ಸಮಾನ ಶ್ರೇಣಿ ಸಮಾನ ಪಿಂಚಣಿ ಪೊಳ್ಳು ಭರವಸೆಗಳು

Update: 2016-11-11 18:34 GMT

ಲೋಕಸಭೆ ಈಗಾಗಲೇ ಅರ್ಥನಿರೂಪಣೆ ಮಾಡಿರುವಂತೆ ಸ.ಶ್ರೇ.ಸ.ಪಿಂ. ಅಂದರೆ: ಯಾವುದೇ ದಿನ ನಿವೃತ್ತಿ ಹೊಂದಿದರೂ ಸಮಾನ ಸೇವಾವಧಿ ಮತ್ತು ಸಮಾನ ಶ್ರೇಣಿ ಉಳ್ಳವರಿಗೆಲ್ಲ ಸಮಾನ ಪಿಂಚಣಿ. ಇದು ಎಲ್ಲಾ ಪಿಂಚಣಿದಾರರಿಗೂ ಅನ್ವಯಿಸುತ್ತದೆ. ಆದರೆ ಮೋದಿ ಸರಕಾರ ಇದನ್ನು ತಿರುಚಿ ಪಿಂಚಣಿ ಹೆಚ್ಚಳ ಕೇವಲ ಒಂದು ಸಲಕ್ಕೆ ಮಾತ್ರ ಎಂದಾಗಿಸಿದೆ! ಒಂದು ಬಾರಿ ಪಿಂಚಣಿ ಏರಿಸುವುದು ಖಂಡಿತಾ ಸ.ಶ್ರೇ.ಸ.ಪಿಂ. ಅಲ್ಲ. ಇದಲ್ಲದೆ ಪಿಂಚಣಿಯನ್ನು ಮೂರು ಅಥವಾ ಐದು ವರ್ಷಗಳಿಗೊಮ್ಮೆ ಏರಿಸುವುದಲ್ಲ, ಅದನ್ನು ಪ್ರತಿ ವರ್ಷವೂ ಸಮಾನವಾಗಿಸಬೇಕೆಂದಿದೆ. ಒಂದು ಬಾರಿಗೆ ಪಿಂಚಣಿ ಮೊತ್ತವನ್ನು ಏರಿಸಿದ ಮೋದಿ ಸರಕಾರ ಇದನ್ನೆ ಸ.ಶ್ರೇ.ಸ.ಪಿಂ. ಎನ್ನುವುದಾದರೆ 2006, 2009, 2012ರಲ್ಲಿ ಅಂದಿನ ಯುಪಿಎ ಸರಕಾರಗಳು ಒಂದೊಂದು ಬಾರಿ ಪಿಂಚಣಿ ಹೆಚ್ಚಿಸಿದ್ದನ್ನೂ ಸ.ಶ್ರೇ.ಸ.ಪಿಂ. ಅನುಷ್ಠಾನ ಎಂದು ಕರೆಯಬೇಕಲ್ಲವೆ?!

ಭಾರತೀಯ ಮಾಜಿ ಸೈನಿಕರ ಒಕ್ಕೂಟದ (Indian Ex-Servicemen Movement) ಸದಸ್ಯರು ಸಮಾನ ಶ್ರೇಣಿ ಸಮಾನ ಪಿಂಚಣಿ ಯೋಜನೆಯ (One Rank One Pensio್ಞ, ಸ.ಶ್ರೇ.ಸ.ಪಿಂ..) ಸಮರ್ಪಕ ಅನುಷ್ಠಾನಕ್ಕಾಗಿ ಆಗ್ರಹಿಸಿ 2015ರ ಜೂನ್‌ನಿಂದಲೂ ದಿಲ್ಲಿಯ ಜಂತರ್ ಮಂತರ್‌ನಲ್ಲಿ ಸರದಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ಅತ್ತ ಮೋದಿ ಸರಕಾರ ಸ.ಶ್ರೇ.ಸ.ಪಿಂ..(ಒ.ಆರ್.ಒ.ಪಿ.) ನೂರು ಪ್ರತಿಶತ ಅನುಷ್ಠಾನ ಆಗಿದೆ ಎಂದು ವಾದಿಸುತ್ತಿದೆ. ಇಂತಹ ಸನ್ನಿವೇಶದಲ್ಲಿ ಮೊನ್ನೆ ನವೆಂಬರ್ 1ರಂದು 70ರ ವಯೋವೃದ್ಧ ಸುಬೇದಾರ್ ರಾಮ್ ಕಿಶನ್ ಗ್ರೆವಾಲ್ ಆತ್ಮಹತ್ಯೆಗೆ ಶರಣಾದ ದುರ್ಘಟನೆ ನಡೆದಿದೆ. ಇದರ ಬಳಿಕ ಎಚ್ಚೆತ್ತುಕೊಂಡಂತಿರುವ ರಾಜಕಾರಣಿಗಳಿಂದ ಆರೋಪ, ಪ್ರತ್ಯಾರೋಪಗಳ ಸುರಿಮಳೆ ಪ್ರಾರಂಭವಾಗಿದೆ. ಪ್ರತಿಪಕ್ಷಗಳ ನಾಯಕರು ರಾಮ್ ಕಿಶನ್ ಸಾವಿನಲ್ಲಿ ತಮ್ಮ ರಾಜಕೀಯ ಬೇಳೆ ಬೇಯಿಸತೊಡಗಿದರೆ ಇತ್ತ ಸೇನಾಪಡೆಗಳ ಹೊಗಳುಭಟರೆಂದೆನಿಸಿರುವ ಮೋದಿಭಕ್ತರ ರಾಗದಲ್ಲಿ ಅಪಸ್ವರ ಶುರುವಾಗಿದೆ. ರಾಮ್ ಕಿಶನ್ ಆತ್ಮಹತ್ಯೆಗೆ, ಆತನ ಪುತ್ರ ಜಸ್ವಂತ್ ಹಾಗೂ ಕುಟುಂಬ ಸದಸ್ಯರನ್ನು ಪೊಲೀಸರು ಅವಾಚ್ಯವಾಗಿ ನಿಂದಿಸಿ, ಥಳಿಸಿ, ಠಾಣೆಗೆ ಕರೆದೊಯ್ದ ವಿದ್ಯಮಾನಗಳಿಗೆ ಅವರು ತಮ್ಮದೇ ಆದ ಬಣ್ಣ ಬಳಿಯುತ್ತಿದ್ದಾರೆ. ಕಳೆದ 2014ರ ಚುನಾವಣೆಗಳಲ್ಲಿ ಮಾಜಿ ಯೋಧರನ್ನು ಬಳಸಿಕೊಂಡ ಇವರಿಗೆ ಅವರ ನ್ಯಾಯೋಚಿತ ಸವಲತ್ತುಗಳಿಗಾಗಿರುವ ಬೇಡಿಕೆಗಳನ್ನು ಒಪ್ಪಲು ಯಾಕೆ ಸಾಧ್ಯವಾಗುತ್ತಿಲ್ಲ? ಅಂದರೆ ಹೊಗಳಿಕೆ, ಕಂಬನಿ, ಸಾಂತ್ವನ, ಸಮ್ಮಾನಗಳೆಲ್ಲ ಕೇವಲ ಸೇವಾನಿರತ ಮತ್ತು ಹುತಾತ್ಮ ಯೋಧರಿಗಷ್ಟೇ ಮೀಸಲೆಂದರ್ಥವೆ?

ಸಂಘ ಪರಿವಾರ ತನ್ನ ಕೇಸರೀಕರಣದ ಅಜೆಂಡಾದ ಭಾಗವಾಗಿ ಸೇನಾಪಡೆಗಳ ಮೇಲೆ ತೋರುತ್ತಾ ಬಂದಿರುವ ವಿಶೇಷ ಒಲವು 1999ರ ಕಾರ್ಗಿಲ್ ಯುದ್ಧದ ನಂತರ ತಾರಕಕ್ಕೇರಿದೆ. ಅಂದು ವಿಶ್ವ ಹಿಂದೂ ಪರಿಷತ್ತು ತನ್ನ ಹಲವಾರು ಪ್ರತಿನಿಧಿಗಳನ್ನು ಸೇನಾ ಕೇಂದ್ರ ಕಚೇರಿಗೆ ಕಳುಹಿಸುವ ದಾರ್ಷ್ಟ್ಯ ತೋರಿಸಿತ್ತು. ಆದರೆ ಆಗ ಸೇನಾ ಮುಖ್ಯಸ್ಥರಾಗಿದ್ದ ಜ ವಿ.ಪಿ.ಮಲಿಕ್ ರಾಜಕೀಯ ದುರ್ಲಾಭ ಪಡೆಯಹೊರಟ ವಿಹಿಂಪದ ಈ ಯತ್ನವನ್ನು ಯಶಸ್ವಿಯಾಗಿ ಹಿಮ್ಮೆಟ್ಟಿಸಿದ್ದರು. ತಾನು ಅಂದು ‘‘ನಾವು ರಾಜಕೀಯರಹಿತರು. ನಮ್ಮನ್ನು ನಮ್ಮಷ್ಟಕ್ಕೆ ಬಿಡಿ’’ ಎಂದು ಮಾಧ್ಯಮಗಳ ಮೂಲಕ ಸಂದೇಶ ರವಾನಿಸಿದ್ದ ವಿಷಯವನ್ನು ಮಲಿಕ್ ತಮ್ಮ ಪುಸ್ತಕವೊಂದರಲ್ಲಿ (Kargil: From Surprise to Victory) ದಾಖಲಿಸಿದ್ದಾರೆ. ಆದರೆ ನಂತರದಲ್ಲಿ ಸಂಘ ಪರಿವಾರ ಹೇಗೆ ಕಾರ್ಗಿಲ್ ಯುದ್ಧವನ್ನು ತನ್ನ ಸ್ವಾರ್ಥಕ್ಕೋಸ್ಕರ ಬಳಸುತ್ತಾ ಬಂದಿದೆ ಎನ್ನುವುದನ್ನು ನಾವೆಲ್ಲರೂ ನೋಡುತ್ತಿದ್ದೇವೆ. ಇವತ್ತು ಮೋದಿ, ಶಾ ಸಾರಥ್ಯದಲ್ಲಂತೂ ಅಳಿದುಳಿದ ಅಳುಕು, ಹಿಂಜರಿಕೆಗಳನ್ನೆಲ್ಲ ತೊರೆದು ನಿರ್ದಿಷ್ಟ ದಾಳಿಗಳನ್ನು ಇಮೇಜು ವೃದ್ಧಿಸಲು, ವೋಟು ಗಿಟ್ಟಿಸಲು ಬಳಸಿಕೊಳ್ಳುತ್ತಿರುವುದನ್ನು ಕಾಣುತ್ತಿದ್ದೇವೆ.

ಗೋಬೆಲ್ಸ್ ತಂತ್ರ

ಸ.ಶ್ರೇ.ಸ.ಪಿಂ.. ವಿಷಯಕ್ಕೆ ಸಂಬಂಧಿಸಿದಂತೆ ಮೋದಿ ಸರಕಾರದ ಪ್ರತಿನಿಧಿಗಳ ಅಧಿಕೃತ ಹೇಳಿಕೆಗಳನ್ನು ಮತ್ತು ವಾಸ್ತವಾಂಶಗಳನ್ನು ಹೋಲಿಸಿದಾಗ ಅವು ಒಂದಕ್ಕೊಂದು ತಾಳೆಯಾಗದಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ನಿಜ ಹೇಳಬೇಕೆಂದರೆ ಮೋದಿಯನ್ನೂ ಒಳಗೊಂಡಂತೆ ಇವರೆಲ್ಲರ ಹೇಳಿಕೆಗಳು ಸುಳ್ಳಿನ ಕಂತೆಗಳಂತೆ ಭಾಸವಾಗುತ್ತದೆ. ಮಾಜಿ ಯೋಧರ ಒಕ್ಕೂಟದ ಅಧ್ಯಕ್ಷರಾದ (ನಿ) ಮೇ ಜ ಸತ್ಬೀರ್ ಸಿಂಗ್ ಮತ್ತು ಅರ್ಥಮಂತ್ರಿ ಅರುಣ್ ಜೇಟ್ಲಿ ನಡುವಿನ ಸ್ವಾರಸ್ಯಕರ ಮಾತುಕತೆಯೊಂದು ಈ ವಿಷಯದ ಮೇಲೆ ಬಹಳಷ್ಟು ಬೆಳಕು ಚೆಲ್ಲುತ್ತದೆ. ‘‘ಸ.ಶ್ರೇ.ಸ.ಪಿಂ. ಯೋಜನೆಯನ್ನು ಪೂರ್ತಿಯಾಗಿ ಅನುಷ್ಠಾನಗೊಳಿಸಲಾಗುವುದೆಂದು ಬಿಜೆಪಿ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಿಲ್ಲವೆ’’ ಎಂದು ಸತ್ಬೀರ್ ಸಿಂಗ್ ಪ್ರಶ್ನಿಸಿದಾಗ ಜೇಟ್ಲಿ ಕೊಟ್ಟ ಉತ್ತರ ಅದ್ಭುತವಾಗಿದೆ: ‘‘ನೋಡಿ ಜನರಲ್, ರಾಜಕಾರಣಿಗಳಿಗೆ ತಾವು ಚುನಾವಣಾ ಕಾಲದಲ್ಲಿ ನೀಡುವ ಎಲ್ಲಾ ಭರವಸೆಗಳನ್ನು ಈಡೇರಿಸುವ ಉದ್ದೇಶ ಇರುವುದಿಲ್ಲ! ಅಂದಹಾಗೆ ಮೋದಿಯ ಇತ್ತೀಚಿನ ಅಮೆರಿಕ ಭೇಟಿಯ ಸಂದರ್ಭದಲ್ಲಿ ತನ್ನನ್ನು ಎನ್ನಾರೈಗಳ ಸಭೆಯಲ್ಲಿ ಭಾಷಣ ಮಾಡುವಂತೆ ಕೇಳಿಕೊಳ್ಳಲಾಗಿತ್ತಲ್ಲದೆ, ಮಾಜಿ ಯೋಧರ ಸತ್ಯಾ ಗ್ರಹಕ್ಕೆ 1 ಮಿಲಿಯ ಡಾಲರ್ ನೀಡುವ ಆಮಿಷ ಒಡ್ಡಲಾಗಿತ್ತು’’ ಎಂಬ ಸ್ಪೋಟಕ ಮಾಹಿತಿಯೊಂದನ್ನು ಸತ್ಬೀರ್ ಹೊರಗೆಡವಿದ್ದಾರೆ.

ಜೇಟ್ಲಿ ಹೀಗೆ ಹೇಳಿದರೆ ಅತ್ತ ಕೇಂದ್ರ ಗೃಹಮಂತ್ರಿಯಾಗಿ ಅತ್ಯಂತ ಜವಾಬ್ದಾರಿಯುತ ಸ್ಥಾನದಲ್ಲಿರುವ ರಾಜನಾಥ್ ಸಿಂಗ್, ‘‘ಬಹುಕಾಲದಿಂದ ಬಾಕಿಯಾಗಿದ್ದ ಸ.ಶ್ರೇ.ಸ.ಪಿಂ. ಸಮಸ್ಯೆಯನ್ನು ಮೋದಿ ಸರಕಾರ ಬಗೆಹರಿಸಿದೆ’’ ಎಂದು ಸುಳ್ಳು ಹೇಳಿಕೆ ನೀಡುತ್ತಾರೆ. ಇನ್ನು ಮಾಜಿ ಸೇನಾ ದಂಡನಾಯಕ, ಹಾಲಿ ವಿದೇಶ ವ್ಯವಹಾರಗಳ ಸಹಾಯಕ ಸಚಿವ ಜ ವಿ.ಕೆ.ಸಿಂಗ್ ಪ್ರಕಾರ ‘‘ಕಾಂಗ್ರೆಸ್ ಕಾರ್ಯಕರ್ತನಾಗಿದ್ದ ಸುಬೆದಾರ್ ರಾಮ್ ಕಿಶನ್ ಸರಪಂಚ ಚುನಾವಣೆಗೆ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ...... ಆತ್ಮಹತ್ಯೆಯ ಬಗ್ಗೆ ತೀರ್ಮಾನಕ್ಕೆ ಬರುವ ಮುನ್ನ ಆತನ ಮನಸ್ಥಿತಿ ಹೇಗಿತ್ತೆಂಬುದನ್ನು ತನಿಖೆಗೊಳಪಡಿಸಬೇಕಿದೆ...... ಆತ್ಮಹತ್ಯೆಗೆ ಗುಳಿಗೆ ಎಲ್ಲಿಂದ ಸಿಕ್ಕಿತೆಂದು ವಿಚಾರಿಸಬೇಕಿದೆ....... ಅತನ ಸಮಸ್ಯೆ ಸ.ಶ್ರೇ.ಸ.ಪಿಂ. ಅಲ್ಲ, ಬ್ಯಾಂಕ್.....’’ ಅಂತೆ! ರಾಮ್ ಕಿಶನ್ ಅಸ್ಥಿರ ಮನಸ್ಸಿನ ವ್ಯಕ್ತಿಯಾಗಿದ್ದ ಎಂಬರ್ಥದ ಮಾತುಗಳು ಅಸಂವೇದನೆಯನ್ನು ತೋರಿಸಿದರೆ ಆತ್ಮಹತ್ಯೆಯ ಹಿಂದೆ ಒಳಸಂಚನ್ನು ಸೂಚಿಸುವುದು, ಕಾಂಗ್ರೆಸ್ ಸದಸ್ಯತ್ವದ ವಿಷಯವನ್ನು ಎಳೆದುತರುವುದು ಧೂರ್ತತನ ವನ್ನು ಪ್ರದರ್ಶಿಸುತ್ತದೆ. ಮೋದಿ ಸರಕಾರದ ತುತ್ತೂರಿ ಮಾಧ್ಯಮಗಳಂತೂ ಯಾವೊಂದು ನೈತಿಕತೆಯಾಗಲಿ ವೃತ್ತಿಪರತೆಯಾಗಲಿ ಇಲ್ಲದೆ ಸ.ಶ್ರೇ.ಸ.ಪಿಂ. ಬಗ್ಗೆ ತಪ್ಪು ಮಾಹಿತಿಗಳನ್ನು ಹರಡುತ್ತಿವೆ. ಇಲ್ಲಿ ಜರ್ಮನಿಯ ಫ್ಯಾಶಿಸ್ಟ್ ಸರ್ವಾಧಿಕಾರಿ ಹಿಟ್ಲರ್‌ನ ಪ್ರಚಾರಮಂತ್ರಿ ಗೋಬೆಲ್ಸ್‌ನ ನೂರು ಬಾರಿ ಸುಳ್ಳನ್ನು ಪುನರುಚ್ಚರಿಸಿ ನಂಬಿಸುವ ತಂತ್ರ ಬಳಕೆಯಾಗು ತ್ತಿರುವುದು ಸುಸ್ಪಷ್ಟವಿದೆ.

ಪಿಂಚಣಿದಾರರಿಗೆ ದ್ರೋಹ

ರಂತ ಏನೆಂದರೆ ಸಂಘ ಪರಿವಾರದ ಬೋನಿಗೆ ಬಿದ್ದಿರುವ ಕೆಲವೊಂದು ಮಾಜಿ ಯೋಧರೂ ಸಹ ಮೋದಿ ಸರಕಾರ 2015ರ ಸೆಪ್ಟಂಬರ್‌ನಲ್ಲೇ ಸ.ಶ್ರೇ.ಸ.ಪಿಂ. ಜಾರಿಗೆ ಹಸಿರು ನಿಶಾನೆ ತೋರಿಸಿದೆ ಎಂದು ನಂಬಿ ಸರಕಾರವನ್ನು ಹಾಡಿ ಹೊಗಳುತ್ತಿದ್ದಾರೆ. ಆದರೆ ಅನುಷ್ಠಾನ ಆಗಿದೆಯೆ ಎಂದು ನೋಡಹೊರಟರೆ ಇಲ್ಲವೆಂದೇ ಹೇಳಬೇಕಾಗುತ್ತದೆ. ನಿಜ ಸಂಗತಿ ಏನೆಂದರೆ ಕೇವಲ ಒಂದು ಬಾರಿಗೆ ಪಿಂಚಣಿ ಮೊತ್ತವನ್ನು ಏರಿಸಿರುವ ಮೋದಿ ಸರಕಾರ ಅಸಲಿಗೆ ಸ.ಶ್ರೇ.ಸ.ಪಿಂ. ವಿಷಯದಲ್ಲಿ ಎಲ್ಲರಿಗೂ ದೊಡ್ಡ ಟೋಪಿ ಹಾಕಿದೆ. ಇದು ಹೇಗೆೆಂದರೆ ಲೋಕಸಭೆ ಈಗಾಗಲೆ ಅರ್ಥನಿರೂಪಣೆ ಮಾಡಿರುವಂತೆ ಸ.ಶ್ರೇ.ಸ.ಪಿಂ. ಅಂದರೆ: ಯಾವುದೇ ದಿನ ನಿವೃತ್ತಿ ಹೊಂದಿದರೂ ಸಮಾನ ಸೇವಾವಧಿ ಮತ್ತು ಸಮಾನ ಶ್ರೇಣಿ ಉಳ್ಳವರಿಗೆಲ್ಲ ಸಮಾನ ಪಿಂಚಣಿ. ಇದು ಎಲ್ಲಾ ಪಿಂಚಣಿದಾರರಿಗೂ ಅನ್ವಯಿಸುತ್ತದೆ. ಆದರೆ ಮೋದಿ ಸರಕಾರ ಇದನ್ನು ತಿರುಚಿ ಪಿಂಚಣಿ ಹೆಚ್ಚಳ ಕೇವಲ ಒಂದು ಸಲಕ್ಕೆ ಮಾತ್ರ ಎಂದಾಗಿಸಿದೆ! ಒಂದು ಬಾರಿ ಪಿಂಚಣಿ ಏರಿಸುವುದು ಖಂಡಿತಾ ಸ.ಶ್ರೇ.ಸ.ಪಿಂ. ಅಲ್ಲ. ಇದಲ್ಲದೆ ಪಿಂಚಣಿಯನ್ನು ಮೂರು ಅಥವಾ ಐದು ವರ್ಷಗಳಿಗೊಮ್ಮೆ ಏರಿಸುವುದಲ್ಲ, ಅದನ್ನು ಪ್ರತಿ ವರ್ಷವೂ ಸಮಾನವಾಗಿಸಬೇಕೆಂದಿದೆ. ಒಂದು ಬಾರಿಗೆ ಪಿಂಚಣಿ ಮೊತ್ತವನ್ನು ಏರಿಸಿದ ಮೋದಿ ಸರಕಾರ ಇದನ್ನೆ ಸ.ಶ್ರೇ.ಸ.ಪಿಂ. ಎನ್ನುವುದಾದರೆ 2006, 2009, 2012ರಲ್ಲಿ ಅಂದಿನ ಯುಪಿಎ ಸರಕಾರಗಳು ಒಂದೊಂದು ಬಾರಿ ಪಿಂಚಣಿ ಹೆಚ್ಚಿಸಿದ್ದನ್ನೂ ಸ.ಶ್ರೇ.ಸ.ಪಿಂ. ಅನುಷ್ಠಾನ ಎಂದು ಕರೆಯಬೇಕಲ್ಲವೆ?! ಹಿಂದೆ ಕಿರಿಯ ನಿಯೋಜಿತಾಧಿಕಾರಿ (ಜೆಸಿಒ) ಮತ್ತಿತರ ಶ್ರೇಣಿಗಳ ಯೋಧರಿಗೆಲ್ಲ ಜುಲೈ 2009ರಿಂದ ಜೂನ್ 2014ರ ತನಕ ಆಯಾ ಶ್ರೇಣಿಯ ಗರಿಷ್ಠ ವೇತನವನ್ನು ಪಿಂಚಣಿಯಾಗಿ ನಿಗದಿಪಡಿಸಲಾಗಿತ್ತು. ಆದರೆ ತದನಂತರ ಅಧಿಕಾರಕ್ಕೆ ಬಂದ ಮೋದಿ ಸರಕಾರ 2013ರ ಕನಿಷ್ಠ ಮತ್ತು ಗರಿಷ್ಠ ಪಿಂಚಣಿಗಳ ಸರಾಸರಿ ಮೊತ್ತವನ್ನು ಆಧಾರವಾ ಗಿಟ್ಟುಕೊಂಡು ಪಿಂಚಣಿಯನ್ನು ಲೆಕ್ಕಹಾಕಿರುವುದಲ್ಲದೆ ಪಿಂಚಣಿ ಬಾಕಿಯನ್ನು 2014ರ ಎಪ್ರಿಲ್‌ನಿಂದ ಹೆಚ್ಚಿಸುವ ಬದಲು ತಾನು ಮೇಯಲ್ಲಿ ಅಧಿಕಾರಕ್ಕೆ ಬಂದುದೆಂದು ಸಬೂಬು ಹೇಳಿ ಜುಲೈಯಿಂದ ಹೆಚ್ಚಿಸಿದೆ! ಎರಡನೆಯದಾಗಿ, ಸೇವಾವಧಿ ಮುಗಿಯುವುದಕ್ಕೆ ಮುನ್ನವೆ ನಿವೃತ್ತರಾಗುವವರಿಗೆ ಸ.ಶ್ರೇ.ಸ.ಪಿಂ. ಸೌಲಭ್ಯ ನಿರಾಕರಿಸಲಾಗಿದೆ. ಮಾತ್ರವಲ್ಲ ಸೇವೆಯ ವೇಳೆ ಮೃತಪಟ್ಟ ಯೋಧರ ವಿಧವೆಯರಿಗೆ ಮತ್ತು ಸೇವೆಯ ವೇಳೆ ಗಾಯಗೊಂಡು ಅಸಮರ್ಥರಾದ ಯೋಧರಿಗೆ ನೀಡಲಾಗುವ ಪಿಂಚಣಿಯನ್ನು ಸೇವಾವಧಿ ಜತೆ ಥಳಕು ಹಾಕಲಾಗಿದೆ. ಮೋದಿ ಸರಕಾರದ ಕೃಪೆಯಲ್ಲಿ 2014ರ ನಂತರ ವಿಧವೆಯರಿಗೆ ಸಿಗುತ್ತಿರುವ ಪಿಂಚಣಿಯ ಮೊತ್ತ 2014ಕ್ಕಿಂತ ಮುಂಚೆ ನಿವೃತ್ತರಾದ ಯೋಧರ ಪಿಂಚಣಿಗಿಂತಲೂ ಕಡಿಮೆ ಇದೆ. ಸೇನಾಪಡೆಗಳ ಬಗ್ಗೆ ಎಲ್ಲಿಲ್ಲದ ಪ್ರೇಮವನ್ನು ಪ್ರದರ್ಶಿಸುವ ಇದೇ ಮೋದಿ ಸರಕಾರ ಸೆಪ್ಟಂಬರ್ 30ರಂದು ಸುತ್ತೋಲೆಯೊಂದನ್ನು ಹೊರಡಿಸಿ ಯುದ್ಧ ಅಥವಾ ಅಪಾಯಕಾರಿ ಸೇವೆಯ ಸಂದರ್ಭ ಗಳಲ್ಲಿ ಗಾಯಗೊಂಡು ಅಸಮರ್ಥರಾದ ಯೋಧರ ಅಸಾಮರ್ಥ್ಯ ಪಿಂಚಣಿಗಳಲ್ಲಿ ಭಾರೀ ಪ್ರಮಾಣದ ಕಡಿತ ಮಾಡಿದೆ (ಉದಾ: ರೂ 30,400 ಇದ್ದದ್ದು 12,000 ಆಗಿದೆ; 98,300 ಇದ್ದದ್ದು 27,000 ಆಗಿದೆ - ಬಿಸ್‌ನೆಸ್ ಸ್ಟಾಂಡರ್ಡ್, 10.10.2016). ವ್ಯಂಗ್ಯ ಏನೆಂದರೆ ಇವತ್ತು ರಾಜಕೀಯ ಲಾಭಕ್ಕಾಗಿ ದುರ್ಬಳಕೆ ಆಗುತ್ತಿರುವ ಇದೇ ‘ನಿರ್ದಿಷ್ಟ ದಾಳಿ’ಗಳು ನಡೆದ ಕೆಲವೆ ಗಂಟೆಗಳಲ್ಲಿ ಈ ಸುತ್ತೋಲೆ ಹೊರಟಿದೆ! ಮೊದಮೊದಲು ಇಂತಹ ಯಾವುದೇ ಸುತ್ತೋಲೆಯನ್ನು ಹೊರಡಿಸಿಲ್ಲವೆಂದ ಸರಕಾರ ಬಳಿಕ ಸದ್ದಿಲ್ಲದೆ ತನ್ನ ಕೃತ್ಯವನ್ನು ಒಪ್ಪಿಕೊಳ್ಳಬೇಕಾಯಿತು. ಇದೆಲ್ಲ ಪಿಂಚಣಿದಾರರಿಗೆ ಬಗೆದ ದ್ರೋಹವಲ್ಲದೆ ಮತ್ತೇನು?

ಸ.ಶ್ರೇ.ಸ.ಪಿಂ. ಬಾಕಿ

ಸ.ಶ್ರೇ.ಸ.ಪಿಂ. ಬಾಕಿ ಮೊತ್ತದ ವಿತರಣೆ ಹೆಚ್ಚುಕಮ್ಮಿ ಪೂರ್ತಿ ಮುಗಿದಿದ್ದು ಇನ್ನು ಕೇವಲ 1,50,313 ಮಂದಿಗಷ್ಟೆ ವಿತರಿಸ ಬೇಕಾಗಿದೆ ಎಂದು ಮೋದಿ ಸರಕಾರ ಹೇಳುತ್ತಿದೆ. ಪಿಂಚಣಿ ಮಂಜೂರಾತಿ ಪ್ರಾಧಿಕಾರಗಳು ಓವರ್‌ಟೈಮ್ ಕೆಲಸ ಮಾಡುತ್ತಿವೆ ಎಂದು ಹೇಳಲಾಗುತ್ತಿದೆ. ಆದರೆ ನೆಲದ ವಾಸ್ತವ ಏನೆಂದರೆ ಪ್ರಾಧಿಕಾರಗಳು ನಿವೃತ್ತ ಯೋಧರ ಪ್ರತಿನಿಧಿಗಳ ಪ್ರಶ್ನೆಗಳಿಗೆ ಉತ್ತರಿಸುತ್ತಿಲ್ಲ. ಅವರ ಕುಂದುಕೊರತೆಗಳನ್ನು ಬಗೆಹರಿಸಲು ಯಾವುದೇ ಆಸಕ್ತಿ ತೋರುತ್ತಿಲ್ಲ. ಪಿಂಚಣಿ ಪಾವತಿಯ ಪ್ರಧಾನ ನಿಯಂತ್ರಕರ ಕಚೇರಿಯಲ್ಲಿ ಪಿಂಚಣಿದಾರರನ್ನು ಗುಂಪು, ಸೇವಾವಧಿ, ಶ್ರೇಣಿಗಳ ಆಧಾರದಲ್ಲಿ ವಿಂಗಡಿಸಿರುವ ಪಟ್ಟಿಯೇ ಇಲ್ಲ! ಆದರೆ ಪಿಂಚಣಿ ಪಾವತಿಯ ಪ್ರಧಾನ ನಿಯಂತ್ರಕರು (Principal Controller of Defence Accounts (Pensions); PCDA (P)) ಬ್ಯಾಂಕುಗಳಿಗೆ ಪತ್ರ ಬರೆದು ಪಿಂಚಣಿ ಪಾವತಿ ಆದೇಶದಲ್ಲಿ ಯೋಧನ ಗುಂಪು, ಸೇವಾವಧಿ, ಶ್ರೇಣಿಗಳನ್ನು ಉಲ್ಲೇಖಿಸದಿದ್ದಲ್ಲಿ ಪಿಂಚಣಿ ವಿತರಿಸಬಾರದೆಂದು ಸೂಚಿಸಿದ್ದಾರೆ! ಇದು ಸಮಸ್ಯೆಗಳನ್ನು ಹುಟ್ಟುಹಾಕಿದೆ. ರಾಮ್ ಕಿಶನ್ ಆತ್ಮಹತ್ಯೆಗೆ ಇದೇ ಮುಖ್ಯ ಕಾರಣವಾಗಿದೆ.

ಸತ್ಯಾಗ್ರಹಕ್ಕಿಳಿದ ಮಾಜಿ ಯೋಧರು

ಮೋದಿ ಸರಕಾರ ಅಧಿಕಾರಗ್ರಹಣ ಮಾಡಿ ಒಂದು ವರ್ಷ ಕಳೆದರೂ ಸ.ಶ್ರೇ.ಸ.ಪಿಂ. ಬಗ್ಗೆ ಯಾವುದೇ ನಿರ್ಧಾರ ತಳೆಯದಿ ದ್ದಾಗ ಮಾಜಿ ಯೋಧರು ದಿಲ್ಲಿ ಒಳಗೊಂಡಂತೆ ದೇಶದ ಹಲವಾರು ನಗರಗಳಲ್ಲ್ಲಿ ಜೂನ್ 2015ರಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಪ್ರಾರಂಭಿಸಿದರು. ಒಂದು ಸಂದರ್ಭದಲ್ಲಿ (14.8.2015) ದಿಲ್ಲಿ ಪೊಲೀಸರು ಪ್ರತಿಭಟನಾ ನಿರತರ ಮೇಲೆ ಹಲ್ಲೆ ಮಾಡಿದ ಘಟನೆಯೂ ನಡೆದಿದೆ. ಕೊನೆಗೆ ಸರಕಾರ ರೂ. 6,500 ಕೋಟಿ ವೆಚ್ಚದ ಒಂದು ಅರೆಬರೆ ಯೋಜನೆಯನ್ನು ತಯಾರಿಸಿ ಪ್ರತಿಭಟನಾಕಾರರ ಮುಂದಿಟ್ಟಿತು. ಸರಾಸರಿ ಲೆಕ್ಕಾಚಾರದ ಆ ಪ್ರಸ್ತಾಪವನ್ನು ತಿರಸ್ಕರಿಸಿರುವ ಮಾಜಿ ಯೋಧರು ಆಯಾ ಶ್ರೇಣಿಯ ಗರಿಷ್ಠ ಪಿಂಚಣಿ ನೀಡಬೇಕೆಂದು ಕೇಳುತ್ತಿದ್ದಾರೆ. ಅದೇ ರೀತಿ 17 ವರ್ಷಗಳ ಸೇವೆಯ ನಂತರ ಅಕಾಲಿಕ (ಟ್ಟಛಿಞಠ್ಠ್ಟಿಛಿ) ನಿವೃತ್ತಿ (ಸೇನಾಪಡೆಗಳಲ್ಲಿ ಸ್ವಯಂನಿವೃತ್ತಿ ಯೋಜನೆ ಇಲ್ಲ) ಪಡೆದುಕೊಳ್ಳಬೇಕಿರುವ ಯೋಧರಿಗೆ ಸ.ಶ್ರೇ.ಸ.ಪಿಂ. ಅನ್ವಯಿಸುವುದಿಲ್ಲ ಎನ್ನುವ ಪ್ರಸ್ತಾಪವನ್ನೂ ಅವರು ಒಪ್ಪಿಲ್ಲ.

 
ಮಾಜಿ ಯೋಧರ ಕಲ್ಯಾಣಕ್ಕೆ, ನರೇಗಾ ಯೋಜನೆಗೆ, ಉದ್ಯೋಗ ಸೃಷ್ಟಿಗೆ, ಶಿಕ್ಷಣ, ಆರೋಗ್ಯ, ಕೃಷಿ ಕ್ಷೇತ್ರಗಳಿಗೆ, ಅಲ್ಪಸಂಖ್ಯಾತರು, ದಲಿತರು ಮತ್ತು ಬಡವರ ಉದ್ಧಾರಕ್ಕೆ ಅನುದಾನ ಒದಗಿಸಲು ಹಿಂದೇಟು ಹಾಕುವ ಮೋದಿ ಸರಕಾರ ಕಾರ್ಪೊರೇಟ್ ಕುಳಗಳಿಗೆ ಕೋಟಿ ಕೋಟಿ ರೂಪಾಯಿಗಳ ತೆರಿಗೆ ವಿನಾಯಿತಿ, ರಿಯಾಯಿತಿ, ಸಾಲ ವಿನಾಯಿತಿ ಮತ್ತಿತರ ಸಬ್ಸಿಡಿಗಳನ್ನು ಮೊಗೆಮೊಗೆದು ನೀಡು ತ್ತಿದೆ. ಕಾರ್ಪೊರೇಟ್‌ಗಳಿಗೆ ದಯಪಾಲಿಸಿರುವಂತಹ ಸಾಲ ಮನ್ನಾದ ಮೊತ್ತ ಲಕ್ಷ ಕೋಟಿಗಳ ಸಂಖ್ಯೆಯಲ್ಲಿದೆ! ಉದಾಹರಣೆಗೆ 2015-16ರ ಸಾಲಿನಲ್ಲಿ ಬ್ಯಾಂಕುಗಳ ಎನ್‌ಪಿಎ ಅಂದರೆ ಸುಸ್ತಿ ಸಾಲದ ಮೊತ್ತ ರೂ. 4.76 ಲಕ್ಷ ಕೋಟಿ ಆಗಿದ್ದು, ಇದರಲ್ಲಿ ಹೆಚ್ಚಿನ ಪಾಲು ದೊಡ್ಡ ಕಾರ್ಪೊರೇಟ್‌ಗಳದ್ದು! ಇದಲ್ಲದೆ ಧನಿಕರ ಚಿನ್ನ ಮತ್ತು ವಜ್ರಾಭರಣಗಳ ಮೇಲಿನ ರೂ. 46,000 ಕೋಟಿ ಅಬಕಾರಿ ಸುಂಕವನ್ನು ಸಹಿತ ಮನ್ನಾ ಮಾಡಲಾಗಿದೆ! ಆದರೆ ನಿವೃತ್ತ ಯೋಧರು ಕೇಳುತ್ತಿರುವ ಜುಜುಬಿ ಕಾಸು ನೀಡಲು ಕೈ ಮುಂದೆ ಬರುತ್ತಿಲ್ಲ. ಯಾಕೆ?

*********************************************************************************

the wireQuartz India Janta Ka Reporter (ಆಧಾರ: ನಲ್ಲಿ ನಿ ಬ್ರಿ ವಿದ್ಯಾಸಾಗರ್; ನಲ್ಲಿ ದೇವಜ್ಯೋತ್ ಘೋಷಲ್ ಮತ್ತು ಹರೀಶ್ ಮೆನನ್; ನಲ್ಲಿ ರಿಫಾತ್ ಜಾವೇದ್‌ರ ಲೇಖನಗಳು)

Writer - ಸುರೇಶ್ ಭಟ್, ಬಾಕ್ರಬೈಲ್

contributor

Editor - ಸುರೇಶ್ ಭಟ್, ಬಾಕ್ರಬೈಲ್

contributor

Similar News