ವರ್ಣಭೇದ ವಿರೋಧಿ ಹೋರಾಟಗಾರ ಮಾನವಹಕ್ಕು ವಕೀಲ ಎಸ್ಸಾ ಮೂಸಾ ನಿಧನ

Update: 2017-02-28 12:48 GMT

ಕೇಪ್ ಟೌನ್ (ದಕ್ಷಿಣ ಆಫ್ರಿಕ), ಫೆ. 28: ಪ್ರಸಿದ್ಧ ವರ್ಣಭೇದ ವಿರೋಧಿ ಕಾರ್ಯಕರ್ತ ಹಾಗೂ ಮಾನವಹಕ್ಕುಗಳ ವಕೀಲ ಎಸ್ಸಾ ಮೂಸಾ ನಿಧನರಾಗಿದ್ದಾರೆ. ಅವರಿಗೆ 81 ವರ್ಷ ವಯಸ್ಸಾಗಿತ್ತು.

ದಕ್ಷಿಣ ಆಫ್ರಿಕದ ಡಿಸ್ಟ್ರಿಕ್ಟ್ ಸಿಕ್ಸ್ ಎಂಬ ಪ್ರದೇಶದಿಂದ ಬಂದಿರುವ ಮೂಸಾ, ವರ್ಣಭೇದ ನೀತಿ ವಿರುದ್ಧ ಹೋರಾಡಿದ ಪ್ರಮುಖ ಕಾರ್ಯಕರ್ತರ ಪೈಕಿ ಒಬ್ಬರಾಗಿದ್ದರು.
ಕೇಪ್‌ಟೌನ್‌ನಲ್ಲಿನ ಸ್ವಗೃಹದಲ್ಲಿ ಅವರು ರವಿವಾರ ಬೆಳಗ್ಗೆ ಕೊನೆಯುಸಿರೆಳೆದರು.

ಹಲವಾರು ವರ್ಣಭೇದ ನೀತಿ ವಿರೋಧಿ ಹೋರಾಟಗಾರರ ಪರವಾಗಿ ಅವರು ಕಾನೂನು ಹೋರಾಟವನ್ನು ನಡೆಸಿದರು ಹಾಗೂ ವಿಚಾರಣೆಯಿಲ್ಲದೆ ಬಂಧಿಸಿಡುವುದು ಮುಂತಾದ ಮಾನವಹಕ್ಕು ಉಲ್ಲಂಘನೆಗಳ ವಿರುದ್ಧ ಆಂದೋಲನ ನಡೆಸಿದರು.

ಅದೇ ವೇಳೆ, ಸಂಘಟನೆ ನಿರ್ಮಿಸುವ, ಅಭಿವ್ಯಕ್ತಿ ಮತ್ತು ಓಡಾಟದ ಸ್ವಾತಂತ್ರಕ್ಕಾಗಿ ಶ್ರಮಿಸಿದರು.

ಆಫ್ರಿಕನ್ ನ್ಯಾಶನಲ್ ಕಾಂಗ್ರೆಸ್ (ಎಎನ್‌ಸಿ)ನ ಸಂವಿಧಾನ ಸಮಿತಿಯ ಕಾರ್ಯದರ್ಶಿಯಾಗಿ, ದಕ್ಷಿಣ ಆಫ್ರಿಕದ ಮಾಜಿ ಅಧ್ಯಕ್ಷ ನೆಲ್ಸನ್ ಮಂಡೇಲಾ ನೇತೃತ್ವದ ಎಎನ್‌ಸಿ ಸಂಧಾನ ತಂಡದ ಪ್ರಾಯೋಗಿಕ ಅವಶ್ಯಕತೆಗಳನ್ನು ಪೂರೈಸಿದರು. ಪ್ರಜಾಸತ್ತಾತ್ಮಕ ದಕ್ಷಿಣ ಆಫ್ರಿಕ ನಿರ್ಮಾಣದ ಬಗ್ಗೆ ಸಂಧಾನ ನಡೆಸಲು ಎಎನ್‌ಸಿ ತಂಡವನ್ನು ರಚಿಸಲಾಗಿತ್ತು.

ಅವರನ್ನು ಮಂಡೇಲಾ 1998ರಲ್ಲಿ ದಕ್ಷಿಣ ಆಫ್ರಿಕ ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರಾಗಿ ನೇಮಿಸಿದರು. 2011 ಫೆಬ್ರವರಿ 8ರಂದು ಅವರು ಸಕ್ರಿಯ ಸೇವೆಯಿಂದ ಅಧಿಕೃತವಾಗಿ ನಿವೃತ್ತರಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News