ಪದ್ಮ ಪ್ರಶಸ್ತಿ: ರಾಜಧಾನಿಗೇ ಸಿಂಹಪಾಲು

Update: 2016-09-21 18:27 GMT

ಈ ವರ್ಷದ ವರೆಗೂ ರಾಜ್ಯ ಸರಕಾರಗಳಿಗೆ ಕೇಂದ್ರ ಸರಕಾರ, ತಮ್ಮ ರಾಜ್ಯಗಳಿಂದ ಪದ್ಮಪ್ರಶಸ್ತಿಗಳಿಗೆ ಹೆಸರು ಶಿಫಾರಸು ಮಾಡುವಂತೆ ಸೂಚಿಸುತ್ತಿತ್ತು. ಇದರ ಜತೆಗೆ ಪ್ರತಿ ಕೇಂದ್ರಾಡಳಿತ ಪ್ರದೇಶಗಳು, ಸಚಿವಾಲಯಗಳು ಹಾಗೂ ಸರಕಾರಿ ಇಲಾಖೆಗಳು ಕೂಡಾ ಹೆಸರುಗಳನ್ನು ಶಿಫಾರಸು ಮಾಡಲು ಅವಕಾಶ ಇತ್ತು. ಈ ಕಾರಣದಿಂದಾಗಿ ದೇಶದ ಅತ್ಯುನ್ನತ ಗೌರವಗಳು ದಿಲ್ಲಿ ವಲಯಕ್ಕೆ ನಿಕಟವಾಗಿರುವವರಿಗೆ ಹಾಗೂ ಕೇಂದ್ರ ಸರಕಾರಕ್ಕೆ ಹತ್ತಿರವಾಗಿರುವವರಿಗೆ ಸಲ್ಲುತ್ತಿದ್ದವು ಎನ್ನುವುದು ವಾಸ್ತವ.

ದೇಶದಲ್ಲಿ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಾದ ಭಾರತ ರತ್ನ, ಪದ್ಮಶ್ರೀ, ಪದ್ಮಭೂಷಣ ಹಾಗೂ ಪದ್ಮವಿಭೂಷಣ ಗೌರವಕ್ಕೆ ಪಾತ್ರರಾದ ಪ್ರತಿ ಐದು ಮಂದಿಯ ಪೈಕಿ ಒಬ್ಬರು ದೇಶದ ರಾಜಧಾನಿ ದಿಲ್ಲಿಗೆ ಸೇರಿದವರು. ಕೇಂದ್ರ ಸರಕಾರ ಹೊಸ ಪೋರ್ಟೆಲ್‌ನಲ್ಲಿ ನೀಡಿದ ಅಂಕಿ ಅಂಶಗಳಿಂದ ಈ ಮಹತ್ವದ ಅಂಶ ಬಹಿರಂಗವಾಗಿದೆ. ಜತೆಗೆ ಕೆಲ ರಾಜ್ಯಗಳಷ್ಟೇ ಈ ಅತ್ಯುನ್ನತ ನಾಗರಿಕ ಪ್ರಶಸ್ತಿಗಳನ್ನು ಬಾಚಿಕೊಂಡಿರುವುದು ಕೂಡಾ ಬೆಳಕಿಗೆ ಬಂದಿದೆ.

ದೇಶದಲ್ಲಿ 1954ರಲ್ಲಿ ಆರಂಭವಾದ ಈ ಅತ್ಯುನ್ನತ ನಾಗರಿಕ ಪ್ರಶಸ್ತಿಗಳನ್ನು ಪದ್ಮ ಪ್ರಶಸ್ತಿ ಸಮಿತಿ ಶಿಫಾರಸು ಮಾಡಿದ ವ್ಯಕ್ತಿಗಳಿಗೆ ಕೇಂದ್ರ ಸರಕಾರ ನೀಡುತ್ತಾ ಬಂದಿದೆ. ಪ್ರಧಾನ ಮಂತ್ರಿ ಪ್ರತಿ ವರ್ಷ ಈ ಆಯ್ಕೆ ಸಮಿತಿಯನ್ನು ನೇಮಕ ಮಾಡುತ್ತಾರೆ. ಕೇಂದ್ರ ಸರಕಾರದ ಪೋರ್ಟೆಲ್‌ನಲ್ಲಿ ಬಿಡುಗಡೆ ಮಾಡಲಾದ ಅಂಕಿ ಅಂಶಗಳ ಪ್ರಕಾರ, 4,329 ಮಂದಿಗೆ ಇದುವರೆಗೆ ಈ ನಾಲ್ಕು ಅತ್ಯುನ್ನತ ಪ್ರಶಸ್ತಿಗಳನ್ನು ನೀಡಲಾಗಿದೆ. ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ ಅವರಿಂದ ಹಿಡಿದು, ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್, ನೊಬೆಲ್ ಪುರಸ್ಕೃತ ಅಮರ್ತ್ಯ ಸೇನ್‌ವರೆಗೂ ಹಲವು ಮಂದಿ ಗಣ್ಯರು ಈ ಪ್ರಶಸ್ತಿ ಪಡೆದಿದ್ದಾರೆ.

 ಈ ವರ್ಷ ಮೊಟ್ಟಮೊದಲ ಬಾರಿಗೆ ಹೊಸ ಪೋರ್ಟೆಲ್‌ಗೆ ಚಾಲನೆ ನೀಡಿರುವ ಕೇಂದ್ರ ಸರಕಾರ, ಆನ್‌ಲೈನ್ ಅರ್ಜಿ ಸಲ್ಲಿಕೆ ವಿಧಾನವನ್ನು ಕೂಡಾ ಆರಂಭಿಸಿದೆ. ಇದೀಗ ದೇಶದ ಯಾವ ನಾಗರಿಕರು ಕೂಡಾ ಪದ್ಮ ಪ್ರಶಸ್ತಿಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಸರಕಾರಕ್ಕೆ 1,700 ಅರ್ಜಿಗಳು ಇದುವರೆಗೆ ಸಲ್ಲಿಕೆಯಾಗಿವೆ. ಈ ನಡೆ, ಪ್ರಶಸ್ತಿಗಾಗಿ ಲಾಬಿ ಮಾಡುವ ಸಂಸ್ಕೃತಿಗೆ ಮಂಗಳ ಹಾಡುವ ನಿರೀಕ್ಷೆ ಇದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಹೇಳುತ್ತದೆ.

ಈ ಪ್ರಯತ್ನದಿಂದಾಗಿ ಈ ಹಿಂದೆ ಒಂದೇ ಭೌಗೋಳಿಕ ಪ್ರದೇಶದವರು ಸಿಂಹಪಾಲು ಪಡೆಯುತ್ತಿದ್ದ ಸಂಪ್ರದಾಯವೂ ಕೊನೆಗೊಳ್ಳುವ ನಿರೀಕ್ಷೆ ಇದೆ. ಪೋರ್ಟೆಲ್‌ನಲ್ಲಿ ನೀಡಿರುವ ಮಾಹಿತಿಗಳನ್ನು ವಿಶ್ಲೇಷಿಸಿದಾಗ, ದಿಲ್ಲಿ, ಮಹಾರಾಷ್ಟ್ರ, ತಮಿಳುನಾಡು ಹಾಗೂ ಉತ್ತರ ಪ್ರದೇಶ ರಾಜ್ಯಗಳು ಇದುವರೆಗೆ ನೀಡಲಾದ ಒಟ್ಟು ಪದ್ಮಪ್ರಶಸ್ತಿಗಳ ಪೈಕಿ ಶೇ. 50ಕ್ಕಿಂತಲೂ ಹೆಚ್ಚು ಪ್ರಶಸ್ತಿಗಳನ್ನು ಬಾಚಿಕೊಂಡಿರುವುದು ತಿಳಿದು ಬರುತ್ತದೆ.

ಇದುವರೆಗೆ ನೀಡಲಾಗಿರುವ 5,329 ಪದ್ಮಪ್ರಶಸ್ತಿಗಳ ಪೈಕಿ 797 ಪ್ರಶಸ್ತಿಗಳು ರಾಜಧಾನಿ ದಿಲ್ಲಿಯ ಪಾಲಾಗಿದೆ. ಮಹಾರಾಷ್ಟ್ರ ಕೂಡಾ ಪುರಸ್ಕೃತರ ಪಟ್ಟಿಯಲ್ಲಿ ರಾಜಧಾನಿಗೆ ಪೈಪೋಟಿ ನೀಡುವಂತಿದ್ದು, ಮಹಾರಾಷ್ಟ್ರದ 756 ಮಂದಿ ಈ ಗೌರವಕ್ಕೆ ಪಾತ್ರರಾಗಿದ್ದಾರೆ. ಉಳಿದಂತೆ ತಮಿಳುನಾಡಿನ 391 ಮಂದಿ ಹಾಗೂ ಉತ್ತರ ಪ್ರದೇಶದ 295 ಮಂದಿ ಪ್ರಶಸ್ತಿ ಪಡೆದಿದ್ದು, ಕ್ರಮವಾಗಿ ಮೂರು ಹಾಗೂ ನಾಲ್ಕನೆ ಸ್ಥಾನದಲ್ಲಿವೆ. ಇವೆಲ್ಲವನ್ನೂ ಒಟ್ಟು ಸೇರಿಸಿದರೆ ಈ ನಾಲ್ಕು ರಾಜ್ಯಗಳ ಪಾಲು ಶೇ. 50ನ್ನು ಮೀರುತ್ತದೆ.

ಮಹಾರಾಷ್ಟ್ರ ಹಾಗೂ ಉತ್ತರ ಪ್ರದೇಶ ರಾಜ್ಯಗಳಲ್ಲಿ ಅತ್ಯಧಿಕ ಜನಸಂಖ್ಯೆ ಇರುವುದೂ ಇದಕ್ಕೆ ಕಾರಣವಾಗಿರಬಹುದು ಎಂದು ಕೆಲವರು ವಿಶ್ಲೇಷಿಸುತ್ತಾರೆ. ಇಡೀ ಬೆಝಿಲ್, ಮೆಕ್ಸಿಕೋ ದೇಶಗಳಲ್ಲಿರುವಷ್ಟು ಜನಸಂಖ್ಯೆ ಈ ರಾಜ್ಯಗಳಲ್ಲೇ ಇವೆ.

ಆದರೆ ಜನಸಂಖ್ಯೆಗೆ ಮತ್ತು ಪ್ರಶಸ್ತಿ ಪುರಸ್ಕೃತರ ಸಂಖ್ಯೆಯನ್ನು ಹೋಲಿಸಿದಾಗ ಈ ಅಂತರ ಮತ್ತಷ್ಟು ಹೆಚ್ಚುವುದು ಗಮನಕ್ಕೆ ಬಂದಿದೆ. 2011ರ ಜನಗಣತಿ ಅಂಕಿ ಅಂಶಗಳ ಆಧಾರದಲ್ಲಿ ದಿಲ್ಲಿಯ ಜನಸಂಖ್ಯೆಗೆ ಹೋಲಿಸಿದರೆ ಪ್ರತಿ ಹತ್ತು ಲಕ್ಷ ಮಂದಿಯ ಪೈಕಿ 47 ಮಂದಿ ಇಲ್ಲಿ ಪದ್ಮಪ್ರಶಸ್ತಿ ಪಡೆದಿದ್ದಾರೆ. ಆದರೆ ಮಹಾರಾಷ್ಟ್ರದ ಪ್ರತಿ 10 ಲಕ್ಷ ಮಂದಿಯ ಪೈಕಿ ಸರಾಸರಿ ಶೇ. 6.73 ಮಂದಿ ಮಾತ್ರ ಪ್ರಶಸ್ತಿ ಪಡೆದಿದ್ದಾರೆ. ದೇಶದ ಇತ್ತೀಚಿನ ಜನಸಂಖ್ಯೆಯನ್ನು ಪರಿಗಣಿಸಿದಾಗ, ದೇಶದ ಪ್ರತಿ 10 ಲಕ್ಷ ಮಂದಿಯ ಪೈಕಿ 3.58 ಮಂದಿಗಷ್ಟೇ ಪ್ರಶಸ್ತಿ ಸಂದಿದೆ.

ಪ್ರಸ್ತುತ ಇರುವ ದರದಲ್ಲಿ ಜನಸಂಖ್ಯೆಯನ್ನು ವಿಭಜಿಸುವುದು ಅಸಮರ್ಪಕವಾಗುತ್ತದೆ. ಉದಾಹರಣೆಗೆ ಬಿಹಾರ ಹಾಗೂ ಜಾರ್ಖಂಡ್ ರಾಜ್ಯಗಳ ವಿಭಜನೆಯನ್ನು ಪರಿಗಣಿಸಬೇಕಾಗುತ್ತದೆ. ಇಷ್ಟಾಗಿಯೂ ದಿಲ್ಲಿಯ ಪ್ರಾಬಲ್ಯವಂತೂ ಮೇಲ್ನೋಟಕ್ಕೇ ಎದ್ದುಕಾಣುತ್ತದೆ. ಕಳೆದ ಕೆಲ ದಶಕಗಳಲ್ಲಿ ರಾಷ್ಟ್ರ ರಾಜಧಾನಿಯ ಜನಸಂಖ್ಯೆ ಗಣನೀಯವಾಗಿ ಹೆಚ್ಚಿದ್ದರೂ, ದಿಲ್ಲಿಯ ಪರ ಒಲವು ಇರುವುದು ಖಚಿತ.

ಈ ಪ್ರಾಬಲ್ಯಕ್ಕೆ ಇರುವ ಇನ್ನೊಂದು ಸಂಭಾವ್ಯ ಕಾರಣ ಎಂದರೆ ಈ ಪ್ರಶಸ್ತಿ ಪುರಸ್ಕೃತರಾದ ಹಲವು ಮಂದಿ ಗಣ್ಯರನ್ನು ದಿಲ್ಲಿಗರು ಎಂದು ಪರಿಗಣಿಸಿರುವುದು. ಉದಾಹರಣೆಗೆ ಮಾಜಿ ರಾಷ್ಟ್ರಪತಿ ಎ.ಪಿ.ಜೆ.ಅಬ್ದುಲ್ ಕಲಾಂ. ಇಂಥವರು ರಾಜಧಾನಿಗೆ ಬರುವ ಮುನ್ನ ದೇಶದ ವಿವಿಧ ಭಾಗಗಳಲ್ಲಿ ಕೆಲಸ ಮಾಡಿದ್ದರು. ಈ ವರ್ಷದ ವರೆಗೂ ರಾಜ್ಯ ಸರಕಾರಗಳಿಗೆ ಕೇಂದ್ರ ಸರಕಾರ, ತಮ್ಮ ರಾಜ್ಯಗಳಿಂದ ಪದ್ಮಪ್ರಶಸ್ತಿಗಳಿಗೆ ಹೆಸರು ಶಿಫಾರಸು ಮಾಡುವಂತೆ ಸೂಚಿಸುತ್ತಿತ್ತು. ಇದರ ಜತೆಗೆ ಪ್ರತಿ ಕೇಂದ್ರಾಡಳಿತ ಪ್ರದೇಶಗಳು, ಸಚಿವಾಲಯಗಳು ಹಾಗೂ ಸರಕಾರಿ ಇಲಾಖೆಗಳು ಕೂಡಾ ಹೆಸರುಗಳನ್ನು ಶಿಫಾರಸು ಮಾಡಲು ಅವಕಾಶ ಇತ್ತು. ಈ ಕಾರಣದಿಂದಾಗಿ ದೇಶದ ಅತ್ಯುನ್ನತ ಗೌರವಗಳು ದಿಲ್ಲಿ ವಲಯಕ್ಕೆ ನಿಕಟವಾಗಿರುವವರಿಗೆ ಹಾಗೂ ಕೇಂದ್ರ ಸರಕಾರಕ್ಕೆ ಹತ್ತಿರವಾಗಿರುವವರಿಗೆ ಸಲ್ಲುತ್ತಿದ್ದವು ಎನ್ನುವುದು ವಾಸ್ತವ.

 ರಾಜ್ಯವಾರು ಫಲಿತಾಂಶಗಳು ಇನ್ನೂ ಹೆಚ್ಚು ಅಸಮಾನವಾಗಿವೆ. ಉದಾಹರಣೆಗೆ ಉತ್ತರ ಪ್ರದೇಶ, ಅತಿಹೆಚ್ಚು ಪ್ರಶಸ್ತಿ ಪಡೆದ ರಾಜ್ಯಗಳ ಪೈಕಿ ನಾಲ್ಕನೆ ಸ್ಥಾನದಲ್ಲಿದ್ದರೆ, ಇಲ್ಲಿನ ಜನಸಂಖ್ಯೆಗೆ ಹೋಲಿಸಿದರೆ, ಪ್ರತಿ 10 ಲಕ್ಷ ಮಂದಿಯ ಪೈಕಿ ಇಬ್ಬರು ಮಾತ್ರ ಈ ಅತ್ಯುನ್ನತ ಗೌರವಕ್ಕೆ ಪಾತ್ರರಾಗಿದ್ದಾರೆ. ಆದರೆ ಪಂಜಾಬ್ ಹಾಗೂ ಆಂಧ್ರಪ್ರದೇಶದ ಜನಸಂಖ್ಯೆಗೆ ಹೋಲಿಸಿದರೆ, ಪ್ರತಿ ಹತ್ತು ಲಕ್ಷಕ್ಕೆ ನಾಲ್ಕು ಮಂದಿಗಿಂತ ಹೆಚ್ಚು ಮಂದಿ ಇಲ್ಲಿ ಪ್ರಶಸ್ತಿ ಪುರಸ್ಕೃತರಿದ್ದಾರೆ. ರಾಷ್ಟ್ರೀಯ ಸರಾಸರಿ 3.58 ಆಗಿದೆ.

ಈ ಬಾರಿ ಇಡೀ ಪದ್ಮಪ್ರಶಸ್ತಿ ಅರ್ಜಿ ಸಲ್ಲಿಕೆ ವಿಧಾನವನ್ನು ಆನ್‌ಲೈನ್ ಮಾಡಿರುವುದರಿಂದ, ಕೆಲವೇ ರಾಜ್ಯಗಳ ಪ್ರಾಬಲ್ಯಕ್ಕೆ ತಡೆ ಉಂಟಾಗುತ್ತದೆಯೇ ಎನ್ನುವುದನ್ನು ಕಾದು ನೋಡಬೇಕಾಗಿದೆ.

ಕೃಪೆ: scroll.in

Writer - ಮಾಯಾಂಕ್ ಜೈನ್

contributor

Editor - ಮಾಯಾಂಕ್ ಜೈನ್

contributor

Similar News