ಅರಸರ ಮನೆಯಲ್ಲಿ ಆಡಿ ಬೆಳೆದ ಹುಡುಗ ನಾನು
ಒಂದೇ ಮನೆಯ ಮಕ್ಕಳು
ನಮ್ಮೂರು ಕಲ್ಲಳ್ಳಿ. ಅರವತ್ತು ಎಪ್ಪತ್ತು ಮನೆಯಿದ್ದ ಚಿಕ್ಕಳ್ಳಿ. ಅದರಲ್ಲಿ ಹೆಚ್ಚಿನವು ಲಿಂಗಾಯತರು, ಅದು ಬಿಟ್ಟರೆ ಒಕ್ಕಲಿಗರು, ಎರಡ್ಮೂರು ಮನೆ ಎಸ್ಸಿ ಎಸ್ಟಿಗಳದ್ದು, ಎರಡು ಮನೆ ಅರಸರದು, ಒಂದು ಬ್ರಾಹ್ಮಣರದು... ಇಷ್ಟೇ ನಮ್ಮೂರು. ನಮ್ಮನೆ, ಅರಸರ ಮನೆ, ಸಾಹಿತಿ ಚದುರಂಗರ ಮನೆ- ಅಕ್ಕಪಕ್ಕದಲ್ಲಿದ್ದವು. ನಮ್ಮ ತಂದೆ ಮತ್ತು ದೇವರಾಜ ಅರಸರು ಬಾಲ್ಯ ಸ್ನೇಹಿತರು. ನಮ್ಮಜ್ಜ ಅರಸರಿಗೆ ವಿದ್ಯೆ ಕಲಿಸಿದ ಗುರುಗಳು. ಹಾಗಾಗಿ ಅರಸರು ಊರಿಗೆ ಬಂದರೆ, ನಮ್ಮನೆಗೆ ಬರದೆ ಹೋಗುತ್ತಿರಲಿಲ್ಲ. ನನಗೆ ನೆನಪಿರುವಂತೆ, ನಾನಾಗ 8-10 ವರ್ಷದ ಹುಡುಗ. ಮೂರೂ ಮನೆಯ ಮಕ್ಕಳು ಒಟ್ಟಿಗೆ ಕೂಡಿ ಆಡುತ್ತಿದ್ದೆವು. ಅರಸರ ಮಕ್ಕಳಾದ ಚಂದ್ರಪ್ರಭಾ, ನಾಗರತ್ನ, ಭಾರತಿಯವರು ಬೇಸಿಗೆ ಮತ್ತು ದಸರಾ ರಜೆಗೆ ಊರಿಗೆ ಬರುತ್ತಿದ್ದರು. ಅವರೊಂದಿಗೆ ನಾನು ತಿರುಗದೆ ಇರುವ ಜಾಗವೇ ಇಲ್ಲ. ಹೊಲ, ಗದ್ದೆ, ತೋಟ, ಕಾಡುಗಳಲ್ಲೆಲ್ಲ ಅಲೆಯುತ್ತಿದ್ದೆ. ಅವರು ಅರಸರ ಮಕ್ಕಳು, ಶಾಸಕ-ಮಂತ್ರಿಯ ಮಕ್ಕಳು ಎಂಬ ಯಾವ ಹಿರಿಮೆ-ಗರಿಮೆಗಳಿಲ್ಲದೆ ನಮ್ಮಿಂದಿಗೆ ಬೆರೆತು ಆಡುತ್ತಿದ್ದರು. ನಾವೆಲ್ಲ ಒಂದೇ ಮನೆಯ ಮಕ್ಕಳಂತಿರುತ್ತಿದ್ದೆವು. ನಾನಾಗ ಸಿಕ್ಕ ಸಿಕ್ಕ ಕಡೆಯಲ್ಲೆಲ್ಲ ಚಿತ್ರ ಬಿಡಿಸುತ್ತಿದ್ದೆ. ಅದನ್ನು ಅರಸರ ಮಗಳು ನಾಗರತ್ನ ಗಮನಿಸಿದ್ದಳು. ಮೂವರಲ್ಲಿ ನನಗೆ ನಾಗರತ್ನಳೆ ಹೆಚ್ಚು ಹತ್ತಿರ. ಆಕೆ ನನ್ನ ಚಿತ್ರಗಳನ್ನು ಮೆಚ್ಚಿ ಮಾತನಾಡುತ್ತಿದ್ದಳು. ನನಗದು ಕಲೆ ಎಂದು ಕೂಡ ಗೊತ್ತಿಲ್ಲದ ವಯಸ್ಸು. ಗೂಟದ ಕಾರಿನ ಚಿತ್ರ
ದೇವರಾಜ ಅರಸರು ಊರಿಗೆ ಬರಬೇಕಾದಾಗಲೆಲ್ಲ, ಗೂಟದ ಕಾರಿನಲ್ಲಿಯೇ ಬರುತ್ತಿದ್ದರು. ನಮ್ಮಳ್ಳಿಗೆ ಯಾವ ವೆಹಿಕಲ್‌ಗಳು ಬರುತ್ತಿರಲಿಲ್ಲ, ನಾವೂ ನೋಡಿರಲಿಲ್ಲ. ಹಾಗಾಗಿ, ಆ ಗೂಟದ ಕಾರು ನನಗೆ ವಿಶೇಷವಾಗಿ ಕಾಣುತ್ತಿತ್ತು. ಅದು ಮನಸ್ಸಿನಲ್ಲಿ ಅಚ್ಚೊತ್ತಿತ್ತು. ಒಂದು ದಿನ ಗೂಟದ ಕಾರು ಮತ್ತು ಕಾರಿನ ಪಕ್ಕದಲ್ಲಿ ಅರಸರು ನಿಂತ ಚಿತ್ರವನ್ನು ಬಿಡಿಸುತ್ತಿದ್ದೆ. ಚಿತ್ರ ಮುಕ್ಕಾಲುಪಾಲು ಮುಗಿದಿತ್ತು. ಟಚಪ್ ಮಾಡುತ್ತಿದ್ದೆ. ಅದೇ ಸಮಯಕ್ಕೆ ದೇವರಾಜ ಅರಸರು ‘ಶಿವನಂಜಪ್ಪ’ ಎಂದು ಕೂಗುತ್ತ ನಮ್ಮ ಮನೆಯೊಳಕ್ಕೆ ಬಂದರು. ಅವರದೆ ಚಿತ್ರ, ಅವರೇ ಬಂದು ಎದುರಿಗೆ ನಿಂತುಕೊಂಡರೆ! ಅವರನ್ನು ಎದುರಿಸಲಾಗದೆ, ಚಿತ್ರವನ್ನು ಅಲ್ಲಿಯೇ ಬಿಟ್ಟು ಓಡಿಹೋದೆ. ನಾನು ಓಡಿಹೋದದ್ದನ್ನು ಕಂಡ ಅರಸರು ನಾನು ಕೂತಿದ್ದ ಕಡೆ ಬಂದು, ಬರೆದಿದ್ದ ಚಿತ್ರ ನೋಡಿ ಬಿದ್ದು ಬಿದ್ದು ನಕ್ಕರಂತೆ. ಆನಂತರ, ‘‘ಶಿವನಂಜಪ್ಪ, ನಿನ್ನ ಮಗ ಆರ್ಟಿಸ್ಟ್ ಕಣಯ್ಯ, ಚೆನ್ನಾಗಿ ಬರೆದಿದ್ದಾನೆ, ಆದರೆ ನನ್ನ ಹೊಟ್ಟೆಯನ್ನು ದಪ್ಪ ಮಾಡವನೆ, ಅಷ್ಟುದಪ್ಪ ಇದಿಯಾ ನನ್ನ ಹೊಟ್ಟೆ’’ ಎಂದು ನಗಾಡಿದರಂತೆ. ಅದಾದ ಮೇಲೆ, ಅರಸರು ನಮ್ಮನೆಗೆ ಯಾವಾಗ ಬಂದರೂ, ‘‘ಎಲ್ಲಿ ಆರ್ಟಿಸ್ಟು?’’ ಎಂದು ಕೇಳುವುದು ರೂಢಿಯಾಯಿತು. ನಮ್ಮಮ್ಮ ಗಿರಿಜಮ್ಮ ಮಾಡುವ ಕಜ್ಜಾಯ ಅಂದರೆ, ಇಷ್ಟಪಟ್ಟು ತಿನ್ನುತ್ತಿದ್ದರು. ಅದು ಬಿಟ್ಟರೆ ಹುರುಳಿಕಟ್ಟು ಸಾರು. ರಾತ್ರಿ ಎಷ್ಟೊತ್ತಾದರೂ ಸರಿ, ಬೆಂಗಳೂರಿನಿಂದ ಅರಸರು ಬಂದರೆ, ‘‘ಗಿರಿಜಮ್ಮನ ಮನೆ ಸಾರು ಈಸ್ಕೊಂಡು ಬಾ’’ ಎಂದು ಕಳುಹಿಸುತ್ತಿದ್ದರು. ಪರಿಸರ ಪ್ರೀತಿ ಹುಟ್ಟಿಸಿದ ತೋಟ
ಕಲ್ಲಳ್ಳಿಯಲ್ಲಿ ದೇವರಾಜ ಅರಸರದೊಂದು ತೋಟವಿತ್ತು. ಆ ತೋಟವೇ ವಿಶೇಷವಾಗಿತ್ತು. ಅಲ್ಲಿ ಏನಿರಲಿಲ್ಲ, ಎಲ್ಲವೂ ಇತ್ತು. ಆ ತೋಟಕ್ಕೆ ಹೋಗೋದು ಅಂದರೆ ಮಕ್ಕಳಿಗೆಲ್ಲ ಭಾರೀ ಖುಷಿ. ಇಂಥ ಹಣ್ಣಿಲ್ಲ ಅನ್ನುವಂತಿಲ್ಲ. ನಾವು ಅರಸರ ಮಕ್ಕಳ ಜೊತೆ ಹೋದರೆ, ಬರೀ ಹಣ್ಣು ತಿಂದೇ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದೆವು. ಅವರ ಮನೆಯ ಎಲ್ಲರಿಗೂ ಮಕ್ಕಳೆಂದರೆ ಬಹಳ ಪ್ರೀತಿ. ಅವರು ಏನು ಮಾಡಿದರೂ ಯಾರೂ ಕೇಳುತ್ತಿರಲಿಲ್ಲ. ಹೊಡಿಯೋದು, ಬಯ್ಯೋದಂತೂ ಇಲ್ಲವೇ ಇಲ್ಲ ಬಿಡಿ. ಹಣ್ಣಷ್ಟೇ ಅಲ್ಲ, ಆ ತೋಟದಲ್ಲಿ ಹಲವು ವಿಧದ ಹೂ ಕೂಡ ಬೆಳೆಸಿದ್ದರು. ಎಷ್ಟು ಥರದ ಹೂಗಳೆಂದರೆ, ಇಷ್ಟು ಬಗೆಯ ಹೂಗಳಿವೆಯೇ ಎನ್ನುವಷ್ಟು. ದೇವರಾಜ ಅರಸರು ತೋಟಕ್ಕೆ ಬಂದರೆ, ಹೂ-ಹಣ್ಣುಗಳ ಬಗ್ಗೆಯೇ ಹೆಚ್ಚು ಮಾತನಾಡುತ್ತಿದ್ದರು. ಅವುಗಳ ಜಾತಿ, ಗುಣ, ಬಣ್ಣ, ಬೆಳೆಯುವ ವಿಧಾನ ಎಲ್ಲವನ್ನು ರೈತರಿಗೆ ತಿಳಿಸಿ ಹೇಳುತ್ತಿದ್ದರು. ಆಗಿನ್ನು ಹೂ-ಹಣ್ಣು ವಾಣಿಜ್ಯ ಬೆಳೆಗಳಾಗಿರಲಿಲ್ಲ. ಅಥವಾ ಆಗಿದ್ದರೂ ಅದು ನಮ್ಮಳ್ಳಿ ರೈತರಿಗೆ ಗೊತ್ತಿರಲಿಲ್ಲ. ಆದರೆ ದೇವರಾಜ ಅರಸರು ಅವುಗಳ ಜಾಗತಿಕ ಮಾರುಕಟ್ಟೆ ಕುರಿತು ಮಾತನಾಡಬಲ್ಲ ಬುದ್ಧಿವಂತರಾಗಿದ್ದರು. ಅರಸರ ವಿವರಣೆ ಮತ್ತು ಅವರ ಮಕ್ಕಳ ಜೊತೆಗಿನ ಒಡನಾಟದಿಂದ ಆ ತೋಟಕ್ಕೆ ಹೋಗುವುದು, ಆಟ ಆಡುವುದು, ಹಣ್ಣು ತಿನ್ನುವುದು, ಪ್ರಾಣಿ-ಪಕ್ಷಿ-ಸಸ್ಯ-ದುಂಬಿಗಳನ್ನು ಗುರುತಿಸುತ್ತಲೆ ನನ್ನಲ್ಲಿ ಪರಿಸರದ ಬಗ್ಗೆ ಪ್ರೀತಿ ಬೆಳೆಯಿತು. ಕಲ್ಪನೆಗೆ ರೆಕ್ಕೆ ಮೂಡಿತು. ಚಿತ್ರ ಬರೆಯಲು ಪ್ರೇರೇಪಿಸಿತು. ಅರಸರ ಗೂಳಿ
ದೇವರಾಜ ಅರಸರ ಮನೇಲಿ ಒಂದು ಗೂಳಿ ಸಾಕಿದ್ರು. ಭಾರೀ ಜೋರಾಗಿತ್ತು. ಪ್ರತಿದಿನ ಅದಕ್ಕೆ ಹಿಂಡಿ-ಮೇವು ಕೊಟ್ಟು, ಅದರ ಮೈ ಉಜ್ಜಿ, ಅದನ್ನ ನೋಡಿಕೊಳ್ಳೋಕೆ ಒಬ್ಬ ಆಳಿದ್ದ. ಸುತ್ತಲ ಹತ್ತಳ್ಳಿಗೆ ಅದೊಂದೇ ಗೂಳಿ. ‘ಅರಸರ ಗೂಳಿ’ ಅಂತಲೆ ಫೇಮಸ್ಸು. ಅದನ್ನ ನೋಡಲಿಕ್ಕಂತಾನೆ ಜನ ಬರ್ತಿದ್ರು. ಅರಸರ ಮನೆ ಮುಂದೆ ಅದನ್ನು ಕಟ್ಟಿರುತ್ತಿದ್ದರು. ಅದರ ಕೆಲಸ ಏನಪ್ಪ ಅಂದರೆ, ಬೆಳಗಾಗ್ತಿದ್ದಂಗೆ ಸುತ್ತಲ ಹಳ್ಳಿಯಿಂದ ರೈತರು ಕರೆದುಕೊಂಡು ಬರುವ ಹಸುಗಳ ಮೇಲೆ ಹತ್ತುವುದು. ಅದಕ್ಕೆ ದುಡ್ಡಿಲ್ಲ, ಉಚಿತ ವೀರ್ಯ. ಸುತ್ತಲಳ್ಳಿಯಲ್ಲೆಲ್ಲ ಆ ಗೂಳಿಯದೆ ತಳಿ.
ಆ ಗೂಳಿ ಕನ್ನಡ ಚಲನಚಿತ್ರವೊಂದರಲ್ಲೂ ಕಾಣಿಸಿಕೊಂಡಿದೆ. ಅದು ಚದುರಂಗರು ನಿರ್ದೇಶಿಸಿದ ‘ಸರ್ವಮಂಗಳಾ’ ಚಿತ್ರದಲ್ಲಿ. ಆ ಚಿತ್ರದ ಒಂದು ಸನ್ನಿವೇಶದಲ್ಲಿ, ನಾಯಕ ಆ ಗೂಳಿಯನ್ನು ಎದುರಿಸುವ ಚಿತ್ರಣವಿತ್ತು. ನಾಯಕನ ಪಾತ್ರದಲ್ಲಿ ಡಾ.ರಾಜ್‌ಕುಮಾರ್ ನಟಿಸುತ್ತಿದ್ದರು. ರಾಜ್‌ಕುಮಾರ್ ಆಗಿನ್ನೂ ಹೆಚ್ಚು ಜನಪ್ರಿಯರಾಗಿರಲಿಲ್ಲ. ಸಾಕಿದ ಗೂಳಿಯಲ್ಲವೆ, ಡ್ಯೂಪ್ ಏನು ಬೇಡ ಎಂದರು ರಾಜ್. ಏನಾದರಾಗಲಿ, ಡ್ಯೂಪ್ ಬಳಸಿ ಎಂದರು ಚದುರಂಗರು. ರಾಜ್ ಕೇಳಲಿಲ್ಲ. ಚಿತ್ರದ ಶೂಟಿಂಗ್ ಶುರುವಾಯಿತು. ಅತ್ತ ಕಡೆಯಿಂದ ಗೂಳಿ, ಇತ್ತ ಕಡೆಯಿಂದ ರಾಜಕುಮಾರ್... ನೋಡು ನೋಡುತ್ತಿದ್ದಂತೆ ರಾಜ್‌ರನ್ನು ಎರಡು ಸಲ ಗುದ್ದಿ ಎಸೆದೇಬಿಟ್ಟಿತು. ಅರಸರ ಗೂಳಿಯಿಂದ ಗುಮ್ಮಿಸಿಕೊಂಡ ರಾಜಕುಮಾರ್ ಸುಮಾರು ಎರಡು ತಿಂಗಳ ಕಾಲ ಚಿಕಿತ್ಸೆ, ಆರೈಕೆ ಪಡೆಯಬೇಕಾಯಿತಂತೆ.
ಕಲ್ಲಳ್ಳಿಯಲ್ಲಿ ಇಂದಿರಾಜಿ
ದೇವರಾಜ ಅರಸರು ನಮ್ಮ ಹಳ್ಳಿಗರ ದೃಷ್ಟಿಯಲ್ಲಿ ಬುದ್ಯೋರು, ಇಂದಿರಾ ಗಾಂಧಿ ದೇವತೆ. ಅದರಲ್ಲೂ ಬಡವರು, ಶೋಷಿತರು, ಅಸಹಾಯಕರು ಮತ್ತು ವಿಶೇಷವಾಗಿ ಮಹಿಳೆಯರು ಇಂದಿರಾಜಿಯವರ ಪರವಾಗಿದ್ದರು. ಅವರ ಗರೀಬಿ ಹಠಾವೋ, 20 ಅಂಶದ ಕಾರ್ಯಕ್ರಮಗಳು ಜನರನ್ನು ಅವರತ್ತ ಸೆಳೆಯಲು, ಅವರನ್ನು ಇಷ್ಟಪಡಲು ಕಾರಣವಾಗಿದ್ದವು. ಅಂತಹ ಸಂದರ್ಭದಲ್ಲಿಯೇ ಇಂದಿರಾಜಿಯವರು, ಅರಸರೊಂದಿಗೆ ನಮ್ಮ ಕಲ್ಲಳ್ಳಿಗೆ ಬಂದಿದ್ದರು. ಅರಸರ ಮನೆಯ ಮಕ್ಕಳೊಂದಿಗೆ ಕೂಡಿ ಆಡಿದ್ದರು. ಹಳ್ಳಿಯ ಜನರೊಂದಿಗೆ ಬೆರೆತುಹೋಗಿದ್ದರು. ಅದೇ ಸಮಯದಲ್ಲಿ ಇಂದಿರಾಜಿ, ಅರಸರ ತೋಟಕ್ಕೆ ಭೇಟಿ ನೀಡಿದ್ದರು. ಅವರ ತೋಟವನ್ನು, ಅಲ್ಲಿ ಬೆಳೆದಿದ್ದ ವಿವಿಧ ಗಿಡ-ಮರಗಳನ್ನು, ಹಣ್ಣು-ಹೂಗಳನ್ನು ನೋಡಿ, ಅದರ ಬಗ್ಗೆೆ ಮಾಹಿತಿ ಪಡೆದಿದ್ದರು. ಅವರೊಂದಿಗೆ ನಾವು ಹಳ್ಳಿಯಲ್ಲಿ ಓಡಾಡಿದ್ದು ಅವಿಸ್ಮರಣೀಯವಾಗಿ ಉಳಿದಿದೆ. ಅದಕ್ಕೆ ಕಾರಣ ಅರಸರು. ಇಲ್ಲದಿದ್ದರೆ, ಇಂದಿರಾಜಿ ಎಲ್ಲಿ ಕಲ್ಲಳ್ಳಿ ಎಲ್ಲಿ?
ಅರಸರ ಜಾವಾ ಬೈಕ್
ನಾವು ಚಿಕ್ಕವರಿದ್ದಾಗ, ನಮ್ಮ ಊರಿಗೆ ವೆಹಿಕಲ್ ಅಂತ ಬರುತ್ತಿದ್ದುದು ಎರಡೆ- ಅವರು ಶಾಸಕರಾಗಿದ್ದಾಗ ಜಾವಾ ಬೈಕು, ಮಂತ್ರಿಯಾಗಿದ್ದಾಗ ಗೂಟದ ಕಾರು. ಅದರಲ್ಲೂ ಬೈಕ್ ಮೇಲೆ ಬರುತ್ತಿದ್ದಾಗ, ಅವರ ಆಳ್ತನ, ಕಂಡವರಿಗಾಗಿ ಕರಗುತ್ತಿದ್ದ ಕನಿಕರ, ತಿಳಿವಳಿಕೆ, ಅರಸರ ಮನೆತನ- ಇವೆಲ್ಲ ಸೇರಿ ನಮ್ಮ ಹಳ್ಳಿಯ ಜನ ಅವರನ್ನು ‘ಬುದ್ಯೋರು’ ಅಂತ ಕರಿತಿದ್ದರು. ಅವರೂ ಆ ಬುದ್ಯೋರಿಗೆ ತಕ್ಕಂತೆಯೇ ನಡೆದುಕೊಳ್ಳುತ್ತಿದ್ದರು. ನನಗಿನ್ನೂ ನೆನಪಿದೆ, ಡುಬು ಡುಬು ಅಂತ ಶಬ್ದ ಕೇಳಿದರೆ ಸಾಕು, ಹೊಲ-ಗದ್ದೆ-ತೋಟಗಳಲ್ಲಿ ಕೆಲಸ ಮಾಡುತ್ತಿದ್ದವರು, ‘ಬುದ್ಯೋರು ಬಂದ್ರು’ ಎಂದು ಎದ್ದು ನಿಲ್ಲುತ್ತಿದ್ದರು. ಹಳ್ಳಿಯವರೆಲ್ಲ ಗೌರವದಿಂದ ‘ಬುದ್ಯೋರು’ ಅಂತ ಕರೆಯುತ್ತಿದ್ದರು, ಅವರು ಮತ್ತವರ ಮನೆಯವರು ಹಳ್ಳಿಯವರೊಂದಿಗೆ ಹಳ್ಳಿಯವರಾಗಿಯೇ ಬದುಕುತ್ತಿದ್ದರು. ಮುಟ್ಟು-ಚಟ್ಟು, ಮಡಿ -ಮೈಲಿಗೆ ಮಾಡಿದವರಲ್ಲ. ಅವರು ಜೈನ ಕ್ಷತ್ರಿಯ ಪೈಕಿಯವರು. ಅವರದು ಎರಡೇ ಕುಟುಂಬ. ಅವರ ಮನೆಯ ಹಿಂದಕ್ಕೆ ಒಂದು ಜೈನ ದೇವಸ್ಥಾನವಿತ್ತು. ಅದರ ಪೂಜೆಗೆಂದು ಒಬ್ಬ ಬ್ರಾಹ್ಮಣ ಪುರೋಹಿತರನ್ನು ನೇಮಿಸಿಕೊಂಡಿದ್ದರು. ಅವರಿಗೆ ಮನೆ, ಕುಟುಂಬಕ್ಕೆ ಆಗುವ ದವಸ-ಧಾನ್ಯವನ್ನೆಲ್ಲ ಅವರೇ ಕೊಡುತ್ತಿದ್ದರು. ಹಳ್ಳಿಯ ಸ್ವಚ್ಛತೆಯ ಬಗ್ಗೆ ಅರಸರಿಗೆ ಅಪಾರ ಕಾಳಜಿ. ಯಾರ ಮನೆ ಮುಂದೆಯಾದರು ಕಸ, ಗಲೀಜು ಕಂಡರೆ, ಅಲ್ಲೆ ಬಯ್ದುಬಿಡುತ್ತಿದ್ದರು. ಚೆಕಿಂಗ್ ಇನ್ಸ್‌ಪೆಕ್ಟರೇನೋ ಎಂಬಂತೆ ಪ್ರತಿಯೊಂದನ್ನೂ ಪರಿಶೀಲಿಸುತ್ತಿದ್ದರು. ನಮ್ಮಳ್ಳಿಯಲ್ಲಿ ಆಗಲೇ ಡ್ರೈನೇಜ್ ಸಿಸ್ಟಂ ಇತ್ತು. ಇನ್ನು ದಾಯಾದಿಗಳು ಜಗಳಾಡಿಕೊಂಡರೆ, ಅಣ್ಣ-ತಮ್ಮಂದಿರು ಬಡಿದಾಡಿಕೊಂಡರೆ, ಗಂಡ-ಹೆಂಡಿರು ಕಿತ್ತಾಡಿಕೊಂಡರೆ ಎಲ್ಲದಕ್ಕೂ ಅರಸರದೆ ನ್ಯಾಯ ಪಂಚಾಯ್ತಿ. ಹಗಲು-ರಾತ್ರಿ ಎನ್ನದೆ ಯಾರು ಎಲ್ಲಿಗೆ ಕರೆದರೂ, ಅಲ್ಲಿಗೆ ಹೋಗುತ್ತಿದ್ದರು. ಇವರು ಕೊಟ್ಟ ತೀರ್ಪಿಗೆ ಹಳ್ಳಿಯವರು ಮರು ಮಾತನಾಡುತ್ತಿರಲಿಲ್ಲ. ಅರಸರೂ ನ್ಯಾಯ ಬಿಟ್ಟು ಮಾತನಾಡುತ್ತಿರಲಿಲ್ಲ.