ಅಂದುಕೊಂಡಿದ್ದನ್ನು ಅನುಷ್ಠಾನಗೊಳಿಸಿದ ಅರಸು
ಕೆ.ಆರ್. ರಮೇಶ್‌ಕುಮಾರ್
ಮುಖ್ಯಮಂತ್ರಿಯಾಗುತ್ತಿದ್ದಂತೆಯೇ ದೇವರಾಜ ಅರಸು, ತಾವೇನು ಅಂದುಕೊಂಡಿದ್ದರೋ ಅದೆಲ್ಲವನ್ನು ಜಾರಿಗೆ ತರುವ ನಿಟ್ಟಿನಲ್ಲಿ ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿಸಿದರು. ಕರ್ನಾಟಕ ನಾಮಕರಣ, ಹಾವನೂರು ಆಯೋಗ, ಭೂ ಸುಧಾರಣೆ, ಮಲ ಹೊರುವ ಪದ್ಧತಿ ನಿಷೇಧ, ಜೀತ ಪದ್ಧತಿ ನಿರ್ಮೂಲನೆ... ಒಂದಕ್ಕಿಂತ ಒಂದು ಕ್ರಾಂತಿಕಾರಿ ಹೆಜ್ಜೆಗಳು. ಈ ಕಾಯ್ದೆಗಳನ್ನು ಜಾರಿಗೆ ತರಬೇಕಾದರೆ ಎಂತಹ ಬಲಿಷ್ಠ ಜಾತಿಯ ನಾಯಕನಾದರೂ ಹತ್ತಾರು ಬಾರಿ ಯೋಚಿಸಬೇಕಾಗುತ್ತದೆ. ಆಡಳಿತ ಪಕ್ಷ, ವಿರೋಧ ಪಕ್ಷ ಮತ್ತು ಅಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಾಗುತ್ತದೆ. ಎಲ್ಲವೂ ಎಲ್ಲರಿಗೂ ಸಾಧ್ಯವಾಗುವುದಿಲ್ಲ. ಎಲ್ಲವೂ ಜನಪರವಲ್ಲ. ಕೆಲವೊಂದು ವರ್ಗಕ್ಕೆ ಅನ್ಯಾಯ, ಅನನುಕೂಲಗಳಾಗುವುದುಂಟು. ಇಂತಹ ತೊಡಕುಗಳನ್ನು ಸಮರ್ಥವಾಗಿ ನಿಭಾಯಿಸಿದ ದೇವರಾಜ ಅರಸು, ತಮಗೆ ದೊರೆತ ರಾಜಕೀಯ ಪರಮಾಕಾರವನ್ನು ಬಳಸಿಕೊಂಡು, ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಜನರಿಗೆ ಒಳಿತಾಗುವ, ಮಿಕ್ಕವರಿಗೆ ಮಾದರಿಯಾಗುವ ಕಾಯ್ದೆಗಳನ್ನು ಜಾರಿಗೆ ತಂದರು.
ನೋ ಹಾರ್ಸ್ ಟ್ರೇಡಿಂಗ್...
1971ರ ಲೋಕಸಭಾ ಚುನಾವಣೆಯಲ್ಲಿ, ದೇವರಾಜ ಅರಸರ ನಾಯಕತ್ವದಲ್ಲಿ 26ಕ್ಕೆ 26 ಸ್ಥಾನಗಳನ್ನು ಗೆಲ್ಲುವ ಮೂಲಕ ‘ಹಿಂದುಳಿದವರೆ ಇನ್ನುಮುಂದಕ್ಕೆ’ ಎಂದು ಹೇಳಿದ್ದನ್ನು ಮಾಡಿ ತೋರಿಸಿಯೂ ಬಿಟ್ಟರು. ಮುಖ್ಯಮಂತ್ರಿ ವೀರೇಂದ್ರ ಪಾಟೀಲರ ರಾಜ್ಯ ಸರಕಾರ ಅಲ್ಲಾಡತೊಡಗಿತು. ಅಕಾರದಲ್ಲಿದ್ದ ಪಕ್ಷದ ಶಾಸಕರೇ ಇಂದಿರಾ ಕಾಂಗ್ರೆಸ್ ಸೇರಲು ಸಿದ್ದವೀರಪ್ಪನವರ ಮನೆ ಮುಂದೆ ಅರ್ಜಿ ಹಿಡಿದುಕೊಂಡು ಕ್ಯೂ ನಿಂತರು. ಸಿದ್ದವೀರಪ್ಪನವರು, ‘ಕೇಂದ್ರದಲ್ಲಿ ನಮ್ಮದೇ ಸರಕಾರವಿದೆ, ಇವರನ್ನೆಲ್ಲ ಪಕ್ಷಕ್ಕೆ ಸೇರಿಸಿಕೊಂಡರೆ, ಸರಕಾರ ರಚಿಸಬಹುದು, ನಾನೇ ಸಿಎಂ’ ಎಂದು ರಾಜಭವನಕ್ಕೆ ಹೋಗಲು ಸಿದ್ಧತೆ ಮಾಡಿಕೊಂಡರು. ಆಗ ತಾತ್ಕಾಲಿಕ ಸರಕಾರ ರಚಿಸುವುದೋ ಅಥವಾ ವಿಧಾನಸಭೆ ವಿಸರ್ಜಿಸಿ ಚುನಾವಣೆಗೆ ಹೋಗುವುದೋ ಎಂಬ ಜಿಜ್ಞಾಸೆ. ನಮ್ಮಲ್ಲಿಯೇ ಎರಡು ಗುಂಪುಗಳಾದವು. ದೇವರಾಜ ಅರಸು ಪರವಾಗಿದ್ದ ಯುವಕರು, ವಿದ್ಯಾರ್ಥಿಗಳು ಎಡ್ವರ್ಡ್ ರೋಡ್‌ನಲ್ಲಿದ್ದ ಪಾರ್ಟಿ ಆಫೀಸಿನ ಮುಂದೆ ರಘುಪತಿ, ಗುಂಡೂರಾವ್ ನೇತೃತ್ವದಲ್ಲಿ, ‘‘ಪಕ್ಷಾಂತರಿಗಳನ್ನು ಪಕ್ಷಕ್ಕೆ ಸೇರಿಸಿಕೊಳ್ಳಬಾರದು’’ ಎಂದು ಭಾರೀ ಪ್ರತಿಭಟನೆ ನಡೆಸಿದರು. ಪಾರ್ಟಿ ಆಫೀಸ್‌ಗೆ ಬೀಗ ಹಾಕಿದಾಗ, ಪ್ರಮುಖ ನಾಯಕರ ಮನೆ ಮುಂದೆ ಟೆಂಟ್ ಹಾಕಿ ಪ್ರತಿಭಟನೆ ಮುಂದುವರಿಯಿತು. ಎರಡು ಚುನಾವಣೆಗಳನ್ನು ಗೆದ್ದು ಸಮರ್ಥ ನಾಯಕನಾಗಿ ಹೊರಹೊಮ್ಮಿದ್ದ ಅರಸು, ದಿಲ್ಲಿಯಲ್ಲಿ ಇಂದಿರಾರನ್ನು ಭೇಟಿ ಮಾಡಿ, ಮದ್ರಾಸ್ ಮೂಲಕ ಬೆಂಗಳೂರಿನ ಮರ್ಫಿ ಟೌನ್ ತಲುಪುತ್ತಿದ್ದಂತೆಯೇ, ಅವರನ್ನು ನೋಡಲು ಸಾವಿರಾರು ಜನ ರಸ್ತೆಯಲ್ಲಿಯೇ ಜಮಾಯಿಸಿದರು.
ಜಯಕಾರ, ಜಿಂದಾಬಾದ್ ಮೊಳಗಿದವು. ಅಲ್ಲಿ ಸೃಷ್ಟಿಯಾದ ಸಂದರ್ಭವೇ ಅರಸರನ್ನು ನಾಯಕ ಎಂದು ನಾಡಿಗೆ ಹೇಳುತ್ತಿತ್ತು. ಆ ಜನ ನೋಡಿ ಥ್ರಿಲ್ಲಾದ ಅರಸು, ಅದೇ ಜೋಶ್‌ನಲ್ಲಿ ಮಾರನೆ ದಿನ ಪ್ರೆಸ್ ಮೀಟ್ ಕರೆದು ‘‘ನೋ ಹಾರ್ಸ್ ಟ್ರೇಡಿಂಗ್, ನಾವು ಸರಕಾರ ಮಾಡಲ್ಲ’’ ಎಂದರು. ಹಾರ್ಸ್ ಟ್ರೇಡಿಂಗ್ ಪದ ಬಳಸಿದ್ದು, ಅಲ್ಲಿಯವರೆಗಿನ ರಾಜಕಾರಣಿಗಳಲ್ಲಿ ಅರಸರೆ ಮೊದಲಿಗರು. ಅಷ್ಟೇ, ಸಿದ್ದವೀರಪ್ಪನವರು ಸೆಟಗೊಂಡರು. ಮುಖ್ಯಮಂತ್ರಿ ಆಕಾಂಕ್ಷಿತನದಿಂದ ಹಿಂದೆ ಸರಿದರು. ಒಟ್ಟಾರೆ ಆ ಸಂದರ್ಭವೇ ಕಾಂಗ್ರೆಸ್ ಕಾರ್ಯಕರ್ತರಲ್ಲಿ ವಿಚಿತ್ರ ಹುಮ್ಮಸ್ಸಿಗೆ ಕಾರಣವಾಯಿತು. ಹೊಸ ಆಲೋಚನೆಗೆ, ಹೊಸ ವಿಚಾರಕ್ಕೆ ಮತ್ತು ಹೊಸತನಕ್ಕೆ ದಾರಿ ಮಾಡಿಕೊಟ್ಟಿತು. ಪ್ರತಿಯೊಬ್ಬರಿಗೂ ಇಲ್ಲಿ ನಮಗೂ ಒಂದು ರೋಲಿದೆ, ಹಕ್ಕಿದೆ, ಅವಕಾಶವಿದೆ, ಕೇಳಬಹುದು ಅನ್ನುವುದು ಮೊದಲ ಬಾರಿಗೆ ಕಾರ್ಯಕರ್ತರ ಗಮನಕ್ಕೆ ಬಂದಿತು. ಇದೇ ಡೆಮಾಕ್ರಸಿ. ಇದನ್ನು ಆಗುಮಾಡಿದ್ದು ಅರಸು.
ಪ್ರವಾಸ ಕಲಿಸಿದ ಪಾಠ
ಆಶ್ಚರ್ಯವೆಂದರೆ, ವಿಧಾನಸಭಾ ಚುನಾವಣೆಯನ್ನು ಗೆದ್ದು ಅಕಾರವನ್ನು ಪಡೆಯುವ ಮುಂಚೆಯೇ ಇಂದಿರಾ ಕಾಂಗ್ರೆಸ್ ಎರಡು ಗುಂಪಾಯಿತು. ಒಂದು ದೇವರಾಜ ಅರಸು ನಾಯಕತ್ವವನ್ನು ಒಪ್ಪಿದ ಗುಂಪು, ಇನ್ನೊಂದು ಸಿದ್ದವೀರಪ್ಪನವರ ನೇತೃತ್ವದ ಹಿರಿಯರ ಗುಂಪು. ಬಹಿರಂಗಕ್ಕೆ ಬರದ ಈ ಗುಂಪುಗಳ ಗುದಮುರಗಿ ಒಳಗೊಳಗೇ ಪರಾಕಾಷ್ಠೆಗೆ ಮುಟ್ಟಿತ್ತು. ಇದರ ನಡುವೆಯೇ ಮತ್ತೊಂದು ಮಹತ್ವದ ತಿರುವು, ಪಕ್ಷದ ಕನ್ವೀನರ್ ಆಗಿದ್ದ ಅರಸು ಅಧ್ಯಕ್ಷರಾಗಿ ನೇಮಕಗೊಂಡರು. ಅಷ್ಟೇ ಅಲ್ಲ, ಎಲೆಕ್ಷನ್ ಕಮಿಟಿ ಚೇರ್ಮನ್ ಕೂಡ ಅವರೇ ಆದರು. ಆ ಕಮಿಟಿಗೆ ತಮಗೆ ಬೇಕಾದವರನ್ನು ಆಯ್ದು ಸದಸ್ಯರನ್ನಾಗಿ ನೇಮಿಸಿಕೊಂಡರು. ಎಲೆಕ್ಷನ್ ಕಮಿಟಿ ಚೇರ್ಮನ್ ಆಗಿದ್ದು, ಅದಕ್ಕೆ ತಮ್ಮ ಫಿಲಾಸಫಿ ಒಪ್ಪುವಂತಹವರನ್ನು ನೇಮಿಸಿಕೊಂಡಿದ್ದು ಅರಸರ ಆಲೋಚನಾ ಕ್ರಮಗಳನ್ನು ಅನುಷ್ಠಾನಗೊಳಿಸಲು ಅನುಕೂಲವಾಯಿತು. ಅದು ಭವಿಷ್ಯದ ಕರ್ನಾಟಕದ ರಾಜಕಾರಣದ ದಿಕ್ಕನ್ನು ಬದಲಿಸಿತು. ಬದಲಾದ ಸಂದರ್ಭಕ್ಕನುಗುಣವಾಗಿ ಆಕಾಂಕ್ಷಿ ಅಭ್ಯರ್ಥಿಗಳು ಅರಸು ಪರ ವಾಲಿದರು. ಅರಸು ಆಲಕ್ಷಿತ ಸಮುದಾಯಗಳನ್ನು ಗುರುತಿಸಿ, ಅಲ್ಲಿನ ವಿದ್ಯಾವಂತರನ್ನು ಆಯ್ಕೆ ಮಾಡಿಕೊಂಡರು.
ಮೇಲ್ಜಾತಿಯ ಆಧುನಿಕರು, ಪ್ರಗತಿಪರರು ಅರಸರ ನಾಯಕತ್ವವನ್ನು ಒಪ್ಪಿ ಬೆಂಬಲಿಸಿದರು. ಆ ನಂತರ ದೇವರಾಜ ಅರಸರು ರಾಜ್ಯ ಪ್ರವಾಸ ಕೈಗೊಂಡರು. ಆ ಪ್ರವಾಸವೇ ಅವರಿಗೆ ಎಲ್ಲವನ್ನು ತಿಳಿಸಿತು, ಕಲಿಸಿತು, ಕರುಳಿಗಿಳಿಸಿತು. ಇಡೀ ರಾಜ್ಯದ ಜನಜೀವನವನ್ನು ಅರಿಯುತ್ತಲೇ ಜಾತಿ-ಉಪಜಾತಿಗಳನ್ನು, ಮೇಲು-ಕೀಳು ವರ್ಗವನ್ನು, ಅಂಕಿ-ಸಂಖ್ಯೆಗಳನ್ನು, ಅವುಗಳಿದ್ದ ಸ್ಥಿತಿ-ಗತಿಯನ್ನು ಖುದ್ದು ಕಂಡರು. ಇಂದಿರಾ ಗಾಂಯವರ ಅಲೆಯನ್ನು, ವರ್ಚಸ್ಸನ್ನು ಬಳಸಿಕೊಂಡು, ಯಾರನ್ನು ಅಭ್ಯರ್ಥಿಯನ್ನಾಗಿ ಮಾಡಿದರೆ, ಗೆಲುವು ಸಾಧ್ಯ ಎನ್ನುವ ರಾಜಕೀಯ ಲೆಕ್ಕಾಚಾರದಲ್ಲಿ ಮುಳುಗಿದರು. ಅವತ್ತಿನ ದಿನಗಳಲ್ಲಿ ಅರಸರ ಈ ರಾಜಕೀಯ ಲೆಕ್ಕಾಚಾರ ಯಾರ ಊಹೆಗೂ ನಿಲುಕಲಿಲ್ಲ. ಅಷ್ಟು ಕರಾರುವಕ್ಕಾಗಿ, ಅಷ್ಟು ನಾಜೂಕಾಗಿ ಅರಸು ಮಾಡಿದ್ದರು.
ಸಾಮಾಜಿಕ ನ್ಯಾಯಕ್ಕೆ ಬುನಾದಿ
ರಾಜ್ಯ ಪ್ರವಾಸದಲ್ಲಿ, ಬೀದರ್‌ನಿಂದ ಕೋಲಾರದವರೆಗೆ, ಕರ್ನಾಟಕದ ವೈವಿಧ್ಯಮಯ ಜನರನ್ನು, ಬದುಕನ್ನು, ಭಾಷೆಯನ್ನು ಕಂಡರು. ಅಲ್ಲಿ ಅವರು ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ ರೀತಿಯನ್ನು ಅವಲೋಕಿಸಿದರೆ, ಅಧ್ಯಯನ ಮಾಡಿದರೆ ಸಾಮಾಜಿಕ ನ್ಯಾಯಕ್ಕೆ ಹಾಕಿದ ಬುನಾದಿ ಬಯಲಾಗುತ್ತದೆ. ಅರಸು ಏನು, ಎಂತಹ ನಾಯಕ ಎನ್ನುವುದು ತಿಳಿಯುತ್ತದೆ. ಕೆಲವನ್ನಷ್ಟೇ ನಿಮ್ಮ ಗಮನಕ್ಕೆ ತರಲಿಚ್ಛಿಸುತ್ತೇನೆ, ನೋಡಿ... ಹಳಿಯಾಳ ಹೇಳಿಕೇಳಿ ರಾಮಕೃಷ್ಣ ಹೆಗಡೆಯವರ ಕ್ಷೇತ್ರ. ಮಂತ್ರಿಯಾಗಿ ಹೆಸರು ಮಾಡಿದವರು, ಬ್ರಾಹ್ಮಣ ಜಾತಿಗೆ ಸೇರಿದವರು. ಅಲ್ಲಿ ಅರಸು ಒಬ್ಬ ಮರಾಠ ಸಮುದಾಯಕ್ಕೆ ಸೇರಿದ ವಿರೂಪಾಕ್ಷಪ್ಪ ಗಾಡಿ ಮಾಸ್ತರ್ ಎಂಬ ನಿವೃತ್ತ ಶಿಕ್ಷಕನನ್ನು ಪಿಕ್ ಮಾಡಿ, ಅಭ್ಯರ್ಥಿಯನ್ನಾಗಿಸುತ್ತಾರೆ. ಅಲ್ಲಿಯವರೆಗೆ ಹಳಿಯಾಳದಲ್ಲಿ ಮರಾಠರ ಸಂಖ್ಯೆ ಹೆಚ್ಚು ಎನ್ನುವ ಸತ್ಯವೇ ಯಾರಿಗೂ ಗೊತ್ತಿರುವುದಿಲ್ಲ. ಅದನ್ನು ಅರಸು ಪತ್ತೆಹಚ್ಚಿ, ಮರಾಠ ಅಭ್ಯರ್ಥಿಯನ್ನು ಘಟಾನುಘಟಿ ನಾಯಕ ಹೆಗಡೆ ವಿರುದ್ಧ ಕಣಕ್ಕಿಳಿಸುತ್ತಾರೆ. ತನ್ನ ಕ್ಷೇತ್ರದ ಈ ಜಾತಿ ಲೆಕ್ಕಾಚಾರ ಅರಿತಿದ್ದ ಹೆಗಡೆ ಹೆದರಿ ನಾಮಿನೇಷನ್ ೈಲ್ ಮಾಡದೆ, ಚುನಾವಣೆಯಿಂದ ಹಿಂದೆ ಸರಿಯುತ್ತಾರೆ.
ಅದೇ ರೀತಿ ಚಿಂಚೋಳಿ ಕ್ಷೇತ್ರದಿಂದ ಯಾರಿಗೂ ಗೊತ್ತಿಲ್ಲದ ಕಬ್ಬಲಿಗ ಸಮುದಾಯದ ದೇವೇಂದ್ರಪ್ಪ ಘಾಳಪ್ಪ ಎಂಬ ಯುವ ವಕೀಲನನ್ನು ಅಭ್ಯರ್ಥಿಯನ್ನಾಗಿಸುತ್ತಾರೆ. ಅದು ಮಾಜಿ ಮುಖ್ಯಮಂತ್ರಿ ವೀರೇಂದ್ರ ಪಾಟೀಲರು ಪ್ರತಿನಿಸುವ ಕ್ಷೇತ್ರ. ಚಿಂಚೋಳಿಯಲ್ಲಿ ಕಬ್ಬಲಿಗರು ಹೆಚ್ಚಿನ ಸಂಖ್ಯೆಯಲ್ಲಿರುತ್ತಾರೆ. ಆದರೆ ಅಲ್ಲಿಯವರೆಗೆ ಅದು ಲಿಂಗಾಯತರು ಹೆಚ್ಚಿನ ಸಂಖ್ಯೆಯಲ್ಲಿರುವ ಕ್ಷೇತ್ರ ಎಂದು ಪ್ರಚಾರ ಮಾಡಿ, ಲಿಂಗಾಯತರು ಮಾತ್ರ ಗೆಲ್ಲಲಿಕ್ಕೆ ಸಾಧ್ಯ ಎನ್ನುವ ವಾತಾವರಣ ಸೃಷ್ಟಿಸಿರುತ್ತಾರೆ. ಅದನ್ನು ಮೊದಲ ಬಾರಿಗೆ ಬ್ರೇಕ್ ಮಾಡಿದ ಅರಸು, ರಾಜಕೀಯ ಅಕಾರದಿಂದ ದೂರ ಉಳಿದಿದ್ದ ಕಬ್ಬಲಿಗ ಸಮುದಾಯದ ಯುವ ವಿದ್ಯಾವಂತ ಘಾಳಪ್ಪನನ್ನು ಅಭ್ಯರ್ಥಿ ಮಾಡುತ್ತಾರೆ. ಕ್ಷೇತ್ರದ ಮರ್ಮವರಿತಿದ್ದ ವೀರೇಂದ್ರ ಪಾಟೀಲರು ಕಣಕ್ಕಿಳಿಯದೆ ಸುಮ್ಮನಾಗುತ್ತಾರೆ.
ಆ ಕಾಲದ ರಾಜಕಾರಣದಲ್ಲಿ ಲವ-ಕುಶರೆಂದೇ ಖ್ಯಾತರಾದ, ಮುಂಚೂಣಿ ನಾಯಕರೆಂದು ಹೆಸರಾದ ವೀರೇಂದ್ರಪಾಟೀಲ್ ಮತ್ತು ರಾಮಕೃಷ್ಣ ಹೆಗಡೆಯವರನ್ನು ಚುನಾವಣೆಗೂ ಮುಂಚೆಯೇ ಸೋಲಿನ ಭಯ ಹುಟ್ಟಿಸಿದ್ದು, ಚುನಾವಣೆಗೆ ಸ್ಪರ್ಸದಂತೆ ಸುಮ್ಮನಾಗಿಸಿದ್ದು, ಅವತ್ತಿನ ರಾಜಕಾರಣದ ಮಟ್ಟಿಗೆ, ಅರಸು ಅವರ ದೊಡ್ಡ ಗೆಲುವು. ನಂತರ ಚಿತ್ತಾಪುರ, ಲಿಂಗಾಯತರು ಬಹುಸಂಖ್ಯಾತರಿರುವ ಕ್ಷೇತ್ರದಿಂದ, ದರ್ಜಿ ಸಮುದಾಯಕ್ಕೆ ಸೇರಿದ ಪ್ರಭಾಕರ್ ತೇಲ್ಕರ್, ಜೇವರ್ಗಿಯಿಂದ ರಜಪೂತ ಸಮುದಾಯದ ಧರಂಸಿಂಗ್, ಕೊರಟಗೆರೆಯಿಂದ ತಿಗಳರ ಮುದ್ದರಾಮಯ್ಯ, ಚಿಕ್ಕಮಗಳೂರಿನಿಂದ ಕ್ರಿಶ್ಚಿಯನ್ ಕಮ್ಯುನಿಟಿಯ ವಾಝ್, ಕಾರ್ಕಳದಿಂದ ದೇವಾಡಿಗ ಸಮುದಾಯದ ವೀರಪ್ಪ ಮೊಯ್ಲಿ... ಹೀಗೆ ಹಿಂದುಳಿದ ವರ್ಗಗಳಿಂದ ಬಂದವರು, ವಿದ್ಯಾವಂತ ದಲಿತರು, ಮುಸ್ಲಿಮರು ಹಾಗೂ ಲಿಬರಲ್ ಆಗಿದ್ದ ಮೇಲ್ಜಾತಿಯವರನ್ನು ಆಯ್ಕೆ ಮಾಡಿಕೊಂಡರು. ಒಂದು ರೀತಿಯಲ್ಲಿ ಈ ಚುನಾವಣೆ, ಕರ್ನಾಟಕದ ರಾಜಕಾರಣದ ಮಟ್ಟಿಗೆ ಹಿಂದೆಂದೂ ಆಗಿರದ, ಮುಂದಾಗಲಿಕ್ಕೆ ಮಾದರಿಯಾದ, ಅರಸರ ಹೊಸ ಪ್ರಯೋಗ ಎಂದೇ ಹೇಳಬಹುದು.
ದಲಿತರಲ್ಲಿ ಎಲ್ಲರೂ ಡಬಲ್ ಗ್ರಾಜುಯೇಟ್ಸ್, ಅಡ್ವೋಕೇಟ್ಸ್ ಬಿ.ಶಿವಣ್ಣ, ಮಲ್ಲಿಕಾರ್ಜುನ ಖರ್ಗೆ, ಎಂ.ವಿ.ರಾಮಸ್ವಾಮಿ, ಬಿ.ಬಸವಲಿಂಗಪ್ಪ, ಕೆ.ಎಚ್.ರಂಗನಾಥ್; ಮುಸ್ಲಿಮರಲ್ಲಿಯೂ ವಿದ್ಯಾವಂತ ಯುವಕರು ಮುಂದೆ ಬಂದರು. ಅಪ್ಪರ್ ಕಾಸ್ಟ್‌ನಲ್ಲಿ ಮಾಡರೇಟ್ಸ್, ಪ್ರೊಗ್ರೆಸ್ಸೀವ್ ಥಿಂಕರ್ಸ್ ಅರಸರ ಬೆಂಬಲಕ್ಕೆ ನಿಂತರು.
ಮೊಯ್ಲೀಸ್ ಕೊಯ್ಲೀಸ್...
ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ ಅರಸು, ಪಟ್ಟಿಯನ್ನು ಅಂತಿಮಗೊಳಿಸಿ, ರಾಜ್ಯದ ಜನತೆಯ ಮುಂದಿಡಲು ಪತ್ರಿಕಾಗೋಷ್ಠಿ ಕರೆದರು. ಆ ಪತ್ರಿಕಾಗೋಷ್ಠಿಯಲ್ಲಿ ರಾಜ್ಯದ 224 ಕ್ಷೇತ್ರಗಳ ಹುರಿಯಾಳುಗಳ ಪಟ್ಟಿ ಬಿಡುಗಡೆ ಮಾಡಿ ಮಾತನಾಡುತ್ತಿದ್ದರು. ಆಗ ಒಂದು ಇಂಟರೆಸ್ಟಿಂಗ್ ಪ್ರಸಂಗ ನಡೆಯಿತು. ಅಭ್ಯರ್ಥಿಗಳ ಪಟ್ಟಿ ನೋಡಿದ ‘ಡೆಕ್ಕನ್ ಹೆರಾಲ್ಡ್’ ಪತ್ರಿಕೆಯ ಚೀಫ್ ರಿಪೋರ್ಟರ್ ಎಂಸಿವಿ ಮೂರ್ತಿ, ಆ ಹೆಸರುಗಳ ಮೇಲೆ ಕಣ್ಣಾಡಿಸಿ, ವ್ಯಂಗ್ಯವಾಗಿ, ‘‘ಮಿ. ಅರಸ್, ಯುವರ್ ಘಾಳಪ್ಪಾಸ್ ಘೂಳಪ್ಪಾಸ್, ಮೊಯ್ಲೀಸ್ ಕೊಯ್ಲೀಸ್.. ಹೌ ಮೆನಿ ಸೀಟ್ಸ್... ಯೂ ಎಕ್ಸ್‌ಪೆಕ್ಟ್’’ ಎಂದರು. ಅವರ ಕೊಂಕು ಮಾತಿಗೆ ಕೊಂಚವೂ ಕೆರಳದ ಅರಸು ಅಷ್ಟೇ ಕೂಲಾಗಿ, ‘ಒನ್ ಸಿಕ್ಸ್‌ಟಿ’ ಎಂದರು. ಅದಕ್ಕೆ ಮೂರ್ತಿ, ‘ಯೂ ಆರ್ ಗಾನ್ ಮ್ಯಾಡ್’ ಅಂದು, ‘ಬೆಟ್ ಕಟ್ತಿರಾ, ಗೆಲ್ಲಲಿಲ್ಲ ಅಂದರೆ ರಾಜಕಾರಣದಿಂದ ನಿವೃತ್ತರಾಗ್ತೀರಾ, ಗೆದ್ದರೆ ನಾನು ನನ್ನ ವೃತ್ತಿ ಬಿಡುತ್ತೇನೆ, ಒಪ್ತೀರಾ ...?’ ಎಂದು ಸವಾಲು ಎಸೆದರು. ಅದಕ್ಕೆ ಅರಸು ‘ಎಸ್’ ಎಂದರು. ನಂತರ ಲಿತಾಂಶ ಬಂದು ಅರಸರ ಕಾಂಗ್ರೆಸ್ 165 ಸ್ಥಾನಗಳಲ್ಲಿ ಗೆಲುವು ಸಾಸಿತ್ತು. ಅರಸು ಬೆಟ್ ವಿಷಯ ಮರೆತು, ಸರಕಾರ ರಚಿಸುವ ಕಾರ್ಯದಲ್ಲಿ ಮಗ್ನರಾದರು. ಮಧ್ಯವರ್ತಿಗಳ ದೆಸೆಯಿಂದ ಬೆಟ್ ಕಟ್ಟಿದ್ದ ರಿಪೋರ್ಟರ್ ಸಂಧಾನ ಮಾಡಿಕೊಂಡು ಕೆಲಸ ಉಳಿಸಿಕೊಂಡರು.
ಅಂದರೆ ದೇವರಾಜ ಅರಸರಿಗೆ ಕರ್ನಾಟಕದ ಮತದಾರರ ಮೇಲಿದ್ದ ನಂಬಿಕೆ ಮತ್ತು ಗೆದ್ದೇ ಗೆಲ್ಲುತ್ತೇನೆಂಬ ಖಚಿತ ವಿಶ್ವಾಸ ಹಿರಿಯ ಪತ್ರಕರ್ತರಿಗಿರಲಿ, ರಾಜಕೀಯ ವಿಶ್ಲೇಷಕರಿಗೂ ಇರಲಿಲ್ಲ. ಅದಕ್ಕೆ ಕಾರಣ ನಾಡಿನ ಜನತೆಯ ನಾಡಿಮಿಡಿತವನ್ನು ಅರಸು ಅರಿತದ್ದು. ಬಡವರು, ದೀನ ದಲಿತರು, ಶೋಷಿತರೆಂಬ ಅಜ್ಞಾತ ಮತದಾರರನ್ನು ಮುಟ್ಟಿ ಮಾತನಾಡಿಸಿ ಬಂದದ್ದು.
ಅಧಿರದಿಂದ ದೂರವಿಡಲು ಷಡ್ಯಂತ್ರ
ಮೈಸೂರು ಪ್ರಾಂತ ಸಮಿತಿ ಕಾಲದಿಂದ ಹುಣಸೂರು ಕ್ಷೇತ್ರವನ್ನು ಪ್ರತಿನಿಸುತ್ತಿದ್ದ ದೇವರಾಜ ಅರಸು, ತಾವೇ ಟಿಕೆಟ್ ಹಂಚುವ ಸ್ಥಾನದಲ್ಲಿದ್ದ 1972ರ ವಿಧಾನಸಭಾ ಚುನಾವಣಾ ಕಣದಿಂದ ಹಿಂದೆ ಸರಿಯಬೇಕಾದ ಸಂದರ್ಭ ಎದುರಾಯಿತು. ಅಂದರೆ, ದೇವರಾಜ ಅರಸರ ಬೆಳವಣಿಗೆಯನ್ನು, ನಾಯಕನಾಗಿ ಮುಂಚೂಣಿಗೆ ಬರುತ್ತಿದ್ದ ಬಗೆಯನ್ನು ಸಹಿಸದ ಇಂದಿರಾ ಕಾಂಗ್ರೆಸ್‌ನೊಳಗಿನ ಬಲಾಢ್ಯ ಜಾತಿಯ ರಾಜಕೀಯ ನಾಯಕರು ಬಗ್ಗುಬಡಿಯಲು ಯತ್ನಿಸಿದರು. ಆ ಗುಂಪು ಚುನಾವಣೆಯಲ್ಲಿ ಸ್ಪರ್ಸದಂತೆ ನೋಡಿಕೊಳ್ಳುವಲ್ಲಿ ಯಶಸ್ವಿಯಾಯಿತು. ಅಂದರೆ ಆ ಗುಂಪು, ಪ್ರತಿ ಹಂತದಲ್ಲೂ ಅರಸರಿಗೆ ತೊಂದರೆ ಕೊಟ್ಟು, ಮುಖ್ಯಮಂತ್ರಿ ಕುರ್ಚಿ ತಪ್ಪಿಸುವ ಹವಣಿಕೆಯಲ್ಲಿತ್ತು.
26 ವರ್ಷಗಳ ಕಾಲ ಸತತವಾಗಿ ಹುಣಸೂರನ್ನು ಪ್ರತಿನಿಸಿದ ಅರಸು; ಸೋಲಿಲ್ಲದ ಸರದಾರ ಎನಿಸಿಕೊಂಡ ಅರಸು; ವಿರೋಗಳ ಷಡ್ಯಂತ್ರಕ್ಕೆ ಮಣಿದು, ಚುನಾವಣೆಗೆ ನಿಲ್ಲದೆ ಕರಿಯಪ್ಪಗೌಡರನ್ನು ಕಣಕ್ಕಿಳಿಸಿದರು. ಕ್ಷೇತ್ರವನ್ನು ಬಿಟ್ಟುಕೊಡಬೇಕಾದಾಗಲೂ ಅಷ್ಟೇ, ೀರೋದಾತ್ತ ನಿಲುವು ಮತ್ತು ದೃಢ ಮನಸ್ಸು ಅರಸರದು. ಶಾಸಕರಲ್ಲ ಅಂದರೆ ಸಿಎಲ್‌ಪಿ ಲೀಡರ್ ಅಲ್ಲ, ಮುಖ್ಯಮಂತ್ರಿಯಾಗಲು ಸಾಧ್ಯವೇ ಇಲ್ಲ ಎಂಬುದು ವಿರೋ ಗುಂಪಿನ ಸಂಚಾಗಿತ್ತು. ಆದರೆ ಅರಸು ಜನರ ಮೇಲೆ ನಂಬಿಕೆ ಇಟ್ಟಿದ್ದರು. 165 ಶಾಸಕರನ್ನು ಗೆಲ್ಲಿಸುವ ಮೂಲಕ ಅರಸರನ್ನು ಗೆಲ್ಲಿಸಿದರು. ಇಂದಿರಾಗಾಂಯವರು ಬೆಂಬಲಕ್ಕಿದ್ದರು. ಎಲ್ಲ ವಿರೋಧಗಳ ನಡುವೆಯೂ ಕರ್ನಾಟಕದ ಇತಿಹಾಸದಲ್ಲಿ ಮೊತ್ತ ಮೊದಲ ಬಾರಿಗೆ, ಬಹುಸಂಖ್ಯಾತರನ್ನು ಬದಿಗಿಟ್ಟು, ಬಲಾಢ್ಯ ಜಾತಿಗಳನ್ನು ಅಕಾರಕೇಂದ್ರದಿಂದ ದೂರವಿಟ್ಟು, ಕೇವಲ 300 ಕುಟುಂಬಗಳಿದ್ದ ಸಣ್ಣ ಸಮುದಾಯದಿಂದ ಬಂದ ಮನುಷ್ಯನೊಬ್ಬ ಮುಖ್ಯಮಂತ್ರಿಯಾಗಿ ಅಕಾರ ಸ್ವೀಕರಿಸುವಂತಾಯಿತು.
ನನ್ನ ಪ್ರಕಾರ ಇದು ನಿಜವಾದ ಪ್ರಜಾಪ್ರಭುತ್ವದ ಗೆಲುವು.
ಅಂದುಕೊಂಡಿದ್ದೆಲ್ಲ ಅನುಷ್ಠಾನ
ಮುಖ್ಯಮಂತ್ರಿಯಾಗುತ್ತಿದ್ದಂತೆಯೇ ದೇವರಾಜ ಅರಸು, ತಾವೇನು ಅಂದುಕೊಂಡಿದ್ದರೋ ಅದೆಲ್ಲವನ್ನು ಜಾರಿಗೆ ತರುವ ನಿಟ್ಟಿನಲ್ಲಿ ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿಸಿದರು. ಕರ್ನಾಟಕ ನಾಮಕರಣ, ಹಾವನೂರು ಕಮಿಷನ್, ಭೂ ಸುಧಾರಣೆ, ಮಲ ಹೊರುವ ಪದ್ಧ್ಧತಿ ನಿಷೇಧ, ಜೀತ ಪದ್ಧತಿ ನಿರ್ಮೂಲನೆ... ಒಂದಕ್ಕಿಂತ ಒಂದು ಕ್ರಾಂತಿಕಾರಿ ಹೆಜ್ಜೆಗಳು. ಈ ಕಾಯ್ದೆಗಳನ್ನು ಜಾರಿಗೆ ತರಬೇಕಾದರೆ ಎಂತಹ ಬಲಿಷ್ಠ ಜಾತಿಯ ನಾಯಕನಾದರೂ ಹತ್ತಾರು ಬಾರಿ ಯೋಚಿಸಬೇಕಾಗುತ್ತದೆ. ಆಡಳಿತ ಪಕ್ಷ, ವಿರೋಧ ಪಕ್ಷ ಮತ್ತು ಅಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಾಗುತ್ತದೆ. ಎಲ್ಲವೂ ಎಲ್ಲರಿಗೂ ಸಾಧ್ಯವಾಗುವುದಿಲ್ಲ. ಎಲ್ಲವೂ ಜನಪರವಲ್ಲ. ಕೆಲವೊಂದು ವರ್ಗಕ್ಕೆ ಅನ್ಯಾಯ, ಅನನುಕೂಲಗಳಾಗುವುದುಂಟು. ಇಂತಹ ತೊಡಕುಗಳನ್ನು ಸಮರ್ಥವಾಗಿ ನಿಭಾಯಿಸಿದ ದೇವರಾಜ ಅರಸು, ತಮಗೆ ದೊರೆತ ರಾಜಕೀಯ ಪರಮಾಕಾರವನ್ನು ಬಳಸಿಕೊಂಡು, ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಜನರಿಗೆ ಒಳಿತಾಗುವ, ಮಿಕ್ಕವರಿಗೆ ಮಾದರಿಯಾಗುವ ಕಾಯ್ದೆಗಳನ್ನು ಜಾರಿಗೆ ತಂದರು.
ಇದೇ ಸಂದರ್ಭದಲ್ಲಿ ಉತ್ತರ ಕರ್ನಾಟಕ ಭೀಕರ ಬರಗಾಲಕ್ಕೆ ತುತ್ತಾಯಿತು. ಆರ್ಮುಗಂ ನೇತೃತ್ವದಲ್ಲಿ ಮ್ಯಾಸ್ಸೀವ್ ಆಪರೇಷನ್ಸ್ ಶುರುವಾಯಿತು. ಅರಸರಿಗೆ ಉತ್ತರ ಕರ್ನಾಟಕ ಕಂಡರೆ ವಿಶೇಷ ಅಕ್ಕರೆ, ಆ ಭಾಗದ ಜನರ ಮುಗ್ಧತೆಗೋ, ಅಭಿವೃದ್ಧಿ ಕಾಣದೆ ಇರುವುದಕ್ಕೋ ಬರಗಾಲ ಎಂದಾಕ್ಷಣ ಅರಸರು ತುಂಬಾನೆ ನೊಂದುಕೊಂಡರು, ಆ ತಕ್ಷಣವೇ ಪ್ರವಾಸ ಕೈಗೊಂಡರು. ಸರಕಾರದ ವತಿಯಿಂದ ಏನೇನೆಲ್ಲ ಮಾಡಬಹುದೋ ಅದೆಲ್ಲವನ್ನು ಮಾಡಿದರು. ಈ ನಡುವೆ ಮೂರು ಉಪಚುನಾವಣೆಗಳಲ್ಲಿ- ಅರಸೀಕೆರೆ, ಸಂಕೇಶ್ವರ, ನಾಗಮಂಗಲಗಳಲ್ಲಿ- ಆಡಳಿತ ಪಕ್ಷಕ್ಕೆ ಸೋಲುಂಟಾಯಿತು. ಪಕ್ಷದೊಳಗಿನ ಬಂಡಾಯ, ಭಿನ್ನಾಭಿಪ್ರಾಯ ಹೆಚ್ಚಾಯಿತು. ಅಂದರೆ, ರಾಜಕೀಯ ಏರಿಳಿತಗಳು, ಪ್ರಕೃತಿಯ ಅಡೆತಡೆಗಳ ನಡುವೆಯೂ ದೇವರಾಜ ಅರಸು ಅಂದುಕೊಂಡಿದ್ದನ್ನು ಅನುಷ್ಠಾನಗೊಳಿಸುವಲ್ಲಿ ಹಿಂದೆ ಬೀಳಲಿಲ್ಲ. ಆ ಕಲ್ಪನೆಯೇ ಯಾರಿಗೂ ಇರಲಿಲ್ಲ
ಭೂ ಸುಧಾರಣೆ ಕಾಯ್ದೆಯನ್ನು ಜಾರಿಗೆ ತರುವಾಗ, ಅರಸು ತೋರಿದ ರಾಜಕೀಯ ಚಾಣಾಕ್ಷತೆ ಅಮೋಘವಾದುದು. ಆ ಸಂದರ್ಭದಲ್ಲಿ, ದೇಶದ ಯಾವ ರಾಜ್ಯವೂ, ಬಹುಸಂಖ್ಯಾತ ಜಾತಿಬೆಂಬಲವಿರುವ ಸಮರ್ಥ ನಾಯಕರಂತಹ ಮುಖ್ಯಮಂತ್ರಿಗಳಿದ್ದರೂ, ಭೂ ಸುಧಾರಣೆ ಕಾಯ್ದೆಯನ್ನು ಜಾರಿಗೆ ತರಲು ಪ್ರಯತ್ನಪಟ್ಟಿದ್ದರೂ, ಯಶಸ್ವಿಯಾಗಿರಲಿಲ್ಲ. ಉತ್ತರ ಪ್ರದೇಶದ ಕರ್ಪೂರಿ ಠಾಕೂರ್ ಮತ್ತು ಪಶ್ಚಿಮ ಬಂಗಾಲದ ಕಮ್ಯುನಿಸ್ಟರಿಗೂ ಸಾಧ್ಯವಾಗಿರಲಿಲ್ಲ. ಆದರೆ ದೇವರಾಜ ಅರಸರ ದೂರದೃಷ್ಟಿ ಮತ್ತು ಯೋಜಿತನಡೆಯ ಲವಾಗಿ ಅದಕ್ಕೊಂದು ಬಿಗಿ ಬಂದೋಬಸ್ತ್ ಕಾಯ್ದೆ ರಚಿಸಲ್ಪಟ್ಟು, ಐತಿಹಾಸಿಕ ಮೈಲುಗಲ್ಲಾಗಿ ದೇಶದ ರಾಜಕಾರಣದಲ್ಲಿ ದಾಖಲಾಯಿತು. ಮೊದಲಿಗೆ ವಿರೋಧ ಪಕ್ಷದ ನಾಯಕರಾದ ಕಾಗೋಡು ತಿಮ್ಮಪ್ಪ, ಕೋಣಂದೂರು ಲಿಂಗಪ್ಪ, ಬಂಗಾರಪ್ಪ, ಕಕ್ಕಿಲಾಯರನ್ನು ಜಾಯಿಂಟ್ ಕಮಿಟಿ ಮೆಂಬರ್‌ಗಳನ್ನಾಗಿಸಿ ವಿಶ್ವಾಸಕ್ಕೆ ತೆಗೆದುಕೊಂಡರು. ತಮ್ಮ ಪಕ್ಷವನ್ನೇ ಎರಡು ಗುಂಪುಗಳನ್ನಾಗಿ ಮಾಡಿ, ಪ್ರಗತಿಪರರನ್ನು ಸೆಳೆದು ಕಮಿಟಿಗೆ ನೇಮಿಸಿಕೊಂಡರು. ಕಾಯ್ದೆಯ ವಿರುದ್ಧವಿದ್ದ ಭೂ ಮಾಲಕ ಒಕ್ಕಲಿಗರ ಪೈಕಿ ಹುಚ್ಚಮಾಸ್ತಿಗೌಡರನ್ನೇ ಕಂದಾಯ ಮಂತ್ರಿ ಮಾಡಿ, ಅವರಿಗೇ ಉಸ್ತುವಾರಿ ವಹಿಸಿಕೊಟ್ಟರು. ಇನ್ನು ಭೂ ಸುಧಾರಣೆ ಕಾಯ್ದೆಗೆ ಕರಾವಳಿ ಭಾಗದ ಬಂಟರ ಸುಬ್ಬಯ್ಯ ಶೆಟ್ಟರನ್ನು ಮಂತ್ರಿ ಮಾಡಿ, ಅದಕ್ಕೆ ಪೂರಕವಾಗಿ ಭೂ ನ್ಯಾಯ ಮಂಡಳಿ ರಚಿಸಿದರು.
ಅಲ್ಲಿಯವರೆಗೆ ಭೂ ನ್ಯಾಯ ಮಂಡಳಿಯ ಕಲ್ಪನೆಯೇ ಯಾರಿಗೂ ಇರಲಿಲ್ಲ. ಮೇಲ್ವರ್ಗದ ಭೂ ಮಾಲಕರಿಂದ ಭೂಮಿಯನ್ನು ಸರಕಾರಕ್ಕೆ ಪಡೆದು ಒಕ್ಕಲುತನ ಮಾಡುತ್ತಿದ್ದವರಿಂದ ಡಿಕ್ಲರೇಷನ್ ಾರಂ-7ರಿಂದ ಒಡೆತನಕ್ಕೆ ಅರ್ಜಿ ಸ್ವೀಕರಿಸಿ, ಭೂ ನ್ಯಾಯ ಮಂಡಳಿಯ ಮೂಲಕ ಭೂಮಿ ವಿತರಿಸಿದರು. ಸುಮಾರು 5 ಲಕ್ಷ ಗೇಣಿದಾರರು 21 ಲಕ್ಷ ಎಕರೆ; 15 ಸಾವಿರ ದಲಿತರು 1 ಲಕ್ಷ ಎಕರೆ ಭೂಮಿಯ ಒಡೆಯರಾದರು. ಹಾಗೆಯೇ ಭೂಮಿ ಬಿಟ್ಟುಕೊಟ್ಟವರಿಗೆ ಸುಮಾರು 20 ಕೋಟಿ ರೂ.ಗಳನ್ನು ಪರಿಹಾರ ರೂಪದಲ್ಲಿ ವಿತರಿಸಲಾಯಿತು. ಬಡವರ ಬಗ್ಗೆ ಅರಸರಿಗೆ ಇದ್ದ ಪ್ರೀತಿ ಮತ್ತು ಕಾಳಜಿ, ಇಂತಹ ಕ್ರಾಂತಿಕಾರಿ ಕಾಯ್ದೆ ಜಾರಿಗೆ ತರಲು ಪ್ರೇರೇಪಿಸಿತು. ಅವರನ್ನು ಚಿರಸ್ಥಾಯಿಯನ್ನಾಗಿಸಿತು.