ದೇವೆರ್ ದಕ್ಕ್‌ದ್ ಪೋವಡ್...
ಮನುಷ್ಯ ಸಂಘಜೀವಿ ಎನ್ನುತ್ತಾರೆ. ಮನುಷ್ಯ ಮಾತ್ರವಲ್ಲ ಯಾವ ಪ್ರಾಣಿಯೂ ಒಂಟಿಯಾಗಿರುವುದಿಲ್ಲ. ಜೊತೆಯೊಂದು ಬೇಕೇ ಬೇಕು. ಆದರೆ ಮನುಷ್ಯನಿಗೆ ಇತರ ಪ್ರಾಣಿ, ಪಕ್ಷಿ ಕೀಟಗಳಿಗಿಂತ ವಿಶೇಷವಾದ ಗುಣವೊಂದಿದೆ. ಅದುವೇ ಸ್ನೇಹ. ಆದರೆ ಸ್ನೇಹವೂ ಕೂಡ ಎಲ್ಲರ ಜತೆ ಉಂಟಾಗುವಂತಹುದಲ್ಲ. ಹಾಗೆಯೇ ಈ ಸ್ನೇಹದ ನಂಟಿಗೆ ಯಾವ ಸ್ವಾರ್ಥದ ನಂಟು ಇರುವುದಿಲ್ಲ. ಇರಬಾರದು ಕೂಡಾ. ಒಂದು ವೇಳೆ ಹಾಗೆಲ್ಲಾದರೂ ಇದ್ದಲ್ಲಿ ತಡವಾಗಿಯಾದರೂ ಅದು ಪ್ರಕಟವಾಗಿ ಸ್ನೇಹ ಮುರಿಯಬಹುದು. ಸ್ನೇಹಕ್ಕೆ ಸಹಪಾಠಿಗಳೇ ಆಗಬೇಕೆಂದಿಲ್ಲ. ಸಮವಯಸ್ಕರೂ ಆಗಬೇಕಾದ್ದಿಲ್ಲ. ಸ್ನೇಹಿತರು ಯಾವಾಗಲೂ ಜೊತೆಯಲ್ಲೇ ಇದ್ದು ಓಡಾಡ ಬೇಕಾಗಿಯೂ ಇಲ್ಲ. ಎಷ್ಟು ದೂರದಲ್ಲಿದ್ದರೂ, ವರ್ಷಗಳ ಬಳಿಕ ಭೇಟಿಯಾದರೂ ಅವರ ಆತ್ಮೀಯತೆ ಹಾಗೆಯೇ ಉಳಿಯುವುದು ವಿಶೇಷ ತಾನೇ? ಇಂತಹ ಒಂದು ಸ್ನೇಹದ ನೆನಪು ನನಗಾದುದು ಬಿಜೈ, ಆನೆಗುಂಡಿ, ಕಾಪಿಕಾಡು, ಬಾಳೆಬೈಲು, ಕೊಟ್ಟಾರ ಕ್ರಾಸ್ ಮನೆಗಳನ್ನು ನನ್ನ ಮನಸ್ಸಿನ ಮೂಲಕ ಪ್ರವೇಶ ಮಾಡಿದಾಗ.
ಆ ಸ್ನೇಹ ನನ್ನದಲ್ಲ. ನನ್ನ ಅಮ್ಮನದ್ದು ಮತ್ತು ಮೀನಾಕ್ಷಿಯಕ್ಕನದ್ದು. ಮೀನಾಕ್ಷಿಯಕ್ಕ ಅಂತ ನಾನು ಕರೆಯುತ್ತಿದ್ದುದು. ಅಮ್ಮ ಮೀನಾಕ್ಷಿ ಅಂತ ಏಕವಚನದಲ್ಲೇ ಕರೆಯುವ ತನ್ನ ತಂಗಿಯ ವಯಸ್ಸು ಮೀನಾಕ್ಷಿಯವರದ್ದು. ಮೀನಾಕ್ಷಿಯಕ್ಕ ಅಮ್ಮನನ್ನು ಸುಂದರಿಯಕ್ಕ ಎಂದು ಕರೆಯುತ್ತಿದ್ದರು. ಅವರ ಮನೆಯಲ್ಲೇ ಅತ್ಯಂತ ಚುರುಕಾದ ಚಂದದ ಚೆಂದುಳ್ಳಿ ಚೆಲುವೆ ಮಾತುಗಾತಿ ನನ್ನ ಮೀನಾಕ್ಷಿಯಕ್ಕ. ಅವರು ಬೇರೆ ಯಾರೂ ಅಲ್ಲ. ಆನೆಗುಂಡಿಯಲ್ಲಿ ನಾನು ಹುಟ್ಟಿದ ಮನೆಯ ಧನಿಗಳಾದ ರಾಮಪ್ಪ ಮೇಸ್ತ್ರಿಗಳ ಎರಡನೆಯ ಮಗಳು. ರಾಮಪ್ಪ ಮೇಸ್ತ್ರಿಗಳ ಹಿರಿಯ ಮಗಳು ಅಮ್ಮನ ಸಹಪಾಠಿಯಾಗಿದ್ದರೆಂದು ತಿಳಿದಿರುವ ಭವಾನಿಯಕ್ಕ. ಅಮ್ಮ ಮದುವೆಯಾಗಿ ಆನೆಗುಂಡಿ ಮನೆಯಲ್ಲಿ ಸಂಸಾರ ಶುರುಮಾಡಿದಾಗ ಭವಾನಿಯಕ್ಕನೂ ಮದುವೆಯಾಗಿ ಗಂಡನ ಮನೆಗೆ ಹೋಗಿದ್ದರು. ಅಮ್ಮನ ಆನೆಗುಂಡಿಯ ಸ್ನೇಹಿತರಲ್ಲಿ ಅತ್ಯಂತ ಸಲುಗೆಯ ಪ್ರೀತಿಯವರು ಮೀನಾಕ್ಷಿಯಕ್ಕ, ನಾವು ಆನೆಗುಂಡಿಯ ಮನೆ ಬಿಟ್ಟು ಕಾಪಿಕಾಡಿನ ಗುಡ್ಡೆ ಮನೆಗೆ ಬಂದ ಮೇಲೂ ತನ್ನ ಮದುವೆಯಾಗುವ ವರೆಗೆ ನಮ್ಮ ಮನೆಗೆ ಬಂದು ತನ್ನ ಸುಖದುಃಖಗಳನ್ನು ಅಮ್ಮನಲ್ಲಿ ಹಂಚಿಕೊಳ್ಳುತ್ತಿದ್ದರು.
ಬಾಳೆ ಬೈಲಿನ ಅವರ ಮನೆಯಿಂದ ಕೊಟ್ಟಾರ ಕ್ರಾಸ್‌ನಲ್ಲಿ ಈಗಿರುವ ಮನೆಯ ಗೃಹಪ್ರವೇಶಕ್ಕೆ ನಾನೂ ಅಪ್ಪ ಅಮ್ಮನ ಜೊತೆ ಹೋದ ನೆನಪಿದೆ. ಆಗ ರಾಮಪ್ಪ ಮೇಸ್ತ್ರಿಗಳು ತೀರಿ ಕೊಂಡಿದ್ದಿರಬೇಕು. ಅವರ ಮಡದಿ ಅಜ್ಜಿ ಕಮಲಕ್ಕ, ಅವರ ಮಕ್ಕಳಾದ ವಕೀಲರಾದ ನಾರಾಯಣ ಮಾವ, ಬಲ್ಲಾಳ್ ಮೋಟಾರ್ಸ್ ಕಚೇರಿಯಲ್ಲಿ ಉದ್ಯೋಗಿಯಾಗಿದ್ದ ಕೃಷ್ಣಪ್ಪ ಮಾವ, ಇನ್ನಿಬ್ಬರು ತಮ್ಮಂದಿರು, ತಂಗಿಯರಾದ ಮೀನಾಕ್ಷಿಯಕ್ಕ, ಲಲಿತಕ್ಕ, ಶಾಂಭವಿಯಕ್ಕ, ಇವರೆಲ್ಲಾ ಕೊಟ್ಟಾರ ಕ್ರಾಸ್‌ನ ದೊಡ್ದ ಮನೆಯ ಮಂದಿಗಳು.
ಮೀನಾಕ್ಷಿಯಕ್ಕ ಟೈಲರಿಂಗ್ ಕಲಿತು ಮನೆಯಲ್ಲೇ ಹೊಲಿಗೆ ಹೇಳಿಕೊಡುತ್ತಿದ್ದರು.ಮತ್ತು ಲಂಗ, ರವಕೆ ಹೊಲಿದು ಕೊಡುತ್ತಿದ್ದರು. ಈ ವೃತ್ತಿ ಕೂಡ ಇವರಿಬ್ಬರ ಸ್ನೇಹಕ್ಕೆ ಕೊಂಡಿಯಾಯಿತು. ಮೀನಾಕ್ಷಿಯಕ್ಕನಿಗೆ ತನ್ನ ಎಲ್ಲಾ ಸಮಾಚಾರಗಳನ್ನು ಅಮ್ಮನಲ್ಲಿ ಹಂಚಿಕೊಳ್ಳಲೇ ಬೇಕು ಎನ್ನುವಂತಹ ತವಕ ಇದ್ದಂತೆಯೇ ಅವರ ಸಮಸ್ಯಗಳಿಗೆ ಬಹುಶಃ ಅಮ್ಮನ ಮಾತುಗಳು ಸಮಾಧಾನ ನೀಡುತ್ತಿದ್ದುದೂ ಕಾರಣವಿರಬಹುದು. ಅವರು ಮದುವೆಯಾಗಲಿದ್ದ ಹಿರಿಯ ಮಗಳಾಗಿದ್ದು ಇನ್ನುಳಿದ ಇಬ್ಬರು ಹೆಣ್ಣು ಮಕ್ಕಳು ಕೂಡ ಮದುವೆ ವಯಸ್ಸಿನವರಾಗಿದ್ದು ಮನೆಯವರು ಒಪ್ಪಿದ ಸಂಬಂಧಗಳಿಗೆ ಮೀನಾಕ್ಷಿಯಕ್ಕ ಒಪ್ಪದೆ ಇದ್ದಾಗ ಮನೆಯಲ್ಲಿ ಅಸಮಾಧಾನ ಉಂಟಾಗುವುದು ಸಹಜ ತಾನೆ? ಆದರೆ ತನಗೆ ಇಷ್ಟವಾಗದೆ ಇದ್ದ ಸಂಬಂಧಗಳನ್ನು ಒಪ್ಪದೆ ಇರುವ, ಆ ಕಾಲಕ್ಕೆ ವಿಶೇಷ ಎನಿಸುವ ಸ್ವತಂತ್ರ ಮನೋಭಾವ ಮೀನಾಕ್ಷಿಯಕ್ಕನದ್ದಾಗಿತ್ತು. ಅವರನ್ನು ಹಾಗೂ ಅವರ ತಾಯಿ ಕಮಲಕ್ಕನನ್ನೂ ಸಮಾಧಾನಗೊಳಿಸುವ ಹೊಣೆ ನನ್ನಮ್ಮನದ್ದಾಗಿದ್ದು ಅಂತಹ ಸಂದರ್ಭದಲ್ಲಿ ಅಮ್ಮ ಅಲ್ಲಿಗೆ ಹೋಗಿ ಸಮಾಧಾನ ಹೇಳುತ್ತಿದ್ದುದೂ ಇತ್ತು. ಆ ಕಾಲದಲ್ಲಿ ಹೆಣ್ಣು ಮಕ್ಕಳ ವಿದ್ಯಾಭ್ಯಾಸ 7ನೆಯ ತರಗತಿಯವರೆಗೆ ಇದ್ದುದು ಹೈಸ್ಕೂಲಿನ ತರಗತಿಗಳವರೆಗೆ ಏರಿತ್ತು. ಕಲಿತ ಹುಡುಗಿಯಾಗಿದ್ದ ಮೀನಾಕ್ಷಿಯಕ್ಕ ಈ ರೀತಿ ಹಟ ಮಾಡುತ್ತಿದ್ದುದು, ತನ್ನಂತೆಯೇ ವಿದ್ಯಾವಂತ ಉದ್ಯೋಗದಲ್ಲಿರುವ ಹುಡುಗನನ್ನು ಆಸೆ ಪಡುವುದು ಸಹಜವೇ ಆಗಿದ್ದರೂ ಆ ಕಾಲಕ್ಕೆ ಇಂತಹ ಸ್ವಭಾವ ಹಲವು ಮನೆಗಳಲ್ಲಿ ಅಸಮಾಧಾನಗಳಿಗೆ ಎಡೆ ಮಾಡಿಕೊಟ್ಟಿರುವುದೂ ಸತ್ಯವೇ. ಏನೇ ಆದರೂ ಮೀನಾಕ್ಷಿಯಕ್ಕನ ಆಸೆ ನೆರವೇರಿತು.
ವಿವಾಹವಾಗಿ ದೂರದ ಮುಂಬೈಗೆ ಹೋದರು. ಆ ಬಳಿಕ ಲಲಿತಕ್ಕ ಶಾಂಭವಿಯಕ್ಕನವರ ಮದುವೆಯೂ ನಡೆಯುತು. ಆ ಬಳಿಕವೇ ಹಿರಿಯ ಮಗಂದಿರ ಮದುವೆಗಳೂ ನಡೆದು ಕಮಲಕ್ಕ ನೆಮ್ಮದಿಯ ನಿಟ್ಟುಸಿರು ಬಿಟ್ಟರು ಎನ್ನಿ. ಕಾಪಿಕಾಡಿನ ತುದಿಯಲ್ಲಿನ ಈ ಮನೆಗೆ ಇದೀಗ ಹೋಗದೆ ವರ್ಷಗಳೇ ಆದರೂ ನಾರಾಯಣ ಮಾವನ ಮಡದಿ ಸಿಕ್ಕಾಗ ಆತ್ಮೀಯತೆಯಿಂದ ಮಾತನಾಡಿಸುತ್ತಾ ಹಳೆಯ ತಲೆಮಾರಿನ ಸ್ನೇಹ ಉಳಿಯುವಂತಾಗಿದೆ. ಹಿರಿಯರೆಲ್ಲ ದೂರವಾಗಿ ಕಿರಿಯರ ಪರಿಚಯ ಇಲ್ಲವಾದರೂ ಆ ದಾರಿಯಲ್ಲಿ ಸಾಗುವಾಗ ಮನೆ ಮಂದಿಯೆಲ್ಲಾ ನೆನಪಾಗುತ್ತಾರೆ. ಆ ಮನೆಯ ಆತಿಥ್ಯ ನೆನಪಾಗುತ್ತದೆ.
ಈಗ ನೆನಪಿಸಿಕೊಂಡಾಗ ಆಶ್ಚರ್ಯವಾಗುವ ವಿಷಯ ಅಂದರೆ ಆಗೆಲ್ಲಾ ಅದೆಷ್ಟು ಸಲುಗೆ, ವಿಶ್ವಾಸಗಳಿಂದ ಯಾರ ಮನೆಗೂ ಹೋಗುವ ಸಾಧ್ಯತೆ ಇತ್ತಲ್ಲಾ ಎಂದು. ಊರಲ್ಲಿ ಯಾವುದೇ ಗರ್ಭಿಣಿಗೆ ಹೆರಿಗೆಯಾಗಿ ಮಗುವನ್ನು ನೋಡಿ ಬರಲು ಯಾರೂ ಕರೆಯಬೇಕೆಂದಿರಲಿಲ್ಲ. ಅಲ್ಲದೆ ನಾಮಕರಣ, ಹುಟ್ಟುಹಬ್ಬಗಳ ಸಂಭ್ರಮವೂ ಅಷ್ಟೊಂದು ಎನ್ನುವುದು ಬಿಡಿ ಇಲ್ಲವೇ ಇಲ್ಲ; ಇದ್ದರೂ ಅದೊಂದು ತೀರಾ ಸಣ್ಣ ಕೌಟುಂಬಿಕ ಕಾರ್ಯಕ್ರಮ. ಹೀಗಿರುವಾಗ ನನ್ನ ಅಜ್ಜಿ ಮಕ್ಕಳೆಂದರೆ ತುಂಬಾ ಇಷ್ಟ. ನಗು ಕಲಿತ ಯಾವ ಮಗುವೇ ಆಗಲಿ ನಗುತ್ತಾ ಅವರ ಕೈಗೆ ಬರುತ್ತಿದ್ದುದು ವಿಶೇಷವೇ. ಆದ್ದರಿಂದ ಇರಬಹುದು ಹೊಸ ಮಗುವಿನ ಸ್ವಾಗತಕ್ಕೆ ನಮ್ಮಜ್ಜಿಯೂ ಕಾಯುತ್ತಿದ್ದರೆಂದರೇ ಸರಿ. ಅವರು ಮಗು ನೋಡಲು ಹೊರಟಾಗ ಅವರ ಜೊತೆಯಲ್ಲಿ ನಾನೂ ರೆಡಿ. ನಾನು ನಮ್ಮ ಮನೆಯಲ್ಲಿ ಎಲ್ಲರ ಬಾಲ ಎಂದರೆ ಸರಿ. ಅಪ್ಪ, ಚಿಕ್ಕಪ್ಪ, ಅಜ್ಜಿ, ಅಮ್ಮ, ಮುಂದೆ ಚಿಕ್ಕಮ್ಮಂದಿರು, ಅತ್ತಿಗೆ ಹೀಗೆ ಇವರೊಂದಿಗೆ ನನ್ನ ಬಾಲ್ಯದಲ್ಲಿ ಹತ್ತರ ವಯಸ್ಸಿನವರೆಗೆ ಸುತ್ತಾಡಿದ್ದೇ ಸುತ್ತಾಡಿದ್ದು. ಮಗು ಹುಟ್ಟಿದ್ದು ಗೊತ್ತಾದಂತೆಯೇ ನೋಡಿ ಬರುವ ಅಜ್ಜಿ ಆ ಮಗು ಸಾಧಾರಣ ದೊಡ್ಡದಾಗುವವರೆಗೆ ಆ ಮಗುವನ್ನು ಮುದ್ದಿಸಿ ಮಾತನಾಡಿಸಲೆಂದೇ ಹೋಗುತ್ತಿದ್ದರಲ್ಲವೇ? ಹಲ್ಲಿಲ್ಲದ ಹಾಲುಗಲ್ಲದ ಮಕ್ಕಳು ಅವರ ಕೈ ಸೇರಿ ನಗುತ್ತಿದ್ದವು, ಅಳುತ್ತಿರಲಿಲ್ಲ. ಜೊತೆಗೆ ಅಜ್ಜಿ ‘‘ಕೊಂಡಾಟದ ಬಾಲೆ, ದೇವೆರ್ ದಕ್ಕ್‌ದ್ ಪೋವಡಪ್ಪಾ’’ ಎಂದು ಹರಸುತ್ತಿದ್ದರು.
ಈ ದಕ್ಕದ್ ಪೋವಡ್ ಅಂದರೆ ‘‘ಬಿಸಾಡಿ ಹೋಗಲಿ’’ ಎಂದು ಹೇಳುತ್ತಾರೆ ಎನ್ನುವುದರ ಅರ್ಥ ಆಗಿರಲಿಲ್ಲ. ದೊಡ್ಡವಳಾದ ಮೇಲೆ ‘ಭಾಷೆ’ ಒಮ್ಮಾಮ್ಮೆ ನೇರವಾದ ಅರ್ಥವನ್ನು ಬಿಟ್ಟು ಬೇರೆಯೇ ಒಳಾರ್ಥವನ್ನು ಒಳಗೊಂಡಿರುತ್ತದೆ ಎಂದು ತಿಳಿಯಿತು. ‘ದೇವರಿಗೆ ಪ್ರಿಯವಾಗುವುದು’, ‘ದೇವರ ಬಳಿಗೆ ಹೋಗುವುದು’ ಎಂಬ ನುಡಿಗಟ್ಟುಗಳಿಗೆ ಸಾಯುವುದು ಎಂಬ ಅರ್ಥ ಇದೆ ಎಂದು ತಿಳಿಯಿತು. ಆದ್ದರಿಂದಲೇ ಹುಟ್ಟಿಸಿದ ಆ ದೇವರಿಗೆ ಪ್ರಿಯವಾಗುವುದು ಬೇಡ, ಮಗುವಿಗೆ ದೀರ್ಘಾಯುಷ್ಯವಿರಲಿ ಎಂಬ ಅರ್ಥದಲ್ಲಿ ‘ದೇವರು ಬಿಸಾಡಿ ಹೋಗಲಿ’ ಎನ್ನುವುದಾಗಿದೆ ಎಂದು ತಿಳಿಯಿತು. ನಮ್ಮ ಜನಪದರು ಹೇಗೆ ಭಾಷೆಯನ್ನು ಅರ್ಥಪೂರ್ಣವಾಗಿ ಚಂದವಾಗಿ ಉಪಯೋಗಿಸಿದ್ದಾರಲ್ಲಾ?
ಇದಕ್ಕೆ ಇನ್ನೊಂದು ಉದಾಹರಣೆ ನೋಡಿ. ನಾವು ಮನೆಯಿಂದ ಹೊರಗೆ ಹೊರಡುವಾಗ ‘‘ಬರ್ಪೆ’’, ಅಥವಾ ‘‘ಬರ್ತೇನೆ’’ ಎನ್ನುತ್ತೇವೆ. ‘‘ಹೋಗ್ತೇನೆ’’ ಎನ್ನ ಬೇಕಾಗಿರುವುದು ಸರಿಯಾದುದೇ. ಆದರೆ ದೊಡ್ಡವರು ಹಾಗೆ ಹೇಳಿದಾಗ ಹಾಗೆ ಹೇಳಬಾರದು ‘‘ಹೋಗಿಬರ್ತೇನೆ’’ಎಂದು ಹೇಳಬೇಕು ಎಂದು ತಿದ್ದುತ್ತಿದ್ದರು. ಅಂದರೆ ಮನೆಯಿಂದ ಹೊರಗೆ ಹೊರಟವರು ಮತ್ತೆ ಮನೆಗೆ ಹಿಂದಿರುಗಿ ಬರುವ ಆಶಯವನ್ನು ಅದು ಹೊಂದಿರುತ್ತದೆ. ಆದ್ದರಿಂದಲೇ ನಿತ್ಯ ಮನೆಯಿಂದ ಹೊರಡುವ ಸಮಯದಲ್ಲಿ ‘‘ಬರ್ಪೆ’’, ‘‘ಬರ್ತೇನೆ’’ ಎಂದು, ಅಪರೂಪಕ್ಕೆ ಯಾರ ಮನೆಗಾದರೂ ಹೋಗಿ ಅಲ್ಲಿಂದ ಹೊರಟಾಗ ‘‘ಪೋದು ಬರ್ಪೆ’’ ‘‘ಹೋಗಿ ಬರ್ತೇನೆ’’ ಎಂದು ಹೇಳುವುದು ಭಾಷೆಯ ಸ್ವಾರಸ್ಯದೊಂದಿಗೆ ಆ ಭಾಷೆಯನ್ನಾಡುವ ಜನರ ಸಂಸ್ಕೃತಿಯೂ ಹೌದು. ಈ ಹೋಗಿ ಬರುವ ನಂಟುತನ ಸದಾ ಇರಲಿ ಎಂದು ಬಯಸುವ ಜನ ಅಂದಿನವರು.
ಅವರು ವ್ಯಾಕರಣ ಶುದ್ಧರಲ್ಲ ಅನಿಸಿದರೂ ಮನಸ್ಸಿನಿಂದ ಶುದ್ಧರೇ ಆಗಿದ್ದವರಲ್ಲವೇ? ಇದರ ಜೊತೆಗೆ ಇನ್ನೊಂದು ನಂಬಿಕೆ ತಳಕು ಹಾಕಿಕೊಂಡಿತು ನನ್ನ ಮನಸ್ಸಲ್ಲಿ. ಅದೇನೆಂದರೆ ಕೆಲವರ ಮಾತು ನಾಟುತ್ತದೆ. ಅವರಾಡಿದ ಕೆಟ್ಟ ಮಾತುಗಳು ಸತ್ಯವಾಗಿ ಬಿಡುತ್ತದೆ. ಹಾಗೆಯೇ ಕೆಲವರ ಕಣ್ಣು ತಾಗುತ್ತದೆ ಎನ್ನುವುದು. ಆದರೆ ಬಿಜೈಯ ಊರಲ್ಲಿದ್ದಷ್ಟು ದಿನ ಇಂತಹ ನಂಬಿಕೆಗಳಿವೆ ಎನ್ನುವುದೇ ನನಗೆ ತಿಳಿಯಲಿಲ್ಲ. ಮುಂದೆ ಗೊತ್ತಾಯ್ತು ಎನ್ನುವುದು ನಾನು ಬೇರೆ ಊರಲ್ಲಿ ಇದ್ದಾಗ, ಹಾಗೆಯೇ ಬೇರೆ ಊರಿಗೆ ಹೋಗಿದ್ದಲ್ಲ್ಲಿ. ಆದ್ದರಿಂದಲೇ ಬಿಜೈ ಊರಲ್ಲಿ ಕೆಟ್ಟ ಕಣ್ಣಿನವರೂ, ಕೆಟ್ಟ ನಾಲಿಗೆಯವರೂ ಇರಲಿಲ್ಲ ಎಂದೇ ನನ್ನ ನಂಬಿಕೆ.
ಆದರೆ ಒಬ್ಬ ವ್ಯಕ್ತಿ ಮಾತ್ರ ಕೆಟ್ಟದು ಮಾಡಬಹುದು ಎಂದು ಭಯಪಟ್ಟಿದ್ದೆ. ನಾನೊಬ್ಬಳೇ ಅಲ್ಲ. ನನ್ನಂತಹ ಮಕ್ಕಳೆಲ್ಲರೂ. ಆದರೆ ಅದು ನಮ್ಮ ಭಯವಾಗಿತ್ತೇ ಹೊರತು ಆ ವ್ಯಕ್ತಿ ಮಾತ್ರ ಯಾರಿಗೂ ಕೆಟ್ಟದ್ದನ್ನು ಮಾಡಿಲ್ಲ. ತಾನು ಮಾತ್ರ ಬದುಕಿನಲ್ಲಿ ಕೆಟ್ಟ ದಿನಗಳನ್ನು ಅನುಭವಿಸಿದ್ದರು. ನನ್ನೂರಿನ ಯಾರಿಗಾದರೂ ಈ ವ್ಯಕ್ತಿಯ ನೆನಪಾಗಬಹುದು. ಅವರೇ ಸಂಕಪ್ಪಣ್ಣ. ಅವರು ಗಟ್ಟಿ ಮುಟ್ಟಿನ ದೇಹ. ದೊಡ್ಡ ಚಡ್ಡಿ ಹಾಗೂ ಮೇಲೊಂದು ಶರ್ಟು ಅವರ ಉಡುಗೆ. ದಾರಿ ನಡೆದಾಗ ತನ್ನ ಪಾಡಿಗೆ ತಾನೇ ಮಾತಾಡುತ್ತಾ ನಡೆಯುತ್ತಿದ್ದರು.
ಒಮ್ಮಿಮ್ಮೆ ಗಟ್ಟಿಯಾಗಿ ಬೊಬ್ಬೆ ಹಾಕಿಕೊಂಡು ಯಾರನ್ನೋ ಬೈಯುತ್ತಾ ಕಲ್ಲು ಹೆಕ್ಕಿ ಕೊಂಡು ಬಿಸಾಡಿಕೊಂಡು ಹೋಗುತ್ತಿದ್ದರೆ ನಾವು ಹೆದರಿ ವಾಪಸ್ ಮನೆಗೆ ಹಿಂದಿರುಗುತ್ತಿದ್ದುದೂ ಇತ್ತು. ದೊಡ್ಡವರಾಗುತ್ತಿದ್ದಂತೆ ಭಯ ಇಲ್ಲವಾದುದು ನಿಜ. ಆಗ ಸಂಕಪ್ಪಣ್ಣ ನಮಗೆ ಏನು ಮಾಡುವುದಿಲ್ಲ ಎಂಬುದು ಖಾತ್ರಿಯಾಗಿ ರಸ್ತೆಯ ಇನ್ನೊಂದು ಬದಿಯಲ್ಲಿ ನಡೆದು ಹೋಗುತ್ತಿದ್ದೆವು, ಜತೆಗೆ ಸಂಕಪ್ಪಣ್ಣನ ಆರ್ತವಾದ ಅರಚಾಟ, ಕಿರಿಚಾಟಗಳಲ್ಲಿ ತುಂಬಿದ್ದ ನೋವು ಕಂಡು ಕನಿಕರಪಡುತ್ತಿದ್ದೆವು. ಸಂಕಪ್ಪಣ್ಣನ ಬಗ್ಗೆ ತಿಳಿದ ವಿಚಾರಗಳಿಷ್ಟು. ಅವರು ಸೈನ್ಯದಲ್ಲಿ ಯೋಧರಾಗಿದ್ದರಂತೆ, ಸೈನ್ಯದಿಂದ ಹೊರಹಾಕಲ್ಪಟ್ಟ ಬಳಿಕ ನಿರ್ಗತಿಕರಾಗಿದ್ದವರು ಬಿಜೈಯಲ್ಲಿದ್ದ ಪಿ. ಮುರಹರಿರಾಯರ ಮನೆಯಲ್ಲಿದ್ದರು. ಅವರಲ್ಲಿಗೆ ಯಾಕೆ, ಹೇಗೆ ಬಂದರೆನ್ನುವುದು ತಿಳಿಯದು. ಮುರಹರಿರಾಯರ ಮನೆಯಲ್ಲಿ ಕಟ್ಟಿಗೆ ಒಡೆಯುವ ಕೆಲಸವೇ ಮೊದಲಾದ ಹೊರ ಕೆಲಸಗಳನ್ನೆಲ್ಲಾ ಮಾಡುತ್ತಿದ್ದ ಅವರು ಒಮ್ಮಿಮ್ಮೆ ಕಟ್ಟಿಗೆ ಡಿಪೋಗಳಲ್ಲಿಯೂ ಕೆಲಸ ಮಾಡಿದುದನ್ನು ನೋಡಿದ ನೆನಪು ನನ್ನದು. ಆದರೆ ಯಾರಲ್ಲಿಯೂ ಮಾತನಾಡಿದುದನ್ನಾಗಲೀ, ಜಗಳವಾಡಿದುದ್ದನ್ನಾಗಲೀ ಯಾವತ್ತೂ ನೋಡಿಲ್ಲ. ಹಾಗೆಯೇ ಸಂಕಪ್ಪಣ್ಣ ಯಾವ ಮಕ್ಕಳಿಗೂ ಕಲ್ಲು ಹೊಡೆದದ್ದಾಗಲೀ ಇಲ್ಲ. ಅವರಿಗೆ ಹುಚ್ಚು ಹಿಡಿದಿದೆ ಎಂದು ತಿಳಿದ ನಮಗೆ ಅವರಲ್ಲಿ ಕನಿಕರ ಮೂಡಿ ಭಯ ಇಲ್ಲವಾಯಿತು.
ಈ ಹುಚ್ಚು ಅವರಿಗೆ ಒದಗಿದ ಶಿಕ್ಷೆ. ಸೈನ್ಯದಲ್ಲಿದ್ದ ಸೈನಿಕರು ಏನಾದರೂ ತಪ್ಪು ಮಾಡಿದಾಗ ಅವರನ್ನು ನಿವೃತ್ತಿಗೊಳಿಸಿ, ಅವರನ್ನು ಹುಚ್ಚರನ್ನಾಗಿ ಮಾಡಿ ಹೊರ ಕಳುಹಿಸುತ್ತಿದ್ದರಂತೆ. ಅವರಿಂದ ಒಳಗಿನ ರಹಸ್ಯಗಳು ಸೋರಿಕೆಯಾಗದಂತೆ ತೆಗೆದುಕೊಳ್ಳುವ ಎಚ್ಚರಿಕೆಯ ಕ್ರಮವಂತೆ. ಇದು ಎಷ್ಟರ ಮಟ್ಟಿಗೆ ಸರಿ ಎನ್ನುವುದು ಇಂದಿಗೂ ನನಗೆ ತಿಳಿಯದ ವಿಷಯವೇ. ಈ ಕಾರಣದಿಂದಲೇ ಸೈನ್ಯ ಸೇರುವುದೆಂದರೆ ಒಂದು ರೀತಿಯ ಭಯ ಈಗಲೂ ಇದೆ. ಸೈನಿಕರಾಗುವುದು ದೇಶ ಸೇವೆಯೆನ್ನುವುದು ಒಪ್ಪಿಗೆಯಾದರೂ ದೇಶ ಸೇವೆಗೆ ಬೇರೆ ಹಲವಾರು ದಾರಿಗಳಿವೆಯಲ್ಲಾ? ದೇಶದ ಗಡಿ ಕಾಯಲು ಸೈನಿಕರು ಬೇಕೆನ್ನುವ ತಿಳುವಳಿಕೆಯಿಲ್ಲದ ಆ ಬಾಲ್ಯದಲ್ಲಿ ಯಾಕೆ ಗಡಿ ಕಾಯಬೇಕು? ಯಾಕೆ ಯುದ್ಧವಾದರೆ ಜನ ಸಾಯುತ್ತಾರಲ್ಲಾ? ‘‘ಕಳಬೇಡ, ಕೊಲಬೇಡ’’ ಎಂದಾಗ ಹೀಗೆ ಯುದ್ಧದ ಹೆಸರಲ್ಲಿ ಕೊಲ್ಲುವುದು ತಪ್ಪಲ್ಲವೇ? ಎಂದು ನನ್ನ ತಿಳುವಳಿಕೆಯಿಲ್ಲದ ಮುಗ್ಧ ಪ್ರಶ್ನೆಯಾಗಿತ್ತು ಅಂದು.