ಜನ ಧನ ಯೋಜನೆ: ಮೋಸದಾಟ

Update: 2016-09-24 17:13 GMT

ಆದರೆ ಇತ್ತೀಚಿನ ವರದಿಗಳ ಪ್ರಕಾರ ಜನ ಧನ ಯೋಜನೆಯಲ್ಲಿ ಭಾರಿ ಮೋಸದಾಟ ನಡೆದಿದೆ ಮತ್ತು ಹುಳುಕುಗಳನ್ನು ಮುಚ್ಚಿಹಾಕುವ ಸಕಲ ಪ್ರಯತ್ನಗಳಾಗುತ್ತಿವೆ. ವಾಸ್ತವದಲ್ಲಿ ಏನಾಗಿದೆ ಎಂದರೆ ಖಾತೆಗಳನ್ನು ತೆರೆಸಿದ ಬಳಿಕ ಅವು ಉಪಯೋಗವಾಗದೆ ಹಾಗೇ ಬಿದ್ದಿವೆ. ಇದುವರೆಗೆ ತೆರೆಯಲಾದ 22 ಕೋಟಿ ಖಾತೆಗಳ ಪೈಕಿ ಸುಮಾರು ಶೇ. 30 ಖಾತೆಗಳಲ್ಲಿ ಚಿಕ್ಕಾಸಿಲ್ಲ, ವಹಿವಾಟುಗಳೂ ತೀರ ಕಡಿಮೆ ಎಂದು ಇದೇ ಫೆಬ್ರವರಿಯಲ್ಲಿ ನಡೆಸಲಾದ ಸಮೀಕ್ಷೆಯೊಂದು ತಿಳಿಸುತ್ತದೆ.

ತಮ್ಮ ಕುದುರೆ ನಿರಂತರವಾಗಿ ಓಡುತ್ತಿರಬೇಕು, ಸೇವೆ ಮಾಡುತ್ತಲಿರಬೇಕೆಂದು ಬಯಸುವ ಕುದುರೆ ಸವಾರರು ಕೋಲಿನ ತುದಿಗೆ ಕ್ಯಾರೆಟ್ ಕಟ್ಟಿ ಕುದುರೆಯ ಬಾಯಿಗೆಟಕದಷ್ಟು ದೂರದಲ್ಲಿ ಹಿಡಿಯುವ ಚಿತ್ರವನ್ನು ನೀವು ಕಂಡಿರಬಹುದು. ನರೇಂದ್ರ ಮೋದಿಯ ಥರಥರದ ಚುನಾವಣಾಪೂರ್ವ ಭರವಸೆಗಳಾದ ‘ಕಪ್ಪುಹಣ ವಾಪಸಾತಿ’, ‘ಅಚ್ಛೇ ದಿನ್’, ‘ಉತ್ತಮ ಆಡಳಿತ ಇತ್ಯಾದಿ’ಗಳ ಕತೆಯೂ ಇದೇ ಆಗಿದೆ. ಎಲ್ಲವೂ ಸಾಮಾನ್ಯ ಮತದಾರರ ಕೈಗೆಟಕದಷ್ಟು ದೂರದಲ್ಲೆ ಉಳಿದಿವೆ ಎಂಬುದಕ್ಕೆ ಸಾಕ್ಷಿಯಾಗಿ ನಮ್ಮ ಮುಂದಿದೆ ಹೆಚ್ಚಿರುವ ನಿರುದ್ಯೋಗಿಗಳ ಸಂಖ್ಯೆ, ಗಗನಕ್ಕೇರಿರುವ ಅಗತ್ಯವಸ್ತುಗಳ ಬೆಲೆ, ರೈಲು ಪ್ರಯಾಣದಲ್ಲಿ ಉಬ್ಬರದ ಬೆಲೆ ನೀತಿ, ಕಾರ್ಪೊರೇಟುಗಳಿಗೆ ಸಾಲ ಮನ್ನಾ ಒಳಗೊಂಡಂತೆ ವಿವಿಧ ವಿನಾಯಿತಿ/ರಿಯಾಯಿತಿಗಳು, ಜಿಡಿಪಿ ದರದಲ್ಲಿ ಇಳಿಕೆ ಮುಂತಾದ ಬೆಳವಣಿಗೆಗಳು. ಈ ಕುರಿತು ದೇಶದ ಮೂಲೆಮೂಲೆಗಳಿಂದ ಬರುತ್ತಿರುವ ಟೀಕಾಪ್ರಹಾರವನ್ನು ಎದುರಿಸಲಾಗದ ಮೋದಿ ಸರಕಾರ ಇದೀಗ ಮೆಲ್ಲಮೆಲ್ಲನೆ ತನ್ನ ಘೋಷಣೆಗಳಿಂದ ಹಿಂದೆ ಸರಿಯಲು ಯತ್ನಿಸತೊಡಗಿದೆ. ಅದರ ವಕ್ತಾರರೀಗ ‘ಅಚ್ಛೇ ದಿನ್’ ಘೋಷಣೆ ತಮ್ಮದಲ್ಲವೆಂದು ಹೇಳಲಾರಂಭಿಸಿರುವುದು ಸ್ಪಷ್ಟವಾಗಿ ನುಣುಚಿಕೊಳ್ಳುವ ತಂತ್ರದ ಭಾಗ ಅಲ್ಲದೆ ಇನ್ನೇನು?! ಮುಂದಿನ ದಿನಗಳಲ್ಲಿ ಮೋದಿ ಸರಕಾರ ಮತ್ತದರ ಸೈದ್ಧಾಂತಿಕ ಗುರು ಆರೆಸ್ಸೆಸ್ ಇನ್ನೂ ಏನೇನು ಸಮರ್ಥನೆಗಳನ್ನು, ಇನ್ನೂ ಯಾವ್ಯಾವ ವಿವರಣೆಗಳನ್ನು ನೀಡಲಿದ್ದಾರೆಂಬುದನ್ನು ಈಗಲೆ ಊಹಿಸಬಹುದಾಗಿದೆ.

ಇಂತಹದೆ ಇನ್ನೊಂದು ಅಗ್ಗದ ಜನಪ್ರಿಯತೆ ಗಳಿಸುವ ಕಾರ್ಯಕ್ರಮವೆಂದರೆ ಮೋದಿಯ ‘ಜನ ಧನ ಯೋಜನೆ’. ಇದರ ಪ್ರಧಾನ ಉದ್ದೇಶ ವಿವಿಧ ಸಬ್ಸಿಡಿ ಮೊತ್ತಗಳನ್ನು ನೇರವಾಗಿ ಫಲಾನುಭವಿಗಳ ಖಾತೆಗಳಿಗೆ ಜಮೆ ಮಾಡುವುದು ಎನ್ನಲಾಗುತ್ತದೆ. ಇದಕ್ಕೋಸ್ಕರವೆ ಜನ ಧನ ಯೋಜನೆ, ಆಧಾರ್ ಮತ್ತು ಮೊಬೈಲ್ ಸಂಖ್ಯೆಗಳನ್ನು ಒಂದಕ್ಕೊಂದು ಜೋಡಿಸಲಾಗಿದೆ. ಜನ ಧನ ಯೋಜನೆ ಮೋದಿಯ ಅತ್ಯಂತ ಯಶಸ್ವಿ ಯೋಜನೆಯೆಂದು ಟಾಂಟಾಂ ಮಾಡಲಾಗುತ್ತಿದೆ. ಒಂದು ವಾರದಲ್ಲಿ 1.8 ಕೋಟಿ ಜನ ಧನ ಖಾತೆಗಳನ್ನು ತೆರೆದು ಗಿನ್ನೆಸ್ ದಾಖಲೆ ನಿರ್ಮಿಸಿರುವ ಮೋದಿ ಸರಕಾರವನ್ನು ಇನ್ನಿಲ್ಲದ ರೀತಿಯಲ್ಲಿ ಕೊಂಡಾಡಲಾಗುತ್ತಿದೆ.

ಮೋಸದಾಟ
ಆದರೆ ಇತ್ತೀಚಿನ ವರದಿಗಳ ಪ್ರಕಾರ ಜನ ಧನ ಯೋಜನೆಯಲ್ಲಿ ಭಾರಿ ಮೋಸದಾಟ ನಡೆದಿದೆ ಮತ್ತು ಹುಳುಕುಗಳನ್ನು ಮುಚ್ಚಿಹಾಕುವ ಸಕಲ ಪ್ರಯತ್ನಗಳಾಗುತ್ತಿವೆ. ವಾಸ್ತವದಲ್ಲಿ ಏನಾಗಿದೆ ಎಂದರೆ ಖಾತೆಗಳನ್ನು ತೆರೆಸಿದ ಬಳಿಕ ಅವು ಉಪಯೋಗವಾಗದೆ ಹಾಗೇ ಬಿದ್ದಿವೆ. ಇದುವರೆಗೆ ತೆರೆಯಲಾದ 22 ಕೋಟಿ ಖಾತೆಗಳ ಪೈಕಿ ಸುಮಾರು ಶೇ. 30 ಖಾತೆಗಳಲ್ಲಿ ಚಿಕ್ಕಾಸಿಲ್ಲ, ವಹಿವಾಟುಗಳೂ ತೀರ ಕಡಿಮೆ ಎಂದು ಇದೇ ಫೆಬ್ರವರಿಯಲ್ಲಿ ನಡೆಸಲಾದ ಸಮೀಕ್ಷೆಯೊಂದು ತಿಳಿಸುತ್ತದೆ. ಹಾಗಾದರೆ ಇಷ್ಟೊಂದು ಖಾತೆಗಳಲ್ಲೇಕೆ ಶೂನ್ಯ ಡಿಪಾಸಿಟ್? ಅವನ್ನು ಯಾಕೆ ಬಳಸಲಾಗುತ್ತಿಲ್ಲ? ಇದಕ್ಕೊಂದು ಮುಖ್ಯ ಕಾರಣ ಏನೆಂದರೆ ಅವೆಲ್ಲ ಡ್ಯೂಪ್ಲಿಕೆಟ್ ಖಾತೆಗಳು. ಅರ್ಥಾತ್ ಈಗಾಗಲೆ ಖಾತೆಗಳನ್ನು ಹೊಂದಿರುವ ವ್ಯಕ್ತಿಗಳೇ ಜನ ಧನ ಯೋಜನೆ ಖಾತೆ ತೆರೆದಿದ್ದಾರೆ. ಇನ್ನೊಂದು ಕಾರಣವೆಂದರೆ ಮೂಲತಃ ಈ ಯೋಜನೆಯೇ ದೋಷಪೂರಿತವಾಗಿದೆ. ಅದರೊಳಗೆ ಗ್ರಾಮೀಣ ಭಾಗಗಳ ಜನರಿಗೆ ಬೇಕಾಗಿರುವ ವಿವಿಧ ಬ್ಯಾಂಕು ಸೌಲಭ್ಯಗಳನ್ನು ಒದಗಿಸುವ ವ್ಯವಸ್ಥೆ ಇಲ್ಲ. ಹೀಗಿರುವಾಗ ಈ ಹೊಸ ಜನ ಧನ ಯೋಜನೆ ಖಾತೆಗಳನ್ನು ತೆರೆಯುವುದರಿಂದ ಉಪಯೋಗವೇನೆಂಬ ಭಾವನೆ ಜನರಲ್ಲಿದೆ.
ಜನ ಧನ ಯೋಜನೆಯಲ್ಲಿ ಶೂನ್ಯ ಡಿಪಾಸಿಟ್ ಖಾತೆಗಳೆ ಹೆಚ್ಚು ಎಂಬ ವರದಿಗಳು ಬಂದ ತಕ್ಷಣ ಅಲರ್ಟ್ ಆದ ಮೋದಿ ಸರಕಾರ ಕೆಲವೊಂದು ಅಂಕಿಅಂಶಗಳನ್ನು ಬಿಡುಗಡೆಗೊಳಿಸಿದೆ. ಸರಕಾರದ ಪ್ರಕಾರ ಶೂನ್ಯ ಖಾತೆಗಳ ಸಂಖ್ಯೆ ಸುಮಾರು ಶೇ.74ರಿಂದ ಶೇ. 24ಕ್ಕಿಳಿದಿದೆ. 6 ತಿಂಗಳುಗಳ ಹಿಂದೆ ಅದು ಶೇ. 28-29ರಷ್ಟಿತ್ತು. ಶೂನ್ಯ ಡಿಪಾಸಿಟ್ ಖಾತೆಗಳಲ್ಲಿ ಒಂದು ರೂಪಾಯಿ (ರೂ 1-10) ಜಮೆಯಾಗಿರುವುದೇ ಇದಕ್ಕೆ ಕಾರಣ ಎನ್ನಲಾಗುತ್ತಿದೆ. ಸೆಪ್ಟಂಬರ್ 13ರ ಇಂಡಿಯನ್ ಎಕ್ಸ್‌ಪ್ರೆಸ್‌ನಲ್ಲಿ ಪ್ರಕಟಗೊಂಡ ವರದಿಯೊಂದರ ಪ್ರಕಾರ ಹದಿನೆಂಟು ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲಿ 1.05 ಕೋಟಿ ಒಂದು ರೂಪಾಯಿ ಖಾತೆಗಳಿವೆ. ಅತ್ಯಧಿಕ ಜನ ಧನ ಯೋಜನೆ ಖಾತೆಗಳಿರುವ 12 ದೊಡ್ಡ ಬ್ಯಾಂಕುಗಳಲ್ಲಿ ಪರಿಸ್ಥಿತಿ ಹೇಗಿದೆಯೆಂದರೆ ಅವುಗಳ ಪೈಕಿ ಶೇ. 36ರಷ್ಟು ಒಂದು ರೂಪಾಯಿ ಖಾತೆಗಳಾಗಿವೆ. ಕೆಲವು ಉದಾಹರಣೆಗಳನ್ನು ನೋಡುವುದಾದರೆ ಪಂಜಾಬ್ ನ್ಯಾಷನಲ್ ಬ್ಯಾಂಕಿನಲ್ಲಿರುವ ಒಟ್ಟು 1.36 ಕೋಟಿ ಜನ ಧನ ಯೋಜನೆ ಖಾತೆಗಳಲ್ಲಿ ಶೇ. 30ರಷ್ಟು ಒಂದು ರೂಪಾಯಿ ಖಾತೆಗಳು. ಬ್ಯಾಂಕ್ ಆಫ್ ಬರೋಡಾದ 1.4 ಕೋಟಿ ಖಾತೆಗಳಲ್ಲಿ ಶೇಕಡಾ 14.8ರಷ್ಟು ಒಂದು ರೂಪಾಯಿ ಖಾತೆಗಳು. ಯೂಕೊ ಬ್ಯಾಂಕಿನ 74.6 ಲಕ್ಷ ಖಾತೆಗಳಲ್ಲಿ ಶೇಕಡಾ 9.26ರಷ್ಟು ಒಂದು ರೂಪಾಯಿ ಖಾತೆಗಳು.


ಗುಟ್ಟು ರಟ್ಟಾಯಿತು ಆದರೆ ಇತ್ತೀಚೆಗೆ ಒಂದು ಸ್ವಾರಸ್ಯಕರ ಮಾಹಿತಿ ಹೊರಬಿದ್ದಿದೆ. ಅದೇನೆಂದರೆ ತಮ್ಮ ಅಕೌಂಟಿಗೆ ಒಂದು ರೂಪಾಯಿ ಜಮೆ ಮಾಡಿದವರಾರೆಂದು ಹೆಚ್ಚಿನ ಖಾತೆದಾರರಿಗೆ ತಿಳಿದಿಲ್ಲ! ಹಾಗಾದರೆ ಖಾತೆಗಳಿಗೆ ಹಣ ಜಮೆ ಮಾಡಿದವರಾರು? ಆರು ರಾಜ್ಯಗಳಲ್ಲಿ ನಡೆಸಿದ ಸಮೀಕ್ಷೆಯೊಂದು ಹೇಳುವಂತೆ ಇವುಗಳಲ್ಲಿ ಬಹುತೇಕ ಡಿಪಾಸಿಟ್‌ಗಳನ್ನು ಖುದ್ದು ಬ್ಯಾಂಕ್ ಅಧಿಕಾರಿಗಳು ಮತ್ತು ಮ್ಯಾನೆಜರುಗಳೇ ಮಾಡಿದ್ದಾರೆ! ಇದಕ್ಕೆ ಮೇಲಿನವರ ಒತ್ತಡವೆ ಕಾರಣ ಎನ್ನಲಾಗಿದೆ. ಈ ಮೇಲಿನವರು ಯಾರೆಂದು ಬಿಡಿಸಿ ಹೇಳಬೇಕಾಗಿಲ್ಲ. ಇಲ್ಲವಾದರೆ ಯಾರಿಗಾದರೂ ಹುಚ್ಚೇ ಹೀಗೆ ಯಾರ್ಯಾರ ಖಾತೆಗಳಿಗೆ ಹಣ ಜಮೆ ಮಾಡಲು!! ಉದಾಹರಣೆಗೆ ಬ್ಯಾಂಕ್ ಆಫ್ ಬರೋಡಾದ ಒಂದು ನಿರ್ದಿಷ್ಟ ಶಾಖೆಯಲ್ಲಿ ತೆರೆಯಲಾದ 1,000 ಖಾತೆಗಳಲ್ಲಿ ಹೆಚ್ಚಿನವುಗಳಿಗೆ ಅದೇ ಬ್ಯಾಂಕಿನ ಒಬ್ಬನೆ ಅಧಿಕಾರಿ ಒಂದೊಂದು ರೂಪಾಯಿ ಜಮೆ ಮಾಡಿದ್ದನೆಂದು ತಿಳಿದುಬಂದಿದೆ! ಇದಕ್ಕೆ ಬೇಕಾದ ದುಡ್ಡನ್ನು ಅವರೇನಾದರೂ ತಮ್ಮ ಕಿಸೆಯಿಂದ ಹಾಕಿದ್ದಾರೆಂದು ಭಾವಿಸಿದ್ದೀರಾ? ಇಲ್ಲ. ಅದೆಲ್ಲವನ್ನೂ ಹಲವೊಂದು ವಿಶೇಷ ಸವಲತ್ತುಗಳು ಮತ್ತಿತರ ವೆಚ್ಚಗಳಡಿ ಬ್ಯಾಂಕಿನಿಂದಲೆ ಪಡೆಯಲಾಗಿದೆ. ಶೂನ್ಯ ಖಾತೆಗಳ ಸಂಖ್ಯೆ ಕಡಿಮೆ ಮಾಡಬೇಕೆಂಬ ಒತ್ತಡ ಎದುರಿಸುತ್ತಿರುವ ಬ್ಯಾಂಕುಗಳು ಈಗೀಗ ಖಾತೆದಾರರು ತಮ್ಮ ಅಕೌಂಟುಗಳನ್ನು ಬಳಸುವ ಮುನ್ನ ಖಾತೆಗೆ ಹಣ ಜಮೆ ಮಾಡಲೇಬೇಕೆಂದು ಕೂಡ ಒತ್ತಾಯಿಸತೊಡಗಿವೆ.
ಒಟ್ಟಾರೆಯಾಗಿ ಹೇಳುವುದಾದರೆ ಜನ ಧನ ಯೋಜನೆಯನ್ನು ಬರೀ ಪ್ರಚಾರದ ಉದ್ದೇಶಕ್ಕಾಗಿ ರೂಪಿಸಲಾಗಿದೆ. ಡ್ಯೂಪ್ಲಿಕೇಟ್ ಖಾತೆಗಳು, ಆಧಾರ್ ಸಂಬಂಧಿತ ಸಮಸ್ಯೆಗಳು, ಗ್ರಾಮೀಣ ಬ್ಯಾಂಕುಗಳಲ್ಲಿ ಸೂಕ್ತ ಸೌಲಭ್ಯ ಯೋಜನೆಗಳಿಲ್ಲದಿರುವುದು ಮುಂತಾದ ಹಲವು ಕಾರಣಗಳಿಗಾಗಿ ಅದು ಯಶಸ್ಸು ಕಾಣುವ ಸಾಧ್ಯತೆಗಳು ತೀರಾ ಕಡಿಮೆ ಎನ್ನಬಹುದು.

thewire.in scroll.in (ಆಧಾರ: 13-9-2016ರ ಮತ್ತು ಲೇಖನಗಳು)

Writer - ಸುರೇಶ್ ಭಟ್, ಬಾಕ್ರಬೈಲ್

contributor

Editor - ಸುರೇಶ್ ಭಟ್, ಬಾಕ್ರಬೈಲ್

contributor

Similar News