--ಅವನನ್ನು ತಬ್ಬಿಬ್ಬುಗೊಳಿಸಿದ ಅವರ ಮಾತು!--

Update: 2016-11-24 00:26 IST
--ಅವನನ್ನು ತಬ್ಬಿಬ್ಬುಗೊಳಿಸಿದ ಅವರ ಮಾತು!--
  • whatsapp icon

ಧಾರಾವಾಹಿ-44

ಈ ಸಲ ಎರಡರಲ್ಲಿ ಒಂದು ಮುಗಿಸಿಯೇ ಬರುವುದೆಂದು ಆತ ತೀರ್ಮಾನಿಸಿಯೇ ಹೋಗಿದ್ದ.
ಬಾಗಿಲು ತೆರೆದುಕೊಂಡಿತು. ತಾಹಿರಾಳ ತಾಯಿ ಬಾಗಿಲಿಗಡ್ಡವಾಗಿ ನಿಂತಿದ್ದರು. ಅವರು ಶೃಂಗಾರ ಮಾಡಿಕೊಂಡಿದ್ದರು. ಎಲ್ಲಿಗೋ ಹೊರಟು ನಿಂತಂತೆ ಕಂಡಿತು. ನಾಸರ್‌ನನ್ನು ಕಂಡದ್ದೇ ಅವರ ಮುಖದಲ್ಲಿ ಹೌದೋ ಅಲ್ಲವೋ ಎಂಬಂತೆ ಸಣ್ಣ ನಗುವಿನ ನೆರಳೊಂದು ಹಾದು ಹೋದಂತಾಯಿತು.
‘‘ಒಳಗೆ ಬಾ..’’ ಅವರು ಕರೆದರು.
ಅವನಿಗೆ ಆಶ್ಚರ್ಯವಾಗಿತ್ತು. ಅವನು ಅವರ ಹಿಂದೆಯೇ ಹೋಗಿ ಸೋಫಾದಲ್ಲಿ ಕುಳಿತ. ಅವರೂ ಅವನೆದುರು ಕುಳಿತರು.
ಕೆಲವು ಕ್ಷಣ ಮೌನವಾಗಿಯೇ ಕಳೆಯಿತು. ಅವರೇ ಮೊದಲು ಮಾತನಾಡಲಿ ಎಂದು ನಾಸರ್ ಸುಮ್ಮನೆ ಕುಳಿತ.

‘‘ಮದುವೆ ಎಲ್ಲಿ ಇಟ್ಟುಕೊಳ್ಳುವುದು?’’ ಅವರ ಬಾಯಿಯಿಂದ ಗುಂಡಿನಂತೆ ಹೊರಟ ಮಾತು ಅವನನ್ನು ತಬ್ಬಿಬ್ಬುಗೊಳಿಸಿತ್ತು. ಈ ಸಲ ಏನಾದರೂ ಕಣ್ಣಿಗೆ ಕುಕ್ಕುವಂತೆ ಮಾತನಾಡಿದರೆ, ಮದುವೆಗೆ ನಿರಾಕರಿಸಿದರೆ ಜಗಳವೇ ಮಾಡುವುದು. ಅವರು ಅಜ್ಜ-ಅಜ್ಜಿಗೆ ಮಾಡಿದ ದ್ರೋಹವನ್ನು ಬಿಚ್ಚಿಟ್ಟು, ಅವರು ಬಾಯಿ ತೆರೆಯದಂತೆ ಮಾಡುವುದು. ತಾಹಿರಾಳನ್ನು ಮದುವೆ ಮಾಡಿಕೊಡಲೇಬೇಕು ಇಲ್ಲದಿದ್ದರೆ ನೀವು ಮಾಡಿದಂತೆಯೇ ನಾನೂ ಮಾಡುತ್ತೇನೆ ಎಂದು ಬೆದರಿಸುವುದು ಎಂದು ತೀರ್ಮಾನಿಸಿ ಬಂದಿದ್ದ. ಆದರೆ ಇಲ್ಲಿ ಅವರ ಮಾತು ಕೇಳಿ ಅವನು ಗರಬಡಿದವನಂತೆ ಕುಳಿತು ಬಿಟ್ಟಿದ್ದ. ‘‘ರಿಜಿಸ್ಟರ್ ಮದುವೆಯಾದರೆ ನಾವು ಯಾವಾಗ ಬೇಕಾದರೂ ತಯಾರಿದ್ದೇವೆ. ಇಲ್ಲಿಯೇ ಬೇಕಾದರೂ ಮಾಡಬಹುದು. ಮನೆಯಲ್ಲಿಂತಾದರೆ ನಮಗೆ ಒಂದೆರಡು ತಿಂಗಳು ಸಮಯ ಬೇಕು. ನಮಗೆ ರಜೆ ಇಲ್ಲ. ಏನು ಮಾಡ್ತೀ...’’ ಆತ ಮಾತನಾಡದ್ದು ಕಂಡು ಮತ್ತೆ ಅವರೇ ಹೇಳಿದರು.
ಈಗಲೂ ಅವನು ಮಾತನಾಡಲಿಲ್ಲ. ಆತ ಗಾಳಿ ತೆಗೆದ ಬಲೂನಿನಂತಾಗಿ ಬಿಟ್ಟಿದ್ದ.
‘‘ಮನೆಯಲ್ಲಿಯೇ ಆದರೆ ನೀನೇ ದಿನ ಹೇಳು. ನಮಗೆ ಹೇಳಲಿಕ್ಕೆ ಕರೆಯಲಿಕ್ಕೆ ಯಾರೂ ಇಲ್ಲ. ಮದುವೆಯ ಮೊದಲನೇ ದಿನ ನಾವು ಮೂವರು ಮನೆಗೆ ಬರ್ತೇವೆ. ಮದುವೆ ಮುಗಿಸಿ ಮರುದಿನ ಹಿಂದೆ ಬರ್ತೇವೆ.’’
‘‘ಮದುವೆ ಮನೆಯಲ್ಲಿಯೇ ಇಟ್ಟುಕೊಳ್ಳೋಣ. ಅಮ್ಮ-ಅಜ್ಜಿಗೆಲ್ಲ ಆಸೆ ಇದೆ. ಮತ್ತೆ ನನಗೆ ಎಲ್ಲರನ್ನೂ ಕರೆಯಬೇಕು.
‘‘ಸರಿ, ಈ ತಿಂಗಳು-ಬರುವ ತಿಂಗಳು ಬಿಟ್ಟು ಮುಂದಿನ ತಿಂಗಳು ಯಾವ ದಿನಾನೂ ಆಗಬಹುದು. ನೀನೇ ತೀರ್ಮಾನಿಸಿ ಹೇಳು.’’
ಆತ ತಲೆಯಾಡಿಸಿದ.
ಇನ್ನೊಂದು ವಿಷಯ. ವರದಕ್ಷಿಣೆ, ಚಿನ್ನ. ಒಡವೇಂತ ನಾನೇನೂ ಮಾತನಾಡುವುದಿಲ್ಲ. ಯಾಕೆಂದರೆ ನನಗಿರುವುದು ಒಬ್ಬಳೇ ಮಗಳು. ನನಗೆ ಗಂಡು-ಹೆಣ್ಣು ಎರಡೂ ಅವಳೇ. ನಮ್ಮ ಸಂಪಾದನೆ, ಸೊತ್ತುಗಳೆಲ್ಲವೂ ಅವಳದ್ದೇ. ಮತ್ತೆ ನಿಮಗಿಬ್ಬರಿಗೆ ಒಂದು ಕಾರು ಉಡುಗೊರೆ ಕೊಡಬೇಕೂಂತ ತೀರ್ಮಾನಿಸಿದ್ದೇವೆ. ಯಾವುದು ಕಾರು ಬೇಕೂಂತ ನೀವಿಬ್ಬರು ತೀರ್ಮಾನಿಸಿ ಹೇಳಿ.
‘‘ನನಗೇನೂ ಬೇಡ. ನಾನು ನಿಮ್ಮ ಸೊತ್ತು, ಸಂಪತ್ತು ನೋಡಿ ಬಂದವನಲ್ಲ. ತಾಹಿರಾ ನನಗೆ ಇಷ್ಟವಾಗಿದ್ದಾಳೆ. ಅವಳು ನನಗೆ ಬೇಕು. ಬೇರೇನೂ ಬೇಡ.’’
‘‘ನಿನಗೆ ಬೇಡದಿದ್ದರೆ ಬೇಡ. ಅವಳಿಗೆ ಕೊಡ್ತೇನೆ. ನನ್ನ ಮಗಳು ನಾನು ಏನು ಕೊಟ್ಟರೂ ಬೇಡ ಎನ್ನೋದಿಲ್ಲ.’’ ಅವರ ಮುಖದಲ್ಲಿ ಮತ್ತೆ ನಗುವಿನ ನೆರಳು.
ಅಷ್ಟರಲ್ಲಿ ಒಂದು ಗಂಡಸು ಟೈ ಸರಿಪಡಿಸಿಕೊಳ್ಳುತ್ತಾ ಒಳಗಿನಿಂದ ಬಂತು.
‘‘ಇಲ್ಲಿ ಬನ್ನಿ’’ ತಾಹಿರಾಳ ತಾಯಿ ಅವರನ್ನು ಕರೆದರು. ಆ ವ್ಯಕ್ತಿ ಹತ್ತಿರ ಬಂತು.
‘‘ಇವರು ತಾಹಿರಾಳ ತಂದೆ - ಇವನು ನಾಸರ್’’ ಅವರು ಕುಳಿತಲ್ಲೇ ಪರಿಚಯಿಸಿದರು.
ಎತ್ತರವೂ ಅಲ್ಲದ, ಕುಳ್ಳೂ ಅಲ್ಲದ ಪೀಚಲು ದೇಹ. ಬೋಳು ತಲೆ, ಸೋಡಾ ಗ್ಲಾಸ್, ಫ್ರೆಂಚ್ ಗಡ್ಡ, ಹಲ್ಲಿಯಂತಹ ಮೈ ಬಣ್ಣ...
ಆ ವ್ಯಕ್ತಿ ‘ಹಲೋ’ ಎಂದು ತನ್ನ ಬಿಗು ಮುಖವನ್ನು ಅರಳಿಸಿ ಕೈ ಚಾಚಿತು. ನಾಸರ್ ಎದ್ದು ನಿಂತು ನಗುತ್ತಾ ಕೈ ನೀಡಿದ.
‘‘ನಮಗೆ ಒಂದು ಮೀಟಿಂಗ್‌ಗೆ ಹೋಗಲಿಕ್ಕಿದೆ. ನೀನು ಕಾಫಿ ಕುಡಿದು ಹೋಗು’’ ಅವರು ಎದ್ದು ನಿಂತು ‘ತಾಹಿರಾ’ ಎಂದು ಕರೆದರು.
ತಾಹಿರಾ ಪ್ರತ್ಯಕ್ಷಳಾದಳು. ಅವನ ಮುಖ ಅರಳಿತು.

‘‘ನಾಸರ್‌ನಿಗೆ ಕಾಫಿ ಕೊಡು. ನಾನು ಬರ್ತೇನೆ’’ ಅವರು ನಡೆದರು. ಹೇಂಟೆಯ ಹಿಂದೆ ಮರಿ ಹೋಗುವಂತೆ ಅವರ ಗಂಡನೂ ನಡೆದರು. ಬಾಗಿಲು ಮುಚ್ಚಿಕೊಂಡಿತು. ನಾಸರ್‌ನನ್ನು ಅದ್ಯಾರೋ ಎತ್ತಿ ತೆಗೆದು ಸ್ವರ್ಗಕ್ಕೆ ಎಸೆದಂತಾಗಿತ್ತು. ತಾಹಿರಾ ಬಂದು ಅವನೆದುರು ನಿಂತಿದ್ದಳು. ನಾಚಿಕೆಯಿಂದ ಅವಳ ಮುಖ ಕೆಂಪಡರಿತ್ತು.
‘‘ಏನು ನಿನ್ನ ಸುದ್ದಿಯೇ ಇಲ್ಲ. ಒಂದು ಫೋನ್ ಇಲ್ಲ. ಫೋನು ಮಾಡಿದರೂ ತೆಗೆಯುವುದಿಲ್ಲ. ಮನೆಗೂ ಬರಲಿಲ್ಲ...’’
‘‘ಅಮ್ಮ ಹೇಳಿದ್ದಾರೆ, ಇನ್ನು ಮದುವೆ ಆಗುವವರೆಗೂ ಆ ಮನೆಗೆ ಹೋಗಬಾರದು. ಫೋನು ಮಾಡಬಾರದು. ಬಂದರೆ ತೆಗೆಯಬಾರದೂಂತ’’
‘‘ಯಾಕಂತೆ?’’
‘‘ಗೊತ್ತಿಲ್ಲ’’
‘‘ಇವತ್ತೇನಾದರೂ ನಿನ್ನಮ್ಮ ಮದುವೆಗೆ ಒಪ್ಪಿರದಿದ್ದರೆ ನಿನ್ನನ್ನು ಹಾರಿಸಿಕೊಂಡು ಹೋಗುತ್ತಿದ್ದೆ.’’
‘‘ಹಾಗೆಲ್ಲ ನಾನು ಬರುತ್ತಿರಲಿಲ್ಲ.’’
‘‘ಯಾಕೆ?’’
‘‘ನನಗೆ ನನ್ನ ಅಮ್ಮ ಬೇಕು. ಅವರು ತುಂಬಾ ಒಳ್ಳೆ ಯವರು. ಅವರನ್ನು ನಾನು ತುಂಬಾ ಪ್ರೀತಿಸುತ್ತೇನೆ.’’
‘‘ಈ ಪವಾಡ ಎಲ್ಲ ಹೇಗಾಯ್ತು.’’
‘‘ಪವಾಡ ಅಲ್ಲ. ಅವರು ನನ್ನಿಷ್ಟವನ್ನು ಯಾವತ್ತೂ ಕಡೆಗಣಿಸಿಲ್ಲ.’’
‘‘ನಿನ್ನಲ್ಲಿ ಏನು ಕೇಳಿದರು.’’
ನೀನು ಆವತ್ತು ಬಂದು ಹೋದ ಕೆಲವು ದಿನಗಳ ನಂತರ ಒಂದು ದಿನ ನನ್ನ ಕೋಣೆಗೆ ಬಂದರು. ನನ್ನ ಬಳಿ ಕುಳಿತರು. ನಿನ್ನ ಬಗ್ಗೆ ಎಲ್ಲ ಕೇಳಿದರು.
ನಾನು ಎಲ್ಲ ವಿಷಯ ಹೇಳಿದೆ.
‘‘ನಿನಗವನು ಇಷ್ಟನಾ’’ ಕೇಳಿದರು.
ನಾನು ಏನೂ ಹೇಳಲಿಲ್ಲ.
‘‘ನೀನು ಅವನನ್ನು ಮದುವೆಯಾಗ್ತಿಯಾ?’’ ಕೇಳಿದರು.
ಆಗಲೂ ನನಗೆ ಬಾಯಿ ತೆರೆಯಲು ಧೈರ್ಯ ಬರಲಿಲ್ಲ.
‘‘ನಿನ್ನಿಷ್ಟದಂತೆಯೇ ನಿನಗೆ ಮದುವೆ ಮಾಡಿಸುತ್ತೇನೆ’’ ಎಂದು ಅವರು ನನ್ನನ್ನು ಎಳೆ ಮಗುವಿನಂತೆ ತಬ್ಬಿ ಹಿಡಿ ದರು. ನನ್ನ ಹಣೆ ಚುಂಬಿಸಿದರು. ಅಮ್ಮನ ಎದೆಯಲ್ಲಿ ತಲೆಯಿಟ್ಟ ನನಗೆ ದುಃಖ ಉಮ್ಮಳಿಸಿ ಬಂದಿತ್ತು.
‘‘ನನ್ನ ಮಗಳು ಚೆನ್ನಾಗಿರಬೇಕು. ಆ ಮನೆಯಲ್ಲಿ ನೀನು ಸುಖವಾಗಿರ್ತಿ. ಈ ಲೋಕದಲ್ಲಿ ಬೇರೆ ಯಾವ ಮನೆಯಲ್ಲೂ ಅಷ್ಟೊಂದು ಸುಖವಾಗಿರಲು ಸಾಧ್ಯವಿಲ್ಲ. ಅದು ಮನೆಯಲ್ಲ ಸ್ವರ್ಗ.’’ ಅವರು ಎದ್ದು ನಿಂತು ಮುಖ ತಿರುಗಿಸಿದರು.
ನನಗೆ ಅಮ್ಮ ಅಳುತ್ತಿದ್ದಾರೇನೋ ಅನಿಸಿತು. ಅವರ ಮುಖ ನೋಡಲು ಯತ್ನಿಸಿದೆ. ಅವರು ಮತ್ತೆ ಅಲ್ಲಿ ನಿಲ್ಲದೆ ಸರಸರ ಹೊರ ನಡೆದರು. ಅವರ ಹಿಂದೆಯೇ ಹೋದ ನಾನು ಬಾಗಿಲ ಸಂದಿನಲ್ಲಿ ನಿಂತು ನೋಡಿದೆ. ವರಾಂಡಕ್ಕೆ ಬಂದ ಅಮ್ಮ ಒಂದು ಮೂಲೆಯಲ್ಲಿ ನಿಂತು ಅಂಗೈಯಲ್ಲಿ ಮುಖ ಮುಚ್ಚಿಕೊಂಡು ಯಾರಿಗೂ ಕಾಣದಂತೆ, ಯಾರಿಗೂ ಕೇಳದಂತೆ ಗುಟ್ಟಾಗಿ ಅಳುತ್ತಿದ್ದರು.
ನಾಸರ್‌ನ ಎದೆಗೆ ಯಾರೋ ಇರಿದಂತಾಯಿತು. ಕೆಲವು ಹೊತ್ತು ಇಬ್ಬರೂ ಮಾತನಾಡಲಿಲ್ಲ.
ತಾಹಿರಾ ಚಾ ಮಾಡಿ ತಂದಳು. ಇಬ್ಬರೂ ಬ್ರೆಡ್‌ಗೆ ಬೆಣ್ಣೆ, ಜಾಮ್ ಹಾಕಿ ತಿಂದು ಚಾ ಕುಡಿದರು.
‘‘ಎರಡು ತಿಂಗಳು ಕಳೆದು ಮದುವೇಂತ ಹೇಳಿದರು ನಿನ್ನಮ್ಮ’’ ನಾಸರ್ ಹೇಳಿದ.
‘‘ನಾನು ಕೇಳಿಸಿಕೊಂಡೆ’’
‘‘ಕಾಡಂಕಲ್‌ಲ್ ಮನೆಯಲ್ಲಿಯೇ ಮದುವೆ.’’
‘‘ಹೂಂ..’’
‘‘ಯಾವ ದಿನ ನೀನೇ ಹೇಳು. ನನಗೆ ಎಲ್ಲರನ್ನೂ ಮದುವೆಗೆ ಕರೆಯಬೇಕು. ಮದುವೆ ಗಡದ್ದಾಗಿ ನಡೆಯಬೇಕು.’’
ಇಬ್ಬರೂ ಸೇರಿ ದಿನ ನಿಗದಿ ಪಡಿಸಿದರು.
‘‘ನಿನ್ನಮ್ಮ ಕಾರು ಕೊಡ್ತೇನೆ ಹೇಳಿದರು.’’
‘‘ನೀನೇನಂದೆ’’
‘‘ಬೇಡ ಎಂದೆ’’
‘‘ಯಾಕೆ?’’
‘‘ನಾನು ನಿಮ್ಮ ಕಾರು, ಹಣ, ಸಂಪತ್ತಿಗೆ ಆಸೆ ಪಟ್ಟು ಬಂದವನಲ್ಲ. ನನಗೆ ನನ್ನ ತಾಹಿರಾ ಬೇಕು. ಅವಳಿಗಾಗಿ ಬಂದವನು’’ ಎಂದೆ.
ತಾಹಿರಾ ನಾಚಿ ನೀರಾದಳು.
‘‘ಅದಕ್ಕೆ ಅಮ್ಮ ಏನೆಂದರು?’’
‘‘ಕಾರು ನನ್ನ ಮಗಳಿಗೆ ಕೊಡ್ತೇನೆ. ನಾನು ಏನು ಕೊಟ್ಟರೂ ನನ್ನ ಮಗಳು ಬೇಡ ಅನ್ನೋದಿಲ್ಲ’’ ಎಂದರು.
‘‘ಮದುವೆಗೆ ಮೊದಲು ನಾನಿನ್ನು ನಿಮ್ಮ ಮನೆಗೆ ಬರುವುದಿಲ್ಲ.’’
‘‘ಯಾಕೆ?’’
‘‘ಅದು ಸರಿಯಾಗುವುದಿಲ್ಲ. ಅಮ್ಮ ಹೇಳಿದ್ದಾರಲ್ಲಾ’’.
‘‘................’’
‘‘ಮಾಮಿ ಹೇಗಿದ್ದಾರೆ.’’
‘‘ಚೆನ್ನಾಗಿದ್ದಾರೆ.’’
‘‘ಅಜ್ಜಿ.’’

‘‘ಚೆನ್ನಾಗಿದ್ದಾರೆ. ನಿನ್ನನ್ನು ಕೇಳ್ತಾ ಇದ್ದಾರೆ.’’ ಬಹಳ ಹೊತ್ತಿನ ವರೆಗೆ ಇಬ್ಬರೂ ಮನಬಿಚ್ಚಿ ಮಾತನಾಡಿಕೊಂಡರು.
ಆತ ಹೊರಡಲು ಎದ್ದು ನಿಂತ. ಅವಳು ಬಾಗಿಲ ವರೆಗೆ ಬಂದಳು. ಇಬ್ಬರ ಕಣ್ಣುಗಳೂ ಮಾತನಾಡಿ ಕೊಂಡವು. ಹೃದಯ ಬೆಸೆದುಕೊಂಡವು. ಅವಳು ಕೈ ಬೀಸಿದಳು. ಆತ ತಿರುಗಿ ನೋಡುತ್ತಾ ನಡೆಯತೊಡ ಗಿದ. ಅವನು ಕಣ್ಣಿಂದ ಮರೆಯಾಗುವವರೆಗೂ ಅವಳು ಕೈ ಬೀಸುತ್ತಲೇ ಇದ್ದಳು.
ಮನೆಗೆ ಬಂದ ನಾಸರ್ ಅಮ್ಮನಿಗೆ ವಿಷಯವೆಲ್ಲ ತಿಳಿಸಿದ. ಅಮ್ಮನಿಗೆ ಖುಷಿಯಾಗಿತ್ತು. ಆದರೆ ಮಗಳು ಮರಳಿ ಈ ಮನೆಗೆ ಬರುತ್ತಾಳೆ ಎಂದರೆ ಅಜ್ಜಿ ಒಪ್ಪಬಹುದೇ. ಅವರಲ್ಲಿ ಈ ವಿಷಯ ಯಾರು ಹೇಳುವುದು. ಹೇಗೆ ಹೇಳುವುದು. ಹೇಳಿದರೆ ಅವರ ತಕ್ಷಣದ ಪ್ರತಿಕ್ರಿಯೆ ಏನಿರಬಹುದು.
‘‘ಮಗ ತಾಯಿಗೆ ಧೈರ್ಯ ಹೇಳಿದ. ನೀನೇನೂ ಹೇಳುವುದು ಬೇಡ. ಸಂದರ್ಭ ನೋಡಿ ನಾನೇ ಅಜ್ಜಿಗೆ ಹೇಳುತ್ತೇನೆ’’ ಎಂದು ಸಮಾಧಾನ ಹೇಳಿದ.
‘‘ಎಷ್ಟು ವರ್ಷಗಳಾಯಿತು ಅವಳು ಹೋಗಿ. ಈ ಮನೆಯ ಬಾಗಿಲು ಅವಳಿಗೆ ಸಂಪೂರ್ಣ ಮುಚ್ಚಿತ್ತು. ಈಗ ಅವಳು ಈ ಮನೆಗೆ ಬರಲು ಹೊರಟು ನಿಂತಿದ್ದಾಳೆ. ಆದರೆ ನಿನ್ನ ತಂದೆ-ಎಷ್ಟು ವರ್ಷಗಳಿಂದ ನಾನು ಕಾಯುತ್ತಿದ್ದೇನೆ. ಅವರು ಬರಲೇ ಇಲ್ಲ. ನಿನ್ನ ಮದುವೆಗಾದರೂ ಬಂದಿದ್ದರೆ.’’ ಐಸು ಮಗನ ಕೈಹಿಡಿದು ಕಣ್ಣೀರು ಹರಿಸಿದಳು.
‘‘ನೀನು ಏನೇನೆಲ್ಲ ಯೋಚನೆ ಮಾಡಬೇಡಮ್ಮಾ. ಅಪ್ಪಬದುಕಿದ್ದರೆ ಒಂದಲ್ಲ ಒಂದು ದಿನ ಬಂದೇ ಬರ್ತಾರೆ’’ ನಾಸರ್ ಅಮ್ಮನಿಗೆ ಸಮಾಧಾನ ಹೇಳಿದ.
ಈ ಲೋಕವೇ ಹಾಗೆ ಅಪ್ಪಾ, ನಾವು ಎಷ್ಟೋ ಸಲ ಕೆಲವರು ನಮ್ಮ ಮನೆಗೆ ಬರಲೇ ಬಾರದೆಂದು ಬಾಗಿಲು ಮುಚ್ಚಿ ಗಟ್ಟಿಯಾಗಿ ಚಿಲಕ ಹಾಕಿರ್ತೇವೆ. ಆದರೆ ಬರಲೇ ಬಾರದು ಎಂದಿದ್ದ ಜನ ಬಂದು ಬಾಗಿಲು ತಟ್ಟುತ್ತಾರೆ. ಇನ್ನು ಕೆಲವರನ್ನು ನಾವು ಈಗ ಬರ್ತಾರೆ, ಸಂಜೆ ಬರ್ತಾರೆ, ನಾಳೆ ಬರ್ತಾರೇಂತ ಬಾಗಿಲು ತೆರೆದಿಟ್ಟು ಕಾಯುತ್ತಾ ಇರುತ್ತೇವೆ. ಆದರೆ ಅವರು ಬರುವುದೇ ಇಲ್ಲ. ಇದು ಜನರು ಮಾತ್ರವಲ್ಲ, ಸಂಪತ್ತು, ಕಷ್ಟ, ಸುಖ, ದುಃಖ, ಅನಾರೋಗ್ಯ, ಸಾವು ಎಲ್ಲವೂ ಹೀಗೆಯೇ’’ ಐಸು ನಿಟ್ಟುಸಿರು ಬಿಡುತ್ತಾ ಕಣ್ಣೊರೆಸಿಕೊಂಡಳು. ಅಜ್ಜಿ ಕೆಮ್ಮುವುದು ಕೇಳಿ ಅತ್ತ ನಡೆದಳು.
‘‘ನಾಸರ್ ಎಲ್ಲಿದ್ದಾನೆ?’’ ಮಂಚದಲ್ಲಿ ಕಾಲು ಇಳಿಬಿಟ್ಟು ಬಗ್ಗಿ ಕುಳಿತು ಅಜ್ಜಿ ಕೇಳಿದರು.
‘‘ಇದ್ದಾನೆ ಯಾಕೆ?’’ ಐಸು ಅವರ ಪಕ್ಕ ಬಂದು ಕುಳಿತು ಕೇಳಿದಳು.
‘‘ಕರೆ ಅವನನ್ನು’’
ಐಸು ಮಗನನ್ನು ಕರೆದಳು. ಆತ ಬಂದು ಅವರ ಪಕ್ಕ ಕುಳಿತ.
(ರವಿವಾರದ ಸಂಚಿಕೆಗೆ)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಬೂದ ವಲಯ