‘ಜಿಯೊ’ ಜಾಹೀರಾತಿನ ಒಳಗುಟ್ಟೇನಿರಬಹುದು?

Update: 2016-09-17 18:36 GMT

ಖುದ್ದು ತಾನೇ ಅಥವಾ ತನ್ನ ಪಿಆರ್‌ಒ ಮೂಲಕ ಪ್ರತಿಯೊಂದು ಸಂಗತಿಯನ್ನೂ ಸೂಕ್ಷ್ಮವಾಗಿ ಗಮನಿಸುವ ಮೋದಿಗೆ ರಿಲಯನ್ಸ್ ನ ಈ ಜಾಹೀರಾತಿನಲ್ಲಿ ತನ್ನ ಛಾಯಾಚಿತ್ರವನ್ನು ಬಳಸುವ ಬಗ್ಗೆ ತಿಳಿದಿರಲಿಲ್ಲ ಎಂದರೆ ಅದನ್ನು ನಂಬಲಾಗುವುದಿಲ್ಲ. ಇದಲ್ಲದೆ ಮೋದಿ ಧರಿಸಿದ್ದ ಜಾಕೆಟ್‌ನ ಬಣ್ಣವೂ ಜಿಯೊನ ಲೋಗೊ ಬಣ್ಣವೂ ಒಂದೇ ಆಗಿರುವುದನ್ನೂ - ಕಡು ನೀಲಿ - ಕಾಕತಾಳೀಯವೆನ್ನಲು ಸಾಧ್ಯವೆ? 

ಇ ತ್ತೀಚೆಗೆ ದೇಶದಾದ್ಯಂತ ಭಾರೀ ಸುದ್ದಿ ಮಾಡಿದ ವಿದ್ಯಮಾನವೆಂದರೆ ರಿಲಯನ್ಸ್‌ನ ಜಿಯೊ ಡಿಜಿಟಲ್ ಲೈಫ್ ಬಿಡುಗಡೆ ಕಾರ್ಯಕ್ರಮ ಮತ್ತು ಮರುದಿನ ಮಾಧ್ಯಮಗಳಲ್ಲಿ ಪ್ರಕಟವಾದ ಜಿಯೊ ಜಾಹೀರಾತು. ಜಾಹೀರಾತಿನ ಶೇ.90ರಷ್ಟು ವಿಸ್ತೀರ್ಣವನ್ನು ನರೇಂದ್ರ ಮೋದಿಯ ಛಾಯಾಚಿತ್ರವೊಂದೇ ಆಕ್ರಮಿಸಿಕೊಂಡಿತ್ತು. ಈ ವಿಷಯ ಸಾಕಷ್ಟು ಚರ್ಚೆಗಳಿಗೆ ಗ್ರಾಸವಾಯಿತು. ದೇಶದ ಪ್ರಧಾನಮಂತ್ರಿಯ ಸ್ಥಾನದಲ್ಲಿರುವ ವ್ಯಕ್ತಿ ಈ ರೀತಿ ಖಾಸಗಿ ಕಂಪೆನಿಯೊಂದರ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುವುದು ಎಷ್ಟರ ಮಟ್ಟಿಗೆ ಸರಿ? ಐಟಿಬಿಟಿ ಕ್ಷೇತ್ರದಲ್ಲಿ ಹಲವಾರು ಪೈಪೋಟಿಗಾರರಿರುವಂತಹ ಸನ್ನಿವೇಶದಲ್ಲಿ ಹೀಗೆ ಮಾಡಿರುವುದು ಪಕ್ಷಪಾತದ ಕ್ರಮವಲ್ಲವೇ? ಎಂಬಿತ್ಯಾದಿ ಪ್ರಶ್ನೆಗಳೆದ್ದವು. ಇವುಗಳಿಗೆ ಉತ್ತರ ಕಂಡುಕೊಳ್ಳಲು ಹೆಚ್ಚೇನೂ ಕಷ್ಟಪಡಬೇಕಾದ ಆವಶ್ಯಕತೆ ಇಲ್ಲ. ಮೊತ್ತಮೊದಲಾಗಿ ಇದು 1950ರ ಲಾಂಛನಗಳು ಮತ್ತು ಹೆಸರುಗಳು (ದುರ್ಬಳಕೆ ತಡೆ) ಕಾಯ್ದೆಯ ಉಲ್ಲಂಘನೆ. ಸದರಿ ಕಾಯ್ದೆಯಲ್ಲಿ ‘‘ಕೇಂದ್ರ ಸರಕಾರ ವಿಧಿಸುವ ನಿಯಮಗಳಿಗೆ ಅನುಗುಣವಾಗಿರುವ ಸಂದರ್ಭಗಳನ್ನು ಹೊರತುಪಡಿಸಿ..., ಸರಕಾರದ ಅನುಮತಿ ಇಲ್ಲದೆ ಯಾವುದೇ ಹೆಸರು ಅಥವಾ ಲಾಂಛನವನ್ನು ವಾಣಿಜ್ಯ ಉದ್ದೇಶಗಳಿಗಾಗಿ ಬಳಸಕೂಡದು’’ ಎಂದು ಸ್ಪಷ್ಟವಾಗಿ ನಿರೂಪಿಸಲಾಗಿದೆ. ಇದರರ್ಥ ಪ್ರಧಾನಮಂತ್ರಿ ಕಚೇರಿಯ ಲಿಖಿತ ಅನುಮತಿ ಇಲ್ಲದೆ ಪ್ರಧಾನಿ ಚಿತ್ರವನ್ನು ಯಾರೂ ಎಲ್ಲೂ ಬಳಸುವಂತಿಲ್ಲ. ಯಾರಾದರೂ ಅಪ್ಪಿತಪ್ಪಿ ಯಾ ಉದ್ದೇಶಪೂರ್ವಕವಾಗಿ ಬಳಸಿದಾಗ ಅದು ಪ್ರಧಾನಿ ಕಚೇರಿ ಗಮನಕ್ಕೆ ಬಂದರೆ ತಕ್ಷಣ ಸೂಕ್ತ ಕ್ರಮ ಕೈಗೊಳ್ಳಬಹುದಾಗಿದೆ. ಉದಾಹರಣೆಗೆ, ಇದೇ ಎಪ್ರಿಲ್‌ನಲ್ಲಿ ಮೋದಿ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿ ಫಡ್ನವಿಸ್ ಚಿತ್ರಗಳಿದ್ದ ಜಾಹೀರಾತುಗಳನ್ನು ಬಿಡುಗಡೆಗೊಳಿಸಿದ್ದ ಪುಣೆಯ ರಿಯಲ್ ಎಸ್ಟೇಟ್ ಸಂಸ್ಥೆ ‘ಮೇಪಲ್’ ಬಳಿಕ ಆ ಜಾಹೀರಾತುಗಳನ್ನು ವಾಪಸ್ ಪಡೆದುಕೊಳ್ಳಬೇಕಾಗಿ ಬಂದಿದೆ. ಹೀಗಿರುವಾಗ ಖುದ್ದು ತಾನೇ ಅಥವಾ ತನ್ನ ಪಿಆರ್‌ಒ ಮೂಲಕ ಪ್ರತಿಯೊಂದು ಸಂಗತಿಯನ್ನೂ ಸೂಕ್ಷ್ಮವಾಗಿ ಗಮನಿಸುವ ಮೋದಿಗೆ ರಿಲಯನ್ಸ್‌ನ ಈ ಜಾಹೀರಾತಿನಲ್ಲಿ ತನ್ನ ಛಾಯಾಚಿತ್ರವನ್ನು ಬಳಸುವ ಬಗ್ಗೆ ತಿಳಿದಿರಲಿಲ್ಲ ಎಂದರೆ ಅದನ್ನು ನಂಬಲಾಗುವುದಿಲ್ಲ. ಇದಲ್ಲದೆ ಮೋದಿ ಧರಿಸಿದ್ದ ಜಾಕೆಟ್‌ನ ಬಣ್ಣವೂ ಜಿಯೊನ ಲೋಗೊ ಬಣ್ಣವೂ ಒಂದೇ ಆಗಿರುವುದನ್ನೂ - ಕಡು ನೀಲಿ - ಕಾಕತಾಳೀಯವೆನ್ನಲು ಸಾಧ್ಯವೇ? ಆದುದರಿಂದ ರಿಲಯನ್ಸ್ ಜಾಹೀರಾತಿನಲ್ಲಿ ಮೋದಿಯ ಚಿತ್ರವನ್ನು ಮುದ್ರಿಸಲು ಒಪ್ಪಿಗೆ ಸಿಕ್ಕಿರಲೇಬೇಕೆಂದು ಊಹಿಸಿದರೆ ತಪ್ಪಾಗಲಾರದೆಂದು ಅನಿಸುತ್ತದೆ. ಇಲ್ಲಿ ಎರಡು ವಿಷಯಗಳಿವೆ. ಒಂದು, ಪ್ರಧಾನಿ ಮೋದಿ ಬರೀ ಒಂದು ಸೂತ್ರದ ಗೊಂಬೆ; ಸೂತ್ರ ಆಡಿಸುತ್ತಾ ಕುಣಿಸುವವರು ಆರೆಸ್ಸೆಸ್ ಪ್ರಮುಖರು ಮತ್ತು ಅಂಬಾನಿ, ಅದಾನಿ ಮೊದಲಾದ ಕಾರ್ಪೊರೇಟ್ ಕುಳಗಳು. ಎರಡನೆಯದಾಗಿ ಜಿಯೊ ಬಿಡುಗಡೆಯ ಸಮಯ ಮತ್ತು ಜಾಹೀರಾತಿನ ಚಿತ್ರಕ್ಕೂ ರಿಲಯನ್ಸ್‌ನ 11,000 ಕೋಟಿ ರೂ. ಗಳಿಗೂ ಮಿಕ್ಕಿದ ಅನಿಲ ಹಗರಣಕ್ಕೂ ಸಂಬಂಧವಿರುವಂತೆ ತೋರು ತ್ತದೆ. ಬನ್ನಿ, ಈ ಅನಿಲ ಹಗರಣದ ಕುರಿತು ಒಂದಿಷ್ಟು ತಿಳಿದುಕೊಳ್ಳೋಣ. ರಿಲಯನ್ಸ್ ಗುಂಪು ಬಂಗಾಲ ಕೊಲ್ಲಿಯಲ್ಲಿ ಕೃಷ್ಣಾ-ಗೋದಾವರಿ ನದಿಮುಖಜ ಪ್ರದೇಶದಲ್ಲಿ ನೈಸರ್ಗಿಕ ಅನಿಲ ಶೋಧನೆ ಮತ್ತು ಉತ್ಪಾದನೆಯ ಉದ್ದಿಮೆಯಲ್ಲಿ ತೊಡಗಿಸಿಕೊಂಡಿರುವ ವಿಚಾರ ನಿಮಗೆಲ್ಲ ತಿಳಿದಿರಬಹುದು. ವಾಸ್ತವದಲ್ಲಿ ರಿಲಯನ್ಸ್ ಇದನ್ನು ಗುಜರಾತ್ ರಾಜ್ಯ ಪೆಟ್ರೋಲಿಯಂ ಕಾರ್ಪೊರೇಷನ್‌ನಿಂದ (ಜಿಎಸ್‌ಪಿಸಿ) ಗುತ್ತಿಗೆಗೆ ವಹಿಸಿಕೊಂಡಿದೆ. ರಿಲಯನ್ಸ್ ಸಂಸ್ಥೆ ನೈಸರ್ಗಿಕ ಅನಿಲ ಶೋಧನೆ ಮತ್ತು ಉತ್ಪಾದನೆಯ ಕಾರ್ಯವನ್ನು ನಿಕೊ ರಿಸೋರ್ಸಸ್ ಎಂಬ ವಿದೇಶಿ ಕಂಪೆನಿ ಜೊತೆ ಸೇರಿಕೊಂಡು ಮಾಡುತ್ತಿದೆ. ಪ್ರಸಕ್ತ ಕಥಾನಕ ಪ್ರಾರಂಭವಾಗುವುದು ಜುಲೈ 2013ರಿಂದ. ನೈಸರ್ಗಿಕ ಅನಿಲ ಉತ್ಪಾದನೆಗೆ ಸಂಬಂಧಪಟ್ಟ ವಿವಾದವೊಂದು ಭಾರೀ ಸುದ್ದಿ ಮಾಡಿದ ಕಾಲದಿಂದ. ರಿಲಯನ್ಸ್ ಮತ್ತು ಸಾರ್ವಜನಿಕ ವಲಯದ ‘ತೈಲ ಮತ್ತು ನೈಸರ್ಗಿಕ ಅನಿಲ ನಿಗಮ’ದ (ಒಎನ್‌ಜಿಸಿ) ಅನಿಲ ಭಂಡಾರಗಳ ನಡುವೆ ಸಂಪರ್ಕ ಇದೆೆ ಎಂಬುದೇ ವಿವಾದದ ವಸ್ತುವಾಗಿತ್ತು. ಒಎನ್‌ಜಿಸಿ ಅಂದು ಹೈಡ್ರೋಕಾರ್ಬನ್ಸ್ ಮಹಾನಿರ್ದೇಶಕರಿಗೆ (ಹೈಡ್ರೊಕಾರ್ಬನ್ಸ್ ಮಹಾನಿರ್ದೇಶಕರು ತೈಲ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಕೈಕೆಳಗೆ ಕಾರ್ಯಾಚರಿಸುತ್ತಿದ್ದು ದೇಶದಲ್ಲಿ ನೈಸರ್ಗಿಕ ಅನಿಲ ಉತ್ಪಾದನೆಯ ಮೇಲುಸ್ತುವಾರಿ ನೋಡಿಕೊಳ್ಳುತ್ತಾರೆ) ಪತ್ರವೊಂದನ್ನು ಬರೆದು ತನ್ನ ತೈಲ ಬ್ಲಾಕಿನ ಪಕ್ಕದಲ್ಲಿರುವ ರಿಲಯನ್ಸ್‌ನ ಬ್ಲಾಕ್ ಬಗ್ಗೆ ಮಾಹಿತಿ ಕೋರಿತ್ತು. ವಿವಾದವನ್ನು ಬಗೆಹರಿಸುವ ಪ್ರಯತ್ನದ ಭಾಗವಾಗಿ ಲೋಕಸಭಾ ಚುನಾವಣೆಗೆ ಮುನ್ನ ಕೇಂದ್ರ ಸರಕಾರ, ಒಎನ್‌ಜಿಸಿ ಮತ್ತು ರಿಲಯನ್ಸ್ ನಡುವೆ ಮಾತುಕತೆಗಳು ನಡೆದವು. ಅಂತಿಮವಾಗಿ ಓರ್ವ ಸ್ವತಂತ್ರ, ಅಂತಾರಾಷ್ಟ್ರೀಯ ಸಲಹಾಗಾರನ ಸೇವೆ ಪಡೆದುಕೊಳ್ಳುವ ಜಂಟಿ ನಿರ್ಧಾರಕ್ಕೆ ಬರಲಾಯಿತು. ಅಂತೆಯೆ ಅಮೆರಿಕದ ಸಂಸ್ಥೆಯನ್ನು ಸಲಹಾಗಾರನಾಗಿ ನೇಮಿಸಲಾಯಿತು. ನೇಮಕಾತಿ ಮತ್ತು ಅದಕ್ಕೆ ಸಂಬಂಧಪಟ್ಟ ವಿವಿಧ ಗೊತ್ತುಪಾಡುಗಳಿಗೆ ಒಎನ್‌ಜಿಸಿ, ರಿಲಯನ್ಸ್ ಎರಡೂ ತಮ್ಮ ಸಮ್ಮತಿಯನ್ನು ಸೂಚಿಸಿದ್ದವು.

ಒಎನ್‌ಜಿಸಿ ಈ ಅಂತಾರಾಷ್ಟ್ರೀಯ ಸಲಹಾಗಾರನ ಶೋಧನಾ ವರದಿ ಬಹಿರಂಗವಾಗುವ ತನಕ ಕಾಯಲಿಲ್ಲ. ಅದು ದಿಲ್ಲಿ ಹೈಕೋರ್ಟಿನಲ್ಲಿ ದಾವೆಯೊಂದನ್ನು ಹೂಡಿ ‘‘ರಿಲಯನ್ಸ್ ಕೊಳವೆಬಾವಿಗಳನ್ನು ವಾರೆಯಾಗಿ ತೋಡಲಾಗಿದೆ. ಒಎನ್‌ಜಿಸಿಯ ಭಂಡಾರಗಳಿಂದ ಅನಿಲ ಹೊರತೆಗೆಯುವುದೇ ಇದರ ಸ್ಪಷ್ಟ ಉದ್ದೇಶವಾಗಿದೆ. ಅದು ಒಎನ್‌ಜಿಸಿಯ ಬಾವಿಗಳಿಂದ ರೂ. 30,000 ಕೋಟಿಯಷ್ಟು ಬೆಲೆಬಾಳುವ ಅನಿಲವನ್ನು ಹೊರತೆಗೆದಿದೆ’’ (ಆರೋಪಿ ಬಡವನಾಗಿದ್ದರೆ ‘ಕಳವು’ ಎನ್ನಲಾಗುತ್ತದೆ; ಆರೋಪಿ ಶ್ರೀಮಂತನಾಗಿದ್ದರೆ ಬೇರೆಯೆ ಹೆಸರು!) ಎಂದು ಆರೋಪಿಸಿತು. ಮುಂದೆ ಡಿಸೆಂಬರ್ 2015ರಲ್ಲಿ ಸಲಹಾಗಾರ ಸಂಸ್ಥೆ ತನ್ನ ಅಂತಿಮ ವರದಿಯನ್ನು ಸಲ್ಲಿಸಿದ್ದು ಅದರಲ್ಲಿ ಹೀಗೆ ಹೇಳಲಾಗಿದೆ: ರಿಲಯನ್ಸ್‌ನ ಕೆಜಿ-ಡಿ6 ಬ್ಲಾಕು ಮತ್ತು ಒಎನ್‌ಜಿಸಿಯ ಕೆಜಿ-ಡಿ5, ಗೋದಾವರಿ ಪಿಎಂಎಲ್ ಬ್ಲಾಕುಗಳ ನಡುವೆ ಸಂಪರ್ಕ ಇರುವುದನ್ನು ಕಂಡುಕೊಳ್ಳಲಾಗಿದೆ. ಒಎನ್‌ಜಿಸಿಗೆ ಸೇರಿದ 11.122 ಬಿಲಿಯ ಘನ ಮೀಟರ್ ಅನಿಲ ರಿಲಯನ್ಸ್‌ನ ಬ್ಲಾಕ್‌ನೊಳಗೆ ಬಂದಿದೆ. ಅದರ ಬೆಲೆ ರೂ. 11,055 ಕೋಟಿಯಷ್ಟಾಗುತ್ತದೆ! ಇಷ್ಟೊಂದು ದುಡ್ಡು ವೆಚ್ಚ ಮಾಡಿ ತಯಾರಿಸಲಾದ ವರದಿಗೆ ಮೋದಿ ಸರಕಾರದ ಪ್ರತಿಕ್ರಿಯೆ ಹೆಚ್ಚುಕಡಿಮೆ ಶೂನ್ಯವಾಗಿತ್ತು. ಎರಡು ವಾರಗಳು ಕಳೆದರೂ ಯಾವುದೇ ಕ್ರಮ ಕೈಗೊಳ್ಳದ ಸರಕಾರ ಕೊನೆಗೆ ಸಲಹಾಗಾರನ ವರದಿಯನ್ನು ಅಧ್ಯಯನ ಮಾಡಲೆಂದು ನ್ಯಾ ಎ.ಪಿ. ಶಾ ನೇತೃತ್ವದಲ್ಲಿ ಒಂದು ಏಕಸದಸ್ಯ ಸಮಿತಿಯನ್ನು ರಚಿಸಿತು. ಸರಕಾರ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಸಲಹೆ ನೀಡುವಂತೆ ಸಮಿತಿಗೆ ಆದೇಶಿಸಲಾಯಿತು.

ಇದೇ ಆಗಸ್ಟ್ 31ರಂದು ತನ್ನ ವರದಿಯನ್ನು ಸಲ್ಲಿಸಿರುವ ನ್ಯಾ ಎ.ಪಿ. ಶಾ ಸಮಿತಿ ಕೂಡಾ ರಿಲಯನ್ಸ್ ಕಂಪೆನಿ ಒಎನ್‌ಜಿಸಿಗೆ ಸೇರಿದ ಬ್ಲಾಕ್‌ನಿಂದ ನೈಸರ್ಗಿಕ ಅನಿಲವನ್ನು ಹೊರತೆಗೆದು ಅನ್ಯಾಯಯುತ ಲಾಭ ಪಡೆದುಕೊಂಡಿದೆ ಎಂಬ ತೀರ್ಮಾನಕ್ಕೆ ಬಂದಿದೆ. ಶಾ ಸಮಿತಿ ತನ್ನ ವರದಿಯಲ್ಲಿ, ಸಲಹಾಗಾರನ ವರದಿ ಸರಿಯಾಗಿರುವಂತೆ ತೋರುತ್ತದೆ. ಅದರಲ್ಲಿ ಹುಳುಕು ಕಂಡುಹಿಡಿಯುವ ಹಾಗೆ ಇಲ್ಲ. ಆ ವರದಿಯನ್ನು ಪ್ರಶ್ನಾರ್ಹ ವಿಧಾನಗಳಲ್ಲಿ ತಯಾರಿಸಲಾಗಿದೆ ಎನ್ನುವುದನ್ನು ನಂಬಲು ಕಷ್ಟ ಎಂದು ಹೇಳಿದೆ. ಇದಲ್ಲದೆ 2003ರ ಮೌಲ್ಯನಿರ್ಣಯ ವರದಿಯಲ್ಲಿಯೂ ರಿಲಯನ್ಸ್‌ಗೆ ತನ್ನ ಬ್ಲಾಕ್ ಒಎನ್‌ಜಿಸಿಯ ಬ್ಲಾಕ್‌ನೊಂದಿಗೆ ಸಂಪರ್ಕ ಹೊಂದಿರುವುದರ ಅರಿವು ಮೊದಲೇ ಇತ್ತೆಂಬ ವಾಸ್ತವಾಂಶ ಮೇಲುನೋಟಕ್ಕೇ ಗೋಚರಿಸುತ್ತದೆ ಎಂದು ತಿಳಿಸಿದೆ. ಈ ಮೌಲ್ಯನಿರ್ಣಯ ವರದಿಯನ್ನು ಹೈಡ್ರೋಕಾರ್ಬನ್ಸ್ ಮಹಾನಿರ್ದೇಶಕರ ಗಮನಕ್ಕೆ ಏಕೆ ತರಲಿಲ್ಲವೆಂದು ಸಮಿತಿ ರಿಲಯನ್ಸ್ ಅನ್ನು ತರಾಟೆಗೆ ತೆಗೆದುಕೊಂಡಿದೆ. ಅಷ್ಟು ಮಾತ್ರವಲ್ಲ, ಸಲಹಾಗಾರನ ವರದಿ ಮಾರ್ಚ್ 2015ರ ವರೆಗೆ ಸೀಮಿತವಾಗಿರುವುದರಿಂದ ಅದರ ನಂತರವೂ ಅನಿಲ ಸೋರಿಕೆಯಾಗಿರುವ ಬಗ್ಗೆ ಸರಕಾರ ತನಿಖೆ ಮಾಡಬೇಕೆಂದೂ ಸೂಚಿಸಿದೆ. ಇದೆಲ್ಲ ಮೊದಲೇ ಗೊತ್ತಿದ್ದೂ 6 ವರ್ಷಗಳ ಕಾಲ ಯಾವುದೇ ಕ್ರಮ ಕೈಗೊಳ್ಳದೆ ಸುಮ್ಮನಿದ್ದ ಒಎನ್‌ಜಿಸಿ ವಿರುದ್ಧವೂ ಸಮಿತಿ ಟೀಕಾಪ್ರಹಾರ ಮಾಡಿದೆ. ಕೊನೆಯದಾಗಿ ರಿಲಯನ್ಸ್ ಹೀಗೆ ಹೊರತೆಗೆದಿರುವ ಅನಿಲದ ಮೌಲ್ಯವನ್ನು ವಸೂಲಿ ಮಾಡುವ ಹಕ್ಕಿರುವುದು ಭಾರತ ಸರಕಾರಕ್ಕೆ ಹೊರತು ಒಎನ್‌ಜಿಸಿಗೆ ಅಲ್ಲ ಎಂಬುದನ್ನು ಸಮಿತಿ ಸ್ಪಷ್ಟಪಡಿಸಿದೆ. ಇದು ಮುಖೆೇಶ್ ವರ್ಸಸ್ ಅನಿಲ್ ಅಂಬಾನಿ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯ 2010ರ ಮೇ 7ರಂದು ನೀಡಿರುವ ತೀರ್ಪಿಗೆ ಅನುಗುಣವಾಗಿದೆ. ‘‘ನೈಸರ್ಗಿಕ ಅನಿಲ ಭಾರತದ ಜನತೆಗೆ ಸೇರಿದ್ದಾಗಿದ್ದು ಸರಕಾರ ಅದರ ಸುಪರ್ದು ದಾರ ಅಷ್ಟೆ’’

ಎಂದು ಸರ್ವೋಚ್ಚ ನ್ಯಾಯಾಲಯ ಅಂದು ಸ್ಪಷ್ಟಪಡಿಸಿತ್ತು. ಶಾ ಸಮಿತಿಯ ವರದಿ ಸಾರ್ವಜನಿಕರ ಕಣ್ಣಿಗೆ ಬೀಳುವುದು ರಿಲಯನ್ಸ್ ಗೆ ಸುತಾರಾಂ ಇಷ್ಟವಿರಲಿಲ್ಲ. ಅದು ವರದಿಯನ್ನು ಮುಚ್ಚಿಡಲು ಬಯಸಿತ್ತು. ವರದಿಯ 5ನೆ ಅಧ್ಯಾಯದಲ್ಲಿರುವ ಈ ಪ್ಯಾರಾ ಗಮನಿಸಿ: ‘‘ಸಮಿತಿ ನೀಡುವ ಸಲಹೆಗಳು ತನ್ನನ್ನು ಬಾಧ್ಯವಾಗಿಸುವುದಿಲ್ಲವಾದರೂ ಅದನ್ನು ಸಾರ್ವಜನಿಕರಿಗೆ ಬಿಡುಗಡೆಗೊಳಿಸುವುದರಿಂದ ರಿಲಯನ್ಸ್ ಗೂ ಅದರ ಪ್ರತಿಷ್ಠೆಗೂ ತುಂಬಲಾರದ ನಷ್ಟ ಉಂಟಾಗಲಿದೆ ಎಂದು ರಿಲಯನ್ಸ್ ಸಮಿತಿಗೆ ತಿಳಿಸಿತು. ಭಾರತ ಸರಕಾರ ಸಮಿತಿಯ ಸಲಹೆಗಳ ಆಧಾರದಲ್ಲಿ ಮುಂದಿನ ಕ್ರಮ ಕೈಗೊಳ್ಳುವ ಬಗ್ಗೆ ನಿರ್ಧರಿಸಬಹುದಾಗಿದೆ.’’ ಸುಮಾರು ಒಂದು ತಿಂಗಳ ಹಿಂದೆ ಭಾರತದ ಮಹಾಲೆಕ್ಕ ಪರಿಶೋಧಕರು (ಸಿಎಜಿ) ಸಲ್ಲಿಸಿರುವ ವರದಿಯಲ್ಲಿ ಕೂಡ ಕೆಜಿ-ಡಿ6 ಬ್ಲಾಕ್‌ನ ಬಾಬತ್ತು ರಿಲಯನ್ಸ್‌ನಿಂದ ಸುಮಾರು 9,307 ಕೋಟಿ ರೂಪಾಯಿ ಹೆಚ್ಚುವರಿ ಮೊತ್ತವನ್ನು ಸಂಗ್ರಹಿಸಬೇಕಾಗಿದೆ ಎಂದು ಹೇಳಲಾಗಿದೆ. ರಿಲಯನ್ಸ್ ಸಂಸ್ಥೆ ಒಎನ್‌ಜಿಸಿಯ ಬ್ಲಾಕಿನಿಂದ ಅನಿಲವನ್ನು ಹೊರತೆಗೆದಿರುವುದು ನಿಜವೆಂದು ಕೇಂದ್ರ ಸರಕಾರ ಒಪ್ಪಿದಲ್ಲಿ ರಿಲಯನ್ಸ್ ನೀಡಬೇಕಿರುವ ಪರಿಹಾರದ ಮೊತ್ತವನ್ನು ಗ್ಯಾಸ್ ಉತ್ಪಾದನೆ ಪ್ರಾರಂಭವಾದಂದಿನಿಂದ, ಅಂದರೆ 2009ರ ಎಪ್ರಿಲ್‌ನಿಂದ, ಲೆಕ್ಕಹಾಕಬೇಕಾಗುತ್ತದೆಂದು ಸಿಎಜಿ ಅಭಿಪ್ರಾಯಪಟ್ಟಿದೆ. ಒಎನ್‌ಜಿಸಿ ಬಹುಶಃ ಇದೇ ಹಿನ್ನೆಲೆಯಲ್ಲಿ 30,000 ಕೋಟಿ ರೂಪಾಯಿಗಳ ಪರಿಹಾರ ಕೇಳಿರಬೇಕೆಂದು ತೋರುತ್ತದೆ. ಮೋದಿ ಸರಕಾರ ಶಾ ಸಮಿತಿಯ ಶೋಧನೆಗಳು ಮತ್ತು ಅಭಿಪ್ರಾಯ ಗಳೊಂದಿಗೆ ಸಿಎಜಿ ವರದಿಯನ್ನೂ ಸ್ವೀಕರಿಸಿದಲ್ಲಿ ರಿಲಯನ್ಸ್ ವಿರುದ್ಧ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಬೇಕಾಗುತ್ತದೆ. ಹಾಗೇನಾದರೂ ಆದರೆ ರಿಲಯನ್ಸ್‌ನ ಆರ್ಥಿಕ ಸಾಮ್ರಾಜ್ಯದಲ್ಲಿ ಭಾರಿ ಅಲ್ಲೋಲಕಲ್ಲೋಲ ಉಂಟಾಗಲಿದೆ. ತಿಳಿಯಿತೇ ರಿಲಯನ್ಸ್‌ನ ಜಿಯೊ ಬಿಡುಗಡೆ ಮತ್ತು ಜಾಹೀರಾತಿನ ಹಿಂದಿರುವ ಗುಟ್ಟೇನೆಂದು!!?? ಹೀಗಿರುವಾಗ ರಿಲಯನ್ಸ್ ನ ವಿರುದ್ಧ ಕಾನೂನು ಕ್ರಮ ಜರಗಲಿದೆ ಎಂದು ಯಾರಾದರೂ ಭಾವಿಸಿದರೆ ಅದು ಬರೀ ಕಲ್ಪನಾಲೋಕದ ವಿಹಾರವಾಗಲಿದೆ.

(ಆಧಾರ: scroll.inನಲ್ಲಿ ಸುಭೀರ್ ಘೋಷ್ ಲೇಖನ; ವಿವಿಧ ವರದಿಗಳು)

Writer - ಸುರೇಶ್ ಭಟ್, ಬಾಕ್ರಬೈಲ್

contributor

Editor - ಸುರೇಶ್ ಭಟ್, ಬಾಕ್ರಬೈಲ್

contributor

Similar News