಕಾರ್ಯತಂತ್ರದಿಂದಾಗಿ ವಿಚಾರಗಳ ಮಟ್ಟದಲ್ಲಿ ಎರಡು ಅನಾಹುತಗಳಾಗುತ್ತವೆ. ಅದು ರಾಷ್ಟ್ರೀಯತೆ ಎಂಬ ಪ್ರಕ್ರಿಯೆಯ ಶಕ್ತಿಯನ್ನು ವ್ಯರ್ಥಗೊಳಿಸಿ ಗಾಂ, ಠಾಗೋರರಂತಹ ೀರರಿಗೆ ರಾಷ್ಟ್ರೀಯತೆ ಬಗ್ಗೆ ಇದ್ದ ಅನೇಕ ಸಂದೇಹಗಳನ್ನು ಮರೆಮಾಚುತ್ತದೆ. ಚರಿತ್ರೆಯಿಂದ ಅವರ ಮಾತುಗಳನ್ನು ಅಳಿಸಿ ತನ್ನದೇ ತುಚ್ಛ ಆವೃತ್ತಿಯನ್ನು ಸೃಷ್ಟಿಸಲೆತ್ನಿಸುತ್ತದೆ. ಪ್ರತಿಯೊಂದು ಭಿನ್ನಮತ, ಭಿನ್ನತೆಯನ್ನು ದೇಶದ್ರೋಹದ ಒಂದು ಸಿದ್ಧ ಕಲ್ಪನೆಗೆ ಪರಿವರ್ತಿಸಿ ನಾಗರಿಕ ಸಮಾಜದ ಸೃಜನಶೀಲತೆಯನ್ನು ನಾಶಗೊಳಿಸುತ್ತದೆ. ರಾಷ್ಟ್ರೀಯತೆ ಮತ್ತು ಪ್ರಜಾತಂತ್ರವನ್ನು ಕಾಪಾಡಿಕೊಂಡು ಬಂದಿರುವುದು ಪ್ರತಿಭಟನೆೆ, ಭಿನ್ನಮತಗಳು. ಆದರೆ ಈಗ ಅವೆಲ್ಲವನ್ನು ಕಸದ ಬುಟ್ಟಿಗೆ ಎಸೆಯಲಾಗಿದೆ. ಈ ಹೊಸ ಉಗ್ರ ರಾಷ್ಟ್ರೀಯತೆಯ ಸುರುಳಿ ಬಿಚ್ಚಿಕೊಳ್ಳುತ್ತಿದ್ದಂತೆ ಅದರಲ್ಲಿ ಸುವ್ಯವಸ್ಥಿತವಾದ ಸೇರಿಕೊಳ್ಳುವಿಕೆಯ ಕೊರತೆ ಇರುವುದರ ಅರಿವಾಗುತ್ತದೆ. ಅದರಲ್ಲಿರುವುದು ಬಲವಂತವಾಗಿ ಹೇರಿದ ಏಕರೂಪತೆ. ಅದರಲ್ಲಿ ಸಮುದಾಯಗಳ ಪ್ರಜ್ಞೆ ಇಲ್ಲ. ಹೀಗಾಗಿ ಹೊಸ ರಾಷ್ಟ್ರೀಯತೆಯು ಒಬ್ಬ ವ್ಯಕ್ತಿಗಿರುವ ಹೆಸರು ಮತ್ತು ಆತನ ತಥಾಕಥಿತ ಚರಿಷ್ಮಾಗಳನ್ನು ಅತಿಯಾಗಿ ಹಿಗ್ಗಿಸುವ ಮೂಲಕ ನಾಯಕತ್ವವೆಂಬ ಹುಸಿ ಬಾವನೆಯನ್ನು ಬಲವಂತವಾಗಿ ನೆಚ್ಚಿಕೊಳ್ಳಬೇಕಾಗುತ್ತದೆ. ಅಥವಾ ತಂತ್ರಜ್ಞ ಪ್ರಭುತ್ವವು ತಂತ್ರಜ್ಞಾನವನ್ನು ವಿಮರ್ಶೆಯಿಲ್ಲದೆ ಒಪ್ಪಿಕೊಂಡಿರುವುದಕ್ಕೆ ಆಧುನಿಕತಾವಾದದ ಕವಚ ಹುಡುಕಲು ಹೊಸ ರಾಷ್ಟ್ರೀಯತೆ ಒಂದು ನೆಪ ಆಗುತ್ತದೆ. ಉಗ್ರ ರಾಷ್ಟ್ರೀಯತೆ ತೋರಿಸುವ ಇಂತಹ ಪೊಳ್ಳು ದಾದಾಗಿರಿ ಅಂತಿಮವಾಗಿ ಕುಲಗೆಟ್ಟು ಪ್ರಜಾತಂತ್ರದ ಮೇಲೆರಗಿ ಪ್ಯಾಶಿಸಂಗೆ ತಿರುಗುತ್ತದೆ. ಮಾತುಕತೆ ಅಸಾಧ್ಯವಾಗುತ್ತದೆ; ಭಿನ್ನಮತ, ಸಂವಾದ ಅವ್ಯಾವಹಾರಿಕವಾಗುತ್ತವೆೆ. ಉಗ್ರ ರಾಷ್ಟ್ರೀಯತೆ ಅಲ್ಪಾವಗೆ ಅದೆಂತಹುದೊ ಜನಪ್ರಿಯತೆ ಪಡೆಯಬಹುದು. ಆದರೆ ಇದು ನೆಹರೂ, ಗಾಂ, ಪಟೇಲ್ ಕನಸುಕಂಡ ಲೋಕವಲ್ಲ ಎಂಬುದು ಸ್ಪಷ್ಟವಾಗುತ್ತಿದೆ. ರಾಷ್ಟ್ರೀಯತೆ ಒಂದು ಜೀವನಕ್ರಮ ಆಗುವ ಬದಲು ಕೀಳರಿಮೆಯ ಲಕ್ಷಣವಾಗಿ ಕೊನೆಗೆ ಪ್ರಭುತ್ವದಲ್ಲಿ ಪಾಶ್ಚಿಮಾತ್ಯ ದೇಶಗಳನ್ನು ಅಥವಾ ಚೀನಾವನ್ನು ಎದುರಿಸುವ ಸಾಂಸ್ಕೃತಿಕ ಕಲ್ಪನಾಶಕ್ತಿಯ ಅಭಾವ ಉಂಟಾಗುತ್ತದೆ. ರಾಷ್ಟ್ರಗೀತೆ ಹಾಡುವುದನ್ನು ಕಡ್ಡಾಯವಾಗಿಸಿರುವುದು ರಾಷ್ಟ್ರೀಯತೆಯನ್ನು ಒಂಥರಾ ಚರ್ಚ್‌ನಲ್ಲಿಹಾಜರಾತಿ ಹಾಕುವ ಪ್ರಕ್ರಿಯೆಯಾಗಿ ಪರಿವರ್ತಿಸಿದಂತಿದೆ. ಜೀವನಕ್ರಮ ಆಗಿರಬಹುದಾದ ರಾಷ್ಟ್ರೀಯತೆ ಸೂಕ್ಷ್ಮ ತನಿಖೆಯ ಆಚರಣೆಯಾಗಿಬಿಟ್ಟಿದೆ. ಇಂತಹ ದೃಷ್ಟಿಕೋನದಲ್ಲಿ ಇತಿಹಾಸದ ಬಗ್ಗೆ ಅಜ್ಞಾನ ತುಂಬಿದೆ. ಅಲ್ಲಿ ಯಾವುದೇ ವಿಧದ ಸಂಕುಚಿತ ರಾಷ್ಟ್ರ ಭಾವನೆ ಇಲ್ಲದ ವಿಶ್ವಮಾನವ ಭವಿಷ್ಯಕ್ಕಾಗಿ ಸಿದ್ಧತೆ ಇಲ್ಲ. ಇದು ಬಾವುಟದಡಿಯ ಐಕ್ಯತೆಯನ್ನು ತೆಗೆದು ಆ ಜಾಗದಲ್ಲಿ ಏಕರೂಪತೆ, ಕಾವಲುಪಡೆಗಳ ದೊಂಬಿ ಮನೋವೃತ್ತಿಯನ್ನು ತರುತ್ತದೆ. ಕಾರ್ಯಕರ್ತ ಮತ್ತು ದೊಂಬಿ ಎರಡರಲ್ಲಿಯೂ ಬಹುಸಾಂಸ್ಕೃತಿಕ ರಾಷ್ಟ್ರದ ಸೂಕ್ಷ್ಮವ್ಯತ್ಯಾಸ, ಸೂಕ್ಷ್ಮಗ್ರಾಹಕತೆ ಅಥವಾ ಮನೋವೃತ್ತಿ ಇಲ್ಲ ಎಂಬುದನ್ನು ಗ್ರಹಿಸುವಲ್ಲಿ ವಿಲವಾಗುತ್ತದೆ.
ಇತಿಹಾಸ ಮತ್ತು ರಾಷ್ಟ್ರದ ಬಗೆಗೆ ಬಿಜೆಪಿಯ ಸದ್ಯದ ನಿಲುವು ರಾಷ್ಟ್ರೀಯತೆಯ ಒಂದು ಮಹಾಕಾವ್ಯದ ಬದಲು ಕದನಶೀಲ ಉಗ್ರ ರಾಷ್ಟ್ರೀಯತೆ ಎಂಬ ದುರಂತವನ್ನು ಶುರುಮಾಡುತ್ತಿದೆ. ಒಂದು ಜೀವನಕ್ರಮವೂ ಬಹುಸಂಸ್ಕೃತಿಗಳ ಕಲ್ಪನೆಯೂ ಆಗಿರುವ ಪ್ರಜಾತಂತ್ರಕ್ಕೆ ಇದು ಅಪಾಯಕಾರಿ. ಬಿಜೆಪಿಯ ಉಗ್ರ ರಾಷ್ಟ್ರೀಯತೆ ಹಠಾತ್ತಾದ ನರ ಸೆಟೆತದಂತಿದೆ. ಪಕ್ಷದಲ್ಲಿ ವಿಚಾರಗಳ ಕೊರತೆ ಕಂಡುಬಂದಾಗಲೆಲ್ಲ ಅದು ಅಲುಗಾಡಲಾರಂಭಿಸುತ್ತದೆ.