ಫೆ. 28ರಂದು ಬ್ಯಾಂಕ್ ಮುಷ್ಕರ ?

Update: 2017-02-26 14:16 GMT

   ಹೊಸದಿಲ್ಲಿ, ಫೆ.26: ಬ್ಯಾಂಕಿಂಗ್ ವಲಯದಲ್ಲಿ ಮರುಪಾವತಿಯಾಗದ ಸಾಲಗಳ ಪ್ರಮಾಣವು ವಿಪರೀತವಾಗಿ ಹೆಚ್ಚುತ್ತಿರುವುದಕ್ಕೆ ಉನ್ನತ ಅಧಿಕಾರಿಗಳನ್ನು ಹೊಣೆಯಾಗಿಸುವುದು ಸೇರಿದಂತೆ ತಮ್ಮ ವಿವಿಧ ಬೇಡಿಕೆಗಳ ಈಡೇರಿಗೆ ಆಗ್ರಹಿಸಿ ಬ್ಯಾಂಕ್ ಒಕ್ಕೂಟಗಳ ಸಂಯುಕ್ತ ರಂಗ (ಯುಎಫ್‌ಬಿಯು)ದ ಅಶ್ರಯದ ಬಹುತೇಕ ಬ್ಯಾಂಕ್ ಒಕ್ಕೂಟಗಳು ಮಂಗಳವಾರ ಮುಷ್ಕರದ ಬೆದರಿಕೆಯೊಡ್ಡಿದ್ದು, ಅಂದು ಸಾರ್ವಜನಿಕರಂಗದ ಬ್ಯಾಂಕ್‌ಗಳ ಕಾರ್ಯನಿರ್ವಹಣೆ ಬಾಧಿತವಾಗುವ ಸಾಧ್ಯತೆಯಿದೆ.

 ಮುಷ್ಕರ ನಡೆಯುವ ಸಾಧ್ಯತೆಯ ಬಗ್ಗೆ ಸಾರ್ವಜನಿಕ ರಂಗದ ಬ್ಯಾಂಕ್‌ಗಳಾದ ಎಸ್‌ಬಿಐ, ಪಂಜಾಬ್ ನ್ಯಾಶನಲ್ ಬ್ಯಾಂಕ್ ಹಾಗೂ ಬ್ಯಾಂಕ್ ಆಫ್ ಬರೋಡಾ ಈಗಾಗಲೇ ತಮ್ಮ ಗ್ರಾಹಕರಿಗೆ ಮಾಹಿತಿ ನೀಡಿವೆಯೆಂದು ತಿಳಿದುಬಂದಿದೆ.

   ಯುಎಫ್‌ಬಿಯು 9 ಬ್ಯಾಂಕ್ ಒಕ್ಕೂಟಗಳ ಸಂಘಟನೆಯಾಗಿದೆ. ಆದರೆ ಭಾರತೀಯ ಮಜ್ದೂರ್ ಸಂಘಕ್ಕೆ ನಿಷ್ಠವಾಗಿರುವ ಬ್ಯಾಂಕ್ ನೌಕರರ ರಾಷ್ಟ್ರೀಯ ಒಕ್ಕೂಟ ಹಾಗೂ ಬ್ಯ್ಡಾಂಕ್ ಅಧಿಕಾರಿಗಳ ರಾಷ್ಟ್ರೀಯ ಒಕ್ಕೂಟ ಮಂಗಳವಾರದ ಮುಷ್ಕರಕ್ಕೆ ತಮ್ಮ ಬೆಂಬಲವನ್ನು ಘೋಷಿಸಿಲ್ಲ.

 ಕೇಂದ್ರ ಸರಕಾರದ ಪ್ರಸ್ತಾಪಿತ ಕಾರ್ಮಿಕ ಸುಧಾರಣಾ ನೀತಿ ಹಾಗೂ ಬ್ಯಾಂಕಿಂಗ್ ವಲಯದಲ್ಲಿ ಖಾಯಂ ಉದ್ಯೋಗಗಳನ್ನು ಹೊರಗುತ್ತಿಗೆ ನೀಡುವುದಕ್ಕೆ ವಿರೋಧ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಯುಎಫ್‌ಬಿಯು ಒಕ್ಕೂಟದ ಬ್ಯಾಂಕ್ ನೌಕರರು ಮುಷ್ಕರಕ್ಕಿಳಿಯಲಿದ್ದಾರೆ. ಉದ್ದೇಪೂರ್ವಕವಾಗಿ ಸಾಲ ಮರುಪಾತವಿಸದಿರುವವರ ವಿರುದ್ಧ ಕ್ರಿಮಿನಲ್ ಕ್ರಮ ಕೈಗೊಳ್ಳಬೇಕೆಂಬ ಬೇಡಿಕೆಯನ್ನು ಕೂಡಾ ಸಂಘಟನೆ ಮುಂದಿಟ್ಟಿದೆ.

ನಗದು ಅಮಾನ್ಯತೆ ಪ್ರಕ್ರಿಯೆಗಾಗಿ ಬ್ಯಾಂಕ್‌ಗಳಿಗೆ ತಗಲಿದ ವೆಚ್ಚವನ್ನು ತುಂಬುವಂತೆಯೂ 10 ಲಕ್ಷಕ್ಕೂ ಅಧಿಕ ಬ್ಯಾಂಕ್ ನೌಕರರ ಸದಸ್ಯತ್ವವನ್ನು ಹೊಂದಿರುವ ಯುಎಫ್‌ಬಿಯು ಆಗ್ರಹಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News