ಪುರಾಣವಾಚನ, ಭಜನೆ, ಸಂಕೀರ್ತನೆ

Update: 2017-01-10 18:34 GMT

ನನ್ನೂರಿನ ಜನರಿಗೆ ರಾಮಾಯಣ, ಭಾರತಗಳ ಪರಿಚಯವನ್ನು ಮಾಡಿಕೊಡುವಲ್ಲಿ ಯಕ್ಷಗಾನ ಬಯಲಾಟ, ತಾಳಮದ್ದಳೆಗಳಂತೆಯೇ ಹರಿಕಥೆ ಮತ್ತು ಪುರಾಣ ವಾಚನಗಳು ಕೂಡ ನೆರವಾಗಿವೆ. ಹರಿಕಥೆ ಎನ್ನುವುದು ಯಕ್ಷಗಾನ ಬಯಲಾಟದಂತೆ ಜನರನ್ನು ಆಕರ್ಷಿಸುತ್ತಿರಲಿಲ್ಲ. ತಾಳಮದ್ದಳೆಯಂತೆ ಖುಷಿ ಕೊಡುವಂತಹುದು ಕೂಡ ಅಲ್ಲ. ಇವೆರಡು ಕ್ರಿಶ್ಚಿಯನ್, ಮುಸ್ಲಿಮರನ್ನೂ ಆಕರ್ಷಿಸುತ್ತಿತ್ತು. ಆದರೆ ಹರಿಕಥೆ ಕಲಾಪ್ರದರ್ಶನ ಎನ್ನುವುದಕ್ಕಿಂತ ಧಾರ್ಮಿಕ ಕಾರ್ಯಕ್ರಮದಂತೆ ಅನ್ನಿಸುತ್ತಿತ್ತು.

ಯಕ್ಷಗಾನ ತಾಳಮದ್ದಳೆ ನಡೆಯುತ್ತಿದ್ದ ಜಾಗಗಳಲ್ಲಿಯೇ ಹರಿಕಥೆಯೂ ಏರ್ಪಾಟಾಗುತ್ತಿತ್ತು. ಯಕ್ಷಗಾನ ಬಯಲಾಟ, ತಾಳ ಮದ್ದಳೆಯ ಆಸಕ್ತರಿಗಿಂತ ಭಿನ್ನವಾಗಿ ಇರುವ ಜನರು ಹೆಚ್ಚಾಗಿ ಬರುತ್ತಿದ್ದರು. ಮಕ್ಕಳು ಸ್ವಂತ ಆಸಕ್ತಿಯಿಂದ ಬರುತ್ತಿರಲಿಲ್ಲ ಎಂದರೂ ಸರಿಯೆ. ನನಗಾದರೋ ಹರಿಕಥೆಯೂ ಕೇಳಬೇಕಾದ ಕಾರ್ಯಕ್ರಮವೇ. ಈಗಿನ ಹಾಗೆ ಮನೆಯಲ್ಲೇ ಕುಳಿತು ಕೇಳುವುದಕ್ಕೆ ಸಾಧ್ಯವಿಲ್ಲ. ಯಾಕೆಂದರೆ ಆಗ ಮೈಕಾಸುರನ ಆರ್ಭಟವಿರಲಿಲ್ಲ. ಆದ್ದರಿಂದ ಹರಿಕಥೆ ನಡೆವಲ್ಲಿ ಹೋಗಲೇ ಬೇಕಿತ್ತು. ನನ್ನ ತಂದೆಯವರು ಹರಿಕಥೆ ಮಾಡುವ ಹರಿದಾಸರೆಂದು ಗುರುತಿಸಲ್ಪಟ್ಟಿದ್ದರು. ಹರಿಕಥೆ ಮಾಡುವವರನ್ನು ಹರಿದಾಸರೆಂದು ಕರೆಯುವುದು ರೂಢಿ.

ನಮ್ಮೂರಿನಲ್ಲಿ ಹರಿದಾಸರಾಗಿ ತಂದೆಯವರಲ್ಲದೆ ಕೊಂಚಾಡಿಯ ದತ್ತಾತ್ರೇಯ ನೀಗ್ಳೆ, ಕಾಸರಗೋಡಿನ ಕುಂಞಿಕಣ್ಣ ಮಾಸ್ಟ್ರು, ಹೆಚ್ಚಾಗಿ ಕಾರ್ಯಕ್ರಮ ನೀಡಿದ್ದರೆ ಅಪರೂಪಕ್ಕೊಮ್ಮೊಮ್ಮೆ ಎಂಬಂತೆ ಯಕ್ಷಗಾನ ವೇಷಧಾರಿಗಳೂ, ತಾಳಮದ್ದಳೆಯ ಅರ್ಥಧಾರಿಗಳೂ ಆದ ಮಲ್ಪೆ ಶಂಕರನಾರಾಯಣ ಸಾಮಗರು ಮತ್ತು ಅವರ ಕಿರಿಯ ಸಹೋದರ ರಾಮದಾಸ ಸಾಮಗರೂ ಹರಿಕಥಾ ಕಾರ್ಯಕ್ರಮ ನೀಡಿದ್ದು ನೆನಪಿದೆ. ಊರಿನ ಹತ್ತು ಸಮಸ್ತರು ಸೇರಿ ನಡೆಸುತ್ತಿದ್ದ ಕಾರ್ಯಕ್ರಮಗಳಿಗೆ ಹಬ್ಬ ಹರಿದಿನಗಳ ನೆಪವೂ ಬೇಕಾಗಿರಲಿಲ್ಲ. ಸಾರ್ವಜನಿಕ ಕಾರ್ಯಕ್ರಮವಲ್ಲದೆ ಕೆಲವು ಮನೆಗಳಲ್ಲಿಯೂ ಹರಿಕಥಾ ಕಾರ್ಯಕ್ರಮವನ್ನು ಏರ್ಪಡಿಸುತ್ತಿದ್ದುದು ಇದೆ. ಇಂತಹ ಮನೆಗಳಲ್ಲಿ ಒಂದು ಬಾಳೆಬೈಲಿನ ಐತಪ್ಪ ಮೇಸ್ತ್ರಿಗಳ ಮನೆ. ಇನ್ನೊಂದು ಬಾಳಿಗಾ ಸ್ಟೋರ್ಸ್‌ ಮತ್ತು ಕಾಪಿಕಾಡಿನ ನಡುವೆ ಪಶ್ಚಿಮಕ್ಕೆ ಪಾಸರಗುಡ್ಡದ ಬುಡದಲ್ಲಿದ್ದ ಪಿ. ಮುರಹರಿ ರಾಯರ ಮನೆ.

ಹರಿಕಥೆಯಲ್ಲಿ ಹರಿದಾಸರೇ ಪ್ರಮುಖರು. ಅವರು ನೀಡುವ ಕಾರ್ಯಕ್ರಮಗಳಲ್ಲಿ ಪದ್ಯಗಳು ಅಂದರೆ ಕೀರ್ತನೆಗಳಾಗಬಹುದು, ವಚನಗಳಾಗಬಹುದು ಅಥವಾ ಮೀರಾ, ಕಬೀರ, ತುಕಾರಾಮರ ಭಜನೆಗಳೂ ಆಗಿರಬಹುದು. ಅವುಗಳನ್ನು ಕಥೆಗೆ ಅನ್ವಯವಾಗುವಂತೆ ಹಾಡಬೇಕಾಗುತ್ತದೆ. ಹಾಗೆಯೇ ಕಥೆಯನ್ನು ಜನರಿಗೆ ವಿವರಿಸಿ ಹೇಳುವಾಗ ಅನೇಕ ಉಪಕಥೆಗಳು ಕೂಡ ಸೇರಿಕೊಂಡು ಸ್ವಾರಸ್ಯವಾಗಿರುತ್ತದೆ. ಕಥೆಯಲ್ಲಿ ಬರುವ ಪಾತ್ರಗಳನ್ನು ಹರಿದಾಸರು ಅಭಿನಯಪೂರ್ವಕವಾಗಿಯೇ ಜನರಿಗೆ ಅರ್ಥವಾಗುವಂತೆ ವಿವರಿಸುತ್ತಾರೆ. ಆದ್ದರಿಂದ ಹರಿದಾಸರಾಗುವವರಿಗೆ ಒಳ್ಳೆಯ ಇಂಪಾದ ಕಂಠ ಮತ್ತು ಒಳ್ಳೆಯ ಮಾತುಗಾರಿಕೆ ಇರಬೇಕಾಗುತ್ತದೆ. ಇವರ ಹಾಡಿಗೆ ಹಿಮ್ಮೇಳವಾಗಿ ಹಾರ್ಮೋನಿಯಂ ಹಾಗೂ ತಬ್ಲಾ ಅಥವಾ ಮೃದಂಗ ವಾದಕರೂ ಜತೆಯಲ್ಲಿರುತ್ತಾರೆ.

ಆಗ ಹಿಮ್ಮೇಳದಲ್ಲಿ ಹಾರ್ಮೋನಿಯಮ್‌ನಲ್ಲಿ ವೀಣಾವಾದಕರೂ, ಶಿಕ್ಷಕರೂ ಆಗಿದ್ದ ಶ್ರೀನಿವಾಸ ರಾಯರು, ಸಂಗೀತ ವಿದ್ವಾಂಸರಾಗಿದ್ದು ಶಿಕ್ಷಕರೂ ಆಗಿದ್ದ ನರಸಿಂಹರಾಯರು ಮತ್ತು ಬಾಬು ದೇವಾಡಿಗರು ಕಲಾವಿದರಾಗಿ ಸಹಕರಿಸುತ್ತಿದ್ದರು. ಹಾಗೆಯೇ ತಬ್ಲಾದಲ್ಲಿ ಅರ್ಚಕರಾದ ಲಕ್ಷ್ಮೀನಾರಾಯಣ ಭಟ್ಟರು, ಮೃದಂಗದಲ್ಲಿ ಡಿ. ಶಿವರಾವ್ ಅವರು ಕಲಾವಿದರಾಗಿ ಸಹಕರಿಸುತ್ತಿದ್ದರು. ಹರಿಕಥೆಗೆ ಸಾಮಾನ್ಯವಾಗಿ ಸ್ವಯಂವರದ ಕಥೆಗಳು, ಇಲ್ಲವೇ ಮೋಕ್ಷ ಹೊಂದುವ ಕಥೆಗಳು ಇಲ್ಲವೇ ತ್ಯಾಗದ ಕಥೆಗಳನ್ನು ಅಯ್ಕೆ ಮಾಡುತ್ತಿದ್ದರು. ಪುರಾಣದ ಕಥೆಗಳಲ್ಲದೆ ಭಕ್ತರ, ದಾಸವರೇಣ್ಯರ ಉದಾಹರಣೆಗೆ ಭಕ್ತಕುಂಬಾರ, ಸಂತ ತುಕಾರಾಮ್, ಭಕ್ತೆ ಮೀರಾ, ಸಂತ ಕಬೀರ, ಪುರಂದರದಾಸ, ಕನಕದಾಸರ ಕುರಿತಾಗಿಯೂ ಹರಿಕಥೆಗಳು ನಡೆಯುತ್ತಿತ್ತು.

ಪುರಾಣವಾಚನವೂ ಕೂಡ ಯಕ್ಷಗಾನ ಬಯಲಾಟದಂತೆ ಕಣ್ಣಿಗೆ ರಂಜನೆ ನೀಡುವಂತಹುದಲ್ಲ. ಕೇಳುವ ಆಸಕ್ತಿ ಇರುವವರಿಗೆ ಪುರಾಣವಾಚನ ಇಷ್ಟವಾಗುವಂತಹುದೇ. ಪುರಾಣ ವಾಚನವೆಂದರೆ ಒಬ್ಬರು ಒಂದು ಪುರಾಣವನ್ನು ಅಂದರೆ ಕಾವ್ಯವನ್ನು ಸುಶ್ರಾವ್ಯವಾಗಿ ಓದುತ್ತಾರೆ. ಇನ್ನೊಬ್ಬರು ಅದನ್ನು ಜನರಿಗೆ ಅರ್ಥವಾಗುವಂತೆ ಸರಳವಾಗಿ ತಿಳಿಸಿ ಅದರ ಕತೆಯನ್ನು ಮುಂದುವರಿಸುತ್ತಾರೆ. ಇಲ್ಲಿಯೂ ರಾಮಾಯಣ, ಮಹಾಭಾರತ, ಅಂದರೆ ತೊರವೆ ರಾಮಾಯಣ, ಕುಮಾರವ್ಯಾಸ ಭಾರತ, ಲಕ್ಷ್ಮೀಶನ ಜೈಮಿನಿ ಭಾರತ, ರಾಘವಾಂಕನ ಹರಿಶ್ಚಂದ್ರ ಕಾವ್ಯ, ದೇವೀ ಭಾಗವತ, ಭಾಗವತ, ಇವುಗಳಿಂದ ಆಯ್ದ ಭಾಗಗಳು, ಅಥವಾ ಪೂರ್ಣ ಕಾವ್ಯವೂ ಒಂದು ದಿನ, ಮೂರು ದಿನ, ಐದು ದಿನ, ಏಳುದಿನ, ಒಂಬತ್ತು ದಿನಗಳಂತೆ ಏರ್ಪಡಿಸು ವುದು ಇದೆ. ಇಂತಹ ಕಾರ್ಯಕ್ರಮಗಳೂ ಕೂಡ ನನ್ನೂರಲ್ಲಿ ನಡೆಯುತ್ತಿತ್ತು. ಪುರಾಣವಾಚನ ಕಾರ್ಯಕ್ರಮವನ್ನು ಪ್ರತಿವರ್ಷ ಎಂಬಂತೆ ಬಹಳದ ವರ್ಷ ನಡೆಸಿದವರು ದೇವೀಭಕ್ತರಾದ ಹೊಟೇಲು ಮಾಲಕರಾಗಿದ್ದ ಗಂಗಯ್ಯ ಪೂಜಾರಿಗಳು. ನನ್ನೂರಿನಲ್ಲಿ ನಡೆದ ಪುರಾಣವಾಚನ ಕಾರ್ಯಕ್ರಮದ ಪುರಾಣದ ಓದುಗರಾಗಿ ಇರುತ್ತಿದ್ದವರು ನನ್ನ ತಂದೆಯಾದರೆ ಹೆಚ್ಚಾಗಿ ಪ್ರವಚನಕಾರರಾಗಿ ಅಂದರೆ ಅರ್ಥ ವಿವರಣೆಯನ್ನು ಮಾಡುತ್ತಿದ್ದವರು ಯಕ್ಷಗಾನ ವಾಚಸ್ಪತಿ ಬಿರುದು ಪಡೆದಿದ್ದ ಪೊಳಲಿ ಶಂಕರನಾರಾಯಣ ಶಾಸ್ತ್ರಿಗಳು. ಕೆಲವೊಮ್ಮೆ ಮಂದಾರ ಕೇಶವ ಭಟ್ಟರು, ಶೆಡ್ಡೆ ಕೃಷ್ಣಮಲ್ಲಿಗಳು, ಗುರುವಪ್ಪ ಮಾಸ್ತರರು, ಕುಂಬ್ಳೆ ಸುಂದರ ರಾಯರು ಪ್ರವಚನ ಮಾಡಿರುವುದನ್ನು ಕೇಳಿದ್ದೇನೆ.

ನನ್ನೂರಿನಲ್ಲಿ ಇಂದಿನಂತೆ ಭಜನಾ ಮಂದಿರಗಳು ಇರಲಿಲ್ಲ. ಈಗಲೂ ಇಲ್ಲ ಎಂದು ಭಾವಿಸುತ್ತೇನೆ. ಆದರೆ ಮನೆಗಳಲ್ಲಿ ಸಂಜೆ ಭಜನೆ ಮಾಡುವ ಸಂಪ್ರದಾಯವಿತ್ತು. ಹೀಗೆ ಹಾಡುತ್ತಲೇ ಕಲಿತ ಭಜಕರಿಗೆ ಒಂದು ಒಳ್ಳೆಯ ಅವಕಾಶ. ಬಾಳೆಬೈಲು ಐತಪ್ಪ ಮೇಸ್ತ್ರಿಗಳ ಮನೆಯಲ್ಲಿ ನಡೆಯುತ್ತಿದ್ದ ಭಜನಾ ಕಾರ್ಯಕ್ರಮ ಅದು ಏಕಾಹ, ಸಪ್ತಾಹಗಳು ಅಂದರೆ ಒಂದು ದಿನದ, ಅಥವಾ ಏಳು ದಿನದ ಕಾರ್ಯಕ್ರಮಗಳಾಗಿರುತ್ತಿದ್ದವು. ಊರಿನ ಗಂಡಸರು, ಯುವಕರು, ಹುಡುಗರು ಇದರಲ್ಲಿ ಭಾಗವಹಿಸುತ್ತಿದ್ದರು. ಉಳಿದಂತೆ ಹೆಂಗಸರು, ಹೆಣ್ಣುಮಕ್ಕಳು ಕೇಳುವುದಕ್ಕೆ ಹೋಗುತ್ತಿದ್ದುದೂ ಇತ್ತು. ಭಜನಾ ಕಾರ್ಯಕ್ರಮದ ಸಂದರ್ಭದಲ್ಲಿ ನೀಡುತ್ತಿದ್ದ ಒಳ್ಳೆ ಮೆಣಸು, ಬೆಲ್ಲದ ಪಾನಕ ವಿಶೇಷ. ಹಾಗೆಯೇ ಕಲ್ಲುಸಕ್ಕರೆ, ಅವಲಕ್ಕಿ ಕಜ್ಜಾಯವೂ ವಿಶೇಷವೇ. ಶಿವರಾತ್ರಿಯ ಹಿನ್ನೆಲೆಯಲ್ಲಿ ವಾಸಪ್ಪ ಮೇಸ್ತ್ರಿಗಳ ಮನೆಯಿಂದ ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನಕ್ಕೆ ಹೊರೆಕಾಣಿಕೆ ಮೆರವಣಿಗೆಯಲ್ಲಿ ಹೋಗುವಾಗಲೂ ಭಜನೆ ಹಾಡುತ್ತಿದ್ದ ನೆನಪು. ಈ ಭಜನೆ ಹಾಡುವ ಗಾಯಕರು ಯಾರೂ ಸಂಗೀತವನ್ನು ಶಾಸ್ತ್ರೀಯವಾಗಿ ಕಲಿತವರಲ್ಲ. ಆದರೂ ಇಂಪಾದ ಕಂಠವುಳ್ಳವರು. ಅವರ ಹಾಡನ್ನು ಕೇಳಿ ದೇವರು ಮೆಚ್ಚಿಕೊಳ್ಳುತ್ತಾನೆ ಎಂಬುದು ನಿಜವಾದರೆ ಖಂಡಿತವಾಗಿಯೂ ಅವರೆಲ್ಲರಿಗೂ ಆ ದೇವರು ಒಳ್ಳೆಯದನ್ನು ಮಾಡಿಯೇ ಮಾಡಿರುತ್ತಾನೆ. ಯಾಕೆಂದರೆ ಇನ್ನೊಬ್ಬರಿಗೆ ಸಂತೋಷ ನೀಡುವುದೆಂದರೆ ದೇವರನ್ನು ಮೆಚ್ಚಿಸುವುದು ಎಂದೇ ಹಿರಿಯರು ಹೇಳುತ್ತಾರಲ್ಲಾ?

ಸುಮಾರು 60ರ ದಶಕದಲ್ಲಿ ನಮ್ಮ ಮನೆಯ ರಸ್ತೆಯ ಎದುರುಗಡೆ ಅಂದರೆ ನಮ್ಮ ಮನೆಯ ಧಣಿ ಫೆರ್ನಾಂಡಿಸರ ಮನೆಯ ಮುಂದಿನ ಓಣಿಯಲ್ಲಿ ಮುಂದೆ ಹೋದರೆ ಓಣಿಯ ಕೊನೆಗೆ ಎಡಬದಿಯಲ್ಲಿ ಒಂದು ದೊಡ್ಡ ಮನೆ ಹಿತ್ತಲು ಇತ್ತು. ಆ ಮನೆಯಲ್ಲಿ ರಾಮನವಮಿಯ ದಿನಕ್ಕೆ ನವಮಿ ದಿನವಾಗುವಂತೆ ಪಾಡ್ಯದಿಂದ ಶ್ರೀರಾಮನಾಮ ಸಂಕೀರ್ತನೆ ನಡೆಯುತ್ತಿತ್ತು. ಅದೊಂದು ಹೊಸ ರೀತಿಯ ಭಜನಾ ಕ್ರಮ. ಮನೆಯ ಅಂಗಳದಲ್ಲಿದ್ದ ದೊಡ್ಡ ತುಳಸೀಕಟ್ಟೆಯ ಬಳಿ ಒಂದು ದೊಡ್ಡ ದೀಪ ಒಂಬತ್ತು ದಿನ ನಿರಂತರ ಉರಿಯುತ್ತದೆ. ಅದರ ಸುತ್ತಲೂ ಜನ ಸೇರಿ ಸುತ್ತು ಬರುತ್ತಾ ಕೈಯಲ್ಲಿ ತಾಳ ಹಾಕುತ್ತಾ, (ಕೆಲವರಲ್ಲಿ ಹಿತ್ತಾಳೆಯ ತಾಳಗಳು ಇರುತ್ತಿದ್ದುವು) ‘ಶ್ರೀರಾಮ ಜಯರಾಮ ಜಯ ಜಯ ರಾಮ’ ಎಂದು ಹಾಡುವುದು. ಸುಮಾರಾಗಿ ಮಾರ್ಚ್ ಕೊನೆ ಅಥವಾ ಎಪ್ರಿಲ್ ತಿಂಗಳಲ್ಲಿ ರಾಮನವಮಿಯ ಸಂದರ್ಭ. ನಾವು ಆ ದಿನಗಳಲ್ಲಿ ಶಾಲೆಗೆ ಬೇಗ ಹೊರಟು ಭಜನೆ ನಡೆದಲ್ಲಿ ಕೆಲವು ಸುತ್ತುಹಾಕಿ, ರಾಮನಾಮ ಹೇಳಿ ನಾವು ಶಾಲೆಗೆ ಹೋಗುತ್ತಿದ್ದೆವು. ಸಂಜೆ ಶಾಲೆ ಬಿಟ್ಟ ಮೇಲೂ ಹೋಗಿ ಭಜನೆಯಲ್ಲಿ ಭಾಗವಹಿಸಿ ಮತ್ತೆ ಮನೆಗೆ ಬರುವುದು ರೂಢಿಯಾಗಿತ್ತು.

ಇದು ನನ್ನೊಬ್ಬಳ ಕತೆಯಲ್ಲ. ಆಸುಪಾಸಿನ ಎಲ್ಲ ಮನೆಯ ಮಕ್ಕಳೂ ಗಂಡು ಹೆಣ್ಣು ಭೇದವಿಲ್ಲದೆ ಬರುತ್ತಿದ್ದರು. ಅಂದರೆ ಹಿಂದೂ ಮಕ್ಕಳು. ಇಲ್ಲಿ ಹಿಂದೂ ಅಂದರೂ ಬ್ರಾಹ್ಮಣ ಮಕ್ಕಳು ಬರುತ್ತಿದ್ದ ನೆನಪು ಇಲ್ಲ. ಸಂಜೆ ಕತ್ತಲೆಯ ವೇಳೆಗೆ ಮತ್ತು ರಾತ್ರಿಯಿಡೀ ಊರಿನ ಹಿರಿಯ ಗಂಡಸರು, ಹೆಂಗಸರು ಬಂದು ಭಜನೆ ನಿಲ್ಲದಂತೆ ಮುಂದುವರಿಸುತ್ತಿದ್ದರು. ಮನೆ ಮಂದಿಯೂ ಸೇರುತ್ತಿದ್ದರು. ಹಾಗೆಯೇ ನಮ್ಮೂರಿನ ಪಕ್ಕದ ಊರುಗಳಿಂದಲೂ ಜನ ಬಂದು ಇದೊಂದು ದೇವರ ಸೇವೆ ಎಂಬಂತೆ ನಡೆದುಕೊಳ್ಳುತ್ತಿದ್ದರು. ಹೀಗೆ ದೂರದ ಊರಿಂದ ಬಂದವರಿಗೆ ಊಟ, ಉಪಾಹಾರಗಳೆಲ್ಲವೂ ಇರುತ್ತಿತ್ತು. ಊರವರಿಗೂ ಇರುತ್ತಿತ್ತು ಎನ್ನಿ. ರಾಮನಾಮವನ್ನು ಆಗ ಜನಪ್ರಿಯ ಸಿನೆಮಾ ಹಾಡುಗಳ ಶೈಲಿಯಲ್ಲಿ, ಅಥವಾ ಭಜನೆಗಳ ಧಾಟಿಯಲ್ಲಿ ಯಾರಾದರೂ ಪ್ರಾರಂಭ ಮಾಡುತ್ತಾರೆ. ಉಳಿದವರು ಅದನ್ನು ಅನುಸರಿಸಿ ಅದೇ ರಾಗದಲ್ಲಿ ಹಾಡುವುದು ಕ್ರಮ. ಅದನ್ನು ಪ್ರಾರಂಭಿಸುವವರಿಗೆ ದಣಿವು ಆದರೆ ಇನ್ನೊಬ್ಬರು ಬೇರೊಂದು ಧಾಟಿಯಲ್ಲಿ ಶುರುಮಾಡುತ್ತಿದ್ದರು. ಹೀಗೆ ವೈವಿಧ್ಯಮಯವಾದ ಧಾಟಿಗಳಲ್ಲಿ ಹಾಡುವುದನ್ನು ಕೇಳಲು ಖುಷಿಯಾಗುತ್ತಿತ್ತು. ಸಿನೆಮಾ ಧಾಟಿಗಳು ದೇವರಿಗೆ ಮೈಲಿಗೆಯಾಗುತ್ತದೆ ಎಂಬ ಭಾವನೆ ಇರಲಿಲ್ಲ. ಈ ರಾಮನವಮಿಯ ಕಾರ್ಯಕ್ರಮ ಸುಮಾರು ವರ್ಷಗಳವರೆಗೆ ನಡೆಯುತ್ತಿತ್ತು. ಆಕಾಲಕ್ಕೆ ಮೈಕು ಬಂದಿತ್ತು. ನಾವು ಹಾಡುವುದು ದೂರದವರೆಗೆ ಕೇಳಿಸುತ್ತಿತ್ತು. ಸುತ್ತಲೂ ಇದ್ದ ಅನ್ಯಧರ್ಮೀಯರು ಯಾರೂ ಅಡ್ಡಿ ಮಾಡಲಿಲ್ಲ. ತಕರಾರು ಎತ್ತಲಿಲ್ಲ ಎಂದರೆ ಅದೇ ಅಲ್ಲವೇ ಪರಧರ್ಮ ಸಹಿಷ್ಣುತೆ..? ಇದನ್ನು ನಡೆಸುತ್ತಿದ್ದವರು ಮುಂಬೈಯಲ್ಲಿ ಹೊಟೇಲು ಮಾಲಕರಾಗಿದ್ದ ರಾಮಣ್ಣ ಶೆಟ್ರು.

ಅವರು ರಾಮನವಮಿಯ ವೇಳೆ ಊರಿಗೆ ಬರುತ್ತಿದ್ದರು. ಉಳಿದಂತೆ ಆ ಮನೆಯಲ್ಲಿ ಅವರ ಅಕ್ಕ, ಭಾವ ಮತ್ತು ಅವರ ಮಕ್ಕಳು ವಾಸವಾಗಿದ್ದರು. ರಾಮಣ್ಣ ಶೆಟ್ಟರು ಮುಂಬೈಯಲ್ಲಿನ ವಜ್ರೇಶ್ವರಿ ಎಂಬಲ್ಲಿದ್ದ ನಿತ್ಯಾನಂದ ಸ್ವಾಮೀಜಿಗಳ ಭಕ್ತರಂತೆ. ಅದಾಗಲೇ ನಿತ್ಯಾನಂದರು ಸಮಾಧಿಯಾಗಿದ್ದಿರಬೇಕು. ಅವರ ಶಿಷ್ಯ ಮುಕ್ತಾನಂದ ಸ್ವಾಮಿಗಳು, ಆ ಬಳಿಕ ಅವರ ಶಿಷ್ಯ ದಯಾನಂದ ಸ್ವಾಮಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದರು. ಸ್ವಾಮಿಗಳೆನ್ನುವ ಭಕ್ತಿಯಲ್ಲಿ ಅವರನ್ನು ವಿಮರ್ಶೆ ಮಾಡುವ ಬುದ್ಧಿ ಅಂದು ಯಾರಿಗೂ ಇರಲಿಲ್ಲ ಎನ್ನುವುದು ಸತ್ಯ. ನಾವು ಮಕ್ಕಳು ಅವರಿಗೆ ಅಡ್ಡ ಬಿದ್ದು ನಮಸ್ಕರಿಸುತ್ತಿದ್ದೆವು. ಅವರಲ್ಲಿ ಏನೋ ವಿಶೇಷ ಶಕ್ತಿ ಇದೆ ಅನ್ನಿಸುತ್ತಿತ್ತು. ಊರಿನ, ಪರ ಊರಿನ ಜನ ಸ್ವಾಮೀಜಿಗಳ ಆಶೀರ್ವಾದ ಪಡೆಯಲು ಬರುತ್ತಿದ್ದರು. ತಮ್ಮ ಕಷ್ಟ ಗಳನ್ನು ಹೇಳಿಕೊಂಡು ಅದಕ್ಕೆ ಪರಿಹಾರ ಕಂಡುಕೊಳ್ಳುತ್ತಿದ್ದರು.

ಈ ಒಂಬತ್ತು ದಿನಗಳಲ್ಲಿ ಭಕ್ತ ಜನರು ಭಜನೆಯಲ್ಲದೆ ಊಟ ಉಪಾಹಾರ ತಯಾರಿ, ಅವುಗಳ ವಿತರಣೆ, ಶುಚಿತ್ವದ ಕೆಲಸಗಳಲ್ಲಿ ಸ್ವಯಂ ಇಚ್ಛೆಯಿಂದ ಭಾಗವಹಿಸುತ್ತಿದ್ದರು. ರಾಮನವಮಿಯ ದಿನ ಮಹಾಪೂಜೆ ನಡೆದ ಬಳಿಕ ಮಹಾಸಂತರ್ಪಣೆ. ಇದರಲ್ಲಿ ನಮ್ಮ ಜತೆಗೆ ಧರ್ಮಭೇದವಿಲ್ಲದೆ ಕ್ರಿಶ್ಚಿಯನ್, ಮುಸ್ಲಿಂ ಮಕ್ಕಳೂ ಭಾಗಿಯಾಗುತ್ತಿದ್ದುದು ಸಹಜವೇ ಆಗಿತ್ತು. ಯಾರಲ್ಲೂ ಈ ಬಗ್ಗೆ ಅಲ್ಲಸಲ್ಲದ ನಂಬಿಕೆಗಳಿರಲಿಲ್ಲ. ರಾಮನವಮಿ ಮುಗಿದ ಬಳಿಕ ಕೆಲವೇ ದಿನಗಳಲ್ಲಿ ಹನುಮ ಜಯಂತಿಯ ಆಚರಣೆ. ಅಂದು ಕೂಡ ಒಂದು ದಿನದ ರಾಮನಾಮ ಸಂಕೀರ್ತನೆ ನಡೆಯುತ್ತಿತ್ತು. ಒಂದು ವರ್ಷ ರಾಮನವಮಿಯಿಂದ ಹನುಮ ಜಯಂತಿಯ ನಡುವಿನ ದಿನಗಳಲ್ಲಿ ಧಾರ್ಮಿಕ ಕಾರ್ಯಕ್ರಮವಾಗಿ ತೊರವೆ ರಾಮಾಯಣದ ಪುರಾಣದ ವಾಚನ ಏರ್ಪಡಿಸಿದ್ದರು. ಆ ಪುರಾಣದ ಸುಂದರಕಾಂಡದ ಕಾವ್ಯವನ್ನು ನಾನು ಪ್ರಥಮ ಬಾರಿಗೆ ವೇದಿಕೆ ಏರಿ ವಾಚಿಸಿದೆ. ನನ್ನ ತಂದೆಯವರು ಪ್ರವಚನ ಮಾಡಿದರು. ಸ್ವಾಮೀಜಿಗಳು ನನ್ನನ್ನು ಹರಸಿದರು. ಹೀಗೆ ನಮ್ಮ ಊರಲ್ಲಿ ಧಾರ್ಮಿಕ ಹಾಗೂ ಸಾಂಸ್ಕೃತಿಕ ನೆಲೆಗಳಲ್ಲಿ ಯಕ್ಷಗಾನ ಬಯಲಾಟ, ಯಕ್ಷಗಾನ ತಾಳಮದ್ದಳೆ, ಪುರಾಣ ವಾಚನ, ಭಜನೆಗಳು ನಡೆಯುತ್ತಿದ್ದು ಅವು ಇಂದಿನಂತೆ ಶೋಕಿಗಾಗಿ, ಪ್ರಚಾರಕ್ಕಾಗಿ, ಚಂದಾ ಎತ್ತುವುದಕ್ಕಾಗಿ ಇರದೆ ಸಾಮಾನ್ಯ ಜನರ ಮುಗ್ಧ ಭಕ್ತಿಯ ಆಚರಣೆಗಳಾಗಿದ್ದುವು.

ಇಂದು ಹೆಜ್ಜೆಗೊಂದರಂತೆ ಒಬ್ಬೊಬ್ಬ ದೇವರ ಹೆಸರಲ್ಲಿ ಒಂದೊಂದು ಹಬ್ಬಕ್ಕೆ ಮಾಡುವ ಖರ್ಚನ್ನು ನೋಡಿದರೆ, ವೈಭವ ನೋಡಿದರೆ ಅಲ್ಲಿ ಸಂಭ್ರಮ ಇದೆ. ಆದರೆ ಭಕ್ತಿ ಕಾಣದೆ ಆಡಂಬರವೇ ಹೆಚ್ಚಿದೆ ಎಂದು ನನಗನ್ನಿಸುತ್ತಿದೆ. ದೇವರ ಸೃಷ್ಟಿಯಲ್ಲಿ ಮನುಷ್ಯ ಮಾತ್ರ ದೇವರಿಗೆ ಎಂದು ಕೊಡುವ ರೂಢಿ ಮಾಡಿಕೊಂಡಿದ್ದಾನೆ ಎಂದು ನಂಬುವುದು ಒಂದು ಧರ್ಮದ ರೀತಿಯಾದರೆ, ಹಸಿದವನಿಗೆ ಉಣಬಡಿಸು ಎಂದು ಇನ್ನೊಂದು ಧರ್ಮ ಹೇಳುತ್ತದೆ. ಮತ್ತೊಂದು ಧರ್ಮ ದೀನದಲಿತರ, ರೋಗಿಗಳ ಸೇವೆ ಮಾಡು ಅದುವೇ ನಿಜವಾದ ಧರ್ಮ ಎನ್ನುತ್ತದೆ. ಹೌದು ಯಾವುದೇ ಧರ್ಮದ ಯಾವನೇ ದೇವರು ನನ್ನ ಧರ್ಮದ ರಕ್ಷಣೆಗೆ ಇನ್ನೊಬ್ಬರನ್ನು ಹಿಂಸಿಸು ಎಂದು ಹೇಳಿಲ್ಲ ಎನ್ನುವ ಸತ್ಯ ನಮಗೆ ಅರ್ಥವಾದರೆ ಅದಕ್ಕಿಂತ ದೊಡ್ಡ ಧರ್ಮ ಬೇರೆ ಯಾವುದಿದೆ ಹೇಳಿ?

Writer - ಚಂದ್ರಕಲಾ ನಂದಾವರ

contributor

Editor - ಚಂದ್ರಕಲಾ ನಂದಾವರ

contributor

Similar News