ಇದು ನಾಚಿಕೆಗೇಡು

Update: 2017-03-18 18:55 GMT

ಉನ್ನತ ವ್ಯಾಸಂಗಕ್ಕೆ ಕೈಚಾಚಿ ಕೊನೆಗೆ ಅದು ಎಟುಕದೆ ಆತ್ಮಹತ್ಯೆಗೆ ಶರಣಾಗಿರುವುದಕ್ಕೆ ಶಿಕ್ಷಣ ಕ್ಷೇತ್ರದಲ್ಲಿನ ಭೇದಭಾವ-ತಾರತಮ್ಯ, ಬಹಿಷ್ಕಾರ ಮತ್ತು ಅವಮಾನಗಳೇ ಪ್ರಮುಖ ಕಾರಣಗಳೆಂದು ಹಲವಾರು ತನಿಖೆ-ಶೋಧನೆಗಳಿಂದ ವ್ಯಕ್ತವಾಗಿದೆ. ಈ ಅಸಾಧಾರಣ ವ್ಯಕ್ತಿಗಳನ್ನು ಆತ್ಮಹತ್ಯೆಗೆ ದೂಡಿದ್ದರಲ್ಲಿ ಜಾತಿ ತಾರತಮ್ಯವೇ ಪ್ರಮುಖ ಕಾರಣವೆಂದು ನಂಬಲು ಸಾಕಷ್ಟು ಸಾಕ್ಷಿಪುರಾವೆಗಳಿವೆ. ಗಣ್ಯಾತಿಗಣ್ಯರ ವೃತ್ತಿ ಶಿಕ್ಷಣ ಸಂಸ್ಥೆಗಳಲ್ಲೇ ಜಾತಿಧರ್ಮ ಪೂರ್ವಾಗ್ರಹಗಳು ಆಳವಾಗಿ ಬೇರೂರಿದ್ದು ಅವೆಲ್ಲ ಈಗ ಮಾಮೂಲಿ ಸಂಗತಿಗಳಾಗಿವೆ ಎನ್ನುವುದು ಕೆಲವೊಂದು ಆತ್ಮಹತ್ಯಾ ಪ್ರಕರಣಗಳ ವಿಶ್ಲೇಷಣೆಯಿಂದ ಸಾಬೀತಾಗಿದೆ.


ಭವ್ಯ ಭಾರತದ ಭವಿಷ್ಯದ ಆಶಾ ಕಿರಣಗಳು: ರೋಹಿತ್ ವೇಮುಲಾ, ಮುತ್ತು ಕೃಷ್ಣನ್. -ಇಬ್ಬರೂ ದಲಿತರಾಗಿ ಹುಟ್ಟಿ ಬೆಳೆದವರು. (ಹುಟ್ಟು ಅವರ ಆಯ್ಕೆ ಯಾಗಿರಲಿಲ್ಲ). ಅವರು ದಲಿತರು ಅನ್ನುವುದು ಮುಖ್ಯವಲ್ಲ. ಅವರೂ ಎಲ್ಲರಂತೆ ಮನುಷ್ಯರು. ಸಮಾನಸ್ಕಂದರು ಅವರನ್ನು ದಲಿತರೆಂದು ನಂಬಿದ್ದರು. ಅವರೂ ತಾವು ದಲಿತರೆಂಬ ತಿಳಿವಳಿಕೆಯುಳ್ಳವರಾಗಿದ್ದರು. ಜೀವನಪಥದಲ್ಲಿ ಎದುರಾದ ಎಲ್ಲ ಅಡತಡೆಗಳನ್ನೂ ದಾಟಿಕೊಂಡು ವಿಶ್ವವಿದ್ಯಾನಿಲಯದ ಮೆಟ್ಟಿಲೇರಿದರು. ವಿಶ್ವವಿದ್ಯಾನಿಲಯದಲ್ಲಿ ಅಸ್ಪಶ್ಯತೆ-ಅಸಮಾನತೆ ಎಂಬ ಭಯಂಕರ ಅಡೆತಡೆಯನ್ನು ಅವರಿಂದ ದಾಟಲಾಗಲಿಲ್ಲ. ಇಬ್ಬರೂ ಆತ್ಮಹತ್ಯೆಗೆ ಶರಣಾದರು. ಹತಾಶೆ ಅವರನ್ನು ಆತ್ಮಹತ್ಯೆಗೆ ದೂಡಿತ್ತು.

ದಲಿತರ ಅಧಿನಾಯಕ ಡಾ. ಬಿ. ಆರ್. ಅಂಬೇಡ್ಕರ್ ಅವರೂ ಇಪ್ಪತ್ತನೆಯ ಶತಮಾನದ ಆರಂಭದ ದಿನಗಳಲ್ಲಿ ಇಂಥ ಹಿಮಾಲಯಸದೃಶ ಅಡೆತಡೆಗಳನ್ನು ಎದುರಿಸಿದ್ದರು. ವೈದಿಕ ಧರ್ಮದ ನೆರಳಲ್ಲಿ ಬದುಕು ಸಾಧ್ಯವೇ ಇಲ್ಲ ಎಂಬಂಥ ಅಸಹನೀಯ ಸ್ಥಿತಿ ಮುಟ್ಟಿದಾಗ ಹಿಂದೂ ಧರ್ಮ ತ್ಯಜಿಸಿ ಬೌದ್ಧ ಧರ್ಮದಲ್ಲಿ ಮುಕ್ತಿ ಕಂಡುಕೊಂಡರು. ಇಪ್ಪತ್ತೊಂದನೆಯ ಶತಮಾನದ ಈ ದಿನಗಳಲ್ಲಿ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿದೆಯೇ? ಅಂಬೇಡ್ಕರ್ ನಂತರದ ಭಾರತ ಬದಲಾಗಿದೆಯೇ? ಇಲ್ಲ. ಅಸ್ಪಶ್ಯತೆ ಅಸಮಾನತೆಗಳು ಅಸಹನೀಯವೆನಿಸುವಷ್ಟು ಪರಾಕಾಷ್ಠೆ ಮುಟ್ಟಿದ್ದು, ‘ಇಂಥ ಬದುಕೇ ಬೇಡ’ ಎನ್ನುವಂಥ ಶೋಚನೀಯ ಸ್ಥಿತಿಗೆ ದಲಿತರನ್ನು ನೂಕಿದ್ದೇವೆ. ದಲಿತ ಯುವಕರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ.

ಗುಜರಾತ್‌ನ ಉನಾದಲ್ಲಿ ಮತ್ತು ದೇಶದ ಇತರ ಭಾಗಗಳಲ್ಲಿ ದಲಿತರನ್ನು ಒಂದಲ್ಲ ಒಂದು ನೆಪದಿಂದ ದಂಡಿಸಲಾಗುತ್ತಿದೆ. ಗೋಹತ್ಯೆ ಮಾಡಿದರೆಂದು ಮೊದಲು ಅವರನ್ನು ಶಿಕ್ಷಿಸಲಾಯಿತು. ನಂತರ ಮೃತ ಗೋವುಗಳ ಚರ್ಮ ಸುಲಿಯುವುದಿಲ್ಲ ಎಂದರು ಎಂಬ ಕಾರಣಕ್ಕಾಗಿ ಅವರನ್ನು ದಂಡಿಸಲಾಯಿತು. ಹೀಗೆ ದಲಿತರ ಶೋಷಣೆ, ದಂಡನೆ, ಪೀಡನೆಗಳು ಒಂದಲ್ಲ ಒಂದು ರೂಪದಲ್ಲಿ ಮುದುವರಿದೇ ಇವೆ. ಇದಕ್ಕಾಗಿ ಸಮಾಜ-ಸರಕಾರಗಳು ನಾಚಿಕೆಯಿಂದ ತಲೆತಗ್ಗಿಸಬೇಕಾಗಿದೆ. ನಾವು ಪ್ರಜಾಸತ್ತಾತ್ಮಕ ಸಾರ್ವಭೌಮ ರಾಷ್ಟ್ರವಾಗಿ ಎಪ್ಪತ್ತು ವರ್ಷಗಳನ್ನು ಕಳೆದಿದ್ದೇವೆ. ಎಪ್ಪತ್ತು, ಮಾನವೀಯ ಅನುಭವದಿಂದ ಬೆಳೆದು ಮಾಗಿ ಬೀಗಬೇಕಾದ ವಯಸ್ಸು. ನಾವು ಪ್ರಬುದ್ಧ ಗಣರಾಜ್ಯವಾಗಿದ್ದೇವೆಯೇ? ಇಲ್ಲ ಎಂದು ಜಗತ್ತಿನ ನಾಗರಿಕತೆ ಮುಂದೆ ಮತ್ತೆ ನಾಚಿಕೊಳ್ಳಬೇಕಾಗಿದೆ.

ಜಾತಿ ಆಧಾರಿತ ಅಸ್ಪಶ್ಯತೆ, ಅಸಮಾನತೆ, ಭೇದಭಾವಗಳು ಇನ್ನೂ ಹೋಗಿಲ್ಲ. ದಿನಂಪ್ರತಿ ದೇಶದಲ್ಲಿ ದಲಿತರ ದಂಡನೆ-ಶೋಷಣೆಗಳು ನಡೆಯುತ್ತಲೇ ಇವೆ. ರಾಷ್ಟ್ರದ ರಾಜಧಾನಿ ಹೊಸದಿಲ್ಲಿಯ ಜವಹರಲಾಲ್ ನೆಹರೂ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಮುತ್ತುಕೃಷ್ಣನ್ ಭೇದಭಾವದ ಅವಹೇಳನ ತಾಳಲಾರದೆ ಆತ್ಮಹತ್ಯೆಗೆ ಶರಣಾಗಿರುವುದು ಇದಕ್ಕೆ ಇತ್ತೀಚಿನ ನಿದರ್ಶನ. ಇಪ್ಪತ್ತೆಂಟು ವರ್ಷದ ಎಂ.ಫಿಲ್. ವಿದ್ಯಾರ್ಥಿ ಸೇಲಂನ ಮುತ್ತುಕೃಷ್ಣನ್, ಛಲಬಿಡದಂತೆ ನಾಲ್ಕು ಸಲ ಪರೀಕ್ಷೆ ಬರೆದು ಪ್ರವೇಶ ಪಡೆದವನು. ಸ್ವಭಾವತ: ಸೌಮ್ಯ ನಡವಳಿಕೆಯ ಈ ವಿದ್ಯಾರ್ಥಿ, ತನ್ನಪಾಡಿಗೆ ತಾನಾಯಿತು, ತನ್ನ ವ್ಯಾಸಂಗವಾಯಿತು ಎಂದು ಇದ್ದವನೆಂದು ಸಹಪಾಠಿಗಳು ಹೇಳುತ್ತಾರೆ. ಮೃತ ವಿದ್ಯಾರ್ಥಿಯ ತಂದೆತಾಯಿಯರು ಹಾಗೂ ಕೆಲವು ವಿದ್ಯಾರ್ಥಿಗಳು ಮುತ್ತುಕೃಷ್ಣನ ದುರ್ಮರಣದ ಹಿಂದೆ ಏನೋ ದುಷ್ಕೃತ್ಯವಿರಬೇಕೆಂದು ಶಂಕಿಸಿದ್ದಾರೆ.

ಮೊದಲು ಪ್ರಥಮ ಮಾಹಿತಿ ವರದಿ ದಾಖಲಿಸಿಕೊಳ್ಳಲೂ ನಿರಾಕರಿಸಿದ ದಿಲ್ಲಿ ಪೊಲೀಸರು ನಂತರ ಆತ್ಮಹತ್ಯೆ ಪ್ರಕರಣವೆಂದು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ತಂದೆತಾಯಿಯರು ತಮ್ಮ ಮಗನ ಅಸ್ವಾಭಾವಿಕ ಮರಣದ ಬಗ್ಗೆ ಸಿಬಿಐ ತನಿಖೆಗೆ ಒತ್ತಾಯಪಡಿಸಿದ್ದಾರೆ. ಆತ್ಮಹತ್ಯೆ ನಿರ್ಧಾರಕ್ಕೆ ಮುನ್ನ ಮುತ್ತುಕೃಷ್ಣನ್ ಮಾನಸಿಕವಾಗಿ ಜರ್ಝರಿತರಾಗಿದ್ದರು ಎಂದು ನಂಬುವುದಕ್ಕೆ ಹಲವು ಕಾರಣಗಳಿವೆ. ಅವುಗಳಲ್ಲಿ ಮುಖ್ಯವಾದುದು ವಿಶ್ವವಿದ್ಯಾನಿಲಯದಲ್ಲಿನ ತಾರತಮ್ಯ ತೋರುವ ವಾತಾವರಣ ಮತ್ತು ಮಾರ್ಗದರ್ಶಿಯಾಗಬೇಕಾದ ಅಧ್ಯಾಪಕರ ನಡವಳಿಕೆ. ವಿಶ್ವವಿದ್ಯಾನಿಲಯಗಳ ನಿಯಮಗಳ ಪ್ರಕಾರ ಎಂ.ಫಿಲ್.,/ಡಾಕ್ಟರೆಟ್‌ಗಾಗಿ ಸಂಪ್ರಬಂಧ ಬರೆಯಬೇಕಾದ ವಿದ್ಯಾರ್ಥಿಗಳು ಪ್ರೊಫೆಸರೊಬ್ಬರ ಮಾರ್ಗದರ್ಶನದಲ್ಲಿ ಅಧ್ಯಯನ/ಸಂಶೋಧನೆಗಳನ್ನು ಕೈಗೊಂಡು ಪ್ರಬಂಧ ರಚಿಸಬೇಕಾಗುತ್ತದೆ.

ಎಂ.ಫಿಲ್.ಗಾಗಿ ಪ್ರೊಫೆಸರೊಬ್ಬರು ಮುತ್ತುಕೃಷ್ಣನ್‌ಗೆ ಮಾರ್ಗದರ್ಶನ ನೀಡಲು ಒಪ್ಪಿದ್ದರು. ಅಧ್ಯಯನ ಶುರುಮಾಡುವುದಕ್ಕೆ ಮೊದಲು ತನಗೆ ಮಾರ್ಗದರ್ಶನ ಮಾಡಲು ಮತ್ತೊಬ್ಬ ಪ್ರೊಫೆಸರೇ ಸೂಕ್ತವೆನಿಸಿದ್ದರಿಂದ ಪ್ರೊಫೆಸರನ್ನು ಬದಲಾಯಿಸಿಕೊಳ್ಳಲು ಮುತ್ತುಕೃಷ್ಣ ಮನವಿಮಾಡಿಕೊಂಡ. ‘‘ನಿನಗಿಷ್ಟ ಬಂದಂತೆ ಮಾಡಬಹುದು’’ ಎಂದು ಮೊದಲು ಒಪ್ಪಿದ್ದ ಪ್ರೊಫೆಸರು ತಿಳಿಸಿದ್ದರು. ಆದರೆ ಅವನು ಬಯಸಿದ ಪ್ರೊಫೆಸರು ಆತನ ಮನವಿಗೆ ಸೂಕ್ತವಾಗಿ ಸ್ಪಂದಿಸಲಿಲ್ಲ. ಬಹಳ ದಿನಗಳಾದರೂ ತಮ್ಮ ಒಪ್ಪಿಗೆ ಸೂಚಿಸಲಿಲ್ಲ. ಕಾಲಮೀರಿ ಹೋಗುತ್ತಿದ್ದುದರಿಂದ ಮುತ್ತುಕೃಷ್ಣನ್ ಹಳೆಯ ಪ್ರೊಫೆಸರ ಮಾರ್ಗದರ್ಶನಕ್ಕೇ ಹಿಂದಿರುಗುವುದು ಅನಿವಾರ್ಯವಾಯಿತು. ಆದರೆ ಮೊದಲು ಮಾರ್ಗದರ್ಶಿಯಾಗಲು ಒಪ್ಪಿದ್ದ ಪ್ರೊಫೆಸರ್ ಮಹಾಶಯರು ಹಳೆಯ ಶಿಷ್ಯನನ್ನು ಮರಳಿ ಸ್ವೀಕರಿಸಲೊಪ್ಪದೆ, ‘‘ಅದು ಮುಗಿದ ಅಧ್ಯಾಯ’’ ಎಂದು ಕೈ ಅಲ್ಲಾಡಿಸಿಬಿಟ್ಟರು. ಹೀಗೆ ಇಬ್ಬರು ಪ್ರೊಫೆಸರರ ಮಧ್ಯೆ ಸಿಕ್ಕಿಬಿದ್ದ ವಿದ್ಯಾರ್ಥಿ ಮುಂದೆ ದಾರಿಗಾಣದೆ ಮಾನಸಿಕವಾಗಿ ನಲುಗಿಹೋಗಿದ್ದರೆ ಆಶ್ಚರ್ಯವೇನಿಲ್ಲ.

ಈ ಪರಿಸ್ಥಿತಿಯಲ್ಲಿ, ತಾನು ಯಾರಿಗೂ ಬೇಡವಾದವನು, ‘‘ನನ್ನ ಕ್ಯಾಂಪಸ್‌ನಲ್ಲಿ ನನ್ನನ್ನು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ...ನಾನು ಅಲ್ಲಿರಬೇಕಾದ ವ್ಯಕ್ತಿಯಲ್ಲವೇನೋ, ನನ್ನಿಂದ ಅಲ್ಲಿನವರಿಗೆ ಕಿರಿಕಿರಿಯಾಗುತ್ತಿದೆಯೇನೋ’’ ಎಂಬ ಭಾವನೆಯಿಂದ ಘಾಸಿಗೊಂಡು ಈ ಬದುಕು-ಜೀವ ಬೇಡವೆನಿಸಿರಬಹುದು. ಹಾಗಿದ್ದಲ್ಲಿ ಮುತ್ತುಕೃಷ್ಣನ್ ಸಾವನ್ನು ಆತ್ಮಹತ್ಯೆಯೆಂದು ಕರೆಯುವಂತಿಲ್ಲ. ಆತನ ಸಾವಿಗೆ ಅವನಷ್ಟೇ ವಿಶ್ವವಿದ್ಯಾನಿಲಯ ಮತ್ತು ಪ್ರೊಫೆಸರರೂ ನೈತಿಕವಾಗಿ ಹೊಣೆಗಾರರಾಗುತ್ತಾರೆ ಎನ್ನಬೇಕಾಗುತ್ತದೆ. ನಮ್ಮ ವಿಶ್ವವಿದ್ಯಾನಿಲಯಗಳಲ್ಲಿ ಮಾರ್ಗದರ್ಶಿ ಪ್ರೊಫೆಸರರನ್ನು ಪಡೆಯುವುದು ಅಷ್ಟು ಸುಲಭವಲ್ಲ ಎಂಬುದು ಶೈಕ್ಷಣಿಕ ವಲಯದ ಪರಿಸ್ಥಿತಿಯ ಅರಿವಿರುವವರಿಗೆ ತಿಳಿಯದ ವಿಷಯವೇನಲ್ಲ. ಮಾರ್ಗದರ್ಶನ ಬಯಸುವ ವಿದ್ಯಾರ್ಥಿಯ ಸ್ಥಾನಮಾನ, ಜಾತಿ-ವರ್ಗ ಇತ್ಯಾದಿ ಪೂರ್ವಾಗ್ರಹಗಳೆಲ್ಲ ‘ಲರ್ನೆಡ್’ ಪ್ರೊಫೆಸರುಗಳಲ್ಲಿ ಕೆಲಸ ಮಾಡುತ್ತವೆ. ಹೀಗಿರುವಾಗ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳನ್ನು ಒಪ್ಪಿಕೊಂಡು-ಅಪ್ಪಿಕೊಂಡು ಮಾರ್ಗದರ್ಶನ ನೀಡುವ ಪ್ರೊಫೆಸರುಗಳು ವಿರಳ ಎಂದೇ ಹೇಳಬೇಕು. ಇಂಥ ಸಾಮಾಜಿಕ ಪೂರ್ವಾಗ್ರಹಗಳು ವಿಶ್ವವಿದ್ಯಾನಿಲಯಗಳ ಎಲ್ಲ ಇಲಾಖೆಗಳಲ್ಲೂ ಸಾಮಾನ್ಯವಾಗಿ ಕಂಡುಬರುತ್ತವೆಯಾದ್ದರಿಂದ ತಳಸಮುದಾಯದಿಂದ ಬಂದವರು ಭೇದಭಾವನೆ ತಾರತಮ್ಯಗಳ ನೋವನ್ನು ನುಂಗಿಯೇ ಬದುಕಬೇಕಾಗುತ್ತದೆ.

ಕಳೆದ ವರ್ಷ ಹೈದರಾಬಾದ್ ವಿಶ್ವವಿದ್ಯಾನಿಲಯದ ದಲಿತ ವಿದ್ಯಾರ್ಥಿ, ಸಂಶೋಧನಾ ಸ್ಕಾಲರ್ ರೋಹಿತ್ ವೇಮುಲಾ ಆತ್ಮಹತ್ಯೆ ಪ್ರಕರಣವೂ ತಾರತಮ್ಯಕ್ಕೆ ಬಲಿಯಾದ ಕಥೆಯೇ. ವೇಮುಲಾ ಪ್ರಕರಣ ದೊಡ್ಡ ಕೋಲಾಹಲವನ್ನೇ ಎಬ್ಬಿಸಿತು; ವಿಶ್ವವಿದ್ಯಾನಿಲಯದ ಕುಲಪತಿಗೆ ಎತ್ತಂಗಡಿ ಮಾಡುವುದು ಅನಿವಾರ್ಯವಾಯಿತು. ಮುತ್ತುಕೃಷ್ಣನ್ ಆತ್ಮಹತ್ಯೆ ಮಾಧ್ಯಮದವರಿಗೂ ಗಹನವಾದ ಸುದ್ದಿ ಎನ್ನಿಸಲಿಲ್ಲ, ಸಂಸದರಿಗೂ ಅನ್ನಿಸಲಿಲ್ಲ. ಹತ್ತರಲ್ಲಿ ಹನ್ನೊಂದು ಎಂಬಂತೆ ಅಲಕ್ಷ್ಯಕ್ಕೆ ಗುರಿಯಾಯಿತು. ನಾವು ಗಮನಿಸಬೇಕಾದ ಮತ್ತೊಂದು ಅಂಶವೆಂದರೆ ಮುತ್ತುಕೃಷ್ಣನ್ ವೇಮುಲಾ ಆತ್ಮಹತ್ಯೆ ಪ್ರಕರಣದಲ್ಲಿ ಹೈದರಾಬಾದ್ ವಿಶ್ವವಿದ್ಯಾನಿಲಯದ ಪಾತ್ರವನ್ನು ಖಂಡಿಸಿದ್ದ. ಅಲ್ಲದೆ ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯದ ಪ್ರವೇಶ ನೀತಿಯನ್ನು ತನ್ನ ಫೇಸ್‌ಬುಕ್ ಪುಟದಲ್ಲಿ ಖಂಡಿಸಿದ್ದ ಹಾಗೂ ತಾರತಮ್ಯಕ್ಕೊಳಗಾದ ತನ್ನ ಕಹಿ ಅನುಭವಗಳನ್ನು ತೋಡಿಕೊಂಡಿದ್ದ.

ನಮ್ಮ ವಿಶ್ವವಿದ್ಯಾನಿಲಯಗಳಲ್ಲಿ ಹೀಗೇಕಾಗುತ್ತದೆ? ಉನ್ನತ ಶಿಕ್ಷಣ ಬಯಸಿ ಹೋಗುವ ದಲಿತ ವಿದಾರ್ಥಿಗಳೇ ಏಕೆ ತಮ್ಮನ್ನು ಆತ್ಮಹತ್ಯೆಗೆ ದೂಡುವಂಥ ಅವಮಾನ-ಅವಹೇಳನಗಳಿಗೆ ಗುರಿಯಾಗುತ್ತಿದ್ದಾರೆ? 2007ರಿಂದ 2014ರ ನಡುವಣ ಅವಧಿಯಲ್ಲಿ ಹೈದರಾಬಾದಿನ ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ದಲಿತ ವಿದ್ಯಾರ್ಥಿಗಳ ಸಂಖ್ಯೆ ಎರಡು ಕೈಬೆರಳುಗಳ ಎಣಿಕೆಯನ್ನೂ ಮೀರುತ್ತದೆ. ದಿಲ್ಲಿಯ ‘ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್’ ಸಂಸ್ಥೆಯಲ್ಲಿ ಇಬ್ಬರು ದಲಿತ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿರುವುದು ಇತ್ತೀಚೆಗೆ ವರದಿಯಾಗಿದೆ. 2007ರಿಂದ 2011 ಎಪ್ರಿಲ್‌ವರೆಗೆ ಉತ್ತರ ಭಾರತದಲ್ಲಿ ಹದಿನಾಲ್ಕು ಮಂದಿ ದಲಿತ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿರುವ ವರದಿ ಇದೆ. 2008ರ ಅಂಕಿಅಂಶಗಳ ಪ್ರಕಾರ ದೇಶದ ಉನ್ನತ ಶಿಕ್ಷಣದಲ್ಲಿನ ಆತ್ಮಹತ್ಯೆ ಮಾಡಿಕೊಂಡಿರುವ 25 ವಿದ್ಯಾರ್ಥಿಗಳಲ್ಲಿ 23 ಮಂದಿ ದಲಿತರು. ಉನ್ನತ ವ್ಯಾಸಂಗಕ್ಕೆ ಕೈಚಾಚಿ ಕೊನೆಗೆ ಅದು ಎಟುಕದೆ ಆತ್ಮಹತ್ಯೆಗೆ ಶರಣಾಗಿರುವುದಕ್ಕೆ ಶಿಕ್ಷಣ ಕ್ಷೇತ್ರದಲ್ಲಿನ ಭೇದಭಾವ-ತಾರತಮ್ಯ, ಬಹಿಷ್ಕಾರ ಮತ್ತು ಅವಮಾನಗಳೇ ಪ್ರಮುಖ ಕಾರಣಗಳೆಂದು ಹಲವಾರು ತನಿಖೆ- ಶೋಧನೆಗಳಿಂದ ವ್ಯಕ್ತವಾಗಿದೆ. ಈ ಅಸಾಧಾರಣ ವ್ಯಕ್ತಿಗಳನ್ನು ಆತ್ಮಹತ್ಯೆಗೆ ದೂಡಿದ್ದರಲ್ಲಿ ಜಾತಿ ತಾರತಮ್ಯವೇ ಪ್ರಮುಖ ಕಾರಣವೆಂದು ನಂಬಲು ಸಾಕಷ್ಟು ಸಾಕ್ಷಿಪುರಾವೆಗಳಿವೆ. ಗಣ್ಯಾತಿಗಣ್ಯರ ವೃತ್ತಿ ಶಿಕ್ಷಣ ಸಂಸ್ಥೆಗಳಲ್ಲೇ ಜಾತಿಧರ್ಮ ಪೂರ್ವಾಗ್ರಹಗಳು ಆಳವಾಗಿ ಬೇರೂರಿದ್ದು ಅವೆಲ್ಲ ಈಗ ಮಾಮೂಲಿ ಸಂಗತಿಗಳಾಗಿವೆ ಎನ್ನುವುದು ಕೆಲವೊಂದು ಆತ್ಮಹತ್ಯಾ ಪ್ರಕರಣಗಳ ವಿಶ್ಲೇಷಣೆಯಿಂದ ಸಾಬೀತಾಗಿದೆ.

ಜಾತಿಧರ್ಮಗಳ ಆಧಾರದ ಮೇಲೆ ವಿದ್ಯಾರ್ಥಿಗಳ ಪ್ರತ್ಯೇಕೀಕರಣ ಭಾರತದಲ್ಲಿ ಮಾತ್ರವಲ್ಲ ವಿದೇಶಗಳಲ್ಲೂ ಇದೆ. ಭಾರತ ಮತ್ತು ಯುನೈಟೆಡ್ ಕಿಂಗ್‌ಡಮ್‌ನಲ್ಲೂ ಇದೆ ಎಂದು ಪ್ರೊ. ಮೇರಿ ಥೋರನ್‌ಟನ್ ನೇತೃತ್ವದ ತಂಡ ಭಾರತ ಮತ್ತು ಯುನೈಟೆಡ್ ಕಿಂಗ್‌ಡಮ್‌ನ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ನಡೆಸಿದ ಅಧ್ಯಯನದಿಂದ ತಿಳಿದು ಬಂದಿದೆಯೆಂದು ಖ್ಯಾತ ಅಂಕಣಕಾರ ಕುಲದೀಪ್ ನಯ್ಯರ್ ಬರೆಯುತ್ತಾರೆ. ಈ ರೀತಿಯ ಪ್ರತ್ಯೇಕೀಕರಣಕ್ಕೆ ಕೆಲವು ನ್ಯಾಯಯುತವಾದ ಕಾರಣಗಳಿರಬಹುದಾದರೂ ಹೆಚ್ಚಾಗಿ ಜಾತಿ, ಧರ್ಮ, ರಾಷ್ಟ್ರೀಯತೆ, ಲಿಂಗ, ವರ್ಗ ಇವುಗಳ ಆಧಾರದ ಮೇಲೇ ಪ್ರತ್ಯೇಕೀಕರಣ ಮಾಡಲಾಗಿದೆ ಎಂದು ಈ ತಂಡದ ವರದಿ ತಿಳಿಸಿದೆ. ವಿಶ್ವವಿದ್ಯಾನಿಲಯಗಳ ಪರಿಸರದಲ್ಲಿ ದಲಿತರು ಮತ್ತು ದಲಿತೇತರ ವಿದ್ಯಾರ್ಥಿಗಳ ನಡುವೆ ಅಂತರವನ್ನು ಪಾಲಿಸಬೇಕೆಂದು ಆಗ್ರಹಪೂರ್ವಕವಾಗಿ ಜಾರಿಗೆ ತರಲಾಗಿದೆ. ದಲಿತ ವಿದ್ಯಾರ್ಥಿಗಳನ್ನು ಇಲ್ಲೆಲ್ಲ ರಾಜಾರೋಷವಾಗಿಯೂ ಗೋಪ್ಯವಾಗಿಯೂ ತಾರತಮ್ಯಕ್ಕೆ, ಅವಹೇಳನಕ್ಕೆ ಗುರಿಪಡಿಸಲಾಗುತ್ತಿದೆ ಎಂದು 2013ರಲ್ಲಿ ಸ್ಯಾಮ್ಸನ್ ಒವಿಸೆಗನ್ ಎಂಬವರು ನಡೆಸಿದ ಅಧ್ಯಯನದಿಂದ ತಿಳಿದುಬಂದಿದೆ.

ಉನ್ನತ ಶಿಕ್ಷಣ ಕೇಂದ್ರಗಳಾದ ವಿಶ್ವವಿದ್ಯಾನಿಲಯಗಳಲ್ಲಿ ಜಾತಿಧರ್ಮ ಪೂರ್ವಗ್ರಹಗಳಿಂದ ಭೇದಭಾವ ಮತ್ತು ತಾರತಮ್ಯಗಳು ಒಂದು ಪಿಡುಗಾಗಿ ದಲಿತರನ್ನು ಕಾಡುತ್ತಿರುವುದಕ್ಕೆ ಇದಕ್ಕಿಂತ ಮಿಗಿಲಾದ ಸಾಕ್ಷಿಪುರಾವೆಗಳು ಬೇಕಿಲ್ಲ. ಒಂದಲ್ಲೊಂದು ರೂಪದಲ್ಲಿ ಜಾತಿ ಪೂರ್ವಾಗ್ರಹಗಳು ಮುಂದುವರಿದೇ ಇವೆ. ದಲಿತ ವಿದ್ಯಾರ್ಥಿಗಳು ಮತ್ತು ಇತರ ವಿದ್ಯಾರ್ಥಿಗಳ ನಡುವಣ, ಅಧ್ಯಾಪಕರು ಮತ್ತು ದಲಿತ ವಿದ್ಯಾರ್ಥಿಗಳ ನಡುವಣ, ಆಡಳಿತಗಾರರು ಮತ್ತು ದಲಿತ ವಿದ್ಯಾರ್ಥಿಗಳ ನಡುವಣ ಸಂಬಂಧಗಳು ಪೂರ್ವಾಗ್ರಹಲೇಪಿತವೇ ಆಗಿದೆ. ವಿಶ್ವವಿದ್ಯಾನಿಲಯ ಎನ್ನುವ ಹೆಸರೇ ಅಲ್ಲಿನ ಶಿಕ್ಷಣದ ವಿಶ್ವವ್ಯಾಪಕತೆಯನ್ನು, ಅನಂತತೆಯನ್ನು ಸೂಚಿಸುತ್ತದೆ. ವಿಶ್ವವಿದ್ಯಾನಿಲಯಗಳು ಮುಕ್ತವಾಗಿರಬೇಕು. ಆದರೆ ಈ ಮುಕ್ತತೆ ಕಳಚಿಕೊಳ್ಳುತ್ತಿರುವುದು ನಮ್ಮ ಇಂದಿನ ದುರಂತವಾಗಿದೆ. ಮುಕ್ತ ಸಮಾವೇಶ, ಮುಕ್ತ ಚರ್ಚೆ ಸಾಧ್ಯವೇ ಇಲ್ಲ ಎನ್ನುವಂಥ ಉಸಿರುಗಟ್ಟಿಸುವ ವಾತಾವರಣದಲ್ಲಿ ಇಂದು ನಮ್ಮ ವಿಶ್ವವಿದ್ಯಾನಿಲಯಗಳು ಬದುಕುತ್ತಿವೆ.ವಿಶ್ವವಿದ್ಯಾನಿಲಯಗಳನ್ನು ತಾನು ಹೇಳಿದಂತೆ ಕೇಳಬೇಕು ಎನ್ನುವಂಥ, ಏಕತ್ವ-ಏಕಧರ್ಮದ ಇಕ್ಕಟ್ಟಿಗೆ ಸಿಲುಕಿಸುವ ದುರದೃಷ್ಟಕರ ಪ್ರಯತ್ನಗಳು ನಡೆದಿವೆ. ಇತ್ತೀಚಿನ ಈ ಒಂದು ನಿದರ್ಶನ ನೋಡಿ. ನಾಗಪುರದ ರಾಷ್ಟ್ರಸಂತ ತುಕ್ಡೋಜಿ ಮಹಾರಾಜ್ ವಿಶ್ವವಿದ್ಯಾನಿಲಯದ ಅಂಬೇಡ್ಕರ್ ವಿಭಾಗ ಏರ್ಪಡಿಸಿದ್ದ ಮಾರ್ಕ್ಸ್‌ವಾದಿ ಕಮ್ಯುನಿಸ್ಟ್ ಪಕ್ಷದ ಪ್ರಧಾನ ಕಾರ್ಯದರ್ಶಿ ಸೀತಾರಾಮ ಯೆಚೂರಿಯವರ ಉಪನ್ಯಾಸ ಕಾರ್ಯಕ್ರಮವನ್ನು ಹಠಾತ್ತನೆ ರದ್ದುಗೊಳಿಸಲಾಗಿತ್ತು.

ಯೆಚೂರಿ ಮಾತನಾಡಬೇಕಿದ್ದ ವಿಷಯ: ‘ಪ್ರಜಾಪ್ರಭುತ್ವ ಮತ್ತು ಅದರ ಮೌಲ್ಯಗಳು.’ ಬಲಪಂಥೀಯರ ಆಗ್ರಹಕ್ಕೆ ಮಣಿದು ವಿಶ್ವವಿದ್ಯಾನಿಲಯದ ಕುಲಪತಿಗಳು ಯೆಚೂರಿಯವರ ಉಪನ್ಯಾಸವನ್ನು ರದ್ದುಗೊಳಿಸಿದ್ದಾರೆಂದು ವರದಿಯಾಗಿತ್ತು.‘‘ಏಕೆ ರದ್ದುಗೊಳಿಸಲಾಯಿತು?’’ ಎಂದು ಕೇಳಲು ಹೋದ ಹಿರಿಯ ಕಾಂಗ್ರೆಸ್ ನಾಯಕ ನಿತಿನ್ ರಾವುತ್ ಅವರ ಪ್ರಕಾರ, ಕುಲಪತಿಯವರು ಭಾರೀ ಒತ್ತಡಕ್ಕೆ ಸಿಲುಕಿದ್ದು ಸಮಜಾಯಿಷಿ ಹೇಳುವ ಸ್ಥಿತಿಯಲ್ಲೂ ಇರಲಿಲ್ಲವಂತೆ. ಆದರೆ ಅದೇ ಕುಲಪತಿಗಳು ಯೆಚೂರಿಯವರ ಕಾರ್ಯಕ್ರಮ ಮಾ.18ರಂದು ನಡೆಯುತ್ತದೆ ಎಂದು ಮತ್ತೊಂದು ಹೇಳಿಕೆ ನೀಡಿದ್ದರು-ಇದು ಯಾರ ಆಗ್ರಹಕ್ಕೆ ಮಣಿದೋ! ಇದು ನಮ್ಮ ವಿಶ್ವವಿದ್ಯಾನಿಲಯಗಳ ಇಂದಿನ ಸ್ಥಿತಿ. ಇದು ಮುಕ್ತತೆಯೇ? ಇದು ಭೀತಿ ಮುಕ್ತ ವಾತಾವರಣವೇ? ಇದು ನಾಚಿಕೆಗೇಡು!!

ಈ ಅಂಕಣ ಮುದ್ರಣಕ್ಕೆ ಹೋಗುವ ವೇಳೆಗೆ ಬಂದ ವರದಿಯಂತೆ, ‘‘ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿರುವುದು ಅಲ್ಲಿ ‘ಎಲ್ಲೋ ಏನೋ ತಪ್ಪಾಗಿದೆ’ ಎಂಬುದನ್ನು ಸೂಚಿಸುತ್ತದೆ’’ ಎಂದು ಅಭಿಪ್ರಾಯಪಟ್ಟಿರುವ ದಿಲ್ಲಿ ಹೈಕೋರ್ಟ್, ‘‘ಪ್ರತಿಭಟನೆ ಇಲ್ಲಿ ಏಕೆ ನಡೆಯುತ್ತದೆ ಎಂದು ಜೆಎನ್‌ಯು ಆತ್ಮಾವಲೋಕನ ಮಾಡಿಕೊಂಡಿದೆಯೇ’’ ಎಂದು ಪ್ರಶ್ನಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ನಾಸ್ತಿಕ ಮದ