ಜನಸೇವೆಗಾಗಿ ಮದುವೆ ಬೇಡ ಎಂದಿದ್ದರು ಅಪ್ಪಾಜಿ -ಭಾರತಿ ಅರಸು
ಇದು ನಮ್ಮಜ್ಜಿ ನಮಗೇಳಿದ್ದು... ನಾನು ಮದುವೆಯಾಗುವುದಿಲ್ಲ ಎಂದು ಅಪ್ಪಾಜಿ ಹಠ ಹಿಡಿದಿದ್ದರಂತೆ. ಕಾರಣ, ತಾನು ಸಂಪೂರ್ಣವಾಗಿ ಸಾರ್ವಜನಿಕ ಜೀವನಕ್ಕೆ ಅರ್ಪಿಸಿಕೊಳ್ಳಬೇಕು; ಸಂಸಾರ, ಮಕ್ಕಳು, ಮನೆ ಮಠಕ್ಕೆ ಸಮಯ ಕೊಡಲಾಗುವುದಿಲ್ಲ ಎಂದಿದ್ದರಂತೆ. ಆಗ ನಮ್ಮಜ್ಜಿ ತಲೆಮೇಲೆ ಕೈ ಹೊತ್ತು ಕೂತಿದ್ದರಂತೆ. ನಮ್ಮ ಚಿಕ್ಕಪ್ಪ ಕೆಂಪರಾಜ್ ಅರಸು ಆಗಲೇ ಅಂತರ್ಜಾತಿ ಮದುವೆಯಾಗಿದ್ದರು. ಇದ್ದೋರೆ ಇಬ್ಬರು ಗಂಡುಮಕ್ಕಳು. ಅವರಲ್ಲಿ ಒಬ್ಬ ಅಂತರ್ಜಾತಿ ಮದುವೆಯಾಗಿ ಮನೆಯಿಂದ ದೂರಾಗಿದ್ದಾನೆ, ಇನ್ನೊಬ್ಬ ಮದುವೆಯಾಗಲ್ಲ ಅಂತಿದ್ದಾನೆ. ಮನೆ ಉಳಿಯೋದು ಹೇಗೆ, ಮನೆತನ ಬೆಳೆಯೋದು ಹೆಂಗೆ ಎಂದು ನಮ್ಮ ತಂದೆಯ ತಾಯಿ, ಸಾಕು ತಾಯಿ ಮತ್ತು ಅಜ್ಜಿ- ಮೂವರೂ ಚಿಂತೆಗೆ ಬಿದ್ದಿದ್ದರಂತೆ.
ಕರ್ಣ-ತ್ಯಾಗ ತುಂಬಾ ಇಷ್ಟ
ನಮ್ಮ ಪೇರೆಂಟ್ಸ್‌ಗೆ ಒಟ್ಟು ಒಂಬತ್ತು ಜನ ಮಕ್ಕಳು. ಆ ಒಂಭತ್ತರಲ್ಲಿ ಉಳಿದವರು ಮೂರು. ಅವರಲ್ಲಿ ಕೊನೆಯವಳು ನಾನು. ನಾನು ಹುಟ್ಟುವ ಸಮಯಕ್ಕೆ ಅಪ್ಪಾಜಿ ರಾಜಕೀಯ ರಂಗದಲ್ಲಿ ಬಿಡುವಿಲ್ಲದ ರಾಜಕಾರಣಿಯಾಗಿ ವಿಜೃಂಭಿಸುತ್ತಿದ್ದರು. ನಾನು ಒಂದು ವರ್ಷದ ಮಗುವಾಗಿದ್ದಾಗ ಕಲ್ಲಳ್ಳಿ ಬಿಟ್ಟು ಬೆಂಗಳೂರಿನ ಮಲ್ಲೇಶ್ವರಂನ ಬಾಡಿಗೆ ಮನೆಗೆ ಬಂದೆವು. ಹೀಗಾಗಿ ಅಪ್ಪಾಜಿಗೆ ರಾಜಕೀಯದ ನಡುವೆ ಬಿಡುವು ಸಿಕ್ಕಿದ್ದು ಸ್ವಲ್ಪ. ಆ ಸ್ವಲ್ಪ ಸಮಯದಲ್ಲಿ ನನಗೆ ಅಪ್ಪಾಜಿ ಸಿಕ್ಕಿದ್ದು ಇನ್ನೂ ಸ್ವಲ್ಪ. ಅಪ್ಪಾಜಿಯೊಂದಿಗೆ ಸಂಪೂರ್ಣವಾಗಿ ಸಮಯ ಕಳೆಯಲಾಗಲೇ ಇಲ್ಲ. ಒಂದು ರೀತಿಯಲ್ಲಿ ನಾನು ನತದೃಷ್ಟೆ. ನಾವು ಚಿಕ್ಕವರಾಗಿದ್ದಾಗ ಅಪ್ಪಾಜಿ, ನಮ್ಮ ಚಿಕ್ಕಪ್ಪ ಕೆಂಪರಾಜ್ ಅರಸು ಮತ್ತು ಅಂಕಲ್ ಚದುರಂಗ- ಮೂವರೂ ಒಂದೆರಡು ವರ್ಷಗಳ ಅಂತರದವರು -ಮೂವರೂ ಅವರವರ ಕ್ಷೇತ್ರದಲ್ಲಿ ಸಾಧನೆ ಮಾಡಿದವರು. ಒಟ್ಟಾಗಿ ಕೂತು ಲೋಕದ ವಿಚಾರಗಳನ್ನೆಲ್ಲ ಮಾತನಾಡುತ್ತಿದ್ದರು. ತುಂಬಾ ಇಂಟರೆಸ್ಟಿಂಗ್ ಆಗಿರೋದು. ಅದರಲ್ಲೂ ಮಹಾಭಾರತದ ಬಗ್ಗೆ ಚರ್ಚೆ ಶುರುವಾಯಿತು ಎಂದರೆ, ನಾವು ಮೂಕರಾಗಿ ಕೇಳುವುದಷ್ಟೆ ಕೆಲಸ. ಅಪ್ಪಾಜಿಗೆ ಕರ್ಣನ ಪಾತ್ರ ಕಂಡರೆ ಇಷ್ಟ. ಆತನ ತ್ಯಾಗಮಯ ಬದುಕಿನ ಬಗ್ಗೆ ಅಪ್ಪಾಜಿ ವಿದ್ವತ್ಪೂರ್ಣವಾಗಿ ಮಾತನಾಡುತ್ತಿದ್ದರು. ಚದುರಂಗ ಅಂಕಲ್ ಅರ್ಜುನ, ಕೆಂಪರಾಜ್ ಚಿಕ್ಕಪ್ಪ ಕೃಷ್ಣ. ಒಬ್ಬೊಬ್ಬರು ಒಂದೊಂದು ಪಾತ್ರವಾಗಿ, ಆ ಪಾತ್ರದ ಒಳಗಿಳಿದು ವಿಶ್ಲೇಷಿಸುತ್ತಿದ್ದರು. ಮನೆಯಲ್ಲಿಯೇ ಕಣ್ಣಮುಂದೆಯೇ ಕುರುಕ್ಷೇತ್ರ ನಡೆದುಹೋಗುತ್ತಿತ್ತು. ಅಪ್ಪಾಜಿಗೆ ನಾಟಕಗಳಲ್ಲಿ ನಟಿಸುವ ಖಯಾಲಿ ಇತ್ತು. ಕಾಲೇಜಿನ ದಿನಗಳಲ್ಲಿ ಹಲವಾರು ನಾಟಕಗಳಲ್ಲಿ ಅಭಿನಯಿಸಿದ್ದರಂತೆ. ಅಲ್ಲಿಯೂ ಅವರು ಹೆಚ್ಚು ಕರ್ಣನ ಪಾತ್ರವನ್ನೇ ಹಾಕುತ್ತಿದ್ದರಂತೆ. ಕರ್ಣ ಮತ್ತವನ ತ್ಯಾಗವನ್ನು ಒಪ್ಪುವ ಸಮರ್ಥಿಸುವ ಅಪ್ಪಾಜಿಯ ಅನಿಸಿಕೆ, ‘ಪ್ರತಿಯೊಬ್ಬ ಮನುಷ್ಯನು ಬದುಕಿನಲ್ಲಿ ತ್ಯಾಗಮಯಿಯಾಗಿರಬೇಕು, ದಾನ ಧರ್ಮವಿಲ್ಲದ ಬದುಕು ಬರಡು, ಅಪೂರ್ಣ’ ಎಂದು ಹೇಳುತ್ತಿದ್ದರು. ಬರೀ ಹೇಳಿದ್ದಲ್ಲ, ಅಳವಡಿಸಿಕೊಂಡು ಪಾಲಿಸಿದರು. ದಾನಶೂರ ಕರ್ಣನಂತೆಯೇ ಬದುಕಿದರು. ಅವರಿಂದ ಅನುಕೂಲ ಪಡೆದವರು ಅಷ್ಟಿಷ್ಟಲ್ಲ. ಅವರು ಇಲ್ಲವಾಗಿ ಇವತ್ತಿಗೆ 34 ವರ್ಷವಾಯಿತು, ಈಗಲೂ ಅವರನ್ನು ನೆನಪಿಸಿಕೊಳ್ಳುತ್ತಿದ್ದಾರಲ್ಲ, ಅದೇ ಅವರ ತ್ಯಾಗದ ಫಲ.
ನಾನೇ ವೀಕು, ನಂದೇ ತಪ್ಪು
ಅಪ್ಪಾಜಿ ಮತ್ತು ಕೆಂಪರಾಜ್ ಚಿಕ್ಕಪ್ಪ ಚಿಕ್ಕವರಾಗಿದ್ದಾಗ, ಮೈಸೂರಿನ ಹಾಸ್ಟೆಲ್‌ನಲ್ಲಿದ್ದು, ಓದುತ್ತಿದ್ದರು. ಊಟ-ತಿಂಡಿ ಸರಿ ಇರಲಿಲ್ಲ. ಅಪ್ಪಾಜಿ ಮಲೇರಿಯಾ ರೋಗಕ್ಕೆ ತುತ್ತಾದರು. ಅದೂ ಒಂದಲ್ಲ, ಎರಡು ಸಲ. ಚಿಕಿತ್ಸೆ ಪಡೆದು ಚೇತರಿಸಿಕೊಂಡರೂ, ತುಂಬಾ ವೀಕಾಗಿ ಹಂಚಿಕಡ್ಡಿಯಂತಾದರು. ಹೀಗಿರುವಾಗಲೇ ಅವರ ಸಹಪಾಠಿಯೊಬ್ಬ ಯಾವುದೋ ವಿಷಯಕ್ಕೆ ಅವರನ್ನು ಗಲಾಟೆಗೆಳೆದು, ನೂಕಿ, ಥಳಿಸಿ ಗಾಯಗೊಳಿಸಿದ್ದ. ಗಂಭೀರ ಸ್ವಭಾವದ, ಯಾರೊಂದಿಗೂ ಹೆಚ್ಚು ಬೆರೆಯದ, ಮಾತನಾಡದ ಬಾಲಕ ದೇವರಾಜರ ಸ್ಥಿತಿ ಕಂಡ ಸ್ನೇಹಿತರು, ‘‘ನೀನೊಬ್ಬನೆ ಅಂತ ಭಾವಿಸಬೇಡ, ನಿನ್ನ ಬೆಂಬಲಕ್ಕೆ ನಾವಿದ್ದೇವೆ, ಬಾ, ತೋರಿಸು ಅವನ್ನ ಒಂದ್ ಕೈ ನೋಡ್ಕಳನ’’ ಎಂದರು. ಆಗ ಅಪ್ಪಾಜಿ, ‘‘ಬೇಡ ಬೇಡ... ತಪ್ಪು ನಂದೆ’’ ಎಂದು ಸುಮ್ಮನಿರಿಸಲು ನೋಡಿದರು. ಇವರಿಂದ ತಪ್ಪಾಗಿಲ್ಲ ಎಂದೇ ಭಾವಿಸಿದ್ದ ಎಲ್ಲರೂ ಅವಾಕ್ಕಾಗಿ ನಿಂತರು. ‘‘ನಾನು ಗಟ್ಟಿಮುಟ್ಟಾಗಿದ್ದರೆ ಅವುನ್ಯಾಕೆ ಹಂಗ್ ಮಾಡ್ತಿದ್ದ, ನಾನು ವೀಕ್ ಆಗಿರೋದ್ರಿಂದ ಅವನು ಹೊಡೆದ, ಹಂಗಾಗಿ ನಂದೇ ತಪ್ಪು’’ ಎಂದರಂತೆ. ನನಗೆ ಈ ಕತೆ ಕೇಳಿ ಗಾಂಧಿ, ಬುದ್ಧರೆಲ್ಲ ನೆನಪಾದರು. ಆಮೇಲೆ ಮೈಸೂರಿನಲ್ಲಿದ್ದ ಸಾಹುಕಾರ್ ಚೆನ್ನಯ್ಯನವರ ಗರಡಿ ಮನೆ ಸೇರಿ, ಪ್ರತಿದಿನ ವ್ಯಾಯಾಮದ ಮೂಲಕ ದೇಹ ದಂಡಿಸಿ ಕುಸ್ತಿ ಕಲಿತರು. ಒಂದೇ ವರ್ಷದಲ್ಲಿ ಚೆನ್ನಾಗಿ ತರಬೇತಿ ಪಡೆದು ಪೈಲ್ವಾನ್ ಆದರು. ಮೈಸೂರು ಮಟ್ಟದ ಕುಸ್ತಿ ಸ್ಪರ್ಧೆಯಲ್ಲಿ ಭಾಗವಹಿಸಿ, ‘ಮಿಸ್ಟರ್ ಮೈಸೂರು’ ಬಿರುದನ್ನೂ ಪಡೆದರು. ಆಗ ಅವರನ್ನು ಮೈಸೂರಿನ ಜನ ಕಲ್ಲಳ್ಳಿಯ ಪೈಲ್ವಾನ್ ಅಂತಲೇ ಕರೆಯುತ್ತಿದ್ದರಂತೆ. ಕಾಲೇಜಿನಲ್ಲಿದ್ದಾಗ ಫುಟ್‌ಬಾಲ್, ಟೆನಿಸ್ ಆಡುತ್ತಿದ್ದರಂತೆ. ಉತ್ತಮ ಕ್ರೀಡಾಪಟು. ದೇಹವನ್ನು ಚೆನ್ನಾಗಿ ಸಾಕಿದ್ದರು. ಕಟ್ಟುಮಸ್ತಾಗಿದ್ದರು. ಆಜಾನುಬಾಹು. ಹೀಗೆ ಸಹಪಾಠಿಯಿಂದ ಒದೆ ತಿಂದು, ದೇಹ ಬೆಳೆಸುವತ್ತ ಗಮನ ಕೊಟ್ಟ ಅಪ್ಪಾಜಿ, ಓದಿನಲ್ಲಿ ಹಿಂದೆ ಬಿದ್ದರು. ಫೇಲ್ ಆದರು. ಫೇಲಾದ ಸುದ್ದಿ ಕೇಳಿದ ನಮ್ಮ ಅಜ್ಜಿ, ಮಗ ಹಿಂಗಾಗಿಬಿಟ್ಟನಲ್ಲ ಅಂತ ಅಳುತ್ತಾ ಕೂತರು. ಎಷ್ಟರಮಟ್ಟಿಗೆ ಅಂದರೆ ಆಕಾಶಾನೆ ತಲೆ ಮೇಲೆ ಬಿದ್ದಂತೆ ರೋದಿಸತೊಡಗಿದರು. ಆಗ ಊರಿನ ಜನರೆಲ್ಲ ಬಂದು, ‘‘ದೇವರಾಜ ಬುದ್ಧೋರು ಬುದ್ಧಿವಂತ್ರು, ಈ ಸಲ ಇಲ್ದೆ ಹೋದ್ರೂ ಮುಂದಿನ ಸಲಕ್ಕೆ ಪರೀಕ್ಷೆ ಕಟ್ಟಿ ಪಾಸಾಗ್ತ್ತಾರೆ ಬಿಡಿ’’ ಎಂದು ಸಮಾಧಾನ ಮಾಡಿದ್ದರು.
ಸದ್ಯಕ್ಕೆ ಎಲೆನಾದ್ರು ಬಿಟ್ಟಿದ್ದೀರಲ್ಲ...
ಊಟದ ಬಗ್ಗೆ ಮಾತನಾಡೋ ಹಾಗೆ ಇಲ್ಲ. ಸೌದೆ ಒಲೆಯ ಹಳ್ಳಿ ಅಡುಗೆ, ನೆಲದ ಮೇಲೆ ಕೂತು, ಬಾಳೆ ಎಲೆಯಲ್ಲಿ ಅಥವಾ ದೊಡ್ಡ ತಟ್ಟೆಯಲ್ಲಿ ಬಡಿಸಿದ್ದನ್ನು ಕೈಯಲ್ಲಿ ಉಣ್ಣುವ ಊಟ ಇಷ್ಟಪಡುತ್ತಿದ್ದರು. ಕುಡಿಯಲಿಕ್ಕೆ ತಾಮ್ರದ ದಪ್ಪ ಚೊಂಬಲ್ಲಿಯೇ ನೀರು ಕೊಡಬೇಕಾಗಿತ್ತು. ಹೊಲದತ್ತಿರಕ್ಕೆ ಊಟ ತೆಗೆದುಕೊಂಡು ಹೋದ್ರೆ, ಅಲ್ಲಿ ಊಟ ಮಾಡಲು ಪತ್ರಾವಳಿ ಎಲೆಯೇ ಆಗಬೇಕಿತ್ತು. ನಮ್ಮಮ್ಮ ಮತ್ತು ನಮ್ಮಜ್ಜಿ ಒಳ್ಳೆ ಅಡುಗೆ ಮಾಡುತ್ತಿದ್ದರು. ಮುದ್ದೆ ಸೊಪ್ಪು ಸಾರು, ಕಾಳು ಸಾರು, ಉಪ್ಪೆಸ್ರು ಖಾರ, ರಾಗಿ ರೊಟ್ಟಿ, ಅಕ್ಕಿ ರೊಟ್ಟಿ, ಒಂದೇ ಥರ ಅಡುಗೆ ಮಾಡಿದ್ರೂ, ರುಚಿಕಟ್ಟಾಗಿ ಮಾಡಬೇಕಿತ್ತು. ರಾಗಿ ರೊಟ್ಟಿನ ಕೆಂಡದ ಮೇಲೆ ಹಾಕಿ ಸುಟ್ಟಿದ್ದನ್ನು ಇಷ್ಟಪಟ್ಟು ತಿನ್ನುತ್ತಿದ್ದರು. ಸಿಹಿ ತಿಂಡಿಗಳಲ್ಲಿ ಕಜ್ಜಾಯ, ಒಬ್ಬಟ್ಟು, ಚಿರೋಟಿ ಇಷ್ಟ. ಗಣೇಶನ ಹಬ್ಬದಲ್ಲಿ ಕಡುಬು, ಬೆಣ್ಣೆ ಮತ್ತು ತುಪ್ಪದಲ್ಲಿ ಅದ್ದಿ ಚಪ್ಪರಿಸಿಕೊಂಡು ತಿನ್ನುತ್ತಿದ್ದರು. ಅಪ್ಪಾಜಿಗೆ ನಾನ್‌ವೆಜ್ ಅಂದರೆ ತುಂಬಾನೆ ಇಷ್ಟ. ನಾಟಿ ಕೋಳಿ ಅಂದರೆ ಮುಗೀತು... ಅಪ್ಪಾಜಿಗೆ ಊರಿನಲ್ಲಿ ಮುಸಲ್ಮಾನ ಸ್ನೇಹಿತರು ಹೆಚ್ಚಾಗಿದ್ದರು. ಬಕ್ರೀದ್, ರಂಜಾನ್ ಹಬ್ಬದ ದಿನಗಳ ಬಿರಿಯಾನಿ ಊಟ ತಪ್ಪುತ್ತಿರಲಿಲ್ಲ. ನಮ್ಮನೆಯಲ್ಲಿ ನಾನ್‌ವೆಜ್ ಮಾಡ್ತಿರಲಿಲ್ಲ. ಊರಿನ ಯಾರು ಕರೆದರೂ ಹೋಗೋರು, ಇವರು ಬರ್ತಾರೆ ಅಂತಾನೆ ಅವರು ಕೋಳಿ ಕುಯ್ಯೋರು.
ಅಪ್ಪಾಜಿ ಊಟದ ಕತೆಗಳು ಬೇಕಾದಷ್ಟಿವೆ. ನಮ್ಮ ಚಿಕ್ಕಪ್ಪ ಕೆಂಪರಾಜ್ ಇದಾರಲ್ಲ, ಅವರು ಮನೆಗೆ ಬಂದರು ಅಂದರೆ ನಗೋದೆ ಕೆಲಸ, ನಮಗೆ. ಅವರೊಂದು ಕತೆ ಹೇಳ್ತಿದ್ರು, ಅವರು ಹುಡುಗರಾಗಿದ್ದಾಗ, ಒಟ್ಟಿಗೆ ಮೈಸೂರಿಗೆ ಹೋದಾಗಲೆಲ್ಲ, ಮಧ್ಯಾಹ್ನದ ಊಟಕ್ಕೆ ತಪ್ಪದೆ ಬ್ರಾಹ್ಮಣರ ಮೆಸ್‌ಗೆ ಹೋಗುತ್ತಿದ್ದರಂತೆ. ಆಗ ಒಂದು ಊಟಕ್ಕೆ ಒಂದು ರೂಪಾಯಿ. ಇಬ್ಬರು ಹೋಗಿ ಊಟ ಮಾಡಿ, ಕೈ ತೊಳೆಯಲು ಎದ್ದು ಹೋಗಿದ್ದರಂತೆ. ಕೈ ತೊಳೆದು ಬರುವಷ್ಟರಲ್ಲಿ ಬೇರೆ ಇಬ್ಬರು ಇವರು ಊಟ ಮಾಡಿದ ಎಲೆಗಳ ಮುಂದೆ ಕೂರಲು ಹೋದರಂತೆ. ಆಗ ಚಿಕ್ಕಪ್ಪ, ‘‘ಸ್ವಾಮಿ, ಅಲ್ಲಿ ಕೂರಬೇಡಿ’’ ಎಂದರಂತೆ. ಅದಕ್ಕೆ ಅವರು ‘‘ನಾವೂ ಊಟಕ್ಕೇ ಬಂದಿರೋರು, ನಾವೂ ಕಾಸು ಕೊಡುತ್ತೇವೆ’’ ಎಂದರಂತೆ ಕೊಂಚ ಒರಟಾಗಿ. ಅದಕ್ಕೆ ನಮ್ಮ ಚಿಕ್ಕಪ್ಪ, ‘‘ಅದು ಹಾಗಲ್ಲ ಸ್ವಾಮಿ, ಅವು ಎಂಜಲೆಲೆಗಳು, ನಾವು ಊಟ ಮಾಡಿದ್ದೊ, ಅವನ್ನ ಎತ್ತಿಲ್ಲ, ಅದಕ್ಕೇ ನಿಮಗೆ ಅಲ್ಲಿ ಕೂರಬೇಡಿ ಎಂದೆ’’ ಎಂದು ಸಮಜಾಯಿಷಿ ಕೊಟ್ಟರಂತೆ. ಅವರು ಅಪಾದಮಸ್ತಕವಾಗಿ ಇಬ್ಬರನ್ನೂ ನೋಡಿ, ‘‘ಹೌದು, ಯಾವೂರು ನಿಮ್ಮದು, ಸದ್ಯ ಎಲೆನಾದ್ರು ಬಿಟ್ಟಿದ್ದೀರಲ್ಲ...’’ ಎಂದರಂತೆ. ಊಟ ಅಂದರೆ ಹಾಗೆ, ಎಲೆನಾ ತೊಳೆದಿಟ್ಟಂತೆ. ಕರಿಬೇವು, ಸೊಪ್ಪಿನ ಕಡ್ಡಿ, ತರಕಾರಿ, ಆಲೂಗಡ್ಡೆ ಸಿಪ್ಪೆ, ಮೆಣಸಿನಕಾಯಿ ಚೂರು... ಏನನ್ನೂ ಬಿಡುತ್ತಿರಲಿಲ್ಲ.
ಮದುವೆ ಬೇಡ ಎಂದಿದ್ದರು
ಇದು ನಮ್ಮಜ್ಜಿ ನಮಗೇಳಿದ್ದು... ನಾನು ಮದುವೆಯಾಗುವುದಿಲ್ಲ ಎಂದು ಅಪ್ಪಾಜಿ ಹಠ ಹಿಡಿದಿದ್ದರಂತೆ. ಕಾರಣ, ತಾನು ಸಂಪೂರ್ಣವಾಗಿ ಸಾರ್ವಜನಿಕ ಜೀವನಕ್ಕೆ ಅರ್ಪಿಸಿಕೊಳ್ಳಬೇಕು; ಸಂಸಾರ, ಮಕ್ಕಳು, ಮನೆ ಮಠಕ್ಕೆ ಸಮಯ ಕೊಡಲಾಗುವುದಿಲ್ಲ ಎಂದಿದ್ದರಂತೆ. ಆಗ ನಮ್ಮಜ್ಜಿ ತಲೆಮೇಲೆ ಕೈ ಹೊತ್ತು ಕೂತಿದ್ದರಂತೆ. ನಮ್ಮ ಚಿಕ್ಕಪ್ಪ ಕೆಂಪರಾಜ್ ಅರಸು ಆಗಲೇ ಅಂತರ್ಜಾತಿ ಮದುವೆಯಾಗಿದ್ದರು. ಇದ್ದೋರೆ ಇಬ್ಬರು ಗಂಡುಮಕ್ಕಳು. ಅವರಲ್ಲಿ ಒಬ್ಬ ಅಂತರ್ಜಾತಿ ಮದುವೆಯಾಗಿ ಮನೆಯಿಂದ ದೂರಾಗಿದ್ದಾನೆ, ಇನ್ನೊಬ್ಬ ಮದುವೆಯಾಗಲ್ಲ ಅಂತಿದ್ದಾನೆ. ಮನೆ ಉಳಿಯೋದು ಹೇಗೆ, ಮನೆತನ ಬೆಳೆಯೋದು ಹೆಂಗೆ ಎಂದು ನಮ್ಮ ತಂದೆಯ ತಾಯಿ, ಸಾಕು ತಾಯಿ ಮತ್ತು ಅಜ್ಜಿ- ಮೂವರೂ ಚಿಂತೆಗೆ ಬಿದ್ದಿದ್ದರಂತೆ.
ಕೊನೆಗೆ ಅಪ್ಪಾಜಿಯನ್ನು ಬಲವಂತ ಮಾಡಿ ಮದುವೆಗೆ ಒಪ್ಪಿಸಿದರಂತೆ. ಆದರೆ ಹೆಣ್ಣು ನೋಡಲು ಹೋಗಲಿಲ್ಲವಂತೆ. ನಮ್ಮಜ್ಜಿಯೇ ಕೋಗಿಲೂರಿನ ಹೆಣ್ಣು ನೋಡಿ, ಒಪ್ಪಿಗೆ ಕೊಟ್ಟು ಬಂದರಂತೆ. ಹೆಣ್ಣಿನ ಮನೆಗೂ ಹೋಗದೆ, ಹೆಣ್ಣನ್ನೇ ಗಂಡಿನ ಮನೆಗೆ ಕರೆಸಿಕೊಂಡು, ಇಲ್ಲಿಯೇ ಮದುವೆ ಮಾಡಿಕೊಂಡು ಮನೆ ತುಂಬಿಸಿಕೊಂಡರಂತೆ. ಮುಂದಕ್ಕೆ ನಮ್ಮ ತಾಯಿಯೂ ತವರು ಮನೆ ಎಂದು ಹೋಗಿದ್ದನ್ನು ನಾವೂ ನೋಡಲಿಲ್ಲ. ಅಪ್ಪಾಜಿ ಆಗ ಮದುವೆ ಬೇಡ ಎಂದಿದ್ದು ಏಕೆ ಎಂದು ನಿಧಾನವಾಗಿ ನಮ್ಮ ಅರಿವಿಗೆ ಬಂದಿತ್ತು. ಅವರು ರಾಜಕೀಯ ನಾಯಕರಾಗಿ, ಊರೂರು ಸುತ್ತುತ್ತಾ ಮನೆ, ಸಂಸಾರ ಎನ್ನುವುದಕ್ಕೆ ಸಮಯ ಕೊಡಲು ಸಾಧ್ಯವಾಗುತ್ತಿರಲಿಲ್ಲ. ತಮ್ಮ ಬದುಕನ್ನೇ ನಾಡಿನ ಜನತೆಯ ಸೇವೆಗೆ ಸಮರ್ಪಿಸಿಕೊಂಡಿದ್ದರು. ಹಸುಗಳೆಂದರೆ ಇಷ್ಟ
ಅಪ್ಪಾಜಿ ಹಸುಗಳನ್ನು ಅಪಾರವಾಗಿ ಹಚ್ಚಿಕೊಂಡಿದ್ದರು. ಅವುಗಳ ಮೈದಡವಿ ಮುದ್ದು ಮಾಡುವುದು, ತೊಳೆದು ಸ್ನಾನ ಮಾಡಿಸುವುದು, ಆರೈಕೆ ಮಾಡುವುದು ಎಂದರೆ ಎಲ್ಲಿಲ್ಲದ ಇಷ್ಟ. ನಿಮಗೆ ಗೊತ್ತಿಲ್ಲ, ಬೆಂಗಳೂರಿನಲ್ಲಿ ಮನೆ ಮಾಡಿದ್ದರಲ್ಲ, ಅಲ್ಲೂ ಹಸು ಕಟ್ಟಿದ್ದರು. ಮುಖ್ಯಮಂತ್ರಿಗಳ ನಿವಾಸದಲ್ಲಿಯೂ ಹಸುಗಳನ್ನು ಸಾಕಿದ್ದರು. ಅವರಿಗೆ ಮನೆಯಲ್ಲಿ ಹಸುಗಳಿರದೆ ಇರಲಿಕ್ಕಾಗುತ್ತಿರಲಿಲ್ಲ. ಹಾಲು, ಮೊಸರು, ಬೆಣ್ಣೆ, ತುಪ್ಪ, ಮಜ್ಜಿಗೆಯಂತೂ ಯಥೇಚ್ಛವಾಗಿರಬೇಕು ಮತ್ತು ಅದೆಲ್ಲ ಮನೆಹಸುಗಳದೇ ಆಗಬೇಕಿತ್ತು. ಆ ಹಾಲಿನಿಂದ ನಮ್ಮಮ್ಮ ಮಾಡುವ ಹಾಲುಂಡಿಗೆಯನ್ನು ಇಷ್ಟಪಟ್ಟು ತಿನ್ನುತ್ತಿದ್ದರು. ಅವರು ಹೊರಗಡೆ ಹೋಗಿ ರಾತ್ರಿ ಎಷ್ಟೊತ್ತಿಗೆ ಬಂದರೂ ಮೊದಲು ಕೊಟ್ಟಿಗೆಗೆ ಹೋಗಿ ಹಸುಗಳ ಮೈ ನೀವಿ, ಅವುಗಳನ್ನು ಮಾತನಾಡಿಸಿಯೇ ಒಳಗೆ ಬರುತ್ತಿದ್ದರು. ಕಲ್ಲಹಳ್ಳಿಗೆ ಬಂದಾಗಲೂ ಮೊದಲು ಕೊಟ್ಟಿಗೆಗೆ ಹೋಗಿ ಅವುಗಳನ್ನು ಮಾತನಾಡಿಸಿ ಒಳಗೆ ಬರುತ್ತಿದ್ದರು. ಅವುಗಳೂ ಅಷ್ಟೇ, ಅವರನ್ನು ಕಂಡರೆ ಕಣ್ಣಲ್ಲೇ ಪ್ರೀತಿ ತೋರುತ್ತಿದ್ದವು. ಆ ಕೊಟ್ಟಿಗೆಯ ಸಗಣಿ, ಗಂಜಲ, ಹಸಿ ಹುಲ್ಲಿನ ವಾಸನೆಯೇ ಆಪ್ಯಾಯಮಾನ. ಅದು ನಿಜವಾದ ರೈತನಿಗೆ, ಒಕ್ಕಲುತನದಲ್ಲಿರುವವರಿಗೆ ಮಾತ್ರ ಅರ್ಥವಾಗುವಂಥದ್ದು. ಅಪ್ಪಾಜಿ ತುಂಬಾ ಚೆನ್ನಾಗಿ ಹಾಲು ಕರೆಯುತ್ತಿದ್ದರು. ಕಲ್ಲಳ್ಳಿಯ ಜನಕ್ಕೆ ಹೈನುಗಾರಿಕೆಯನ್ನೂ ಪರಿಚಯಿಸಿ, ಆದಾಯದ ಮೂಲವನ್ನು ತೋರಿಸಿದ್ದರು. ಅಪ್ಪಾಜಿಗೆ ಚಿಕ್ಕಂದಿನಿಂದಲೂ ಎತ್ತುಗಳನ್ನು ಸಾಕುವ ಶೋಕಿ ಇತ್ತು. ಸಾಕಿದ ಜೋಡಿ ಎತ್ತನ್ನು ಚುಂಚನಕಟ್ಟೆ ಜಾತ್ರೆಗೆ ಹೊಡೆದುಕೊಂಡುಹೋಗಿ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಗೆದ್ದು ತರುತ್ತಿದ್ದರು. ಎತ್ತುಗಳ ಹಲ್ಲಿಡಿದು ನೋಡುವುದರಲ್ಲಿ, ಅವುಗಳ ಕುಲಗೋತ್ರ ಅರಿತು ಮಾತನಾಡುವುದರಲ್ಲಿ, ಟವಲ್‌ನೊಳಗೆ ಬೆರಳುಗಳ ಮೂಲಕ ದರ ನಿಗದಿ ಮಾಡುವುದರಲ್ಲಿ ಪರಿಣತಿ ಪಡೆದಿದ್ದರು. ಸುತ್ತಲ ಹತ್ತಳ್ಳಿಯ ಜನ ಎತ್ತುಗಳು ಬೇಕೆಂದರೆ ಅಪ್ಪಾಜಿಯನ್ನು ಹುಡುಕಿಕೊಂಡು ಬರುತ್ತಿದ್ದರು. ಅಷ್ಟರಮಟ್ಟಿಗೆ ಎತ್ತುಗಳ ಎಕ್ಸ್‌ಪರ್ಟ್ ಆಗಿದ್ದರು. ಹಸುವನ್ನು ಪುಣ್ಯಕೋಟಿ ಅಂತಾರೆ, ಮಕ್ಕಳಾದ ನಮಗೆ ಎಂದೂ ಒದೆಯದ, ಗದರಿಸದ, ಹೊಡೆಯದ ಅಪ್ಪಾಜಿ ನಮ್ಮ ಪಾಲಿನ ನಿಜವಾದ ಪುಣ್ಯಕೋಟಿ.
ಆಧುನಿಕ ಕೃಷಿಕ
ಅಪ್ಪಾಜಿ ಓದು ಮುಗಿಸಿ, ಮತ್ತೆ ಹಳ್ಳಿಗೇ ಬಂದಿದ್ದರು. ಆಗಲೇ ಅವರಿಗೆ ಸೇನಾಧಿಕಾರಿ ಕೆಲಸಕ್ಕೆ ಆಫರ್ ಬಂದಿತ್ತು. ಆದರೆ ಅಮ್ಮ ಯುದ್ಧ, ಸೈನ್ಯ, ಯೋಧನ ನೆನೆದು ಭಾವುಕರಾಗಿ ಬೇಡ ಎಂದಾಗ, ಇಷ್ಟಪಟ್ಟ ಸೇನಾಧಿಕಾರಿ ಕೆಲಸವನ್ನು ಬಿಟ್ಟರು. ಆಮೇಲೆ ಮೈಸೂರು ಮಹಾರಾಜರು ಕರೆದು ಕೆಲಸ ಕೊಡುತ್ತೇನೆಂದಾಗ, ವೃಥಾ ಕಾಯಿಸಿ ಅಲೆಸಿದರು ಎಂಬ ಕಾರಣಕ್ಕೆ ತಿರಸ್ಕರಿಸಿದರು. ಹಾಗಾಗಿ ಸ್ವಾಭಿಮಾನಿ ಕೃಷಿಕನಾಗಬೇಕೆಂಬ ಅದಮ್ಯ ಆಸೆ ಅವರನ್ನು ಮರಳಿ ಮಣ್ಣಿಗೆ ಕರೆತಂದಿತ್ತು. ನಮ್ಮ ಹೊಲವಿತ್ತು, ಬೇಸಾಯಕ್ಕೆ ಬೇಕಾದ ನೀರಿರಲಿಲ್ಲ. ಬಾವಿ ತೋಡಬೇಕು ಎಂದಾಗ, ಅಪ್ಪಾಜಿ ಒಬ್ಬರೆ, ದಿನಕ್ಕೆ 8 ಗಂಟೆಗಳ ಕಾಲ, ಅದೆಷ್ಟೋ ತಿಂಗಳುಗಳವರೆಗೆ ಬಾವಿ ತೋಡಿದ್ದರು. ಕೊನೆಗೊಂದು ದಿನ ನೀರು ಬಂದಾಗ, ಆ ನೀರಿನಲ್ಲಿಯೇ ಸ್ನಾನ ಮಾಡಿ ದೇಹದ ದಣಿವಾರಿಸಿಕೊಂಡಿದ್ದರು. ಆ ತೆರೆದ ಬಾವಿ ಇಂದಿಗೂ ಇದೆ. ಈಗ ಅದ್ಯಾರೋ ಉತ್ತರ ಭಾರತದಲ್ಲಿ ಮಾಂಝಿ ಅನ್ನೋರು ಒಬ್ಬರೇ ಬಾವಿ ತೋಡಿದ್ದಕ್ಕೆ ಪ್ರಚಾರ, ಸಿನೆಮಾ ಎಲ್ಲ ಬಂತು. ಆದರೆ ನಮ್ಮ ಅಪ್ಪಾಜಿ ಆಗಲೇ ಕಲ್ಲಳ್ಳಿಯ ಮಾಂಝಿ ಆಗಿದ್ದರು. ಹೊಲ ಉಳುವುದು, ನಾಟಿ ಮಾಡುವುದು, ಕಳೆ ಕೀಳುವುದು, ಗಾಡಿ ಕಟ್ಟುವುದು, ಗೊಬ್ಬರ ಏರುವುದು, ಸೌದೆ ಒಡೆಯುವುದು ಎಲ್ಲವನ್ನೂ ಮಾಡಿದ್ದಾರೆ, ಇಂಥದ್ದು ಮಾಡಿಲ್ಲ ಅನ್ನುವ ಹಾಗಿಲ್ಲ. ಆ ಕಾಲಕ್ಕೇ ಅವರು ಸಾವಯವ ಕೃಷಿ ಮಾಡ್ತಾ ನಮ್ಮಳ್ಳಿಯ ವಿದ್ಯಾವಂತ ಆದರ್ಶ ಕೃಷಿಕ ಎನಿಸಿಕೊಂಡಿದ್ದರು. ಆಧುನಿಕವಾಗಿ ಯೋಚಿಸಿ, ಕೃಷಿಯಲ್ಲಿ ಹೊಸ ಹೊಸ ಪ್ರಯೋಗಗಳನ್ನು ಮಾಡಿದ್ದರು. ಆಗಲೇ ಅವರು ವಾಣಿಜ್ಯ ಬೆಳೆಯಾದ ತಂಬಾಕನ್ನು ಬೆಳೆದಿದ್ದರು. ರೈತರು ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕಾದರೆ, ಈ ರೀತಿಯ ವಾಣಿಜ್ಯ ಬೆಳೆಗಳನ್ನು ಬೆಳೆಯಬೇಕು ಎಂದು ರೈತರಿಗೆ ಮನವರಿಕೆ ಮಾಡಿಕೊಡುತ್ತಿದ್ದರು. ಮುಂದೆ ಅವರು ಮುಖ್ಯಮಂತ್ರಿಯಾದಾಗ, ಟೊಬ್ಯಾಕೋ ಬೋರ್ಡ್ ಕೂಡ ರಚಿಸಿ, ಬೆಳೆಗೆ, ರೈತರಿಗೆ ಅನುಕೂಲವಾಗುವಂತೆ ನೋಡಿಕೊಂಡಿದ್ದರು. ಅಪ್ಪಾಜಿ ಒಂದೊಳ್ಳೆಯ ತೆಂಗಿನ ತೋಟ ಮಾಡಿದ್ದರು. ತೆಂಗಿನ ಕಾಯಿ ಕಳವು ಹೆಚ್ಚಾದಾಗ, ತೆಂಗಿನ ಸಸಿ ಬೆಳೆಸಿ, ಆ ಸಸಿಗಳನ್ನು ಊರಿನ ಜನಕ್ಕೆಲ್ಲ ಹಂಚಿದ್ದರು. ಕೆಲವರು ಸಸಿಗಳನ್ನು ಮನೆಯಲ್ಲಿಯೇ ಇಟ್ಟು ಕೊಳೆಸಿಬಿಡುತ್ತಿದ್ದರು. ಆಗ ಅಪ್ಪಾಜಿಯೇ ಖುದ್ದು, ಎಲ್ಲರ ಹೊಲಕ್ಕೂ ಹೋಗಿ ಗುಂಡಿ ತೋಡಿ ಸಸಿ ನೆಟ್ಟು ಬಂದಿದ್ದರು. ಈಗ ನಮ್ಮೂರಿನ ಎಲ್ಲರಿಗೂ ತೆಂಗಿನ ತೋಟವಿದೆ. ನಾವು ಊರಿಗೆ ಹೋಗಿ ಬರುವಾಗ, ದಾರಿಯಲ್ಲಿ ಎದುರಿಗೆ ಸಿಕ್ಕವರೆಲ್ಲ ನಮಸ್ಕರಿಸಿ, ಮನೆಗೆ ಕರೆದು ಗೌರವದಿಂದ ಕಾಣುತ್ತಾರೆ. ಕುಂಕುಮ ಕೊಡುವಾಗ, ಕೈಗೆ ತೆಂಗಿನಕಾಯಿ ಇಟ್ಟು, ‘‘ಇದು ನಿಮ್ಮ ಅಪ್ಪಾಜಿ ನೆಟ್ಟ ಮರದ್ದೆ ಕಣವ್ವಾ’’ ಎನ್ನುತ್ತಾರೆ. ಅವರ ಆ ಪ್ರೀತಿ ಮತ್ತು ಕೃತಜ್ಞತಾಭಾವ ನೋಡುತ್ತಿದ್ದರೆ ಎದೆ ತುಂಬಿ ಬರುತ್ತದೆ. ಅಪ್ಪಾಜಿ ಇದ್ದಿದ್ದರೆ ಎನಿಸುತ್ತದೆ.