ನಮಗಾಗಿ ತಂದೆ ಸಮಯ ಕೊಟ್ಟಿದ್ದು ನೆನಪೇ ಇಲ್ಲ...
ಭಾಗ-2
ದಿಂಬಿನ ಕೆಳಗೆ ಚಾಣಕ್ಯ ತಂತ್ರ
ಅಪ್ಪಾಜಿಗೆ ಪುಸ್ತಕಗಳನ್ನು ಓದುವ ಅಭ್ಯಾಸವಿತ್ತು. ಅವರು ಸಿಎಂ ಆಗಿದ್ದಾಗಲೂ, ಬ್ಯುಸಿ ಶೆಡ್ಯೂಲ್‌ಗಳ ನಡುವೆಯೂ ರಾತ್ರಿ ಬಹಳ ಹೊತ್ತಿನ ತನಕ ಓದುತ್ತಾ ಕೂತಿರುತ್ತಿದ್ದರು. ಮನೆಯಲ್ಲಿ ಅವರದೇ ಆದ ಒಂದು ಲೈಬ್ರರಿಯೇ ಇತ್ತು. ಅವರ ಲೈಬ್ರರಿಯಲ್ಲಿ ನಾನು ಕಂಡ ಹಾಗೆ, ಸಾಹಿತ್ಯ, ಸಮಾಜವಾದ, ವಿಜ್ಞಾನ, ತತ್ವಶಾಸ್ತ್ರ, ರಾಜ್ಯಶಾಸ್ತ್ರ, ಅರ್ಥಶಾಸ್ತ್ರ, ಕಾರ್ಲ್ ಮಾರ್ಕ್ಸ್ ಪುಸ್ತಕಗಳು, ಕುವೆಂಪುರವರ ಶ್ರೀ ರಾಮಾಯಣ ದರ್ಶನಂ, ಡಿವಿಜಿಯವರ ಮಂಕುತಿಮ್ಮನ ಕಗ್ಗ.. ಇಂಥ ಪುಸ್ತಕಗಳಿಲ್ಲ ಎನ್ನುವ ಹಾಗಿಲ್ಲ. ಎಲ್ಲ ರೀತಿಯ ಪುಸ್ತಕಗಳೂ ಇದ್ದವು. ಅದರಲ್ಲೂ ಪ್ರಪಂಚದ ಮಹಾನ್ ನಾಯಕರ ಆತ್ಮಚರಿತ್ರೆಗಳು ಹೆಚ್ಚಾಗಿದ್ದವು. ಆದರೆ ಅವರ ಮಕ್ಕಳಾಗಿ ನಾವು ಅಲ್ಲಿಗೆ ಹೋಗುತ್ತಿದ್ದೆವು, ಪುಸ್ತಕಗಳ ಹಾಳೆ ತಿರುವುತ್ತಿದ್ದೆವು, ಓದಲಿಲ್ಲ.
ಅಪ್ಪಾಜಿಗೆ ಈ ಪುಸ್ತಕ ಓದುವ ಹವ್ಯಾಸ ಮೈಸೂರಿನಿಂದಲೇ, ಓದುವಾಗಲೇ ಬಂದಿತ್ತು. ಚಿಕ್ಕಪ್ಪ ಕೆಂಪರಾಜ್ ಅರಸು ಮತ್ತು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಆಗಲೇ ಹೆಸರು ಮಾಡಿದ್ದ ಚದುರಂಗರ ಒಡನಾಟ, ಮಾತುಕತೆ, ಚರ್ಚೆ, ಸಂವಾದ ಅದಕ್ಕೆ ಇನ್ನಷ್ಟು ಪುಷ್ಟಿ ನೀಡಿತ್ತು. ನಮ್ಮಜ್ಜಿ ಹೇಳುತ್ತಿದ್ದರು, ನಮ್ತಂದೆ ಗ್ರಾಜುಯೇಷನ್ ಮುಗಿಸಿ ಕಲ್ಲಳ್ಳಿಗೆ ಬಂದು ಬೇಸಾಯ ಮಾಡುತ್ತಿದ್ದಾಗ, ಹೊಲದ ಕೆಲಸ ಮುಗಿಸಿದ ಮೇಲೆ ಪುಸ್ತಕ ಹಿಡಿದು ಕೂರುತ್ತಿದ್ದರಂತೆ. ಒಂದೊಂದು ಸಲ ಹೊಲದ ಬದುವಿನ ಮರದ ಕೆಳಗೆ ಕೂತು ಓದಲು ಶುರು ಮಾಡಿಬಿಟ್ಟರೆ, ಊಟಕ್ಕೂ ಬರುತ್ತಿರಲಿಲ್ಲವಂತೆ. ಇವರೇ ಯಾರನ್ನಾದರೂ ಕಳಿಸಿ ಕರೆಸಬೇಕಾಗಿತ್ತಂತೆ.
ಅವರ ಕನ್ನಡ-ಇಂಗ್ಲಿಷ್ ಚೆನ್ನಾಗಿತ್ತು. ಎರಡನೆ ಭಾಷೆಯಾಗಿ ಸಂಸ್ಕೃತ ಕಲಿತಿದ್ದರು. ಆದರೆ ಅದೆಷ್ಟು ಪ್ರಯತ್ನಪಟ್ಟರೂ ಹಿಂದಿ ಕಲಿಯಲಾಗಲಿಲ್ಲ. ದಿಲ್ಲಿ ನಾಯಕರೊಂದಿಗೆ ಒಡನಾಟ ಶುರುವಾ ದಾಗ, ಅಲ್ಲಿಯ ಮಾಧ್ಯಮಗಳ ಜೊತೆ ಮಾತನಾಡುವ ಅನಿವಾರ್ಯತೆ ಸೃಷ್ಟಿಯಾದಾಗ ಬಹಳ ಪೇಚಿಗೆ ಸಿಲುಕುತ್ತಿದ್ದರು. ಅದನ್ನು ಬಂದು ನಮಗೆಲ್ಲ ಹೇಳುತ್ತಿದ್ದರು. ಅಷ್ಟಾದರೂ ಹಿಂದಿ ಕಲಿಯಲಿಲ್ಲ. ಇನ್ನು ಅವರು ಮುಖ್ಯಮಂತ್ರಿಯಾದಾಗ ಕನ್ನಡ ಸಾಹಿತ್ಯ ಲೋಕದ ದಿಗ್ಗಜರಾದ ಕುವೆಂಪು, ಮಾಸ್ತಿ, ಬೇಂದ್ರೆ, ಡಿವಿಜಿ, ತರಾಸು, ಅಡಿಗರು... ಎಲ್ಲರೊಂದಿಗೆ ನಿಕಟ ಸಂಪರ್ಕವನ್ನಿಟ್ಟುಕೊಂಡು, ಕೈಲಾದ ಸಹಾಯ ಮಾಡುತ್ತಿದ್ದರು.
ಅವರ ಮಲಗುವ ಕೋಣೆಯಲ್ಲಿ, ದಿಂಬಿನ ಕೆಳಗೆ ಸದಾ ಕನ್ನಡ-ಕನ್ನಡ ಡಿಕ್ಷನರಿ, ಭಗವದ್ಗೀತೆ ಮತ್ತು ಚಾಣಕ್ಯ ತಂತ್ರ... ಈ ಮೂರು ಪುಸ್ತಕಗಳಿದ್ದು, ಇವುಗಳನ್ನು ಆಗಾಗ ಓದುತ್ತಿದ್ದರು. ಅವರು ಸಾಯುವುದಕ್ಕೆ ಮುಂಚೆ, ನಾಲ್ಕೈದು ದಿನಗಳಿರುವಾಗ ಗಂಗಾರಾಂ ಬುಕ್ ಶಾಪ್‌ಗೆ ಹೋಗಿ ನಾಲ್ಕೈದು ಪುಸ್ತಕಗಳನ್ನು ತಂದಿದ್ದರು. ಅದರಲ್ಲಿ ಮಹಾತ್ಮ ಗಾಂಧಿಯವರ ‘ಮೈ ಎಕ್ಸ್‌ಪರಿಮೆಂಟ್ ವಿಥ್ ಟ್ರೂಥ್’ ಪುಸ್ತಕ ಕೂಡ ಇತ್ತು. ಅದರ ಬಿಲ್ ಪಾವತಿಸಿರಲಿಲ್ಲ, ಹಾಗಾಗಿ ಅದು ನಮಗೆ ಗೊತ್ತಾಯಿತು.
ಸೈಗಲ್ ಪ್ರೇಮಿ
ನಮ್ಮ ತಂದೆಗೆ ಸಾಹಿತ್ಯದಷ್ಟೇ ಸಂಗೀತ, ಕಲೆಯ ಬಗ್ಗೆಯೂ ಒಲವಿತ್ತು. ಸಂಗೀತ ಕಛೇರಿಗಳಿಗೆ ಹೋಗುತ್ತಿದ್ದರು. ಕಲಾವಿದ ರೊಂದಿಗೆ ಒಡನಾಟವಿಟ್ಟುಕೊಂಡಿದ್ದರು. ಸ್ವತಃ ಉತ್ತಮ ಗಾಯಕರಾಗಿದ್ದರು. ಎಂಥ ಕಂಠ ಅಂತೀರ... ನಾವು ಚಿಕ್ಕವರಾಗಿ ದ್ದಾಗ ಮಹಾಭಾರತವನ್ನು ಪದ್ಯರೂಪದಲ್ಲಿ ರಾಗವಾಗಿ ಹಾಡುತ್ತಿ ದ್ದರು. ನಮಗಾಗ ಮಹಾಭಾರತಕ್ಕಿಂತ ಮುಖ್ಯವೆನಿಸಿದ್ದು ಅವರ ಹಾಡುಗಾರಿಕೆ. ಕಾಲೇಜು ದಿನಗಳಲ್ಲಿ ಕವಿ ರಾಘವಾಂಕನ ಕಾವ್ಯವನ್ನು ಹಾಡಿ ಪ್ರಥಮ ಬಹುಮಾನ ಪಡೆದಿದ್ದರಂತೆ.
ಶಾಸ್ತ್ರೀಯ ಸಂಗೀತವನ್ನು ತುಂಬಾ ಇಷ್ಟ ಪಟ್ಟು ಕೇಳುತ್ತಿದ್ದರು. ಅದರಲ್ಲಿಯೂ ಎಂ.ಎಸ್.ಸುಬ್ಬ್ಬುಲಕ್ಷ್ಮಿಯವರ ಗಾಯನವನ್ನು ಆಸ್ವಾದಿಸುತ್ತಿದ್ದ ಬಗೆಯೇ ಬೇರೆ. ಇನ್ನು ಹಿಂದಿ ಹಾಡುಗಳಲ್ಲಿ ಸೈಗಲ್ ಅವರ ಅಚ್ಚುಮೆಚ್ಚಿನ ಗಾಯಕ. ಪಂಕಜ್ ಮಲ್ಲಿಕ್‌ರ ಹಾಡುಗಳನ್ನು ಕೇಳುತ್ತಿದ್ದರು. ಆಗಾಗ ಗುನುಗುತ್ತಿದ್ದರು. ಆಗ ನಮಗೆ ನಮ್ತಂದೆ ಇವತ್ತು ಒಳ್ಳೆಯ ಮೂಡ್‌ದಲ್ಲಿದ್ದಾರೆ ಎಂಬುದು ಗೊತ್ತಾಗುತ್ತಿತ್ತು. ಅವರು ಸುಮಾರು ಸಲ, ಸಾರ್ವಜನಿಕ ಸಭೆ ಸಮಾರಂಭಗಳಲ್ಲೂ, ‘‘ನಾನೇನಾದ್ರು ರಾಜಕಾರಣಿ ಆಗದೆ ಇದ್ದಿದ್ದರೆ, ಗಾಯಕನಾಗ್ತಿದ್ದೆ’’ ಎಂದು ಹೇಳಿಕೊಂಡಿದ್ದುಂಟು.
ನಮ್ಮ ಚಿಕ್ಕಪ್ಪಕೆಂಪರಾಜ್ ಅರಸು ಕಲಾವಿದರಾಗಿ ಚಲನ ಚಿತ್ರರಂಗದಲ್ಲಿ ಒಳ್ಳೆಯ ಹೆಸರು ಮಾಡಿದ್ದರು. ಅವರ ಹಾಗೆ ನಮ್ಮ ತಂದೆಯೂ ನಟನಾ ವೃತ್ತಿಗೆ ಬರಬೇಕೆಂದು ನಮ್ಮ ಚದುರಂಗ ಅಂಕಲ್ ಆಸೆಯಾಗಿತ್ತು. ಏಕೆಂದರೆ ನಮ್ತಂದೆ ಸ್ಫುರದ್ರೂಪಿ, ಆಜಾನುಬಾಹು, ಗಾಯಕ ಜೊತೆಗೆ ನಾಟಕಗಳಲ್ಲಿ ಅಭಿನಯಿಸಿದ ಅನುಭವವಿತ್ತು. ಹಾಗಾಗಿ ಚದುರಂಗ ಅಂಕಲ್ ತಯಾರಿಸುತ್ತಿದ್ದ ಚಿತ್ರಕ್ಕೆ ಒತ್ತಾಯ ಮಾಡಿ ನಟಿಸಲು ಒಪ್ಪಿಸಿದ್ದರಂತೆ. ಆದರೆ ಮೇಕಪ್ ಮಾಡಿಕೊಂಡು ಕೂರುವ ತಾಳ್ಮೆ ಇಲ್ಲದ ಅಪ್ಪಾಜಿ, ‘‘ಅಯ್ಯೋ ಇದೆಲ್ಲಾ ನನಗಾಗಲ್ಲಪ್ಪ’’ ಎಂದು ಅರ್ಧಕ್ಕೇ ಬಿಟ್ಟುಬಂದರಂತೆ. ಸಿನೆಮಾ ಅಂದಾಕ್ಷಣ ಚದುರಂಗ ಅಂಕಲ್, ಅಪ್ಪಾಜಿಯ ಬಣ್ಣದ ಕತೆ ಹೇಳುತ್ತಿದ್ದರು.
ಗಾಯಕರೂ ಆಗಲಿಲ್ಲ, ನಟರೂ ಆಗಲಿಲ್ಲ. ಆದರೆ ಅದಕ್ಕಿಂತ ಜನಸೇವಕರಾಗಿ ಜನಮನದಲ್ಲುಳಿದರು.
ಮಹಿಳೆಯರಿಗೆ ಮರ್ಯಾದೆ
ನಮ್ತಂದೆಯನ್ನು ಸುತ್ತಳ್ಳಿಯ ಜನ ‘ಬುದ್ಯೋರು’ ಅಂತ ಕರೆಯುತ್ತಿದ್ದರು. ವಿದ್ಯಾವಂತರು, ಬುದ್ಧಿವಂತರು ಮತ್ತು ಬಡವರ ಬಗ್ಗೆ ಪ್ರೀತಿಯು ಳ್ಳವರಾಗಿದ್ದರು. ಊರಿನ ಯಾವ ಜಾತಿಯ ಜನರಾ ದರೂ ಸರಿ, ಅವರೊಂದಿಗೆ ಭೇದ ಭಾವವಿಲ್ಲದೆ ಬೆರೆಯುತ್ತಿದ್ದರು. ಯಾರ ಮನೆಯಲ್ಲಿ ಏನು ಕೊಟ್ಟರೂ ಕುಡಿಯುತ್ತಿದ್ದರು, ತಿನ್ನುತ್ತಿದ್ದರು. ಅದೆಷ್ಟು ಕೆರೆ ನೀರು ಕುಡಿದಿದ್ದಾರೋ.. ಈ ಜನಾನುರಾಗಿ ವ್ಯಕ್ತಿತ್ವದಿಂದಾಗಿ, ಸುತ್ತಳ್ಳಿಯ ನ್ಯಾಯ ಪಂಚಾಯ್ತಿಗೆ ಇವರೇ ಮುಖ್ಯಸ್ಥರು. ಅದು ಎಷ್ಟು ಹೊತ್ತಾದರೂ ಸರಿ, ಇತ್ಯರ್ಥ ಮಾಡಿಯೇ ಮನೆಗೆ ಬರುತ್ತಿದ್ದರು. ನಮ್ಮ ತಾಯಿ ಮತ್ತು ಅಜ್ಜಿ ಅವರ ದಾರಿ ಕಾಯುತ್ತಾ ಎಷ್ಟೋ ರಾತ್ರಿ ಜಾಗರಣೆ ಮಾಡಿದ್ದೂ ಇದೆ. ನ್ಯಾಯ ಪಂಚಾಯಿತಿಯ ಮುಖ್ಯಸ್ಥರಾಗಿದ್ದು, ಮುಂದೆ ಯಾವುದೋ ರಾಜಕೀಯ ಅಧಿಕಾರದ ಆಸೆಗಾಗಲ್ಲ, ಜನರ ಪ್ರೀತಿಗಾಗಿ. ಆದರೆ ಅದು ಸ್ವಾಭಾವಿಕವಾಗಿ ರಾಜಕಾರಣಕ್ಕೆ ಸಂಪರ್ಕ ಸೇತುವೆಯಾಯಿತು.
ಹಳ್ಳಿಗಳ ನ್ಯಾಯ ಪಂಚಾಯ್ತಿಯಲ್ಲಿ ಸಾಮಾನ್ಯವಾಗಿ ಭೂ ವಿವಾದಗಳು ಮತ್ತು ಗಂಡ-ಹೆಂಡಿರ ಜಗಳಗಳೇ ಹೆಚ್ಚಾಗಿರುತ್ತಿದ್ದವು. ಅವರೆಲ್ಲರಿಗೂ ಅಪ್ಪಾಜಿಯ ಮಾತು ಎಂದರೆ ಮುಗೀತು. ಅವರು ಕೊಟ್ಟ ತೀರ್ಪಿಗೆ ಮರು ಮಾತನಾಡುತ್ತಿರಲಿಲ್ಲ. ಈ ಗಂಡ-ಹೆಂಡಿರ ಜಗಳ ಅಂದೆನಲ್ಲ, ಅಂತಹ ಪ್ರಕರಣಗಳಲ್ಲಿ ಅಪ್ಪಾಜಿಯ ನಿಲುವು ಯಾವಾಗಲೂ ಮಹಿಳಾ ಪರ. ಮನೆ ನಡೆಸುವವರು-ನಿಲ್ಲಿಸುವವರು ಹೆಣ್ಣುಮಕ್ಕಳು ಎಂದು ಅವರ ಬಗ್ಗೆ ಅಪಾರ ಗೌರವ.
ನಾವು ಊರಿಗೆ ಹೋದಾಗ ಊರಿನ ಹೆಂಗಸರು ನಮ್ತಂದೆಯ ಬಳಿ ಬಂದು, ‘‘ಬುದ್ಧಿ ನನ್ನ ಗಂಡ ಹೊಡೆದ, ಬೋದ, ಮನೆ ಬಿಟ್ಟು ಓಡುಸ್ತಿನಿ ಅಂದ’’ ಅಂತ ದೂರು ಹೇಳುತ್ತಿದ್ದರು. ನಮ್ಮ ತಂದೆ ಆ ಗಂಡಸರನ್ನು ಕರೆಸಿ ‘‘ಏನ್ರಪ್ಪ,ನಾಚಿಕೆ ಆಗಲ್ವ ಹೆಣ್ಣು ಮಕ್ಕಳ ಮೇಲೆ ಕೈ ಮಾಡೋಕೆ’’ ಎಂದು ಬೈದು ಬುದ್ಧಿ ಹೇಳುತ್ತಿದ್ದರು. ಪಂಚಾಯ್ತಿ ಕಟ್ಟೆಯಲ್ಲೂ ಅಷ್ಟೆ, ‘‘ಯಾವ ಗಂಡಸು ಹೆಣ್ಣು ಕುಲಕ್ಕೆ, ಹೆಣ್ತನಕ್ಕೆ ಗೌರವ ಕೊಡುವುದಿಲ್ಲವೋ ಅವನು ಪುರುಷನಲ್ಲ’’ ಎಂದು ಹೆಣ್ಣುಮಕ್ಕಳ ಪರ ಖಡಕ್ಕಾಗಿ ಹೇಳುತ್ತಿದ್ದರು.
ನಮ್ಮನೆಯಲ್ಲಿ ಇದ್ದವರೆಲ್ಲ ಹೆಣ್ಣುಮಕ್ಕಳೆ. ಅಪ್ಪಾಜಿಗೆ ಅಜ್ಜಿ ಕಂಡರೆ ಅಪಾರ ಪ್ರೀತಿ. ನಮ್ಮಮ್ಮನನ್ನು ಏಕವಚನದಲ್ಲಿ ಮಾತನಾಡಿಸಿದ್ದನ್ನು ನಾವು ನೋಡಿಯೇ ಇಲ್ಲ. ನಮ್ಮನ್ನೂ ಅಷ್ಟೆ, ಬಾಮ್ಮ, ಹೋಗಮ್ಮ ಅಂತಲೇ ಮಾತನಾಡಿಸುತ್ತಿದ್ದರು. ಚಿಕ್ಕ ಮಕ್ಕಳಾದರೂ, ದೊಡ್ಡವರಾದರೂ ಸರಿ ಜೋರಾಗಿ ಮಾತನಾಡಿಸಿದ್ದೇ ಇಲ್ಲ. ಅವರು ಯಾವತ್ತೂ ಹೆಣ್ಣು ಮಕ್ಕಳನ್ನು ಬಯ್ಯೋದು, ಹೊಡೆಯೋದು ಮಾಡ್ತಿರಲಿಲ್ಲ. ಆದರೆ ನಮಗೆ ಕೆಂಪರಾಜ್ ಚಿಕ್ಕಪ್ಪನ ಜೊತೆ ಮಾತನಾಡುವಷ್ಟು ಸದರ ನಮ್ಮ ತಂದೆಯವರ ಹತ್ತಿರ ಇರಲಿಲ್ಲ. ಅವರ ಮುಂದೆ ನಿಲ್ಲಲು ಕೂರಲು ಮಾತನಾಡಲು ಕೂಡ ಹೆದರುತ್ತಿದ್ದೆವು. ನನಗೆ ಮದುವೆಯಾಗಿ ಮಗುವಾದ ಮೇಲೆ ಸ್ವಲ್ಪ ಧೈರ್ಯ ಬಂತು. ಆದರೆ ಆಗ ಸಮಯವೇ ಸಿಗಲಿಲ್ಲ.
ಶಿಸ್ತಿನ ಸಿಪಾಯಿ
ಅಪ್ಪಾಜಿಯದು ಶಿಸ್ತಿನ ಜೀವನ. ಬೆಳಗಿನ ಜಾವ ನಾಲ್ಕೂವರೆಗೆಲ್ಲ ಎದ್ದುಬಿಡುತ್ತಿದ್ದರು. ಎದ್ದ ತಕ್ಷಣ ಯೋಗ, ಅದಾದ ನಂತರ ಒಂದು ಗಂಟೆ ಕಾಲ ಬ್ರಿಸ್ಕ್ ವಾಕಿಂಗ್. ಸಮಯ ಸಿಕ್ಕರೆ ವ್ಯಾಯಾಮ. ವಾಕಿಂಗ್ ನಂತರ ಒಂದು ಗ್ರೀನ್ ಟೀ ವಿದ್ ಹನಿ. ಟೀ ಕುಡಿಯುತ್ತ ಅಂದಿನ ದಿನಪತ್ರಿಕೆಗಳತ್ತ ಕಣ್ಣಾಡಿಸಿಬಿಡುತ್ತಿದ್ದರು. ಸ್ನಾನಕ್ಕೆ ಹೋಗಬೇಕೆನ್ನುವಷ್ಟರಲ್ಲಿ ಅವರ ಅಭಿಮಾನಿಗಳು ಬರೋರು. ಅವರೊಂದಿಗೆ ಹಲ್ಲುಜ್ಜುತ್ತ, ಶೇವ್ ಮಾಡುತ್ತಲೇ ಮಾತನಾಡುತ್ತಿದ್ದರು. ಆಮೇಲೆ, ‘‘ಸ್ನಾನ ಮಾಡ್ಲಿಕ್ಕೆ ಬಿಡ್ರಪ್ಪ’’ ಎಂದು ಹೋಗುತ್ತಿದ್ದರು. ಸ್ನಾನವಾದ ಮೇಲೆ ದೇವರ ಮನೆಗೆ ಹೋಗಿ ಸುಮಾರು ಒಂದು ಗಂಟೆ ಕಾಲ ಕೂತುಬಿಡುತ್ತಿದ್ದರು. ಶ್ರದ್ಧಾಭಕ್ತಿಯಿಂದ ಪೂಜೆ ಮಾಡುತ್ತಿದ್ದರು. ‘‘ನಾವು ಕ್ಷೇಮವಾಗಿರೋದು ಅವನಿಂದಲೇ’’ ಎನ್ನುತ್ತಿದ್ದರು. ನಂತರ ಬ್ರೇಕ್ ಫಾಸ್ಟ್. ಮತ್ತೆ ಮನೆಗೆ ಬರುತ್ತಿದ್ದುದು ರಾತ್ರಿ ಎಷ್ಟೊತ್ತಿಗೋ... ಇದು ಅವರ ದಿನಚರಿ.
ಜೀವನದಲ್ಲಿ ಶಿಸ್ತು ಮುಖ್ಯ, ದೇಹ ಮತ್ತು ಮನಸ್ಸು ಚೆನ್ನಾಗಿರಬೇಕು ಎಂಬುದು ಅಪ್ಪಾಜಿಯ ಘೋಷವಾಕ್ಯ. ಆರೋಗ್ಯಕ್ಕೆ ಮೊದಲ ಆದ್ಯತೆ. ಅದಕ್ಕಾಗಿಯೇ ವಾಕಿಂಗ್, ವ್ಯಾಯಾಮ, ಯೋಗ ಮಾಡುತ್ತಿದ್ದರು. ‘‘ಆಸ್ತಿ ಇಲ್ಲ ಅಂದ್ರು ಪರವಾಗಿಲ್ಲ, ಆರೋಗ್ಯ’’ ಎನ್ನುತ್ತಿದ್ದರು. ನನ್ನನ್ನು ಕಂಡಾಗಲೆಲ್ಲ, ‘‘ನೀನು ವಾಕ್ ಮಾಡು, ಸಣ್ಣಗಾಗ್ತಿಯಾ, ಆರೋಗ್ಯವಾಗಿರ್ತಿಯಾ’’ ಎನ್ನುತ್ತಿದ್ದರು. ಆದರೆ ನಾನು ವಾಕ್ ಮಾಡಲೂ ಇಲ್ಲ, ಸಣ್ಣಗಾಗಲೂ ಇಲ್ಲ.
ನಮಗಾಗಿ ಸಮಯ ಕೊಡಲಿಲ್ಲ
ನಮ್ಮ ತಂದೆ ನಮ್ಮ ಸಂಸಾರಕ್ಕೆ ಸಮಯ ಕೊಡಲಿಲ್ಲ, ಕೊಡಲು ಸಮಯವೂ ಇರಲಿಲ್ಲ. ಅವರು ಮನೆಯಲ್ಲಿರುತ್ತಿದ್ದುದು ಬಹಳ ಕಡಿಮೆ. ಮಕ್ಕಳ ಬಗ್ಗೆ ಯೋಚಿಸುವುದಕ್ಕೆ, ಮಕ್ಕಳೊಂದಿಗೆ ಕಾಲ ಕಳೆಯುವುದಕ್ಕೆ, ಮಾತನಾಡಿಸಿ ಮುದ್ದು ಮಾಡುವುದಕ್ಕೆ ಪುರುಸೊತ್ತೆ ಇರುತ್ತಿರಲಿಲ್ಲ. ಬರೀ ರಾಜಕೀಯ. ಸಾರ್ವಜನಿಕ ಜೀವನವೇ ಅವರಿಗೆ ಹೆಚ್ಚಾಗಿತ್ತು. ಆ ಕಾರಣಕ್ಕಾಗಿಯೇ ನಮ್ಮಮ್ಮನಿಗೆ ಮನೆಯ ಸಂಪೂರ್ಣ ಜವಾಬ್ದಾರಿಯನ್ನು ಒಪ್ಪಿಸಿದ್ದರು. ಅವರು ಮುಖ್ಯಮಂತ್ರಿಯಾದ ಮೇಲಂತೂ, ಎಷ್ಟೋ ಸಾರಿ ಮನೆಯಲ್ಲಿದ್ದರೂ ನಾಲ್ಕೈದು ದಿವಸ ನಮಗೂ ಅವರಿಗೂ ಮುಖಾಮುಖಿಯಾಗುತ್ತಿರಲಿಲ್ಲ. ನಾವು ಚಿಕ್ಕವರಿದ್ದಾಗ ಸ್ಕೂಲ್ ಫ್ರೆಂಡ್ಸ್ ಜೊತೆ ಸೇರಿದಾಗ, ಟ್ರಿಪ್, ಹೊಟೇಲ್ ಊಟ, ನೆಂಟರಿಷ್ಟರ ಮದುವೆ, ಹಬ್ಬ-ಜಾತ್ರೆ-ಪೂಜೆ ಕಾಮನ್ ಮಾತಾಗಿತ್ತು. ಆಗೆಲ್ಲ ನಮಗೆ ‘ನಮ್ಮನೆ ಅಬ್‌ನಾರ್ಮಲ್ಲಾ’ ಅಂತ ಅನುಮಾನ ಶುರುವಾಗುತ್ತಿತ್ತು. ಏಕೆಂದರೆ, ನಾನು ಹುಟ್ಟಿದಾಗಿನಿಂದ ನಮ್ಮ ಫ್ಯಾಮಿಲಿ ಟ್ರಿಪ್, ಟೂರು ಅಂತ ಎಲ್ಲಿಗೂ ಹೋಗಿಲ್ಲ. ಹಾಗೇನಾದರು ಹೋಗಿದ್ರೆ ಅದು ನಮ್ಮ ತಂದೆ ಯೊಂದಿಗೆ ರಾಜಕೀಯ ಟೂರ್ ಮಾತ್ರ. ಅದು ಬಿಟ್ಟರೆ ರಾಜಕೀಯ ನಾಯಕರ ಮಕ್ಕಳ ಮದುವೆಗಳಿಗೆ. ಅದನ್ನು ಹೊರತುಪಡಿಸಿ ಕುಟುಂಬದವರೆಲ್ಲಾ ಟೂರಿಗೆ ಹೋಗಿದ್ದು ನೆನಪೇ ಇಲ್ಲ.
ಅಪ್ಪಾಜಿ ಒಂದು ಸಲ ಲಂಡನ್‌ಗೆ ಹೋಗಿದ್ದರು. ಅದು ಏಕೆ ನನಗೆ ನೆನಪೆಂದರೆ, ಅಲ್ಲಿಂದ ಬರುವಾಗ ನಮಗೆಲ್ಲ ಬಟ್ಟೆ ತಂದಿದ್ದರು. ಆಶ್ಚರ್ಯ. ಆಮೇಲೆ ಗೊತ್ತಾಯಿತು, ಅದು ಅಲ್ಲಿ ಯಾರೋ ಅವರ ಸ್ನೇಹಿತರು ಖರೀದಿಸಿ ಇವರ ಬ್ಯಾಗಿಗೆ ಬಲವಂತವಾಗಿ ಹಾಕಿ ಕಳಿಸಿದ್ದು ಎಂದು. ಬೇರೆ ಮನೆಗಳ ತರ ಶಾಪಿಂಗ್ ಕರೆದುಕೊಂಡು ಹೋಗುವುದು, ಏನು ಬೇಕು ಅಂತ ಕೇಳುವುದೆಲ್ಲಾ ಇಲ್ಲವೇ ಇಲ್ಲ. ಅವರೆಂದೂ ನಮಗೆ ಏನನ್ನು ತಂದುಕೊಟ್ಟವರೂ ಅಲ್ಲ. ನಮ್ಮ ಶಾಪಿಂಗ್ ಅಂದರೆ ಅಮ್ಮನೊಂದಿಗೆ ಮಾತ್ರ.
ನಮ್ಮ ತಂದೆಗೆ ಯಾವ ಮಕ್ಕಳು, ಯಾವ ಶಾಲೆಯಲ್ಲಿ ಓದುತ್ತಿದ್ದಾರೆ, ಯಾವ ಮಗಳು ಏನು ಕಲಿತಿದ್ದಾಳೆ, ಯಾರು ಪಾಸ್-ಫೇಲ್ ಎಂಬುದೂ ಗೊತ್ತಿರಲಿಲ್ಲ. ನಮ್ಮ ಪ್ರೊಗ್ರೆಸ್ ಕಾರ್ಡಿಗೆ ನಮ್ಮ ಅಮ್ಮನೇ ಸೈನ್ ಮಾಡಿ ಕಳುಹಿಸುತ್ತಿದ್ದರು. ಯಾರಾದರೂ ಮನೆಗೆ ಗಣ್ಯರು ಬಂದರೆ, ಅವರು ಮಕ್ಕಳ ಬಗ್ಗೆ ಕೇಳಿದರೆ, ಅಪ್ಪಾಜಿ ನಮ್ಮನ್ನು ತೋರಿಸಿ, ‘‘ಶಿ ಇಸ್ ಮೈ ಎಲ್ಡರ್ ಡಾಟರ್ ಸ್ಟಡಿಯಿಂಗ್ ಪಿಯುಸಿ, ಶಿ ಇಸ್ ಮೈ ಸೆಕೆಂಡ್ ಡಾಟರ್ ಸ್ಟಡಿಯಿಂಗ್ ಬಿ.ಎಸ್ಸಿ’’ ಎನ್ನುತ್ತಿದ್ದರು. ಆಗ ನಾವೇ ಮುಂದಾಗಿ ಅವರ ತಪ್ಪನ್ನು ಸರಿಮಾಡುತ್ತಿದ್ದೆವು. ಅದಕ್ಕೂ ಬೇಜಾರು ಮಾಡಿಕೊಳ್ಳುತ್ತಿರಲಿಲ್ಲ, ತಪ್ಪನ್ನು ತಿದ್ದಿ ಕೊಳ್ಳುತ್ತಲೂ ಇರಲಿಲ್ಲ.
ನನ್ನ ಮದುವೆ ಸಮಯದಲ್ಲಿ ನನ್ನ ತಾಯಿ, ‘‘ಒಂದು ವಾರ ರಜೆ ಹಾಕಿ, ನೀವೆ ಮುಂದೆ ನಿಂತು ಮದುವೆ ಕಾರ್ಯ ನೆರವೇರಿಸಿಕೊಡಬೇಕು’’ ಎಂದು ತಾಕೀತು ಮಾಡಿದ್ದರು. ಆದರೆ ಅಪ್ಪಾಜಿ ನನಗೆ ಗೊತ್ತು ಮಾಡಿದ್ದ ಹುಡುಗನ್ನ ನೋಡಲೂ ಬರಲಿಲ್ಲ. ನಾವೇ ಆ ಹುಡುಗನನ್ನು ಕರೆಸಿ ಅಪ್ಪಾಜಿ ಮುಂದೆ ನಿಲ್ಲಿಸಿ, ಪರಿಚಯಿಸಿದೆವು. ಅಷ್ಟೇ ಅಲ್ಲ, ಮದುವೆಯ ಇತರೆ ಕೆಲಸ ಕಾರ್ಯಗಳಲ್ಲೂ ಭಾಗಿಯಾಗಲಿಲ್ಲ. ಆದರೆ ಮದುವೆ ದಿನ ಶಾಸ್ತ್ರೋಕ್ತವಾಗಿ ಕನ್ಯಾದಾನ ಮಾಡಿಕೊಟ್ಟರು. ಪ್ರತಿಯೊಂದು ಶಾಸ್ತ್ರದಲ್ಲಿಯೂ ಪಾಲ್ಗೊಂಡರು, ಬಂದವರನ್ನು ನಗುಮೊಗದಿಂದಲೇ ಉಪಚರಿಸಿದರು.
ನಮಗೆ ಬುದ್ಧಿ ಬೆಳೆದಂತೆ ನಮ್ಮ ತಂದೆ ಜನರಿಗೋಸ್ಕರ, ಅವರ ಸೇವೆಗೋಸ್ಕರ, ತಮ್ಮ ಕುಟುಂಬವನ್ನೇ ತ್ಯಾಗ ಮಾಡಿದ್ದಾರೆ ಎಂಬುದು ಅರಿವಿಗೆ ಬರತೊಡಗಿತು.
ಅಪ್ಪಟ ಅಸಲಿ ಸ್ನೇಹಿತರು
ನಮ್ಮ ಹುಣಸೂರು ಒಂದು ರೀತಿಯ ಸೆಕ್ಯುಲರ್ ಊರು. ನಮ್ಮ ತಂದೆಯನ್ನು ಇಷ್ಟಪಡುವ ಹಿರಿಯರ ಗುಂಪೊಂದು ನಮ್ಮೂರಿನಲ್ಲಿತ್ತು. ಅದು ನಿಸ್ವಾರ್ಥ ಗುಂಪು. ಸೇವಾ ಮನೋಭಾವದ ಗುಂಪು. ಆ ಕಾಲದ ಗುಣವೇ ಅಂಥಾದ್ದು. ಅಲ್ಲಿ ಎಲ್ಲಾ ಜಾತಿಯ ಜನರೂ ಇದ್ದರು. ಅವರಿಗೆಲ್ಲ ಊರಿನ ಉದ್ಧಾರವೇ ಮುಖ್ಯ. ಅಂತಹವರ ಬೆಂಬಲ, ಮಾರ್ಗದರ್ಶನ ನಮ್ಮ ತಂದೆಗೆ ಸಿಕ್ಕಿದ್ದು, ಅವರ ಅದೃಷ್ಟ. ಅವರೂ ಅಷ್ಟೇ, ಅವರನ್ನೆಲ್ಲ ಎಷ್ಟು ಗೌರವದಿಂದ ಕಾಣುತ್ತಿದ್ದರೆಂದರೆ, ಊರಿಗೆ ಬಂದರೆ ಮೊದಲು ಅವರನ್ನು ಕಂಡು ಕುಶಲ ವಿಚಾರಿಸಿ ನಮ್ಮನೆಗೆ ಬರುತ್ತಿದ್ದರು.
ಆ ಗುಂಪು ಅಂದನಲ್ಲ, ಅದರಲ್ಲಿ ಕುರುಬರ ಮೈಲಾರಪ್ಪ, ಶ್ರೀನಿವಾಸ ಅಯ್ಯಂಗಾರ್, ಡಾ.ಎಚ್.ಎಲ್.ತಿಮ್ಮೇಗೌಡ, ಬೆಲ್ಲದ ಅಮೀರ್, ಲಬ್ಬೆ ಮುಸ್ಲಿಂ ಮೊಹಿದ್ದೀನ್.. ಇನ್ನೂ ಅನೇಕ ಜನ ಹಿರಿಯರಿದ್ದರು. ಅದರಲ್ಲೂ ಹುಣಸೂರಿನ ಟಿಂಬರ್ ಮರ್ಚೆಂಟ್ ಇಬ್ರಾಹಿಂ ಖಾನ್‌ರಂತೂ ಅಪ್ಪನಿಗೆ ಅಚ್ಚುಮೆಚ್ಚು. ಅವರಿಬ್ಬರದೂ ಅಪ್ಪ-ಮಗನ ಸಂಬಂಧ. ಆದರೆ ಸ್ನೇಹಿತರಂತಿದ್ದರು. ಖಾನ್ ಸಾಹೇಬರ ಪತ್ನಿಯಂತೂ ಸೌಮ್ಯ ಸ್ವಭಾವದ ದೇವರಂತಹವರು. ನಾವು ಜೈನರು, ಮನೆಯಲ್ಲಿ ಮಾಂಸಾಹಾರವಿಲ್ಲ. ಆದರೆ ನಮ್ಮ ತಂದೆಗೆ ಇಬ್ರಾಹಿಂ ಖಾನ್‌ರ ಮನೆಯ ನಾನ್ ವೆಜ್ ಊಟ ಅಂದರೆ, ಬಲು ಇಷ್ಟ. ನನ್ನ ಪ್ರಕಾರ ಅಪ್ಪಾಜಿಗೆ ನಾನ್ ವೆಜ್ ಹುಚ್ಚು ಹಿಡಿಸಿದ್ದೇ ಖಾನ್ ಸಾಹೇಬರ ಮನೆ ಊಟ ಅಂತ ಕಾಣುತ್ತೆ.
ಅಪ್ಪಾಜಿಯ ಎಲ್ಲ ಸಂದರ್ಭಗಳಲ್ಲೂ ಬೆನ್ನಿಗೆ ನಿಂತು ಬೆಂಬಲಿಸಿದ ಖಾನ್ ಸಾಹೇಬರಿಗೆ, ಮುಖ್ಯಮಂತ್ರಿಯಾಗಿ ನೋಡಬೇಕೆಂಬ ಆಸೆ ಇತ್ತು. ಆದರೆ ಅವರು ಬದುಕಿರುವವರೆಗೂ ಅದು ಸಾಧ್ಯವಾಗಲಿಲ್ಲ. ಅಪ್ಪಾಜಿಯ ಪಾಲಿನ ಗೈಡ್ ಆ್ಯಂಡ್ ಫಿಲಾಸಫರ್ ಖಾನ್ ಸಾಹೇಬರು ಸತ್ತ ದಿನ ಕುಸಿದು ಕೂತಿದ್ದರು. ಖಾನ್ ಸಾಹೇಬರ ಕಳೇಬರವನ್ನು ಹೊರುವ ನಾಲ್ಕು ಜನರಲ್ಲಿ ಇವರೂ ಒಬ್ಬರಾಗಿ, ಖಬರಸ್ತಾನದವರೆಗೂ ಹೆಗಲ ಮೇಲೆ ಹೊತ್ತುಕೊಂಡು ಹೋಗಿ, ಮಣ್ಣು ಮಾಡಿ ಬಂದಿದ್ದರು.
ಆನಂತರ ಇಬ್ರಾಹಿಂ ಖಾನ್‌ರ ಮಗ ರಹಮತುಲ್ಲಾ ಖಾನ್‌ರಿಗೆ ಬೆಂಗಳೂರಿನ ಜಯನಗರ-ಬಸವನಗುಡಿ ಕ್ಷೇತ್ರಕ್ಕೆ ಟಿಕೆಟ್ ಕೊಟ್ಟು, ಗೆಲ್ಲಿಸಿ, ಶಾಸಕನನ್ನಾಗಿಸಿದ್ದರು. ಸಾಲದು ಎಂದು ಲೆದರ್ ಬೋರ್ಡ್ ಚೇರ್ಮನ್ ಮಾಡಿದ್ದರು. ಮಂತ್ರಿ ಮಾಡಬೇಕೆಂಬ ಆಸೆಯೂ ಇತ್ತು. ಯಾರಾದರೂ ಕೇಳಿದರೆ, ಇಬ್ರಾಹಿಂ ಖಾನ್‌ರ ಋಣ ದೊಡ್ಡದು. ಅದರ ಮುಂದೆ ಇದೆಲ್ಲ ಏನು ಎನ್ನುತ್ತಿದ್ದರು.
ಅಪ್ಪಾಜಿಗೆ ಈ ಮಟ್ಟದ ಮತ್ತೊಬ್ಬ ಪ್ರಾಣಮಿತ್ರ ಎಂದರೆ ಅದು ಆರ್.ಎಂ.ದೇಸಾಯಿ. ಇವರೂ ಅಷ್ಟೇ, ಆಗರ್ಭ ಶ್ರೀಮಂತರು. ಸುಸಂಸ್ಕೃತ ವ್ಯಕ್ತಿ. ಸಾಹಿತ್ಯ, ಸಂಗೀತದ ಬಗ್ಗೆ ಜ್ಞಾನವುಳ್ಳವರು. ಇವರು ಯಾವ ಮಟ್ಟದ ಸ್ನೇಹಿತರು, ಎಷ್ಟು ಆತ್ಮೀಯರು ಎಂದರೆ ನಮ್ಮ ತಂದೆ ಸಿಎಂ ಆದಾಗಿನಿಂದ ಅವರು ಕಾಲವಾಗುವವರೆಗೂ, ಎಲ್ಲಾ ಕಾಲದಲ್ಲೂ ಜೊತೆಯಾಗಿದ್ದವರು. ಊರಿಗೇ ಹೋಗುತ್ತಿರಲಿಲ್ಲ. ನಮ್ಮ ತಂದೆ ಎಲ್ಲಿ ಹೋದರೂ ಜೊತೆಯಲ್ಲಿಯೇ ಹೋಗುತ್ತಿದ್ದರು. ಈವಯ್ಯನಿಗೆ ಮನೆ ಮಠ ಏನು ಇಲ್ವಾ ಎಂದು ನಾವು ಮಾತಾಡಿಕೊಂಡಿದ್ದೂ ಉಂಟು. ಅವರನ್ನು ಅಪ್ಪಾಜಿ ಕೆಎಸ್‌ಆರ್‌ಟಿಸಿ ಚೇರ್ಮನ್ ಮಾಡಿದ್ದರು. ಅವರ ವ್ಯಕ್ತಿತ್ವಕ್ಕೆ ಅದೇನೂ ಅಲ್ಲ. ಆದರೂ ಅವರು ಸಿಕ್ಕ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳದೆ, ಆ ಅಧಿಕಾರ ಸ್ಥಾನಕ್ಕೇ ಘನತೆ-ಗೌರವ ತಂದುಕೊಟ್ಟ ದೊಡ್ಡ ಮನುಷ್ಯ. ಆಶ್ಚರ್ಯವೆಂದರೆ, ಅಪ್ಪಾಜಿ ತಂದ ಭೂ ಸುಧಾರಣೆ ಕಾಯ್ದೆ ಯಿಂದ ದೇಸಾಯಿಯವರ ನೂರಾರು ಎಕರೆ ಜಮೀನು ಹೋಯ್ತು. ಬೇರೆ ಯಾರಾದರೂ ಆಗಿದ್ದರೆ, ಸಿಎಂ ಖಾಸಾ ಗೆಳೆಯ, ಏನಾದರೂ ಮಾಡಿ ಜಮೀನು ಉಳಿಸಿಕೊಳ್ಳುತ್ತಿದ್ದರು ಅಥವಾ ಕಾಯ್ದೆಯನ್ನೇ ತಿದ್ದುವಂತೆ ಮಾಡುತ್ತಿದ್ದರೇನೋ. ಆದರೆ ಆರ್.ಎಂ.ದೇಸಾಯಿ ಮರು ಮಾತಾಡದೆ ಜಮೀನನ್ನು ಗೇಣಿದಾರರಿಗೆ ಬಿಟ್ಟುಕೊಟ್ಟರು. ಅಪ್ಪಾಜಿ ತಂದ ಕ್ರಾಂತಿಕಾರಿ ಕಾಯ್ದೆಗೆ ಬೆನ್ನೆಲುಬಾಗಿ ನಿಂತವರು. ಕೊನೆಗೆ ಅಪ್ಪಾಜಿ ಅಧಿಕಾರದಿಂದ ಕೆಳಗಿಳಿದಾಗ, ಅವರು ಬೆಳೆಸಿದವರೆಲ್ಲ ಕೈ ಕೊಟ್ಟು ದೂರ ಹೋದಾಗ, ಒಬ್ಬಂಟಿಯಾಗಿದ್ದಾಗ ಜೊತೆಗಿದ್ದವರು ದೇಸಾಯಿ. ಅವರಿಬ್ಬರ ಸ್ನೇಹ ಹಣ, ಅಧಿಕಾರಕ್ಕೂ ಮೀರಿದ್ದು.
ಅಂತಹ ಅಪರೂಪದ ಆಸಾಮಿಗಳನ್ನು, ವಾತ್ಸಲ್ಯಮಯ ವಾತಾವರಣವನ್ನು, ಕರುಣಾಮಯಿ ಕಾಲವನ್ನು ಮತ್ತೆ ಕಾಣಲು ಸಾಧ್ಯವಿಲ್ಲ.
ನಮ್ಮ ತಂದೆ ನಮ್ಮ ಸಂಸಾರಕ್ಕೆ ಸಮಯ ಕೊಡಲಿಲ್ಲ, ಕೊಡಲು ಸಮಯವೂ ಇರಲಿಲ್ಲ. ಅವರು ಮನೆಯಲ್ಲಿರುತಿದ್ದುದು ಬಹಳ ಕಡಿಮೆ. ಮಕ್ಕಳ ಬಗ್ಗೆ ಯೋಚಿಸುವುದಕ್ಕೆ, ಮಕ್ಕಳೊಂದಿಗೆ ಕಾಲ ಕಳೆಯುವುದಕ್ಕೆ, ಮಾತನಾಡಿಸಿ ಮುದ್ದು ಮಾಡುವುದಕ್ಕೆ ಪುರುಸೊತ್ತೆ ಇರುತ್ತಿರಲಿಲ್ಲ. ಬರೀ ರಾಜಕೀಯ, ಸಾರ್ವಜನಿಕ ಜೀವನವೇ ಅವರಿಗೆ ಹೆಚ್ಚಾಗಿತ್ತು.