ಉ.ಪ್ರ.ಸಚಿವ ಪ್ರಜಾಪತಿ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಲು ಸುಪ್ರೀಂ ಕೋರ್ಟ್ ಆದೇಶ
ಹೊಸದಿಲ್ಲಿ,ಫೆ.17: ಮಹಿಳೆಯೋರ್ವಳ ಮೇಲೆ ಅತ್ಯಾಚಾರ ನಡೆಸಿದ ಮತ್ತು ಆಕೆಯ ಮಗಳ ಮೇಲೂ ಅತ್ಯಾಚಾರವೆಸಗಲು ಪ್ರಯತ್ನಿಸಿದ ಆರೋಪದಲ್ಲಿ ಉತ್ತರ ಪ್ರದೇಶದ ಸಚಿವ ಹಾಗೂ ಎಸ್‌ಪಿ ನಾಯಕ ಗಾಯತ್ರಿ ಪ್ರಜಾಪತಿ ವಿರುದ್ಧ ಕ್ರಿಮಿನಲ್ ಪ್ರಕರಣವನ್ನು ದಾಖಲಿಸುವಂತೆ ಸರ್ವೋಚ್ಚ ನ್ಯಾಯಾಲಯವು ಶುಕ್ರವಾರ ರಾಜ್ಯ ಪೊಲೀಸರಿಗೆ ಆದೇಶಿಸಿದೆ. ಎಂಟು ವಾರಗಳಲ್ಲಿ ತನಿಖೆಯನ್ನು ಪೂರ್ಣಗೊಳಿಸಿ ಕ್ರಮಾನುಷ್ಠಾನ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ತನಗೆ ಸಲ್ಲಿಸುವಂತೆಯೂ ಅದು ನಿರ್ದೇಶ ನೀಡಿದೆ.
2014,ಅಕ್ಟೋಬರ್-2016,ಜುಲೈ ನಡುವೆ ಪ್ರಜಾಪತಿ ತನ್ನ ಮೇಲೇ ಪದೇಪದೇ ಅತ್ಯಾಚಾರ ನಡೆಸಿದ್ದರು ಮತ್ತು ತನ್ನ ಅಪ್ರಾಪ್ತ ವಯಸ್ಕ ಮಗಳ ಮೇಲೂ ಅತ್ಯಾಚಾರಕ್ಕೆ ಯತ್ನಿಸಿದ್ದರು ಎಂದು ದೂರಿ ಚಿತ್ರಕೂಟದ ಮಹಿಳೆ ನ್ಯಾಯಾಲಯದ ಮೆಟ್ಟಿಲನ್ನೇರಿದ್ದಾಳೆ.
2016ರಲ್ಲಿ ಯಾದವ ಕುಟುಂಬ ಕಲಹದ ಸಂದರ್ಭ ಮುಖ್ಯಮಂತ್ರಿ ಅಖಿಲೇಶ ಯಾದವ ಅವರು ಪ್ರಜಾಪತಿಯನ್ನು ಸಚಿವ ಸ್ಥಾನದಿಂದ ವಜಾಗೊಳಿಸಿದ್ದರಾದರೂ, ಬಳಿಕ ಅವರನ್ನು ಮತ್ತೆ ಸಚಿವರನ್ನಾಗಿ ನೇಮಕ ಮಾಡಲಾಗಿತ್ತು.
ಸಂತ್ರಸ್ತ ಮಹಿಳೆ ಉತ್ತರ ಪ್ರದೇಶ ಡಿಜಿಪಿಗೆ ದೂರು ಸಲ್ಲಿಸಿದ್ದಳಾದರೂ ಪೊಲೀಸರು ಯಾವುದೇ ಕ್ರಮವನ್ನು ಕೈಗೊಂಡಿಲ್ಲ ಎನ್ನುವುದನ್ನು ಆಕೆಯ ಪರ ವಕೀಲ ಮೆಹಮೂದ ಪ್ರಾಚಾ ಅವರು ನ್ಯಾಯಾಲಯದ ಗಮನಕ್ಕೆ ತಂದಿದ್ದರು.