ಚಿತ್ರಕಲಾ ಪರಿಷತ್ತಿಗೆ ಜಾಗ ಕೊಟ್ಟಿದ್ದು ಅರಸು -ಪ್ರೊ. ಎಂ. ಜೆ. ಕಮಲಾಕ್ಷಿ

Update: 2016-11-22 18:48 GMT

ಕರ್ನಾಟಕ ಚಿತ್ರಕಲಾ ಪರಿಷತ್ತಿನ ಪ್ರಧಾನ ಕಾರ್ಯದರ್ಶಿಯಾಗಿರುವ ಪ್ರೊ.ಎಂ.ಜೆ.ಕಮಲಾಕ್ಷಿ(74) ದೇವರಾಜ ಅರಸರ ಹಿರಿಯ ಮಗಳು ಚಂದ್ರಪ್ರಭಾ ಅರಸರ ಆಪ್ತ ಗೆಳತಿ. 1965ರಲ್ಲಿ ಹೋಂ ಸೈನ್ಸ್ ಕಾಲೇಜಿನಲ್ಲಿ ಬಿಎಸ್ಸಿ ಓದುವಾಗಿನ ಸಹಪಾಠಿಗಳು. ಕಮಲಾಕ್ಷಿಯವರಿಗೆ ಕಲೆಯ ಬಗ್ಗೆ ವಿಶೇಷ ಆಸಕ್ತಿ. ಕಾಲೇಜಿನಲ್ಲಿ ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮಗಳಾದರೂ, ಕಮಲಾಕ್ಷಿ ಮತ್ತು ಚಂದ್ರಪ್ರಭಾ- ಇಬ್ಬರೂ ಮುಂದಿರುತ್ತಿದ್ದರು. ಇಬ್ಬರಿಗೂ ಹಲವು ವಿಷಯಗಳಲ್ಲಿ ಕಾಮನ್ ಇಂಟರೆಸ್ಟ್ ಇದ್ದು, ಅದೇ ಅವರ ಸ್ನೇಹಕ್ಕೆ ಸೇತುವೆಯಾಗಿತ್ತು. ಅದರಲ್ಲೂ ಕಮಲಾಕ್ಷಿಯವರಿಗೆ ಕಲೆಯ ಬಗ್ಗೆ ಕೊಂಚ ಹೆಚ್ಚೆನ್ನಿಸುವಷ್ಟು ಗೀಳು. ಆ ಗೀಳನ್ನು ಸ್ನೇಹಿತೆ ಚಂದ್ರಪ್ರಭಾಗೂ ಹತ್ತಿಸಿ, ಆಕೆಯನ್ನೂ ಚಿತ್ರಕಲಾ ಪ್ರದರ್ಶನಕ್ಕೆ ಕರೆದುಕೊಂಡು ಹೋಗುತ್ತಿದ್ದುದು, ಆ ಗೀಳು ಮತ್ತು ಆ ಸ್ನೇಹ ಮುಖ್ಯಮಂತ್ರಿ ದೇವರಾಜ ಅರಸರ ಮೇಲೆ ಒತ್ತಡ ಹಾಕಿ, ಕರ್ನಾಟಕ ಚಿತ್ರಕಲಾ ಪರಿಷತ್ತಿಗೆ ಜಾಗ ದೊರಕಿಸಿಕೊಡುವಷ್ಟರ ಮಟ್ಟಿಗೆ ಬೆಳೆಯುತ್ತದೆಂದು ಸ್ವತಃ ಕಮಲಾಕ್ಷಿಯವರೇ ಭಾವಿಸಿರಲಿಲ್ಲ.

 
ಕಮಲಾಕ್ಷಿಯವರು ಬೆಂಗಳೂರಿನಲ್ಲಿ ಬಿಎಸ್ಸಿ, ಮೈಸೂರು ವಿವಿಯಲ್ಲಿ ಇತಿಹಾಸ ಎಂ.ಎ., ಚಿತ್ರಕಲಾ ಪರಿಷತ್ತಿನಲ್ಲಿ ಫೈನ್ ಆರ್ಟ್ಸ್, ಬರೋಡಾ ವಿವಿಯಲ್ಲಿ ಮ್ಯೂರಲ್ ಕಲಾ ವಿಭಾಗದಲ್ಲಿ ವಿಶೇಷ ಅಧ್ಯಯನ ಮುಗಿಸಿದರು. ಕಲೆಯ ಬಗ್ಗೆ ಅಧ್ಯಯನ, ರಾಷ್ಟ್ರೀಯ ಮಟ್ಟದಲ್ಲಿ ಕಲಾಪ್ರದರ್ಶನಗಳಾದ ಮೇಲೆ ಕರ್ನಾಟಕ ಚಿತ್ರಕಲಾ ಪರಿಷತ್ತಿನ ಪ್ರಾಂಶುಪಾಲರಾಗಿ, ಕಾರ್ಯಕಾರಿ ಸಮಿತಿ ಸದಸ್ಯೆಯಾಗಿ, ಖಜಾಂಚಿಯಾಗಿ, ಪ್ರಧಾನ ಕಾರ್ಯದರ್ಶಿಯಾಗುವ ಮಟ್ಟಕ್ಕೆ ಬೆಳೆದವರು. ಇಂತಹ ಕಮಲಾಕ್ಷಿಯವರಿಗೆ ದೇವರಾಜ ಅರಸು ಪರಿಚಯವಾಗಿದ್ದು, ತಮ್ಮ ಕಲಾ ಪ್ರದರ್ಶನಗಳಿಗೆ ಅರಸು ಆಗಾಗ್ಗೆ ವೀಕ್ಷಿಸಲು ಬರುತ್ತಿದ್ದುದು, ಆ ಸಂಪರ್ಕದಿಂದಾಗಿ ಚಿತ್ರಕಲಾ ಪರಿಷತ್ತಿಗೆ ಜಾಗ ಕೇಳಿದ್ದು, ಹುಡುಕಿ ಕೊಟ್ಟಾಗ ಅದಕ್ಕೆ ವಿರೋಧ ವ್ಯಕ್ತವಾಗಿದ್ದು, ಹಲವು ವಿರೋಧಗಳ ನಡುವೆಯೂ ಅರಸು ನಾಡಿನ ಕಲಾವಿದರಷ್ಟೇ ಅಲ್ಲ, ಸಾಂಸ್ಕೃತಿಕ ಜಗತ್ತು ನೆನಪಿನಲ್ಲಿಟ್ಟುಕೊಳ್ಳುವಂತಹ ಜಾಗವನ್ನು ಮಂಜೂರು ಮಾಡಿಕೊಟ್ಟದ್ದು... ಹೀಗೆ ಎಲ್ಲವನ್ನು ಅವರದೇ ಆದ ಧಾಟಿಯಲ್ಲಿ ವಿವರಿಸಿದ್ದಾರಿಲ್ಲಿ.

ಕಲಾರಾಧಕ ಅರಸು

1965ರಲ್ಲಿ ನಾನು ಬಿಎಸ್ಸಿ, ಹೋಂ ಸೈನ್ಸ್ ಕಾಲೇಜಿನಲ್ಲಿ ಓದುತ್ತಿದ್ದೆ. ಆಗ ದೇವರಾಜ ಅರಸರ ಹಿರಿಯ ಮಗಳು ಚಂದ್ರಪ್ರಭಾ ಅರಸು, ನನ್ನ ಸಹಪಾಠಿ. ನನಗೂ ಅವಳಿಗೂ ಹಲವು ವಿಷಯ ಗಳಲ್ಲಿ ಕಾಮನ್ ಇಂಟರೆಸ್ಟ್. ಚಿತ್ರಕಲೆ, ಭಾಷಣ, ನಾಟಕ ಎಲ್ಲದರಲ್ಲೂ ಇಬ್ಬರೂ ಮುಂದು. ಆಗ ನಿಜಲಿಂಗಪ್ಪನವರು ಮುಖ್ಯಮಂತ್ರಿಗಳಾಗಿದ್ದರು. ದೇವರಾಜ ಅರಸು ರೇಷ್ಮೆ ಖಾತೆ ಸಚಿವರಾಗಿದ್ದರು. ಆಗ ಅವರ ಮನೆ ಮಲ್ಲೇಶ್ವರಂನ ಹನ್ನೊಂದನೆ ಕ್ರಾಸ್‌ನಲ್ಲಿತ್ತು. ಆಗ, ಮಲ್ಲೇಶ್ವರಂನಲ್ಲಿ ಚಿತ್ರಕಲಾ ವಿದ್ಯಾಲಯ ಎಂಬ ಶಾಲೆ ಯಿತ್ತು. ನಾನು ಅದರ ವಿದ್ಯಾರ್ಥಿ. ಆ ಶಾಲೆಗೆ ಚಂದ್ರಪ್ರಭಾಳನ್ನು ಸೇರಿಸಿದೆ. ಚಿತ್ರಕಲೆಯ ಬಗ್ಗೆ ಅವಳಿಗೂ ಹುಚ್ಚು ಹಿಡಿಸಿದೆ. ಅವಳೂ ನನ್ನೊಟ್ಟಿಗೆ ಬಂದುಹೋಗುವುದು ಶುರುವಾಯಿತು. ಅಷ್ಟೇ ಅಲ್ಲ, ಅರಸರ ಪತ್ನಿ ಚಿಕ್ಕಮ್ಮಣ್ಣಿಯವರೂ ಆ ಶಾಲೆಗೆ ಬಂದು ಹೋಗುತ್ತಿದ್ದರು. ನಾನು ಗಮನಿಸಿದಂತೆ, ಅರಸು ಅವರ ಕುಟುಂಬ ಕಲೆ, ಸಾಹಿತ್ಯ, ಸಂಗೀತಕ್ಕೆ ಹೆಚ್ಚಿನ ಆದ್ಯತೆ ಕೊಡುತ್ತಿತ್ತು. ಕಲಾವಿದರಿಗೆ ಗೌರವ ನೀಡುತ್ತಿತ್ತು. ಟೋಟಲಿ ಕಲಾರಾಧಕ ಕುಟುಂಬ.

 ಏತನ್ಮಧ್ಯೆ ನಾನು ‘ಸಮ್ಮರ್’ ಥೀಮ್ ಮೇಲೆ ಒಂದು ಚಿತ್ರ ಪ್ರದರ್ಶನ ಏರ್ಪಡಿಸಿದ್ದೆ. ಚಂದ್ರಪ್ರಭಾ ಅರಸು ನನ್ನ ಸ್ನೇಹಿತೆ ಯಾದ್ದರಿಂದ, ‘‘ನಿಮ್ಮ ತಂದೆಗೆ ಹೇಳಿ ಚಿತ್ರ ಪ್ರದರ್ಶನಕ್ಕೆ ವಿಧಾನ ಸೌಧದ ಬ್ಯಾಂಕ್ವೆಟ್ ಹಾಲ್ ಕೊಡಿಸು’’ ಎಂದು ದುಂಬಾಲುಬಿದ್ದೆ. ಆಕೆಯ ಒತ್ತಾಯಕ್ಕೆ ಮಣಿದು ಅರಸು ನನ್ನ ಚಿತ್ರ ಪ್ರದರ್ಶನಕ್ಕೆ ವಿಧಾನಸೌಧದಲ್ಲಿ ಜಾಗ ಕಲ್ಪಿಸಿಕೊಟ್ಟಿದ್ದರು. ಅಷ್ಟೇ ಅಲ್ಲ, ಖುದ್ದಾಗಿ ಆರ್ಟ್ ಗ್ಯಾಲರಿಗೆ ಬಂದು ನನ್ನ ಚಿತ್ರಗಳನ್ನು ನೋಡಿ ಮೆಚ್ಚಿಕೊಂಡಿದ್ದರು. ಮತ್ತೊಂದು ಸಲ, 1968ರಲ್ಲಿ ಮತ್ತೊಂದು ಚಿತ್ರ ಪ್ರದರ್ಶನ ಏರ್ಪಡಿಸಿದ್ದೆ, ಅದು ಆಲ್ ಇಂಡಿಯಾ ಲೆವೆಲ್ ಎಕ್ಸಿಬಿಷನ್. ಆಗಲೂ ಅಷ್ಟೆ, ಗೆಳತಿ ಚಂದ್ರಪ್ರಭಾಗೆ ಹೇಳಿ, ಅರಸರು ಬಂದುಹೋಗುವಂತೆ ನೋಡಿಕೊಂಡಿದ್ದೆ. ಆ ಪ್ರದರ್ಶನಕ್ಕೆ ಅವರು ಬಂದದ್ದು ರಾತ್ರಿ 9.30ಕ್ಕೆ, ಒಂದಷ್ಟು ಜನ ಹಿಂಬಾಲಕರಿದ್ದರು, ಸಮಯವೂ ಇತ್ತು. ಹಾಗಾಗಿ ಪ್ರತೀ ಚಿತ್ರವನ್ನೂ ಸೂಕ್ಷ್ಮವಾಗಿ ನೋಡುತ್ತಾ, ಅದರಲ್ಲಿಯೇ ತಲ್ಲೀನರಾಗಿದ್ದು, ಇವತ್ತಿಗೂ ನೆನಪಿದೆ.

ಟೆಂಪೋದಲ್ಲಿ ಚಿತ್ರಲೋಕ

1972, ದೇವರಾಜ ಅರಸು ಮುಖ್ಯಮಂತ್ರಿಗಳಾಗಿದ್ದರು. ಅದೇ ಸಮಯದಲ್ಲಿ ಮಲ್ಲೇಶ್ವರಂನ ನಮ್ಮ ಚಿತ್ರಕಲಾ ವಿದ್ಯಾಲಯವನ್ನು ತೆರವುಗೊಳಿಸಬೇಕಾಗಿ ಬಂತು. ಆಗಲೇ ನಂಜುಂಡರಾವ್, ಆರ್ಯಮೂರ್ತಿ, ವೈಕುಂಠ ಬಾಳಿಗ(ಸ್ಪೀಕರ್ ಆಗಿದ್ದವರು), ಮಂತ್ರಿಯಾಗಿದ್ದ ಎಸ್.ಎಂ.ಕೃಷ್ಣ, ವಿಶ್ವವಿಖ್ಯಾತ ಕಲಾವಿದ ರೋರಿಚ್‌ನಂತಹವರೆಲ್ಲ ಆ ವಿದ್ಯಾಲಯದ ಕಾರ್ಯಕಾರಿ ಸಮಿತಿ ಸದಸ್ಯರು. ಅಷ್ಟೇ ಅಲ್ಲ, ದೇವರಾಜ ಅರಸರ ಆಡಳಿತದಲ್ಲಿ ಸ್ಪೀಕರ್ ಆಗಿದ್ದ ನಾಗರತ್ನಮ್ಮನವರು ನಮ್ಮ ಸಂಸ್ಥೆಗೆ ಅಧ್ಯಕ್ಷೆಯಾಗಿದ್ದರು.

ಇಷ್ಟೆಲ್ಲ ಪ್ರಭಾವಿ ಗಣ್ಯ ವ್ಯಕ್ತಿಗಳಿದ್ದರೂ; ನಾಡಿನ ಪ್ರತಿಭಾವಂತ ಕಲಾವಿದರು ರಾಷ್ಟ್ರೀಯ-ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿದ್ದರೂ; ನಾಡಿನ ವಿಶಿಷ್ಟ ಬಗೆಯ ಕಲಾ ಪ್ರಕಾರಗಳ ಸಂಗ್ರಹವೇ ನಮ್ಮ ಬಳಿಯಿದ್ದರೂ; ಅವುಗಳನ್ನೆಲ್ಲ ವ್ಯವಸ್ಥಿತ ರೀತಿಯಲ್ಲಿ ಪೋಷಿಸಲು, ಪೊರೆಯಲು ಕಲಾ ಕಾಲೇಜಿರಲಿಲ್ಲ. ಆ ಕಲಾ ಸಂಸ್ಥೆಗೊಂದು ಪ್ರತ್ಯೇಕ ಜಾಗವೂ ಇರಲಿಲ್ಲ. ಆಗ ನಮ್ಮ ನಾಯಕ ನಂಜುಂಡರಾವ್ ಮತ್ತು ಕಾರ್ಯಕಾರಿ ಸಮಿತಿ ಸದಸ್ಯರೆಲ್ಲ ಸಭೆ ಸೇರಿ ಒಂದು ನಿರ್ಧಾರಕ್ಕೆ ಬಂದರು. ಅವರ ನಿರ್ಧಾರದಂತೆ ನಾನು, ಅಲ್ಲಿಯವರೆಗೂ ನಮ್ಮ ಕಲಾಶಾಲೆಯ ಸಂಗ್ರಹದಲ್ಲಿದ್ದ ಜಾನಪದ ಕಲಾಕೃತಿಗಳು, ಮಾಡರ್ನ್ ಪೈಟಿಂಗ್ಸ್‌ನ್ನೆಲ್ಲ ಒಂದು ಟೆಂಪೋದಲ್ಲಿ ತುಂಬಿಕೊಂಡು, ಅರಮನೆ ಮೈದಾನದಲ್ಲಿದ್ದ ಕಾಟೇಜ್ ಹತ್ತಿರ ಹೋದೆ. ಆ ಕಾಟೇಜನ್ನು ಮುಖ್ಯಮಂತ್ರಿ ದೇವರಾಜ ಅರಸರು ಆಪ್ತರೊಂದಿಗೆ ಸಮಾಲೋಚಿಸಲು ಬಳಸುತ್ತಿ ದ್ದರು. ನಾನು ಆ ಕಾಟೇಜ್ ಬಳಿ ಟೆಂಪೋ ನಿಲ್ಲಿಸಿ, ‘‘ಇವುಗಳನ್ನೆಲ್ಲ ಸಂರಕ್ಷಿಸುವುದು ಹೇಗೆ, ನಮಗೆ ಜಾಗ ಕೊಡಿ’’ ಎಂದೆ. ಹಾಗೆ ಅಧಿಕಾರಯುತವಾಗಿ ಕೇಳುವುದರ ಹಿಂದೆ ನನ್ನ ಗೆಳತಿ ಚಂದ್ರಪ್ರಭಾಳ ಬೆಂಬಲವಿತ್ತು. ಮಗಳ ಸ್ನೇಹಿತೆ ಎಂಬ ಸದರವಿತ್ತು. ಟೆಂಪೋದಲ್ಲಿ ತುಂಬಿಕೊಂಡು ಹೋದ ಸರಕಲ್ಲಿ ಅಪರೂಪದ ತೊಗಲುಗೊಂಬೆ ಚಿತ್ರಗಳಿದ್ದವು, ಅವುಗಳನ್ನು ಕೈಗೆತ್ತಿಕೊಂಡು ನೋಡಿದ ಅರಸು, ಕ್ಷಣ ಕಾಲ ಅವರ ಬಾಲ್ಯಕ್ಕೆ, ಊರಿಗೇ ಹೋಗಿಬಿಟ್ಟರು. ನಂತರ, ‘‘ಸರಿ, ಆಗಲಿ, ಆದರೆ ಒಂದು ಕಂಡೀಷನ್ನು. ಕಬ್ಬನ್ ಪಾರ್ಕ್, ಕಾಫಿ ಬೋರ್ಡ್ ಪಕ್ಕ ಕೇಳಬೇಡಿ. ಎಲ್ಲಿ ಜಾಗ ಇದೆಯೋ ನೋಡಿಕೊಂಡು ಬನ್ನಿ, ಮಾಡೋಣ’’ ಎಂದರು. ಅರಸರ ಆ ಮಾತು, ನಮಗೆ ಜಾಗ ಸಿಕ್ಕಷ್ಟು ಖುಷಿ ಕೊಟ್ಟಿತ್ತು. ಕೊನೆಗೆ ಮೆಜೆಸ್ಟಿಕ್‌ನ ಸಿಟಿ ಬಸ್ ಸ್ಟಾಂಡ್ ಪಕ್ಕದಲ್ಲಿದ್ದ ಮಾಸ್ಟರ್ ಹಿರಣ್ಣಯ್ಯ ಮಿತ್ರ ಮಂಡಳಿ ಪಕ್ಕ ಜಾಗ ಖಾಲಿ ಇತ್ತು. ಅದನ್ನು ಚಿತ್ರಕಲಾ ಪರಿಷತ್ತಿಗೆ ಬಳಸಿಕೊಳ್ಳಲು ಸೂಚಿಸಿದರು. ನಗರದ ಮಧ್ಯದಲ್ಲಿದೆ, ಎಲ್ಲರಿಗೂ ಇಷ್ಟವಾಯಿತು, ಆಗಲಿ ಎಂದೆವು. ಆದರೆ ರೋರಿಚ್, ‘‘ಆ ಜಾಗ ಬೇಡ, ಅದು ಧೂಳು, ಸಿಕ್ಕಾಪಟ್ಟೆ ಶಬ್ದ, ಜನಸಂದಣಿಯ ಜಾಗ, ಅದು ಕಲಾವಿದರಿಗೆ ಸೂಕ್ತವಾದ ಸ್ಥಳವಲ್ಲ, ಅಲ್ಲಿ ಯಾವ ಕಲೆಯೂ ಸೃಜಿಸುವುದಿಲ್ಲ’’ ಎಂದುಬಿಟ್ಟರು. ಮತ್ತೆ ಜಾಗ ಹುಡುಕುವ ಕೆಲಸ ಶುರುವಾಯಿತು.

ಅರಸು ಕೊಟ್ಟ ಕೊಡುಗೆ

  ಒಂದು ಬಾಡಿಗೆ ಕಾರು ಮಾಡಿಕೊಂಡು ನಾನು, ನಂಜುಂಡ ರಾವ್, ಎಸ್.ಆರ್.ರಾವ್, ಸುಬ್ರಹ್ಮಣ್ಯ ಬೆಂಗಳೂರು ನಗರವನ್ನು ಸುತ್ತತೊಡಗಿದೆವು. ಎಲ್ಲೆಲ್ಲಿ ಖಾಲಿ ಜಾಗವಿದೆ, ಅದು ಸರಕಾರದ್ದೆ, ಖಾಸಗಿಯವರದ್ದೆ... ಹೀಗೆ ಎಲ್ಲವನ್ನು ನೋಡುತ್ತ, ಇಡೀ ದಿನ ತಿರುಗಿ ಸುಸ್ತಾಗಿ ನಮ್ಮ ಅಧ್ಯಕ್ಷೆ ನಾಗರತ್ನಮ್ಮನವರಿದ್ದ ಕ್ರೆಸೆಂಟ್ ರಸ್ತೆಯ ಮನೆಗೆ ದಿನದ ವರದಿ ಒಪ್ಪಿಸಲು ಮತ್ತು ಸುಧಾರಿಸಿಕೊಳ್ಳಲು ಬಂದೆವು. ಆಗ ನಮಗೆಲ್ಲ ಮುಳ್ಳುಗಂಟಿಗಳಿಂದ ಕೂಡಿದ್ದ ಒಂದಷ್ಟು ಖಾಲಿ ಜಾಗ ಕಣ್ಣಿಗೆ ಬಿತ್ತು. ಅತ್ತ ಕುಮಾರಕೃಪ, ಇತ್ತ ಗಾಂಧಿ ಭವನ, ನಡುವಿನ ಒಂದಷ್ಟು ಜಾಗ ಖಾಲಿ ಇದ್ದದ್ದು ಕಂಡು ಇದಾಗಬಹುದು ಎಂದೆವು. ನಾಗರತ್ನಮ್ಮನವರು, ‘‘ಆಗಬಹುದು, ನಾನು ಮುಖ್ಯಮಂತ್ರಿಗಳೊಂದಿಗೆ ಮಾತನಾಡುತ್ತೇನೆ’’ ಎಂದರು. ದೇವರಾಜ ಅರಸರಿಗೆ ವಿಷಯ ತಿಳಿಸಿದೆವು. ಅರಸರು ಆಗಲಿ ಎಂದರು. ಆದರೆ ಅರಸರ ಕ್ಯಾಬಿನೆಟ್‌ನಲ್ಲಿ ಮಂತ್ರಿಯಾಗಿದ್ದ ಹಿರಿಯ ನಾಯಕ ಚೆನ್ನಬಸಪ್ಪನವರು ವಿರೋಧ ವ್ಯಕ್ತಪಡಿಸಿದರು. ‘‘ಆ ಜಾಗವನ್ನು ಕೊಡಲಿಕ್ಕಾಗುವುದಿಲ್ಲ’’ ಎಂದು ಅಧಿವೇಶನದಲ್ಲಿ ಧ್ವನಿ ಎತ್ತಿದರು. ಪರ-ವಿರೋಧಗಳ ವಾಗ್ವಾದವೇರ್ಪಟ್ಟಿತು. ಕೊನೆಗೆ, ನಾನು ಮತ್ತೆ ನನ್ನ ಗೆಳತಿ ಚಂದ್ರಪ್ರಭಾ ಳಿಗೆ ಗಂಟುಬಿದ್ದೆ. ಆಕೆ ಅರಸರ ಮುಂದೆ ನಿಂತು, ‘‘ಅಪ್ಪಾಜಿ, ನೀವು ಏನ್ ಮಾಡ್ತೀರೋ ಗೊತ್ತಿಲ್ಲ, ನಮಗೆ ಆ ಜಾಗ ಬೇಕು’’ ಎಂದಳು. ಆಗ ಅರಸರ ಕ್ಯಾಬಿನೆಟ್‌ನಲ್ಲಿ ಕೈಗಾರಿಕಾ ಮಂತ್ರಿಯಾಗಿದ್ದ ಎಸ್.ಎಂ. ಕೃಷ್ಣ ಕೂಡ ನಮ್ಮ ಬೆಂಬಲಕ್ಕೆ ನಿಂತರು. ಕೊನೆಗೆ ಅರಸರು, ‘‘ಅದು ಚಿತ್ರಕಲಾ ಪರಿಷತ್ತಿಗೆ ಸೂಕ್ತ ಜಾಗ, ಅದು ಕಲೆಗೆ ಮೀಸಲು, ಅದಕ್ಕೆ ಬೇಕಾದ ಕಾಗದ ಪತ್ರಗಳನ್ನು ಸಿದ್ಧ ಮಾಡಿ’’ ಎಂದು ಚೀಫ್ ಸೆಕ್ರೆಟರಿ ಟಿ.ಪಿ.ಇಸ್ಸಾರ್‌ಗೆ ಆದೇಶಿಸಿಯೇ ಬಿಟ್ಟರು. 1975-76ರಲ್ಲಿ ವಿಧ್ಯುಕ್ತವಾಗಿ ಕರ್ನಾಟಕ ಚಿತ್ರಕಲಾ ಪರಿಷತ್‌ಗೆ ಚಾಲನೆ ಸಿಕ್ಕಿತು. ಜಾಗವನ್ನೂ ಕೊಟ್ಟರು, ಅಡಿಗಲ್ಲನ್ನೂ ಅರಸರೇ ಹಾಕಿದರು. ನಗರದ ಮಧ್ಯಭಾಗದಲ್ಲಿ, ಮೂರು ಎಕರೆ ಜಾಗ ಕರ್ನಾಟಕ ಚಿತ್ರಕಲಾ ಪರಿಷತ್ತಿಗೆ ಕೊಟ್ಟಿದ್ದೂ ಅಲ್ಲದೆ, ಕೇಳಿದಷ್ಟು ಗ್ರಾಂಟ್ಸ್ ಕೂಡ ಕೊಟ್ಟು, ಉದ್ಘಾಟನಾ ಸಮಾರಂಭಕ್ಕೂ ಅವರೇ ಬಂದು, ಬಹಳ ಅದ್ದೂರಿಯಿಂದ ಸಮಾರಂಭ ಆಯೋಜಿಸಿ, ನಾಡಿನ ಕಲಾ ಕ್ಷೇತ್ರ ಎಲ್ಲ ಕಾಲಕ್ಕೂ ನೆನಪಿಸಿಕೊಳ್ಳುವಂತೆ ನೋಡಿಕೊಂಡರು. ಪರಿಷತ್ತಿನಲ್ಲಿ ಇಡೀ ದಿನ

ದೇವರಾಜ ಅರಸು ಚಿತ್ರಕಲಾ ಪರಿಷತ್ತಿಗೆ ಜಾಗ ಕೊಟ್ಟಿದ್ದು, ಅವರು ಮುಖ್ಯಮಂತ್ರಿಯಾಗಿದ್ದು, ಅವರ ಕೈಯಲ್ಲಿ ಅಧಿಕಾರವಿದೆ ಎಂಬ ಕಾರಣಕ್ಕಾಗಿಯಷ್ಟೇ ಅಲ್ಲ, ಅರಸರಿಗೆ ಕಲೆ, ಸಂಸ್ಕೃತಿ ಬಗ್ಗೆ ವಿಶೇಷ ಒಲವಿತ್ತು. ಕಲಾವಿದರ ಬಗ್ಗೆ ಅಪಾರ ಗೌರವವಿತ್ತು. ಸಾಂಸ್ಕೃತಿಕ ಸಿರಿವಂತಿಕೆಯನ್ನು ವಿಸ್ತರಿಸುವ ಮೂಲಕ ನಾಡಿನ ಹಿರಿಮೆಯನ್ನು ಸಾರುವ ಸಂಕಲ್ಪವಿತ್ತು. ಚಿತ್ರಕಲಾ ಪರಿಷತ್ತು ಕಾರ್ಯನಿರ್ವಹಿಸಲು ಶುರು ಮಾಡಿದ ಮೇಲೆ, ಆಲ್ ಇಂಡಿಯಾ ಫೋಕ್ ಆ್ಯಂಡ್ ಟ್ರೈಬಲ್ ಎಕ್ಸಿಬಿಷನ್ ಏರ್ಪಡಿಸಿದೆವು. ಅದು 45 ದಿನಗಳ ಕಾಲ ನಡೆಯಿತು. ಅದರ ಉದ್ಘಾಟನೆಗೆ ಬಂದ ದೇವರಾಜ ಅರಸು, ಇಡೀ ದಿನ ಪರಿಷತ್ತಿನ ಆವರಣದಲ್ಲಿ ಕಾಲ ಕಳೆದರು. ಅದೊಂದು ತುಂಬಾ ಅಪರೂಪದ ಸಂದರ್ಭ. ಯಾವ ಅಧಿಕಾರಸ್ಥ ರಾಜಕಾರಣಿಯೂ ಹಾಗೆ, ಇಡೀ ದಿನ ಕಾಲ ಕಳೆದ ಉದಾಹರಣೆ ಇಲ್ಲ. ಆದರೆ ಅರಸರು ಜಾನಪದ ವಸ್ತುಗಳು, ಚಿತ್ರಗಳು, ವ್ಯಕ್ತಿಗಳು, ಅವರು ನುಡಿಸುವ ಅಪರೂಪದ ವಾದ್ಯಗಳು ಇವುಗಳನ್ನೆಲ್ಲ ಕುತೂಹಲದಿಂದ ನೋಡುತ್ತಿದ್ದರು. ದಾಸಯ್ಯನೊಬ್ಬ ಶಂಖ ಊದಿದ್ದನ್ನು ಶಾಂತಚಿತ್ತತೆಯಿಂದ ನಿಂತು ಕೇಳಿದ್ದರು. ಅದೊಂದೇ ಅಲ್ಲ, ಪರಿಷತ್ತಿನ ಪ್ರತಿಯೊಂದು ಸಮಾರಂಭಕ್ಕೂ ಬರುತ್ತಿದ್ದರು. ನಾವೂ ಅವರನ್ನೇ ಮುಖ್ಯ ಅತಿಥಿಗಳನ್ನಾಗಿ ಕರೆಯುತ್ತಿದ್ದೆವು. 1972ರಿಂದ 1993ರವರೆಗೆ ನಾಗರತ್ನಮ್ಮನವರೇ ನಮ್ಮ ಪರಿಷತ್ತಿನ ಅಧ್ಯಕ್ಷೆಯಾಗಿದ್ದರು. ‘‘ನಾಗರತ್ನಮ್ಮನವರೇ ಅಧ್ಯಕ್ಷ ರಾಗಿರಲಿ, ಸಂಸ್ಥೆಯನ್ನು ತುಂಬಾ ಚೆನ್ನಾಗಿ ಕಟ್ಟಿ ಬೆಳೆಸುತ್ತಾರೆ, ಅವರಿಗೆ ಯಾರೂ ತೊಂದರೆ ಕೊಡಬೇಡಿ’’ ಎಂದು ತಾಕೀತು ಮಾಡಿದ್ದರು. ಆದರೆ ಈ ಜಾಗ ಕೊಟ್ಟಿದ್ದು ನಾನು, ನನ್ನ ಮಗಳಿಗೊಂದು ಸ್ಥಾನ ಕೊಡಿ ಎಂದು ಯಾರ ಮೇಲೂ ಒತ್ತಡ ಹಾಕಲಿಲ್ಲ, ಎಲ್ಲರನ್ನು ಪಕ್ಕಕ್ಕೆ ತಳ್ಳಿ ಆಕೆಗೊಂದು ಸ್ಥಾನ ಕಲ್ಪಿಸಿಕೊಡಲೂ ಇಲ್ಲ. ನನ್ನ ಪ್ರಕಾರ ದೇವರಾಜ ಅರಸು- ನಾಡು ಕಂಡ ನಿಸ್ವಾರ್ಥ ಕಲಾಜೀವಿ.

Writer - ನಿರೂಪಣೆ: ಬಸು ಮೇಗಲ್ಕೇರಿ

contributor

Editor - ನಿರೂಪಣೆ: ಬಸು ಮೇಗಲ್ಕೇರಿ

contributor

Similar News