ಫೇಸ್‌ಬುಕ್‌ನಲ್ಲಿ ಉ.ಪ್ರ. ಮುಖ್ಯಮಂತ್ರಿ ಆಕ್ಷೇಪಾರ್ಹ ಫೋಟೋ: ಯುವಕನ ಬಂಧನ
ವಾರಾಣಸಿ, ಮಾ.20: ಫೇಸ್‌ಬುಕ್‌ನಲ್ಲಿ ಉತ್ತರಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಅವರ ಆಕ್ಷೇಪಾರ್ಹ ಫೋಟೋ ಅಪ್‌ಲೋಡ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು 25ರ ಹರೆಯದ ಯುವಕನೋರ್ವನನ್ನು ಬಂಧಿಸಿದ್ದಾರೆ.
ಗಾಝಿಪುರ ಜಿಲ್ಲೆಯ ಪ್ರೊಫೆಸರ್ಸ್ ಕಾಲೊನಿಯ ನಿವಾಸಿ ಬಾದ್‌ಶಾ ಅಬ್ದುಲ್ ರಝಾಕ್ ರವಿವಾರ ರಾತ್ರಿ ನಕಲಿ ಫೇಸ್‌ಬುಕ್ ಖಾತೆ ತೆರೆದು ಈ ಫೋಟೋ ಪೋಸ್ಟ್ ಮಾಡಿದ್ದು ಅದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಇದನ್ನು ಖಂಡಿಸಿ ಆದಿತ್ಯನಾಥ್ ಸ್ಥಾಪಿಸಿರುವ ಹಿಂದೂ ಯುವ ವಾಹಿನಿಯ ಕಾರ್ಯಕರ್ತರು ಪ್ರತಿಭಟನೆಗೆ ಮುಂದಾಗಿದ್ದರು. ಆಕ್ಷೇಪಾರ್ಹ ಫೋಟೋ ಅಪ್‌ಲೋಡ್ ಮಾಡಿದ್ದು ರಝಾಕ್ ಎಂದು ಆರೋಪಿಸಿದ ಕಾರ್ಯಕರ್ತರು ರಝಾಕ್ ಮತ್ತವರ ಕುಟುಂಬದ ಸದಸ್ಯರ ಜೊತೆ ವಾಗ್ವಾದಕ್ಕೆ ತೊಡಗಿದಾಗ ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದರು.
ಬಳಿಕ ಪೊಲೀಸರ ತಂಡವೊಂದು ರಝಾಕ್‌ನ ಮನೆ ಮೇಲೆ ದಾಳಿ ನಡೆಸಿ ಆತನನ್ನು ಬಂಧಿಸಿತು. ಆತ ತನ್ನ ತಪ್ಪನ್ನು ಒಪ್ಪಿಕೊಂಡಿದ್ದು ಪೊಲೀಸ್ ಕಸ್ಟಡಿ ವಿಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.