ಉ.ಪ್ರ. ಮುಖ್ಯಮಂತ್ರಿ ಆಯ್ಕೆಗಾಗಿ ನಾಳೆ ಬಿಜೆಪಿ ಶಾಸಕಾಂಗ ಪಕ್ಷದ ಸಭೆ
ಲಕ್ನೊ, ಮಾ.16: ಉತ್ತರಪ್ರದೇಶದ ನೂತನ ಮುಖ್ಯಮಂತ್ರಿ ಯಾರಾಗಲಿದ್ಧಾರೆ ಎಂಬ ಪ್ರಶ್ನೆಗೆ ಮಾ.18ರಂದು ಉತ್ತರ ದೊರಕುವ ನಿರೀಕ್ಷೆಯಿದೆ. ಅಂದು ಸಂಜೆ ಸಭೆ ಸೇರಲಿರುವ ಬಿಜೆಪಿಯ 325 ಶಾಸಕರು ತಮ್ಮ ನಾಯಕನನ್ನು ಆಯ್ಕೆ ಮಾಡಲಿದ್ದಾರೆ. ಬಿಜೆಪಿಯ ಹಿರಿಯ ಮುಖಂಡರಾದ ವೆಂಕಯ್ಯ ನಾಯ್ಡು ಮತ್ತು ಭೂಪೇಂದ್ರ ಯಾದವ್ ಸಭೆಯಲ್ಲಿ ವೀಕ್ಷಕರಾಗಿ ಉಪಸ್ಥಿತರಿರುತ್ತಾರೆ. ಕೇಂದ್ರ ಸಚಿವರಾದ ಮನೋಜ್ ಸಿನ್ಹಾ, ರಾಜನಾಥ್ ಸಿಂಗ್, ಲಕ್ನೊ ಮೇಯರ್ ದಿನೇಶ್ ಶರ್ಮ ಸೇರಿದಂತೆ ಹಲವು ಮುಖಂಡರ ಹೆಸರು ಮುಂಚೂಣಿಯಲ್ಲಿದೆ. ಈ ಮಧ್ಯೆ, ಬಿಜೆಪಿ ಉತ್ತರಪ್ರದೇಶ ರಾಜ್ಯಾಧ್ಯಕ್ಷ ಕೇಶವ್‌ಪ್ರಸಾದ್ ವೌರ್ಯ ಅವರು ಮುಖ್ಯಮಂತ್ರಿ ರೇಸ್‌ನಿಂದ ಬಹುತೇಕ ಹೊರಬಿದ್ದಿದ್ದಾರೆ. ‘ ಕೇಶವ್ ಯಾರ ಹೆಸರನ್ನು ನಿರ್ಧರಿಸುತ್ತಾರೋ ಅವರನ್ನು ನಾವು ಒಪ್ಪಿಕೊಳ್ಳುತ್ತೇವೆ ’ ಎಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಹೇಳುವ ಮೂಲಕ, ಕೇಶವ್‌ಪ್ರಸಾದ್ ಅವರ ಹೆಸರು ಮುಖ್ಯಮಂತ್ರಿ ಹುದ್ದೆಯ ರೇಸ್‌ನಲ್ಲಿ ಇಲ್ಲ ಎಂದು ಪರೋಕ್ಷವಾಗಿ ತಿಳಿಸಿದ್ದಾರೆ. ಶಾ ನೀಡಿರುವ ಸಂದೇಶವನ್ನು ಅರಿತುಕೊಂಡಿರುವ ಕೇಶವ್ ಪ್ರಸಾದ್ ತಾವು ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಮುಖ್ಯಮಂತ್ರಿ ಹುದ್ದೆಗೆ ಸಮರ್ಥರ ಹೆಸರು ಸೂಚಿಸುವ ಹೊಣೆಗಾರಿಕೆಯಿದೆ. ನನ್ನ ಹೆಸರು ಸೂಚಿಸಲು ಆದೀತೇ ಎಂದು ಈ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಅವರು ಉತ್ತರಿಸಿದರು. ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಮುಖ್ಯಮಂತ್ರಿಯಾಗಿ ಆಯ್ಕೆಯಾಗುವ ಸಾಧ್ಯತೆಯಿದೆ ಎಂಬ ಸುದ್ದಿ ಹಬ್ಬಿದೆ. ಇದಕ್ಕೆ ಪುಷ್ಟಿ ನೀಡುವಂತೆ ಸಿಂಗ್ ಅವರ ಭದ್ರತಾ ತಂಡವು ಉ.ಪ್ರದೇಶ ಮುಖ್ಯಮಂತ್ರಿಗಳ ಅಧಿಕೃತ ನಿವಾಸಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿರುವ ವರದಿಯಾಗಿದೆ.