ಎಬಿವಿಪಿ ದಾಳಿಮಾಡಿದ ಪ್ರೊಫೆಸರ್‌ಗೆ ಗಂಭೀರ ಗಾಯ
ಹೊಸದಿಲ್ಲಿ,ಫೆ. 27: ದಿಲ್ಲಿ ವಿಶ್ವವಿದ್ಯಾನಿಲಯದ ರಾಂಜಸ್ ಕಾಲೇಜಿನಲ್ಲಿ ಎಬಿವಿಪಿ ದಾಳಿಯಲ್ಲಿ ಗಾಯಗೊಂಡ ಪ್ರೊಫೆಸರ್ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಇಂಗ್ಲಿಷ್ ವಿಭಾಗದ ಪ್ರೊಫೆಸರ್ ಪ್ರಶಾಂತ್ ಚಕ್ರವರ್ತಿ ಎಬಿವಿಪಿ ಕಾರ್ಯಕರ್ತರ ಕ್ರೂರ ಹೊಡೆತಕ್ಕೆ ಸಿಲುಕಿ ಗಂಭೀರಗಾಯಗೊಂಡಿದ್ದರು. ಈಗ ನೋಯ್ಡ ಪೊರ್ಟಿಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ದಾಳಿಯಿಂದ ಅವರಕಿಡ್ನಿಗೆ ಹಾನಿಯಾಗಿದೆ ಎಂದು ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದಾರೆ. ರಾಂಜಾಸ್ ಕಾಲೇಜು ಆಯೋಜಿಸಿದ್ದ ವಿಚಾರಗೋಷ್ಠಿಯಲ್ಲಿ ಭಾಗವಹಿಸುವಂತೆ ಜೆಎನ್‌ಯು ವಿದ್ಯಾರ್ಥಿ ನಾಯಕರಿಗೆ ಆಹ್ವಾನ ನೀಡಿದ್ದನ್ನು ಪ್ರಶ್ನಿಸಿ ಎಬಿವಿಪಿ ದಾಳಿ ನಡೆಸಿತ್ತು. ಇದನ್ನು ಪ್ರತಿಭಟಿಸಿ ಕಳೆದ ಬುಧವಾರ ರಾಂಜಾಸ್ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಪ್ರೊಫೆಸರ್‌ರನ್ನು ಎಬಿವಿಪಿ ಕಾರ್ಯಕರ್ತರು ಹಾಕಿಸ್ಟಿಕ್‌ನಿಂದ ಮಾರಣಾಂತಿಕವಾಗಿ ಥಳಿಸಿದ್ದರು. ಅವರು ಧರಿಸಿದ್ದ ಶಾಲನ್ನು ಕೊರಳಿಗೆ ಸುತ್ತುಹಾಕಿ ಕೆಳಗೆ ಕೆಡವಿ ಹೊಡೆದಿದ್ದಾರೆ. ಐದಕ್ಕೂ ಹೆಚ್ಚು ಮಂದಿ ಎದೆ ಮತ್ತು ಹೊಟ್ಟೆಗೆ ತುಳಿದಿದ್ದಾರೆ.
ಹತ್ತುನಿಮಿಷಗಳ ಕಾಲ ಎಬಿವಿಪಿ ದುಷ್ಕರ್ಮಿಗಳು ದುಷ್ಕೃತ್ಯ ನಡೆಸಿದ್ದಾರೆ. ಇದೇವೇಳೆ ಸಮೀಪದಲ್ಲಿದ್ದ ಪೊಲೀಸರು ಇವೆಲ್ಲವನ್ನೂ ಸುಮ್ಮನೆ ನೋಡುತ್ತಾ ನಿಂತಿದ್ದರು. ಸಹಾಯಕ್ಕೆ ಮೊರೆಯಿಟ್ಟರೂ ಪೊಲೀಸರು ತಿರುಗಿ ನೋಡಲಿಲ್ಲ ಎಂದು ಪ್ರೊಫೆಸರ್ ಚಕ್ರವರ್ತಿ ಹೇಳಿದ್ದಾರೆ. ಅವರ ಸಮೀಪದಲ್ಲಿದ್ದ ವಿದ್ಯಾರ್ಥಿನಿಯರಿಗೂ ಎಬಿವಿಪಿ ಗೂಂಡಾಗಳು ಕ್ರೂರವಾಗಿ ಹೊಡೆದಿದ್ದಾರೆಂದು ಅವರು ತಿಳಿಸಿದ್ದಾರೆಂದು ವರದಿಯಾಗಿದೆ.