ದಲಿತ ಸಾಹಿತಿ-ಚಿಂತಕ ಕೃಷ್ಣ ಕಿರ್ವಳೆ ಹತ್ಯೆ

Update: 2017-03-03 18:11 GMT

ಕೊಲ್ಲಾಪುರ,ಮಾ.3: ಅಂಬೇಡ್ಕರ ಚಿಂತನೆಯ ಖ್ಯಾತ ಸಾಹಿತಿ ಡಾ.ಕೃಷ್ಣ ಕಿರ್ವಳೆ (62) ಅವರು ಶುಕ್ರವಾರ ಇಲ್ಲಿಯ ರಾಜೇಂದ್ರ ನಗರದ ತನ್ನ ನಿವಾಸದಲ್ಲಿ ನಿಗೂಢ ಸ್ಥಿತಿಯಲ್ಲಿ ಕೊಲೆಯಾಗಿದ್ದು, ಇದು ಮಹಾರಾಷ್ಟ್ರದಾದ್ಯಂತ ಆಘಾತದ ಅಲೆಗಳನ್ನು ಸಷ್ಟಿಸಿದೆ.

ಕೊಲ್ಲಾಪುರದ ಶಿವಾಜಿ ವಿವಿಯಲ್ಲಿ ಮರಾಠಿ ಭಾಷಾ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಕಿರ್ವಳೆ ಅವರ ಶವವು ಎಂಎಚ್‌ಎಡಿಎ ಕಾಲನಿಯಲ್ಲಿರುವ ಅವರ ಬಂಗಲೆಯಲ್ಲಿ ಪತ್ತೆಯಾಗಿದ್ದು, ಚೂರಿಯಿಂದ ಇರಿದ ಗಾಯಗಳ ಗುರುತುಗಳಿವೆ.

ಕ್ಷುಲ್ಲಕ ಕಾರಣದಿಂದ ಈ ಕೊಲೆ ನಡೆದಿರುವಂತೆ ಮೇಲ್ನೋಟಕ್ಕೆ ಕಂಡು ಬರುತ್ತಿದ್ದು, ಇದರ ಹಿಂದೆ ಹಣಕಾಸಿನ ವಿವಾದವಿರುವಂತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೋರ್ವರು ತಿಳಿಸಿದರು. ಆದರೆ ಕೊಲೆಗೆ ನಿಖರ ಕಾರಣ ತನಿಖೆಯ ನಂತರವೇ ತಿಳಿದು ಬರಬೇಕಾಗಿದೆ.

 ಡಾ.ಬಾಬಾಸಾಹೇಬ್ ಅಂಬೇಡ್ಕರ್ ಸಂಶೋಧನಾ ಮತ್ತು ಅಭಿವೃದ್ಧಿ ಕೇಂದ್ರದ ಮುಖ್ಯಸ್ಥರೂ ಅಗಿದ್ದ ಕಿರ್ವಳೆ ಅಂಬೇಡ್ಕರ್ ಪಡಿಯಚ್ಚಿನಂತೆ ರೂಪುಗೊಂಡಿದ್ದ ಪ್ರಖರ ಪ್ರಗತಿಪರ ಚಿಂತಕರಾಗಿದ್ದರು. ಅಂಬೇಡ್ಕರ್ ವಿಚಾರಧಾರೆಯ ಅವರ ಬರಹಗಳು ಮತ್ತು ದಲಿತ ಚಳುವಳಿಯ ಸಾಹಿತ್ಯ ಅಪಾರ ಗೌರವ ಮತ್ತು ಪ್ರಶಂಸೆಗೆ ಪಾತ್ರವಾಗಿವೆ. ಕೆಲವನ್ನು ಆಯಾ ಕ್ಷೇತ್ರಗಳಲ್ಲಿ ಆಕರ ಗ್ರಂಥಗಳಾಗಿಯೂ ಬಳಸಲಾಗುತ್ತಿದೆ.

1954ರಲ್ಲಿ ಜನಿಸಿದ್ದ ಕಿರ್ವಳೆ ಔರಂಗಾಬಾದ್‌ನ ಮಿಲಿಂದ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದ್ದು, ಅಲ್ಲಿಯ ಖ್ಯಾತ ದಲಿತ ಲೇಖಕ ಡಾ.ಗಂಗಾಧರ ಪಂತವಾನೆ ಅವರ ಬರಹಗಳಿಂದ ಪ್ರಭಾವಿತರಾಗಿದ್ದರು. 1987ರಲ್ಲಿ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಮರಾಠವಾಡಾ ವಿವಿಯಿಂದ ಮರಾಠಿ ಭಾಷೆಯಲ್ಲಿ ಡಾಕ್ಟರೇಟ್ ಪಡೆದಿದ್ದ ಅವರು, 1983ರಲ್ಲಿ ಅದೇ ವಿವಿಯಿಂದ ಡ್ರಾಮಾಟಿಕ್ಸ್‌ನಲ್ಲಿ ಪದವಿ ಪಡೆದಿದ್ದರು.

ರಾಜ್ಯ ಸರಕಾರದ ಪ್ರವರ್ತನೆಯಲ್ಲಿ ‘ದಲಿತ ಮತ್ತು ಗ್ರಾಮೀಣ ಸಾಹಿತ್ಯಗಳ ವಿಶ್ವಕೋಶ ’ಯೋಜನೆ ಅವರ ಪ್ರಮುಖ ಕೊಡುಗೆಗಳಲ್ಲೊಂದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News