ನಾಟಕ ಕಲಾವಿದರ ಊರು

Update: 2017-01-17 18:48 GMT

ನನ್ನೂರಿನ ಜನರಲ್ಲಿ ಹಿಂದೂಗಳಲ್ಲಿ ಮುಖ್ಯವಾಗಿ ಅವೈದಿಕರಿಗೆ ಯಕ್ಷಗಾನ ಬಯಲಾಟ, ತಾಳಮದ್ದಳೆ, ಹರಿಕತೆ, ಪುರಾಣ ವಾಚನ ಇವುಗಳು ಪರೋಕ್ಷವಾಗಿ ಧಾರ್ಮಿಕ ಚಿಂತನೆಗಳ ಮೂಲಕ ಲೌಕಿಕ ಬದುಕಿನ ನೀತಿಗಳನ್ನು ನೀಡುತ್ತದೆ ಎಂಬ ನಂಬಿಕೆ. ಭಜನೆಯ ಮೂಲಕ ನೇರವಾಗಿ ದೇವರನ್ನು ಹೊಗಳುವುದು ಅಥವಾ ಒಮ್ಮಮ್ಮೆ ಹೀನರಾಗಿ ತಮ್ಮ ಕಷ್ಟಗಳಿಗೆ ಪರಿಹಾರ ನೀಡಪ್ಪ ಎಂದು ಬೇಡಿಕೊಳ್ಳುವುದು ಅವರ ನಂಬಿಕೆಯ ಶ್ರದ್ಧೆಯ ಮೇಲೆ ಅವಲಂಭಿಸಿರುತ್ತದೆ ಎನ್ನುವುದರಲ್ಲಿ ಎರಡನೇ ಮಾತೇ ಇಲ್ಲ. ಹಾಗೆಯೇ ನನ್ನೂರಿನ ಕ್ರಿಶ್ಚಿಯನ್ನರು ಪ್ರತಿ ರವಿವಾರ ಬೆಳಗ್ಗೆ 6ರಿಂದ 7 ಅಥವಾ 7ರಿಂದ 8 ಗಂಟೆಯ ಪೂಜೆಗೆ ಅಂದರೆ ಪ್ರಾರ್ಥನೆಗೆ ಹೋಗುತ್ತಿದ್ದರು. ಮನೆ ಮಂದಿ ಎಲ್ಲರೂ ಒಟ್ಟಿಗೆ ಹೋಗಬೇಕೆಂಬ ನಿಯಮ ಇಲ್ಲದ್ದರಿಂದ ಆ ದಿನಕ್ಕೆ ಅನುಕೂಲವಾಗುವಂತೆ ಹಂಚಿ ಹೋಗುತ್ತಿದ್ದರು. ಚರ್ಚ್‌ಗೆ ಹೋಗುವಾಗ ಅವರ ಉಡುಪು ತೊಡುಗೆಗಳು ವಿಶೇಷವಾಗಿಯೇ ಇರುತ್ತಿತ್ತು. ಅದು ಅವರ ಜೀವನೋತ್ಸಾಹದ ಮಾದರಿ ಎಂದರೂ ಸರಿಯೆ.

ರವಿವಾರವೆಂದರೆ ಅವರಿಗೆ ಪವಿತ್ರ ದಿನ (Holyday). ಅಂದು ಅವರನ್ನು ಬೆಳಗ್ಗಿನ ಪ್ರಾರ್ಥನೆ ಸಲ್ಲಿಸಿದ ಬಳಿಕ ವಿಶೇಷ ಅಡುಗೆ ಮಾಡಿ ಸಂಭ್ರಮಿಸುವ ದಿನವೂ ಹೌದು. ಚರ್ಚ್‌ನಿಂದ ಹಿಂದಿರುಗುವ ವೇಳೆ ಮನೆಯ ಗಂಡಸರು ಮಾರುಕಟ್ಟೆಗೆ ಹೋಗಿ ಮಾಂಸ ಖರೀದಿಸಿ ತರುವುದು ಸಾಮಾನ್ಯ. ಇನ್ನು ಕೆಲವೊಮ್ಮೆ ಮನೆ ಮಂದಿ ಎಲ್ಲರೂ ಬೆಳಗ್ಗಿನ ಪ್ರಾರ್ಥನೆಗೆ ಮಿಲಾಗ್ರಿಸ್ ಚರ್ಚ್‌ಗೆ ಅಥವಾ ರೊಸಾರಿಯೋ ಚರ್ಚ್‌ಗೆ ವಿಶೇಷವಾಗಿ ಹೋಗುವುದುಂಟು. ಹಾಗೆ ಹಿಂದಿರುಗುವಾಗ ಬೆಳಗ್ಗಿನ ಉಪಾಹಾರಕ್ಕೆ ಉಡುಪಿ ಶ್ರೀ ಕೃಷ್ಣ ಭವನ, ಮೋಹಿನಿ ವಿಲಾಸ ಮತ್ತು ತಾಜ್‌ಮಹಲ್ ಹೊಟೇಲ್‌ಗಳಿಗೆ ಹೋಗುವುದು ಇತ್ತು. ಇನ್ನು ಕೆಲವರು ಮುಂಜಾನೆ ಎದ್ದು ಹೋಗಲಾಗದವರಿಗೆ ಸಂಜೆ 5 ಗಂಟೆಗೆ ಪ್ರಾರ್ಥನೆಯ ಅವಕಾಶವಿರುತ್ತಿತ್ತು. ಒಟ್ಟಿನಲ್ಲಿ ವಾರಕ್ಕೊಮ್ಮೆ ಆಯಾಯ ಚರ್ಚ್‌ಗೆ ಸೇರಿದ ಸದಸ್ಯರು ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಳ್ಳುವುದು ಅವರ ಕರ್ತವ್ಯ ಎಂದೇ ತಿಳಿಯುತ್ತಿದ್ದರು. ಮುಸ್ಲಿಂ ಬಾಂಧವರಿಗೆ ಬಿಜೈಯಲ್ಲಿ ಮಸೀದಿ ಇರಲಿಲ್ಲ ಎಂದು ಹೇಳಿದ್ದ ನೆನಪು. ಜೊತೆಗೆ ಈ ಊರಲ್ಲಿ ಅವರ ಸಂಖ್ಯೆಯು ಕಡಿಮೆ ಇತ್ತು. ಅಲ್ಲದೆ ಮಸೀದಿಗೆ ಮಹಿಳೆಯರು ಹೋಗುವ ರೂಢಿಯೂ ಇರಲಿಲ್ಲ. ಆದ್ದರಿಂದ ಅವರ ಪ್ರಾರ್ಥನೆ ಮನೆಯಲ್ಲೇ ದಿನಕ್ಕೆ ಐದು ಬಾರಿ ನಮಾಝ್ ಮಾಡುವ ಮೂಲಕ ನಡೆಯುತ್ತಿತ್ತು.

ಮುಸ್ಲಿಮರ ಮನೆಯಲ್ಲಿ ದೇವರನ್ನು ಪ್ರತಿನಿಧಿಸುವ ಯಾವ ಸಂಕೇತವೂ ಇಲ್ಲದಿರುವುದರಿಂದ ಅವರನ್ನು ನಾಸ್ತಿಕರೆಂದಾಗಲೀ ಅಥವಾ ಅವರ ಜೀವನ ಶೈಲಿಯಿಂದ ಅವರು ಇತರರಿಂದ ಭಿನ್ನರೆಂದು ಯಾವಾಗಲೂ ಅನ್ನಿಸದೆ ಇರುವುದರಿಂದ ಮನುಷ್ಯರೆಲ್ಲರೂ ದೇವರ ಸೃಷ್ಟಿ. ಅದನ್ನು ನಂಬುವ ಮತ್ತು ಅದನ್ನು ತೋರಿಸುವ ರೀತಿಗಳು ಬೇರೆ ಎನ್ನುವುದು ಆಗಲೇ ತಿಳಿದುಕೊಳ್ಳಲು ಸಾಧ್ಯವಾಗಿರುವ ವಿಷಯ ಕೂಡಾ. ಅವರ ಹಬ್ಬಗಳ ಸಂದರ್ಭಗಳಲ್ಲೂ ಉಂಡು ಉಟ್ಟು ಸಂತಸ ಪಡುವುದು ಅವರ ರೀತಿ. ಹಿಂದುಗಳು ಹಬ್ಬಗಳನ್ನು ಮನೆಯಲ್ಲೇ ಆಚರಿಸಿದರೂ ದೇವಸ್ಥಾನಗಳ ಜಾತ್ರೆಗೆ ಸಂಬಂಧಿಸಿದಂತೆ ನನ್ನೂರಿನ ಜನ ಗ್ರಾಮದ ದೇವಸ್ಥಾನವಾದ ಕದ್ರಿ ದೇವಸ್ಥಾನದ ದೀಪೋತ್ಸವಕ್ಕೆ, ಕುದ್ರೋಳಿಯ ಶಿವರಾತ್ರಿಗೆ, ಉರ್ವಾ ಮಾರಿಯಮ್ಮನ ಜಾತ್ರೆಗೆ ಹೋಗುವುದನ್ನು ಕಡ್ಡಾಯವೆಂದು ಭಾವಿಸಿದ್ದರು ಮತ್ತು ಹಾಗೆಯೇ ಹೋಗುತ್ತಿದ್ದರು ಕೂಡಾ. ಉರ್ವಾ ಮಾರಿಗುಡಿಯ ಜಾತ್ರೆಗೆ ಮನೆಗಳಿಗೆ ನೆಂಟರು ಬರುವುದು ಹೆಚ್ಚು. ಎರಡು ದಿನದ ಜಾತ್ರೆ ಮುಗಿದು ಮೂರನೇ ದಿನ ಮನೆ ಮನೆಯಲ್ಲಿ ಅಕ್ಕಿ ಕಡುಬು ಮತ್ತು ಕೋಳಿ ಸಾಂಬಾರು ಮಾಡಲೇಬೇಕಾದ ಅಡುಗೆ. ಇಂತಹ ಊಟ ನೆನಪಿಸಿಕೊಂಡಾಗೆಲ್ಲ ಮಾಡುವ ರೂಢಿಯಿರಲಿಲ್ಲ. ಜೊತೆಗೆ ಹೊಟೇಲುಗಳಿಗೆ ಹೋಗಿ ಮೋಜು ಮಾಡುವ ಸಂಪ್ರದಾಯವೂ ಇರಲಿಲ್ಲ. ಕ್ರಿಶ್ಚಿಯನ್ನರಲ್ಲಿಯೂ ಬಿಜೈ ಚರ್ಚ್ ನ ಹಬ್ಬಕ್ಕೆ ನಮ್ಮೂರಿಗೆ ನೆಂಟರು ಬರುತ್ತಿದ್ದರು. ಅವರಲ್ಲಿಯೂ ಈ ಹಬ್ಬದ ಲೆಕ್ಕದಲ್ಲಿ ಅಂದು ಮನೆಯಲ್ಲಿ ಮಾಂಸದ ಅಡುಗೆ. ಈ ಎರಡೂ ಹಬ್ಬಗಳಿಗೆ ಜಾತಿ ಭೇದವಿಲ್ಲದೆ ಸ್ನೇಹಿತರಾಗಿರುವವರು ಮಾಂಸಾಹಾರಿಗಳಾಗಿರುವವರು ಪರಸ್ಪರರ ಮನೆಗೆ ಊಟಕ್ಕೆ ಹೋಗುವುದು ಕೂಡಾ ಸಾಮಾನ್ಯವಾಗಿತ್ತು.

ಕ್ರಿಸ್ಮಸ್ ಹಬ್ಬದಲ್ಲಿ ವಿಶೇಷ ತಿಂಡಿಗಳ ಜೊತೆ ಕೇಕ್ ವಿನಿಮಯ, ಒಟ್ಟಿಗೆ ಊಟ ಇವೆಲ್ಲ ಇದ್ದಂತೆಯೇ ಕ್ರಿಸ್ಮಸ್ ಕಳೆದು ಹೊಸ ವರ್ಷದ ಒಂದು ವಾರದವರೆಗೂ ಕ್ರಿಸ್ಮಸ್ ಹಾಡುಗಳನ್ನು ಹಾಡುವ ತಂಡ ಮನೆ ಮನೆಗೆ ಬಂದು ಹಾಡುವ ಹಾಡುಗಳು ಕೇಳಲು ಚೆನ್ನಾಗಿರುತ್ತಿತ್ತು. ಜೊತೆಗೆ ಬಂದ ಸಾಂತಾಕ್ಲಾಸ್ ಮಕ್ಕಳಿಗೆ ಏನಾದರೂ ಅಂದರೆ ಆ ದಿನಗಳಲ್ಲಿ ಚಾಕಲೇಟ್, ಪೆಪ್ಪರ್‌ಮಿಂಟ್ ಕೊಟ್ಟು ಸಂತಸಪಡಿಸುತ್ತಿದ್ದ. ಸಾಂತಾಕ್ಲಾಸ್‌ನ ವೇಷ ಭೂಷಣಗಳು ನೋಡಲು ಚಂದವಾಗಿರುತ್ತಿತ್ತು. ಕ್ರಿಸ್ಮಸ್‌ಗೆ ಮನೆ ಮನೆಯಲ್ಲಿ ತಯಾರಿಸುತ್ತಿದ್ದ ಗೋದಲಿ ಹಾಗೂ ನಕ್ಷತ್ರಗಳನ್ನು ನೋಡುವುದೆಂದರೆ ನಮಗೆ ಬಹಳ ಖುಷಿಯ ವಿಚಾರ. ಹಾಗೆಯೇ ದೀಪಾವಳಿಗೂ ಮನೆ ಮನೆಗಳಲ್ಲಿ ಮಕ್ಕಳೇ ತಯಾರಿಸಿ ತೂಗು ಹಾಕುವ ದೀಪಗಳೂ ಚಂದವೇ. ಅಗೆಲ್ಲಾ ಮನೆ ಮಕ್ಕಳೇ ಸೇರಿ ಗೂಡುದೀಪ ನಕ್ಷತ್ರಗಳನ್ನೂ ತಯಾರಿಸುತ್ತಿದ್ದರೆ ಮಕ್ಕಳಿಗೆ ಸಿಗುವ ಸಂತೋಷ ಈಗ ಅಂಗಡಿಗಳಿಂದ ತಂದು ನೇತಾಡಿಸುವ ನಕ್ಷತ್ರಗಳಲ್ಲಿ, ಗೂಡುದೀಪಗಳಲ್ಲಿ ಇರಲು ಸಾಧ್ಯವಿಲ್ಲ ಅಲ್ಲವೇ?

ಇವೆಲ್ಲವೂ ಧಾರ್ಮಿಕ ನೆಲೆಯ ಆಚರಣೆಗಳಾಗಿದ್ದರೂ ಇಲ್ಲಿ ಪರಸ್ಪರರಲ್ಲಿ ಕಾಣುತ್ತಿದ್ದ ಸೌಹಾರ್ದಗಳು ಈಗ ಮರೆಯಾಗುತ್ತಿವೆ ಎನ್ನುವುದರೊಂದಿಗೆ ಈ ದಿನಗಳಲ್ಲಿ ಇಂತಹ ಹಬ್ಬಗಳನ್ನು ಸಾರ್ವಜನಿಕವಾಗಿ ಆಚರಿಸುವ ಮೂಲಕ ಸಾಮರಸ್ಯಕ್ಕೆ ಪ್ರಯತ್ನಿಸುವವರೂ ಇದ್ದಾರೆ.

ಸಾಮಾಜಿಕವಾಗಿ ಎಲ್ಲರೂ ನೋಡಬಹುದಾದ ಕಲಾ ಪ್ರಕಾರಗಳಲ್ಲಿ ನಾಟಕವೂ ಒಂದು. ಸಿನೆಮಾ ಇದ್ದರೂ ಯಾರೂ ಎಲ್ಲಿ ನೋಡಿದರು ಎನ್ನುವುದು ಖಾಸಗಿ ವಿಷಯವೇ. ಆದ್ದರಿಂದ ಈ ಬಗ್ಗೆ ಬರೆಯಲಾಗದು. ಆದರೆ ನಾಟಕ ನನ್ನೂರಿನಲ್ಲಿ ಕಾಪಿಕಾಡು ಶಾಲೆಯ ಆವರಣದಲ್ಲಿ ನಡೆಯುತ್ತಿತ್ತು ಎಂಬ ನೆನಪು. ಕಾಪಿಕಾಡಿನಲ್ಲಿ ಬಿ.ವಿ.ಕಿರೋಡಿಯನ್ನರು ಸ್ವತಃ ಕಲಾವಿದರಾಗಿದ್ದರು. ಅವರ ಕಾರಣದಿಂದ ಹಾಗೂ ಕಾಪಿಕಾಡು ಶಾಲೆಯ ಕೆಲವು ಅಧ್ಯಾಪಕರ ಆಸಕ್ತಿಯಿಂದ ನಾಟಕಗಳು ನಡೆಯುತ್ತಿತ್ತು. ಶಾಲಾ ವಾರ್ಷಿಕೋತ್ಸವದಲ್ಲಿ ವಿದ್ಯಾರ್ಥಿಗಳಿಂದ ಸುದೀರ್ಘ ನಾಟಕವೇ ಇರುತ್ತಿತ್ತು. ಅದು ಪೌರಾಣಿಕ ಅಥವಾ ಚಾರಿತ್ರಿಕವಾಗಿರುತ್ತಿತ್ತು. ಸಾರ್ವಜನಿಕವಾಗಿ ನಡೆದ ಒಂದು ನಾಟಕ ‘ವೀರ ಎಚ್ಚಮ ನಾಯಕ’ ಎನ್ನುವುದು ನೆನಪಿದೆ. 60ರ ದಶಕದಲ್ಲಿ ಕೆ.ಎನ್.ಟೈಲರ್ ಕಾಪಿಕಾಡಿನಲ್ಲಿ ಬಂದು ನೆಲೆಸಿದರು. ಅವರು ವೃತ್ತಿಯಲ್ಲಿ ಟೈಲರ್ ಆಗಿದ್ದರೂ ಪ್ರವೃತ್ತಿಯಲ್ಲಿ ಕಲಾವಿದರಾಗಿದ್ದರು. ಅವರ ಬಹಳ ಪ್ರಸಿದ್ಧ ನಾಟಕ ‘ತಮ್ಮಲೆ ಅರುವತ್ತನ ಕೋಲ’ವನ್ನು ಎರಡು ಬಾರಿ ನನ್ನೂರಲ್ಲೇ ನೋಡಿದ ನೆನಪು. ಎರಡನೇ ಬಾರಿಯ ಪ್ರದರ್ಶನದಲ್ಲಿ ನಾಟಕ ಕಲಾವಿದರರಾದ ವಸುಕುಮಾರ್ ಅವರ ತಂದೆ ತೀರಿಕೊಂಡು ನಾಟಕ ಅರ್ಧದಲ್ಲೇ ನಿಂತು ಹೋದ ನೆನಪು. ಈ ನಾಟಕದ ವಸುಕುಮಾರ್ ಮಂಗಳೂರಿನ ಇತರ ನಾಟಕ ತಂಡಗಳಲ್ಲಿಯೂ ಕನ್ನಡ, ತುಳು ಕಲಾವಿದರಾಗಿ ಅಭಿನಯಿಸುತ್ತಿದ್ದರು.

ಕೆ.ಎನ್.ಟೈಲರ್ ‘ತಮ್ಮಲೆ ಅರುವತ್ತನ ಕೋಲ’ದಲ್ಲಿ ಬಿ.ವಿ.ಕಿರೋಡಿಯನ್ ‘ತಮ್ಮಲೆ’ಯ ಪಾತ್ರ ವಹಿಸಿದ್ದರೆ ಕೆ.ಎನ್.ಟೈಲರ್ ‘ಅರುವತ್ತ’ನ ಪಾತ್ರ ಮಾಡುತ್ತಿದ್ದರು. ಕೆ.ಎನ್.ಟೈಲರ್‌ರವರ ಇನ್ನೊಂದು ನಾಟಕ ‘ಯಾನ್ ಸನ್ಯಾಸಿ ಆಪೆ’ ಎನ್ನುವುದನ್ನು ಕೂಡಾ ನನ್ನೂರಿನಲ್ಲಿಯೇ ನೋಡುವ ಅವಕಾಶ ಸಿಕ್ಕಿತು. ಈ ನಾಟಕಗಳನ್ನು ನಾವು ಪ್ರಾರಂಭದಲ್ಲಿ ಉಚಿತವಾಗಿಯೇ ನೋಡಿರುವುದು. ಮುಂದೆ ಇವರ ಪ್ರಸಿದ್ಧಿ ಹೆಚ್ಚಿದಂತೆ ಹಲವಾರು ಸಂಘಟನೆಗಳು ತಮ್ಮ ಆರ್ಥಿಕ ಅಭಿವೃದ್ಧಿಗೆ ಇವರ ನಾಟಕಗಳ ‘ಬೆನಿಫಿಟ್ ಶೋ’ ಏರ್ಪಡಿಸುತ್ತಿದ್ದರು. ಇದರಿಂದ ಊರಲ್ಲಿ ನಾಟಕ ನೋಡುವ ಅವಕಾಶಗಳು ನಮಗೆ ಕಡಿಮೆಯಾಯ್ತು ಎಂದರೂ ನಾಟಕದ ಆಸಕ್ತಿ ಇದ್ದವರು ದೂರದ ಊರಲ್ಲೂ ಹೋಗಿ ನೋಡಿಕೊಂಡು ಬರುತ್ತಿದ್ದರು ಎನ್ನಿ. ತುಳುವಿನಲ್ಲಿ ಕೆ.ಎನ್.ಟೈಲರ್‌ರವರ ನಾಟಕಗಳು ಎಲ್ಲೆಲ್ಲೂ ಇರುತ್ತಿದ್ದಂತೆಯೇ ನಮ್ಮೂರಿನ ಕ್ರಿಶ್ಚಿಯನ್ನರಿಗೆ ಕೊಂಕಣಿ ಭಾಷೆಯ ನಾಟಕಗಳು ಡಾನ್ ಬೊಸ್ಕೊ ಹಾಲಲ್ಲಿ ಪ್ರತಿ ರವಿವಾರ ಸಂಜೆ ನಡೆಯುತ್ತಿತ್ತು. ಪ್ರತಿ ರವಿವಾರ ಬೆಳಗ್ಗೆ ‘‘ಆಜ್ ಸಂಜೇರ್ ಸೋವರಾರ್, ಡಾನ್ ಬೊಸ್ಕೊ ಹಾಲಾಂತ್...’’ ಎಂದು ಹೇಳಿಕೊಂಡು ನೋಟಿಸ್ ಬಿಸಾಡಿಕೊಂಡು ಹೋಗುತ್ತಿದ್ದರೆ ಅದನ್ನು ಹೆಕ್ಕಿಕೊಂಡು ತಂದು ಲೂಸಿಬಾಯಿಗೆ ಕೊಡುತ್ತಿದ್ದೆ. ಅವರ ಸಂಬಂಧಿ ಯುವಕರೊಬ್ಬರು ನಾಟಕದ ಕಲಾವಿದರಾಗಿದ್ದರು. ಕೆ.ಎನ್.ಟೈಲರ್‌ರಂತೆ, ವಸುಕುಮಾರ್‌ರಂತೆ, ಬಿ.ವಿ.ಕಿರೋಡಿಯನ್‌ರಂತೆ ಮತ್ತೆ ಬಿಜೈ ಊರಿಗೆ ಬಂದು ಸೇರಿದವರು ನಾಟಕಕಾರ ಸೀತಾರಾಮ ಕುಲಾಲರು. ಒಳ್ಳೆಯ ನಟ, ನಿರ್ದೇಶಕರು ಎನ್ನುವ ಹೆಸರು ಪಡೆದುಕೊಂಡವರು.

ಕೆ.ಎನ್.ಟೈಲರ್‌ರವರ ಮನೆಗೆ ಅಭ್ಯಾಸಕ್ಕೆ ಬರುತ್ತಿದ್ದ ಸುಮಾರು ನನ್ನ ವಯಸ್ಸಿನವಳೇ ಆದ ಜಯಮಾಲಾ ಇಂದು ಕಲಾವಿದೆಯಾಗಿ ಏರಿದ ಎತ್ತರ ಬಹು ದೊಡ್ಡದು. ನಟಿ ಜಯಮಾಲಾರ ನೆನಪು ಆದಂತೆ ಇನ್ನೊಬ್ಬಾಕೆ ಸೂಪರ್‌ಸ್ಟಾರ್ ನನ್ನ ಮನೆ ಪಕ್ಕದಲ್ಲೇ ಸ್ವಲ್ಪ ಸಮಯ ಇದ್ದ ನೆನಪಿದೆ. ಅವರೇ ಮೂವರು ಪ್ರಸಿದ್ಧ ತಾರಾ ಸಹೋದರಿಯರಾದ ಲಲಿತಾ, ಪದ್ಮಿನಿ, ರಾಗಿಣಿ ಇವರಲ್ಲಿ ಒಬ್ಬರು ಎಂದು ನೆನಪು. ಅವರ ಪತಿ ಮಂಗಳೂರಿನ ಕೆಎಂಸಿಯಲ್ಲಿ ವೈದ್ಯ ವೃತ್ತಿಯಲ್ಲಿ ಉನ್ನತ ಶಿಕ್ಷಣಕ್ಕಾಗಿ ಬಂದವರು ಗ್ರೆಟ್ಟಾ ಬಾಯಿಯ ಮನೆಯಲ್ಲಿ ಬಿಡಾರವಿದ್ದರು. ಈ ನಟಿ ಯಾರ ಕಣ್ಣಿಗೂ ಬೀಳುತ್ತಿರಲಿಲ್ಲ. ನೋಡಲೇಬೇಕೆಂದು ಹಬಿನಮ್ಮನ ಮನೆಗೆ ಬಂದು ಆಕೆ ಕಾರಿನೊಳಗೆ ಕುಳಿತುಕೊಳ್ಳಲು ಹೋಗುವಾಗ ದೂರದಿಂದ ನಿಂತು ನೋಡಿದ ಸಂಭ್ರಮ ನನ್ನದು.

ನನ್ನ ಜೊತೆ ಓದಿದ ಶ್ರೀಧರ ಎನ್ನುವ ಸಹಪಾಠಿ ಮುಂದೆ ಸಮುದಾಯ ನಾಟಕ ತಂಡದ ಉತ್ತಮ ನಿರ್ದೇಶಕನಾಗಿದ್ದ ಎನ್ನುವುದು ಕೂಡಾ ಹೆಮ್ಮೆಯ ನೆನಪುಗಳಲ್ಲಿ ಒಂದು. ಹೀಗೆ ನನ್ನೂರಿನಲ್ಲಿ ಕಲಾವಿದರೂ ಇದ್ದರು ಎನ್ನುವುದು ಊರಿಗೆ ಹೆಮ್ಮೆಯ ವಿಷಯವೇ ಸರಿ. ಈಗಲೂ ಹೆಸರಿನೊಂದಿಗೆ ಕಾಪಿಕಾಡು ಸೇರಿಸಿ ಕೊಂಡಿರುವ ತುಳು ನಾಟಕದ ಹೆಮ್ಮೆಯ ಕಲಾವಿದ ದೇವದಾಸರವರು ಕಾಪಿಕಾಡಿಗೆ ಪ್ರಸಿದ್ಧಿ ತಂದು ಕೊಟ್ಟಿದ್ದಾರೆ. ಕಲಾವಿದರು ಆಸಕ್ತಿಯಿಂದ ಕಲೆಗಾಗಿ ಬದುಕಿದರು. ಅವರು ಬದುಕಿದ ಕಲೆ ಜನರಿಗಾಗಿ ಎನ್ನುವುದು ಅಷ್ಟೇ ಸತ್ಯವಾದ ಮಾತು. ಜನರಿಗೆ ಮನರಂಜನೆಯೊಂದಿಗೆ ಜೀವನದ ವೌಲ್ಯಗಳನ್ನು ಕೂಡಾ ತಿಳಿಸುವ ಮಾಧ್ಯಮವು ಹೌದು. ಆ ಕಾರಣದಿಂದಲೇ ಕಲೆಗಳಿಗೆ ಸಾಮಾಜಿಕ ಬದ್ಧತೆ ಇರುತ್ತದೆ. ಇರಬೇಕು ಎನ್ನುವುದು ಕೂಡಾ ನಿಜವೇ. ಈ ಎಲ್ಲಾ ಹಿನ್ನೆಲೆಗಳಲ್ಲಿ ನಾನು ಹುಟ್ಟಿದ, ನಾನು ಬಾಲ್ಯ, ಪ್ರೌಢಾವಸ್ಥೆಯ ಸಂತಸದ ದಿನಗಳನ್ನು ಕಳೆದ ಬಿಜೈ ಕಾಪಿಕಾಡುಗಳನ್ನು ಅನಿವಾರ್ಯವಾಗಿ ಬಿಡಬೇಕಾಯ್ತು. ನನ್ನ ತಂದೆಯವರಿಗೆ ತನ್ನ ಹುಟ್ಟೂರಾದ ಕೊಂಡಾಣ ಎನ್ನುವಲ್ಲಿ ಒಂದಿಷ್ಟು ಜಾಗ ಇದೆ ಎನ್ನುವುದೇ ನೆಪವಾಗಿ ಯಾರು ಎಷ್ಟೇ ಒತ್ತಾಯಿಸಿದರೂ ಸ್ವಂತಕ್ಕೆ ಜಾಗ ಖರೀದಿಸಿಲ್ಲ ಎನ್ನುವುದು ಅರ್ಧ ಸತ್ಯ. ಈ ಸತ್ಯದ ಇನ್ನೊಂದು ಅರ್ಧದ ಸತ್ಯ ಏನು ಅಂದರೆ ಸ್ವಾಭಿಮಾನಿಯಾದ ತಂದೆ ಇನ್ನೊಬ್ಬರಿಂದ ಸಹಾಯ ಯಾಚಿಸುವಲ್ಲಿ ಹಿಂದೇಟು ಹಾಕುವವರು. ಈ ಕಾರಣದಿಂದಲೂ ಬಡ ಮೇಸ್ಟ್ರಿಗೆ ಜಾಗ ಖರೀದಿಸಿ ಮನೆ ಕಟ್ಟಿಸಿಕೊಳ್ಳುವುದು ಸಾಧ್ಯವಾಗದ ವಿಷಯವೂ ಹೌದು.

ಯಾವುದೇ ಊರಿಗೂ ನಮಗೂ ಒಂದು ಋಣಾನುಬಂಧವಿರುತ್ತದೆ ಎನ್ನುವುದು ಲೋಕ ರೂಢಿ. ಈ ಊರಿನ ನೀರಿನ ಋಣ ಮುಗಿಯಿತು. ಆದರೆ ಸ್ನೇಹದ ಋಣ ಮುಗಿಯಲಾರದು. ವಿಶ್ವಾಸದ ಋಣವೇ ತೀರಿಸಲು ಸಾಧ್ಯವಾಗದ್ದು. ಈ ವಿಶ್ವಾಸ, ಸ್ನೇಹಗಳ ಋಣವೇ ಕಾರಣವಾಗಿ ಕೊಂಕಣಿ ಕಾದಂಬರಿಕಾರ ಜೆ.ಆಲ್ವರಿಸ್‌ರ ಬಿಡಾರದಲ್ಲಿ ಸ್ವಲ್ಪ ಸಮಯ ಇದ್ದ ನಾವು ಮತ್ತೆ ಅಪ್ಪನ ಸ್ನೇಹಿತರಾಗಿದ್ದ, ನನ್ನ ಗುರುಗಳಾಗಿದ್ದ ಗುರುವಪ್ಪ ಮಾಸ್ತರರ ಮನೆಯೊಳಗಿನ ಅರ್ಧ ಭಾಗ ಎನ್ನುವಂತಿದ್ದ ಮನೆಗೆ ಅಂದರೆ ದೇರೆಬೈಲು ಎಂಬ ಊರಿಗೆ ಹೋದೆವು. ಆಗ ನಾನು ಮಂಗಳೂರಿನ ಸರಕಾರಿ ಕಾಲೇಜಿನ ವಿದ್ಯಾರ್ಥಿನಿ. ತಂಗಿ ಬೆಸೆಂಟ್ ಹೈಸ್ಕೂಲಿನ ವಿದ್ಯಾರ್ಥಿನಿ. ತಮ್ಮ ಕಾಪಿಕಾಡು ಶಾಲೆಯ ವಿದ್ಯಾರ್ಥಿ ಆಗಿದ್ದ. ಅಪ್ಪ ಲೇಡಿಹಿಲ್ ವಿಕ್ಟೋರಿಯಾ ಶಾಲೆಯ ಕನ್ನಡ ಪಂಡಿತರಾಗಿ, ಅಮ್ಮ ಮನೆಯೊಡತಿಯಾಗಿ ಮನೆಯಲ್ಲೇ ಇರಬೇಕಾದ ಸ್ಥಿತಿಯಲ್ಲಿ ಹೆಚ್ಚು ಬೇಸರಿಸಿದವರು ಅಮ್ಮನೆಂದರೆ ತಪ್ಪಲ್ಲ. ಅಮ್ಮ ತನ್ನೆಲ್ಲ ಸ್ನೇಹಿತೆಯರನ್ನು ಅಗಲಬೇಕಾದ ಸಂದರ್ಭದ ಜೊತೆಗೆ ಅವರ ಅಮ್ಮನ ಮನೆ ನಡೆದು ಹೋಗುವ ದೂರಕ್ಕಿಂತ ದೂರವಾಯಿತು ಎನ್ನುವ ಚಿಂತೆ ಸಹಜವಾಗಿತ್ತು.

Writer - ಚಂದ್ರಕಲಾ ನಂದಾವರ

contributor

Editor - ಚಂದ್ರಕಲಾ ನಂದಾವರ

contributor

Similar News