ವ್ಯವಸ್ಥಿತ ಲೂಟಿ, ಕಾನೂನುಬದ್ಧವಾಗಿಸಿದ ದರೋಡೆ
ಈಗ ಭಾರತೀಯ ರಿಸರ್ವ್ ಬ್ಯಾಂಕು ಈ ವಾಪಸಾಗದ ನೋಟುಗಳ ಆಧಾರದಲ್ಲಿ ಸರಕಾರಕ್ಕೆ ಹೆಚ್ಚುವರಿ ಲಾಭಾಂಶವನ್ನು ನೀಡಲಿದೆಯಂತೆ. ಇಂತಹ ಹಲವು ಯೋಜನೆಗಳ ಪೈಕಿ ಅತ್ಯಂತ ವ್ಯಾಪಕವಾಗಿ ವರದಿಯಾಗಿರುವ ಯೋಜನೆ ಇದೇ ಆಗಿದೆ. ಆದರೆ ಇದೊಂದು ಕಾನೂನುಬಾಹಿರ ಕ್ರಮವಾಗಿದೆ. ಇದೇನಾದರೂ ಕಾರ್ಯಗತಗೊಂಡಿತೆಂದಾದರೆ ಬಡವರ ಹಣವನ್ನಂತೂ ನೇರವಾಗಿ ದರೋಡೆ ಮಾಡಿದಂತಾಗಲಿದೆ. ಒಂದು ವೇಳೆ ಕಾರ್ಯಗತಗೊಳಿಸದಿದ್ದರೂ ಬಡವರ ಉಳಿತಾಯವೆಲ್ಲಾ ಮಣ್ಣುಪಾಲಾಗಿ ಅವರ ಪರಿಸ್ಥಿತಿ ಇನ್ನಷ್ಟು ದುರ್ಭರವಾಗಲಿದೆ.
ಮೋದಿ ಸರಕಾರದ ನೋಟು ರದ್ದತಿ ಕಾರ್ಯಕ್ರಮ ದೇಶಾದ್ಯಂತ ಅಲ್ಲೋಲಕಲ್ಲೋಲ ಸೃಷ್ಟಿಸಿರುವ ಸಂದರ್ಭದಲ್ಲಿ ಭಾರತದ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಮೊನ್ನೆ ನವಂಬರ್ 24ರಂದು ರಾಜ್ಯಸಭೆಯಲ್ಲಿ ಆಡಿದ ಮಾತುಗಳು ಭಾರೀ ಪ್ರಾಮುಖ್ಯತೆ ಪಡೆಯುತ್ತವೆ. ಅಂತಾರಾಷ್ಟ್ರೀಯ ಖ್ಯಾತಿಯ ಆರ್ಥಿಕತಜ್ಞನಾಗಿರುವ ಡಾ. ಸಿಂಗ್‌ರ ಭಾಷಣ ಚುಟುಕಾಗಿತ್ತು; ಆದರೆ ತುಂಬಾ ಅರ್ಥಗರ್ಭಿತವಾಗಿತ್ತು. ‘‘ನೋಟು ರದ್ದತಿ ಕಾರ್ಯಕ್ರಮದ ಅನುಷ್ಠಾನದಲ್ಲಿ ಭಾರಿ ವೈಫಲ್ಯ ಆಗಿದೆ. ಅದೊಂದು ವ್ಯವಸ್ಥಿತ ಲೂಟಿ, ಕಾನೂನುಬದ್ಧವಾಗಿಸಿದ ದರೋಡೆ’’ ಎಂದ ಅವರ ಮಾತಿನ ಒಳಾರ್ಥ ಅಂದು ನಿಗೂಢವಿದ್ದರೂ ಇದೀಗ ಸ್ಪಷ್ಟವಾಗತೊಡಗಿದೆ. ಮೋದಿ ಸರಕಾರದ ನೋಟು ರದ್ದತಿ ಯಾವ ರೀತಿಯಲ್ಲಿ ಬಡವರ ಹಣವನ್ನು ಶ್ರೀಮಂತರ ಜೇಬಿಗೆ, ಕಾರ್ಪೊರೇಟುಗಳ ತಿಜೋರಿಗೆ ವರ್ಗಾಯಿಸಲಿದೆ ಎಂಬುದನ್ನು ಶಂಕರ್ ಗೋಪಾಲಕೃಷ್ಣನ್ ತಮ್ಮ ಒಂದು ಲೇಖನದಲ್ಲಿ (ಈಛಿಞಟ್ಞಛಿಠಿಜಿಠಿಜಿಟ್ಞ ಜಿ ಛ್ಟಿಞಚ್ಞಛ್ಞಿಠಿ ಠ್ಟಿಚ್ಞಠ್ಛಛ್ಟಿ ಟ್ಛ ಡಿಛಿಚ್ಝಠಿ ್ಛ್ಟಟಞ ಠಿಛಿ ಟಟ್ಟ ಠಿಟ ಠಿಛಿ ್ಟಜ್ಚಿ) ವಿವರಿಸಿದ್ದಾರೆ. ಅದರ ಭಾವಾನುವಾದ ಇಲ್ಲಿದೆ:
ಮೋದಿ ಸರಕಾರ 500 ಮತ್ತು 1000 ರೂ. ಮುಖಬೆಲೆಯ ನೋಟುಗಳನ್ನು ರದ್ದುಗೊಳಿಸಿದ ಲಾಗಾಯ್ತು ಅದರ ಉಪಯುಕ್ತತೆ ಮತ್ತು ಪರಿಣಾಮಗಳ ಕುರಿತು ಅನೇಕ ಚರ್ಚೆಗಳು ನಡೆದಿವೆ. ಇನ್ನೂ ನಡೆಯುತ್ತಿವೆ. ಅವುಗಳಲ್ಲಿ ಹೆಚ್ಚಿನವು ಭಾರತದ ಆರ್ಥಿಕತೆಯ ಪುನರುಜ್ಜೀವನ ಸಾಧ್ಯವೆ ಅಥವಾ ಅದನ್ನು ಇನ್ನಷ್ಟು ನಗದುರಹಿತವಾಗಿಸಲು ಸಾಧ್ಯವೆ ಎನ್ನುವ ಎರಡು ವಿಷಯಗಳ ಮೇಲೆ ಕೇಂದ್ರೀಕೃತವಾಗಿವೆ. ಇಲ್ಲಿ ಎರಡೂ ಗುರಿಗಳನ್ನು ತಲುಪಲು ಸಾಧ್ಯವಾದಲ್ಲಿ ಎಲ್ಲವೂ ನೆಟ್ಟಗಾಗಲಿದೆ ಎಂಬ ಸೂಚ್ಯಾರ್ಥವೊಂದು ಅಡಗಿದೆ. ಆದರೆ ಇಲ್ಲಿ ಒಂದು ಪ್ರಮುಖ ವಿಷಯವನ್ನು ಕಡೆಗಣಿಸಲಾಗಿದೆ. ಅದೇನೆಂದರೆ ನೋಟು ರದ್ದತಿಯಿಂದ ಸಮಗ್ರ ಆರ್ಥಿಕತೆಗೆ ಏನೇ ಸಂಭವಿಸಿದರೂ ರದ್ದತಿಯ ಅತ್ಯಂತ ಗಂಭೀರ ಪರಿಣಾಮ ಒಳಗಣ ಸಂಪನ್ಮೂಲಗಳ ಹಂಚಿಕೆಯ ಮೇಲೆ ಆಗಲಿದೆ. ನೋಟು ರದ್ದತಿ ಎನ್ನುವುದೊಂದು ದೊಡ್ಡ ನಿರ್ವಾತ ಪ್ರದೇಶ. ಅದು ದುರ್ಬಲರ ಸಂಪನ್ಮೂಲಗಳನ್ನು ಗಬಕ್ಕನೆ ಸೆಳೆದು ಅದನ್ನು ಸಬಲರಿಗೆ ನೀಡುತ್ತದೆ. ಆದರೆ ಹಾಗೆ ಮಾಡುವಾಗ ತಾನು ತದ್ವಿರುದ್ಧವಾದುದನ್ನು ಮಾಡುತ್ತಿರುವಂತೆ ನಟಿಸುತ್ತದೆ. ಇದಕ್ಕಿಂತಲೂ ಮುಖ್ಯವಾದ ವಿಚಾರವೆಂದರೆ ಇದೊಂದು ಶಾಶ್ವತವಾದ ಸಂಪನ್ಮೂಲ ವರ್ಗಾವಣೆ. ಅರ್ಥಾತ್ ದುರ್ಬಲರಿಗೆ ತಮ್ಮ ಸಂಪನ್ಮೂಲ ಮರಳಿ ಸಿಗಲಾರದು.
ಭಾರತದ ಒಟ್ಟು ದುಡಿಯುವ ವರ್ಗದ ಪೈಕಿ ಸುಮಾರು 80ರಿಂದ 90 ಪ್ರತಿಶತದಷ್ಟು ಜನ ಅನೌಪಚಾರಿಕ ವಲಯದಲ್ಲಿ ಕೆಲಸ ಮಾಡುತ್ತಾರೆೆಂದು ಅಂದಾಜಿಸಲಾಗಿದೆ. ಇವರೆಲ್ಲರೂ ನಗದು ರೂಪದಲ್ಲಿ ವೇತನ ಸ್ವೀಕರಿಸುತ್ತಾರೆ. ಅದನ್ನು ನಗದು ರೂಪದಲ್ಲಿ ವೆಚ್ಚ ಮಾಡುತ್ತಾರೆ. ಇನ್ನು ಬ್ಯಾಂಕ್ ಖಾತೆ ಹೊಂದಿರದ ಭಾರತೀಯರ ಸಂಖ್ಯೆ ಎಷ್ಟೆಂಬ ಬಗ್ಗೆ ಹಲವು ಅಂದಾಜುಗಳಿವೆ. ಏನಿದ್ದರೂ ಅದು 16.5ರಿಂದ 23.3 ಕೋಟಿಗಳ ಮಧ್ಯೆ ಇರಬಹುದೆಂದು ತೋರುತ್ತದೆ. ನೋಟು ರದ್ದತಿಯ ಬಳಿಕ ಉದ್ಭವಿಸಿರುವ ನಗದಿನ ಬರಗಾಲ ಇವರೆಲ್ಲರ ಮೇಲೆ ತನ್ನ ಪರಿಣಾಮ ಬೀರಲಿದೆ. ಆದರೆ ಅದು ಏಕಪ್ರಕಾರವಾಗಿ ಇರುವುದಿಲ್ಲ, ಬೇರೆ ಬೇರೆ ರೀತಿಗಳಲ್ಲಿ ಇರುತ್ತದೆ. ಅಸಮಾನ ಪರಿಣಾಮ ಕುಟುಂಬಗಳ ಒಳಗಿನಿಂದಲೆ ಪ್ರಾರಂಭವಾಗುತ್ತದೆ. ಅದು ಹೇಗೆಂದರೆ ಉದಾಹರಣೆಗೆ ನಮ್ಮ ದೇಶದಲ್ಲಿ ಕುಡುಕ, ದುರಾಚಾರಿ ಅಥವಾ ಹೊಣೆಗೇಡಿ ಗಂಡಂದಿರ ದುಡಿಯುವ ಹೆಂಡಂದಿರು ತುರ್ತು ಸಂದರ್ಭಗಳಿಗಾಗಿ ಒಂದಿಷ್ಟು ನಗದು ಹಣವನ್ನು ಬಚ್ಚಿಟ್ಟುಕೊಳ್ಳುವುದು ಸರ್ವೇಸಾಮಾನ್ಯ. ಈಗ ಮೋದಿ ಸರಕಾರದ ಕೃಪೆಯಿಂದಾಗಿ ಆ ದುಡ್ಡೆಲ್ಲಾ ಒಂದೊ ರದ್ದಿಯಾಗಲಿದೆ ಅಥವಾ ಅದನ್ನು ಬಹಿರಂಗಪಡಿಸಬೇಕಾಗುತ್ತದೆ. ಏನಿದ್ದರೂ ವಿವಾಹಿತ ಮಹಿಳೆ ತನ್ನ ಭದ್ರತೆಯನ್ನು ಕಳೆದುಕೊಳ್ಳುವುದಂತೂ ನಿಶ್ಚಿತ. ಪರಿಣಾಮವಾಗಿ ಆಕೆಯನ್ನು ಶೋಷಣೆ ಮಾಡುವುದು ಇನ್ನಷ್ಟು ಸುಲಭವಾಗುತ್ತದೆ.
ಈ ಸಮಾನ ಪರಿಣಾಮಗಳ ಇನ್ನೊಂದು ಉದಾಹರಣೆ ಇಲ್ಲಿದೆ. ಈಗ ನೋಟು ರದ್ದತಿಯಿಂದಾಗಿ ಸಹಕಾರಿ ಬ್ಯಾಂಕುಗಳ ಕೆಲಸಕಾರ್ಯಗಳು ಹೆಚ್ಚುಕಡಿಮೆ ಸ್ಥಗಿತವಾಗಿವೆ. ಅವುಗಳಿಗೆ ನಗದು ಬದಲಾವಣೆ ಮಾಡಲು ಅನುಮತಿ ನೀಡಲಾಗಿಲ್ಲ. ಪರಿಣಾಮವಾಗಿ ಬ್ಯಾಂಕುಗಳಿಂದ ರೈತರಿಗೆ ಬಿತ್ತನೆ ಅಥವಾ ಬೆಳೆ ಮಾರಾಟಕ್ಕೆ ಬೇಕಾದ ನಗದು ಸಿಗದಾಗ ಅವರು ಸಾಲಿಗರ ಮುಂದೆ ಕೈಯೊಡ್ಡಬೇಕಾದ ಪ್ರಸಂಗಗಳು ಹೆಚ್ಚುತ್ತವೆ. ಆ ಮೀಟರ್ ಬಡ್ಡಿ ಸಾಲಗಳು ಅಪಾಯಕಾರಿ ಏಕೆಂದರೆ ಮರುಪಾವತಿ ಮಾಡಲಾಗದಿದ್ದರೆ ಭೂಮಿ ಕಳೆದುಕೊಳ್ಳಬೇಕಾಗುತ್ತದೆ. ಕೆಲವರಂತೂ ಆತ್ಮಹತ್ಯೆಯಂತಹ ಅತಿರೇಕದ ಕ್ರಮಗಳಿಗೆ ಮುಂದಾಗಬಹುದು. ಉತ್ಪಾದನಾ ವಲಯದಲ್ಲೂ ಇದೇ ತೆರನಾದ ಪರಿಸ್ಥಿತಿ ಇದೆ. ಅನೇಕ ಕಿರು ಉದ್ದಿಮೆಗಳು ಈಗಾಗಲೆ ನೆಲಕಚ್ಚಿವೆ. ಇನ್ನುಳಿದ ಕಾರ್ಖಾನೆಗಳು ಮುಚ್ಚುವ ಹಂತದಲ್ಲಿವೆ. ಅಸಂಖ್ಯಾತ ಕಾರ್ಮಿಕರನ್ನು ಮನೆಗೆ ಕಳುಹಿಸಲಾಗುತ್ತಿದೆ. ಅಲ್ಲಿಯೂ ಮೊದಲ ಪ್ರಹಾರ ಬೀಳುವುದೇ ವಲಸೆ ಕಾರ್ಮಿಕರ ಮೇಲೆ. (ನವೆಂಬರ್ 28ರ ವರೆಗಿನ ವರ್ತಮಾನಗಳ ಪ್ರಕಾರ ಗುಜರಾತ್ ರಾಜ್ಯದ ವಡೋದರದಲ್ಲ್ಲಿ ಸುಮಾರು 18,000 ಸಣ್ಣ ಕೈಗಾರಿಕೆಗಳು ಸಂಕಟಕ್ಕೆ ತುತ್ತಾಗಿದ್ದರೆ ಮೋರ್ಬಿಯಲ್ಲಿ 600 ಕಾರ್ಖಾನೆಗಳ ಪೈಕಿ ಸುಮಾರು 300 ಮುಚ್ಚಿದ್ದು ಇನ್ನುಳಿದವು ಸದ್ಯದಲ್ಲೆ ಮುಚ್ಚುವುದರಲ್ಲಿವೆ; ಅತ್ತ ರಾಜ್ಯದ ವರ್ತಕರೂ ತಮ್ಮ ಅಂಗಡಿಗಳ ಬಾಗಿಲು ಹಾಕುವ ಸ್ಥಿತಿಗೆ ತಲುಪಿದ್ದಾರೆ; ಲಕ್ಷಾಂತರ ಕಾರ್ಮಿಕರು ಬೀದಿಗೆ ಬಿದ್ದಿದ್ದಾರೆ. ಇತರ ರಾಜ್ಯಗಳಲ್ಲೂ ಹೆಚ್ಚುಕಡಿಮೆ ಇದೇ ಪರಿಸ್ಥಿತಿ ಇದೆ). ಹತಾಶರಾಗಿರುವ ಇವರೆಲ್ಲರೂ ಬೇರೆ ದಾರಿ ಕಾಣಲಾರದೆ ಅಸಾಂಪ್ರದಾಯಿಕ ಸಾಲಿಗರನ್ನು ಆಶ್ರಯಿಸುವ ಸಂದರ್ಭ ಎದುರಾಗಿದೆ. ಇಲ್ಲಿಯೂ ಸಾಲ ತೀರಿಸಲಾಗದಿದ್ದವರು ತಮ್ಮ ಆಸ್ತಿಪಾಸ್ತಿಗಳನ್ನು ಕಳೆದುಕೊಳ್ಳುವ ಅಪಾಯ ಇದೆ.
ಯಾರಿಗೆಲ್ಲ ಆಹಾರವಸ್ತುಗಳ ಖರೀದಿಗೆ, ವೈದ್ಯಕೀಯ ಚಿಕಿತ್ಸೆಗೆ ಅಥವಾ ತುರ್ತು ಸನ್ನಿವೇಶಗಳಿಗೆ ದುಡ್ಡಿನ ತುರ್ತು ಅಗತ್ಯವಿದೆಯೊ ಅವರೆಲ್ಲರಿಗೆ ಈಗ ಹಳೆ ನೋಟುಗಳ ಬದಲಾವಣೆಗೆ ಬ್ರೋಕರ್‌ಗಳನ್ನು ಆಶ್ರಯಿಸುವುದರ ಹೊರತು ಬೇರೆ ದಾರಿ ಇಲ್ಲವೆಂದಾಗಿದೆ. ಉದಾಹರಣೆಗೆ ಕೊಳೆಗೇರಿ ನಿವಾಸಿಗಳು ಪ್ರತಿ ರೂ 500ರ ಚಿಲ್ಲರೆಗೆ ರೂ 100ರಷ್ಟು ಕಮಿಷನ್ ನೀಡಬೇಕಾಗಿ ಬಂದಿದೆ.
ಕಾರ್ಡ್ ಮೆಷೀನ್ ಹೊಂದಿರದ ಸಣ್ಣಪುಟ್ಟ ಮಾರಾಟಗಾರರು, ವರ್ತಕರು, ಬೀದಿಬದಿ ವ್ಯಾಪಾರಿಗಳು ವ್ಯವಹಾರ ಕಳೆದುಕೊಳ್ಳುತ್ತಿದ್ದಾರೆ. ಇವರು ಗೆ ಪರಿವರ್ತಿಸಬೇಕೆಂದಾದರೆ ಸ್ಮಾರ್ಟ್ ಫೋನ್ ಬೇಕು, ತೆರಿಗೆ ಸಂಖ್ಯೆ (ಐಘೆ) ಬೇಕು. ಹೀಗಾಗಿ ಹೆಚ್ಚಿನವರು ತಮ್ಮ ತಳ್ಳು ಗಾಡಿಗಳನ್ನು, ಅಂಗಡಿಮುಗ್ಗಟ್ಟುಗಳನ್ನು ಮಾರತೊಡಗಿದ್ದಾರೆ. ಮುಂದಿನ ದಿನಗಳಲ್ಲಿ ಈ ಪ್ರಕ್ರಿಯೆ ಇನ್ನಷ್ಟು ವೇಗ ಪಡೆದುಕೊಳ್ಳಲಿದೆ.
ಇದೊಂದು ರೀತಿಯ ರಾಷ್ಟ್ರವ್ಯಾಪಿ ಸಂಪತ್ತಿನ ವರ್ಗಾವಣೆಯೇ ಆಗಿದೆ. ಭಾರತೀಯ ರಿಸರ್ವ್ ಬ್ಯಾಂಕು ಹೇಳುವಂತೆ ನವೆಂಬರ್ 8ರ ನಂತರದಲ್ಲಿ ಬ್ಯಾಂಕುಗಳಿಗೆ ಸುಮಾರು ರೂ. 6 ಲಕ್ಷ ಕೋಟಿಯಷ್ಟು ನಗದಿನ ಮಹಾಪೂರ ಹರಿದುಬಂದಿದೆೆ. ಇದರ ತಕ್ಷಣದ ಪರಿಣಾಮವೇನೆಂದರೆ ಬ್ಯಾಂಕುಗಳು ಬಡ್ಡಿದರವನ್ನು ಇಳಿಸತೊಡಗಿವೆ. ಇದರಿಂದಾಗಿ ಹೂಡಿಕೆ ಹೆಚ್ಚಾಗಲಿದೆ ಎಂದು ಕೆಲವರ ಅಂಬೋಣ. ಆದರೆ ನಗದು ಇಲ್ಲದೆ ಬೇಡಿಕೆ ಕುಸಿದಿರುವ ಸನ್ನಿವೇಶದಲ್ಲಿ ಯಾತಕ್ಕೋಸ್ಕರ ಹೂಡಿಕೆ ಆಗಲಿದೆ ಎಂಬ ವಿಷಯದ ಕುರಿತು ಸ್ಪಷ್ಟತೆ ಇಲ್ಲ. ಅದೇನಿದ್ದರೂ ಬಡ್ಡಿದರ ಇಳಿಕೆಯಿಂದ ತಕ್ಷಣ ಲಾಭ ಪಡೆಯಲಿರುವ ಒಂದು ವರ್ಗವೆಂದರೆ ಬ್ಯಾಂಕುಗಳಿಂದ ಸಾಲ ಪಡೆದವರು. ಸಾಲದ ಪ್ರಮಾಣ ದೊಡ್ಡದಿದ್ದಷ್ಟೂ ಲಾಭ ಜಾಸ್ತಿ. 2015ರ ಮಾರ್ಚ್ ತನಕದ ಅಂಕಿಅಂಶಗಳ ಪ್ರಕಾರ 10 ಅತಿದೊಡ್ಡ ಸಾಲದಾತ ಕಾರ್ಪೊರೇಟುಗಳ ಒಟ್ಟು ಸಾಲ ರೂ 7.30 ಲಕ್ಷ ಕೋಟಿಯಷ್ಟಿದೆ. (ಮೋದಿ ಸರಕಾರ 2014-15 ಮತ್ತು 2015-16ರ ಸಾಲುಗಳಲ್ಲಿ ಕಾರ್ಪೊರೇಟುಗಳಿಗೆ ವರ್ಷಕ್ಕೆ ಸರಾಸರಿ ರೂ 5.90 ಲಕ್ಷ ಕೋಟಿ ಮೌಲ್ಯದ ತೆರಿಗೆ ವಿನಾಯಿತಿಗಳನ್ನು ದಯಪಾಲಿಸಿರುವುದು ಬೇರೆೆ!). ಈಗ ಬ್ಯಾಂಕುಗಳ ಬಡ್ಡಿದರ ಶೇಕಡಾ 0.1ರಷ್ಟು ಕಡಿಮೆ ಆದರೂ ಇವರಿಗೆಲ್ಲ ಒಟ್ಟು 7.30 ಲಕ್ಷ ಕೋಟಿ ಗಿ 0.1 = ರೂ 7300 ಕೋಟಿ ಫಾಯಿದೆಯಾಗಲಿದೆ. ಇದೇನೂ ಅವರ ಅದೃಷ್ಟ ಖುಲಾಯಿಸಿ ಆಕಾಶದಿಂದ ಉದುರಿದ ಇನಾಮೆಂದು ಭಾವಿಸಬೇಕಾಗಿಲ್ಲ. ಇದಾಗುತ್ತಿರುವುದು ನಮ್ಮನಿಮ್ಮಂತಹ ಕೋಟ್ಯಂತರ ಮಂದಿಗೆ ತಮ್ಮದೆ ದುಡ್ಡನ್ನು ಮುಟ್ಟಲು ಅಸಾಧ್ಯವಾಗಿರುವುದರಿಂದ. ಇದರರ್ಥ ನಮ್ಮ ಹಣದ ಪ್ರಯೋಜನ ಪಡೆಯುತ್ತಿರುವವರು ಅದರ ಅಸಲಿ ಮಾಲಕರಾದ ನಾವಲ್ಲ, ಬ್ಯಾಂಕುಗಳು ಮತ್ತು ಕಾರ್ಪೊರೇಟು ಕುಳಗಳು. ವಾಸ್ತವದಲ್ಲಿ ಇದಕ್ಕಿಂತಲೂ ದೊಡ್ಡ ಪ್ರಮಾಣದ ವರ್ಗಾವಣೆಗಳು ನಡೆಯುತ್ತಿವೆ. ಉದಾಹರಣೆಗೆ ಬ್ಯಾಂಕುಗಳಿಗೆ ಜಮೆಯಾಗದ ನೋಟುಗಳೆಲ್ಲವನ್ನೂ ಕಪ್ಪುಹಣವೆಂದು ಭಾವಿಸಲಾಗುತ್ತಿದೆ. ಆದರೆ ಗಮನಿಸಬೇಕಾದ ಅಂಶವೆಂದರೆ ಬ್ಯಾಂಕುಗಳ ಮುಂದೆ ಸರತಿಯ ಸಾಲಿನಲ್ಲಿ ನಿಲ್ಲಲಾಗದೆ ಹಳೆಯ ಬಿಳಿ ನೋಟುಗಳನ್ನು ಬದಲಾಯಿಸಲು ಅಸಮರ್ಥರಾದವರೂ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಉದಾಹರಣೆಗೆ ರೋಗಿಗಳು ಅಥವಾ ದಿನದ ವೇತನ ಕಳೆದುಕೊಳ್ಳುವ ಭೀತಿಯಿಂದ ಕ್ಯೂನಲ್ಲಿ ನಿಲ್ಲಲಾಗದ ದಿನಗೂಲಿ ಕಾರ್ಮಿಕರು ಅಥವಾ ಬ್ಯಾಂಕುಗಳಿಂದ ಅತಿ ದೂರದಲ್ಲಿ ಜೀವಿಸುವವರು ಅಥವಾ ಗುರುತಿನ ಚೀಟಿ ಇಲ್ಲದವರು. ಗುರುತಿನ ಚೀಟಿ ಇಲ್ಲದವರ ವರ್ಗವನ್ನು ತೆಗೆದುಕೊಂಡರೆ ಕನಿಷ್ಠ 5.8 ಕೋಟಿ ವಯಸ್ಕರ ಬಳಿ ಇನ್ನೂ ಆಧಾರ್ ಕಾರ್ಡು ಇಲ್ಲ. ಇಂಥವರ ಬಳಿ ಇನ್ನಿತರ ಯಾವುದೆ ಗುರುತಿನ ಚೀಟಿ ಇರಲಾರದೆಂದೆ ಊಹಿಸಬಹುದು. ಹೀಗಾಗಿ ಇವರ್ಯಾರೂ ಬ್ಯಾಂಕು ಖಾತೆಗಳನ್ನು ಹೊಂದಿಲ್ಲ ಎನ್ನಬಹುದು. ಸಾಮಾನ್ಯವಾಗಿ ಭಾರತದಲ್ಲಿ ಹೆಚ್ಚು ಕಡಿಮೆ ಪ್ರತಿಯೊಂದು ಮನೆಯಲ್ಲೂ ತುರ್ತು ಮತ್ತಿತರ ಸಂದರ್ಭಗಳಿಗಾಗಿ ನಗದು ಹಣವನ್ನು ಇಟ್ಟುಕೊಳ್ಳಲಾಗುತ್ತದೆ (ಒಂದು ಅಂದಾಜಿನಂತೆ ಬಡವರ ಆದಾಯದ ಸುಮಾರು ಅರೆವಾಸಿಯಷ್ಟು ಹಣ ನಗದಿನ ರೂಪದಲ್ಲಿ ಅವರ ಮನೆಗಳಲ್ಲಿ ಇರುತ್ತದೆೆ). ಸರಾಸರಿ ಪ್ರತಿಯೊಬ್ಬ ವ್ಯಕ್ತಿಯ ಬಳಿ ಬದಲಾಯಿಸಲು ಆಗದ, ಖಾತೆಗೆ ಜಮೆ ಮಾಡಲು ಆಗದ ರೂ. 2000 ಇದೆ ಎಂದು ಎಣಿಸಿದರೆ 5.8 ಕೋಟಿ ಜನರ ಬಳಿ ಇರುವ ನಗದಿನ ಮೊತ್ತ ರೂ 11,600 ಕೋಟಿ ಆಗುತ್ತದೆ. ಈ ದುಡ್ಡಿನ ಗತಿ ಏನು?
ಈಗ ಭಾರತೀಯ ರಿಸರ್ವ್ ಬ್ಯಾಂಕು ಈ ವಾಪಸ್ಸಾಗದ ನೋಟುಗಳ ಆಧಾರದಲ್ಲಿ ಸರಕಾರಕ್ಕೆ ಹೆಚ್ಚುವರಿ ಲಾಭಾಂಶವನ್ನು ನೀಡಲಿದೆಯಂತೆ. ಇಂತಹ ಹಲವು ಯೋಜನೆಗಳ ಪೈಕಿ ಅತ್ಯಂತ ವ್ಯಾಪಕವಾಗಿ ವರದಿಯಾಗಿರುವ ಯೋಜನೆ ಇದೇ ಆಗಿದೆ. ಆದರೆ ಇದೊಂದು ಕಾನೂನುಬಾಹಿರ ಕ್ರಮವಾಗಿದೆ. ಇದೇನಾದರೂ ಕಾರ್ಯಗತಗೊಂಡಿತೆಂದಾದರೆ ಬಡವರ ಹಣವನ್ನಂತೂ ನೇರವಾಗಿ ದರೋಡೆ ಮಾಡಿದಂತಾಗಲಿದೆೆ. ಒಂದು ವೇಳೆ ಕಾರ್ಯಗತಗೊಳಿಸದಿದ್ದರೂ ಬಡವರ ಉಳಿತಾಯವೆಲ್ಲಾ ಮಣ್ಣುಪಾಲಾಗಿ ಅವರ ಪರಿಸ್ಥಿತಿ ಇನ್ನಷ್ಟು ದುರ್ಭರವಾಗಲಿದೆ. ಇದರಿಂದ ಆಗಲಿರುವ ನಷ್ಟಗಳೇನೆಂದು ಈಗಾಗಲೆ ವಿವರಿಸಲಾಗಿದೆ.
50 ದಿನಗಳ ಗಡುವು ಮುಕ್ತಾಯಗೊಂಡಾಗ ಲಾಭ, ನಷ್ಟ ಎರಡೂ ಶಾಶ್ವತವಾಗಲಿವೆ. ಜನತೆ ಈಗಾಗಲೆ ಕಳೆದುಕೊಂಡಿರುವ ಭೂಮಿ, ಉಳಿತಾಯ, ನೌಕರಿ, ಮಧ್ಯವರ್ತಿಗೆ ಕೊಟ್ಟ ಕಮಿಷನ್ ಇತ್ಯಾದಿಗಳು ಮರಳಿ ಸಿಗಲಾರವು. ದುಡ್ಡಿನ ಕೊರತೆಯಿಂದಾಗಿ ಅನ್ನಾಹಾರ ಔಷಧಗಳಿಲ್ಲದೆ ಸತ್ತವರು ಮರಳಿ ಬರಲಾರರು. ಮತ್ತೊಂದು ವಿಷಯವೇನೆಂದರೆ ಸಾಮಾನ್ಯವಾಗಿ ಉತ್ಪಾದನೆಯಲ್ಲಿ ಹೆಚ್ಚಳವಾದಾಗ ಸಂಪತ್ತಿನ ವರ್ಗಾವಣೆ ಆಗುತ್ತದೆ. ಆದರೆ ಇಂದಿನ ಈ ಬೃಹತ್ ಪ್ರಮಾಣದ ಸಂಪತ್ತಿನ ವರ್ಗಾವಣೆ ಆಗಿರುವುದು ಹೆಚ್ಚುವರಿ ಉತ್ಪಾದನೆಯಿಂದ ಅಲ್ಲ, ನೋಟು ರದ್ದತಿಯಿಂದ. ಈ ಅನಿರೀಕ್ಷಿತ ಧನಭಾಗ್ಯದ ಫಲಾನುಭವಿಗಳು ಅದನ್ನು ತಮ್ಮ ಸ್ವಂತ ದುಡಿಮೆಯಿಂದ ಸಂಪಾದಿಸಿಲ್ಲ. ಅವರು ಹೆಚ್ಚು ಪ್ರಭಾವಶಾಲಿಗಳಾಗಿರುವ ಏಕೈಕ ಕಾರಣಕ್ಕಾಗಿ ಅವರಿಗೆ ಅದು ದಕ್ಕಿದೆ. ಇದು ಥೇಟ್ ಪಠ್ಯಪುಸ್ತಕಗಳಲ್ಲಿರುವ ತಿರೋಗಾಮಿ ಆರ್ಥಿಕ ನೀತಿಯ ಅರ್ಥ ನಿರೂಪಣೆಯ ಹಾಗೇ ಇದೆ. ನೋಟು ರದ್ದತಿಯಿಂದಾಗಿ ತೆರಿಗೆ ತಪ್ಪಿಸುವಿಕೆ ನಿಲ್ಲಲಿದೆ ಎಂದು ಬೆಂಬಲಿಗರು ವಾದಿಸುತ್ತಾರೆ. (ಹೀಗೆ ಸಂಗ್ರಹವಾಗುವ ಹೆಚ್ಚುವರಿ ಹಣವನ್ನು ಜನಕಲ್ಯಾಣ ಯೋಜನೆಗಳಲ್ಲಿ ತೊಡಗಿಸುವ ಬಗ್ಗೆ ಸೊಲ್ಲೆತ್ತುವವರು ಇಲ್ಲವೆ ಇಲ್ಲವೆನ್ನುವಷ್ಟು ಕಮ್ಮಿ). ಆದರೆ ಅಸಲಿಗೆ ಮೋದಿ ಸರಕಾರ ಈ ತೆರಿಗೆ ತಪ್ಪಿಸುವಿಕೆಯ ವಿಚಾರದಲ್ಲಿ ಗಂಭೀರವಾಗಿರುವಂತೆ ತೋರುತ್ತಿಲ್ಲ. ಯಾಕೆಂದರೆ ಭಾರತದಲ್ಲಿ ಅತ್ಯಧಿಕ ಪ್ರಮಾಣದಲ್ಲಿ ತೆರಿಗೆ ತಪ್ಪಿಸುವವರೆಂದರೆ ದೊಡ್ಡ ಕಾರ್ಪೊರೇಟುಗಳು. ರೂ 20,000 ಕೋಟಿ ತೆರಿಗೆಯನ್ನೊಳಗೊಂಡ ವೊಡಾಫೋನ್ ಪ್ರಕರಣ ನ್ಯಾಯಾಲಯದಲ್ಲಿದೆ. ತೆರಿಗೆ ತಪ್ಪಿಸುವಿಕೆ ಕುರಿತಂತೆ 2012ರಲ್ಲಿ ಜಾರಿಗೊಳಿಸಲಾದ ನಿಯಮಗಳು (ಎಛ್ಞಿಛ್ಟಿಚ್ಝ ಅ್ಞಠಿಜಿಅಟಜಿಚ್ಞ್ಚಛಿ ್ಕ್ಠ್ಝಛಿ) ಕಡತದಲ್ಲೇ ಬಾಕಿಯಾಗಿವೆ. ಈ ವಿಷಯದಲ್ಲಿ ಯುಪಿಎ, ಎನ್‌ಡಿಎ ಸರಕಾರಗಳೆರಡೂ ದೋಷಿ ಸ್ಥಾನದಲ್ಲಿ ನಿಲ್ಲುತ್ತವೆ. ಆದರೆ ಮೋದಿ ಸರಕಾರ ಮತ್ತೂ ಒಂದು ಹೆಜ್ಜೆ ಮುಂದೆ ಹೋಗಿ ಈ ನಿಯಮಗಳನ್ನು ಎಪ್ರಿಲ್ 2017ರ ನಂತರವಷ್ಟೆ ಅನ್ವಯಿಸಲಾಗುವುದು; ಎಪ್ರಿಲ್ 2017ಕ್ಕೆ ಮುಂಚಿನ ಎಲ್ಲಾ ವಹಿವಾಟುಗಳಿಗೆ ವಿನಾಯಿತಿ ಇದೆ ಎಂದು ಘೋಷಿಸಿಬಿಟ್ಟಿದೆ. (ಪ್ರಸಕ್ತ ಕಾರ್ಯಾಚರಣೆಯನ್ನು ಗಮನಿಸಿದರೆ ಶಿಕ್ಷೆ ಏನಿದ್ದರೂ ನಗದನ್ನು ಟ್ರಂಕುಗಳಲ್ಲಿ ತುಂಬಿಸಿಟ್ಟಿರುವವರಿಗಷ್ಟೆ ಮೀಸಲೆಂದು ತೋರುತ್ತದೆ). ಇದರ ನಡುವೆ ಸಣ್ಣ ಪ್ರಮಾಣದಲ್ಲಿ ತೆರಿಗೆ ತಪ್ಪಿಸಿರುವವರಿಗೆ ಹೆಚ್ಚೆಂದರೆ ಒಂದು ಸರ್ತಿಗೆ ನಷ್ಟ ಆಗಿರಬಹುದು. ಅವರ ಮಟ್ಟಿಗೆ ಭವಿಷ್ಯದಲ್ಲಿ ಎಲ್ಲವೂ ಯಥಾಸ್ಥಿತಿಗೆ ಮರಳುವ (ಅಥವಾ ಬಿಟ್‌ಕಾಯಿನ್‌ನಂತಹ ಹೊಸ ಮಾರ್ಗಗಳಿಗೆ ಹೊರಳುವ) ಸಾಧ್ಯತೆಗಳು ಕಾಣುತ್ತಿವೆ.
ಅನಿರೀಕ್ಷಿತ ಮಟ್ಟದಲ್ಲಿ ತೆರಿಗೆ ಸಂಗ್ರಹವಾದಲ್ಲಿ ಅಥವಾ ಆರ್‌ಬಿಐನಿಂದ ಲಾಭಾಂಶ ದೊರೆತಲ್ಲಿ ಸರಕಾರದಿಂದ ತಕ್ಷಣ ಕೆಲವೊಂದು ಕಲ್ಯಾಣ ಕಾರ್ಯಕ್ರಮಗಳ ಘೋಷಣೆ ಹೊರಬೀಳುವುದರಲ್ಲಿ ಅನುಮಾನವಿಲ್ಲ. ಸರಕಾರಕ್ಕೆ ನಿಜಕ್ಕೂ ನೋಟು ರದ್ದತಿಯಿಂದ ಜನರಿಗಾಗಿರುವ ಅನ್ಯಾಯಗಳನ್ನು ಸರಿಪಡಿಸುವ ಇಚ್ಛೆ ಇದ್ದಲ್ಲಿ ಅದರ ಮೊದಲ ಹೆಜ್ಜೆಯಾಗಿ ದೀರ್ಘಾವಧಿಯ ಸಾರ್ವಜನಿಕ ವೆಚ್ಚದಲ್ಲಿ ಭಾರಿ ಪ್ರಮಾಣದ ಹೆಚ್ಚಳ ಮಾಡಬೇಕಾಗುತ್ತದೆ. ಆದರೆ ಮೋದಿ ಸರಕಾರಕ್ಕಂತೂ ಇಂತಹ ಯೋಜನೆಯನ್ನು ಅನುಷ್ಠಾನಗೊಳಿಸುವ ಸಾಮರ್ಥ್ಯವೂ ಇಲ್ಲ ರಾಜಕೀಯ ಇಚ್ಛಾಶಕ್ತಿಯೂ ಇಲ್ಲ. ಅದೀಗ ನೋಟು ರದ್ದತಿಯನ್ನು ಬಡವರಿಗೆ ಸಹಾಯ ಮಾಡುವುದಕ್ಕೋಸ್ಕರ ತೆರಿಗೆ ತಪ್ಪಿಸುವವರ ವಿರುದ್ಧ ನಡೆಸುತ್ತಿರುವಂಥ ಮಹಾಯುದ್ಧವೆಂಬಂತೆ ಬಿಂಬಿಸುತ್ತಾ ಇದೆ. ಆದರೆ ಅಸಲಿಗೆ ಭಾರತದ ಆರ್ಥಿಕತೆಯಲ್ಲಿ ಮೊದಲಿಗಿಂತಲೂ ಹೆಚ್ಚು ಅಸಮಾನತೆ ಸೃಷ್ಟಿಯಾಗಲಿದೆ. ಪರಿಣಾಮವಾಗಿ ಈಗಾಗಲೆ ಬೃಹತ್ ಸಂಖ್ಯೆಯಲ್ಲಿರುವ ಶೋಷಿತ ಜನಸಮುದಾಯಗಳು ಇನ್ನಷ್ಟು ಶೋಷಣೆಗೆ ಒಳಗಾಗಲಿವೆೆ. ನಿಜಕ್ಕೂ ಇದೊಂದು ಮಾಸ್ಟರ್‌ಸ್ಟ್ರೋಕ್!
ಕೃಪೆ: scroll.in