ಅಕ್ಕ ಸತ್ತಾಗ ಗಳಗಳನೆ ಅತ್ತಿದ್ದರು ಅಪ್ಪಾಜಿ

Update: 2016-10-04 18:03 GMT

ಗೊರಕೆಗೆ ಡೈವೋರ್ಸ್

 ಅಪ್ಪಾಜಿಗೆ ಬಯಲು ಬಲು ಪ್ರೀತಿ. ಇಕ್ಕಟ್ಟು ಅಂದರೆ ಇರುಸು ಮುರುಸು. ಮನುಷ್ಯರು ಕೂಡ ಬಯಲಿನಂತೆ ಮುಕ್ತವಾಗಿರಬೇಕೆಂದು ಬಯಸುತ್ತಿದ್ದರು. ರಾಜಕಾರಣದಲ್ಲೂ ಅಷ್ಟೆ. ಇಂಥವರು ಬೇಕು, ಇಂಥವರು ಬೇಡ ಎಂಬ ತಾರತಮ್ಯ ನೀತಿಯನ್ನು ಎಂದೂ ಅನುಸರಿಸಿದವರಲ್ಲ. ಎಲ್ಲ ಜಾತಿಯ ಜನರೂ ಬೇಕು, ಎಲ್ಲರಿಗೂ ಅವಕಾಶ ಕೊಡಬೇಕು ಎಂಬುದು ಅಪ್ಪಾಜಿಯ ಆಸೆಯಾಗಿತ್ತು. ಹಿಂದುಳಿದವರಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿರಬಹುದು, ಹಾಗಂತ ಮೇಲ್ಜಾತಿಗಳನ್ನು ನಿರ್ಲಕ್ಷಿಸಲಿಲ್ಲ, ದೂರ ಇಟ್ಟಿರಲಿಲ್ಲ. ಕಲ್ಲಳ್ಳಿಯ ನಮ್ಮ ಮನೆ ಚಿಕ್ಕದು. ಆದರೆ ಅದರ ಜಗಲಿ ವಿಶಾಲವಾಗಿತ್ತು. ಊಟ ಮಾಡಿ ಜಗಲಿಯ ಮೇಲೆ ಬಂದು ಕುಳಿತುಕೊಳ್ಳುತ್ತಿದ್ದರು. ಮೈಸೂರಿನ ನಮ್ಮ ಮನೆಯಲ್ಲೂ ಅಷ್ಟೇ, ಹೊರಗಡೆ ಹುಲ್ಲುಹಾಸು ಅಥವಾ ತಾರಸಿಯ ಮೇಲೆ ಕುಳಿತುಕೊಳ್ಳುತ್ತಿದ್ದರು. ಅಪ್ಪಾಜಿಗೆ ಮನೆ ನೀಟಾಗಿರಬೇಕು, ಇಲ್ಲ ಎಂದರೆ ಕೋಪ ಬರುತ್ತಿತ್ತು. ಏನೇ ಮಾಡು ನೀಟಾಗಿ ಮಾಡು ಎನ್ನುತ್ತಿದ್ದರು. ಒಂದು ದಿನ, ಬೆಳಗ್ಗೆ ಮನೆಯಿಂದ ವಿಧಾನಸೌಧಕ್ಕೆ ಹೊರಡುವ ಸಮಯ, ಮಹಡಿಯಿಂದ ಇಳಿದು ಬರುತ್ತಿದ್ದರು. ಕಚ್ಚೆ ಪಂಚೆ ಅವರ ಫೇವರಿಟ್. ಅದನ್ನು ಉಡುವ ರೀತಿಯೂ ಸೊಗಸು. ಅವತ್ತು ಕೂಡ ಕಚ್ಚೆ ಪಂಚೆ ಉಟ್ಟಿದ್ದರು. ನಾನು ಮೆಟ್ಟಿಲು ಕೆಳಗೆ ನಿಂತಿದ್ದವಳು, ಅವರ ಡ್ರೆಸ್ ಮೇಲೆ ಕಣ್ಣಾಡಿಸಿ, ಮಂಡಿ ಹತ್ತಿರ ಚಿಕ್ಕದಾಗಿ ಹರಿದಿದ್ದನ್ನು ನೋಡಿ ‘‘ಅಪ್ಪಾಜಿ ಪಂಚೆ ಹರಿದಿದೆ’’ ಎಂದೆ. ‘‘ಹೌದಾ, ನಾನು ನೋಡ್ಲೆ ಇಲ್ವಲ್ಲ’’ ಎಂದು ನೋಡಿಕೊಂಡರು. ಸ್ವಲ್ಪ ಹೊತ್ತು ಬಿಟ್ಟು, ‘‘ನೀಟಾಗಿದೆ ತಾನೆ’’ ಅಂದರು. ‘‘ನಿನ್ನೆ ತಾನೆ ಒಗೆದು ಇಸ್ತ್ರಿ ಮಾಡಿದ್ದು’’ ಅಂದೆ. ‘‘ಹರಿದಿದ್ರೇನು ಸ್ವಚ್ಛವಾಗಿದ್ರೆ ಸಾಕು’’ ಅಂತ ಹೇಳಿ ಹೊರಟರು.
 

ಅಪ್ಪಾಜಿ ನಿದ್ರಾಪ್ರಿಯ. ಸುಖವಾಗಿ ನಿದ್ರಿಸುತ್ತಿದ್ದರು. ಎಲ್ಲಿ ಕೂತರೂ ಅಲ್ಲೇ ನಿದ್ರೆ ಮಾಡುತ್ತಿದ್ದರು. ಗುಡಿಸಲಿರಲಿ, ಹಳ್ಳಿಯ ಮನೆಯಿರಲಿ, ಮುಖ್ಯಮಂತ್ರಿಗಳ ನಿವಾಸವೇ ಇರಲಿ, ಎಲ್ಲವನ್ನು ಮರೆತು ನಿದ್ರೆ ಮಾಡುತ್ತಿದ್ದರು. ಸೆಗಣಿಯಿಂದ ಸಾರಿಸಿದ ನೆಲದ ಮೇಲೂ ಅಷ್ಟೇ ಚೆನ್ನಾಗಿ ನಿದ್ರೆ ಮಾಡುತ್ತಿದ್ದರು. ಅಪ್ಪಾಜಿಯದು ಇನ್ನೂ ಒಂದು ಇಂಟರೆಸ್ಟಿಂಗ್ ವಿಚಾರವಿದೆ. ಅಪ್ಪಾಜಿ ಗೊರಕೆ ಹೊಡಿಯೋದರಲ್ಲಿ ಎಕ್ಸ್‌ಪರ್ಟ್. ಸಿಕ್ಕಾಪಟ್ಟೆ ಸೌಂಡ್‌ಪಾರ್ಟಿ. ಇದನ್ನು ನಮ್ಮಮ್ಮ ಹೇಳಿದ್ದು. ಗೊರಕೆ ಹೊಡಿಯೋದನ್ನು ನೋಡಿ ನಮ್ಮಮ್ಮ, ‘‘ನೀವೇನಾದ್ರು ಅಮೆರಿಕದೋಳನ್ನ ಮದುವೆಯಾಗಿದ್ರೆ ಈ ಗೊರಕೆಗೋಸ್ಕರನೇ ಡಿವೋರ್ಸ್ ಮಾಡುತ್ತಿದ್ದಳು’’ ಎಂದಿದ್ದರಂತೆ. ಅದಕ್ಕೆ ಅಪ್ಪಾಜಿಯದು ಎಂದಿನಂತೆ ನಗುವಷ್ಟೆ.

ಆಸ್ಟ್ರಾಲಜಿ-ನ್ಯೂಮರಾಲಜಿಯಲ್ಲಿ ನಂಬಿಕೆ

ಅಪ್ಪಾಜಿ ಮಹಾನ್ ದೈವಭಕ್ತರು. ಅದು ಬೂಟಾಟಿಕೆಯಲ್ಲ. ದೇವರಲ್ಲಿ ನಂಬಿಕೆ ಇಟ್ಟವರು. ನಮ್ಮೂರಿನ ದೇವರು ಅಂದರೆ ಅಪ್ಪಾಜಿಗೆ ಎಲ್ಲಿಲ್ಲದ ಭಕ್ತಿ. ಅದರಲ್ಲೂ ಮನೆದೇವರು ಎಂದರೆ, ಎಲ್ಲೇ ಇದ್ದರೂ ವರ್ಷಕ್ಕೆರಡು ಬಾರಿ ಶ್ರದ್ಧಾಭಕ್ತಿಯಿಂದ ಪೂಜೆ ಮಾಡಿಸುತ್ತಿದ್ದರು. ಆಮೇಲೆ ಪ್ರಾಚೀನ ದೇವಾಲಯಗಳು, ಎಲ್ಲೇ ಇದ್ದರೂ ಹೋಗಿ ಪೂಜೆ ಮಾಡಿಸಿಕೊಂಡು ಬರುತ್ತಿದ್ದರು. ಮೈಸೂರಿಗೆ ಬಂದಾಗಲೆಲ್ಲ ಚಾಮುಂಡಿ ಬೆಟ್ಟಕ್ಕೆ ಹೋಗಲೇ ಬೇಕಿತ್ತು. ದೇವಿಗೆ ಅರ್ಚನೆ ಮಾಡಲು ಪುರೋಹಿತರು ಗೋತ್ರ ಕೇಳಿದರೆ, ‘‘ಅದೆಲ್ಲಾ ಏನು ಬೇಡಿ, ನಮ್ಮ ಕರ್ನಾಟಕದ ಹೆಸರಿನಲ್ಲಿ ಮಾಡಿ, ರಾಜ್ಯದ ಜನತೆಗೆ ಒಳ್ಳೆಯದಾಗಲಿ’’ ಎನ್ನುತ್ತಿದ್ದರು. ಅಪ್ಪಾಜಿ ದೇವರನ್ನು ನಂಬುವಂತೆಯೇ ಆಸ್ಟ್ರಾಲಜಿಯನ್ನು ಅಪಾರವಾಗಿ ನಂಬುತ್ತಿದ್ದರು. ಅವರ ಪ್ರಕಾರ ಆಸ್ಟ್ರಾಲಜಿ ಎಂದರೆ ಸೈನ್ಸ್. ಆ ಬಗ್ಗೆ ಸಾಕಷ್ಟು ಪುಸ್ತಕಗಳನ್ನು ಅಧ್ಯಯನ ಮಾಡಿ, ಪಂಡಿತರೊಡನೆ ಚರ್ಚೆ, ಸಂವಾದ ನಡೆಸಿದ್ದರು. ಆದರೆ ಮಾಟ ಮಂತ್ರ ತಂತ್ರಗಳಲ್ಲಿ ನಂಬಿಕೆ ಇರಲಿಲ್ಲ, ಅದರ ತಂಟೆಗೂ ಹೋದವರಲ್ಲ. ನ್ಯೂಮರಾಲಜಿಯನ್ನೂ ನಂಬುತ್ತಿದ್ದರು. ನನ್ನ ತಿಳಿವಳಿಕೆ ಪ್ರಕಾರ, ಅಪ್ಪಾಜಿಗಿಂತಲೂ ಅವರ ಸುತ್ತಮುತ್ತ ಇದ್ದವರು, ಸಾಹೇಬ್ರಿಗೆ ಇಷ್ಟ ಎಂದು ಜಾಸ್ತಿ ಮಾಡಿದ್ದಿದೆ. ಅಪ್ಪಾಜಿಗೆ ಸರ್ಪಸುತ್ತು ಆಗಿತ್ತು. ಆದರೆ ಅದು ಹರ್ಪಿಸ್ ಎಂದು ನಮಗಾರಿಗೂ ಗೊತ್ತಿರಲಿಲ್ಲ. ಏನೋ ಹುಷಾರಿಲ್ಲ ಎಂದು ನಮ್ಮ ಮಾಮೂಲಿ ಡಾಕ್ಟರ್‌ಗಳ ಬಳಿ ತೋರಿಸಿ, ಚಿಕಿತ್ಸೆ, ಔಷಧ ಕೊಡಿಸಿದ್ದೆವು. ಸಾಲದು ಎಂದು ಚಿಕನ್ ಸೂಪ್ ಕುಡಿಸಿದ್ದೆವು. ಅದು ಜಾಸ್ತಿಯಾಗಿ, ಜೀವಕ್ಕೇ ಅಪಾಯ ಎಂದಾಗ, ಯಾರೋ ಬಂದು, ಇದು ಸರ್ಪಸುತ್ತು, ಇದಕ್ಕೆ ನಾಟಿ ಔಷಧವನ್ನು ಕೊಡಬೇಕು ಎಂದರು. ಮತ್ಯಾರೋ ಒಬ್ಬರು, ನಾಟಿ ಮದ್ದು ನೀಡುವ ವಯಸ್ಸಾದ ಮಹಿಳೆಯೊಬ್ಬರನ್ನು ಕರೆದುಕೊಂಡು ಬಂದರು. ದಿನಾ ಸೊಪ್ಪು, ನಾರು ಅರೆದು ಲೇಪನ ಮಾಡಿ ಹಾಕುತ್ತಾ ಬಂದರು. 15 ದಿನದೊಳಗೆ ಕಡಿಮೆಯಾಯಿತು. ಆಗಲೇ ಅಪ್ಪಾಜಿಗೆ ಆಯುರ್ವೇದದ ಬಗ್ಗೆ ಆಸಕ್ತಿ ಮೂಡಿದ್ದು.

ಮನೆಯೇ ಆಫೀಸು

ಅಪ್ಪಾಜಿ ಅಡ್‌ಹಾಕ್ ಸಮಿತಿ ಕನ್ವೀನರ್ ಆಗಿದ್ದಾಗ, ಅವರ ಬಳಿ ಒಂದು ಫಿಯೆಟ್ ಕಾರಿತ್ತು. ಅದರಲ್ಲಿಯೇ ಕರ್ನಾಟಕವನ್ನು ಎರಡು ಬಾರಿ ಸುತ್ತಿದರು. ಇಂದಿರಾ ಗಾಂಧಿಯವರನ್ನು ಕರೆದುಕೊಂಡು ಬಂದು, ಅವರೊಂದಿಗೂ ಆಯ್ದ ಸ್ಥಳಗಳಲ್ಲಿ ಸಭೆ ಮಾಡಿದರು. ಆ ಸುತ್ತುವ ಸಮಯದಲ್ಲಿಯೇ ರಾಜ್ಯದ ನಾನಾ ಭಾಗಗಳಿಂದ ವಿದ್ಯಾವಂತ ಯುವಕರನ್ನು ಗುರುತಿಸಿದ್ದು- ವೀರಪ್ಪ ಮೊಯ್ಲಿ, ಡಿ.ಬಿ.ಚಂದ್ರೇಗೌಡ, ಮಲ್ಲಿಕಾರ್ಜುನ ಖರ್ಗೆ, ಧರಂಸಿಂಗ್, ಜಾಫರ್ ಶರೀಫ್, ದೇವೇಂದ್ರಪ್ಪ ಘಾಳಪ್ಪ ಹೀಗೆ ಎಲ್ಲ ಜಾತಿಯ ಯುವಕರನ್ನು ರಾಜಕೀಯಕ್ಕೆ ಕರೆತಂದರು. ಅವರಿಗೆ ಅಧಿಕಾರ ಕೊಟ್ಟರು, ಸಬಲರನ್ನಾಗಿ ಮಾಡಿದರು. ಆ ಮೂಲಕ ಆಯಾಯ ಸಮುದಾಯಗಳು ಅಭಿವೃದ್ಧಿ ಹೊಂದಲು ನೆರವಾದರು.


ಆ ಸಮಯದಲ್ಲಿ ಪಾರ್ಟಿ ಆಫೀಸಂತ ಏನೂ ಇರಲಿಲ್ಲ. ನಮ್ಮ ಮನೆಯೇ ಆಫೀಸ್ ಆಗಿತ್ತು. ನಾವೇ ಕಚೇರಿ ಸಿಬ್ಬಂದಿಯಾಗಿದ್ದೆವು. ಒಂದು ಚಾಪೆ ಹಾಸಿಕೊಂಡು ಬೇರೆ ಊರುಗಳಿಂದ ಬರುತ್ತಿದ್ದ ಪತ್ರಗಳನ್ನು ಮತ್ತು ಒಂದು ರೂಪಾಯಿ, ಎರಡು ರೂಪಾಯಿ, ಐದು ರೂಪಾಯಿಗಳ ಪಾರ್ಟಿ ಫಂಡನ್ನು ಜೋಡಿಸಿ, ಲೆಕ್ಕ ಹಾಕಿ ಬ್ಯಾಂಕಿಗೆ ಜಮಾ ಮಾಡುತ್ತಿದ್ದೆವು. ಪಾರ್ಟಿ ಕಟ್ಟುವುದರಲ್ಲಿ ನಮ್ಮ ತಂದೆಯ ಜೊತೆಗೆ ನಮ್ಮದೂ ಪಾತ್ರವಿದೆ.

ನೀವೂ ಕೂಡ ಮೈನಾರಿಟಿ...

 ಮೊದಲನೆ ಸಲ, 1972ರಲ್ಲಿ ಅಪ್ಪಾಜಿ ಮುಖ್ಯಮಂತ್ರಿಯಾದರಲ್ಲ, ಆಗ ಕೆಲವು ಸ್ವಾರಸ್ಯಕರ ಸಂಗತಿಗಳು ಜರಗಿದವು. ನಮ್ಮ ತಂದೆ ಪಾರ್ಟಿ ಪ್ರೆಸಿಡೆಂಟ್ ಆಗಿದ್ದರು, ರಾಜ್ಯದ ಎಲ್ಲಾ ಕಡೆ ಟೂರ್ ಮಾಡಬೇಕು, ಪಕ್ಷ ಗೆಲ್ಲಿಸಬೇಕು ಎಂದು ಹೇಳಿ ಚುನಾವಣೆಗೆ ನಿಲ್ಲದಂತೆ ನೋಡಿಕೊಳ್ಳಲಾಯಿತು. ನಮ್ಮೂರಲ್ಲಿ ಅಪ್ಪಾಜಿ ಬದಲಿಗೆ ಕರಿಯಪ್ಪಗೌಡರನ್ನು ಕಣಕ್ಕಿಳಿಸಲಾಯಿತು. ಅಭೂತಪೂರ್ವ ಜಯಭೇರಿ. ಆದರೆ ಮುಖ್ಯಮಂತ್ರಿ ಯಾರಾಗಬೇಕು ಎನ್ನುವ ವಿಷಯ ಬಂದಾಗ, ಹಲವರು ಹಲವು ರೀತಿಯ ವೇಷಗಳನ್ನೇ ಹಾಕಿದರು. ಅಧಿಕಾರ ಅಲ್ಲವೇ? ಅದರಲ್ಲೂ ಕೆಂಗಲ್ ಹನುಮಂತಯ್ಯನವರು, ಬೆಳಗ್ಗಿನ ಬ್ರೇಕ್‌ಫಾಸ್ಟ್‌ಗೆ ಮನೆಗೇ ಬಂದುಬಿಟ್ಟಿದ್ದರು. ನಮಗೆ ಕೆಂಗಲ್ ಹನುಮಂತಯ್ಯನವರು ಹೀಗೆ ಇದ್ದಕ್ಕಿದ್ದಂತೆ ಮನೆಗೆ ಬಂದದ್ದು ನೋಡಿ ಆಶ್ಚರ್ಯ. ತಿಂಡಿ ತಿನ್ನುತ್ತಾ ಕೆಂಗಲ್ ಹನುಮಂತಯ್ಯನವರು, ‘‘ಅರಸು, ಈ ಸಲ ನಾನೇ ಸಿಎಂ ಆಗಿಬಿಡ್ತೀನಪ್ಪ, ಮುಂದಿನ ಸಲ ನೀನೇ ಆಗು, ನೀನಿನ್ನೂ ಯುವಕ, ಚಿಕ್ಕ ವಯಸ್ಸು, ನನಗೆ ವಯಸ್ಸಾಗಿದೆ, ಈ ಬಾರಿ ಬೆಂಬಲಿಸು’’ ಎಂದು ವಿನಂತಿಸಿಕೊಂಡರು. ಅದಕ್ಕೆ ಅಪ್ಪಾಜಿ, ಶಾಂತವಾಗಿ, ‘‘ನೋಡಿ, ನನ್ನ ಹಣೆಬರಹದಲ್ಲಿ ಬರೀದೆ ಇದ್ರೆ, ನೂರು ಹನುಮಂತಯ್ಯನವರು ಸೇರಿದರೂ ಸಿಎಂ ಮಾಡಲಿಕ್ಕಾಗಲ್ಲ, ಬರೆದಿದ್ರೆ ನೂರು ಜನ ಹನುಮಂತಯ್ಯನವರು ಸೇರಿದ್ರು ತಪ್ಪಿಸೋಕ್ಕಾಗಲ್ಲ, ಈಗ ಬನ್ನಿ, ಮೇಡಂ ಬಂದಿದ್ದಾರೆ, ಅಲ್ಲಿಗೆ ಹೋಗೋಣ’’ ಎಂದು ನಮ್ಮನೆಯಿಂದನೆ ಕುಮಾರಕೃಪಾ ಗೆಸ್ಟ್ ಹೌಸ್‌ಗೆ ಹೋದರು. ಅಲ್ಲಿ ಅಪ್ಪಾಜಿಗಿಂತ ಹಿರಿಯರು, ಅನುಭವಿಗಳು, ಜಾತಿ ಬಲಾಢ್ಯರು, ಹಣವಂತರು ಹಲವರಿದ್ದರು. ಅವರ ಅಭಿಪ್ರಾಯಗಳನ್ನು ಕೇಳಿದ ಮೇಲೆ ಇಂದಿರಾ ಗಾಂಧಿ, ಅಪ್ಪಾಜಿಯನ್ನು ಕರೆಸಿದರು. ಅಪ್ಪಾಜಿಗೆ, ‘‘ಯೂ ಬಿಲಾಂಗ್ಸ್ ಟು ಮೈಕ್ರೋಸ್ಕೋಪಿಕ್ ಮೈನಾರಿಟಿ, ಹೌ ಕೆನ್ ಯೂ ಮ್ಯಾನೇಜ್’’ ಎಂದರಂತೆ. ಅದಕ್ಕೆ ಅಪ್ಪಾಜಿ ನನ್ನ ಅಭಿಪ್ರಾಯ ಹೇಳಬಹುದೆ ಎಂದು ಕೇಳಿ ಓಕೆ ಎಂದ ಮೇಲೆ, ‘‘ನೀವು ಕೂಡ ಮೈನಾರಿಟಿನೇ ಅಲ್ವಾ, ನಿಮಗೆ ಅವಕಾಶ ಸಿಕ್ತು, ನಿಭಾಯಿಸಿದಿರಿ, ನನಗೊಂದು ಅವಕಾಶ ಕೊಟ್ಟು ನೋಡಿ’’ ಎಂದರಂತೆ. ಒಂದು ಕ್ಷಣ ಸ್ಟನ್ ಆದ ಇಂದಿರಾ ಗಾಂಧಿ, ಅಪ್ಪಾಜಿಯ ಮಾತಿನಲ್ಲಿ ಚಿಂತನೆಗೆ ಯೋಗ್ಯವಾದದ್ದಿದೆ ಎಂದು ನಿರ್ಧರಿಸಿ, ‘‘ಅರಸು ಮುಖ್ಯಮಂತ್ರಿ’’ ಎಂದು ಘೋಷಿಸಿದರಂತೆ. ಮುಂದಿನದು ಇತಿಹಾಸ... ನಿಮಗೇ ಗೊತ್ತು.

ನಮ್ಮನೆಯ ಮ್ಯಾನ್‌ಫ್ರೈಡೆ 

ಕಲ್ಲಳ್ಳಿಯಲ್ಲಿದ್ದಾಗ ನಮ್ಮ ಮನೆ ಕೆಲಸಕ್ಕೆಂದು ಒಬ್ಬ ಆಳಿದ್ದ. ಆತನ ಹೆಸರು ಚೆಲುವಯ್ಯ. ಆತ ನಮ್ಮನೆಯಲ್ಲಿ ಚಿಕ್ಕವನಿಂದಲೂ ಇದ್ದು ನಮ್ಮನೆಯವನೇ ಆಗಿದ್ದ. ಅವನಿಗೆ ಮೂರು ಜನ ಹೆಂಡತಿಯರು, ಹತ್ತೋ ಹನ್ನೊಂದೋ ಮಕ್ಕಳು. ಅವನಿಗೆ ಅಪ್ಪಾಜಿ ಅಂದರೆ ಪ್ರಾಣ. ಮನೆ, ಮಠ, ಹೆಂಡತಿ-ಮಕ್ಕಳು ಎಲ್ಲರನ್ನು ಬಿಟ್ಟು ಅವರೊಂದಿಗೇ ಇದ್ದುಬಿಡುತ್ತಿದ್ದ. ಅವರೆಲ್ಲಿಗೆ ಹೋದರೂ ಹೋಗುತ್ತಿದ್ದ. ಅವನು ಎಷ್ಟು ಸ್ವಾಮಿಭಕ್ತ, ನಂಬಿಕಸ್ಥ ಅಂದರೆ, ಅಪ್ಪಾಜಿ ಬಿಟ್ಟು ಬೇರೆ ಜಗತ್ತೇ ಗೊತ್ತಿಲ್ಲದ ವ್ಯಕ್ತಿ. ಅವನದೊಂದು ವಿಶೇಷವಿತ್ತು, ಊರಿನದ್ದು ಮತ್ತು ಬೆಂಗಳೂರಿನದ್ದು, ಎಲ್ಲ ಸುದ್ದಿಯನ್ನು ಪಿನ್ ಟು ಪಿನ್ ಹೇಳುತ್ತಿದ್ದ. ಅದೇನು ಗಾಸಿಪ್ ಅಲ್ಲ, ಸತ್ಯ ಸುದ್ದಿಗಳು, ಎಲ್ಲರಿಗಿಂತ ಮುಂಚೆ ಗ್ರಹಿಸಿ, ಅದರ ಆಳ-ಅಗಲ ತೂಗಿ ನೋಡಿ, ಅಪ್ಪಾಜಿ ಕಿವಿಗೆ ಮುಟ್ಟಿಸುತ್ತಿದ್ದ. ಅವನದೊಂಥರಾ ಪ್ಯಾರಲಲ್ ಇಂಟಲಿಜೆನ್ಸ್. ಅದಕ್ಕೆಂದೇ ಒಂದು ಇಲಾಖೆ, ಸಿಬ್ಬಂದಿ, ಅಧಿಕಾರಿಗಳು ಇದ್ದರೂ, ಅವರಿಗೂ ಸಿಗದ ಸೀಕ್ರೆಟ್ ವಿಷಯಗಳನ್ನು; ಅವರಿಗಿಂತ ಮುಂಚೆ ಪತ್ತೆ ಹಚ್ಚಿ ಅಪ್ಪಾಜಿಗೆ ತಿಳಿಸುತ್ತಿದ್ದ. ಅವನು ಏನು ಹೇಳುತ್ತಿದ್ದನೋ ಅದು ನಿಜವಾಗಿ, ಕೆಲವೇ ದಿನಗಳಲ್ಲಿ ಅದು ಗೋಚರಿಸುತ್ತಿತ್ತು. ಅವನನ್ನು ನೋಡಿದರೆ ಎಲ್ಲರೂ ಹೆದರುತ್ತಿದ್ದರು. ನಾವೆಲ್ಲ ಅವನನ್ನು ಮ್ಯಾನ್ ಫ್ರೈಡೆ(ಡ್ಯಾನಿಯಲ್ ಡೆಫೋನ ರಾಬಿನ್‌ಸನ್ ಕ್ರೂಸೋ ಪುಸ್ತಕದ ಒಂದು ಪಾತ್ರ) ಎನ್ನುತ್ತಿದ್ದೆವು. ಅವನಿಗೂ ಅಪ್ಪಾಜಿಗೂ ಎಂಥ ಆತ್ಮೀಯತೆ ಇತ್ತೆಂದರೆ, ಅವರಿಬ್ಬರೂ ರಕ್ತ ಹಂಚಿಕೊಂಡು ಹುಟ್ಟಿದ್ದಾರೇನೋ ಎನಿಸುತ್ತಿತ್ತು. ವಿಪರ್ಯಾಸಕರ ಸಂಗತಿ ಎಂದರೆ, ಅಪ್ಪಾಜಿ ಹೋದ ಮೇಲೆ ಮಂಕಾದ, ವೌನಿಯಾದ, ಒಬ್ಬಂಟಿಯಾದ. ಕೆಲವೇ ತಿಂಗಳಲ್ಲಿ ಅದೇ ಕೊರಗಿನಲ್ಲಿ ಸತ್ತು ಹೋದ. ಭೂ ಸುಧಾರಣೆ ಕಾಯ್ದೆ ಜಾರಿಗೆ ಬಂದಾಗ, ಅಪ್ಪಾಜಿ ಅದು ನನ್ನಿಂದಲೇ ಆರಂಭವಾಗಲಿ, ಇಡೀ ರಾಜ್ಯಕ್ಕೆ ಮಾದರಿಯಾಗಲಿ ಎಂದು ತನ್ನ ಹೆಸರಿನಲ್ಲಿದ್ದ 15 ಎಕರೆ ಜಮೀನನ್ನು ಈ ಚೆಲುವಯ್ಯನ ಹೆಸರಿಗೆ ಬರೆದುಕೊಟ್ಟಿದ್ದರು. ಆಗಲೂ ಆತ ನಮ್ಮನೆಯವನೇ ಆಗಿದ್ದ. ಯಜಮಾನನಂತೆ ಬೀಗಲಿಲ್ಲ, ದರ್ಪ ತೋರಲಿಲ್ಲ. ಪ್ರತಿ ಹಬ್ಬಕ್ಕೆ ಮನೆಯವರಾದ ನಮಗಿಂತಲೂ ಮುಂಚೆ ಆತನಿಗೆ ಹೊಸ ಬಟ್ಟೆ, ಹೊಸ ಚಪ್ಪಲಿ ತರುತ್ತಿದ್ದರು. ನಮ್ಮ ಮನೆಯಲ್ಲಿ ಅವನದೇ ದರ್ಬಾರು. ಆತ ಏನು ಮಾಡಿದರು ಯಾರೂ ಪ್ರಶ್ನಿಸುತ್ತಿರಲಿಲ್ಲ. ಆತನೂ ಅಷ್ಟೆ, ಹೊರಗಿನವನು ಎಂದು ಯಾವತ್ತೂ ಯೋಚಿಸಿದ್ದಿಲ್ಲ. ಅಪ್ಪಾಜಿ ಊರಿಗೆ ಬಂದರೆ, ಆತನೊಂದಿಗೆ ಬೆಳಗ್ಗಿನ ಜಾವ ಐದಕ್ಕೆಲ್ಲ ಎದ್ದು ತೋಟಕ್ಕೆ ಇಬ್ಬರೇ ವಾಕ್ ಹೋಗುತ್ತಿದ್ದರು. ಅಲ್ಲೆಲ್ಲ ಸುತ್ತಾಡಿಕೊಂಡು ಬರುವಾಗ, ನಮ್ಮ ತಂದೆ ಸೊಗದೆ ಎಲೆ ಕೊಯ್ದು ತರುತ್ತಿದ್ದರು. ಆ ಹಸಿ ಎಲೆಯಲ್ಲಿ ಎರಡು ಬೀಡಿ ಕಟ್ಟಿ, ಅವರೊಂದು, ಚೆಲುವಯ್ಯನಿಗೊಂದು ಕೊಟ್ಟು, ಇಬ್ಬರೂ ಜಗಲಿಯ ಮೇಲೆ ಕೂತು ಸೇದುತ್ತಿದ್ದರು. ಅವರಿಬ್ಬರು ಆ ಕ್ಷಣವನ್ನು ಅತ್ಯಂತ ಆನಂದದಿಂದ, ಸಂಭ್ರಮದಿಂದ ಸವಿಯುತ್ತಿದ್ದರು. ಅದಾದ ನಂತರ, ಮುಂದಿನ ಕೆಲಸ ಕಾರ್ಯಗಳಿಗೆ ಹೋಗುತ್ತಿದ್ದರು. ಅದನ್ನೆಲ್ಲ ಗಮನಿಸಿದ ನಮ್ಮನೆಯವರು ಮತ್ತು ಊರಿನವರು ಆತನನ್ನು ಅಪ್ಪಾಜಿಯ ‘ದತ್ತು ಪುತ್ರ’ ಎಂದೇ ಕರೆಯುತ್ತಿದ್ದರು. ಈಗಲೂ ಊರಿಗೆ ಹೋದರೆ, ಆತನ ಹೆಂಡತಿ ಮನೆಯ ಹತ್ತಿರ ಬಂದು ಯೋಗಕ್ಷೇಮ ವಿಚಾರಿಸಿಕೊಂಡು ಹೋಗುತ್ತಾರೆ.

ಅಕ್ಕ ಸತ್ತಾಗ ಗಳಗಳನೆ ಅತ್ತರು

ಅಪ್ಪಾಜಿಗೆ ನನ್ನ ಅಕ್ಕ ನಾಗರತ್ನಾ ಅಂದರೆ ಭಾರೀ ಪ್ರೀತಿ. ಅಪ್ಪನ ಬುದ್ಧಿಮತ್ತೆಗೆ ಸರಿಸಮನಾಗಿ ಕೂತು ಮಾತನಾಡುವ, ವಿಷಯಗಳನ್ನು ಗ್ರಹಿಸುವ, ರಾಜಕೀಯವಾಗಿ ಚಿಂತಿಸುವ ಬುದ್ಧಿವಂತೆ. ಅಕ್ಕನ ಕಂಡರೆ ಅಪ್ಪಾಜಿಗೆ ಏನೋ ಒಂದು ಭರವಸೆ. ಅಕ್ಕ ನಾಗರತ್ನಾ ನನ್ನ ಭಾವ ಡಾ. ನಟರಾಜ್‌ರನ್ನು ಮದುವೆಯಾಗುವ ವಿಷಯ ತಿಳಿಸಿದಾಗ, ಎಲ್ಲರಿಗೂ ಕೊಂಚ ಅಸಮಾಧಾನವಿತ್ತು. ಆದರೂ ತೋರಿಸಿಕೊಳ್ಳದೆ ಮದುವೆ ಮಾಡಿಕೊಟ್ಟರು. ನೆಲಮಂಗಲದ ಬಳಿ ಅಕ್ಕ ತೋಟ ಮಾಡಿದ್ದಳು. ಅಲ್ಲೊಂದು ಬಾವಿ ತೋಡಿಸಿದ್ದರು. ಒಂದು ದಿನ ಆಕಸ್ಮಿಕವಾಗಿ ಅಕ್ಕ ಬಾವಿಗೆ ಜಾರಿಬಿದ್ದು ತೀರಿಹೋದಳು. ಇದು ನಮ್ಮ ಕುಟುಂಬದ ಆತ್ಮಬಲವನ್ನು ಅಲ್ಲಾಡಿಸಿದ ದುರಂತ.


  ಅಕ್ಕ ಆಕಸ್ಮಿಕವಾಗಿ ಸಾವಿಗೀಡಾದ ದಿನ ಅಪ್ಪಾಜಿ ಬೀದರ್‌ನಲ್ಲಿದ್ದರು. ಅಂದು ಅಲ್ಲೊಂದು ಸಾರ್ವಜನಿಕ ಸಭೆಯನ್ನುದ್ದೇಶಿಸಿ ಅವರು ಮಾತನಾಡುವುದಿತ್ತು. ಆ ಸಭೆಗೆ ಮುಂಚೆ, ಗೆಸ್ಟ್ ಹೌಸ್‌ನಿಂದ ಇನ್ನೇನು ಹೊರಡಬೇಕು ಎನ್ನುವಷ್ಟರಲ್ಲಿ ಅಕ್ಕಳ ಸಾವಿನ ಸುದ್ದಿಯನ್ನು ಪೊಲೀಸ್ ಅಧಿಕಾರಿಗಳು ಅಪ್ಪಾಜಿಗೆ ಮುಟ್ಟಿಸಿದ್ದಾರೆ. ‘‘ಅದು ಹೇಳಿಕೇಳಿ ಸಾರ್ವಜನಿಕ ಸಭೆ, ಜನ ಸೇರಿದ್ದಾರೆ, ತುಂಬಾ ಹೊತ್ತಿನಿಂದ ಕಾಯುತ್ತಿದ್ದಾರೆ’’ ಎಂದ ಅಪ್ಪಾಜಿ, ಸಾವಿನ ಸುದ್ದಿ ತಿಳಿದ ಮೇಲೂ ಸಭೆಗೆ ಹೋಗಿದ್ದಾರೆ. ಹೋಗಿದ್ದೂ ಅಲ್ಲದೆ, ಜನರನ್ನು ಉದ್ದೇಶಿಸಿ ಮಾತನಾಡುತ್ತಿದ್ದಾರೆ. ಆ ಮಾತು ಸಾವನ್ನು ಮರೆಸುವ ಸಾಧನವಾಗಿತ್ತೋ ಏನೋ. ಅವರ ಸಂಕಟ ಸಹಿಷ್ಣುತೆಯನ್ನು ಸಹಿಸಲಾಗದ ಅಪ್ಪಾಜಿಯ ರಾಜಕೀಯ ಆಪ್ತ ಸಹಾಯಕರಾಗಿದ್ದ ಗೋಪಾಲ ಶಾಸ್ತ್ರಿ, ತಾವೇ ಮೈಕ್ ತೆಗೆದುಕೊಂಡು ‘‘ಅರಸರ ಮನೆಯಲ್ಲಿ ಸಾವು ಸಂಭವಿಸಿದೆ, ದಯವಿಟ್ಟು ಅವರನ್ನು ಕಳಿಸಿಕೊಡಿ’’ ಎಂದು ಜನರನ್ನು ಕೇಳಿಕೊಂಡಿದ್ದಾರೆ. ಆ ಮಾತುಗಳನ್ನು ಕೇಳಿದ ಜನಸಮೂಹ ಸ್ತಬ್ಧವಾಗಿದೆ. ಬೀದರ್‌ನಿಂದ ಬೆಂಗಳೂರಿಗೆ ಕಾರಿನಲ್ಲಿ ಬಂದ ಅಪ್ಪಾಜಿ ಸೀದಾ ಅಕ್ಕನ ಪಾರ್ಥಿವ ಶರೀರದ ಬಳಿ ಬಂದು ನಿಂತರು. ಅವಳು ಮಲಗಿದ್ದನ್ನು ನೋಡಿ ತಡೆದುಕೊಂಡಿದ್ದ ದುಃಖವೆಲ್ಲ ಒಂದೇ ಸಲಕ್ಕೆ ಹೊರಬಂದಂತೆ, ಗಳಗಳನೆ ಅತ್ತುಬಿಟ್ಟರು. ಯಾರು ಎಷ್ಟೇ ಸಮಾಧಾನಿಸಿದರೂ ತಡೆದುಕೊಳ್ಳಲಾರದಷ್ಟು ದುಃಖ, ಅಳು. ಹಾಗೆ ನೋಡಿದರೆ ನಮ್ಮ ಅಪ್ಪಾಜಿ ಎಂದೂ ಅತ್ತವರಲ್ಲ. ಎಲ್ಲವನ್ನೂ ಸಹಿಸಿಕೊಂಡವರು. ಅವತ್ತು ಎಲ್ಲವನ್ನು ಒಂದೇ ದಿನದಲ್ಲಿ ಅತ್ತು ಖಾಲಿ ಮಾಡಿದ್ದರು. ಅಕ್ಕ ಇಲ್ಲವಾದ ನಂತರ ಅಮ್ಮ ಮಂಕಾದರು. ಅಪ್ಪಾಜಿಯೂ ಹಾಗೇ ಇದ್ದರು, ಆದರೆ ತೋರಿಸಿಕೊಳ್ಳುತ್ತಿರಲಿಲ್ಲ. ನಮ್ಮ ಮನೆ ವೌನಕ್ಕೆ ಶರಣಾಯಿತು. ಆ ಸಂದರ್ಭದಲ್ಲಿ ಅಪ್ಪಾಜಿ ಉತ್ತರ ಭಾರತದ ರಾಜಕೀಯ ನಾಯಕರ ಸಂಪರ್ಕದಲ್ಲಿದ್ದರು. ಅಲ್ಲಿನ ಸಭೆ ಸಮಾರಂಭಗಳಲ್ಲಿ ಪಾಲ್ಗೊಳ್ಳುವುದು ಹೆಚ್ಚಾಗಿತ್ತು. ಅಂತಹ ಒಂದು ಪ್ರವಾಸದಲ್ಲಿ, ಬಿಹಾರದ ಒಂದು ಹಳ್ಳಿಯ ಹರಿಜನರನ್ನು ಜಮೀನ್ದಾರ ಠಾಕೂರರು ಜೀವಂತ ಸುಟ್ಟ ಹೃದಯವಿದ್ರಾವಕ ಘಟನೆಯನ್ನು ಖುದ್ದು ನೋಡಲು ಅಪ್ಪಾಜಿ ಹೋಗಿದ್ದರು. ಸುಟ್ಟು ಕರಕಲಾಗಿ ಹೊಗೆಯಾಡುತ್ತಿದ್ದ ಹಳ್ಳಿಯನ್ನು ನೋಡುತ್ತಾ ಹೋದ ಅಪ್ಪಾಜಿಗೆ, ಇಡೀ ಹಳ್ಳಿಗೆ ಉಳಿದಿದ್ದ 90 ವರ್ಷದ ಮುದುಕಿ ಒಂದು ಕಲ್ಲಿನ ಮೇಲೆ ಕುಳಿತುಕೊಂಡು ಆಕಾಶ ನೋಡುತ್ತಿದ್ದ ದೃಶ್ಯ ನೋಡಿದರಂತೆ. ಆ ಮುದುಕಿ ಅಳುತ್ತಿರಲಿಲ್ಲ ಆಕಾಶ ದಿಟ್ಟಿಸುತಿತ್ತು. ಅಪ್ಪಾಜಿ ಕುತೂಹಲಗೊಂಡು, ಯಾರು ಈ ಮುದುಕಿ ಎಂದು ಕೇಳಿದ್ದಾರೆ. ಅಲ್ಲಿಯ ಜನ, ಈ ಮುದುಕಿಯ ಮನೆಯಲ್ಲಿ 19 ಜನ ಇದ್ದರು, ಎಲ್ಲರೂ ಒಟ್ಟಿಗೆ ಸುಟ್ಟು ಹೋಗಿದ್ದಾರೆ, ಈಕೆ ಮಾತ್ರ ಉಳಿದಿದ್ದಾಳೆ. ಊರಿಗೆ ಬೆಂಕಿ ಬಿದ್ದ ಸಂದರ್ಭದಲ್ಲಿ ಬೇರೊಂದು ಊರಿಗೆ ಹೋಗಿದ್ದ ಮುದುಕಿ, ತಿರುಗಿ ಬಂದು ನೋಡಿದಾಗ, ಇಡೀ ಮನೆ ಸುಟ್ಟು ಕರಕಲಾಗಿದೆ. ಮುಂದೆ ಏನು ಮಾಡುವುದೆಂದು ತೋಚದ ಮುದುಕಿ ಆಕಾಶ ನೋಡುತ್ತಾ ಕೂತಿದೆ.
ಕರುಳು ಇರಿಯುವ ಆ ದೃಶ್ಯವನ್ನು ನೋಡಿ ಬಂದ ಅಪ್ಪಾಜಿ ಸಂತರಾಗಿದ್ದರು. ಅಮ್ಮನ ಬಳಿ ಬಂದು, ನಾವು ಒಬ್ಬ ಮಗಳನ್ನು ಕಳೆದುಕೊಂಡಿದ್ದಕ್ಕೇ ಇಷ್ಟು ದುಃಖ ಪಡುತ್ತಿದ್ದೀವಲ್ಲ, ಎಲ್ಲರನ್ನೂ ಎಲ್ಲವನ್ನೂ ಕಳೆದುಕೊಂಡ ಆ ಮುದುಕಿಯ ಎದೆಯಲ್ಲಿ ಇನ್ನೆಷ್ಟು ಸಂಕಟ, ನೋವು, ದುಃಖ ಮಡುಗಟ್ಟಿರಬಹುದು. ಎಂತಹ ನಿರ್ಗತಿಕ ಸ್ಥಿತಿ. ನಮ್ಮ ಊಹೆಗೂ ನಿಲುಕದ್ದು. ದೇವರು ಅವರಿಗಿಂತ ನಮಗೆ ಕಡಿಮೆ ದುಃಖ ಕೊಟ್ಟಿದ್ದಾನಲ್ಲ ಎಂದು ಹೇಳಿ ಸಮಾಧಾನ ಪಡಿಸಿದ್ದರು. ತಮಗೆ ತಾವೇ ಸಮಾಧಾನ ಮಾಡಿಕೊಂಡಿದ್ದರು.

ಬೀದರ್‌ನಿಂದ ಬೆಂಗಳೂರಿಗೆ ಕಾರಿನಲ್ಲಿ ಬಂದ ಅಪ್ಪಾಜಿ ಸೀದಾ ಅಕ್ಕನ ಪಾರ್ಥಿವ ಶರೀರದ ಬಳಿ ಬಂದು ನಿಂತರು. ಅವಳು ಮಲಗಿದ್ದನ್ನು ನೋಡಿ ತಡೆದುಕೊಂಡಿದ್ದ ದುಃಖವೆಲ್ಲ ಒಂದೇ ಸಲಕ್ಕೆ ಹೊರಬಂದಂತೆ, ಗಳಗಳನೆ ಅತ್ತುಬಿಟ್ಟರು. ಯಾರು ಎಷ್ಟೇ ಸಮಾಧಾನಿಸಿದರೂ ತಡೆದುಕೊಳ್ಳಲಾರದಷ್ಟು ದುಃಖ, ಅಳು. ಹಾಗೆ ನೋಡಿದರೆ ನಮ್ಮ ಅಪ್ಪಾಜಿ ಎಂದೂ ಅತ್ತವರಲ್ಲ. ಎಲ್ಲವನ್ನೂ ಸಹಿಸಿಕೊಂಡವರು. ಅವತ್ತು ಎಲ್ಲವನ್ನು ಒಂದೇ ದಿನದಲ್ಲಿ ಅತ್ತು ಖಾಲಿ ಮಾಡಿದ್ದರು. ಅಕ್ಕ ಇಲ್ಲವಾದ ನಂತರ ಅಮ್ಮ ಮಂಕಾದರು. ಅಪ್ಪಾಜಿಯೂ ಹಾಗೇ ಇದ್ದರು, ಆದರೆ ತೋರಿಸಿಕೊಳ್ಳುತ್ತಿರಲಿಲ್ಲ. ನಮ್ಮ ಮನೆ ವೌನಕ್ಕೆ ಶರಣಾಯಿತು.

Writer - ನಿರೂಪಣೆ: ಬಸು ಮೇಗಲ್ಕೇರಿ

contributor

Editor - ನಿರೂಪಣೆ: ಬಸು ಮೇಗಲ್ಕೇರಿ

contributor

Similar News