ತನ್ನ ಹರಕೆಗಳನ್ನು ತೀರಿಸಲು ಸರಕಾರಿ ಬೊಕ್ಕಸವನ್ನು ಖಾಲಿ ಮಾಡುತ್ತಿರುವ ತೆಲಂಗಾಣ ಮುಖ್ಯಮಂತ್ರಿ !
ಹೈದರಾಬಾದ್,ಫೆ.21: ಪ್ರತ್ಯೇಕ ತೆಲಂಗಾಣ ರಾಜ್ಯ ಹೋರಾಟದ ಸಂದರ್ಭದಲ್ಲಿ ತಾನು ಹೇಳಿಕೊಂಡಿದ್ದ ಹರಕೆಯನ್ನು ತೀರಿಸಲು ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಅವರು ಬುಧವಾರ ತನ್ನ ಕುಟುಂಬ ಸದಸ್ಯರು ಮತ್ತು ಸಂಪುಟ ಸಚಿವರ ಸಹಿತ ತಿರುಪತಿಯ ಬಾಲಾಜಿ ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ. ಅವರ ಈ ಭೇಟಿ ರಾಜ್ಯದ ತೆರಿಗೆದಾತರ 5.6 ಕೋ.ರೂ.ಗಳನ್ನು ನುಂಗಿ ನೀರು ಕುಡಿಯಲಿದೆ. ತನ್ನ ಪ್ರತ್ಯೇಕ ತೆಲಂಗಾಣ ಹೋರಾಟದ ಯಶಸ್ಸಿಗಾಗಿ ರಾವ್ ತೆಲಂಗಾಣ ಮತ್ತು ಆಂಧ್ರ ಪ್ರದೇಶದ ಹಲವಾರು ದೇವರಿಗೆ ಹರಕೆಗಳನ್ನು ಹೇಳಿಕೊಂಡಿದ್ದರು.
ರಾವ್ ಅವರು ಬಾಲಾಜಿಗೆ 11 ಕೆ.ಜಿ.ತೂಕದ ಚಿನ್ನದ ಕಿರೀಟ ಮತ್ತು ಪದ್ಮಾವತಿಗೆ ಚಿನ್ನದ ಮೂಗುತಿಯನ್ನು ಸಮರ್ಪಿಸಲಿದ್ದಾರೆ. ವಾರಾಂತ್ಯದಲ್ಲಿ ಕರವಿಯ ಶ್ರೀವೀರಭದ್ರ ಸ್ವಾಮಿಗೆ ಶುದ್ಧ ಚಿನ್ನದ ಮೀಸೆಯನ್ನು ಅರ್ಪಿಸಲಿದ್ದಾರೆ.
ರಾವ್ ಮಂಗಳವಾರ ಸಂಜೆ ತನ್ನ ಪರಿವಾರದೊಂದಿಗೆ ವಿಶೇಷ ವಿಮಾನದಲ್ಲಿ ತಿರುಪತಿ-ತಿರುಮಲಕ್ಕೆ ಪ್ರಯಾಣಿಸಲಿದ್ದಾರೆ. ತೆಲಂಗಾಣ ರಾಜ್ಯವು 2014ರಲ್ಲಿ ರಚನೆಯಾಗಿದ್ದು, ಹರಕೆಗಳು ರಾವ್ ಅವರ ವೈಯಕ್ತಿಕವಾಗಿದ್ದರೂ ವಿವಿಧ ದೇವಸ್ಥಾನಗಳಿಗೆ ಈ ಹರಕೆಗಳ ಋಣವನ್ನು ರಾಜ್ಯ ಸರಕಾರವೇ ತೀರಿಸುತ್ತಿದೆ. ಆಭರಣಗಳ ತಯಾರಿಕೆಯ ಉಸ್ತುವಾರಿಗಾಗಿಯೇ ಮೂವರು ಸದಸ್ಯರ ಸಮಿತಿ ಯೊಂದನ್ನು ಸರಕಾರವು ರಚಿಸಿದೆ.
ಕಳೆದ ವರ್ಷದ ಅಕ್ಟೋಬರ್‌ನಲ್ಲಿ ವಾರಂಗಲ್‌ನ ಭದ್ರಕಾಳಿ ದೇವಸ್ಥಾನಕ್ಕೆ 3.5 ಕೋ.ರೂ.ವೌಲ್ಯದ, ಸುಮಾರು 12 ಕೆ.ಜಿ.ತೂಕದ ಚಿನ್ನದ ಕಿರೀಟವನ್ನು ರಾವ್ ಅರ್ಪಿಸಿದ್ದರು. ತೆಲಂಗಾಣ ಸರಕಾರವು ಕಿರೀಟದ ತಯಾರಿಕೆ ಹೊಣೆಯನ್ನು ಹೈದರಾಬಾದ್‌ನ ಪ್ರತಿಷ್ಠಿತ ಜ್ಯುವೆಲರ್‌ಗೆ ಒಪ್ಪಿಸಿತ್ತು.
ಇದಕ್ಕೂ ಮುನ್ನ ತಿರುಮಲದ ಶ್ರೀವೆಂಕಟೇಶ್ವರ ದೇವರಿಗೆ ಚಿನ್ನದ ಕಿರೀಟ ಮತ್ತು ನೆಕ್ಲೇಸ್ ಹಾಗೂ ವಿಜಯವಾಡಾದ ಕನಕದುರ್ಗಾ ದೇವಿಗೆ ಚಿನ್ನದ ಮೂಗುತಿಯನ್ನು ಒಪ್ಪಿಸಲಾಗಿತ್ತು.
2015, ಡಿಸೆಂಬರ್‌ನಲ್ಲಿ ರಾವ್ ಅವರ ಶ್ರೇಯೋಭಿವೃದ್ಧಿಗಾಗಿ ಧಾರ್ಮಿಕ ಕಾರ್ಯಕ್ರಮವೊಂದನ್ನು ನಡೆಸಲಾಗಿದ್ದು, ಇದಕ್ಕಾಗಿ ರಾಜ್ಯ ಸರಕಾರವು ಕೋಟಿಗಟ್ಟಲೆ ರೂ.ವ್ಯಯಿಸಿತ್ತು. ಸರಕಾರಿ ಬೊಕ್ಕಸದ ಹಣವನ್ನು ಸೂರೆ ಮಾಡುತ್ತಿರುವುದಕ್ಕಾಗಿ ಭಾರೀ ಟೀಕೆಗಳು ವ್ಯಕ್ತವಾದ ಬಳಿಕ ರಾವ್, ಈ ಕಾರ್ಯಕ್ರಮಕ್ಕಾಗಿ ತನ್ನ ವೈಯಕ್ತಿಕ ಹಣ ಮತ್ತು ‘ಹಿತೈಷಿಗಳಿಂದ ದೇಣಿಗೆ ಹಣ’ ವನ್ನು ಖರ್ಚು ಮಾಡಲಾಗಿದೆ ಎಂದು ಸಮಜಾಯಿಷಿ ನೀಡಿದ್ದರು.
ಆದರೆ ಟೀಕೆಗಳು ರಾವ್ ಅವರ ದುಂದುವೆಚ್ಚಗಳಿಗೆ ಕಡಿವಾಣ ಹಾಕುವಲ್ಲಿ ವಿಫಲ ವಾಗಿವೆ. ಕಳೆದ ವರ್ಷದ ನವೆಂಬರ್‌ನಲ್ಲಿ ರಾವ್ ಸರಕಾರವು ಹೈದ್ರಾಬಾದ್‌ನ ಹೃದಯಭಾಗದಲ್ಲಿ ಒಂಭತ್ತು ಎಕರೆಗೂ ಹೆಚ್ಚಿನ ವಿಸ್ತೀರ್ಣದ ನಿವೇಶನದಲ್ಲಿ ನಿರ್ಮಿಸಿರುವ ಅರಮನೆಯಂತಹ ಮುಖ್ಯಮಂತ್ರಿ ನಿವಾಸದ ಗೃಹಪ್ರವೇಶ ಮಾಡಿದ್ದಾರೆ. ಈ ಬಂಗಲೆಯಲ್ಲಿ 250 ಜನರಿಗೆ ಆಸನ ವ್ಯವಸ್ಥೆಯಿರುವ ಸಿನಿಮಾ ಮಂದಿರ, ಜೊತೆಗೆ ಆವರಣದಲ್ಲಿ ಹಿರಿಯ ಸರಕಾರಿ ಅಧಿಕಾರಿಗಳಿಗೆ ಮನೆಗಳು ಮತ್ತು ಕೆಲವು ಕಚೇರಿಗಳೂ ಇವೆ.
ವಾಸ್ತುಶಾಸ್ತ್ರಕ್ಕೆ ಅನುಗುಣವಾಗಿ ನಿರ್ಮಾಣಗೊಂಡಿರುವ ಈ ಕಟ್ಟಡಕ್ಕೆ ಮೊದಲು 35 ಕೋ.ರೂ.ವೆಚ್ಚವನ್ನು ಅಂದಾಜಿಸಲಾಗಿತ್ತು. ಆದರೆ ಕಾಮಗಾರಿ ಮುಗಿದಾಗ ಅದು 50 ಕೋ.ರೂ.ಗೆ ತಲುಪಿತ್ತು !
(ದೇವಿ ಪದ್ಮಾವತಿಗೆ ಅರ್ಪಣೆಯಾಗಲಿರುವ ಚಿನ್ನದ ಮೂಗುತಿ)