‘ಎಲ್ಲಾ ಧರ್ಮವನ್ನು ಗೌರವಿಸು’

Update: 2017-03-20 18:34 GMT

ಲಕ್ನೊ, ಮಾ.20: ಉತ್ತರ ಪ್ರದೇಶದ ನೂತನ ಮುಖ್ಯಮಂತ್ರಿಯಾಗಿ ರವಿವಾರ ಪ್ರಮಾಣವಚನ ಸ್ವೀಕರಿಸಿದ ಹಿಂದುತ್ವವಾದಿ ಯೋಗಿ ಆದಿತ್ಯನಾಥ್ ಅವರಿಗೆ ಮತೀಯ ರಾಜಕಾರಣದಿಂದ ದೂರವಿರುವಂತೆ ಸಲಹೆಯೊಂದು ಬಂದಿದೆ. ಅಂದ ಹಾಗೆ ಈ ಸಲಹೆ ಬಂದಿರುವುದು ಅವರ ತಂದೆ ಆನಂದ್ ಸಿಂಗ್ ಬಿಷ್ಠ್ ಅವರಿಂದ.

‘‘ಅವರು ಎಲ್ಲಾ ಧರ್ಮಗಳನ್ನೂ ಗೌರವಿಸುತ್ತಾರೆಂದು ನಾನು ನಿರೀಕ್ಷಿಸುತ್ತೇನೆ’’ ಎಂದು ಆದಿತ್ಯನಾಥ್ ತಂದೆ ಹೇಳಿದ್ದಾರೆ. ‘‘ಅವರು ಬಿಜೆಪಿಯ ಧ್ಯೇಯ ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಅಂತೆಯೇ ಅವರು ಕಾರ್ಯಾಚರಿಸಬೇಕು. ಬಡವರು, ಶ್ರೀಮಂತರು, ಹಿಂದೂಗಳು, ಮುಸ್ಲಿಮರು ಹಾಗೂ ಕ್ರೈಸ್ತರನ್ನು ಸಮಾನವಾಗಿ ಕಾಣಬೇಕು. ಈಗ ಅವರ ಜವಾಬ್ದಾರಿ ಹೆಚ್ಚಾಗಿದೆ’’ ಎಂದು ಹೇಳಿದ್ದಾರೆ.
ಉತ್ತರಾಖಂಡ ಅರಣ್ಯ ಇಲಾಖೆಯ ನಿವೃತ್ತ ಅಧಿಕಾರಿಯಾಗಿರುವ ಬಿಷ್ಠ್ ಪ್ರಕಾರ ಅವರ ಪುತ್ರ ಕೋಮುವಾದ ಹಾಗೂ ಹಿಂದುತ್ವದೊಂದಿಗಿನ ತಮ್ಮ ಸಂಬಂಧವನ್ನು ತ್ಯಜಿಸಿದ್ದಾರೆ. ಕೋಮುವಾದಿ ರಾಜಕಾರಣದಿಂದ ದೂರವಿರಬೇಕೆಂದು ಯೋಗಿ ಕುಟುಂಬ ಬಯಸಿದೆ. ‘‘ಇತ್ತೀಚೆಗೆ ನಾನು ಆತನನ್ನು ಭೇಟಿಯಾದಾಗ ಕೋಮು ಭಾವನೆಗಳಿಂದ ದೂರವಿರುವಂತೆ ಸಲಹೆ ನೀಡಿದ್ದೆ. ಈ ಬಗ್ಗೆ ಆತ ಭರವಸೆ ನೀಡಿದ್ದಾನೆ’’ ಎಂದು ಮುಖ್ಯಮಂತ್ರಿಯ ಸೋದರ ಮಾವ ಹೇಳಿಕೊಂಡಿದ್ದಾರೆ.
ಉತ್ತರಾಖಂಡದ ಪಂಚೂರ್ ಗ್ರಾಮದಲ್ಲಿ ಹುಟ್ಟಿದ ಯೋಗಿ ಆದಿತ್ಯನಾಥ್ ಮೂಲ ಹೆಸರು ಅಜಯ್ ಸಿಂಗ್ ಬಿಷ್ಠ್. ಅವರು ಪದವಿಯಲ್ಲಿ ಓದುತ್ತಿರುವಾಗಲೇ ಎಬಿವಿಪಿ ಸೇರಿದ್ದರು. ಆದಿತ್ಯನಾಥ್ ಅವರ ಕಿರಿಯ ಸಹೋದರನ ಪ್ರಕಾರ ಕೂಡ ಅವರು ಉಗ್ರ ಹಿಂದುತ್ವವಾದಿಯಾಗಿಲ್ಲವಾದರೂ ಗೋರಖನಾಥ ದೇವಳದ ಮುಖ್ಯ ಅರ್ಚಕರಾಗಿ ಅವರು ಹಿಂದುತ್ವವನ್ನು ಪಸರಿಸುವುದು ಸಹಜವಾಗಿದೆ ಎಂದರು.

 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News