ನಾನು ಅದೃಷ್ಟಶಾಲಿ: ದಿಲ್ಲಿ ಸರಣಿ ಸ್ಫೋಟ ಪ್ರಕರಣದಲ್ಲಿ ಅನ್ಯಾಯವಾಗಿ 12 ವರ್ಷ ಜೈಲಿನಲ್ಲಿ ಕಳೆದ ರಫೀಕ್ ಶಾ ಉದ್ಗಾರ

Update: 2017-02-17 14:42 GMT

ಹೊಸದಿಲ್ಲಿ,ಫೆ.17: ನ್ಯಾಯ ಇನ್ನೂ ಉಳಿದುಕೊಂಡಿದೆ: ಇವು 2005ರ ದಿಲ್ಲಿ ಸರಣಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ 12 ವರ್ಷಗಳ ಕಾಲ ಜೈಲಿನಲ್ಲಿ ಕೊಳೆತು ಗುರುವಾರ ನ್ಯಾಯಾಲಯದಿಂದ ಖುಲಾಸೆಗೊಂಡ ಬಳಿಕ ಕಾಶ್ಮೀರದ ಶ್ರೀನಗರ ನಿವಾಸಿ ಮೊಹಮ್ಮದ್ ರಫೀಕ್ ಶಾ ನ್ಯಾಯಾಧೀಶರೆದುರು ಉಸುರಿದ್ದ ಮೂರೇ ಮೂರು ಶಬ್ದಗಳು.

ಸಾಕ್ಷಾಧಾರಗಳ ಕೊರತೆಯಿಂದ ಪ್ರಕರಣದಿಂದ ಖುಲಾಸೆಗೊಂಡಿರುವ ಇಬ್ಬರು ಆರೋಪಿಗಳಲ್ಲಿ ಶಾ ಕೂಡ ಒಬ್ಬ. ಮೂರನೇ ಆರೋಪಿ ತಾರಿಕ್ ಅಹಮದ್ ದಾರ್‌ನನ್ನು ತಪಿತಸ್ಥನೆಂದು ನ್ಯಾಯಾಲಯವು ಘೊಷಿಸಿದೆ. ಅದು ಆತ ಸರಣಿ ಸ್ಫೋಟ ಪ್ರಕರಣದಲ್ಲಿ ಭಾಗಿಯಾಗಿದ್ದ ಎನ್ನುವುದಕ್ಕಲ್ಲ.....ನಿಷೇಧಿತ ಭಯೋತ್ಪಾದಕ ಗುಂಪಿನೊಂದಿಗೆ ನಂಟನ್ನು ಹೊಂದಿದ್ದಕ್ಕಾಗಿ.

ಈ ಮೂವರ ವಿರುದ್ಧ ದಿಲ್ಲಿ ಪೊಲೀಸರು 2008ರಲ್ಲಿ ರಾಷ್ಟ್ರದ ವಿರುದ್ಧ ಯುದ್ಧ, ಒಳಸಂಚು, ಶಸ್ತ್ರಾಸ್ತ್ರ ಸಂಗ್ರಹ, ಕೊಲೆ ಮತ್ತು ಕೊಲೆ ಯತ್ನ ಇತ್ಯಾದಿಗಳ ಆರೋಪ ಪಟ್ಟಿಯನ್ನು ಸಲ್ಲಿಸಿದ್ದರು.

 ಪ್ರಾಸಿಕ್ಯೂಷನ್ ಪರ 325 ಸಾಕ್ಷಿಗಳಿದ್ದರು. ಪ್ರಕರಣದ ವಿಚಾರಣೆ ಸುದೀರ್ಘ ಸಮಯ ತೆಗೆದುಕೊಳ್ಳಲಿದೆ ಎನ್ನುವುದು ಅಂದೇ ತನಗೆ ಗೊತ್ತಾಗಿತ್ತು, ಆದರೆ ತಾನು ಬಿಡುಗಡೆಗೊಳ್ಳುತ್ತೇನೆ ಎನ್ನುವುದು ತನಗೆ ಮನದಟ್ಟಾಗಿತ್ತು ಎಂದು ಆಂಗ್ಲ ಸುದ್ದಿವಾಹಿನಿಯೊಂದಿಗೆ ಮಾತನಾಡಿದ ಶಾ ಹೇಳಿದ. ಆತ ಜೈಲಿನಲ್ಲಿದ್ದಾಗ ಧನಾತ್ಮಕವಾಗಿರಲು ಕುರ್ ಆನ್ ಪಠಣ, ಬ್ಯಾಡ್ಮಿಂಟನ್ ಆಟ ಮತ್ತು ಓದುವಿಕೆಯಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದ.

ಸರಣಿ ಸ್ಫೋಟ ಪ್ರಕರಣದ ನಿಜವಾದ ತಪ್ಪಿತಸ್ಥರನ್ನು ಬಂಧಿಸಲೇಬೇಕು. ನನ್ನಂತೆ ಪ್ರಕರಣದ ಸಂತ್ರಸ್ತರಿಗೂ ನ್ಯಾಯ ಸಿಗಬೇಕು ಎಂದು ಶಾ ಹೇಳಿದ.

ಬಂಧನದ ಸಂದರ್ಭ ಶಾ ಕಾಶ್ಮೀರ ವಿವಿಯಲ್ಲಿ ಇಸ್ಲಾಮಿಕ್ ಅಧ್ಯಯನದ ಸ್ನಾತಕೋತ್ತರ ವಿದ್ಯಾರ್ಥಿಯಾಗಿದ್ದ. ದಿಲ್ಲಿಯಲ್ಲಿ ಸರಣಿ ಸ್ಫೋಟಗಳು ಸಂಭವಿಸಿದಾಗ ತಾನು ತರಗತಿ ಯಲ್ಲಿದ್ದೆ ಮತ್ತು ಹಾಜರಿ ಪುಸ್ತಕ ಇದಕ್ಕೆ ಸಾಕ್ಷಿಯಾಗಿತ್ತು. ಆದರೆ ಪೊಲೀಸರು ಅದನ್ನು ಕಿವಿಗೇ ಹಾಕಿಕೊಳ್ಳದೆ ಮನೆಯಿಂದ ತನ್ನನ್ನು ಎಳೆದೊಯ್ದಿದ್ದರು ಎಂದ ಆತ, ತಾನು ಚಿಕ್ಕಮಗುವಾಗಿದ್ದಾಗ ಒಮ್ಮೆ ಮಾತ್ರ ದಿಲ್ಲಿಗೆ ಭೇಟಿ ನೀಡಿದ್ದೆ ಮತ್ತು ಜೈಲಿಗೆ ಸೇರುವ ಮುನ್ನ ತನ್ನ ಸಹ ಆರೋಪಿಯ ಪರಿಚಯವೇ ತನಗಿರಲಿಲ್ಲ ಎಂದು ಹೇಳಿದ.

 ತಾವು ಮೊದಲು ಮನುಷ್ಯರು, ಬಳಿಕ ಪೊಲೀಸರು ಎನ್ನುವುದನ್ನು ಅವರು ಅರ್ಥ ಮಾಡಿಕೊಳ್ಳಬೇಕು ಎಂಬ ಒಂದೇ ಮಾತನ್ನು ಪೊಲೀಸರಿಗೆ ಹೇಳಲು ಬಯಸುತ್ತೇನೆ. ಅವರು ಹೆಚ್ಚು ಮಾನವೀಯವಾಗಿ ವರ್ತಿಸಬೇಕು ಎಂದು ಶಾ ನುಡಿದ.

ಜೈಲಿನಲ್ಲಿದ್ದೇ ಸ್ನಾತಕೋತ್ತರ ಪದವಿಯನ್ನು ಮುಗಿಸಿರುವ ಶಾ, ಭಯೋತ್ಪಾದನೆ ಆರೋಪದಲ್ಲಿ ತನ್ನಂತೆ ಜೈಲಿನಲ್ಲಿ ಕೊಳೆಯುತ್ತಿರುವ ಅಮಾಯಕ ಹುಡುಗರಿಗಾಗಿ ಕೆಲಸ ಮಾಡಲು ಬಯಸಿದ್ದೇನೆ ಎಂದು ಹೇಳಿದ. ತಾನು ನಿಜಕ್ಕೂ ಅದೃಷ್ಟಶಾಲಿ,ಜೈಲಿನಿಂದ ಮುಕ್ತನಾದೆ ಎಂದು ಆತ ನುಡಿದ.

ಸದ್ಯಕ್ಕೆ ಹೆತ್ತವರ ಜೊತೆ ಹೆಚ್ಚಿನ ಸಮಯವನ್ನು ಕಳೆಯುವುದು ಶಾ ಬಯಕೆ. ತಾನು ಅವರ ಸೇವೆ ಮಾಡಬೇಕಾಗಿದ್ದ ಕಾಲದಲ್ಲಿ ಅವರು ತನಗಾಗಿ ನ್ಯಾಯಾಲಯಗಳನ್ನು ಸುತ್ತಬೇಕಾಯಿತು ಎಂದು ನೋವಿನಿಂದ ಆತ ನುಡಿದ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News