ಬೆಂಗಳೂರಿನ ಎಲ್ಲ ಮಲ ಎಲ್ಲಿಗೆ ಹೋಗುತ್ತದೆ ?

Update: 2016-10-10 12:09 GMT

ನಿಮ್ಮ ಶೌಚಗೃಹದಲ್ಲಿ ಹಾಯಾಗಿ ಕುಳಿತುಕೊಂಡು ಹೊಟ್ಟೆಯ ಒತ್ತಡವನ್ನು ಕಡಿಮೆ ಮಾಡಿಕೊಳ್ಳುವ ಸುಖ ಅನುಭವಿಸುತ್ತಿರುವಾಗ ನೀವು ವಿಸರ್ಜಿಸಿದ ಮಲ ಹೋಗುವುದಾದರೂ ಎಲ್ಲಿಗೆ ಎನ್ನುವುದನ್ನು ಎಂದಾದರೂ ಯೋಚಿಸಿದ್ದೀರಾ?

ಇಲ್ಲ,ಖಂಡಿತವಾಗಿಯೂ ಇದು ನಿಮಗೆ ಗೊತ್ತಿಲ್ಲ. ಬೆಂಗಳೂರಿನ ನಿವಾಸಿಗಳು ಹೀಗೆ ವಿಸರ್ಜಿಸುವ ಮಲ ಎಲ್ಲಿಗೆ ಹೋಗುತ್ತದೆ,ಯಾವ ರೂಪವನ್ನು ಪಡೆಯುತ್ತದೆ ಎನ್ನುವುದು ತಿಳಿದುಕೊಳ್ಳಲು ಇದನ್ನು ಓದಿ....

ಕಮೋಡ್‌ನ್ನು ಫ್ಲಷ್ ಮಾಡಿದಾಗ ಅದಲ್ಲಿರುವ ಎಲ್ಲ ಘನತ್ಯಾಜ್ಯಗಳು(ಮಲಕ್ಕಿಂತ ಇತರ ತ್ಯಾಜ್ಯಗಳೇ ಹೆಚ್ಚಿನ ಪ್ರಮಾಣದಲ್ಲಿರುವುದೂ ಇದೆ) ಪೈಪ್‌ಗಳ ಮೂಲಕ ಒಳಚರಂಡಿಯಲ್ಲಿಳಿದು ರಸ್ತೆಗಳ ಅಡಿಯಲ್ಲಿರುವ ಉಪ ಮುಖ್ಯ ಕೊಳವೆಗಳನ್ನು ಸೇರಿಕೊಳ್ಳುತ್ತವೆ. ಹೀಗೆ ಬೇರೆ ಬೇರೆ ಪ್ರದೇಶಗಳ ಉಪ ಮುಖ್ಯ ಕೊಳವೆಗಳು ಹೊತ್ತು ತರುವ ತ್ಯಾಜ್ಯ 'ಔಟ್‌ಫಾಲ್ ಸ್ಯುಯರ್'ಅನ್ನು ಸೇರುತ್ತದೆ. ಈ ಸ್ಯುಯರ್‌ಗಳು ನಗರದ ವಿವಿಧೆಡೆ ಕಾರ್ಯ ನಿರ್ವಹಿಸುತ್ತಿರುವ ಒಳಚರಂಡಿ ತ್ಯಾಜ್ಯ ಸಂಸ್ಕರಣಾ ಘಟಕ(ಎಸ್‌ಟಿಪಿ)ಗಳೊಂದಿಗೆ ಸಂಪರ್ಕ ಹೊಂದಿರುತ್ತವೆ.

ಎರಡು ಕವಲುಗಳಾಗಿ ಸಾಗುವ ಬೆಂಗಳೂರಿನ ಮಲ

 2006-07ರವರೆಗೆ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿದ್ದ ಪ್ರದೇಶಗಳನ್ನು 'ಹಳೆಯ ಬೆಂಗಳೂರು' ಎಂದಿಟ್ಟುಕೊಂಡರೆ, 2006-07ರಲ್ಲಿ ಏಳು ನಗರಸಭೆಗಳು ಮತ್ತು 110 ಗ್ರಾಮಗಳ ಸೇರ್ಪಡೆಯ ಬಳಿಕ ರೂಪುಗೊಂಡ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹೊಂದಿರುವ ಪ್ರದೇಶಗಳನ್ನು 'ಹೊಸ ಬೆಂಗಳೂರು' ಎಂದಿಟ್ಟುಕೊಳ್ಳೋಣ. ಇಂದಿರಾನಗರ,ಅಲಸೂರು,ರಾಜಾಜಿ ನಗರ,ಮಲ್ಲೇಶ್ವರಂ ಮತ್ತು ನಾಗರಬಾವಿ ನಿವಾಸಿಗಳು ನೆಮ್ಮದಿ ಪಟ್ಟುಕೊಳ್ಳಬೇಕಾದ ವಿಷಯವೆಂದರೆ ಇಲ್ಲಿಯ ಒಳಚರಂಡಿ ಪೈಪ್‌ಗಳನ್ನು ದಶಕಗಳ ಹಿಂದೆಯೇ ಹಾಕಲಾಗಿದೆ ಮತ್ತು ಈ ಪ್ರದೇಶಗಳ ಮಲವೆಲ್ಲ ನಗರದಲ್ಲಿ ಹಲವಾರು ಕಿ.ಮೀ.ಗಳಷ್ಟು ಸಾಗಿ ಎಸ್‌ಟಿಪಿಯನ್ನು ಸೇರಿಕೊಳ್ಳುತ್ತಿದೆ ಎನ್ನುವುದು.

 ಎಸ್‌ಟಿಪಿಯೊಳಗೇನಾಗುತ್ತದೆ? ಹೀಗೆ ಸಂಸ್ಕರಣ ಘಟಕವನ್ನು ಸೇರಿದ ತ್ಯಾಜ್ಯದಿಂದ ಮೊದಲು ಪ್ಲಾಸ್ಟಿಕ್ ಮತ್ತು ಇತರ ಘನವಸ್ತು(ರೇಜರ್ ಬ್ಲೇಡ್,ಕಾಂಡೋಮ್,ಸ್ಯಾನಿಟರಿ ನ್ಯಾಪ್‌ಕಿನ್ ಇತ್ಯಾದಿ)ಗಳು ಬೇರ್ಪಡುತ್ತವೆ. ಇಳಿದ ಕಚ್ಚಾ ತ್ಯಾಜ್ಯವು ಮರಳುಕಣಗಳು ಮತ್ತು ಇತರ ವಸ್ಯುಗಳನ್ನು ಪ್ರತ್ಯೇಕಿಸಲು ರವಾನಿಸಲ್ಪಡುತ್ತದೆ. ಕೊನೆಯಲ್ಲಿ ಉಳಿಯುವ ಅರೆ ಘನ ಮಿಶ್ರಣವನ್ನು ಒಣಗಿಸಿ ಗೊಬ್ಬರದ ರೂಪದಲ್ಲಿ ರೈತರಿಗೆ ಮಾರಾಟ ಮಾಡಲಾಗುತ್ತದೆ. ಅಂತಿಮವಾಗಿ ಉಳಿಯುವ ನೀರು ಸ್ಫಟಿಕ ಶುದ್ಧವಾಗಿದ್ದು, ಅದನ್ನು ನಗರದಲ್ಲಿಯ ಕೆಂಗೇರಿ ಸಮೀಪದ ವೃಷಭಾವತಿ,ಕೋರಮಂಗಲ ಮತ್ತು ಚಳ್ಳಘಟ್ಟದಂತಹ ಕೊಳ್ಳಗಳಿಗೆ ಬಿಡಲಾಗುತ್ತದೆ ಮತ್ತು ಇದು ಅಂತಿಮವಾಗಿ ನದಿಯನ್ನು ಸೇರಿಕೊಳ್ಳುತ್ತದೆ. ಉದಾಹರಣೆಗೆ ಮೈಲಸಂದ್ರ ಎಸ್‌ಟಿಪಿಯಿಂದ ನೀರನ್ನು ತಮಿಳುನಾಡಿಗೆ ಹರಿಯುವ ವೃಷಭಾವತಿಗೆ ಬಿಡಲಾಗುತ್ತದೆ.

ಇತರ ಕೊಳ್ಳಗಳಿಗೆ ಬಿಡಲಾದ ನೀರು ಕಾವೇರಿಯನ್ನು ಸೇರುತ್ತದೆ.

ಆದರೆ ಇದರಿಂದ ಸಮಾಧಾನ ಪಟ್ಟುಕೊಳ್ಳಬೇಕಾಗಿಲ್ಲ. ಇದೆಲ್ಲ ಪ್ರಕ್ರಿಯೆ ತ್ಯಾಜ್ಯ ನಿರ್ವಹಣೆ ವ್ಯವಸ್ಥೆಯು ನಿಗದಿತ ರೂಪದಲ್ಲಿ ಕಾರ್ಯ ನಿರ್ವಹಿಸಿದಾಗ ಮಾತ್ರ ನಡೆಯುವಂಥದ್ದು.

  ನಗರದಲ್ಲಿ ಒಡೆದುಹೋಗಿರುವ ಕೊಳವೆಗಳು ಸಾಮಾನ್ಯ ದೃಶ್ಯ. ಇಂತಹ ಪ್ರಕರಣಗಳಲ್ಲಿ ಒಳಚರಂಡಿಯ ಕೊಚ್ಚೆ ಎಸ್‌ಟಿಪಿಗೆ ಸೇರುವುದಿಲ್ಲ, ಬದಲಾಗಿ ಮಳೆನೀರಿನ ಕಾಲುವೆಗಳಲ್ಲಿ ಉಕ್ಕಿ ಹರಿಯುತ್ತದೆ. ಬಳಿಕ ಸಂಸ್ಕರಣೆಗೊಳ್ಳದೆ ಕೊಳ್ಳಗಳಿಗೆ,ಸರೋವರಗಳಿಗೆ ಅಥವಾ ತೊರೆಗಳಿಗೆ ಸೇರಿಕೊಳ್ಳುತ್ತದೆ. ಸರೋವರಗಳು ನಾಶಗೊಳ್ಳುತ್ತಿರುವುದಕ್ಕೆ ಇದೂ ಒಂದು ಕಾರಣವಾಗಿದೆ. ಅಲ್ಲದೆ ಬೆಂಗಳೂರಿನಲ್ಲಿಯ ಎಸ್‌ಟಿಪಿಗಳು ಪೂರ್ಣ ಸಾಮರ್ಥ್ಯದಲ್ಲಿ ಕೆಲಸ ಮಾಡುವುದಿಲ್ಲ. ಹೀಗಾಗಿ ಸಂಸ್ಕರಿಸಲು ಸಾಧ್ಯವಾಗದ ತ್ಯಾಜ್ಯವನ್ನು ಹಾಗೆಯೇ ನದಿ,ತೊರೆಗಳಿಗೆ ಬಿಡಲಾಗುತ್ತದೆ.

 ಅಂದ ಹಾಗೆ ಹೊಸ ಬೆಂಗಳೂರಿನ ಕಥೆಯೇ ಬೇರೆ. ಈ ಪ್ರದೇಶಗಳಲ್ಲಿ ಭೂಗತ ಚರಂಡಿ ಕಾರ್ಯ ಇನ್ನೂ ನಡೆಯುತ್ತಲೇ ಇದೆ. ಕೆಲವು ಪೂರ್ಣಗೊಂಡಿವೆಯಾದರೂ ಎನ್ನೂ ಎಸ್‌ಡಿಪಿಯೊಂದಿಗೆ ಜೋಡಣೆಗೊಂಡಿಲ್ಲ. ಹೀಗಾಗಿ ಮಳೆನೀರಿನ ಚರಂಡಿಗಳಲ್ಲಿ ಈ ತ್ಯಾಜ್ಯ ಹರಿಯುವುದೇ ಹೆಚ್ಚು. ಹೀಗಾಗಿ ಮಲ ಮತ್ತು ಇತರ ತ್ಯಾಜ್ಯಗಳೆಲ್ಲ ಸಂಸ್ಕರಣೆಯಾಗದೇ ಕೆರೆ-ನದಿಗಳಿಗೆ ಸೇರಿಕೊಳ್ಳುತ್ತಿವೆ. ಬಿಬಿಎಂಪಿಗೆ ಸೇರ್ಪಡೆ ಗೊಂಡಿರುವ 110 ಗ್ರಾಮಗಳಲ್ಲಿ ಒಳಚರಂಡಿ ವ್ಯವಸ್ಥೆಯೇ ಇಲ್ಲ. ಇಂತಹ ವ್ಯವಸ್ಥೆಯನ್ನು ರೂಪಿಸುವ ಪ್ರಸ್ತಾವನೆ ಕೇಂದ್ರ ಸರಕಾರದ ಒಪ್ಪಿಗೆಗಾಗಿ ಕಾಯುತ್ತಿದೆ. ಹೀಗಾಗಿ ಇಲ್ಲಿ ಮಲ ಸೇರಿದಂತೆ ಎಲ್ಲ ತ್ಯಾಜ್ಯಗಳ ಸಮರ್ಪಕ ನಿರ್ವಹಣೆ ದೂರದ ಕನಸಾಗಿದೆ. ಇವೆಲ್ಲವೂ ಅಂತಿಮವಾಗಿ ಸೇರುವುದು ನಮಗೆ ಕುಡಿಯುವ ನೀರನ್ನು ಒದಗಿಸುವ ನದಿಗಳನ್ನೇ!

ಕೃಪೆ : http://www.thenewsminute.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News