ತಮಿಳುನಾಡಿಗೆ 2 ಸಾವಿರ ಕ್ಯೂಸೆಕ್ ನೀರು ಬಿಡುಗಡೆಗೆ ಸು.ಕೋರ್ಟ್ ಆದೇಶ

Update: 2017-03-21 14:42 GMT

ಹೊಸದಿಲ್ಲಿ, ಮಾ.21: ಬರದ ಬೇಗೆಯಿಂದ ತತ್ತರಿಸಿರುವ ರಾಜ್ಯಕ್ಕೆ ಗಾಯದ ಮೇಲೆ ಬರೆ ಎಳೆದಂತೆ, ತಮಿಳುನಾಡಿಗೆ ಪ್ರತಿ ದಿನವೂ 2 ಸಾವಿರ ಕ್ಯೂಸೆಕ್ ಕಾವೇರಿ ನೀರನ್ನು ಬಿಡುಗಡೆಗೊಳಿಸಬೇಕೆಂದು ಸುಪ್ರೀಂಕೋರ್ಟ್ ಮಂಗಳವಾರ ಕರ್ನಾಟಕ ಸರಕಾರಕ್ಕೆ ಆದೇಶ ನೀಡಿದೆ.

 ಕಾವೇರಿ ವಿವಾದಕ್ಕೆ ಸಂಬಂಧಿಸಿ ಇಂದು ವಿಚಾರಣೆ ನಡೆಸಿದ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ನ್ಯಾಯಪೀವು, ಮುಂದಿನ ಆದೇಶದವರೆಗೂ, ತಮಿಳುನಾಡಿಗೆ ಪ್ರತಿದಿನ 2 ಸಾವಿರ ಕ್ಯೂಸೆಕ್ ನೀರನ್ನು ಹರಿಸಬೇಕೆಂಬ ತನ್ನ ಹಿಂದಿನ ಆದೇಶವನ್ನು ಮುಂದುವರಿಸಬೇಕೆಂದು ಸೂಚನೆ ನೀಡಿದೆ. ಕಾವೇರಿ ಜಲವಿವಾದಕ್ಕೆ ಸಂಬಂಧಿಸಿ ಸಲ್ಲಿಸಲಾದ ಎಲ್ಲಾ ಮೇಲ್ಮನವಿಗಳ ವಿಚಾರಣೆಯನ್ನು ಜುಲೈ 11ರಿಂದ ನಡೆಸುವುದಾಗಿ ಅದು ಹೇಳಿದೆ.

    ಕಾವೇರಿ ನದಿ ವಿವಾದದ ಮೇಲ್ಮನವಿಗಳ ಅರ್ಜಿಗಳ ವಿಚಾರಣೆಯನ್ನು 15 ದಿನಗಳ ಕಾಲ ನಡೆಸುವುದಾಗಿ ಅದು ತಿಳಿಸಿದೆ. ತಮಿಳುನಾಡಿಗೆ 2 ಸಾವಿರ ಕ್ಯೂಸೆಕ್ ಕಾವೇರಿ ನೀರು ಬಿಡಬೇಕೆಂದು ಈ ಹಿಂದೆ ಸುಪ್ರೀಂಕೋರ್ಟ್ ಆದೇಶ ನೀಡಿದ್ದರೂ, ಕರ್ನಾಟಕ ಸರಕಾರ ಅದನ್ನು ಪಾಲಿಸಿಲ್ಲವೆಂದು ತಮಿಳುನಾಡು ಸರಕಾರದ ವಕೀಲ ಶೇಖರ್ ಸಫ್ಡೆ ನ್ಯಾಯಾಲಯದಲ್ಲಿ ದೂರಿದ್ದರು. ಪ್ರಕರಣದ ಮುಂದಿನ ಆಲಿಕೆಯನ್ನು ನ್ಯಾಯಪೀಠವು ಜುಲೈ 11ಕ್ಕೆ ನಿಗದಿಪಡಿಸಿದೆ.

 ಸುಪ್ರೀಂಕೋರ್ಟ್‌ನ ಆದೇಶದ ಹೊರತಾಗಿಯೂ ತಮಿಳುನಾಡಿಗೆ ನೀರನ್ನು ಬಿಡುಗಡೆಗೊಳಿಸದಿದ್ದುಕ್ಕಾಗಿ ಕರ್ನಾಚಕದಿಂದ 2480 ಕೋಟಿ ರೂ. ಪರಿಹಾರ ಕೋರಿ ತಮಿಳುನಾಡು ಸರಕಾರವು ಜನವರಿ 9ರಂದು ಸುಪ್ರೀಂಕೋರ್ಟ್‌ನ್ನು ಆಗ್ರಹಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News