ಮಹಾನ್ ಮಾನವತಾವಾದಿ ಅರಸು -ಜೆ. ಶ್ರೀನಿವಾಸನ್

Update: 2016-11-01 18:59 GMT

ಕೊಳ್ಳೇಗಾಲದ ಮಧ್ಯಮವರ್ಗದ ಕುಟುಂಬದಿಂದ ಬಂದ ಜೆ.ಶ್ರೀನಿವಾಸನ್(77) ವಿಶೇಷ ಜಿಲ್ಲಾಧಿಕಾರಿಯಾಗಿ ನಿವೃತ್ತರಾದವರು. ಊರಿನಲ್ಲಿ ಸ್ವಲ್ಪ ಜಮೀನಿದ್ದರೂ, ತಂದೆ ಸರಕಾರಿ ನೌಕರಿಯಲ್ಲಿದ್ದರಿಂದ, ಕೃಷಿ ಕೆಲಸದತ್ತ ನೋಡದೆ, ಸರಕಾರಿ ನೌಕರಿಯತ್ತ ಗಮನ ಹರಿಸಿದವರು. ಎಸೆಸೆಲ್ಸಿವರೆಗೆ ಕೊಳ್ಳೇಗಾಲದಲ್ಲಿ ಓದಿ, ನಂತರ ಮೈಸೂರಿನಲ್ಲಿ ಪದವಿ, ಮನಶಾಸ್ತ್ರದಲ್ಲಿ ಪಿಎಚ್‌ಡಿ ಮಾಡುವಾಗಲೇ, ಸರಕಾರಿ ಕೆಲಸ ಸಿಕ್ಕಿದ್ದರಿಂ, ಓದನ್ನು ಅರ್ಧಕ್ಕೆ ನಿಲ್ಲಿಸಿದವರು.
ವಿದ್ಯಾರ್ಥಿ ದೆಸೆಯಿಂದಲೇ ಸಂಘಟನೆ, ಪ್ರತಿಭಟನೆ, ಹೋರಾಟ, ಚಳವಳಿಗಳಲ್ಲಿ ಭಾಗವಹಿಸುತ್ತಿದ್ದ ಶ್ರೀನಿವಾಸನ್, ಸಹಜವಾಗಿಯೇ ಸಮಾಜಮುಖಿ ತತ್ವ ಸಿದ್ಧಾಂತಗಳತ್ತ ಆಕರ್ಷಿತರಾಗಿ ಹಿಂದುಳಿದವರ ಪರ ನಿಂತವರು. ದೇವರಾಜ ಅರಸು ಮುಖ್ಯಮಂತ್ರಿಯಾಗಿದ್ದಾಗಲೇ, 1971ರಲ್ಲಿ ಗೆಜೆಟೆಡ್ ಆಫೀಸರ್ ಹುದ್ದೆಗೆ ಆಯ್ಕೆಯಾಗಿ, ಪುತ್ತೂರಿನ ತಹಶೀಲ್ದಾರ್ ಆಗಿ ನೇಮಕಗೊಂಡವರು. ಆನಂತರ ಸಾಗರ, ತುಮಕೂರಿನಲ್ಲಿ ಎಸಿ, ಬೆಂಗಳೂರಿನಲ್ಲಿ ಡಿಸಿಯಾಗಿ ಸೇವೆ ಸಲ್ಲಿಸಿದವರು; 1991ರಲ್ಲಿ ವಿಶೇ ಜಿಲ್ಲಾಧಿಕಾರಿಯಾಗಿ ನಿವೃತ್ತರಾದವರು.
ಸರಕಾರಿ ಸೇವಾವಧಿಯ ನಂತರ, ಜನಪರ ಹೋರಾಟಗಳಲ್ಲಿ ಗುರುತಿಸಿಕೊಂಡ ಶ್ರೀನಿವಾಸನ್, ಹಿಂದುಳಿದವರ ಫೆಡರೇಷನ್ ಹುಟ್ಟು ಹಾಕಿದರು. ಹಿಂದುಳಿದ ಜಾತಿ ಜನಾಂಗಗಳ ಸಮನ್ವಯ ಸಮಿತಿ ಕಟ್ಟಿ, ಮಂಡಲ್ ವರದಿ ಪರ ವಾದ, ಚರ್ಚೆ ಮತ್ತು ಹೋರಾಟದಲ್ಲಿ ಭಾಗಿಯಾದವರು. ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸದಸ್ಯರಾಗಿ, ದೇವರಾಜ ಅರಸು ಸಂಶೋಧನಾ ಸಂಸ್ಥೆಯ ಸಲಹಾ ಸಮಿತಿ ಸದಸ್ಯರಾಗಿ 9 ವರ್ಷ ಸೇವೆ ಸಲ್ಲಿಸಿದವರು. ಪ್ರಸ್ತುತ ದೇವರಾಜ ಶತಮಾನೋತ್ಸವ ಸಮಿತಿಯಲ್ಲೂ ಸದಸ್ಯರಾಗಿದ್ದು, ಹಿಂದುಳಿದ ವರ್ಗಗಳಿಗೆ ಸಂಬಂಧಿಸಿದ ಸಾಮಾಜಿಕ, ಆರ್ಥಿಕ ಸ್ಥಿತಿಗತಿಯನ್ನು, ಅಂಕಿ-ಅಂಶಗಳನ್ನು, ವರದಿಗಳನ್ನು ಸಿದ್ಧಪಡಿಸುತ್ತ ಹಾಗೂ ಕಾಲಕಾಲಕ್ಕೆ ಸರಕಾರಕ್ಕೆ ಬೇಕಾದ ಉಪಯುಕ್ತ ಸಲಹೆ ಸೂಚನೆಗಳನ್ನು ನೀಡುತ್ತ ನಿವೃತ್ತ ಬದುಕನ್ನು ಸದುಪಯೋಗಪಡಿಸಿಕೊಂಡವರು.
ಇವರಿಗೂ ಮಾಜಿ ಮುಖ್ಯಮಂತ್ರಿ ದೇವರಾಜ ಅರಸರಿಗೂ ಏನು ಸಂಬಂಧ? ಸಹಜವಾಗಿ ಸಿಡಿಯುವ ಪ್ರಶ್ನೆಗೆ ಶ್ರೀನಿವಾಸನ್.. ‘‘ನಾನೊಬ್ಬ ಸಾಮಾನ್ಯ ಅಧಿಕಾರಿ. ನನ್ನ ಸೇವಾವಧಿಯಲ್ಲಿ ಅವರ ಸಂಪರ್ಕಕ್ಕೆ ಬಂದು, ಅವರ ಮೇರುವ್ಯಕ್ತಿತ್ವಕ್ಕೆ ಮಾರುಹೋದವನು. ಅವರ ಜನಪರ ಕೆಲಸಗಳಿಂದ ಪ್ರಭಾವಿತನಾದವನು. ಅವರಲ್ಲಿದ್ದ ಮಾನವೀಯತೆಗೆ ಮನಸೋತವನು. ಸರಕಾರಿ ಅಧಿಕಾರಿಯಾಗಿದ್ದು, ಕಾನೂನು ಕಾಯ್ದೆಗಳಡಿ ಕೆಲಸ ಮಾಡುತ್ತಲೇ ಜನ ಕೊಟ್ಟ ಅಧಿಕಾರವನ್ನು ಜನರಿಗಾಗಿ ಬಳಸುವುದನ್ನು ಅವರಿಂದ ಕಲಿತವನು. ಮತ್ತು ಅವರು ಕಂಡ ಕನಸನ್ನು ನನ್ನ ಕೈಲಾದಷ್ಟು ನನಸು ಮಾಡಲು ಇಂದಿಗೂ ಆ ಮಾರ್ಗದಲ್ಲಿಯೇ ನಡೆಯುತ್ತಿರುವವನು’’ ಎನ್ನುತ್ತಾರೆ.

ರಾಜಕಾರಣಕ್ಕೆ ಬನ್ನಿ...


1969. ನಾನಾಗ ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ಮನಶಾಸ್ತ್ರದಲ್ಲಿ ಪಿಎಚ್‌ಡಿ ಮಾಡುತ್ತಿದ್ದೆ. ಒಂದು ದಿನ, ಹುಣಸೂರಿನಲ್ಲಿ ಇಂಜಿನಿಯರ್ ಆಗಿದ್ದ ನನ್ನ ದೂರದ ಸಂಬಂಧಿ ಮಹದೇವಯ್ಯನವರು, ‘‘ನಿಮ್ಮ ಸಮಾಜದಲ್ಲಿ ಓದಿರುವ ಯುವಕರು, ಸಂಘಟನೆಗಳಲ್ಲಿ ನುರಿತವರು ಯಾರಾದರೂ ಇದ್ದರೆ ಕರೆದುಕೊಂಡು ಬನ್ನಿ ಎಂದು ದೇವರಾಜ ಅರಸು ಹೇಳಿದ್ದಾರೆ. ಬನ್ನಿ ಹೋಗಿ ಬರೋಣ’’ ಎಂದು ಅವರನ್ನು ಕಾಣಲು ಕರೆದುಕೊಂಡು ಹೋಗಿದ್ದರು. ಮೈಸೂರಿನ ದಾಸ್‌ಪ್ರಕಾಶ್ ಹೊಟೇಲ್‌ನಲ್ಲಿ ದೇವರಾಜ ಅರಸು ತಂಗಿದ್ದರು. ಅವರ ಮುಂದೆ ನಿಂತಾಗ, ‘‘ನೀವ್ಯಾಕೆ ರಾಜಕೀಯಕ್ಕೆ ಬರಬಾರದು’’ -ಇದು ದೇವರಾಜ ಅರಸು ನನಗೆ ಕೇಳಿದ ಮೊತ್ತ ಮೊದಲ ಪ್ರಶ್ನೆ. ನನಗೆ ಏನು ಹೇಳಬೇಕೋ ತೋಚಲಿಲ್ಲ. ಆದರೂ ಸಾವರಿಸಿಕೊಂಡು, ‘‘ನನಗೆ ಈಗ ಆ ಯೋಚನೆ ಇಲ್ಲ, ದಯವಿಟ್ಟು ಕ್ಷಮಿಸಿ’’ ಅಂದೆ. ‘‘ಇನ್ನೊಂದು ಸಲ ಯೋಚಿಸಿ’’ ಅಂದರು ಅರಸು. ಆಗ, 1969, ಕಾಂಗ್ರೆಸ್ ಇಬ್ಭಾಗವಾಗಿತ್ತು. ದೇವರಾಜ ಅರಸು, ಇಂದಿರಾ ಕಾಂಗ್ರೆಸ್ ಪಕ್ಷದ ಉಸ್ತುವಾರಿ ಹೊತ್ತಿದ್ದರು. ಅಧಿಕಾರದಲ್ಲಿರಲಿಲ್ಲ. ನಮ್ಮ ಮನೆಯಲ್ಲಿಯೂ, ರಾಜಕೀಯ ನಮಗ್ಯಾಕೆ, ಓದು ಕೆಲಸ ನೋಡು ಎಂದು, ನನ್ನ ರಾಜಕೀಯ ಪ್ರವೇಶಕ್ಕೆ ತಡೆಯೊಡ್ಡಿದರು. ಜೊತೆಗೆ 1971ರಲ್ಲಿ ಎರಡನೆ ದರ್ಜೆ ಗೆಜೆಟೆಡ್ ಆಫೀಸರ್ ಆಗಿ ಸರಕಾರಿ ಸೇವೆಗೆ ನಿಯುಕ್ತಿಗೊಂಡು, ಪುತ್ತೂರಿನ ತಹಶೀಲ್ದಾರ್ ಆಗಿ ನೇಮಕಗೊಂಡಾಗ, ನಾನೂ ಕೂಡ ರಾಜಕೀಯದ ಬಗೆಗಿನ ಆ ಯೋಚನೆಯಿಂದ ದೂರ ಸರಿದಿದ್ದೆ.

ನನಗೊಂದು ಆಶ್ಚರ್ಯ ಕಾದಿತ್ತು...

1973ರಲ್ಲಿ, ನಾನು ಪುತ್ತೂರಿನಲ್ಲಿ ತಹಶೀಲ್ದಾರ್ ಆಗಿದ್ದಾಗ ಭಾರೀ ಪ್ರವಾಹ ಬಂದು ಹಲವಾರು ಗ್ರಾಮಗಳು ಜಲಾವೃತಗೊಂಡವು. ಜನ ನೆಲೆ ಕಳೆದುಕೊಂಡು ಬೀದಿಗೆ ಬಿದ್ದಿದ್ದರು. ಜೆ.ಕೆ.ಅರೋರ ಆಗ ಜಿಲ್ಲಾಧಿಕಾರಿಗಳಾಗಿದ್ದರು. ಅವರ ನೇತೃತ್ವದ ಅಧಿಕಾರಿಗಳ ತಂಡ ಸ್ಥಳಕ್ಕೆ ಧಾವಿಸಿ ಪರಿಹಾರ, ಪುನರ್ವಸತಿ ಕಾರ್ಯದಲ್ಲಿ ತೊಡಗಿತ್ತು. ಅದಾದ ಮರುದಿನವೇ ಮುಖ್ಯಮಂತ್ರಿ ದೇವರಾಜ ಅರಸು ಸ್ಥಳಕ್ಕೆ ಆಗಮಿಸಿದ್ದರು. ಜೊತೆಯಲ್ಲಿ ಹುಚ್ಚಮಾಸ್ತಿಗೌಡರಿದ್ದರು. ಜಿಲ್ಲಾಧಿಕಾರಿ ಅರೋರ ತಂಡದಲ್ಲಿ ನಾನೂ ಇದ್ದೆ. ಅಲ್ಲಿ ನನಗೊಂದು ಆಶ್ಚರ್ಯ ಕಾದಿತ್ತು. ಅರಸು ನನ್ನನ್ನು ನೋಡಿ, ‘ನೀವು ಮಹದೇವಯ್ಯನವರ ಸಂಬಂಧಿ ಶ್ರೀನಿವಾಸ್ ಅಲ್ವಾ?’ ಎಂದರು. ನಾನವರ ಭೇಟಿ ಮಾಡಿ ಅಲ್ಲಿಗೆ ನಾಲ್ಕು ವರ್ಷವಾಗಿತ್ತು. ಆದರೂ ಹೆಸರಿಡಿದು ಕರೆದಿದ್ದು, ಅವರೆಡೆಗೆ ಆಕರ್ಷಿತನಾಗಲು ಪ್ರೇರೇಪಿಸಿತು. ಕಷ್ಟ-ನಷ್ಟಕ್ಕೊಳಗಾದ ಜನರ ಬಗ್ಗೆ ತೋರಿದ ಅನುಕಂಪ, ಕಾಳಜಿ.. ಅವರನ್ನು ಇಷ್ಟಪಡಲು ಕಾರಣವಾಯಿತು. ಜಿಲ್ಲಾಧಿಕಾರಿಯನ್ನುದ್ದೇಶಿಸಿ ಅರಸು, ‘‘ನೋಡಿ, ನೀವು ಏನು ಮಾಡ್ತೀರೋ ಗೊತ್ತಿಲ್ಲ. ಪರಿಹಾರ ಕಾರ್ಯ ಸಮರೋಪಾದಿಯಲ್ಲಿ ನಡೆಯಬೇಕು. ಹಣಕಾಸಿಗಾಗಿ ಸರಕಾರದ ಆದೇಶಕ್ಕೆ ಕಾಯದೆ, ಸದ್ಯ ನಿಮ್ಮಲ್ಲಿರುವ ಹಣವನ್ನೇ ಬಳಸಿಕೊಂಡು, ಜನರ ನೆರವಿಗೆ ನಿಲ್ಲಬೇಕು’’ ಎಂದು ಆದೇಶಿಸಿದರು. ಅಷ್ಟೇ ಅಲ್ಲ, ‘‘ಆರು ತಿಂಗಳ ನಂತರ ಬರುತ್ತೇನೆ, ಮನೆ ಕಳೆದುಕೊಂಡವರಿಗೆ ಪರಿಹಾರ ನೀಡಿ, ಪುನರ್ವಸತಿ ಕಲ್ಪಿಸಿರಬೇಕು’’ ಎಂದವರು ಹೇಳಿದ ಹಾಗೆಯೇ, ಆರು ತಿಂಗಳು ಬಿಟ್ಟು ಬಂದರು. ನಮ್ಮ ಜಿಲ್ಲಾಧಿಕಾರಿ ಅರೋರಾ ಕೂಡ ಬದ್ಧತೆ ಇದ್ದ ಅಧಿಕಾರಿ. ನಮ್ಮನ್ನೆಲ್ಲ ಬಳಸಿಕೊಂಡು, ಆರು ತಿಂಗಳೊಳಗಾಗಿ ಸಂತ್ರಸ್ಥರಿಗೆ ಪುನರ್ವಸತಿ ಕಲ್ಪಿಸಿದ್ದರು. ಅದನ್ನು ಕಂಡ ಅರಸು ಅರೋರಾ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಸರಕಾರದ ಹಣಕ್ಕಾಗಿ ಕಾಯಬೇಡಿ, ಏನು ಮಾಡ್ತೀರೋ ಗೊತ್ತಿಲ್ಲ, ಆರು ತಿಂಗಳ ನಂತರ ಬರುತ್ತೇನೆ.... ಈ ಮಾತುಗಳಿವೆ ಯಲ್ಲ, ಇವು ಒಬ್ಬ ಬದ್ಧತೆಯುಳ್ಳ ರಾಜಕಾರಣಿಯ ಮಾತುಗಳು. ಅದಕ್ಕಿಂತಲೂ ಮುಖ್ಯವಾಗಿ ಕಷ್ಟ ಅಂದ ಕೂಡಲೇ ಸ್ಪಂದಿಸುತ್ತಿದ್ದ ರೀತಿ ಇದೆಯಲ್ಲ... ಮಹಾನ್ ಮಾನವತಾವಾದಿಯ ಗುಣವದು. ಅದು ಅರಸರಲ್ಲಿತ್ತು.


ನಿಜವಾದ ಮಣ್ಣಿನ ಮಗ ಯಾರೇನೇ ಹೇಳಲಿ, ಯಾರಿಗೆ ಎಂತಹ ಬಿರುದಾದರೂ ಇರಲಿ... ನನ್ನ ಪ್ರಕಾರ ನಿಜವಾದ ಮಣ್ಣಿನ ಮಗ ದೇವರಾಜ ಅರಸು. ಅವರಿಗೆ ಬೇಸಾಯ, ಬೆಳೆ, ಮಳೆ, ಮಾರುಕಟ್ಟೆ ಬಗ್ಗೆ ಅಪಾರ ಅನುಭವವಿತ್ತು. ಧುತ್ತೆಂದು ಎದುರಾಗುವ ಅತಿವೃಷ್ಟಿ-ಅನಾವೃಷ್ಟಿಗಳ ಬಗ್ಗೆ ಅರಿವಿತ್ತು. ಕೃಷಿ ಕುಟುಂಬಗಳ ಕಷ್ಟ-ನಷ್ಟಗಳನ್ನು ಕಣ್ಣಾರೆ ಕಂಡಿದ್ದರು. ಹಾಗಾಗಿಯೇ ಅವರ ಬದುಕನ್ನು ಹಸನುಗೊಳಿಸಬೇಕೆಂದು ಹಗಲಿರುಳು ಚಿಂತಿಸುತ್ತಿದ್ದರು. ಅದಕ್ಕೊಂದು ಉತ್ತಮ ಉದಾಹರಣೆ ಭೂ ಸುಧಾರಣಾ ಕಾಯ್ದೆ. ನಾನು ಸಾಗರದಲ್ಲಿ ಎಸಿಯಾಗಿ ಕಾರ್ಯ ನಿರ್ವಹಿಸುತ್ತಿ ದ್ದಾಗ, ಅರಸರು ಭೂ ಸುಧಾರಣಾ ಕಾಯ್ದೆಯನ್ನು ಜಾರಿಗೆ ತಂದರು. ಸಾಗರ... ಗೇಣಿದಾರರ ಹೋರಾಟದ ಕರ್ಮಭೂಮಿ. ಗಣಪತಿಯಪ್ಪ, ಎಲ್.ಟಿ.ತಿಮ್ಮಪ್ಪ ಹೆಗಡೆ, ಕಾಗೋಡು ತಿಮ್ಮಪ್ಪ, ಬಂಗಾರಪ್ಪ, ಕೊಣಂದೂರು ಲಿಂಗಪ್ಪರಂತಹ ಘಟಾನುಘಟಿ ಹೋರಾಟಗಾರರ ಊರು. ಇವರಲ್ಲಿ ಕೆಲವರು ಶಾಸಕರಾಗಿ ವಿರೋಧ ಪಕ್ಷದಲ್ಲಿದ್ದರು. ಆದರೆ ಅರಸರ ಗೇಣಿ ಕಾಯ್ದೆ ಪರವಿದ್ದರು. ಆಗ ಅಧಿಭೋಗದಾರಿಕೆ (ಆಕ್ಯುಪೇಷನ್ ರೈಟ್)ಗಾಗಿ ಅರ್ಜಿ ಹಾಕಲು ಸರಕಾರ ಗೇಣಿದಾರರಿಗೆ ಸೂಚಿಸಿತ್ತು. ಅದರಂತೆ ಗೇಣಿದಾರ ರೈತರು ಅರ್ಜಿ ಹಾಕಿದ್ದರು. ಆಗ ದೇವರಾಜ ಅರಸು ಅವರ ಸರಕಾರದಿಂದ ಅಧಿಕಾರಿಗಳಿಗೆ ಒಂದು ಖಡಕ್ ಸಂದೇಶ ರವಾನೆಯಾಗಿತ್ತು. ಅದೇನೆಂದರೆ, ಗೇಣಿದಾರರು ಹಾಕಿದ ಅರ್ಜಿ, ಒಂದೇ ಒಂದು ಅರ್ಜಿ ತಿರಸ್ಕೃತಗೊಂಡರೂ ಸರಿ, ಸರಕಾರಕ್ಕೆ ಆ ತಕ್ಷಣ ವರದಿ ಕಳುಹಿಸಬೇಕು ಎಂದು. ಇಂತಹ ಖಡಕ್ ಆದೇಶವನ್ನು ಇಲ್ಲಿಯವರೆಗಿನ ಯಾವ ಸರಕಾರದಿಂದ ಕಾಣಲೂ ಇಲ್ಲ, ಕೇಳಲೂ ಇಲ್ಲ.

ನಾನಿದ್ದ ಸಾಗರದಲ್ಲಿ ಭೂ ಮಾಲಕರು ಹೆಚ್ಚಾಗಿ ಲಿಂಗಾಯತರು ಮತ್ತು ಹವ್ಯಕ ಬ್ರಾಹ್ಮಣರಾಗಿದ್ದರು. ಅವರ ಭೂಮಿಯಲ್ಲಿ ಗೇಣಿಗೆ ದುಡಿಯುತ್ತಿದ್ದವರು ಬಡ ಬೆಸ್ತರು, ಈಡಿಗರು, ನಾಯಕರು, ದಲಿತರೇ ಆಗಿದ್ದರು. ಇಂತಹ ಬಡವರಿಂದ 6,900 ಅರ್ಜಿಗಳು ಬಂದಿದ್ದವು. ಅದರಲ್ಲಿ ನಾಲ್ಕೈದು ಮಾತ್ರ ತಿರಸ್ಕೃತಗೊಂಡಿದ್ದವು. ನಾನು ಆ ತಕ್ಷಣವೇ ವರದಿ ಕಳುಹಿಸಿದ್ದೆ. ಇದೇ ಸಮಯದಲ್ಲಿ ದೇವರಾಜ ಅರಸು ಸಾಗರಕ್ಕೆ ಬಂದರು. ಅವರು ಬಂದಿದ್ದನ್ನು ಕಂಡ ಭೂ ಮಾಲಕರ ಒಂದು ಗುಂಪು ಕೃಷ್ಣಮೂರ್ತಿ ಎಂಬವರ ನೇತೃತ್ವದಲ್ಲಿ ಅವರನ್ನು ಭೇಟಿ ಮಾಡಿ, ನನ್ನ ವಿರುದ್ಧ ದೂರು ನೀಡಿದ್ದರು. ‘‘ಈ ಎಸಿ ಕಾಗೋಡು ತಿಮ್ಮಪ್ಪನವರು ಹೇಳಿದ ಹಾಗೆ ಕೇಳ್ತಾರೆ, ನಾವು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು, ಆದರೂ ನಮ್ಮದೇನೂ ನಡೆಯದಂತಾಗಿದೆ, ನಿಮ್ಮ ಅಧಿಕಾರಿಗೆ ಸ್ವಲ್ಪ ಹೇಳಿ’’ ಎಂದು ಮನವಿ ಮಾಡಿಕೊಂಡಿದ್ದರು. ನಾನು ಹೋಗಿ ಅರಸರ ಮುಂದೆ ನಿಂತಾಗ, ‘‘ಏನ್ ಶ್ರೀನಿವಾಸ್, ವಿವೇಚಿಸದೆ ಕಾಗೋಡು ತಿಮ್ಮಪ್ಪ ಹೇಳಿದಂತೆ ಕೇಳ್ತಿಯಂತೆ, ಏನ್ ನೋಡಪ್ಪ’’ ಎಂದರು. ನಾನು, ‘‘ಕಾಯ್ದೆ ಕಾನೂನು ಇರೋದು ರೈತರ ಪರ, ಸರಕಾರ ರೈತರ ಪರ, ಕಾಗೋಡು ತಿಮ್ಮಪ್ಪನವರು ರೈತರ ಪರ.. ನಾನು ಕಾನೂನು ಪ್ರಕಾರ ಮಾಡಿದೀನಿ’ ’ಎಂದೆ. ಅದಕ್ಕವರು, ‘‘ಸ್ವಲ್ಪ ನೋಡಿ ಮಾಡಕೊಂಡೋಗಿ’’ ಎಂದರು. ನಾನು ಏಕೆ ಈ ಮಾತು ಹೇಳುತ್ತಿದ್ದೇನೆಂದರೆ, ಅರಸು ಬಡವರ ಪರ. ಹಾಗಂತ ಭೂ ಮಾಲಕರ ವಿರುದ್ಧವಲ್ಲ. ಅವರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು, ಕಾನೂನನ್ನೂ ಬಳಸಿ ಬಡ ರೈತರಿಗೆ ಭೂಮಿ ಹಕ್ಕು ಕೊಡಿಸಿದ್ದು ಅರಸರ ಚಾಣಾಕ್ಷ ರಾಜಕೀಯ ನಡೆ ಎಂತಲೇ ವ್ಯಾಖ್ಯಾನಿಸಬೇಕು. ಅಜ್ಜಿ ಸ್ಥಿತಿ ಕಂಡು ಕಣ್ಣೀರು ಹಾಕಿದ ಅರಸು

ತುಮಕೂರಿನಲ್ಲಿ ಎಸಿಯಾಗಿದ್ದಾಗ ನಡೆದ ಘಟನೆ ಇದು. ಆಗ ನನ್ನ ಮೇಲಧಿಕಾರಿ ಡಿಸಿ ಸಿ.ಮುನಿಸ್ವಾಮಿ, ಕೋಲಾರದವರು. ತುಮಕೂರು ಬಳಿಯ ಮರಳೂರು ದಿಣ್ಣೆ ಎಂಬಲ್ಲಿ ಸರಕಾರದ 80 ಎಕರೆ ಗೋಮಾಳವಿತ್ತು. ಯಾರೋ ಕೆಲವು ಪುಂಡು ಪುಢಾರಿಗಳು, ಬಡವರನ್ನು ಹುರಿದುಂಬಿಸಿ, ಶೆಡ್ ನಿರ್ಮಿಸಿ, ಅದನ್ನು ನಿಮಗಾಗುವಂತೆ ಮಾಡಿಸು ತ್ತೇವೆಂದು ಉಬ್ಬಿಸಿದ್ದರು. ಅದರಂತೆ ಅವರೆಲ್ಲ ರಾತ್ರೋರಾತ್ರಿ ಶೆಡ್ ಹಾಕಿ, ಭಾವುಟ ಹಿಡಿದು ಧರಣಿ ಕೂತಿದ್ದರು. ಇದು ಜಿಲ್ಲಾಧಿಕಾರಿಗಳ ಗಮನಕ್ಕೆ ಬಂತು. ಮುನಿಸ್ವಾಮಿಯವರು ನನ್ನನ್ನು ಕರೆದು, ‘‘ನೋಡಿ, ಈಗ 9:30, ನಾನು 1:30ಕ್ಕೆ ಸ್ಪಾಟ್‌ಗೆ ಬರುತ್ತೇನೆ, ಅಷ್ಟರೊಳಗೆ ಆ ಶೆಡ್‌ಗಳನ್ನು ಕ್ಲಿಯರ್ ಮಾಡಿರಬೇಕು. ಅದಕ್ಕೆ ಏನು ಬೇಕೋ ಅದೆಲ್ಲವನ್ನು ತೆಗೆದು ಕೊಂಡು ಹೋಗಿ’’ ಎಂದು ಪೊಲೀಸ್ ಭದ್ರತೆ, ಕೆಲಸಗಾರರು, ಯಂತ್ರೋಪಕರಣಗಳು ಎಲ್ಲವನ್ನು ಕೊಟ್ಟಿದ್ದರು. ನಾನು ಅವುಗಳ ಸಹಾಯದಿಂದ 1:30ರೊಳಗೆ ಆ ಪ್ರದೇಶದಲ್ಲಿದ್ದ ಶೆಡ್‌ಗಳನ್ನು ತೆರವುಗೊಳಿಸಿ, ಕ್ಲೀನ್ ಮಾಡಿಸಿಟ್ಟಿದ್ದೆ. ಅಲ್ಲಿಗೆ ಡಿಸಿ ಮುನಿಸ್ವಾಮಿ ಬಂದರು, ಸ್ಥಳಕ್ಕೆ ಪಂಚಾಯತ್ ಚೇರ್ಮನ್ ಕರೆಸಿದರು. ನನ್ನತ್ತ ತಿರುಗಿ, ‘‘20ಗಿ

30 ಅಳತೆಯ ಎಷ್ಟು ಸೈಟ್‌ಗಳಾಗುತ್ತವೆ ನೋಡಿ’’ ಎಂದರು. ನಾನು ಅಳತೆ ಮಾಡಿಸಿದಾಗ 900 ಚಿಲ್ಲರೆ ಸೈಟ್‌ಗಳಾದವು. ಆಗ ಮುನಿಸ್ವಾಮಿಯವರು, ‘‘ಈ ನಿವೇಶನಗಳನ್ನು ಬಡವರಿಗೆ ವಿತರಿಸೋಣ, ವಿತರಣೆಗೆ ಮುಖ್ಯಮಂತ್ರಿ ದೇವರಾಜ ಅರಸರನ್ನು ಕರೆಯೋಣ’’ ಎಂದರು. ಅದರಂತೆ ಕಾರ್ಯಕ್ರಮ ಫಿಕ್ಸ್ ಆಯಿತು. ಅಲ್ಲಿಯೇ ಪುಟ್ಟ ವೇದಿಕೆ ಯೂ ನಿರ್ಮಾಣವಾಯಿತು. 4 ಗಂಟೆಗೆ ಬರಬೇಕಿದ್ದ ಅರಸು 6 ಗಂಟೆಗೆ ಬಂದರು. ಆದರೂ ಫಲಾನುಭವಿಗಳು ಕಾದು ಕುಳಿತಿದ್ದರು. ನಿವೇಶನ ವಿತರಣೆಯ ಸಂದರ್ಭದಲ್ಲಿ, ಒಬ್ಬ ವಯಸ್ಸಾದ ಮುದುಕಿ, ದೊಣ್ಣೆ ಊರಿಕೊಂಡು ಬಂದು ಅರಸರಿಂದ ಹಕ್ಕುಪತ್ರ ಪಡೆಯುವಾಗ, ‘‘ಬುದ್ಧಿ, ವೃದ್ಧಾಪ್ಯ ವೇತನ 60 ರೂಪಾಯಿ ಬರ್ತಿದೆ, ಮಕ್ಕಳ್ಯಾರೂ ನೋಡ್ತಾಯಿಲ್ಲ, ಮೊಮ್ಮಗ ಇದಾನೆ, ಭಿಕ್ಷೆ ಬೇಡಕ್ಕೋಗ್ತನೆ...’’ ಎಂದರು. ಮುದುಕಿನ ಸ್ಥಿತಿಯನ್ನು ಧ್ಯಾನಿಸಿದ ಅರಸು ಗಳಗಳನೆ ಅತ್ತುಬಿಟ್ಟರು. ನಿಂತ ನಿಲುವಿನಲ್ಲಿಯೇ ಅಧಿಕಾರಿಗಳನ್ನು ಕರೆದು, ‘‘ಅಜ್ಜಿಗೆ ನಿವೇಶನ ಕೊಡುವುದಲ್ಲ, ಮನೆ ಕಟ್ಟಿಕೊಡಿ’’ ಎಂದು ಆದೇಶಿಸಿದರು. ಬಡವರನ್ನು ಕಂಡರೆ ಅರಸರ ಕರುಳು ಚುರ್ ಎನ್ನುತ್ತಿತ್ತು. ಬಡತನ ನಿವಾರಣೆಗೆ ಹತ್ತು ಹಲವು ಕಾರ್ಯಕ್ರಮಗಳನ್ನು, ಯೋಜನೆಗಳನ್ನು ರೂಪಿಸಿದರು. ಅವರನ್ನು ಆರ್ಥಿಕವಾಗಿ ಮೇಲೆತ್ತಲು ಹಗಲಿರುಳು ಶ್ರಮಿಸಿದರು. ಇದು ನನ್ನ ಸೇವಾವಧಿಯಲ್ಲಿ ನಾನು ಕಂಡ, ಎಂದೆಂದಿಗೂ ಮರೆಯಲಾಗದ ಅರಸರ ಮಾನವೀಯ ಮುಖ. ಏನಾದ್ರು ಮಾಡಬೇಕು..

1981ರಲ್ಲಿ ನಾನು ಬೆಂಗಳೂರಿನಲ್ಲಿ, ವಿಧಾನಸೌಧದಲ್ಲಿ ಅಧೀನ ಕಾರ್ಯದರ್ಶಿಯಾಗಿ ಸೇವೆಯಲ್ಲಿದ್ದೆ. ಆಗ ಗುಂಡೂರಾವ್ ಮುಖ್ಯಮಂತ್ರಿ, ದೇವರಾಜ ಅರಸು ವಿರೋಧ ಪಕ್ಷದ ನಾಯಕರು. ಆ ಸಮಯದಲ್ಲಿ ನನ್ನ ಪರಿಚಿತರೊಬ್ಬರು 6 ಡಬ್ಬಿ ಪ್ರಿನ್ಸ್ ಟೊಬ್ಯಾಕೋ ತಂದುಕೊಟ್ಟರು. ಆ ಸಂದರ್ಭದಲ್ಲಿ, ನಮ್ಮ ರಾಜ್ಯದಲ್ಲಿ, ನನಗೆ ಗೊತ್ತಿದ್ದಂತೆ, ದೇವರಾಜ ಅರಸರನ್ನು ಬಿಟ್ಟರೆ ಬೇರಾರೂ ಪೈಪ್ ಸೇದುತ್ತಿರಲಿಲ್ಲ. ಹಾಗಾಗಿ ನನಗೆ ತಕ್ಷಣಕ್ಕೆ ಹೊಳೆದದ್ದು ಅರಸರೆ. ಆ ಡಬ್ಬಿಯ ನೆಪದಲ್ಲಾದರೂ ಅವರನ್ನು ನೋಡಬಹುದಲ್ಲ ಎಂದು, ಅವರಿದ್ದ ಕ್ರೆಸೆಂಟ್ ರಸ್ತೆಯ ಅವರ ಮನೆಗೆ ಹೋದೆ. ಅದು ಮೇ 20, 1982ರ ಆಜುಬಾಜು. ಸಂಜೆ ಐದೂಮುಕ್ಕಾಲು. ಯಾರೂ ಇರಲಿಲ್ಲ. ಒಳಗೆ ಹೋದೆ. ತೆಳುವಾದ ಕಾಟನ್ ಬಟ್ಟೆಯ ಅರ್ಧ ತೋಳಿನ ಬನಿಯನ್ ಹಾಕ್ಕೊಂಡು ಒಬ್ಬರೇ ಕೂತಿದ್ದಾರೆ. ನನ್ನನ್ನು ಗುರುತು ಹಿಡಿದ ಅರಸು, ‘‘ಏನ್ ಶ್ರೀನಿವಾಸ್, ಹೇಗಿದ್ದೀರ’’ ಎಂದರು. ‘‘ಚೆನ್ನಾಗಿದೀನಿ ಬುದ್ಧಿ’’ ಅಂದೆ. ‘‘ಟೀ ಕುಡಿರಿ’’ ಎಂದರು. ಅವರ ಮುಂದೆ ನಿಲ್ಲೋದು, ಕೂತ್ಕೊಳ್ಳೋದು ಎಲ್ಲವೂ ಮುಜುಗರ. ಆ ಸ್ಥಿತಿಯಲ್ಲಿಯೇ ಕೂತು ಟೀ ಕುಡಿದೆ. ಆಮೇಲೆ ಟೊಬ್ಯಾಕೋ ಕೊಟ್ಟೆ. ಅವರೂ ಟೀ ಕುಡಿದು ಪೈಪ್‌ನ ಕುಟ್ಟಿ ಕಿಟ್ಟ ತೆಗೆದು ಹೊಸದಾಗಿ ಟೊಬ್ಯಾಕೋ ತುಂಬಿ ಪೈಪ್ ಹಚ್ಚಿದರು. ಒಂದು ಧಂ ಎಳೆದು, ‘ಯಾವುದರಲ್ಲಿ ಬಂದಿದ್ದೀರಾ’ ಎಂದರು. ಆಗ ನನ್ನ ಬಳಿ ಫಿಯೆಟ್ ಕಾರಿತ್ತು. ಕಾರಲ್ಲಿ ಎಂದೆ. ‘‘ಏನಾದ್ರು ಕೆಲಸ ಇದೆಯಾ’’ ಎಂದರು. ಇಲ್ಲ ಅಂದೆ. ‘‘ಇಲ್ಲೇ ಹೋಗಿಬರೋಣ, ಬನ್ನಿ’’ ಎಂದರು.


ನಾನು ಕಾರಿನ ಹಿಂದಿನ ಡೋರ್ ತೆಗೆದು, ಕೂರಿ ಎಂದು ಹೇಳುವಂತೆ ಅವರ ಮುಖ ನೋಡಿದೆ. ಅವರು, ‘‘ಇಲ್ಲ ಮುಂದೆಯೇ ಕೂತ್ಕೋತೀನಿ’’ ಎಂದು ಕೂತರು. ‘‘ದೇವನಹಳ್ಳಿ ಕಡೆ ನಡಿರಿ’’ ಎಂದರು. ಹೋಗ್ತಾಯಿದ್ದ ಹಾಗೆ ‘‘ಪೆಟ್ರೋಲ್ ಇದೆಯಾ’’ ಎಂದರು. ಅದೇಕೋ ತುಂಬಾ ಬೇಸರದ ಮೂಡ್‌ನಲ್ಲಿದ್ದರು. ಅವರ ಪ್ರತಿ ಮಾತಿನಲ್ಲೂ ನೋವು, ವಿಷಾದ ಮಡುಗಟ್ಟಿತ್ತು. ದೇವನಹಳ್ಳಿ ಹತ್ತಿರದ ವೆಂಕಟಗಿರಿ ಕೋಟೆಯ ದೊಡ್ಡ ಕೆರೆ ಬಳಿ ಕಾರು ನಿಲ್ಲಿಸಲು ಹೇಳಿದರು. ಕೆರೆ ಏರಿ ಹತ್ತಿ ನಿಂತರು. ಏರಿ ಮೇಲಿನ ಕಲ್ಲು ಬೆಂಚಿನ ಮೇಲೆ ಕೂತು ಕೆರೆಯನ್ನು ಧ್ಯಾನಸ್ಥ ಸ್ಥಿತಿಯಲ್ಲಿ ದಿಟ್ಟಿಸತೊಡಗಿದರು. ಪಕ್ಕದಲ್ಲಿದ್ದ ಕಲ್ಲು ಬೆಂಚನ್ನು ತೋರಿಸಿ, ಕೂತ್ಕೋ ಅಂದು ಮತ್ತೆ ಪೈಪ್ ಹಚ್ಚಿದರು. ‘‘ಜನಸಾಮಾನ್ಯರಿಗಾಗಿ ಏನೇನು ಮಾಡಬೇಕಾಗಿತ್ತು, ಅದೆಲ್ಲವನ್ನು ಮಾಡಲಾಗಲಿಲ್ಲ’’ ಎಂದು ವೌನವಾದರು. ‘‘ವಿಶೇಷವಾಗಿ ನೇಕಾರರು, ಬೆಸ್ತರು, ಮಡಿವಾಳರ ಬಗ್ಗೆ ಮಾಡಬೇಕಿತ್ತು..’’ ಅಂದು ಆರ್ಥಿಕವಾಗಿ, ಸಾಮಾಜಿಕವಾಗಿ ತುಂಬ ವಿವರವಾಗಿ ಮಾತನಾಡಿದರು. ಆಮೇಲೆ ಏನನ್ನಿಸಿತೋ, ‘‘ನೀನು ಅಲ್ಲಿದ್ದೀಯಾ, ನೀನೇ ಯಾಕೆ ಸಿಎಂಗೆ ಒಂದು ಮಾತು ಹೇಳಬಾರದು’’ ಅಂದರು. ‘‘ನಾನು ಅಧೀನ ಅಧಿಕಾರಿ ಬುದ್ಧಿ, ನನ್ನ ಮಾತು ಅವರು ಹೇಗೆ ರಿಸೀವ್ ಮಾಡ್ತರೋ ಏನೋ’’ ಅಂದೆ. ಸುಮ್ಮನಾದರು. ಮತ್ತೆ ನಾನೆ, ‘‘ನೀವೊಂದು ಪತ್ರ ಬರೆದು ಕೊಡಿ, ಅದನ್ನು ತಗೊಂಡುಹೋಗಿ ಗುಂಡೂರಾವ್‌ರಿಗೆ ಕೊಟ್ಟು, ಅರಸು ಪತ್ರ ಕೊಟ್ಟಿದಾರೆ, ಇಂಥಿಂಥ ಕೆಲಸ ಆಗಬೇಕಂತೆ, ಅಂತ ಹೇಳತೀನಿ’’ ಅಂದೆ. ಆಗಲಿ ಎಂದ ಅರಸು, ಒಂದೆರಡು ದಿನದಲ್ಲಿ ಯಾವ್ಯಾವ ಸಮುದಾಯಗಳು ಹಿಂದುಳಿದಿವೆ, ಅವುಗಳನ್ನು ಮೇಲೆತ್ತಲು ಎಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು, ಸರಕಾರ ಮತ್ತು ಅಧಿಕಾರಿಗಳು ಆ ಕಾರ್ಯಕ್ರಮಗಳಿಗೆ ಹೇಗೆ ಸ್ಪಂದಿಸಬೇಕು ಎಂಬುದೆಲ್ಲವನ್ನು ಕ್ರೋಡೀಕರಿಸಿ ದೊಡ್ಡ ಪತ್ರವನ್ನು ಬರೆದು ಕಳುಹಿಸಿಕೊಟ್ಟರು. ನಾನು ಅದನ್ನು ತೆಗೆದುಕೊಂಡುಹೋಗಿ ಗುಂಡೂರಾಯರಿಗೆ ಕೊಟ್ಟು, ಹೇಳಿದೆ. ಅದಕ್ಕವರು ತುಂಬಾ ಸಂತೋಷದಿಂದಲೇ ಫೋನ್ ಮಾಡಿ ಮಾತನಾಡಲು ನೋಡಿದರು, ಸಿಗಲಿಲ್ಲ. ಅಷ್ಟೇ... ಅದಾದ ಹದಿನೈದು ದಿನಕ್ಕೆ ಅರಸು ಇನ್ನಿಲ್ಲ ಎಂಬ ಸುದ್ದಿ ಬಂತು.

ಯಾರೇನೆ ಹೇಳಲಿ, ಯಾರಿಗೆ ಎಂತಹ ಬಿರುದಾದರೂ ಇರಲಿ... ನನ್ನ ಪ್ರಕಾರ ನಿಜವಾದ ಮಣ್ಣಿನ ಮಗ ದೇವರಾಜ ಅರಸು. ಅವರಿಗೆ ಬೇಸಾಯ, ಬೆಳೆ, ಮಳೆ, ಮಾರುಕಟ್ಟೆ ಬಗ್ಗೆ ಅಪಾರ ಅನುಭವವಿತ್ತು. ಧುತ್ತೆಂದು ಎದುರಾಗುವ ಅತಿವೃಷ್ಟಿ-ಅನಾವೃಷ್ಟಿಗಳ ಬಗ್ಗೆ ಅರಿವಿತ್ತು. ಕೃಷಿ ಕುಟುಂಬಗಳ ಕಷ್ಟ-ನಷ್ಟಗಳನ್ನು ಕಣ್ಣಾರೆ ಕಂಡಿದ್ದರು. ಹಾಗಾಗಿಯೇ ಅವರ ಬದುಕನ್ನು ಹಸನುಗೊಳಿಸಬೇಕೆಂದು ಹಗಲಿರುಳು ಚಿಂತಿಸುತ್ತಿದ್ದರು.

Writer - ನಿರೂಪಣೆ: ಬಸು ಮೇಗಲ್ಕೇರಿ

contributor

Editor - ನಿರೂಪಣೆ: ಬಸು ಮೇಗಲ್ಕೇರಿ

contributor

Similar News