‘‘ರಾಜಕಾರಣಿಗಳಿಗೆ ಪೊಲೀಸ್ ರಕ್ಷಣೆಯೊದಗಿಸಲು ತೆರಿಗೆದಾರರ ಹಣವೇಕೆ ಪೋಲು ಮಾಡಬೇಕು ?’’
ಮುಂಬೈ,ಮಾ.18 : ರಾಜಕಾರಣಿಗಳಿಗೆ ರಕ್ಷಣೆಯೊದಗಿಸಲು ಅವರ ಪಕ್ಷಗಳು ಸಮರ್ಥವಾಗಿರುವುದರಿಂದ ಅವರಿಗೆ ಪೊಲೀಸ್ ರಕ್ಷಣೆಯೊದಗಿಸಲು ಸಾರ್ವಜನಿಕ ಹಣವನ್ನು ವಿನಿಯೋಗಿಸುವ ಅಗತ್ಯವಿಲ್ಲ ಎಂದು ಬಾಂಬೆ ಉಚ್ಚ ನ್ಯಾಯಾಲಯ ಶುಕ್ರವಾರ ಹೇಳಿದೆ.
‘‘ತೆರಿಗೆದಾರರ ಹಣವನ್ನು ಮಾಜಿ ಶಾಸಕರ ಹಾಗೂ ಅವರ ಕುಟುಂಬ ವರ್ಗಗಳಿಗಾಗಿ ಏಕೆ ಪೋಲು ಮಾಡಬೇಕು?’’ ಎಂದು ಮುಖ್ಯ ನ್ಯಾಯಮೂರ್ತಿ ಮಂಜುಳಾ ಚೆಲ್ಲೂರ್ ಹಾಗೂ ನ್ಯಾಯಾಧೀಶ ಗಿರೀಶ್ ಕುಲಕರ್ಣಿಯವರನ್ನೊಳಗೊಂಡ ವಿಭಾಗೀಯ ಪೀಠ ಪ್ರಶ್ನಿಸಿದೆ.
ಪೊಲೀಸ್ ರಕ್ಷಣೆಯೊದಗಿಸಲಾದ ವ್ಯಕ್ತಿಗಳು ಸರಕಾರಕ್ಕೆ ಬಾಕಿಯಿರಿಸಿರುವ ಹಣದ ಬಗ್ಗೆ ಕಳವಳ ವ್ಯಕ್ತಪಡಿಸಿ ಅಶೋಕ್ ಉದ್ಯಾವರ್ ಹಾಗೂ ಸನ್ನಿ ಪುನಮಿಯ ಎಂಬವರು ದಾಖಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ದಾವೆಯ ವಿಚಾರಣೆಯನ್ನು ನಡೆಸುವಾಗ ನ್ಯಾಯಾಲಯ ಮೇಲಿನಂತೆ ಹೇಳಿದೆ.
‘‘ರಾಜಕಾರಣಿಗಳು ಅಥವಾ ಅವರ ರಾಜಕೀಯ ಪಕ್ಷಗಳು ಮಾಜಿ ಶಾಸಕರು ಮತ್ತವರ ಕುಟುಂಬದ ಯೋಗಕ್ಷೇಮ ನೋಡಿಕೊಳ್ಳಲಿ. ಅದರ ಭಾರವನ್ನು ಸರಕಾರಕ್ಕೆ ವಹಿಸುವುದು ಬೇಡ,’’ ಎಂದು ಮಹಾರಾಷ್ಟ್ರದಲ್ಲಿ ಪೊಲೀಸ್ ರಕ್ಷಣೆಯಿಂದ ಪ್ರಯೋಜನ ಪಡೆಯುವ ರಾಜಕಾರಣಿಗಳ ಪಟ್ಟಿಯನ್ನು ಉಲ್ಲೇಖಿಸುತ್ತಾ ಸರಕಾರಿ ವಕೀಲ ಅಭಿನಂದನ್ ವಾಗ್ಯಾನಿ ಅವರನ್ನುದ್ದೇಶಿಸಿ ನ್ಯಾಯಾಲಯ ಹೇಳಿತು.
ರಾಜ್ಯ ಸರಕಾರ ನ್ಯಾಯಾಲಯದ ಮುಂದೆ ಸಲ್ಲಿಸಿರುವ ಪಟ್ಟಿಯ ಪ್ರಕಾರ ಮುಂಬೈಯ 242 ಮಂದಿ ರಾಜಕಾರಣಿಗಳೂ ಸೇರಿದಂತೆ ಮಹಾರಾಷ್ಟ್ರದ ಒಟ್ಟು 1,034 ರಾಜಕಾರಣಿಗಳು ಪೊಲೀಸ್ ರಕ್ಷಣೆ ಪಡೆಯುತ್ತಿದ್ದಾರೆ.