ಅರಸರ ಉದಾರತೆಯೇ ಉರುಳಾಯಿತು -ಕೆ. ಮಾಯಿಗೌಡ
ನಿವೃತ್ತ ಮುಖ್ಯೋಪಾಧ್ಯಾಯರು, ಪತ್ರಕರ್ತರು, ಲೇಖಕರು ಹಾಗೂ ರಾಜಕಾರಣಿ ಕೆ.ಮಾಯಿಗೌಡ(77) ಮಂಡ್ಯ ಜಿಲ್ಲೆಯ ನವಿಲುಮಾರನಹಳ್ಳಿಯವರು. ಸ್ವಾತಂತ್ರ ಹೋರಾಟಗಾರರಾದ ಕನಕಪುರದ ಕರಿಯಪ್ಪನವರ ಶಿಕ್ಷಣ ಸಂಸ್ಥೆಯಲ್ಲಿ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿದ ಗೌಡರಿಗೆ, ಕರಿಯಪ್ಪನವರ ಬದುಕೇ ಸ್ಫೂರ್ತಿಯಾಯಿತು. ರಾಷ್ಟ್ರಕವಿ ಕುವೆಂಪು ಅವರೊಂದಿಗಿನ 15 ವರ್ಷಗಳ ಆಪ್ತ ಒಡನಾಟ ಸಾಹಿತ್ಯಕ, ವೈಚಾರಿಕ ಚಿಂತನೆಗೆ ಪ್ರೇರೇಪಿಸಿತು. ಬುದ್ಧ, ಅಂಬೇಡ್ಕರ್, ಕೋವೂರ್, ಪೆರಿಯಾರ್, ಮಾರ್ಕ್ಸ್ ಚಿಂತನೆಗಳಿಂದ ಪ್ರಭಾವಿತರಾದ ಗೌಡರಿಗೆ, ಸಮಾಜಮುಖಿಯಾಗಿ ತೊಡಗಿಸಿಕೊಳ್ಳಲು ದಾರಿ ಮಾಡಿಕೊಟ್ಟಿತು. ಕಾಲೇಜು ದಿನಗಳಲ್ಲಿಯೇ ವಿದ್ಯಾರ್ಥಿ ನಾಯಕರು, ಕಮ್ಯೂನಿಸ್ಟ್ ಪಾರ್ಟಿ ವರ್ಕರ್ ಆಗಿದ್ದ ಗೌಡರು, ಹೆಡ್ ಮಾಸ್ತರ್ ವೃತ್ತಿಯಲ್ಲಿರುವಾಗ ರಾಜ್ಯ ಉಪಾಧ್ಯಾಯರ ಸಂಘದ ಅಧ್ಯಕ್ಷರಾಗಿ, ರಾಷ್ಟ್ರೀಯ ಉಪಾಧ್ಯಾಯರ ಸಂಘದ ಉಪಾಧ್ಯಕ್ಷರಾಗಿ ಶಿಕ್ಷಣ ಕ್ಷೇತ್ರದಲ್ಲಿ ಜನಮನ್ನಣೆ ಗಳಿಸಿದ ವ್ಯಕ್ತಿಯಾಗಿದ್ದರು. ತದನಂತರ ಮಂಡ್ಯದಲ್ಲಿ ‘ತರುಣವಾಣಿ’ ವಾರಪತ್ರಿಕೆಯಲ್ಲಿ ಪತ್ರಕರ್ತರಾಗಿ ಸೇವೆ ಸಲ್ಲಿಸಿ; ತಾವೇ ‘ನೇಗಿಲಯೋಗಿ’ ವಾರಪತ್ರಿಕೆ ಆರಂಭಿಸಿ, ಓದುಗರಲ್ಲಿ ಜಾಗೃತಿ ಮೂಡಿಸುವ ಕೆಲಸಕ್ಕೆ ಕೈ ಹಾಕಿದರು. ಪತ್ರಿಕೆ ಸಾಕೆನಿಸಿದಾಗ, ‘ನೇಗಿಲಯೋಗಿ ಪ್ರಕಾಶನ’ದ ಮೂಲಕ 18 ಕೃತಿಗಳನ್ನು ರಚಿಸಿ ಸಾಹಿತ್ಯ ಲೋಕಕ್ಕೆ ಕೊಡುಗೆಯಾಗಿ ನೀಡಿದರು. ನಂತರ ಎಲ್ಲೈಸಿಯಲ್ಲಿ ಕೆಲ ದಿನಗಳ ಕಾಲ ಕೆಲಸ ಮಾಡಿದರು. 1975 ರಲ್ಲಿ ಸಚಿವ ಬಿ.ಬಸವಲಿಂಗಪ್ಪನವರ ಸಂಪರ್ಕಕ್ಕೆ ಬಂದ ಗೌಡರಿಗೆ ವಿಧಾನ ಪರಿಷತ್ ಚುನಾವಣೆಗೆ ಅಭ್ಯರ್ಥಿಯಾಗುವ ಅವಕಾಶ ಒದಗಿ ಬಂದಿತ್ತು. ಆದರೆ ದೇವರಾಜ ಅರಸರಿಂದಲೇ ಅದು ತಪ್ಪಿತ್ತು. 1978 ರಲ್ಲಿ ಪಾಂಡವಪುರ ವಿಧಾನಸಭಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದ ಗೌಡರು, ಸೋತು ರಾಜಕಾರಣವೇ ಬೇಡ ಎಂದು ದೂರವಿದ್ದರು. ಆದರೆ 1982ರಲ್ಲಿ, ದೇವರಾಜ ಅರಸು ಅವರು ವಿರೋಧ ಪಕ್ಷದ ನಾಯಕರಾಗಿದ್ದಾಗ, ಪದವೀಧರ ಕ್ಷೇತ್ರದ ಅಭ್ಯರ್ಥಿಯಾಗುವ ಅವಕಾಶ ತಾನಾಗಿಯೇ ಹುಡುಕಿಕೊಂಡು ಬಂದಿತ್ತು. ಆ ಮೂಲಕ ದೇವರಾಜ ಅರಸು ಅವರನ್ನು ತೀರಾ ಹತ್ತಿರದಿಂದ ಕಾಣುವ, ಅವರೊಂದಿಗೆ ಕೂತು ಮಾತನಾಡುವ, ರಾಜಕಾರಣದ ಆಗು-ಹೋಗುಗಳನ್ನು ಚರ್ಚಿಸುವ ಸುಸಂದರ್ಭ ಒದಗಿ ಬಂದಿತ್ತು. 1982ರ ಜನವರಿಯಲ್ಲಿ ಅರಸರ ಪರಿಚಯವಾಗಿ, ಅವರು ಕೊನೆಯುಸಿರೆಳೆದ ಜೂನ್ 6 ರತನಕ, ಅಂದರೆ ಸುಮಾರು ಆರು ತಿಂಗಳ ಕಾಲ ಅವರೊಂದಿಗೆ ನಿಕಟ ಸಂಪರ್ಕದಲ್ಲಿದ್ದ ಮಾಯಿಗೌಡರು ಕಂಡ ಅರಸು ಇಲ್ಲಿದ್ದಾರೆ.
ಅರಸರ ಗತ್ತಿನ ಆ ಮುಖ...
1972ರಲ್ಲಿ ಕನಕಪುರದ ಕರಿಯಪ್ಪನವರೊಂದಿಗೆ ಮತ್ತು ಮಂಡ್ಯದ ನಗರಸಭೆ ಅಧ್ಯಕ್ಷರಾಗಿದ್ದ ಎಸ್.ಹೊನ್ನಯ್ಯನವರೊಂದಿಗೆ ಮುಖ್ಯಮಂತ್ರಿ ದೇವರಾಜ ಅರಸು ಅವರನ್ನು ಕಾಣಲು ಹೋಗಿದ್ದೆ. ಆಗಿನ ಅರಸರ ವರ್ತನೆ ನನಗೆ ಸರಿಕಾಣಲಿಲ್ಲ. ದರ್ಪ, ದುರಹಂಕಾರದ ವ್ಯಕ್ತಿಯಂತೆ ಕಂಡಿದ್ದರು. 1975ರಲ್ಲಿ, ಅರಸರ ಕ್ಯಾಬಿನೆಟ್ ಸಚಿವರಾಗಿದ್ದ ಬಿ.ಬಸವಲಿಂಗಪ್ಪನವರ ಒತ್ತಾಯದ ಮೇರೆಗೆ ಪದವೀಧರ ಕ್ಷೇತ್ರ(ಮಂಡ್ಯ, ಮೈಸೂರು, ಹಾಸನ, ಮಡಿಕೇರಿ)ದಿಂದ ವಿಧಾನ ಪರಿಷತ್ತಿಗೆ ಆಯ್ಕೆಯಾಗಲು ಟಿಕೆಟ್ ಬಯಸಿದ್ದೆ. ಆದರೆ ದೇವರಾಜ ಅರಸು ಮತ್ತು ಕೆ.ಎಚ್.ಪಾಟೀಲರ ನಡುವಿನ ಜಟಾಪಟಿಯಲ್ಲಿ, ಅರಸರಿಂದಲೇ ನನಗೆ ಟಿಕೆಟ್ ತಪ್ಪಿ ಹೋಗಿತ್ತು. ಟಿಕೆಟ್ ಸಿಗದ ಸಿಟ್ಟು ಅರಸರೆಂದರೆ ಗರ್ವಿ, ಅಹಂಕಾರಿ, ದೌಲತ್ತಿನ ಮನುಷ್ಯನೆಂಬ ನನ್ನ ನಿರ್ಧಾರಕ್ಕೆ ಪುಷ್ಟಿ ನೀಡಿತ್ತು. ಆದರೆ 1976ರಲ್ಲಿ ವರುಣಾ ನಾಲೆ ವಿಚಾರವಾಗಿ ಇಡೀ ಮಂಡ್ಯದ ಒಕ್ಕಲಿಗರು ಅರಸು ವಿರುದ್ಧ ಚೆಡ್ಡಿ ಮೆರವಣಿಗೆ ಮಾಡಿದಾಗ, ಅರಸರ ಕ್ಯಾಬಿನೆಟ್‌ನಲ್ಲಿದ್ದ ಎಸ್.ಎಂ.ಕೃಷ್ಣ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟು, ಪ್ರಾಯಶ್ಚಿತ್ತಕ್ಕಾಗಿ ಉಪವಾಸ ಕೂತಾಗ, ನಾನು ಮಂಡ್ಯದವನಾದರೂ ಅರಸರ ದೂರದೃಷ್ಟಿ ಮೆಚ್ಚಿ ಅವರ ಪರವಿದ್ದೆ. ಕಾವೇರಿ ಎಂದಾಕ್ಷಣ ಭಾವನಾತ್ಮಕವಾಗಿ ಬೀದಿಗಿಳಿಯುವ ಮಂಡ್ಯದವರ ಇತಿಮಿತಿಗಳನ್ನು ಬಲ್ಲವನಾದ್ದರಿಂದ, ಅರಸರ ಪರ ನಿಲುವು ತಳೆದು ಲೇಖನ ಬರೆದಿದ್ದೆ.
ಮೊದಲ ಭೇಟಿ...
1982ರಲ್ಲಿ, ದೇವರಾಜ ಅರಸರು ವಿರೋಧ ಪಕ್ಷದ ನಾಯಕರಾಗಿದ್ದಾಗ, ಅವರಿಗೊಂದು ಪತ್ರ ಬರೆದಿದ್ದೆ. ಅದಕ್ಕವರು ತಕ್ಷಣ ಪ್ರತಿಕ್ರಿಯಿಸಿದ್ದರು. ಅದಾಗಿ ಸ್ವಲ್ಪ ದಿನಗಳಲ್ಲಿ ಮಂಡ್ಯ ಎಸ್ಪಿ ಸಾವರ್ಕರ್, ‘‘ನೀವು ಬುದ್ಧಿಯವರನ್ನು ಕಾಣಬೇಕಂತೆ, ಅರ್ಜೆಂಟಂತೆ, ಬೆಂಗಳೂರಿನಿಂದ ಫೋನ್ ಬಂದಿತ್ತು’’ ಎಂದರು. ನನಗೂ ಅವರನ್ನು ಭೇಟಿಯಾಗುವ ಉಮೇದಿತ್ತು. ಹಾಗಾಗಿ ಬೆಂಗಳೂರಿನ ಕ್ರೆಸೆಂಟ್ ರಸ್ತೆಯಲ್ಲಿದ್ದ ಅವರ ಮನೆಗೆ ಹೋದೆ. ಅದೇ ನನ್ನ ಅರಸರ ಮೊದಲ ಮುಖಾಮುಖಿ. ಮಹಡಿ ಮೇಲಿದ್ದರು. ಹೋಗಿ ಅವರ ಮುಂದೆ ನಿಂತೆ, ‘‘ಬನ್ನಿ, ಬನ್ನಿ.. ಎಲ್ಲಪ್ಪ ನಿಮ್ಮನ್ನು ಹುಡುಕೋದು, ವಿಳಾಸ, ಫೋನ್ ಏನೂ ಇಲ್ಲ, ಎಲ್ಲಿ ಉಳಿದುಕೊಂಡಿದ್ದೀರಿ’’ ಎಂದರು. ನಾನು, ‘‘ಶಾಸಕರ ಭವನದಲ್ಲಿ, ಕನಕಪುರದ ಎಂಎಲ್‌ಎ ಅಪ್ಪಾಜಿಯವರ ರೂಮಿನಲ್ಲಿ’’ ಎಂದೆ. ‘ಅಪ್ಪಾಜಿ...’ ಎಂದವರು ಕೊಂಚ ಖಿನ್ನರಾಗಿ, ‘‘ಅಪ್ಪಾಜಿ ಕೂಡ ನನ್ನ ಜೊತೆ ಬರಲಿಲ್ಲ’’ ಎಂದರು. ‘‘ಇವರಾರು ಗೊತ್ತಾ?’’ ಎಂದು ಪಕ್ಕದಲ್ಲಿ ಕೂತಿದ್ದವರತ್ತ ತೋರಿಸಿ ಕೇಳಿದರು. ನನಗೆ ಗೊತ್ತಾಗ ಲಿಲ್ಲ. ಅವರೇ ಮುಂದಾಗಿ, ‘‘ಸುಬ್ರಹ್ಮಣ್ಯರಾಜೇ ಅರಸು, ನನ್ನ ಸಹಪಾಠಿ. ಚದುರಂಗ ಅಂತ ಕೇಳಿದ್ದೀರಾ?’’ ಎಂದರು. ಮಿಂಚು ಹೊಡೆದಂತಾಗಿ, ‘‘ಚದುರಂಗರು ಗೊತ್ತು, ಸುಬ್ರಹ್ಮಣ್ಯ ರಾಜೇ ಅರಸು ಗೊತ್ತಿಲ್ಲ’’ ಎಂದು ಚದುರಂಗರ ಬಗ್ಗೆ ವಿವರಿಸಿದೆ. ಚದುರಂಗರು ನಾನು ಹೊರಡಬೇಕು ಎಂದು ಎದ್ದರು, ಅರಸರು ‘‘ಊಟ ಮಾಡಿಕೊಂಡು ಹೋಗಿ’’ ಎಂದು ಕಳುಹಿಸಿಕೊಟ್ಟರು. ಆ ನಂತರ ಅರಸು, ‘‘ನಿಮ್ಮನ್ನು ಪದವೀಧರ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಮಾಡಲು ನಿರ್ಧರಿಸಿದ್ದೇನೆ, ಆ ವಿಚಾರವಾಗಿ ಮಾತನಾಡಲು ನಿಮ್ಮನ್ನು ಕರೆಸಿದ್ದು’’ ಎಂದರು. ನನಗೆ ಹಳೆಯದೆಲ್ಲ ನೆನಪಾಗಿ, ‘‘ಈಗ ಕೆಲಸ ಬೇರೆ ಇಲ್ಲ, ಕೈಯಲ್ಲಿ ಕಾಸಿಲ್ಲ, ಮಂಡ್ಯ ದಲ್ಲೊಂದು ಮನೆ ಕಟ್ಟಬೇಕೆಂದುಕೊಂಡಿದ್ದೇನೆ, ಆ ಹಣ ತೆಗೆದು ಇಲ್ಲಿ ಹಾಕಿದರೆ, ಮನೆಯವರು ನನ್ನನ್ನು ಬಿಡುತ್ತಾರೆಯೇ’’ ಎಂದೆ. ಅದಕ್ಕವರು, ‘‘ಏನು ವಿಧಾನಸೌಧ ಕಟ್ಟಿಸುತ್ತಿದ್ದೀರೇನ್ರಿ’’ ಎಂದು ಗೇಲಿ ಮಾಡಿ, ಚುನಾವಣಾ ಖರ್ಚಿಗೆಂದು 15 ಸಾವಿರ ಹಣ, ಒಂದು ಜೀಪನ್ನು ಕೊಟ್ಟು ‘‘ಶುರು ಮಾಡಿಕೊಳ್ಳಿ, ನೋಡೋಣ’’ ಎಂದರು.
ಬಡವರ ಬಗ್ಗೆ ಮರುಕ
ಅರಸು ನನ್ನನ್ನು ಪಕ್ಷದ ಅಭ್ಯರ್ಥಿಯನ್ನಾಗಿ ಅಧಿಕೃತವಾಗಿ ಘೋಷಿಸಿದ ನಂತರ, ನಾಮಿನೇಷನ್ ಫೈಲ್ ಮಾಡುವುದು, ಚುನಾವಣಾ ಪ್ರಚಾರ ಕಾರ್ಯಗಳಲ್ಲಿ ಪಾಲ್ಗೊಳ್ಳುವ ಸಲುವಾಗಿ ಅರಸು ಅವರನ್ನು ಆಗಾಗ ಭೇಟಿಯಾಗುವ ಅವಕಾಶ ತಾನಾಗಿಯೇ ಒದಗಿ ಬಂದಿತ್ತು. ಒಂದು ಸಲ ಹೀಗೆಯೇ ಅವರ ಮನೆಯಲ್ಲಿ ಭೇಟಿಯಾಗಿ, ಮಾತನಾಡುತ್ತ ಮನೆಯಿಂದ ಹೊರಬರುತ್ತಿದ್ದಾಗ, ‘‘ಆ ಕಾಂಪೌಂಡ್ ಪಕ್ಕದ ಮರದ ಕೆಳಗೆ ನಿಂತಿದ್ದಾರಲ್ಲ, ಅವರನ್ನ ಕರಿ’’ ಎಂದರು. ಅಂಗವಿಕಲ ವ್ಯಕ್ತಿ, ಎರಡೂ ಕಾಲಿರಲಿಲ್ಲ, ಮರದ ಹಲಗೆಯ ಮೇಲೆ ತೆವಳುತ್ತಾ ಬಂದರು. ಅವರ ಜೊತೆ ಒಬ್ಬ ಹೆಂಗಸು. ಅರಸರನ್ನು ನೋಡಿ, ಕೈ ಮುಗಿಯುತ್ತ, ‘‘ಬುದ್ಧಿ, ನೀವು ನನ್ನ ಗಂಡನಿಗೆ ಮಾಶಾಸನ ಬರುವಂತೆ ಮಾಡುದ್ರಿ, ಕಳೆದ ಎರಡು ತಿಂಗಳಿಂದ ಬಂದಿಲ್ಲ, ಅಲ್ದು ಅಲ್ದು ಸಾಕಾಗಿ, ಸಾಲ ಮಾಡ್ಕಂಡು, ನಿಮ್ಮುನ್ನೇ ನೋಡನ ಅಂತ ಗುಲ್ಬರ್ಗಾದಿಂದ ಬಂದ್ವಿ...’’ ಎಂದರು. ಅದೇಕೋ ಗೊತ್ತಿಲ್ಲ ಅರಸರಿಗೆ ಸಿಟ್ಟು ಬಂತು, ‘‘ನಾನು ಮುಖ್ಯಮಂತ್ರಿಯಲ್ಲಮ್ಮ, ಬೇರೆಯವರಿ ದಾರೆ, ಅಲ್ಲೋಗಿ ಕೇಳಿ, ಹೋಗಿ’’ ಎಂದರು. ಬಡವರು, ಭರವಸೆಯನ್ನಿಟ್ಟುಕೊಂಡು ಬಂದಿದ್ದರು, ಬೆಪ್ಪಾಗಿ ನಿಂತುಬಿಟ್ಟರು. ನನಗೆ ಅದ್ಯಾಕೋ ಸರಿಕಾಣಲಿಲ್ಲ. ‘‘ಸಾರ್, ಜನಗಳ ಕಣ್ಣಲ್ಲಿ ನೀವಿನ್ನೂ ಮುಖ್ಯಮಂತ್ರಿಗಳೇ, ಅವರ ಮನದಾಳದಲ್ಲಿ ಇಳಿದುಹೋಗಿದ್ದೀರಾ, ಆ ಬಡಪಾಯಿಗಳಿಗೆ ನೀವು ಅಧಿಕಾರದಲ್ಲಿಲ್ಲ ಎನ್ನುವುದು ಹೇಗೆ ಗೊತ್ತಾಗಬೇಕು?’’ ಎಂದೆ. ಆ ತಕ್ಷಣವೇ ‘‘ಹೌದಲ್ಲ, ಪಾಪದ ಜನ’’ ಎಂದು ಅವರ ಸಮಸ್ಯೆ ಕೇಳಿ, ತಮ್ಮ ಆಪ್ತ ಸಹಾಯಕರಿಗೆ ಹೇಳಿ, ಆಗಿನ ಚೀಫ್ ಸೆಕ್ರೆಟರಿ ಜೆ.ಸಿ.ಲಿನ್‌ಗೆ ಫೋನ್ ಮಾಡಿಸಿದರು. ಅವರು ಸೀಟ್‌ನಲ್ಲಿರಲಿಲ್ಲ. ಜೆ.ಸಿ.ಲಿನ್ ಎಂತಹ ಅಧಿಕಾರಿ ಎಂದರೆ, ಹತ್ತು ನಿಮಿಷದೊಳಗೆ ಅವರೇ ಖುದ್ದು ಫೋನ್ ಮಾಡಿದರು. ಆಗ ಅರಸು ‘‘ನೋಡಿ ಎಂತಹ ಅಧಿಕಾರಿಗಳಿದ್ದಾರೆ’’ ಎಂದು ಹೊಗಳಿ, ಅಂಗವಿಕಲನ ಮಾಶಾಸನದ ಸಮಸ್ಯೆ ಹೇಳಿ, ‘‘ಒಂದು ಆದೇಶ ಮಾಡಿ ಇಮ್ಮಿಡಿಯೆಟ್ಟಾಗಿ ಕಳಿಸಿ, ಹಾಗೆಯೇ ನನಗೊಂದು ಕಾಪಿ ಹಾಕಿ’’ ಎಂದರು. ಅರಸರ ಒಂದೊಂದೇ ಮುಖದ ಪರಿಚಯವಾಗತೊಡಗಿತು. ಇಂತಹ ವ್ಯಕ್ತಿಗೆ ಮೋಸ ಮಾಡಿ, ಬೆನ್ನಿಗಿರಿದು ತೊರೆದ ಹೋದವರ ಬಗ್ಗೆ ಸಿಟ್ಟೂ ಬಂತು.
ಕೋಳಿ ಕೇಳಿ ಮಸಾಲೆ...
ಅರಸರನ್ನು ಆಲ್‌ಮೋಸ್ಟ್ ಎಲ್ಲರೂ ಬಿಟ್ಟುಹೋಗಿದ್ದರು. ಆದರೆ ಹುಚ್ಚಮಾಸ್ತಿಗೌಡರು ಮಾತ್ರ ಪ್ರತಿದಿನ ಮನೆಗೆ ಬಂದು ಮಾತಾಡಿಸಿಕೊಂಡು ಹೋಗುತ್ತಿದ್ದರು. ಅವರಿಬ್ಬರ ನಡುವಿನ ಪ್ರೀತಿ, ವಿಶ್ವಾಸ ಮತ್ತು ಗೌರವಗಳು ಒಬ್ಬರಿಗಿಂತ ಒಬ್ಬರು ಒಂದು ಕೈ ಹೆಚ್ಚೇ ಎನಿಸುತ್ತಿತ್ತು. ಅರಸರ ಮನೆಗೆ ಗೌಡರು ಬಂದರೆ, ಕಾಫಿ, ಟೀ ಕೊಡುತ್ತಿರಲಿಲ್ಲ. ಬದಲಿಗೆ ರಾಗಿ ಅಂಬಲಿ, ಇಬ್ಬರಿಗೂ. ಅದೂ ಬೆಳಗ್ಗೆಯಲ್ಲ, ಸಂಜೆ ನಾಲ್ಕೂವರೆ ಐದು ಗಂಟೆಯಲ್ಲಿ. ಹೀಗೆಯೇ ಒಂದು ದಿನ ಅರಸರು ಬಂಗಾರಪ್ಪನವರಿಗೆ ಫೋನ್ ಮಾಡಿ, ‘‘ಹೊಸ ಪಕ್ಷ ಕಟ್ಟುತ್ತಿದ್ದೇನೆ, ನಿನಗೆ ಪ್ರಮುಖ ಸ್ಥಾನ ನೀಡುತ್ತೇನೆ, ಬಂದುಬಿಡು’’ ಎಂದರು. ಅತ್ತಲಿಂದ ಬಂಗಾರಪ್ಪ, ‘‘ಮೇಡಂ ಕೇಳ್ತೀನಿ’’ ಅಂದರು. ಅದೆಲ್ಲಿತ್ತೋ ಕೋಪ, ‘‘ಏ... ಕೋಳಿ ಕೇಳಿ ಮಸಾಲೆ ಅರಿತರೇನಯ್ಯ’’ ಎಂದು ‘‘ರೀ, ಗೌಡ್ರೆ, ನಾನೀಗ ಅಧಿಕಾರದಲ್ಲಿಲ್ಲ. ಉತ್ತರದ ನಾಯಕರೆಲ್ಲ ನೀವೇ ಲೀಡರ್ ಎಂದರೂ, ಅವರನ್ನೆಲ್ಲ ಸಾಕಲು, ರಾಷ್ಟ್ರ ರಾಜ ಕಾರಣದ ಉಸಾಬರಿ ಹೊರಲು ಸಾಕಷ್ಟು ಹಣವೂ ಇಲ್ಲ. ನಾನು ನನ್ನ ನೆಲೆ ಭದ್ರ ಮಾಡ್ಕೋಬೇಕು, ಹಾಗಾಗಿ ಪ್ರಾದೇಶಿಕ ಪಕ್ಷ ಕಟ್ಟಬೇಕು, ಪಕ್ಷಕ್ಕೊಂದು ಹೆಸರು ಸೂಚಿಸಿ’’ ಎಂದರು. ನಾನು ಯೋಚಿಸುತ್ತಿರುವಾಗ, ‘ಕರ್ನಾಟಕ ಕಾಂಗ್ರೆಸ್ ಪಕ್ಷ, ಹೇಗಿದೆ’ ಎಂದರು. ನಾನು, ‘‘ನಮ್ಮ ವಿರೋಧಿಗಳದು ಕಾಂಗ್ರೆಸ್, ನಮ್ಮದೂ ಕಾಂಗ್ರೆಸ್.. ಜನರಿಗೆ ಗೊಂದಲವಾಗುತ್ತದೆ, ನಾವು ಅವರ ವಿರೋಧಿಗಳಾದ್ದರಿಂದ ಕಾಂಗ್ರೆಸ್ ಅನ್ನುವುದೇ ಬೇಡ, ಕರ್ನಾಟಕ ಕ್ರಾಂತಿ ಪಕ್ಷ ಅಂತಿಡೋಣ’’ ಅಂದೆ. ಅದಕ್ಕವರು ‘‘ಕ್ರಾಂತಿಕಾರಿಗಳು, ನಿಮ್ಮ ಯೋಚನೆಯೆಲ್ಲ ರಕ್ತ, ಕ್ರಾಂತಿ, ಜನ ಅದನ್ನು ಇಷ್ಟಪಡಲ್ಲ, ಬೇಡ’’ ಅಂದರು. ಆಮೇಲೆ ಜೆ.ಎಚ್.ಪಟೇಲರೊಂದಿಗೆ ಚರ್ಚಿಸಿ, ‘ಕರ್ನಾಟಕ ಕ್ರಾಂತಿರಂಗ’ವೆಂದು ಹೆಸರಿಟ್ಟರು. ಹಾಗಾಗಿ ಆ ಪಕ್ಷದ ಹೆಸರಿನಲ್ಲಿ ನನ್ನದು ಪಟೇಲರದು ಫಿಫ್ಟಿ ಫಿಫ್ಟಿ.
ಮೊದಲ ಅಧಿಕೃತ ಅಭ್ಯರ್ಥಿ
ಕರ್ನಾಟಕ ಕ್ರಾಂತಿ ರಂಗ ಪಕ್ಷವನ್ನು ನೋಂದಾಯಿಸಿದ ನಂತರ, ಆ ಪಕ್ಷದ ಮೊತ್ತ ಮೊದಲ ಅಧಿಕೃತ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಲು ಬಿ ಫಾರ್ಮ್ ಪಡೆದ ಅಭ್ಯರ್ಥಿ ನಾನೆ. ಅಭ್ಯರ್ಥಿಯಾದ ಹುಮ್ಮಸ್ಸಿನಲ್ಲಿ ನಾನು ‘‘ನಿಮ್ಮಿಡನಿರುತ್ತೇನೆ’’ ಎಂಬ ಭರವಸೆಯ ಮಾತುಗಳನ್ನಾಡಿದೆ. ಅದಕ್ಕವರು, ‘‘ಮಂಡ್ಯದಲ್ಲಿ ನಿಲ್ಲಲು ಅಭ್ಯರ್ಥಿಗಳಿಲ್ಲ ಎಂದು ಭಾವಿಸಬೇಡಿ, ಬೇಕಾದಷ್ಟು ಹಿರಿಯರಿದ್ದಾರೆ, ನನಗೆ ನಿಮ್ಮಂತಹ ಉತ್ಸಾಹಿ ತರುಣರು ಬೇಕು’’ ಎಂದರು. ಅವರ ಸಂಪರ್ಕದಲ್ಲಿರುವ ಹಾಸನ, ಮಡಿಕೇರಿ ಭಾಗದ ರಾಜಕಾರಣಿಗಳಿಗೆ ಮತ್ತು ಮೈಸೂರು ವಿವಿ ಕುಲಪತಿ ಡಿ.ವಿ.ಅರಸುಗೆ ಹೇಳಿ, ‘‘ಗೌಡ್ರು ಬರುತ್ತಾರೆ, ಎಲ್ಲರಿಗೂ ಪರಿಚಯಿಸಿ, ಬೆಂಬಲಿಸಿ’’ ಎಂದು ಫೋನ್ ಮಾಡಿ ಹೇಳಿದರು. ಅವರಿಗೆ ಹತ್ತಿರವಾಗುತ್ತಾ, ಅವರೊಂದಿಗೆ ಬೆರೆಯುತ್ತಾ ಹೋದಂತೆ, ಹಿಂದೆ ನಾನು ಕಂಡ ಅರಸೂನೆ ಬೇರೆ ಎನಿಸತೊಡಗಿತು. ಆ ಗತ್ತು, ಗರ್ವ, ಅಧಿಕಾರದ ಮದಗಳೆಲ್ಲ ಮಾಯವಾಗಿ ಮಾಗಿದ ಮನುಷ್ಯರಾಗಿದ್ದರು. ನಾನು ಅವರಿಗಿಂತ 25 ವರ್ಷ ಚಿಕ್ಕವನಾದರೂ, ಗೌರವದಿಂದ ಕಾಣುತ್ತಿ ದ್ದರು. ಹಿರಿತನ, ಅನುಭವ, ಬುದ್ಧಿವಂತಿಕೆಯನ್ನು ಧಾರಾಳವಾಗಿ ಹಂಚಿಕೊಳ್ಳುತ್ತಿದ್ದರು. ನಮ್ಮಂತಹ ಸಾಮಾನ್ಯರ ಅಭಿಪ್ರಾಯವನ್ನು ಕಿವಿಗೊಟ್ಟು ಕೇಳುತ್ತಿದ್ದರು, ಮನ್ನಣೆ ನೀಡಿ ಪ್ರೋತ್ಸಾಹಿಸುತ್ತಿದ್ದರು.
ಆದರೆ ಅವರ ಮುಖದಲ್ಲಿ ರಾಜಕೀಯ ಆಘಾತದ ಛಾಯೆ ಆಗಾಗ ಇಣುಕುತ್ತಿತ್ತು. ಅರಸರಲ್ಲಿ ಗತ್ತು ಇತ್ತು, ಜನ ಅದನ್ನು ತಪ್ಪಾಗಿ ದುರಹಂಕಾರ ಎಂದು ಭಾವಿಸಿದರು; ಕೆಲವು ದೌರ್ಬಲ್ಯಗಳಿದ್ದವು, ಅವರ ಸುತ್ತ ಇದ್ದವರು ದುರುಪಯೋಗಪಡಿಸಿಕೊಂಡರು; ಅತಿಯಾದ ಉದಾರತನವಿತ್ತು, ಅದನ್ನು ಯೋಗ್ಯರಲ್ಲದವರು ಸದುಪಯೋಗಪಡಿಸಿಕೊಂಡರು.
ಜೂನ್ 4 ರಂದು...
ಅರಸರ ಮನೆಯಿಂದ ಫೋನ್ ಬಂತು, ಅರ್ಜೆಂಟಾಗಿ ಬಂದು ನೋಡಬೇಕಂತೆ ಎಂದು. ಅಂದು ಜೂನ್ 4, 1982, ಸಹೋದರ ಕೆಂಪರಾಜ್ ಅರಸರ ತಿಥಿ ಕಾರ್ಯ. ಅವರ ಆಪ್ತ ಕಾರ್ಯದರ್ಶಿ ಗೋಪಾಲ ಶಾಸ್ತ್ರಿ, ‘‘ಬೆಳಗ್ಗೆಯಿಂದ ತಮ್ಮನ ಶ್ರಾದ್ಧ ಮಾಡಿ ಸುಸ್ತಾಗಿದಾರೆ, ಬಿಪಿ ಇದೆ, ರೆಸ್ಟ್ ಮಾಡಲು ಡಾಕ್ಟರ್ ಹೇಳಿದ್ದಾರೆ, ಹೆಚ್ಚಿಗೆ ಸಮಯ ತೆಗೆದುಕೊಳ್ಳದೆ ಬೇಗ ಬಂದುಬಿಡಿ’’ ಎಂದು ಕಳುಹಿಸಿದರು. ಮಹಡಿಯಲ್ಲಿ ಅರಸರು ಸೋಫಾ ಮೇಲೂ ಇಲ್ಲ, ಕುರ್ಚಿಯ ಮೇಲೂ ಇಲ್ಲ, ಟಾಯ್ಲೆಟ್‌ನಲ್ಲಿರಬಹುದೆಂದು ‘‘ಸಾರ್’’ ಎಂದು ಕೂಗಿದೆ. ‘‘ಬನ್ನಿ, ಬನ್ನಿ’’ ಎಂದು ಸೋಫಾದ ಹಿಂದಿನಿಂದ ಸದ್ದು ಬಂತು. ಹೋಗಿ ನೋಡಿದರೆ, ಪೈಜಾಮ ಹಾಕಿಕೊಂಡು, ನೆಲದಲ್ಲಿ ಪದ್ಮಾಸನ ಹಾಕಿ ಕೂತಿದ್ದಾರೆ. ತೊಂದರೆ ಕೊಡಬಾರದೆಂದು ಹೋಗಲು ನೋಡಿದೆ. ‘‘ಎಲ್ಲಿಗೆ ಹೋಗ್ತಿದಿರಪ್ಪ’’ ಅಂದು, ‘‘ಇವತ್ತು ರೆಸ್ಟ್ ತಗೊಳಕೇಳಿದಾರೆ, ಆತ್ಮೀಯರ ಜೊತೆ ಮಾತಾಡಿದರೆ ಬಿಪಿ ಇಳಿದು ಹೋಗುತ್ತೆ, ಕೂತ್ಕೊಳಿ’’ ಎಂದು ಚುಟ್ಟಾ ಹಚ್ಚಿಕೊಂಡರು. ಅವತ್ತು ಅರಸರು ಮಾತನಾಡುವ ಮೂಡ್‌ನಲ್ಲಿದ್ದರು. ಅದು ಅಂತಿಂಥ ಮಾತಲ್ಲ, ಒಡಲಾಳದ ಮಾತುಗಳು, ಅಲ್ಲಿಯವರೆಗೆ ಅವರಿಂದ ಬರದಿದ್ದ ಮಾತುಗಳು. ಮೊದಲಿಗೆ ‘‘ನಾನು ಸತ್ರೆ ಜನ ಬರ್ತರೋ ಇಲ್ವೋ’’ ಎಂದರು. ನನಗೆ ಏನು ಹೇಳಬೇಕೋ ತೋಚಲಿಲ್ಲ. ಯಾಕಿಂತಹ ಮಾತು, ಈ ಗಳಿಗೆಯಲ್ಲಿ ಎನ್ನಿಸಿತು. ಶ್ರಾದ್ಧ ಕಾರ್ಯ ಮುಗಿಸಿ ಬಂದಿದ್ದರಲ್ಲ, ಸಾವಿನ ಮೂಡ್‌ನಲ್ಲಿರಬಹುದೆಂದು ಸುಮ್ಮನಾದೆ. ‘‘ನನ್ನ ತಮ್ಮ ವಿಲ್ ಮಾಡಿದ್ದ, ನಮ್ಮಿಬ್ಬರಿಗೂ ಗಂಡು ಮಕ್ಕಳಿಲ್ಲದ ಕಾರಣ, ಯಾರು ಮೊದಲು ಸಾಯುತ್ತಾರೋ ಅವರ ಶ್ರಾದ್ಧ ಕಾರ್ಯವನ್ನು ಉಳಿದವರು ಮಾಡಬೇಕೆಂದು’’ ಎಂದರು. ಅದಕ್ಕೆ ನಾನು, ‘‘ಗಂಡಾದರೇನು ಹೆಣ್ಣಾದರೇನು, ಇಬ್ಬರೂ ಮನುಷ್ಯರೆ. ಅದ್ಯಾರು ಮಾಡಿದರೂ ಸರಿಯೇ’’ ಎಂದೆ. ಅದಕ್ಕೆ ಅರಸು, ‘‘ನಿಮ್ಮ ಮಾತು ಸರಿ, ನನ್ನ ತಮ್ಮ ಮತ್ತು ಮಗಳು ನಾಗರತ್ನ ನನ್ನೆರಡು ಭುಜಗಳಿದ್ದಂತೆ. ನನ್ನ ರಾಜಕೀಯ ಬದುಕಿ ನಲ್ಲಿ ಬಹುಮುಖ್ಯ ಪಾತ್ರ ವಹಿಸಿದ್ದರು. ನನ್ನ ಯಶಸ್ಸಿನಲ್ಲಿ ಭಾಗಿಯಾಗಿದ್ದರು. ಈಗ ಆ ಎರಡು ಭುಜಗಳನ್ನೂ ಕಳೆದುಕೊಂಡೆ.... ಇವರಿಬ್ಬರು ಸತ್ತಾಗ ಬರಬೇಕಾಗಿದ್ದವರು ಬರಲಿಲ್ಲ, ಈಗ ನಾನು ಅಧಿಕಾರದಲ್ಲಿಲ್ಲ, ಅದಕ್ಕೇ ಬರಲಿಲ್ಲ’’ ಎಂದು ಬಹಳ ನೊಂದುಕೊಂಡರು. ‘‘ಬರಬೇಕಾಗಿತ್ತು, ಬರಲಿಲ್ಲ, ಬಿಡಿ. ಸತ್ತೋರು ಮತ್ತೆ ಬರುತ್ತಾರೆಯೇ?’’ ಎಂದೆ. ‘‘ನೋಡಿ, ನಾನು ಅಧಿಕಾರದಲ್ಲಿದ್ದಾಗ ನನ್ನ ಮನೆಯ ನಾಯಿಗೆ ಹೊಟ್ಟೆನೋವು ಬಂದರೆ, ಬಹುಪಾಲು ಕ್ಯಾಬಿನೆಟ್ ಸಚಿವರು ಬಂದು ಯೋಗಕ್ಷೇಮ ವಿಚಾರಿಸುತ್ತಿದ್ದರು. ಅವರಿಗೇ ಹೊಟ್ಟೆನೋವು ಬಂದಂತೆ ಆಡುತ್ತಿದ್ದರು.
ಆದರೆ ನನ್ನ ಮಗಳು ಸತ್ತಾಗ ಆ ಜನ ಬರಲಿಲ್ಲ’’ ಅರಸರ ಮಾತಿನಲ್ಲಿ ನೋವಿತ್ತು, ಸಮಯಸಾಧಕರ ಬಗ್ಗೆ ಕೋಪವಿತ್ತು, ಅಸಹಾಯಕತೆ ಮಡುಗಟ್ಟಿತ್ತು. ಮುಂದುವರಿದು, ‘‘ಗೌಡರೆ, ಕೃತಜ್ಞತೆ ಅಂದರೇನು?’’ ಎಂದು ಪ್ರಶ್ನಿಸಿದರು. ನಾನು, ‘ಉಪ್ಪು ಕೊಟ್ಟೋನ ಮುಪ್ಪಿಗಂಟ ನೆನೆ ಅಂತ ನಮ್ಮ ಮಂಡ್ಯ ಕಡೆ ಹೇಳ್ತ್ತಾರೆ’ ಅಂದೆ. ‘‘ಯಾಕೆ ಈ ಮಾತಂದ್ರೆ... ಮಗಳು ಸತ್ತಾಗ ನಮ್ಮವರಿರಲಿ, ಇಂದಿರಾ ಗಾಂಧಿ ಕೂಡ ಬರಲಿಲ್ಲ, ಒಂದು ಫೋನೂ ಮಾಡಲಿಲ್ಲ. ಆಕೆ ಸೋತು ಮನೆಯಲ್ಲಿ ಒಬ್ಬಂಟಿಯಾಗಿ ಕೂತಿದ್ದಾಗ, ಕರೆದುಕೊಂಡು ಬಂದು ಗೆಲ್ಲಿಸಿ ಪುನರ್ಜನ್ಮ ಕೊಟ್ಟೆ. ನನ್ನನ್ನು ಆಕೆ ಮುಖ್ಯಮಂತ್ರಿ ಮಾಡಿದ ಋಣವನ್ನು ಆ ಮೂಲಕ ತೀರಿಸಿದ್ದೆ, ಅದು ನನ್ನ ಉಪಕಾರ ಸ್ಮರಣೆ. ಆದರೆ ಆಕೆ... ಒಂದು ಫೋನ್ ಕೂಡ ಮಾಡಲಿಲ್ಲ’’ ಎಂದು ವಿಷಾದದಿಂದ ಮಂಕಾದರು. ಮತ್ತೆ ಮಾತು ಮುಂದುವರಿಸಿ, ನಳಚರಿತ್ರೆ ಪದ್ಯವನ್ನು ರಾಗವಾಗಿ ಹಾಡಿದರು. ‘‘ನಳನಿಗೆ ಆದ ಸ್ಥಿತಿ ನನಗಾಗಿದೆ’’ ಎಂದು ದುಃಖಿತರಾದರು. ‘‘ಯಾವ ಜನರಿಗೋಸ್ಕರ ಮುಂದುವರಿದವರ ವಿರೋಧ ಕಟ್ಟಿಕೊಂಡೆನೋ, ಆಕ್ರೋಶಕ್ಕೆ ಬಲಿಯಾದೆನೋ ಅವರು ನನ್ನನ್ನು ಮರೆತದ್ದು ಸಂಕಟದ ವಿಚಾರ. ನಾನು ರಾಜಕೀಯವಾಗಿ ಬೆಳೆಸಿ, ಅಧಿಕಾರಕ್ಕೆ ತಂದವರೆ ನನ್ನನ್ನು ಹಿಂಬಾಲಿಸಲಿಲ್ಲ. ಅಷ್ಟೇ ಏಕೆ, ನಾನು ಎಂತೆಂತಹ ನಾಯಕರನ್ನು ಚುನಾವಣೆಗೆ ನಿಲ್ಲಿಸಿದೆ... ಕರಿಯಪ್ಪ, ಘೋರ್ಪಡೆ, ಟಿ.ಎ. ಪೈ... ಇವರನ್ನೇ ಸೋಲಿಸಿಬಿಟ್ಟರಲ್ಲ ಜನ. ಕರ್ನಾಟಕದ ಜನ ನನಗೆ ಕೊಟ್ಟ ಬಹುಮಾನವಿದು’’ ಎಂದು ಖಿನ್ನರಾದರು. ದುಗುಡ, ನೋವು, ಹತಾಶೆ, ದುಃಖ ಅರಸರ ಮಾತುಗಳಿಂದ ಹೊರಬರುತ್ತಿತ್ತು. ನಾನು ಅದರಿಂದ ಅವರನ್ನು ಹೊರತರಲು ಸಾಕಷ್ಟು ಪ್ರಯತ್ನಿಸಿದೆ. ಆದರೆ ಅವರ ಮನೆಯಲ್ಲಾದ ಎರಡು ಸಾವು ಅವರನ್ನು ಕುಗ್ಗಿಸಿದ್ದವು. ಅಧಿಕಾರ, ಹಣ, ಅಂತಸ್ತು, ಜನಪ್ರಿಯತೆ ಯಾವುದೂ ಶಾಶ್ವತವಲ್ಲ, ನಶ್ವರ ಎಂದು ಸಂತನ ರೀತಿ ಮಾತನಾಡಿದರು. ಅದಾದ ಎರಡೇ ದಿನಕ್ಕೆ ದೇವರಾಜ ಅರಸು ಇನ್ನಿಲ್ಲ ಎಂಬ ಸುದ್ದಿ ಬಂತು. ಅರಸು ನಾಡಿನ ಜನಕ್ಕೆ, ಒಬ್ಬೊಬ್ಬರಿಗೆ ಒಂದೊಂದು ರೀತಿ ಕಂಡಿರಬಹುದು. ಆದರೆ ನಾನು ಕಂಡ ಅರಸು ಪರಿಪೂರ್ಣ ಮನುಷ್ಯನಂತಿದ್ದರು. ಅವರ ಉದಾರತೆಯೇ ಅವರಿಗೆ ಉರುಳಾಯಿತು ಎಂಬುದು ನನ್ನ ಭಾವನೆ.