ಕಾರ್ಯಕರ್ತರನ್ನು ಎದೆಗೂಡಿನಲ್ಲಿಟ್ಟು ಕಾಪಾಡಿದ ಪುಣ್ಯಾತ್ಮ ಅರಸು-ಕೆ.ಲಕ್ಕಣ್ಣ

Update: 2016-12-14 18:50 GMT

ಬೆಂಗಳೂರಿನ ಮಲ್ಲೇಶ್ವರಂನಲ್ಲಿ ಹುಟ್ಟಿ ಬೆಳೆದ ಕೆ.ಲಕ್ಕಣ್ಣ(72) ಬೆಂಗಳೂರು ಮಹಾನಗರ ಪಾಲಿಕೆಗೆ ಮೇಯರ್ ಆಗಿದ್ದವರು. ಅರವತ್ತು-ಎಪ್ಪತ್ತರ ದಶಕದಲ್ಲಿ ಬೆಂಗಳೂರು ನಗರದಲ್ಲಿ ಕನ್ನಡಕ್ಕಾಗಿ ಹೋರಾಡಿದ ಕನ್ನಡದ ಕಟ್ಟಾಳು. ಕನ್ನಡ ರಾಜ್ಯೋತ್ಸವವನ್ನು ಬಹಳ ಅದ್ದೂರಿಯಿಂದ ಆಚರಿಸುತ್ತಿದ್ದ ಕೆಲವೇ ಕೆಲವು ಯುವಕರ ಸಂಘಟನೆಗಳಲ್ಲಿ ಲಕ್ಕಣ್ಣರ ಸಂಘ ಮುಂಚೂಣಿಯಲ್ಲಿತ್ತು. ಕನ್ನಡದ ಕಲಾವಿದರನ್ನು ಕರೆಸಿ ಸನ್ಮಾನ ಮಾಡುತ್ತಿದ್ದ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದ, ಕನ್ನಡ ಭಾಷೆಯ ಪರವಾದ ಹೋರಾಟಕ್ಕೆ ಸದಾ ಸಿದ್ಧರಿದ್ದ ಯುವಕರ ತಂಡದಲ್ಲೊಬ್ಬರು. ಗೌರ್ನಮೆಂಟ್ ಪ್ರೆಸ್‌ನಲ್ಲಿ ಕೆಲಸದಲ್ಲಿದ್ದ ಲಕ್ಕಣ್ಣನವರು, ಯೂನಿಯನ್ ಲೀಡರ್ ಆಗಿ ಹಲವು ಹೋರಾಟಗಳನ್ನು ಹುಟ್ಟುಹಾಕಿದ ಸಂಘಟನಾ ಚತುರ ಎಂಬ ಹೆಸರು ಪಡೆದಿದ್ದರು. ಮುಂದೆ, ಮ. ರಾಮಮೂರ್ತಿಯವರ ಕನ್ನಡ ಪಕ್ಷ ಸೇರಿ, ಉಪ ಕಾರ್ಯದರ್ಶಿಯಾಗಿ ಹಲವು ಹೋರಾಟಗಳಲ್ಲಿ ಸಕ್ರಿಯರಾಗಿ ಪಾಲ್ಗೊಂಡವರು. ಮ.ರಾಮಮೂರ್ತಿಯವರ ನಿಧನಾನಂತರ ಕನ್ನಡ ಪಕ್ಷಕ್ಕೆ ತರಾಸು ಅವರನ್ನು ಅಧ್ಯಕ್ಷರನ್ನಾಗಿಸಿಕೊಂಡು, 1969 ರಲ್ಲಿ ಲಾಲ್‌ಬಾಗ್ ಗ್ಲಾಸ್‌ಹೌಸ್‌ನಲ್ಲಿ ಆಚರಿಸಿದ ರಾಜ್ಯೋತ್ಸವ ಬೆಂಗಳೂರಿನ ನಗರದ ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ.

1969ರಲ್ಲಿ ಕಾಂಗ್ರೆಸ್ ಇಬ್ಭಾಗವಾದಾಗ, ಇಂದಿರಾ ಕಾಂಗ್ರೆಸ್ ಸೇರಿ, ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ ದುಡಿದ ಲಕ್ಕಣ್ಣ ನವರು ಮೊದಲಿಗೆ ಯೂತ್ ರೂರಲ್ ಪ್ರೆಸಿಡೆಂಟ್ ಆದರು. ಕೆಂಗಲ್ ಹನುಮಂತಯ್ಯ, ಹುಚ್ಚಮಾಸ್ತಿಗೌಡರ ಕಡೆಯಿಂದ ದೇವರಾಜ ಅರಸರ ಸಂಪರ್ಕಕ್ಕೆ ಬಂದರು. 1970ರಲ್ಲಿ ನಡೆದ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದರು. ಎದುರಾಳಿ ರಾಮಚಂದ್ರಗೌಡರಿಂದ ಸೋತರು. 1978ರಲ್ಲಿ ದೇವರಾಜ ಅರಸರೇ ಕರೆದು ಗಾಂಧಿನಗರದ ಅಭ್ಯರ್ಥಿಯಾಗು ಎಂದಾಗ, ಬೇಡವೆಂದು ಚುನಾವಣಾ ಕಣದಿಂದ ದೂರ ಉಳಿದರು. 1992-93ರಲ್ಲಿ ಬೆಂಗಳೂರಿನ ಮಹಾನಗರ ಪಾಲಿಕೆಯ ಮೇಯರ್ ಆಗಿ ಆಯ್ಕೆಯಾದ ಲಕ್ಕಣ್ಣನವರು, ಮಹತ್ತರ ಸಾಧನೆಯನ್ನೇನೂ ಮಾಡದಿದ್ದರೂ ಕೈ ಬಾಯಿ ಕೆಡಿಸಿಕೊಳ್ಳದ ಶುದ್ಧಹಸ್ತರು, ನಿಸ್ಪಹ ಸಮಾಜ ಸೇವಕರಾಗಿ ಹೆಸರು ಪಡೆದರು. ನಂತರ ಮಹಾನಗರ ಪಾಲಿಕೆಯಲ್ಲಿಯೇ ಇಂಜಿನಿಯರ್‌ಗಳ, ಕಂದಾಯ ಅಧಿಕಾರಿಗಳ ಸಂಘದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ ಲಕ್ಕಣ್ಣನವರು, ಈಗ ಕಾಂಗ್ರೆಸ್ ಪಕ್ಷದಲ್ಲಿದ್ದರೂ ಸಕ್ರಿಯ ರಾಜಕಾರಣದಿಂದ ದೂರವೇ ಉಳಿದು, ನಿವೃತ್ತಿಯ ಅಂಚಿನಲ್ಲಿದ್ದಾರೆ. ಪ್ರತಿದಿನ ಮಹಾನಗರ ಪಾಲಿಕೆಯ ಮಾಜಿ ಮೇಯರ್‌ಗಳ ಕೊಠಡಿಯಲ್ಲಿ ಸ್ನೇಹಿತರೊಂದಿಗೆ ಕೂತು ತಮ್ಮ ಕಾಲದ ರಾಜಕಾರಣವನ್ನು ಮೆಲುಕು ಹಾಕುತ್ತ ಕಾಲ ಕಳೆಯುತ್ತಿದ್ದಾರೆ.

ಇಂತಹ ಲಕ್ಕಣ್ಣನವರು 1969 ರಿಂದ 1979ರವರೆಗೆ, ಅಂದರೆ ಹತ್ತು ವರ್ಷಗಳ ಕಾಲ ದೇವರಾಜ ಅರಸರನ್ನು ಹತ್ತಿರದಿಂದ ಬಲ್ಲವರು. ಅವರು ಕಂಡ ಅರಸು ಇಲ್ಲಿದ್ದಾರೆ.

ಕನ್ನಡದ ಕಟ್ಟಾಳು

ಆ ಕಡೆಗೆ ವಿಧಾನಸೌಧ, ಈ ಕಡೆಗೆ ಎಂಎಸ್ ಬಿಲ್ಡಿಂಗ್‌ನಡುವೆ ನಮ್ಮ ಗೌರ್ನಮೆಂಟ್ ಪ್ರೆಸ್ ಇತ್ತು. ಆ ಪ್ರೆಸ್‌ನಲ್ಲಿ ನಾನು ಕೆಲಸದಲ್ಲಿದ್ದೆ. ಕಾರ್ಮಿಕ ಸಂಘಟನೆಯ ಅಧ್ಯಕ್ಷನಾಗಿದ್ದೆ. ಬೆಂಗಳೂರಿನಲ್ಲಿಯೇ ಹುಟ್ಟಿ ಬೆಳೆದದ್ದರಿಂದ, ಕನ್ನಡದ ಬಗ್ಗೆ ಸ್ವಲ್ಪ ಹೆಚ್ಚು ಎನ್ನುವ ಅಭಿಮಾನ. ಆಗ ಮ.ರಾಮಮೂರ್ತಿಯವರ ‘ಕನ್ನಡ ಪಕ್ಷ’ ಅಂತಿತ್ತು. ಅದು ಪೊಲಿಟಿಕಲ್‌ಪಾರ್ಟಿ. ಆ ಪಾರ್ಟಿಗೊಂದು ಬಾವುಟವೂ ಇತ್ತು. ಇವತ್ತಿನ ಹಳದಿ ಕೆಂಪು ಬಣ್ಣದ ಬಾವುಟ ಇದೆಯಲ್ಲ, ಅದೇ ನಮ್ಮ ಪಕ್ಷದ ಬಾವುಟ. ಅದನ್ನು ಮೊದಲ ಬಾರಿಗೆ ಕನ್ನಡ ಬಾವುಟ ಎಂದು ಕರೆದವರು ರಾಮಮೂರ್ತಿಗಳು. ಆಗ ನಮ್ಮ ಕನ್ನಡ ಪಕ್ಷದ ಕಚೇರಿಗಳು ಇಡೀ ಬೆಂಗಳೂರಿಗೆ ಇದ್ದದ್ದೇ ನಾಲ್ಕು. ಆ ಕಚೇರಿಗಳ ಮೇಲೆ ಆ ಬಾವುಟ ಹಾರಾಡುತ್ತಿತ್ತು.

ಮ.ರಾಮಮೂರ್ತಿಗಳು ಸಡನ್ನಾಗಿ ತೀರಿಕೊಂಡರು. ತರಾಸು ಅವರನ್ನು ಅಧ್ಯಕ್ಷರನ್ನಾಗಿ ಮಾಡಿದೆವು. 1969ರಲ್ಲಿ ಲಾಲ್‌ಬಾಗ್ ಗ್ಲಾಸ್‌ಹೌಸ್‌ನಲ್ಲಿ ಅದ್ದೂರಿ ಕನ್ನಡ ರಾಜ್ಯೋತ್ಸವ ಸಮಾರಂಭ ಏರ್ಪಡಿಸಿದೆವು. 30 ಸಾವಿರ ಜನ ಸೇರಿತ್ತು. ಹೊನ್ನಪ್ಪ ಭಾಗವತರ್ ಮತ್ತು ರಾಜ್‌ಕುಮಾರ್‌ಗೆ ಸನ್ಮಾನ ಮಾಡಿದೆವು. ಆ ಸಂದರ್ಭದಲ್ಲಿಯೇ, ರಾಜ್‌ಕುಮಾರ್ ಮೊದಲಬಾರಿಗೆ ಕೈಯಲ್ಲಿ ಕನ್ನಡ ಬಾವುಟ ಅಂತ ಹಿಡಿದದ್ದು- ಅದೇ ಹಳದಿ ಕೆಂಪು ಬಣ್ಣದ ಬಾವುಟ- ಅದೇ ಕನ್ನಡದ ಬಾವುಟವಾಗಿಹೋಯಿತು. 1969ರಲ್ಲಿ ಕಾಂಗ್ರೆಸ್ ಪಕ್ಷ ಇಬ್ಭಾಗವಾಯಿತು. ಹಳೆ ತಲೆಗಳೆಲ್ಲ ಸಂಸ್ಥಾ ಕಾಂಗ್ರೆಸ್‌ನಲ್ಲಿ- ನಿಜಲಿಂಗಪ್ಪನವರ ಜೊತೆ ಉಳಿದುಕೊಂಡರು. ಇಂದಿರಾ ಕಾಂಗ್ರೆಸ್‌ಗೆ ದೇವರಾಜ ಅರಸು ಕನ್ವೀನರ್ ಆದರು. ಪಕ್ಷ ಸಂಘಟಿಸುವ ಜವಾಬ್ದಾರಿ ಅರಸರ ಹೆಗಲ ಮೇಲೆ ಬಿತ್ತು. ಆಗ ಅರಸರು ಹೊಸ ತಲೆಮಾರಿನ ಯುವಕರನ್ನೇ ಆಯ್ದು ಪಕ್ಷಕ್ಕೆ ಸೇರಿಸಿಕೊಂಡರು. ನಾವು ಬೆಂಗಳೂರಿನಲ್ಲಿ ಕನ್ನಡ ರಾಜ್ಯೋತ್ಸವ ಮಾಡುತ್ತ, ಕನ್ನಡದ ಬಗ್ಗೆ ಹೋರಾಡುತ್ತ, ಕನ್ನಡ ಚಿತ್ರ ನಟರಿಗೆ ಥಿಯೇಟರ್‌ಗಳ ಮುಂದೆ ಸ್ಟಾರ್ ಕಟ್ಟುತ್ತ ಓಡಾಡಿಕೊಂಡಿದ್ದೆವಲ್ಲ, ನಾಯಕರ ಕಣ್ಣಿಗೆ ಬಿದ್ದೆವು. ಹುಚ್ಚಮಾಸ್ತಿಗೌಡರು ನನ್ನನ್ನು ಕರೆದುಕೊಂಡು ಹೋಗಿ ಅರಸರಿಗೆ ಪರಿಚಯಿಸಿದರು. ಅವರು ಕಾಂಗ್ರೆಸ್ ಪಕ್ಷದ ಕಾರ್ಯಕರ್ತ ರನ್ನಾಗಿಸಿದರು. ಪಕ್ಷದ ಅಭ್ಯರ್ಥಿ

ಕನ್ನಡ ಪಕ್ಷ, ಕಾರ್ಮಿಕ ಸಂಘ, ರಾಜ್ಯೋತ್ಸವ, ಸ್ಟಾರ್ ಕಟ್ಟುವುದು, ಸನ್ಮಾನ ಮಾಡುವುದು... ಯುವಕರು ಸಾಮಾನ್ಯವಾಗಿ ಮಾಡುವ, ಆ ವಯಸ್ಸಿನಲ್ಲಿ ಅದೆಲ್ಲ ಮಾಮೂಲಿ ಎನ್ನುವ ಹಂತದಲ್ಲಿರುವಾಗಲೇ 1970ರಲ್ಲಿ ಬೆಂಗಳೂರು ನಗರಪಾಲಿಕೆ ಚುನಾವಣೆ ಎದುರಾಯಿತು. ದೇವರಾಜ ಅರಸರ ನೇತೃತ್ವದ ಕಾಂಗ್ರೆಸ್ ಪಕ್ಷಕ್ಕೆ ಅದೇ ಮೊದಲ ಚುನಾವಣೆ. ನಗರ ಪ್ರದೇಶದಲ್ಲಿ ಅರಸು ನಾಯಕತ್ವವನ್ನು ಪರೀಕ್ಷೆಗೊಡ್ಡುವ ಕಾಲ. ದೇವರಾಜ ಅರಸರು ನನ್ನನ್ನು ಕರೆದು ಪಕ್ಷದ ಟಿಕೆಟ್ ಕೊಟ್ಟು ಅಭ್ಯರ್ಥಿಯನ್ನಾಗಿಸಿದರು. ನನ್ನದು ದತ್ತಾತ್ರೇಯ ವಾರ್ಡ್, ಆನೆ ಗುರುತು. ನಾನಷ್ಟೇ ಅಲ್ಲ, ನನ್ನಂತಹ ಹಲವಾರು ಯುವಕರನ್ನೇ ಆರಿಸಿ, ಕಣಕ್ಕಿಳಿಸಿದ್ದರು. ಅವರ್ಯಾರು ಹಣಕಾಸಿನಲ್ಲಿ, ಜಾತಿಯಲ್ಲಿ, ಕೌಟುಂಬಿಕ ಹಿನ್ನೆಲೆಯಲ್ಲಿ ಬಲಿಷ್ಠರಲ್ಲ. ಹೊಸ ತಲೆಮಾರಿನ ಉತ್ಸಾಹಿ ಯುವಕರು. ಏಕೆಂದರೆ ಈಗಾಗಲೇ ರಾಜಕೀಯ ಅಧಿಕಾರ ಸ್ಥಾನಗಳನ್ನು ಹೊಂದಿದ್ದು, ಹಣಕಾಸಿನಲ್ಲಿ ಬಲಿಷ್ಠರಾಗಿದ್ದವರು ಎದುರು ಪಾಳೆಯದಲ್ಲಿದ್ದರು. ಅದಕ್ಕೆ ವಿರುದ್ಧವಾಗಿ ಹೊಸಬರನ್ನು ರಾಜಕೀಯ ಕಣಕ್ಕೆ ಇಳಿಸುವ ಹೊಸ ಚಾಲೆಂಜನ್ನು ದೇವರಾಜ ಅರಸರು ತೆಗೆದುಕೊಂಡಿದ್ದರು. ಅಭ್ಯರ್ಥಿ ಏನೋ ಆದೆ. ಖರ್ಚಿಗೆ ಕಾಸಿಲ್ಲ. ಹುಡುಗರ ಪಡೆ ಇದೆ, ಊಟ-ತಿಂಡಿಗೂ ಗತಿಯಿಲ್ಲ. ಅರಸರ ಮುಂದೆ ಹೋಗಿ ನಿಂತೆ 500 ರೂಪಾಯಿ ಕೊಟ್ಟರು. ಆಗ ಅದೇ ದೊಡ್ಡ ದುಡ್ಡು. ಕೊನೆಗೆ ಎಲೆಕ್ಷನ್ ಮುಗಿಯುವುದರೊಳಗೆ ಎರಡು ಸಾವಿರ ಕೊಟ್ಟಿದ್ದರು. ನನ್ನ ಬಳಿ ಇದ್ದ 10 ಸಾವಿರ ಖರ್ಚು ಮಾಡಿದ್ದೆ. ಆದರೆ ನನ್ನ ಪ್ರತಿಸ್ಪರ್ಧಿ ರಾಮಚಂದ್ರಗೌಡ ಸ್ಟ್ರಾಂಗ್ ಆಗಿದ್ದರು, ಗೆದ್ದರು, ನಾನು ಸೋತೆ.

ದುಡ್ಡು, ಧರ್ಮ, ದೇಣಿಗೆ

ಆಗ ಪಕ್ಷ ಕಟ್ಟುವ ಕೆಲಸಕ್ಕೆ ಅವರಿವರು ದೇಣಿಗೆ ಕೊಡುತ್ತಿದ್ದರು. ನಾನೊಂದು ಸಲ ಒಬ್ಬ ಶ್ರೀಮಂತರನ್ನು ಹಿಡಿದು, ಪಕ್ಷಕ್ಕೆ 10 ಸಾವಿರ ರೂ. ಕೊಡುವಂತೆ ಕೇಳಿಕೊಂಡೆ. ಅವರು ಆಯ್ತು ಅಂದರು. ಅವರನ್ನು ದೇವರಾಜ ಅರಸರ ಮುಂದೆ ನಿಲ್ಲಿಸಿದೆ. ಅರಸರು ಅವರನ್ನು ಕೂರಿಸಿ ಚೆನ್ನಾಗಿ ಮಾತನಾಡಿಸಿದರು. ಅವರು ಕೊಟ್ಟ ರೂ. 10 ಸಾವಿರವನ್ನು ಪಿಎ ಸಚ್ಚಿದಾನಂದಸ್ವಾಮಿಯವರತ್ತ ತಿರುಗಿ, ‘‘ತೆಗೆದುಕೊಳ್ಳಿ’’ ಎಂದರು. ಆಮೇಲೆ ಆ ಶ್ರೀಮಂತರು ಹೊರಗೆ ಹೋಗುತ್ತಿದ್ದಂತೆ, ‘‘ಆ ಹಣವನ್ನು ಇವರ ವಾರ್ಡಿನ ದೇವಸ್ಥಾನದ ಕೆಲಸಕ್ಕೆ ಕೊಡಿ’’ ಎಂದರು. ಅರಸರು ಆ ಹಣವನ್ನು ಕೈಯಿಂದಲೂ ಮುಟ್ಟಲಿಲ್ಲ. ನಾನು ಇದನ್ನು ಏಕೆ ಹೇಳಿದೆನೆಂದರೆ, ಅರಸರ ಬಳಿ ಹಣವಿರಲಿಲ್ಲ. ಹಾಗಂತ ಯಾರಾದರೂ ಬಂದು ಕೊಟ್ಟರೆ ಅದನ್ನು ಇಟ್ಟುಕೊಳ್ಳುತ್ತಲೂ ಇರಲಿಲ್ಲ. ಕಷ್ಟ ಅಂತ ಕೇಳಿಕೊಂಡು ಬಂದವರಿಗೆಲ್ಲ ಕೊಟ್ಟುಬಿಡುತ್ತಿದ್ದರು. ಅರಸರು ಕೊಡುಗೈ ದಾನಿ ಎಂದು ಗೊತ್ತಿದ್ದರಿಂದ, ನಮ್ಮ ಪಕ್ಷದವರೆಲ್ಲ ಅದಕ್ಕೆ-ಇದಕ್ಕೆ ಅಂತ ಕೇಳಿಕೊಂಡು ಬರುತ್ತಲೇ ಇದ್ದರು. ಅರಸರು ಕೊಡುತ್ತಲೂ ಇದ್ದರು. 1971 ರಲ್ಲಿ ಲೋಕಸಭಾ ಚುನಾವಣೆ ಎದುರಾಯಿತು. ಆಗ ಕೆಂಗಲ್ ಹನುಮಂತಯ್ಯನವರು ನಮ್ಮ ಅಭ್ಯರ್ಥಿ. ನಾವು ಯುವಕರು, ಅವರ ಬಳಿ ಹೋಗಿ ಹಣ ಕೇಳಿದರೆ, ‘‘ದೇವರಾಜ ಅರಸು 10 ಸಾವಿರ ರೂ. ಕೊಟ್ಟಿದ್ದಾರೆ, ಕಾನೂನು ಪ್ರಕಾರ ಇಂತಿಷ್ಟೇ ಹಣದಲ್ಲಿ ಚುನಾವಣಾ ಪ್ರಚಾರ ಕಾರ್ಯ ಮಾಡಬೇಕೆಂದಿದೆ, ಅರಸು ಕೂಡ ಅದನ್ನೇ ಹೇಳಿದ್ದಾರೆ, ಹಾಗೆ ಮಾಡಿ’’ ಎಂದುಬಿಡುತ್ತಿದ್ದರು. ನಮಗೆ ಸಿಕ್ಕ ಇಬ್ಬರು ನಾಯಕರು ಪ್ರಾಮಾಣಿಕರು, ನ್ಯಾಯ ನಿಷ್ಠುರರು. ನನ್ನ ತಮ್ಮನ ಮದುವೆ ನಿಶ್ಚಯವಾಯಿತು. ನನ್ನ ಬಳಿ ಹಣವಿಲ್ಲ. ಹೋಗಿ ದೇವರಾಜ ಅರಸರನ್ನು ಕೇಳಿದೆ. ‘‘ಮೂರು ದಿನ ಬಿಟ್ಟು ಆರ್.ಎಂ.ದೇಸಾಯಿ ಅವರನ್ನು ಹೋಗಿ ನೋಡು’’ ಎಂದರು. ನಾನು ಅವರ ಮಾತನ್ನು ಕೊಂಚ ಲಘುವಾಗಿ, ಉಡಾಫೆಯಾಗಿ ತೆಗೆದುಕೊಂಡೆ. ಅವರೊಂದಿಗಿನ ಆತ್ಮೀಯತೆ ಇತ್ತಲ್ಲ, ಅದೇ ಧಾಟಿಯಲ್ಲಿ, ‘ಮೂರು ದಿನಕ್ಕೆ ನೀವು ಮರತೆಹೋಗಿರ್ತಿರಾ’ ಅಂದೆ. ಆ ಒರಟು ಮಾತಿಗೂ ಬೇಸರಿಸಿಕೊಳ್ಳದೆ, ಸುಮ್ಮನೆ ನೋಡಿ ನಕ್ಕರು. ಮೂರು ದಿನ ಬಿಟ್ಟು ಹೋದರೆ, ಆರ್. ಎಂ. ದೇಸಾಯಿ ಹಣ ರೆಡಿ ಇಟ್ಟಿದ್ದರು. ಅರಸರ ಬಗೆಗಿದ್ದ ಉಡಾಫೆ ಕಡಿಮೆಯಾಗಿ, ಗೌರವ ಹೆಚ್ಚಾಯಿತು.

ಬಲಿಷ್ಠರು ದೂರ, ಬಡವರು ಹತ್ತಿರ

ದೇವರಾಜ ಅರಸರ ರಾಜಕೀಯ ಲೆಕ್ಕಾಚಾರವಿತ್ತಲ್ಲ, ಅದರಲ್ಲೂ ಜಾತಿಕಾರಣವಿತ್ತಲ್ಲ ಅದು ಚಾಣಾಕ್ಷತನದಿಂದ ಕೂಡಿತ್ತು. ಅರಸು ಹಿಂದುಳಿದವರು, ದಲಿತರು ಮತ್ತು ಮುಸ್ಲಿಮರ ಪರ ಒಲವುಳ್ಳವರು. ಹಾಗಂತ ಮೇಲ್ಜಾತಿಯ ವಿರೋಧಿಗಳಲ್ಲ. ಎಲ್ಲಾ ಜಾತಿಯ ಬಡವರ ಪರ. ಈಗ ಒಂದು ಕ್ಷೇತ್ರದಲ್ಲಿ, ಮೇಲ್ಜಾತಿಗೆ ಸೇರಿದ, ತಮ್ಮ ಪಕ್ಷದಿಂದ ಈಗಾಗಲೇ ಶಾಸಕರಾಗಿ ಗೆದ್ದು, ಅಧಿಕಾರ ಪಡೆದು ಬಲಾಢ್ಯರಾದವರನ್ನು, ಅನುಭವಸ್ಥ ಹಿರಿಯರನ್ನು ಅರಸರು ಮುಟ್ಟುತ್ತಿರಲಿಲ್ಲ. ಆದರೆ ಅವರು ಜನಪರವಲ್ಲ, ಜನರಿಂದ ದೂರವೇ ಉಳಿದು ಸರಿ ಇಲ್ಲ ಎನಿಸಿದಾಗ, ಅದೇ ಜಾತಿಯ ಉತ್ಸಾಹಿ ಯುವಕನನ್ನು ಎತ್ತಿಕಟ್ಟುತ್ತಿದ್ದರು. ಬಲವಾಗಿ ಬೆಳೆದು ನಿಂತವನನ್ನು ಸೋಲಿಸುತ್ತಿದ್ದರು. ಅದೇ ಅವರ ಶಕ್ತಿ. ಅರಸರು ಆಯ್ಕೆ ಮಾಡಿಕೊಳ್ಳುತ್ತಿದ್ದ ಹೊಸಬರು, ಯುವಕರಾ ದರೂ ಎಂತಹವರು- ಎಲ್ಲ ಬಡವರೆ. ಅವರಿಗೆ ರಾಜಕಾರಣವೂ ಗೊತ್ತಿಲ್ಲ, ಚುನಾವಣೆಯ ಎದುರಿಸುವ ಧೈರ್ಯವೂ ಇಲ್ಲ. ಅರಸರು ಅವರಿಗೆ ಧೈರ್ಯ ಹೇಳಿ, ಶಕ್ತಿ ತುಂಬಿ, ಮಾರ್ಗದರ್ಶನ ನೀಡಿ ಹುರಿದುಂಬಿಸುತ್ತಿದ್ದರು. ಅದೇ ಜಾತಿಯ ಬಲಿಷ್ಠನೆದುರು ಕಣಕ್ಕಿಳಿಸಿ ಗೆಲ್ಲಿಸಿಕೊಂಡು ಬರುತ್ತಿದ್ದರು. ಅಂದರೆ ಬಡವರಿಗೆ ಜನರ ಕಷ್ಟ, ಹಸಿವಿನ ಮಹತ್ವ, ಸಮಸ್ಯೆಗಳ ಮೂಲ ಗೊತ್ತು, ಅಂಥವರು ಜನಪ್ರತಿನಿಧಿಗಳಾದರೆ, ಅಧಿಕಾರದ ಸ್ಥಾನಕ್ಕೇರಿದರೆ ಜನರಿಗೆ ನ್ಯಾಯ ಸಿಗುತ್ತದೆ ಎನ್ನುವುದು ಅರಸರ ಯೋಚನೆಯಾಗಿತ್ತು. ಹಾಗೆಯೇ ಬಡವರು ಕೂಡ ರಾಜಕೀಯ ಅಧಿಕಾರವನ್ನು ಅನುಭವಿಸಬೇಕು, ಅದು ಅವರ ಹಕ್ಕು ಎನ್ನುವುದು ಅರಸರ ವಾದವಾಗಿತ್ತು. ನಾನು ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದು, ಮುಂದೆ ಮೇಯರ್ ಆಗಿದ್ದು ಎಲ್ಲ ಹೀಗೆಯೇ.

 ಕಾಂಗ್ರೆಸ್ ಪಕ್ಷದಲ್ಲಿ ನಾನು ನಗರ ಮತ್ತು ಗ್ರಾಮೀಣ ಯುವ ಕಾಂಗ್ರೆಸ್ ಅಧ್ಯಕ್ಷನಾದೆ. ಆಗೆಲ್ಲ ನನಗೆ ಬೆಳಗ್ಗೆಯಿಂದ ರಾತ್ರಿಯವರೆಗೆ ದೇವರಾಜ ಅರಸರ ಮನೆಯೇ ಕಚೇರಿಯಾಗಿತ್ತು, ನಮ್ಮನೆಯಾಗಿತ್ತು. ನಮ್ಮದೊಂದು ತಂಡವಿತ್ತು, ಕಣ್ಣನ್, ಲಕ್ಷ್ಮಣ್, ಎಂ.ಡಿ. ನಟರಾಜ್ ಮತ್ತು ನಾನು, ಯಾವಾಗಲೂ ಅರಸರ ಹಿಂದೆಯೇ ಇರುತ್ತಿದ್ದೆವು. ಆದರೆ ಎಂದೂ ನಾನು ಅವರನ್ನು ಬುದ್ಯೋರು ಅಂತ ಕರೆಯಲಿಲ್ಲ, ಕಾಲಿಗೆ ಬೀಳಲಿಲ್ಲ. ಅವರೂ ಅದನ್ನು ಬಯಸಲಿಲ್ಲ. ಬೇರೆಯವರು ಮಾಡಿದರೆ ಅದಕ್ಕೆ ಬೇಡವೆನ್ನುತ್ತಿರಲಿಲ್ಲ. ನಾನು ಅವರಿಗೆ ಎಷ್ಟು ಹತ್ತಿರದವನಾಗಿದ್ದೆ ಎಂದರೆ, ಒಂದು ಚೀಟಿ ಕೊಟ್ಟರೆ ಅದರ ಮೇಲೆಯೇ ಬರೆದು ಕೊಡುತ್ತಿದ್ದರು. ನಮಗೆಂದೂ ಸಿಎಂ ನಮ್ಮ ಕೈನಲ್ಲಿದ್ದಾರೆ ಎನಿಸಲಿಲ್ಲ. ದುರುಪಯೋಗಪಡಿಸಿಕೊಳ್ಳಲಿಲ್ಲ. ಮೋಸ, ಸುಳ್ಳು, ಅನ್ಯಾಯ ಅವರಲ್ಲೂ ಇಲ್ಲ, ನಮ್ಮಲ್ಲೂ ಇಲ್ಲ.

1978ರಲ್ಲಿ ನಾನು ಮಲ್ಲೇಶ್ವರಂ ವಿಧಾನಸಭಾ ಟಿಕೆಟ್ ಕೇಳಿದೆ. ಅವರು ರಾಜಾಜಿನಗರದಿಂದ ನಿಲ್ಲು ಎಂದರು. ಟಿಕೆಟ್ ಕೊಡಲಿಕ್ಕೂ ಬಂದರು. ಆದರೆ ನಾನೇ ಹಿಂದೇಟು ಹಾಕಿದೆ. ಏಕೆಂದರೆ, ಅಲ್ಲಿ ಎಂ.ಆರ್.ಜಯರಾಮ್(ಎಂ.ಎಸ್.ರಾಮಯ್ಯನವರ ಮಗ) ನಮ್ಮ ಪ್ರತಿಸ್ಪರ್ಧಿಯಾಗಿದ್ದರು. ಅವರು ಹಣವಂತರು, ಬಲಿಷ್ಠರು ಅವರ ಮುಂದೆ ನಾನೆಲ್ಲಿ ಎಂದು ಹೆದರಿ ಹಿಂದೆ ಸರಿದೆ. ಆದರೆ ಅರಸು, ಗೆಲ್ತಿಯ ನಿಲ್ಲು ಎಂದರೂ ನಿಲ್ಲಲಿಲ್ಲ.

ಡೌನ್ ಟು ಅರ್ಥ್

1974ರಲ್ಲಿ ನಾನು ಸಿಟಿ ಯೂತ್ ಪ್ರೆಸಿಡೆಂಟ್ ಆಗಿದ್ದಾಗ, ಬೆಂಗಳೂರಿನಲ್ಲಿರುವ ಸ್ಲಂಗಳಿಗೆ ಅರಸರನ್ನು ಕರೆದುಕೊಂಡು ಹೋಗಿದ್ದೆ. ಸ್ಲಂ ಜನ ನಿಮಗೆ ಗೊತ್ತೇ ಇದೆ, ದಿನಗೂಲಿ ಕಾರ್ಮಿಕರು, ಬಡವರು, ವಸತಿಹೀನರು. ಅವರ ಕಾಲನಿಯನ್ನು, ಸ್ಥಿತಿಯನ್ನು ಮುಖ್ಯಮಂತ್ರಿ ದೇವರಾಜ ಅರಸರ ಗಮನಕ್ಕೆ ತರುವುದು ನನ್ನ ಆಸೆಯಾಗಿತ್ತು. ಆ ಮೂಲಕ ಅವರಿಗೆ ಉಚಿತ ಸೈಟು, ಮನೆಗಳ ವಿತರಣೆ ಮಾಡಿಸುವ ಮಹದಾಸೆಯಿತ್ತು. ರಾಜಾಜಿನಗರದ ಸ್ಲಂಗಳಿಗೆ ದೇವರಾಜ ಅರಸರನ್ನು ಕರೆದು ಕೊಂಡು ಹೋಗಿದ್ದ ದಿನ ವಿಪರೀತ ಮಳೆ. ಆ ಮಳೆಗೆ ಸ್ಲಂ ಅಕ್ಷರಶಃ ಕೆಸರುಗುಂಡಿಯಾಗಿತ್ತು. ಬೇರೆ ಯಾರಾದರೂ ಆಗಿದ್ದರೆ, ಅಂತಹ ಜಾಗಕ್ಕೆ ಬರುತ್ತಲೇ ಇರಲಿಲ್ಲ. ಬಂದರೂ ಕಾರಿನಿಂದ ಕೆಳಗಿಳಿಯುತ್ತಿರಲಿಲ್ಲ. ಆದರೆ ಅರಸರು, ಕಾರಿನಿಂದ ಇಳಿದು ಕೆಸರು-ಮಳೆಯಲ್ಲಿಯೇ ನಡೆದುಕೊಂಡು ಬಂದಿದ್ದರು. ಸ್ಲಂ ಜನರ ಕಷ್ಟವನ್ನು ಕಣ್ಣಾರೆ ಕಂಡ, ಈ ಬಡವರಿಗೆ ಏನಾದರೂ ಮಾಡಬೇಕು ಎಂದು ಹೇಳುತ್ತಿದ್ದ ಅರಸರನ್ನು ಅವತ್ತು ಮೂರ್ನಾಲ್ಕು ಸ್ಲಂಗಳಿಗೆ ಸುತ್ತಾಡಿಸಿದ್ದೆ. ಅರಸರು ಸುಮಾರು 400 ಸೈಟ್‌ಗಳನ್ನು ಸ್ಲಂ ಜನರಿಗೆ ವಿತರಿಸಿದ್ದರು. ಅವತ್ತು ಅರಸು ಕೊಟ್ಟ ಸೈಟಿನಲ್ಲಿ ಗುಡಿಸಲು ಕಟ್ಟಿಕೊಂಡು ಬದುಕುತ್ತಿದ್ದ ಬಡವರಿಗೆ ಇತ್ತೀಚಿಗೆ ಹಕ್ಕುಪತ್ರ ವಿತರಿಸಲಾಯಿತು. ಅಂದರೆ ಸುಮಾರು 40 ವರ್ಷ ಅವರು ಅಲ್ಲಿ ಉಚಿತವಾಗಿ ನೆಲೆಸಿದ್ದರು. ಅದಾದ ಮೇಲೆ ಆ ಜಾಗ ಅವರದ್ದೇ ಆಯಿತು.

ಎದೆಗೂಡಿನಲ್ಲಿಟ್ಟುಕೊಂಡು ಬೆಳೆಸಿದರು

ಪಕ್ಷದ ಕಾರ್ಯಕರ್ತರೆಂದರೆ ದೇವರಾಜ ಅರಸರಿಗೆ ಎಲ್ಲಿಲ್ಲದ ಪ್ರೀತಿ, ಅಭಿಮಾನ. ಅವರು ಯಾವುದೇ ಸಮಯದಲ್ಲಿ ಎಲ್ಲಿಗೆ ಕರೆದರೂ ಬರುತ್ತಿದ್ದರು. ಅವರೆ ಪಕ್ಷದ ನಿಜವಾದ ಶಕ್ತಿ ಎನ್ನುತ್ತಿದ್ದರು. ಅವರನ್ನು ಬಿಟ್ಟು ಏನನ್ನೂ ಮಾಡುತ್ತಿರಲಿಲ್ಲ. ನೀವು ನಂಬಲ್ಲ, ಕಾರ್ಯಕರ್ತರಿಗೂ ಅವರಿಗೂ ತಂದೆ-ಮಕ್ಕಳ ಬಾಂಧವ್ಯವಿತ್ತು. ನಾವೆಲ್ಲ ಅವರೊಂದಿಗೆ ಕೆಲಸ ಮಾಡುತ್ತಿದ್ದಾಗ, ಅವರ ಧಾರಾಳತನ, ಒಳ್ಳೆಯತನಕ್ಕೆ ಮಾರುಹೋಗಿದ್ದೆವು. ಅವರ ನಡೆ-ನುಡಿ ನೋಡಿ ಅವರಿಗೆ ಸುಳ್ಳು ಹೇಳಲಿಕ್ಕೆ ಮನಸ್ಸೇ ಬರುತ್ತಿರಲಿಲ್ಲ. ಪಕ್ಷದ ಕಾರ್ಯಕರ್ತನೆಂದರೆ, ಅವನನ್ನು ಅರಸರು ಎದೆಗೂಡಿನಲ್ಲಿಟ್ಟುಕೊಂಡು ಬೆಳೆಸುತ್ತಿದ್ದರು. ಅವರಿಗೆ ಶಕ್ತಿ ತುಂಬು ತ್ತಿದ್ದರು. ರಾಜಕೀಯ ಅಧಿಕಾರದ ಸ್ಥಾನಗಳಲ್ಲಿ ಕೂರಿಸುತ್ತಿದ್ದರು. ನಾಯಕನಾಗಿ ಬೆಳೆದು ನಿಂತಿದ್ದನ್ನು ನೋಡಿ ಖುಷಿಪಡುತ್ತಿದ್ದರು. ಆದರೆ ಇವತ್ತು ಕೂಲಿ ಕೊಟ್ಟು ಪಕ್ಷದ ಬಾವುಟ ಕಟ್ಟಿಸಲಾಗುತ್ತಿದೆ. ಪಕ್ಷದ ಕಾರ್ಯಕರ್ತರು ಇವತ್ತು ಕಾರ್ಮಿಕರಾಗಿದ್ದಾರೆ, ನಾಯಕರು ಮಾಲಕರಾಗಿದ್ದಾರೆ. ಪಕ್ಷಕ್ಕೂ ಸರಕಾರಕ್ಕೂ ಸಂಬಂಧವೇ ಇಲ್ಲದಂತಾಗಿದೆ. ಹಣವೇ ಮುಖ್ಯವಾಗಿ, ರಾಜಕಾರಣ ವ್ಯವಹಾರವಾಗಿದೆ.

ಅರಸರಿಂದ ಕಾಂಗ್ರೆಸ್ ಪಕ್ಷ ಸೇರಿದೆ, ಮೇಯರ್ ಆದೆ. ಅವತ್ತೂ ಆಟೊದಲ್ಲಿ ಬರ್ತಿದ್ದೆ, ಇವತ್ತೂ ಆಟೊದಲ್ಲಿಯೇ ಬರ್ತಿದ್ದೇನೆ. ನನ್ನ ಅರಸು ನನ್ನಲ್ಲಿದ್ದಾರೆ, ಅಷ್ಟು ಸಾಕು.

Writer - ನಿರೂಪಣೆ: ಬಸು ಮೇಗಲ್ಕೇರಿ

contributor

Editor - ನಿರೂಪಣೆ: ಬಸು ಮೇಗಲ್ಕೇರಿ

contributor

Similar News