ಪ್ರೀತಿ, ವಿಶ್ವಾಸ, ಗೌರವ ತೋರಿದ ಊರು
ಊರಲ್ಲಿ ಅವಿದ್ಯಾವಂತರು, ಕೂಲಿ ಕಾರ್ಮಿಕರು ಹೆಚ್ಚು ಸಂಖ್ಯೆಯಲ್ಲಿದಾಗ ಹೊಟ್ಟೆ ಬಟ್ಟೆಗಾಗಿ ದುಡಿಯುವ ಅವರಿಗೆ ಇತರ ವಿದ್ಯಾವಂತರಾದ ಸಭ್ಯ ನಾಗರಿಕ ಸಜ್ಜನರು ಮಾದರಿಗಳಾಗುವುದಿಲ್ಲ. ತಮ್ಮ ಮನೆಯ ಮಕ್ಕಳ ವಿದ್ಯಾಭ್ಯಾಸವೂ ಮಹತ್ವದ್ದೆನ್ನಿಸುವುದಿಲ್ಲ ಎನ್ನುವುದು ನಾನು ಈ ಊರಿನಲ್ಲಿ ಕಂಡ ಅನುಭವ. ಜಗಳ ನಡೆಯುತ್ತಿದ್ದರೆ ಅಲ್ಲಿ ಹೋಗಿ ನೋಡಿ ಸಂತೋಷಪಡುವ ಸ್ವಭಾವ ಗಂಡಸರದ್ದಾದರೆ, ಆ ಘಟನೆಗೆ ಉಪ್ಪು-ಖಾರ-ಹುಳಿ ಬೆರಸಿ ಸುದ್ದಿ ಹರಡುವ ಸ್ವಭಾವ ಹೆಂಗಸರದ್ದು. ಇಂತಹ ಸ್ವಭಾವಗಳಿಂದ ತಮ್ಮ ತಮ್ಮ ಮನೆಯಲ್ಲಿ ಕುಡುಕರಾದ ಯುವಕರ, ಗಂಡಸರ ಕಾರಣದಿಂದ ಜಗಳಗಳು ಆಗುತ್ತಿದ್ದರೆ ಮಕ್ಕಳಿಗೆ ಜಗಳದ ಪ್ರಾತ್ಯಕ್ಷಿತೆಯೇ ಹೊರತು ಅವರ ಬದುಕಿಗೆ ಆಗುತ್ತಿರುವ ಅನ್ಯಾಯದ ಅರಿವು ಮಕ್ಕಳಿಗೂ ಇಲ್ಲ. ಇಂತಹ ಸಂದರ್ಭದ, ವಾತಾವರಣದಲ್ಲಿಯೂ ಕೆಲವರು ಪ್ರತೀ ರವಿವಾರ ಯೆಯ್ಯಾಡಿಯ ಭಜನಾ ಮಂದಿರದಲ್ಲಿ ನಡೆಯುವ ಪುರಾಣ ಪ್ರವಚನಕ್ಕೆ ನಮ್ಮೆಂದಿಗೆ ಬರಲು ಶುರು ಮಾಡಿದುದು ಹೆಚ್ಚುಗಾರಿಕೆಯೇ ಸೈ. ಇಲ್ಲಿಯೂ ಮನೆಯ ಗಂಡಸರು ಪಡೆದುಕೊಂಡ ಅವಕಾಶ ಮನೆಯ ಹೆಂಗಸರಿಗೆ ದೊರೆಯಲಿಲ್ಲ.
ದೇರೆಬೈಲಿನಿಂದ ಕೆಳ ಕೊಂಚಾಡಿಯಿಂದ ಮುಂದೆ ಬಲಬದಿಗೆ ತಿರುಗುವ ರಸ್ತೆಯಲ್ಲಿ ‘ದಾದಾ ಶೇಟ್‌ಮಿಲ್’ (ಅಕ್ಕಿಯ ಮಿಲ್) ಇತ್ತು ಎಂದು ಕೇಳಿದ್ದೇನೆ. ಅಲ್ಲಿಂದ ಅಕ್ಕಿ ತುಂಬಿದ ಗೋಣಿಗಳನ್ನು ರಂಗಣ್ಣನವರು ಗಾಡಿಯಲ್ಲಿ ಪೇಟೆಗೆ ಒಯ್ಯುತ್ತಿದ್ದರು. ಈ ಮಿಲ್ ಬಳಿ ಒಂದು ಭಜನಾ ಮಂದಿರವಿದ್ದು ಅಲ್ಲಿ ಹಬ್ಬ ಹರಿದಿನಗಳ ಸಂಭ್ರಮಕ್ಕೆ ಪೂರಕವಾಗಿ ಪುರಾಣ ಪ್ರವಚನ, ಯಕ್ಷಗಾನ ಏರ್ಪಡಿಸುತ್ತಿದ್ದರು. ಇದರ ಮುಖ್ಯ ಜವಾಬ್ದಾರಿಯನ್ನು ಕೊಂಚಾಡಿಯಲ್ಲಿ ಹೊಟೇಲ್ ಇಟ್ಟುಕೊಂಡಿದ್ದ ಕಾಂತಪ್ಪಣ್ಣ ಎಂಬ ಹಿರಿಯರು, ಜಿನ್ನಪ್ಪಣ್ಣ, ರಮೇಶಣ್ಣ ಎಂಬವರು ನೋಡಿಕೊಳ್ಳುವುದರೊಂದಿಗೆ ದೇರೆಬೈಲು ಕೊಂಚಾಡಿ ಯುವಕ ಮಂಡಲದ ಸುಧಾಕರಣ್ಣ, ಲೋಕಾನಂದ ಹಾಗೂ ಇತರ ಸದಸ್ಯರು ಸಹಕರಿಸುತ್ತಿದ್ದರು. ಪುರಾಣ ವಾಚನವನ್ನು ನನ್ನ ತಂದೆಯವರು ಹಾಗೂ ಪ್ರವಚನವನ್ನು ಶೆಡ್ಡೆ ಕೃಷ್ಣ ಮಲ್ಲಿಯವರು ನಡೆಸುತ್ತಿದ್ದರು. ಯಕ್ಷಗಾನ ತಾಳ ಮದ್ದಳೆಯಲ್ಲಿಯೂ ತಂದೆಯವರ ಮಾರ್ಗದರ್ಶನ ಇದ್ದು ಅವರು ಅರ್ಥಧಾರಿಯಾಗಿ, ಮಂದಾರ ಕೇಶವ ಭಟ್ಟರು ಭಾಗವತರಾಗಿ ಸಹಕರಿಸುತ್ತಿದ್ದುದು ನೆನಪಿದೆ. ಹೀಗೆ ಕಾರ್ಮಿಕ ವರ್ಗದ ಜನರಿಗೆ ಧಾರ್ಮಿಕ ನೆಲೆಯಿಂದ ಜೀವನ ವೌಲ್ಯಗಳ ಅರಿವಿಗೆ ಈ ಕಾರ್ಯಕ್ರಮಗಳು ಸ್ವಲ್ಪ ಮಟ್ಟಿಗೆ ಸಹಕಾರಿಯಾಗಿತ್ತು. ಇಲ್ಲಿನ ಕಾರ್ಯಕ್ರಮಕ್ಕೆ ಕೆಳ ಕೊಂಚಾಡಿಯ ಆಸುಪಾಸಿನ ಹೆಂಗಸರು ಬರುತ್ತಿದ್ದರು.
ಈ ನಡುವೆ ದೇರೆಬೈಲು ಶಾಲೆಯ ಎದುರಿನ ಮನೆಯೊಂದರಲ್ಲಿ ಒಬ್ಬ ಸನ್ಯಾಸಿಗಳು ಬಂದು ನೆಲೆಸಿದರು. ವಿಜ್ಞಾನ ಭಿಕ್ಷು ಎಂದು ಅವರ ಹೆಸರು. ಅವರು ‘‘ಆರ್ಯ ಸಮಾಜ’’ ಎಂಬ ಪಂಥಕ್ಕೆ ಸೇರಿದವರು. ಅವರು ಸಂಸ್ಕೃತ ತರಗತಿಗಳನ್ನು ನಡೆಸುತ್ತಿದ್ದರು. ಲೋಕಾನಂದ ಅವರು ಅವರ ಶಿಷ್ಯರಾಗಿ ದೀಕ್ಷೆ ತೆಗೆದುಕೊಂಡರು. ತನ್ನ ವಿವಾಹವನ್ನು ‘ವಿಜ್ಞಾನ ಭಿಕ್ಷು’ಗಳ ನೇತೃತ್ವದಲ್ಲಿ ಆರ್ಯ ಸಮಾಜದ ರೀತಿಯಲ್ಲಿ ನಡೆಸಿದುದು ಆ ಕಾಲಕ್ಕೆ ವಿಶೇಷವಾದುದು. ಆರ್ಯ ಸಮಾಜವನ್ನು ಸ್ಥಾಪಿಸಿದ ಉತ್ತರ ಭಾರತದ ದಯಾನಂದ ಸರಸ್ವತಿಯವರು ಮೂರ್ತಿಪೂಜೆಯನ್ನು ತಿರಸ್ಕರಿಸಿ, ಸನಾತನ ಎನ್ನುವ ಹೋಮ ಹವನಗಳನ್ನು ಮಂತ್ರ ಧಾರ್ಮಿಕ ಆಚರಣೆಗಳನ್ನಾಗಿ ಸ್ವೀಕರಿಸಿದ್ದರು. ಆದರೆ ಹಿಂದೂ ಧರ್ಮದ ಇಂದಿನ ಆಚರಣೆಗಳನ್ನು ನೋಡಿದರೆ ಹಳೆಯ ಆಚರಣೆಗಳೊಂದಿಗೆ ಇನ್ನೆಷ್ಟೋ ಹೊಸ ಹೊಸ ಆಚರಣೆಗಳು ಸೇರಿಕೊಳ್ಳುತ್ತಾ ಇರುತ್ತವೆ. ಆದರೆ ಅಗತ್ಯವಿಲ್ಲದ ಆಚರಣೆಗಳನ್ನು ಬಿಡಬಹುದು ಎನ್ನುವ ವಿವೇಕ ಮಾತ್ರ ಯಾರಿಗೂ ಇಲ್ಲ ಎನ್ನುವುದರ ಜೊತೆಗೆ ಇಂತಹ ವಿಚಾರಗಳಿಗೆ ಮಾರ್ಗದರ್ಶನದ ವಾರಸುದಾರರು ಕೂಡಾ ಇಲ್ಲ ಎನ್ನುವುದು ಆಲೋಚಿಸಬೇಕಾದ ವಿಷಯ. ಆರ್ಯ ಸಮಾಜದ ಬಗ್ಗೆ ಒಂದಿಷ್ಟು ಒಲವು ಇದ್ದ ನನ್ನ ಅಪ್ಪನ ಸಂಗ್ರಹದಲ್ಲಿ ಹಾಗೂ ಆ ಸಮಾಜದ ಪತ್ರಿಕೆ ಹಾಗೂ ಹಲವಾರು ಸಂಸ್ಕೃತ ಕನ್ನಡದ ಪುಸ್ತಕಗಳನ್ನು ನೋಡಿದ್ದೇನೆ ಹಾಗೂ ಓದಿದ್ದೇನೆ. ‘ವಿಜ್ಞಾನ ಭಿಕ್ಷು’ಗಳ ಪರಿಚಯವನ್ನು ನನ್ನ ತಂದೆಯವರೂ ಮಾಡಿಕೊಂಡು ಬಿಡುವಾದಾಗ ಅವರ ಬಳಿ ಮಾತುಕತೆಗೆ ಹೋಗುತ್ತಿದ್ದುದು ನೆನಪಿದೆ.
ಕೆಳ ಕೊಂಚಾಡಿಯಿಂದ ಮುಂದೆ ತಿರುವಿನಲ್ಲಿ ಎಡಬದಿಗೆ ಪರಪಾದೆ, ಬಲಬದಿಗೆ ಮುಲ್ಲಕಾಡು ದಾಟಿದರೆ ಕಾವೂರು ಎನ್ನುವ ಊರು. ಅಲ್ಲೊಂದು ಮಹಾಲಿಂಗೇಶ್ವರ ದೇವಸ್ಥಾನ. ಆ ದೇವಸ್ಥಾನದ ಎದುರಿಗೆ ಗದ್ದೆ, ತೋಟಗಳಿದ್ದುವು. ಅಲ್ಲಿ ಕೊಂಚಾಡಿ ರಾಮಾಶ್ರಮ ಶಾಲೆಯ ಮಾಸ್ತರರಾದ ಸಂಜೀವ ಮೊಯ್ಲಿ ಎನ್ನುವವರು ಇದ್ದರು. ಇವರು ನನ್ನ ಅಪ್ಪ ಹಾಗೂ ಗುರುವಪ್ಪ ಮಾಸ್ತರರ ಶಿಷ್ಯರು, ಅದೇ ರಾಮಾಶ್ರಮ ಶಾಲೆಯಲ್ಲಿ. ನಮ್ಮ ಈ ಎರಡೂ ಮನೆಗಳಿಗೆ ಆತ್ಮೀಯರಾಗಿದ್ದರು. ನನ್ನ ಮನೆಯ ಸದಸ್ಯರಂತೆಯೇ ಆಗಿದ್ದು ನಾನು ಅವರನ್ನು ಮಾವ ಎಂದೇ ಕರೆಯುತ್ತಿದ್ದೆ. ಅವರ ನಮ್ಮ ಸ್ನೇಹ ವಿಶ್ವಾಸಗಳು ಅವರು ನಿಧನರಾಗುವವರೆಗೂ ಇತ್ತು ಎನ್ನುವುದಕ್ಕೆ ಈಗಲೂ ಅವರು ಆಗಾಗ ನೆನಪಾಗುತ್ತಾರೆ. ಇವರಲ್ಲದೆ ಕೆಳ ಕೊಂಚಾಡಿಯ, ಕಾವೂರಿನ ಅನೇಕರು ರಾಮಾಶ್ರಮ ಶಾಲೆಯ ವಿದ್ಯಾರ್ಥಿಗಳಾಗಿದ್ದು, ನನ್ನ ಸಂಜೆ ಕಾಲೇಜಿನ ರಾತ್ರಿಯ ಬಸ್ಸಿನ ಪ್ರಯಾಣದಲ್ಲಿ ನನಗೆ ರಕ್ಷಣೆಯಾಗಿದ್ದರು ಎಂದರೆ ತಪ್ಪಲ್ಲ.
ಹಾಗೆಯೇ ಅನೇಕ ಕ್ರಿಶ್ಚಿಯನ್ ಹುಡುಗರು ಉರ್ವಾ ಚರ್ಚ್ ಶಾಲೆಯಲ್ಲಿ ನನ್ನ ತಂದೆಯ ವಿದ್ಯಾರ್ಥಿಗಳಾಗಿದ್ದವರು. ಇವರಲ್ಲಿ ಕೊಂಕಣಿ ನಾಟಕಕಾರರು, ಕಲಾವಿದರು ಇದ್ದರೆನ್ನುವುದು ನನ್ನ ನೆನಪು. ಅಂತಹವರಲ್ಲಿ ಒಂದು ಹೆಸರು ಸಿಪ್ರಿಯನ್ ಎನ್ನುವವರದ್ದು. ಹಾಗೆಯೇ ಅನೇಕ ಕ್ರಿಶ್ಚಿಯನ್ ಹುಡುಗಿಯರು ಲೇಡಿಹಿಲ್ ಶಾಲೆಯಲ್ಲಿ ಅಪ್ಪನ ಶಿಷ್ಯೆಯರು. ಈ ಕಾರಣದಿಂದಲೂ ಊರು ತುಂಬಾ ನಮ್ಮ ಪರಿಚಯ. ಹಾಗೆಯೇ ಅವರಿಂದ ನಮಗೆ ಪ್ರೀತಿ ವಿಶ್ವಾಸ ಗೌರವಗಳು. ಅಧ್ಯಾಪಕರೆಂದರೆ ಸಮಾಜದಲ್ಲಿ ತುಂಬಾ ಗೌರವದ ಸ್ಥಾನ ಇತ್ತು ಎನ್ನುವುದನ್ನು ನನ್ನ ಅಪ್ಪನಿಂದ ತಿಳಿದಿದ್ದೇನೆ. ಆ ಕಾರಣದಿಂದಲೇ ನನಗೆ ಅಧ್ಯಾಪಕ ವೃತ್ತಿ ಘನತೆಯ ವೃತ್ತಿಯಾಗಿ ನನ್ನ ಆಯ್ಕೆಯೂ ಅದೇ ಆಗಬೇಕೆಂಬ ಆಸೆ ಇತ್ತು. ದೇರೆಬೈಲು, ಪರಪಾದೆಗಳಲ್ಲಿದ್ದ ಕ್ರಿಶ್ಚಿಯನ್ ಮನೆಗಳ ಹಿರಿಯ ಹೆಂಗಸರು ಮಲ್ಲಿಗೆ, ಅಬ್ಬಲಿಗೆ, ಜಾಜಿ, ಸುಗಂಧಿ ಹೀಗೆ ಹೂವುಗಳ ಕೃಷಿ ಮಾಡುತ್ತಿದ್ದರು. ನನ್ನ ಮನೆಯ ಹತ್ತಿರವಿದ್ದ ಶಿಕ್ಷಕಿಯರೂ ಮಲ್ಲಿಗೆ ಕೃಷಿಯನ್ನು ಉಪವೃತ್ತಿಯನ್ನಾಗಿ ಮಾಡಿಕೊಂಡಿದ್ದರು. ಈ ಕಾರಣದಿಂದ ದೇರೆಬೈಲಿನಲ್ಲಿಯೂ ಮಲ್ಲಿಗೆಯ ಕಂಪು ಹರಡಿತ್ತು. ಇವರೆಲ್ಲರೂ ಹೂ ಕಟ್ಟಿ ಪರಪಾದೆಯ ಬಾಯಮ್ಮನವರಲ್ಲಿ, ದೇರೆಬೈಲು ನೆಕ್ಕಿಲಗುಡ್ಡೆಯ ಬಾಯಮ್ಮನವರಲ್ಲಿ ಮಾರಾಟಕ್ಕೆ ಕೊಡುತ್ತಿದ್ದರು. ಹಾಗೆಯೇ ಕೆಳ ಕೊಂಚಾಡಿಯ ಆಸುಪಾಸಿನಲ್ಲಿ ಕೊಂಕಣಿ ಮಾತನಾಡುವ ಹಿಂದೂ ಸಮಾಜದ ಹೂವಿನ ಕೃಷಿ ಹಾಗೂ ಮಾರಾಟ ಮಾಡುವ ಕುಡುಬಿ ಜಾತಿಯವರು ಇದ್ದರು ಎನ್ನುವುದನ್ನು ಕೇಳಿದ್ದು ಮಾತ್ರವಲ್ಲ, ನೋಡಿದ್ದೇನೆ. ಇಬ್ಬರು ಹೂವಾಡಗಿತ್ತಿಯರು ಸೆಂಟ್ರಲ್ ಮಾಕೆರ್ಟ್‌ನಲ್ಲಿ ಹೂ ಮಾರಾಟ ಮಾಡುತ್ತಿದ್ದರು. ನನ್ನ ರಾತ್ರಿಯ ಬಸ್ಸು ಪ್ರಯಾಣದಲ್ಲಿ ಅವರೂ ಇರುತ್ತಿದ್ದರು. ಹೀಗೆ ದೇರೆಬೈಲು, ನೆಕ್ಕಿಲಗುಡ್ಡೆ, ಕೆಳ ಕೊಂಚಾಡಿ, ಪರಪಾದೆ, ಗೊಲ್ಲಚ್ಚಿಲ್‌ಗಳಲ್ಲಿ ಮಲ್ಲಿಗೆಯ ತೋಟಗಳಿದ್ದರೂ, ದೇರೆಬೈಲಿನಲ್ಲಿ ಮಲ್ಲಿಗೆಯ ಕಂಪಿಗಿಂತ ಶೇಂದಿ, ಶರಾಬುಗಳ ವಾಸನೆಯೇ ಹೆಚ್ಚಾಗಿತ್ತು ಎನ್ನುವುದು ಅಂದಿನ ವಾಸ್ತವ.
ನನ್ನ ಎರಡು ವರ್ಷದ ಡಿಪ್ಲೊಮಾ ಕೋರ್ಸ್ ಮುಗಿದು, ಪರೀಕ್ಷೆಯೂ ಮುಗಿಯಿತು. ಇನ್ನು ಎಲ್ಲಾದರೂ ಅಧ್ಯಾಪಿಕೆ ವೃತ್ತಿಗೆ ಸೇರಬೇಕು ಎಂದು ಯೋಚಿಸುತ್ತಿದ್ದಂತೆಯೇ ಕನ್ನಡ ಅಧ್ಯಾಪಿಕೆ ಬೇಕಾಗಿದ್ದಾರೆ ಎನ್ನುವ ಜಾಹೀರಾತು ನೋಡಿದ್ದೆ. ಅದು ಬಜಪೆ ಚರ್ಚ್ ಹೈಸ್ಕೂಲಿನದ್ದಾಗಿತ್ತು. ಅರ್ಜಿ ಬರೆದು ಅಂಚೆಗೆ ಹಾಕಿದ್ದೂ ಆಯಿತು. ಜೂನ್ ತಿಂಗಳು ಹತ್ತಿರವಾದರೂ ಪರೀಕ್ಷಾ ಫಲಿತಾಂಶವೂ ಬರಲಿಲ್ಲ. ಅರ್ಜಿಗೆ ಸಂಬಂಧಿಸಿದ ಉತ್ತರವೂ ಇಲ್ಲ. ಎಂ.ಎ. ಮಾಡುವುದಕ್ಕೆ ಬೇಕಾದ ಅರ್ಹತೆ ಒದಗಿದ್ದರೂ ಆರ್ಥಿಕ ಸಾಮರ್ಥ್ಯ ಇಲ್ಲದೆ ಇರುವುದರಿಂದ ಒಂದು ವರ್ಷವಾದರೂ ಕೆಲಸ ಮಾಡಿ ಎಂ.ಎ. ಮಾಡಬೇಕೆಂಬುದು ನನ್ನ ಕನಸಾಗಿತ್ತು. ಈ ಯೋಚನೆಯಲ್ಲಿದ್ದಂತೆಯೇ ಮೇ 30ರಂದು ಒಬ್ಬ ನನಗಿಂತ ನಾಲ್ಕೈದು ವರ್ಷ ದೊಡ್ಡವರಾಗಿರಬಹುದಾದ ಯುವತಿ ಬಂದು ಬಜಪೆ ಶಾಲೆಗೆ ಜೂನ್ 1ರಂದು ಕೆಲಸಕ್ಕೆ ಸೇರಲು ಸಂದರ್ಶನಕ್ಕಾಗಿ ಕರೆದಿದ್ದಾರೆ ಎಂದು ತಿಳಿಸಿದರು. ನನ್ನ ವಿಳಾಸವನ್ನು ಹಿಡಿದುಕೊಂಡು ಹುಡುಕಿಕೊಂಡು ಬಂದ ಯುವತಿಯನ್ನು ಕಂಡು ಆಶ್ಚರ್ಯವೂ ಸಂತೋಷವೂ ಆಯಿತು. ಆಕೆ ಬಜಪೆ ಚರ್ಚ್‌ನ ಹೈಸ್ಕೂಲಿನಲ್ಲಿ ಶಿಕ್ಷಕಿಯಾಗಿದ್ದರು. ಜೂನ್ 1ರಂದು ಅಪ್ಪನೊಂದಿಗೆ ಬಜಪೆಗೆ ಪ್ರಯಾಣ. ಆ ದಿಕ್ಕಿನಲ್ಲಿ ಕಾವೂರಿನಿಂದಾಚೆಗೆ ಹೋಗಿರಲಿಲ್ಲ. ಮರವೂರು ಸೇತುವೆ, ಫಲ್ಗುಣೀ ನದಿ ಎಲ್ಲವೂ ಹೊಸತೇ. ಶಾಲೆಗೆ ಹೋಗಿ ಫಾದರ್‌ರವರನ್ನು ಭೇಟಿ ಮಾಡಿದ್ದಾಯಿತು.
1969ನೆ ಇಸವಿ ಜೂನ್ 1. ಫಾದರ್‌ರವರು ನನ್ನನ್ನು ನೋಡಿದವರೇ ಈ ಸಣ್ಣ ಹಕ್ಕಿಯನ್ನು ನಮ್ಮ ಗಿಡುಗನಂತಹ ಹುಡುಗರ ಮುಂದೆ ಹೇಗೆ ನಿಲ್ಲಿಸುವುದು ಎಂದರು. ನನಗೆ ಬಹಳ ನಿರಾಶೆಯಾಯಿತು. ಜೊತೆಗೆ ನನ್ನ ಪರೀಕ್ಷಾ ಫಲಿತಾಂಶವೂ ಬಂದಿರಲಿಲ್ಲ. ಆಗಿನ ದಿನಗಳಲ್ಲಿ ಎಲ್ಲಾ ಹೈಸ್ಕೂಲ್‌ಗಳಲ್ಲಿ ಕನ್ನಡ ಪಂಡಿತರೆಂಬ ಅಧ್ಯಾಪಕ ಸ್ಥಾನ ಇತ್ತು. ಈ ಸ್ಥಾನದ ಅರ್ಹತೆ ಎಂದರೆ ಅವರೆಲ್ಲ ಮದ್ರಾಸು ಸರಕಾರದ ಕನ್ನಡ ವಿದ್ವಾನ್ ಪರೀಕ್ಷೆ ಪಾಸಾಗಬೇಕಿತ್ತು. ಇವರೆಲ್ಲಾ ಸ್ವಾತಂತ್ರಪೂರ್ವದಲ್ಲಿ ಪದವಿ ಪಡೆದ ಹಿರಿಯರು. ನನ್ನ ಅಪ್ಪನಿಗೂ ಅದೇ ಅರ್ಹತೆಯಿಂದ ಲೇಡಿಹಿಲ್ ಹೈಸ್ಕೂಲಲ್ಲಿ ಕನ್ನಡ ಪಂಡಿತರಾಗುವ ಅವಕಾಶ ಸಿಕ್ಕಿತ್ತು. ಮುಂದೆ ಸ್ವಾತಂತ್ರ ಪಡೆದು ಕರ್ನಾಟಕಕ್ಕೆ ನಮ್ಮ ಜಿಲ್ಲೆ ಸೇರಿದ ಬಳಿಕ ನಿವೃತ್ತರಾದ ಕನ್ನಡ ಪಂಡಿತರ ಸ್ಥಾನಕ್ಕೆ ತುಂಬಲು ಅರ್ಹ ಅಭ್ಯರ್ಥಿಗಳು ಸಿಗುತ್ತಿರಲಿಲ್ಲ. ಕನ್ನಡ ಮೇಜರ್ ವಿಷಯವಾಗಿ ಅದುವರೆಗೆ ಕಾಲೇಜುಗಳಲ್ಲಿಯೂ ಇರಲಿಲ್ಲ. ಆದರೆ ಧಾರವಾಡದ ಕರ್ನಾಟಕ ವಿವಿಯಿಂದ ದೂರ ಶಿಕ್ಷಣದಿಂದ ಎಂ.ಎ. ಪದವಿ ಪಡೆದವರು ಅಲ್ಲಿ ಇಲ್ಲಿ ಇದ್ದರೂ ಅವರು ಕಾಲೇಜಿನ ಉಪನ್ಯಾಸಕ ವೃತ್ತಿಗೆ ಆಶಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಮೈಸೂರು ವಿವಿಯಿಂದ ಕನ್ನಡ ಸ್ನಾತಕೋತ್ತರ ಡಿಪ್ಲೊಮಾ ಪದವಿಗೆ ಹೈಸ್ಕೂಲು ಅಧ್ಯಾಪಕರಾಗುವ (ತರಬೇತಿಯಿಲ್ಲದೆ) ಅರ್ಹತೆಯನ್ನು ನೀಡಿತ್ತು.
ನನ್ನನ್ನು ನೋಡಿದ ಫಾದರ್‌ರವರಿಗೆ ನನಗೆ ಕೆಲಸ ಕೊಡಿಸಲೇಬೇಕೆಂಬ ಹಟ ಎನ್ನುವಂತೆ ನಮ್ಮಿಬ್ಬರನ್ನೂ ಹತ್ತರದಲ್ಲೇ ಇದ್ದ ‘‘ಹೋಲಿ ಫ್ಯಾಮಿಲಿ ಗರ್ಲ್ಸ್ ಹೈಸ್ಕೂಲ್’’ಗೆ ಕರೆದೊಯ್ದರು. ಅದು ಬೆಥೆನಿ ಸಂಸ್ಥೆಯ ಸೋದರಿಯರಿಗೆ ಸೇರಿದ್ದ ಶಾಲೆ. ಆಗ ಅಲ್ಲಿ ಸಿಸ್ಟರ್ ರೋಸ್ ಎನ್ನುವವರು ಮುಖ್ಯೋಪಾಧ್ಯಾಯಿನಿ ಆಗಿದ್ದರು. ಅವರ ಶಾಲೆಯಲ್ಲಿಯೂ ಕನ್ನಡ ಅಧ್ಯಾಪಕರ ಹುದ್ದೆಯನ್ನು ಕೆಲ ದಿನಗಳ ಹಿಂದೆಯಷ್ಟೇ ತುಂಬಲಾಗಿತ್ತು. ಫಾದರ್‌ರವರು ಮುಖ್ಯೋಪಾಧ್ಯಾಯಿನಿಯವರಲ್ಲಿ ಆ ಅಧ್ಯಾಪಕರನ್ನು ತನ್ನ ಶಾಲೆಗೆ ವರ್ಗಾವಣೆ ಮಾಡಿಕೊಂಡು ಅವರ ಸ್ಥಾನಕ್ಕೆ ನನ್ನನ್ನು ತೆಗೆದುಕೊಳ್ಳುವಂತೆ ಒಪ್ಪಿಸಿದರು. ಆಡಳಿತಾತ್ಮಕವಾದ ಇಲಾಖೆಯ ಒಪ್ಪಿಗೆಯನ್ನು ತಾನು ಮಾಡಿಸಿಕೊಡುವುದಾಗಿಯೂ ತಿಳಿಸಿದರು. ಅವರ ಮಾತಿಗೆ ಒಪ್ಪಿದ ಮುಖ್ಯೋಪಾಧ್ಯಾಯಿನಿ ನನ್ನನ್ನು ಮರುದಿನದಿಂದ ಕೆಲಸಕ್ಕೆ ಹಾಜರಾಗುವಂತೆ ಆದೇಶಿಸಿದರು. ನನ್ನ ಪರೀಕ್ಷಾ ಫಲಿತಾಂಶ ಬಂದಿಲ್ಲ ಎಂದಾಗ ಫಾದರ್‌ರವರು ‘‘ನಿಮ್ಮ ಮಗಳು ಫಸ್ಟ್‌ಕ್ಲಾಸ್ ಮಾತ್ರ ಅಲ್ಲ, ರ್ಯಾಂಕೇ ಬರುತ್ತಾಳೆ’’ ಎಂದು ಬಿಟ್ಟರು.
ಅವರಿಗೆ ಮುಖಲಕ್ಷಣ ಗೊತ್ತಿತ್ತೋ ಏನೋ? ನನಗೆ ರ್ಯಾಂಕಿನ ಬಗ್ಗೆ ತಿಳುವಳಿಕೆಯೇ ಇರಲಿಲ್ಲ. ಮುಂದಿನ ವಾರದೊಳಗೆ ಪತ್ರಿಕೆಯಲ್ಲಿ ನಮ್ಮ ಫಲಿತಾಂಶದೊಂದಿಗೆ ನನಗೆ ಮೂರನೇ ರ್ಯಾಂಕ್ ಬಂದ ಸುದ್ದಿ ಇತ್ತು. ನಾನು ಏಳೂವರೆ ಗಂಟೆಗೆ ಮನೆ ಬಿಡಬೇಕಾಗಿದ್ದುದರಿಂದ ಅಂದು ಪೇಪರ್ ಓದಿರಲಿಲ್ಲ. ಆದರೆ ನಾನು ಬಜಪೆಯಲ್ಲಿ ಬಸ್ಸು ಇಳಿದು ಶಾಲೆಗೆ ಹೋಗಬೇಕಾದರೆ ನನಗೆ ಅಭಿನಂದನೆ ಹೇಳುವುದಕ್ಕೆ ಈಗಾಗಲೇ ಪರಿಚಿತರಾಗಿದ್ದವರು ಕಾದು ನಿಂತದನ್ನು ನೋಡಿದರೆ ನನಗೇ ಆಶ್ಚರ್ಯ ಹಾಗೂ ನಾನು ಭಾವಿಸಲಾಗದಷ್ಟು ಸಂತೋಷ. ಶಾಲೆಯ ಮುಖ್ಯೋಪಾಧ್ಯಾಯಿನಿ, ಸಹೋದ್ಯೋಗಿಗಳು ಹಾಗೂ ಒಂದೇ ವಾರದ ಆ ವಿದ್ಯಾರ್ಥಿಗಳು ನನ್ನಲ್ಲಿ ತೋರಿದ ಅಭಿಮಾನ, ಗೌರವ ಹಾಗೂ ಹಂಚಿಕೊಂಡ ಸಂತಸ ನಾನು ಆ ಹಿಂದೆ ಪಡೆದಿರಲಿಲ್ಲ. ಮುಂದೆಯೂ ಪಡೆಯಲಿಲ್ಲ ಎಂದರೆ ಉತ್ಪ್ರೇಕ್ಷೆಯಲ್ಲ. ಫಾದರ್ ಸ್ವತಃ ಬಂದು ನನಗೆ ಅಭಿನಂದನೆ ಸಲ್ಲಿಸಿದರು. ಈಗ ಹೇಳಿ ಬಜಪೆಯೂ ಕೂಡಾ ನನ್ನವರು ಇರುವ ನನ್ನೂರೇ ಆಯಿತಲ್ಲಾ.