ಕಣ್ಣೂರ್ ವಿಶ್ವವಿದ್ಯಾನಿಲಯದ ಅಧ್ಯಾಪಕನಿಂದ ವಿದ್ಯಾರ್ಥಿನಿಯರಿಗೆ ಕಿರುಕುಳ!
ಕಣ್ಣೂರ್,ಮಾ.5: ಕೇರಳದ ಕಣ್ಣೂರು ವಿಶ್ವವಿದ್ಯಾನಿಲಯದ ಗಣಿತಶಾಸ್ತ್ರ ವಿಭಾಗದ ಮುಖ್ಯಸ್ಥರು ಮೂವರು ವಿದ್ಯಾರ್ಥಿನಿಯರಿಗೆ ಕಿರುಕುಳ ನೀಡಿದ್ದಾರೆಂದು ಆರೋಪಿಸಲಾಗಿದೆ. ವಿದ್ಯಾರ್ಥಿನಿಯರು ಬೇನಾಮಿ ಪತ್ರ ಬರೆದು ಉಪಕುಲಪತಿಗೆ ದೂರು ನೀಡಿದ್ದರು. ಆದರೆ ಬೇನಾಮಿ ಅರ್ಜಿಯಾದ್ದರಿಂದ ಉಪಕುಲಪತಿ ಆರೋಪಿ ಅಧ್ಯಾಪಕನ ವಿರುದ್ಧ ಕ್ರಮಕೈಗೊಂಡಿರಲಿಲ್ಲ. ನಂತರ ಶಿಕ್ಷಣ ಸಚಿವರು ಮತ್ತು ರಾಜ್ಯಪಾಲರಿಗೆ ದೂರು ನೀಡಲಾಗಿತ್ತು. ಶಿಕ್ಷಣ ಸಚಿವರ ಆದೇಶ ಪ್ರಕಾರ ತನಿಖೆ ನಡೆದು ಅಧ್ಯಾಪಕ ತಪ್ಪಿತಸ್ಥನೆಂದು ಕಂಡು ಬಂದಿದೆ.
ಘಟನೆ ಕಳೆದ ತಿಂಗಳು ನಡೆದಿತ್ತು. ಗಣಿತಶಾಸ್ತ್ರ ಮುಖ್ಯಸ್ಥರು ತಮ್ಮ ಕೋಣೆಗೆ ಕರೆದು ವಿದ್ಯಾರ್ಥಿನಿಯರಿಗೆ ಮಾನಸಿಕ ಮತ್ತು ಶಾರೀರಿಕವಾಗಿ ಕಿರುಕುಳ ನೀಡಿದ್ದಾರೆ ಎಂದು ವಿದ್ಯಾರ್ಥಿನಿಯರು ದೂರಿದ್ದಾರೆ. ಶಿಕ್ಷಣ ಸಚಿವರ ಆದೇಶ ಪ್ರಕಾರ ರಿಜಿಸ್ಟ್ರಾರ್ ನೇತೃತ್ವದ ಇಬ್ಬರು ಸದಸ್ಯರ ಸಮಿತಿ ನಡೆಸಿದ ತನಿಖೆಯಿಂದ ಆರೋಪಿ ಅಧ್ಯಾಪಕ ತಪ್ಪಿತಸ್ಥನೆಂದು ಕಂಡು ಬಂದಿದ್ದು ಆತನನ್ನು ಅಮಾನತುಗೊಳಿಸಲಾಗಿದೆ.
ಪ್ರಕರಣದಲ್ಲಿ ಹೆಚ್ಚಿನ ತನಿಖೆ ಅಗತ್ಯವಿದೆಯೆಂದು ವಿಶ್ವವಿದ್ಯಾನಿಲಯ ವರದಿ ಸಲ್ಲಿಸಿದೆ. ಅಮಾನತುಗೊಂಡ ಆರೋಪಿ ಅಧ್ಯಾಪಕ ಇದು ತನ್ನ ವಿರುದ್ಧ ಸಂಚು ಎಂದು ಪ್ರತಿಕ್ರಿಯಿಸಿದ್ದಾರೆ. ಘಟನೆಯ ನಂತರ ಅಧ್ಯಾಪಕ ರಜೆಯಲ್ಲಿ ತೆರಳಿದ್ದಾರೆಂದು ವರದಿ ತಿಳಿಸಿದೆ.