ಬುದ್ಧಿ ಬಲದ ಜತೆಗೆ ಇವರು ಮಾತಿನ ಶೂರೆಯರು!

Update: 2023-06-30 06:19 GMT

ರಾಷ್ಟ್ರೀಯ ಹಾಗೂ ಪ್ರಾದೇಶಿಕ ರಾಜಕೀಯ ಪಕ್ಷಗಳ ವಕ್ತಾರೆಯರಾಗಿರುವ ಈ ‘ವಾಣಿ’ಯರಿಗೆ ಅತ್ಯಗತ್ಯವಾಗಿ ಬೇಕಾಗಿರುವುದೇ ಮಾತಿನ ಶೂರತ್ವ! ಆ ಹುದ್ದೆಗೆ ಮಾತೇ ಆಸ್ತಿ. ಯಾವುದು ಎಲ್ಲಿಗಾದರೂ ಹೋಗಲಿ, ಮಹಿಳೆಯರು ಎಂದಾದರೂ ಮಾತಿನಲ್ಲಿ ಹಿಂದೆ ಬಿದ್ದದ್ದುಂಟೆ? ಇದನ್ನು ಕಂಡುಕೊಂಡಂತೆಲ್ಲ ನಮ್ಮ ರಾಷ್ಟ್ರೀಯ ಹಾಗೂ ಪ್ರಾದೇಶಿಕ ಪಕ್ಷಗಳ ಸ್ಪೋಕ್ಸ್ ವಿಮೆನ್ ಸಂಖ್ಯೆ ಹೆಚ್ಚಾಗುತ್ತಿದೆ. ಸಂತಸದ ಬೆಳವಣಿಗೆಯೇ.


ಇಲ್ಲ! ಖಂಡಿತ ಅವಹೇಳನಕಾರಿಯಾಗಿ ಈ ಗುಣವಿಶೇಷಣವನ್ನು ಇಲ್ಲಿ ಬಳಸಿಲ್ಲ! ರಾಷ್ಟ್ರೀಯ ಹಾಗೂ ಪ್ರಾದೇಶಿಕ ರಾಜಕೀಯ ಪಕ್ಷಗಳ ವಕ್ತಾರೆಯರಾಗಿರುವ ಈ ‘ವಾಣಿ’ಯರಿಗೆ ಅತ್ಯಗತ್ಯವಾಗಿ ಬೇಕಾಗಿರುವುದೇ ಮಾತಿನ ಶೂರತ್ವ! ಆ ಹುದ್ದೆಗೆ ಮಾತೇ ಆಸ್ತಿ. ಯಾವುದು ಎಲ್ಲಿಗಾದರೂ ಹೋಗಲಿ, ಮಹಿಳೆಯರು ಎಂದಾದರೂ ಮಾತಿನಲ್ಲಿ ಹಿಂದೆ ಬಿದ್ದದ್ದುಂಟೆ? ಇದನ್ನು ಕಂಡುಕೊಂಡಂತೆಲ್ಲ ನಮ್ಮ ರಾಷ್ಟ್ರೀಯ ಹಾಗೂ ಪ್ರಾದೇಶಿಕ ಪಕ್ಷಗಳ ಸ್ಪೋಕ್ಸ್ ವಿಮೆನ್ ಸಂಖ್ಯೆ ಹೆಚ್ಚಾಗುತ್ತಿದೆ.

ಸಂತಸದ ಬೆಳವಣಿಗೆಯೇ. ಪ್ರತೀ ರಾತ್ರಿ ಇಲ್ಲವೇ ಹಗಲು, ಮಾಧ್ಯಮಗಳ ಒಂದು ಸ್ಟುಡಿಯೋದಿಂದ ಇನ್ನೊಂದಕ್ಕೆ ಸಾಗಿಬರುವ ಈ ‘ಗರ್ಲ್ಸ್‌ಗ್ಯಾಂಗ್’ ಒಂದು ಚೇತೋಹಾರಿ ನೋಟವೂ ಹೌದು ಎಂದರೆ, ದಯಮಾಡಿ, ‘‘ಲಿಂಗ ತಾರತಮ್ಯದ ಹೇಳಿಕೆ’’ ಎನ್ನದಿರಿ! ಆಯಾ ರಾಜಕೀಯ ಪಕ್ಷಗಳ ಧ್ಯೇಯೋದ್ದೇಶ, ಅವು ಕೈಗೊಳ್ಳುವ ಸಮಾಜ ಕಲ್ಯಾಣ ಯೋಜನೆಗಳು, ಇನ್ನಿತರ ಸಂದರ್ಭಕ್ಕೆ ಅನುಸಾರವಾಗಿ ಮಾಡಬೇಕಾದ ಮಾಹಿತಿ ಪ್ರಸಾರ ಮುಂತಾದವು ವಕ್ತಾರ-ವಕ್ತಾರೆಯರ ಪ್ರಾಥಮಿಕ ಜವಾಬ್ದಾರಿ. ಕ್ಷಣ ಕ್ಷಣಕ್ಕೂ ಬೆಳೆಯುವ, ಹೊಸ ಹೊಸ ತಿರುವು, ತಿರುಚು ಪಡೆದುಕೊಳ್ಳುವ ಬ್ರೇಕಿಂಗ್ ನ್ಯೂಸ್ ಚರ್ಚೆಗಳಿಗೆ ಬುಲಾವು ಬಂದ ಹಾಗೂ ಅವರು ತಮ್ಮ ತ್ವರಿತಗತಿಯ ಹೋಮ್‌ವರ್ಕ್ ಮಾಡಿ ಹಾಜರಾಗಬೇಕು. ಪರಾಮರ್ಶೆ, ಉಲ್ಲೇಖ, ವರದಿ, ನ್ಯಾಯಾಲಯ ತೀರ್ಪುಗಳ ಹಾಳೆಗಳನ್ನು ಆಯುಧಗಳಂತೆ ಝಳಪಿಸಬೇಕು; ನಿರೂಪಕರು ಸಮಯ ಕೊಟ್ಟರೆ ಒಂದೆರಡು ಪ್ಯಾರಾ ಉದ್ಧರಿಸಿ, ಪೆನ್ಸಿಲ್ ಎತ್ತಿತೋರಿಸುತ್ತ ‘‘ಇನ್ನೆರಡೇ ಅಂಶ, ಮೂವತ್ತು ಸೆಕೆಂಡ್ ಕೊಡಿ’’ ಅಂತ ಆಗ್ರಹಿಸಬೇಕು: ಯಾವ ತಲೆ ಬಿದ್ದುಹೋಗುವ ವಿಷಯವೋ ಎಂದು ಅದನ್ನು ದಯಪಾಲಿಸಲಾದರೆ, ವೀಕ್ಷಕ ಮಹಾಶಯರು ಗಲ್ಲಕ್ಕೆ ಕೈಕೊಟ್ಟು ಟಿವಿ ಮುಂದೆ ಕೂತೇಬಿಟ್ಟರೆ, ಅದು ಅವರ ವಿಜಯ! ಹಾಗೆ ಭಯ ಭಕ್ತಿಯಿಂದೇನೋ ಯುವ ವೀಕ್ಷಕ-ವೀಕ್ಷಕಿಯರು ನಿರೂಪಕರ, ವಕ್ತಾರ-ವಕ್ತಾರೆಯರ ಮಾತು ಕೇಳಿಸಿಕೊಳ್ಳುವುದಿಲ್ಲ... ಬದಲಾಗಿ ಮಿಂಚಿನ ಮೌಲ್ಯಮಾಪನ ಮನದಲ್ಲೇ ನಡೆಸಿರುತ್ತಾರೆ.

ಹ್ಯಾಶ್‌ಟ್ಯಾಗ್ ಸೋ ಆ್ಯಂಡ್ ಸೋ ವಿಷಯ ಅದಕ್ಕೊಂದು ಕೂರಲಗಿನ ಕಾಮೆಂಟನ್ನು ಪಟ ಪಟ ಅಂಗೈಯಲ್ಲಿ ಟೈಪಿಸಿರುತ್ತಾರೆ. ವಿಷಯಾಂತರವಾಗಿದ್ದರೆ ಕ್ಷಮಿಸಿ, ಎಲ್ಲ ರಾಜಕೀಯ ಪಕ್ಷಗಳ ‘ಯಂಗ್ ಬ್ರಿಗೇಡ್’ ನೋಡುತ್ತ ನೋಡುತ್ತ ಮೂಡಿದ ಒಂದು ನಿರೀಕ್ಷಣೆ ಎಂದರೆ, ಪರದೆಯ ಆಚೆ ಮತ್ತು ಈಚೆಯ ‘ಲಿಂಗೋ’ (ಒಂದು ಬಗೆಯ ಸಂಭಾಷಣೆ, ಪದೇಪದೇ ಆಡಲ್ಪಟ್ಟು ಪ್ರಸಾರವಾಗುವಂತಹದು) ಒಂದೇ. ಉದಾಹರಣೆಗೆ ಪ್ರಧಾನಿಯ ಅಂಕಪಟ್ಟಿ ಖೊಟ್ಟಿ ಎಂದು ಆಮ್ ಆದ್ಮಿ ಪಕ್ಷದ ವಕ್ತಾರ ಹೂಡಿದ ವಾದವನ್ನು ನಟಿ ಭಯಂಕರ ವಾಗ್ಮಿತೆಯಿಂದ ತುಂಡರಿಸಿದ್ದು-ಮೂವತ್ತೂ ತುಂಬದ ನೂಪುರ್ ಹೆಸರಿನಾಕೆ, ಬಹುಶಃ-ಹೀಗಿತ್ತು: ಗ್ರೋ ಅಪ್ ಆಶೀಶ್...ಗೆಟ್ ಎ ಜಾಬ್!

ಸುಶ್ಮಾ ಸ್ವರಾಜ್, ರಾಷ್ಟ್ರಮಟ್ಟದಲ್ಲಿ ಬಿಜೆಪಿಯ ಪ್ರಥಮ ವಕ್ತಾರೆಯಾಗಿ ಭಾರತದಲ್ಲಿ ಈ ಟ್ರೆಂಡ್ ಪ್ರಚಲಿತಗೊಳಿಸಿದರು. ಸಂಸದೆ, ರಾಜ್ಯಸಭೆ ಸದಸ್ಯೆ, ಸಚಿವೆ ಹೀಗೆ ಪಕ್ಷದ ಅನುಭವಿ ಕಾರ್ಯಕರ್ತೆಯರೇ ವಕ್ತಾರೆಯ ಪಾತ್ರ ವಹಿಸಲೂ ಅವಕಾಶ ಇದೆ. ಅತ್ಯಂತ ಗಂಭೀರ ಜವಾಬ್ದಾರಿ ಇವರು ನಿರ್ವಹಿಸುತ್ತಾರೆ. ಉದಾಹರಣೆಗೆ, ನೋಟು ಅಮಾನ್ಯ ಕುರಿತಂತೆ ಅಂತಾರಾಷ್ಟ್ರೀಯ ಆರ್ಥಿಕ ಪರಿಣತರೂ ಇದ್ದ, ಸಾರ್ವಜನಿಕ ಸಂವಾದ ಎದುರಿಸಿದ್ದು ನಿರ್ಮಲಾ ಸೀತಾರಾಮನ್. ಧ್ವನಿ ಎತ್ತರಿಸುವುದಿಲ್ಲ, ಸೌಮ್ಯ ನಡವಳಿಕೆ ಎಂದೆಲ್ಲ ಹೆಸರಾಗಿದ್ದರೂ ಪ್ರಶ್ನೆ ಎತ್ತಿದವರು ನಿರ್ವಾಹ ಇಲ್ಲದೆ ಸುಮ್ಮನಾಗುವಷ್ಟು ಅಸ್ಖಲಿತವಾಗಿ, ಒಳ್ಳೆಯ ಭಾಷೆಯಲ್ಲಿ ಸಂವಹನ ಸಾಧಿಸುವವರು. ಮೂಲಭೂತವಾಗಿ ಧೋರಣೆಗಳೇ ಬೇರೆಯಾಗಿದ್ದರೆ ಏನು ಮಾಡಲೂ ಬರುವಂತಿಲ್ಲ ಬಗೆಯ ಡೆಡ್‌ಲಾಕ್ ಎದುರಾಗುತ್ತದೆ. (ಅದು ತಮ್ಮ ಸಮಸ್ಯೆ ಅಲ್ಲ ಎಂದು ಭುಜ ಹಾರಿಸಲು ಬಲ್ಲರು).

ಟೆಲಿವಿಷನ್ ಕಲಾವಿದೆಯಾಗಿ ಜನಪ್ರಿಯರಾಗಿ, ರಾಜಕೀಯಕ್ಕೆ ಅದನ್ನೇ ಮೆಟ್ಟಿಲು ಮಾಡಿಕೊಂಡ ಸ್ಮತಿ ಇರಾನಿ, ವಕೀಲೆ ಮೀನಾಕ್ಷಿ ಲೇಖಿ ಮುಂತಾದವರು ನಡುಕಲ ವರ್ಗಕ್ಕೆ ಸೇರಿದ ಬಿಜೆಪಿ ವಕ್ತಾರೆಯರು. ಪ್ರಭಾವಿ ಮಾತುಗಾರಿಕೆ ಇದೆಯಾದರೂ ಅದರಲ್ಲಿ ತಥ್ಯ ಸಾಲದು ಎಂಬ ಕೊರಗನ್ನು ಸೂಕ್ಷ್ಮ ಕೇಳುಗರಲ್ಲಿ ಮೂಡಿಸುತ್ತದೆ. ಹುಳುಕು ಹುಡುಕಲು ಕೂತ ವಿರೋಧಿಗಳಿಗೆ, ಈ ಬಗೆಯ ಮಾತಿನ ಶೂರೆಯರ ಅಂಕೆಯಲ್ಲಿಲ್ಲದ ಆವೇಶ ಒಂದು ಬಗೆಯ ಏಲಿಯನೇಷನ್-ಪರಕೀಯತೆಯ ‘ಬ್ರೆಕ್ಟ್ ಪರಿಣಾಮ’ ಉಂಟುಮಾಡಿದರೂ ಆಶ್ಚರ್ಯ ಇಲ್ಲ. ಒಬ್ಬರನ್ನೊಬ್ಬರು ‘‘ನೀವೇ, ನಾವಲ್ಲ, ನೀವೇ ಇದಕ್ಕೆ ಕಾರಣ’’ ಭರ್ಜಿ ತೆಗೆದುಕೊಂಡು ಇರಿಯಲಾರಂಭಿಸಿದರೆ ಜಾಣ ಪ್ರೇಕ್ಷಕರಿಗೆ ಒಳಗಿನ ಹುಳುಕು ತಿಳಿದುಹೋಗುತ್ತದೆ. ಚರ್ಚೆಯ ವಿಷಯದ ಒಂದು ಸಾಮಾನ್ಯ ದತ್ತಾಂಶವನ್ನು ಹಾಗಲ್ಲ (ಫ್ಯಾಕ್ಚುಯಲೀ ಇನ್‌ಕರೆಕ್ಟ್ ಇದರ ವಿಜೃಂಭಿತ ರೂಪ) ಎಂದು ಬಾಯಿಬೊಂಬಾಯಿ ಮಾಡಿ ಕೂಗಾಡಿ, ಕಡೆಗೆ, ಹೇಗೆ ಹೇಳಿದರೂ ಒಂದೇ ಎನ್ನುವಂತಹ ಸಣ್ಣ ತಿದ್ದುಪಡಿಯೊಂದಿಗೆ ಘೋಷಿಸುವುದು ಕೆಲವರ ತಂತ್ರ. ಚರ್ಚೆಯ ದುಬಾರಿ ನಿಮಿಷಗಳನ್ನು ಕಬಳಿಸಿ, ಇತರರನ್ನು ಮಂಗ ಮಾಡುವುದೊಂದೇ ಇದರ ಫಲಿತಾಂಶ.

ಪ್ರಿಯಾಂಕಾ ಚತುರ್ವೇದಿ(ಕಾಂಗ್ರೆಸ್), ಶೈನಾ ಎನ್.ಸಿ. (ಬಿಜೆಪಿ), ಅಲಕಾ ಲಾಂಬಾ(ಆಪ್), ಜೂಹಿ ಸಿಂಗ್(ಎಸ್ಪಿ), ಶಾಝಿಯಾ ಇಲ್ಮಿ(ಬಿಜೆಪಿ), ಖುಷ್‌ಬೂ ಸುಂದರ್(ಕಾಂಗ್ರೆಸ್), ನಗ್ಮಾ(ಕಾಂಗ್ರೆಸ್), ರಿಂಕು ಶರ್ಮ(ಬಿಎಸ್ಪಿ), ಮಹುವಾ(ತೃಣಮೂಲ) ಮುಂತಾದವರು ಇನ್ನೊಂದು ದಶಕ ಕಳೆದ ತಲೆಮಾರಿಗೆ ಸೇರಿದವರು. ಉನ್ನತ ವಿದ್ಯಾಭ್ಯಾಸ, ಡಿಬೇಟಿಂಗ್ ಕೌಶಲ, ಚರ್ಚೆಯ ಸರಹದ್ದು ದಾಟಿ, ನಿಯಮಗಳನ್ನು ಮೀರಿ ವೈಯಕ್ತಿಕವಾಗದ ನಾಗರಿಕತೆ...ಈ ಅರ್ಹತೆಗಳನ್ನು ಕೆಲವರು ಸಂಪಾದಿಸಿದ್ದಾರೆ. ಉದಾಹರಣೆಗೆ ಪ್ರಿಯಾಂಕಾ ಚತುರ್ವೇದಿ, ಹೆಚ್ಚು ಮಾತು ಖರ್ಚುಮಾಡುವವರಲ್ಲ, ಹೇಳಬೇಕಾದುದನ್ನು ದಾಖಲೆ ಸಮೇತ ಪರಿಣಾಮಕಾರಿಯಾಗಿ ಮಂಡಿಸಿ ಕೂರುವವರು ಎಂಬ ಸದಭಿಪ್ರಾಯ ಪ್ರಚಲಿತ. ಜೂಹಿ ಸಿಂಗ್‌ರಲ್ಲಿ, ಸಂಪೂರ್ಣ ಆಲಿಸಬಹುದು ಎನಿಸುವಷ್ಟು ಪ್ರಾಮಾಣಿಕತೆ, ನಂಬಲರ್ಹ ಗುಣ ಕಾಣುತ್ತದೆ. ಅನಪೇಕ್ಷಿತ ಪ್ರಶ್ನೆಗಳನ್ನು ಕೈಬಿಟ್ಟು ತಮ್ಮದೇ ವರಸೆ ಹೇಳುವ ದುರಭ್ಯಾಸವೂ ಅವರಲ್ಲಿಲ್ಲ. ಯಾವುದೇ ವಿವಾದ ತಲೆದೋರಿದಾಗಲೂ ಅದನ್ನು ತಳಮಟ್ಟ ವಿಶ್ಲೇಷಿಸು ವುದರಲ್ಲಿ ಶೈನಾ ಶೈನ್ ಆಗುತ್ತಾರೆ ಎಂಬ ಮೆಚ್ಚುಗೆ ಸಹಾನುಭೂತಿಪರರಲ್ಲಿ ಜನಜನಿತ. ಉದಾಹರಣೆಗೆ ಸಲ್ಮಾನ್ ಖಾನ್, ಒಂದು ಚಿತ್ರಕ್ಕಾಗಿ ತಾನು ಒಳಪಟ್ಟ ಕಠಿಣ ತರಬೇತಿ ಬಗ್ಗೆ ಅನುಚಿತ ಹೋಲಿಕೆ ನೀಡಿದಾಗ, (ತಮ್ಮ ಸ್ನೇಹಿತನೂ ಆಗಿರುವ ಈ ಸ್ಟಾರ್ ನಟ) ‘‘ಅದು ಹಾಗಲ್ಲ, ತನ್ನ ವೈಯಕ್ತಿಕ ಸಿದ್ಧಿಗಾಗಿ ಪಟ್ಟ ಶ್ರಮವನ್ನು ಯಾವುದೇ ಆಯ್ಕೆಗೆ ಅವಕಾಶ ಇಲ್ಲದೆ ಮಹಿಳೆಯ ಮೇಲೆ ಆಗುವ ಲೈಂಗಿಕ ಆಕ್ರಮಣಕ್ಕೆ ಹೋಲಿಸಲು ಬಾರದು; ಎರಡೂ ಒಂದೇ ಅಲ್ಲ’’ ಎಂದು ಕ್ಷಣಾರ್ಧದಲ್ಲಿ ಥಿಯರೈಸ್ ಮಾಡಿ ಕೊನೆತನಕ ಅದಕ್ಕೆ ಅಂಟಿಕೊಂಡರು. ಅದೇ, ಶಾರುಖ್ ಖಾನ್ ನಟಿಸಿರುವ ‘ಮೈ ನೇಮ್ ಈಸ್ ಖಾನ್’ ಪ್ರದರ್ಶನಕ್ಕೆ ಶಿವಸೇನೆ ವಿರೋಧ ಸೂಚಿಸಿದಾಗ, ಅದರ ಪ್ರೀಮಿಯರ್ ಶೋ ಮುಂಬೈಯಲ್ಲಿ ವ್ಯವಸ್ಥೆ ಮಾಡಲು (ಬಿಜೆಪಿ ಪಕ್ಷದ ಹಿಂಜರಿಕೆ ಮೀರಿ) ಮುಂದಾದರು.

ಹೀಗೆ ಬಾಲಿವುಡ್ ತಾರೆಯರನ್ನೆಲ್ಲ ಸ್ನೇಹಿತರ ವಲಯದಲ್ಲಿ ಹೊಂದಿರುವ ಶೈನಾರ ತಂದೆ, ನಾನಾ ಚೂಡಾಸಮ ಮುಂಬೈಯ ಮಾಜಿ ಷರೀಫ್, ಗುಜರಾತ್ ಹತ್ಯಾಕಾಂಡಕ್ಕೆ ತೀವ್ರ ವಿರೋಧ ಸೂಚಿಸಿದವರು, ಮೋದಿ ವಿರೋಧಿ ಎಂಬ ಅಂಶಗಳೆಲ್ಲ ಮಗಳ ವಕ್ತಾರಗಿರಿಗೆ ಒಂದಷ್ಟು ವಿಲಕ್ಷಣತೆ ತರುವಂಥವು. ಫ್ಯಾಶನ್ ಡಿಸೈನಿಂಗ್ ಪ್ರತಿಭೆ, ತಾಯಿಯಿಂದ ಅವರು ಪಡೆದ ಬಳುವಳಿ; ಐಶ್ವರ್ಯ ರೈ, ಜೂಹಿ ಚಾವ್ಲಾ ಮುಂತಾದವರಿಗೆ ಉಡುಪು ವಿನ್ಯಾಸ ಮಾಡಿದ್ದಾರೆ ಎನ್ನುವುದು ಹೆಚ್ಚುವರಿ ಮೆರುಗು. ಪ್ರಾದೇಶಿಕ ಪಕ್ಷಗಳೂ ಇಂತಹ ಆಯ್ಕೆ ಮಾಡುವಲ್ಲಿ ತಡ ಮಾಡಿಲ್ಲ: ನೋಟು ಅಮಾನ್ಯ ಚರ್ಚೆಗಳಲ್ಲಿ ತೃಣಮೂಲದ ಮಹುವಾ, ಚೆನ್ನೈ ಪ್ರವಾಹ ಸಂದರ್ಭದಲ್ಲಿ ಖುಷ್ಬೂ, ಸಣ್ಣ ಪರದೆಗಳಲ್ಲಿ ತಮ್ಮ ವಾದವೈಖರಿಯಿಂದ ರಾರಾಜಿಸಿದರು. ಆಮ್‌ಆದ್ಮಿಪಕ್ಷದ ಆರಂಭಿಕ ನಾಯಕಿಯರಲ್ಲಿ ಒಬ್ಬರಾಗಿದ್ದ ಶಾಝಿಯಾ ಇಲ್ಮಿ ಬಿಜೆಪಿಗೆ ಒಲಿದದ್ದು ಅವರ ವಿಶ್ವಾಸಾರ್ಹತೆಯನ್ನು ಕೆಲ ವರ್ತುಲಗಳಲ್ಲಿ ಮುಕ್ಕಾಗಿಸಿತು ಎಂದರೆ ತಪ್ಪಲ್ಲ. ಆದರೆ ಪ್ರಸನ್ನ ಮುಖಮುದ್ರೆಯೊಂದಿಗೇ ತೀಕ್ಷ್ಣ ವಾದ ಮಾಡಬಲ್ಲರು ಎನ್ನುವುದು ಅವರ ಯುಎಸ್‌ಪಿ.

2018ರ ವಿಧಾನಸಭೆ ಚುನಾವಣೆ ಮೇಲೆ ಕಣ್ಣಿಟ್ಟು, ಮಹಿಳೆಯ ರೊಂದಿಗೆ ಹೆಚ್ಚಿನ ಸಂವಹನ ಸಾಧಿಸುವ ಗುರಿ ಇಟ್ಟುಕೊಂಡು ಬಿಜೆಪಿ, ಕರ್ನಾಟಕದಲ್ಲಿಯೂ ನಾಲ್ವರು ರಾಜ್ಯ ವಕ್ತಾರೆಯರನ್ನು ನೇಮಿಸಿದೆ. ಕಿರುತೆರೆ ತಾರೆ ಮಾಳವಿಕಾ ಅವಿನಾಶ್, ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಮಂಜುಳಾ, ತಾಂತ್ರಿಕ ಶಿಕ್ಷಣ ಹಿನ್ನೆಲೆಯ ಗೀತಾ ವಿವೇಕಾನಂದ ಹಾಗೂ ಅಪರ್ಣಾ ಪಟವರ್ಧನ್‌ರಿಗೆ 2014ರಲ್ಲಿ ಈ ಜವಾಬ್ದಾರಿ ವಹಿಸಲಾಯಿತು. ಇವರಲ್ಲಿ ಮಾಳವಿಕಾ, ಕಿರುತೆರೆ ತಾರೆಯಾಗಿ ಅಪಾರ ಜನಪ್ರಿಯತೆಯನ್ನು ಗಳಿಸಿಕೊಂಡಿರುವವರು. ತಮ್ಮ ಕನ್ನಡ ಸಾಹಿತ್ಯ ಪ್ರೀತಿ, ಅಂಕಣಬರಹ ವಾಕ್ಪಟುತ್ವಕ್ಕಾಗಿಯೂ ಅವರು ಬುದ್ಧಿಜೀವಿ ವಲಯದಲ್ಲಿ ಪ್ರಸಿದ್ಧರು. ಚಿಕ್ಕಂದಿನಿಂದಲೇ ರಾಜಕೀಯ ಧುರೀಣೆಯಾಗಲು ಬಯಸಿದ ಆಕಾಂಕ್ಷಿ. ಸಿ. ಮಂಜುಳಾ, ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ. ವಕೀಲ ವೃತ್ತಿಯಲ್ಲೇ ಇರುವವರು(ಅಂದರೆ ವಕ್ತಾರಿಕೆ ಸುಲಭ). ಇನ್ನು ಆಮ್‌ಆದ್ಮಿ ಪಕ್ಷ ಸಾಧಿಸಿದ ವಿದ್ಯುನ್ಮಾನ ಮಾಧ್ಯಮ ಸಂಘಟನೆಗೆ, ನಿರಂತರ ಸಂವಹನಕ್ಕೆ ಉತ್ತರವಾಗಿ ಒದಗಿದವರು ಸಾಫ್ಟ್‌ವೇರ್ ತಂತ್ರಜ್ಞೆ ಪಟವರ್ಧನ್ ಹಾಗೂ ಗೀತಾ ಎನ್ನಲಾಗುತ್ತದೆ.

ವಕ್ತಾರೆಯರಾಗಿ ತಮ್ಮ ಸಾಮರ್ಥ್ಯ ಸಾಬೀತುಪಡಿಸಿದವರಿಗೆ (ಅಂದರೆ, ತಪ್ಪೋ ಸರಿಯೋ ವೀರಾವೇಶದಿಂದ ಪಕ್ಷದ ನಿಲುವನ್ನು ಪಟ್ಟಾಗಿ ಸಮರ್ಥಿಸಿಕೊಂಡವರು) ಚುನಾವಣೆಗಳಲ್ಲಿ ಸ್ಪರ್ಧಿಸಲು ಕಳುಹಿಸುವ, ರಾಜ್ಯಸಭೆ ಸಂಸದರಾಗಿ ನೇಮಕ ಮಾಡುವ, ರಾಷ್ಟ್ರಕಾರ್ಯಕಾರಿಣಿಯ ಸದಸ್ಯರಾಗಿಸುವ ಮೆಹರ್‌ಬಾನಿ ತೋರಲಾಗುತ್ತದೆ. ಆಯಾ ರಾಜಕೀಯ ಪಕ್ಷದ ಸದಸ್ಯರಿಗಲ್ಲದೆ ಇತರ ಯೋಚಿಸುವ ಸಾಮರ್ಥ್ಯ ಹೊಂದಿರುವ ನಾಗರಿಕರಿಗೂ ಒಪ್ಪಿತವಾಗುವ ವಾದಸರಣಿ ಮಂಡಿಸಲೂ ವಕ್ತಾರ- ವಕ್ತಾರೆಯರಿಗೆ ಅವಕಾಶ ಕೆನಡಾ ದೇಶದ ಜನತಂತ್ರದಲ್ಲಿ ಇದೆ. ಇವರನ್ನು ‘‘ಸರಕಾರೇತರ ಪಕ್ಷದ ವಕ್ತಾರರು ಅಥವಾ ಪಕ್ಷದ ವಿಮರ್ಶಕರು’’ ಎಂದು ಕರೆಯುತ್ತಾರೆ. ನಮ್ಮಲ್ಲೂ ಇಂತಹದೊಂದು ಪದ್ಧತಿ ಬಂದರೆ ವಕ್ತಾರೆಯರ ಚತುರ ಮಾತಿನ ಶಕ್ತಿಗೆ ಸಾಣೆ ಹಿಡಿದಂತೆ ಆಗಬಹುದು.

ಅಂತಾರಾಷ್ಟ್ರೀಯ ಮಹಿಳಾ ದಿನದ ಮುನ್ನಾ ದಿನಗಳಂದು (ಇದೇ ಮಾ. 6,7) ವಿಜಯಪುರದ ಮಹಿಳಾ ವಿಶ್ವವಿದ್ಯಾಲಯ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಕರ್ನಾಟಕ ಮಾಧ್ಯಮ ಅಕಾಡಮಿಯ ಸಹಯೋಗದೊಂದಿಗೆ ಏರ್ಪಡಿಸಿದ್ದ ಎರಡು ದಿನಗಳ ವಿಚಾರ ಸಂಕಿರಣದಲ್ಲಿ ಭಾಗವಹಿಸುವ ಅವಕಾಶ ದೊರತಿತ್ತು: ವಿವಿಯ ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ವಿಭಾಗದ ಹಾಲಿ ಹಾಗೂ ಮಾಜಿ ವಿದ್ಯಾರ್ಥಿನಿಯರು, ಸುತ್ತಮುತ್ತಲಿನ ಪ್ರಾದೇಶಿಕ ಪತ್ರಿಕೆ/ಚಾನೆಲ್ ಉದ್ಯೋಗಿಗಳು, ರಾಜ್ಯದ ಎಲ್ಲೆಡೆಯಿಂದ ತಮ್ಮ ಪತ್ರಿಕೆ/ಚಾನೆಲ್ ಪ್ರತಿನಿಧಿಸಿದ ಹಿರಿ-ಕಿರಿ ಪತ್ರಕರ್ತೆಯರ ಸಮುದ್ರವೇ ಅಲ್ಲಿ ನೆರೆದಿತ್ತು. ಮಹಿಳಾ ಪತ್ರಕರ್ತರ ಸಮಸ್ಯೆ, ಸವಾಲುಗಳು ಮತ್ತು ಅವಕಾಶಗಳು ಸಂಕಿರಣದ ವಿಷಯ. ಕನಸುಗಣ್ಣಿನ ಸಾವಿರಾರು ಯುವತಿಯರು ಹಾಗೂ ಉದ್ಯೋಗಾವಕಾಶ ಗಳ ನಡುವೆ ಹಿತವಾದ ಒಂದು ಪರಿಮಾಣ ಇಲ್ಲದೆ ಇರುವ ಈ ದಿನಗಳಲ್ಲಿ ಕೇವಲ ಪತ್ರಕರ್ತೆಯಾಗಲು ಶ್ರಮಿಸದೆ, ಸಮಾನ ಬಗೆಯ ಶಕ್ತಿ, ಸಾಮರ್ಥ್ಯ ಬೇಡುವ ಹುದ್ದೆಗಳತ್ತಲೂ (ಉದಾಹರಣೆಗೆ ವಕ್ತಾರೆ) ಅವರು ಕೈಚಾಚಲಿ ಎಂದು ಈಗ ಅನ್ನಿಸುತ್ತಿದೆ.

Writer - ವೆಂಕಟಲಕ್ಷ್ಮಿ ವಿ. ಎನ್.

contributor

Editor - ವೆಂಕಟಲಕ್ಷ್ಮಿ ವಿ. ಎನ್.

contributor

Similar News